ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, January 22, 2011

ಉತ್ತಮ ಗೊಬ್ಬರಕ್ಕಾಗಿ ಹೊಲದಲ್ಲಿ ವಿಧಾನ ಮಂಡಲದ ಸಮಾವೇಶ!

ಉತ್ತಮ ಗೊಬ್ಬರಕ್ಕಾಗಿ ಹೊಲದಲ್ಲಿ ವಿಧಾನ ಮಂಡಲದ ಸಮಾವೇಶ!!
ಎಲ್ಲ ಪಕ್ಷಗಳ ಒಪ್ಪಿಗೆ!

ಬೆಂಗಳೂರು, ಜ. ೨೨: ನಾಡಿನ ಕೃಷಿಕರ, ಬಡ ರೈತರ ಬಗೆಗೆ, ಸರ್ಕಾರದ ಕಾಳಜಿಯನ್ನು ತೋರಲು, ವಿಧಾನ ಮಂಡಲದ ಮುಂದಿನ ಸಮಾವೇಶವನ್ನು ಪಾವಗಡ ತಾಲೂಕಿನ ಇಮ್ಮಡಿ ಹಳ್ಳಿಯ ಹೊಲವೊಂದರಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಎಲ್ಲಾ ಪಕ್ಷಗಳ ನಾಯಕರೂ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಕೃಷಿ ಮಂತ್ರಿ ಉಮೇಶ್ ಕತ್ತಿ, "ಇದೊಂದು ವಿನೂತನ ಪ್ರಯೋಗ. ಇಂತಹದನ್ನು ಇಲ್ಲಿಯವರೆಗೇ ಯಾವುದೇ ರಾಜ್ಯದ ವಿಧಾನ ಮಂಡಲವೂ ಮಾಡಿಲ್ಲ. ವಿರೋಧ ಪಕ್ಷಗಳೂ, ಇದಕ್ಕೆ ಸಹಕಾರ ನೀಡಿರುವುದು, ಬಡ ರೈತರ ಬಗೆಗೆ ಕಾಳಜಿ ವ್ಯಕ್ತ ಪಡಿಸುವಲ್ಲಿ ಪಕ್ಷ ಬೇಧವಿಲ್ಲ, ರಾಜಕಾರಣಿಗಳೆಲ್ಲಾ ಒಂದೇ ಎಂಬುದನ್ನು ತೋರುತ್ತದೆ" ಎಂದರು.

ರಾಜಕೀಯ ಮತ್ತು ಕೃಷಿ ತಜ್ಞರ ಪ್ರಕಾರ, ಕರ್ನಾಟಕ ವಿಧಾನ ಮಂಡಲದ ಈ ಪ್ರಯೋಗ, ಕೇವಲ ಸಾಂಕೇತಿಕ ಮಾತ್ರವಲ್ಲ; ವಿಧಾನ ಮಂಡಲದಲ್ಲಿ ರೈತರ ಬವಣೆಯ ಬಗೆಗೆ ಮಾಡಲಾಗುವ ಭಾಷಣ ಮತ್ತು ಚರ್ಚೆಗಳಿಂದ, ರೈತನ ಹೊಲಕ್ಕೆ, ಹಸು ಮತ್ತು ಎತ್ತಿನ ಸಗಣಿ ಗೊಬ್ಬರಕ್ಕಿಂತ ಉತ್ತಮ ಗೊಬ್ಬರ ದೊರೆಯುವ ಸಂಭವ ಇದೆ ಎನ್ನಲಾಗಿದೆ.

(ಮಜಾವಾಣಿ ಕೃಷಿ ವಾರ್ತೆ)

Labels: ,

ಸಫಲವಾಗದ ರಾಜ ಭವನ್ ಚಲೋ!

ಸಫಲವಾಗದ ರಾಜ ಭವನ್ ಚಲೋ!

ಬೆಂಗಳೂರು ಜ. ೨೨: ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ರಾಜ್ಯಪಾಲ ಎಚ್.ಆರ್.ಭರದ್ವಾಜ್ ವಿರುದ್ಧ ಬಿ.ಜೆ.ಪಿ. ಹಮ್ಮಿ ಕೊಂಡಿದ್ದ ರಾಜ್ ಭವನ್ ಚಲೋ ಕಾರ್ಯಕ್ರಮ ಆಟೋರಿಕ್ಷಾ ಚಾಲಕರು ಮೀಟರಿಗೆ ಎರಡರಷ್ಟು ಕೇಳಿದ್ದರಿಂದ ವಿಫಲವಾಗಿರುವುದಾಗಿ ವರದಿಯಾಗಿದೆ.

ಬಿ.ಜೆ.ಪಿ. ನಾಯಕ ಮತ್ತು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಷ್ಟೇ ಪ್ರಯತ್ನ ಪಟ್ಟರೂ, ಯಾವುದೇ ಆಟೋ ರಿಕ್ಷಾ ರಾಜ್ ಭವನದ ಬಳಿಗೆ ಬರಲು ನಿರಾಕರಿಸಿದ್ದರಿಂದ, ಯಡಿಯೂರಪ್ಪನವರಿಗೆ ರಾಜ್ ಭವನವನ್ನು ತಲುಪಲು ಸಾಧ್ಯವಾಗಲಿಲ್ಲವೆನ್ನಲಾಗಿದೆ. ಯಡಿಯೂರಪ್ಪನವರು ಮೀಟರ್ ಮೇಲೆ ೧೦ ರೂಪಾಯಿವರೆಗೆ ಜಾಸ್ತಿ ಕೊಡಲು ಸಿದ್ಧವಿದ್ದರೂ, ಆಟೋ ಚಾಲಕರು ಕನಿಷ್ಠ ಮೀಟರ್ ಮೇಲೆ ಎರಡರಷ್ಟು ಕೊಡುವಂತೆ ಕೇಳಿದರೆನ್ನಲಾಗಿದೆ.

ಈ ಬಗ್ಗೆ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಆಟೋ ಚಾಲಕ ಮನಿ ವಣ್ಣನ್, "ಇದೆಲ್ಲಾ ಸುಳ್ಳು. ನಮ್ಮ ಕಷ್ಟ ಯಾರಿಗೆ ಗೊತ್ತಾಗುತ್ತೆ?! ನಾವು ಎಲ್ಲಿಗೆ ಬೇಕಾದ್ರೂ ಹೋಗಕ್ಕೆ ರೆಡಿ. ಆದರೆ ರಾಜ ಭವನಕ್ಕೆ ಹೋಗೋ ಪ್ಯಾಸೆಂಜರ್ಸ್ ಇರ್ತಾರೆ ಹೊರ್ತೂ ಅಲ್ಲಿಂದ ಪಿಕ್ ಅಪ್ ಯಾರೂ ಸಿಗೊಲ್ಲ" ಎಂದರು.

Labels: ,

Friday, January 21, 2011

ಮಾರುಕಟ್ಟೆಗೆ ಮೊಸಳೆ ಕಣ್ಣೀರು!

ಮಾರುಕಟ್ಟೆಗೆ ಮೊಸಳೆ ಕಣ್ಣೀರು!
ಬೆಂಗಳೂರು ಡಿ. 9: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪನವರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಜಗತ್ತಿನ ಅತ್ಯುತ್ತಮ ಮೊಸಳೆ ತಳಿಗಳಿಂದ ಸಂಗ್ರಹಿಸಿರುವ ಈ ಕಣ್ಣೀರು ಶೇ.100 ನೈಸರ್ಗಿಕವಾಗಿದ್ದು, ಮಾನವರ ಉಪಯೋಗಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ. ಈ ಉತ್ಪನ್ನದ ಕುರಿತು ಮಾಹಿತಿ ನೀಡಿದ ಲಕೋಸ್ಟ್ ಸಂಸ್ಥೆಯ ಸಿ.ಇ.ಓ. ಕಾರ್ಲಾ ಬ್ರೂನಿಯವರು, "ಕೆಲವೊಮ್ಮೆ ಸಮಾಜದ ಗಣ್ಯವ್ಯಕ್ತಿಗಳಿಗೆ ಸಾಮಾನ್ಯ ಜನತೆಯ ಬಗೆಗೆ ಅಗಾಧ ಶೋಕ ವ್ಯಕ್ತಪಡಿಸುವ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಮ್ಮ ಕಂಬನಿ ಕೈಕೊಟ್ಟಾಗ, ಎದೆಗುಂದಿ ಮುಖ ಮುಚ್ಚಿಕೊಳ್ಳುವ ಬದಲು ಕ್ರೋಕೋಟಿಯೇ ಬಳಸುವುದು ಸೂಕ್ತ. ಕ್ರೋಕೋಟಿಯೇ ಹೈಪೋ ಅಲರ್ಜೆನಿಕ್ ಆಗಿದ್ದು ಅದರ ಬಳಕೆಯಿಂದ ಯಾವುದೇ ಸೈಡ್ ಎಫೆಕ್ಟ್ಸ್‌ನ ಭಯವಿಲ್ಲ" ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಲೇಖಕ ಯು.ಆರ್.ಅನಂತಮೂರ್ತಿಯವರು ಎಲ್ಲವೂ ಕೃತಕವಾಗುತ್ತಿರುವ ಈ ಯುಗದಲ್ಲಿ ಕ್ರೋಕೋಟಿಯೇ ಶೇ.100 ನೈಸರ್ಗಿಕ ಮೊಸಳೆ-ಕಣ್ಣೀರಾಗಿರುವುದಕ್ಕೆ ಅತ್ಯಂತ ಹರ್ಷ ವ್ಯಕ್ತಪಡಿಸಿದರು.

(ಮಜಾವಾಣಿ ಬ್ಯುಸಿನೆಸ್ ಡೆಸ್ಕ್ - Published earlier at That's Kannada)


Labels: , , , ,

Monday, January 17, 2011

ಮಜಾವಾಣಿ ಸಂದರ್ಶನ: ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ

ಕನ್ನಡ ಚಿತ್ರರಂಗ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ
ಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ ವಿಷಾದ : ಮಜಾವಾಣಿ ಸಂದರ್ಶನ.

ಮಜಾವಾಣಿ: ನಿಮ್ಮ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ.

ದಮ್ಮುಲ ಕೃಷ್ಣಪ್ಪ: ಕೆಮ್ಮು ಕಲೆ ಹೊಸದೇನಲ್ಲ. ಮನುಷ್ಯ ಮಾತನಾಡಲು ಕಲಿಯುವ ಮುನ್ನವೇ ಕೆಮ್ಮುತ್ತಿದ್ದ. ಶಿಶುರ್ವೇತ್ತಿ-ಪಶುರ್ವೇತ್ತಿ ಎನ್ನುವಂತೆ ಹಸುಳೆಗಳಿಂದ ಹಿಡಿದು ಪಶು-ಪ್ರಾಣಿಗಳವರೆಗೆ ಕೆಮ್ಮದವರು ಅಥವಾ ಕೆಮ್ಮಿಗೆ ಸ್ಪಂದಿಸದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ವೈಶಿಷ್ಟ್ಯವೇನೆಂದರೆ ನಾನು ಈ ಕೆಮ್ಮಲ್ಲಿ ಕೊಂಚ ಮಟ್ಟಿಗೆ ನೈಪುಣ್ಯವನ್ನು ಸಾಧಿಸಿದ್ದೇನೆ ಅಷ್ಟೇ.

ಮವಾ : ಹಿನ್ನೆಲೆ-ಕೆಮ್ಮಿನ ರಂಗಕ್ಕೆ ನಿಮ್ಮ ಆಗಮನ ಹೇಗಾಯಿತು?

ದ.ಕೃ. : ನಾನು ಚಿಕ್ಕಂದಿನಿಂದಲೆ ಕೆಮ್ಮುತ್ತಿದ್ದೆ. ನಮ್ಮ ತಾಯಿಯ ಪ್ರಕಾರ ನಾನು ಮೂರು ತಿಂಗಳ ಶಿಶುವಾಗಿದ್ದಾಗಲೇ ಕೆಮ್ಮುತ್ತಿದ್ದನಂತೆ. ನಿಜ ಹೇಳಬೇಕೆಂದರೆ ನಾನು ಕೆಮ್ಮು ಕಲಾರಂಗಕ್ಕೆ ನನಗೇ ಅರಿವಿಲ್ಲದಂತೆ ಶಿಶು ಕಲಾವಿದನಾಗಿ ಆಗಮಿಸಿದೆ. ನನಗೆ ಆರು ತಿಂಗಳಿದ್ದಾಗ ನಮ್ಮ ಊರಿನಲ್ಲಿ ಶೂಟಿಂಗ್ ನಡಿಯುತ್ತಿತ್ತು. ನಮ್ಮಮ್ಮ ನನ್ನನ್ನೂ ಕರೆದುಕೊಂಡು ಶೂಟಿಂಗ್ ನೋಡಲು ಹೋಗಿದ್ದರು. ಒಂದು ದೃಶ್ಯಕ್ಕೆ ಕೆಮ್ಮುವ ಹಸುಳೆಯ ಅಗತ್ಯವಿತ್ತು. ನಿರ್ದೇಶಕರು ನಮ್ಮಮ್ಮನೊಡನೆ ಮಾತನಾಡಿ ನನಗೆ ಪ್ರಪ್ರಥಮ ಬಾರಿಗೆ ಚಲನ ಚಿತ್ರವೊಂದರಲ್ಲಿ ಕೆಮ್ಮಲು ಅವಕಾಶ ಮಾಡಿಕೊಟ್ಟರು. ಹೀಗೆ ಕ್ಯಾಮರ ಮುಂದೆ ಶುರುವಾದ ನಂಟು ಈಗ ಹಿನ್ನೆಲೆ ಕೆಮ್ಮು ಕಲೆಯಲ್ಲಿ ನಿಂತಿದೆ.

ಮ.ವಾ. : ನೀವು ಈವರೆಗೆ ಯಾವ ಯಾವ ನಟರಿಗೆ ಹಿನ್ನೆಲೆಯಲ್ಲಿ ಕೆಮ್ಮಿದ್ದೀರಿ?

ದ.ಕೃ. : ಇಂದಿನ ಚಿತ್ರರಂಗದ ಬಹುಪಾಲು ಹೆಸರಾಂತ ನಾಯಕ ನಟರಿಗೆ ನಾನು ಹಿನ್ನೆಲೆಯಲ್ಲಿ ಕೆಮ್ಮಿದ್ದೇನೆ. ಹಾಡನ್ನು ಹೇಗೆ ಎಲ್ಲ ನಟರೂ ಹಾಡಬಲ್ಲರು. ಆದರೂ ಉತ್ತಮ ಗಾಯನಕ್ಕೆ ಹಿನ್ನೆಲೆ ಗಾಯಕರು ಬೇಕೇ ಬೇಕು. ಹಾಗೆಯೇ ಭಾವ ಪೂರ್ಣವಾದ ಕೆಮ್ಮಿಗೆ ಹಿನ್ನೆಲೆ ಕೆಮ್ಮು ಕಲಾವಿದರು ಅವಶ್ಯ. ನಾನು ಈ ಕಲೆಯನ್ನು ಎಷ್ಟು ಸಿದ್ಧಿಸಿಕೊಂಡಿದ್ದೇನೆಂದರೆ, ಇತ್ತೀಚೆಗೆ ನಾನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರವೊಂದಕ್ಕೆ ಹಿನ್ನೆಲೆಯಲ್ಲಿ ಕೆಮ್ಮುತ್ತಿದ್ದಾಗ ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಹಿರಿಯ ನಟ ಉಪೇಂದ್ರ ಗಾಬರಿಯಾಗಿ ನೀರು ಮತ್ತು ಕಾಫ್ ಡ್ರಾಪ್ಸ್ ಕೊಡುವಂತೆ ತಮ್ಮ ಸಹಾಯಕರಿಗೆ ಅಣತಿಯಿತ್ತರು.

ಮ.ವಾ. : ನೀವು ಕಾಫ್ ಡ್ರಾಪ್ಸ್ ಬಳಸುತ್ತೀರೇ?

ದ.ಕೃ. : ಖಂಡಿತಾ ಇಲ್ಲ. ಗಾಯಕರಿಗೆ ಹೇಗೆ ಕೆಲವೊಂದು ಖಾದ್ಯ ಪದಾರ್ಥಗಳು ವರ್ಜ್ಯವೋ ಹಾಗೆಯೇ ಕಾಫ್ ಆರ್ಟಿಸ್ಟುಗಳಿಗೆ ಕಾಫ್ ಡ್ರಾಪ್ಸ್ ನಿಷಿದ್ಧ. ಉದಯೋನ್ಮುಖ ಕೆಮ್ಮು ಕಲಾವಿದರಿಗೆ ನನ್ನ ಕಿವಿ ಮಾತು: ನೀವು ಈ ರಂಗದಲ್ಲಿ ಉನ್ನತಿ ಸಾಧಿಸಬೇಕೆಂದಿದ್ದಲ್ಲಿ ಕಾಫ್ ಡ್ರಾಪ್ಸ್‌ನಿಂದ ದೂರವಿರಿ.

ಮ.ವಾ. : ನಿಮ್ಮ ಈ ಪ್ರತಿಭೆಗೆ ಕನ್ನಡ ಚಿತ್ರರಂಗದಿಂದ ಸರ್ಕಾರದಿಂದ ಸಹಕಾರ ದೊರಕಿದೆಯೇ?

ದ.ಕೃ. : ಬೇಸರದ ಸಂಗತಿಯೆಂದರೆ ಚಿತ್ರರಂಗವಾಗಲೀ ಸರ್ಕಾರವಾಗಲೀ ಕೆಮ್ಮು ಕಲೆಗೆ ಸಹಕಾರ ನೀಡುವುದಿರಲಿ ಇದನ್ನು ಒಂದು ಕಲೆಯೆಂದೇ ಗುರುತಿಸಿಲ್ಲ. ಕನ್ನಡ ಚಿತ್ರರಂಗ ಹಂಸಗೀತೆಯಂತಹ ಸಂಗೀತ ಪ್ರಧಾನ ಚಿತ್ರವನ್ನು ನಿರ್ಮಿಸಿದೆ. ಆದರೆ ಇಲ್ಲಿಯವರೆಗೆ ಒಂದೂ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ. ಕೆಮ್ಮು ಪ್ರಧಾನ ಚಿತ್ರ ಬೇಡ, ಕನಿಷ್ಠ ತೆಲುಗಿನ ಶಂಕಾರಾಭರಣಂ ತರಹದ ಚಿತ್ರ ಸಹ ನಿರ್ಮಿಸಿಲ್ಲ. ಆ ಚಿತ್ರದ ಕ್ಲೈಮ್ಯಾಕ್ಸಿನಲ್ಲಿ ಆ ಚಿತ್ರದ ನಾಯಕ ಸಂಗೀತ ಹಾಡುತ್ತಾ ಮಧ್ಯದಲ್ಲಿಯೇ ಕೆಮ್ಮುತ್ತಾ ಮರಣಿಸುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಕೆಮ್ಮಿಗೆ ಅಷ್ಟೊಂದು ಮಹತ್ವ ಕೊಡುವ ಒಂದೇ ಒಂದು ಚಿತ್ರ ಸಹ ಇನ್ನೂ ನಿರ್ಮಾಣವಾಗಿಲ್ಲ. ಹಾಗೆಯೇ ನಮ್ಮ ಚಿತ್ರರಂಗದಲ್ಲಿ ಕೆಮ್ಮನ್ನು ಬಹುಮಟ್ಟಿಗೆ ನೆಗೆಟೀವ್ ಆಗಿ, ಎಂದರೆ ರೋಗದ ಕುರುಹಾಗಿ ಚಿತ್ರೀಕರಿಸಲಾಗುತ್ತದೆ. ಸಂಗೀತ ಹೇಗೋ ಹಾಗೆಯೇ ಕೆಮ್ಮು ಸಹ ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಯಾವಾಗಲೂ ನೆಗೆಟೀವ್ ಆಗಿಯೇ ನೋಡುವುದು ಬಿಡಬೇಕು.

ಜನರಲ್ಲಿ ಕೆಮ್ಮು ಕಲೆಯ ಬಗೆಗೆ ಅರಿವು ಮೂಡಿಸಿ ಅದನ್ನು ಪೋಷಿಸಲು ಒಂದು ಅಕಾಡೆಮಿಯ ಅವಶ್ಯಕತೆ ಇದೆ. ಸರ್ಕಾರ ನೆರವು ನೀಡಿದರೆ ಅದನ್ನು ಸ್ಥಾಪಿಸಲು ನಾನು ಈಗಲೇ ಸಿದ್ಧ.
(Earlier published in Thats Kannada)

Labels: ,

Monday, January 03, 2011

ಮಜಾವಾಣಿ: ಕೃಷಿ ವಾರ್ತೆ

ಉತ್ತಮ ತಳಿಯ ರೈತನ ಅಭಿವೃದ್ಧಿಗೆ ಸರ್ಕಾರದ ಕ್ರಮ

ನವ ದೆಹಲಿ ಫೆ.23: ದೇಶದ ರೈತರ ಬವಣೆ ಮತ್ತು ಆತ್ಮಹತ್ಯೆಗಳಿಂದ ರೋಸಿಹೋಗಿರುವ ಕೇಂದ್ರ ಸರ್ಕಾರ, ಉತ್ತಮ ತಳಿಯ ರೈತರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಂಡಿದೆ.

ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ಕೃಷಿ ಸಂಶೋಧನಾಲಯದ ನೂತನ ಪ್ರಯೋಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಹಳ್ಳಿ-ಹಳ್ಳಿಗಳಲ್ಲೂ ಉತ್ತಮ ತಳಿಯ ರೈತರು ಕಂಡು ಬರಲಿದ್ದು, ರೈತರ ಆತ್ಮಹತ್ಯೆ ಎಂಬುದು ಸಂಪೂರ್ಣವಾಗಿ ಮರೆತ ಮಾತಾಗಲಿದೆ ಎಂದರು.

"ಇಲ್ಲಿಯವರೆಗೆ ಕೃಷಿ ಸಂಶೋಧನೆ ಎಂದರೆ ಉತ್ತಮ ತಳಿಯ ಬಿತ್ತನೆ ಬೀಜಗಳ ಅಭಿವೃದ್ಧಿ, ಉತ್ತಮ ಮಟ್ಟದ ಗೊಬ್ಬರ, ಕ್ರಿಮಿ ನಾಶಕಗಳ ಉತ್ಪಾದನೆ ಎಂಬ ಅಭಿಪ್ರಾಯವಿತ್ತು. ಆದರೆ, ಇವು ಯಾವುದೂ ರೈತರ ಬವಣೆ ಮತ್ತು ಆತ್ಮಹತ್ಯೆಯ ಸುದ್ದಿಗಳ ಇರುಸು-ಮುರುಸನ್ನು ಕಡಿಮೆ ಮಾಡಲಿಲ್ಲ. ಹೀಗಾಗಿ, ಸರ್ಕಾರ ಬೇರೊಂದು ದಿಕ್ಕಿನಲ್ಲಿ ಯೋಚಿಸುವ ಪ್ರಮೇಯ ಒದಗಿತು" ಎಂದ ಪವಾರ್, "ಇನ್ನು ಮುಂದೆ ದೇಶದ ಜನತೆ ಯಾವುದೇ ಯೋಚನೆ ಇಲ್ಲದೆ ಐ.ಪಿ.ಎಲ್. ಪಂದ್ಯಾವಳಿಗಳನ್ನು ನೋಡಬಹುದು" ಎಂದು ನುಡಿದರು.

ಪ್ರಯೋಗಾಲಯದ ಮುಖ್ಯ ನಿರ್ದೇಶಕ ಡಾ.ಬೇಜಾನ್ ಸಿಂಗ್ ಮಾತನಾಡಿ, ತಮ್ಮ ಪ್ರಯೋಗಶಾಲೆಯಲ್ಲಿ ಅಭಿವೃದ್ಧಿಪಡೆಸಲಿರುವ ರೈತ ಹಲವಾರು ಉತ್ತಮ ಗುಣಗಳನ್ನು ಹೊಂದಿರುತ್ತಾನೆ ಎಂದರಲ್ಲದೆ "ನಮ್ಮ ಪ್ರಯೋಗಾಲಯದಿಂದ ಹೊರಬರುವ ರೈತ ಆಶಾವಾದಿ, ಶ್ರಮಜೀವಿ ಮಾತ್ರವಲ್ಲದೆ ಸ್ಫುರದ್ರೂಪಿ ಸಹ ಆಗಿರುತ್ತಾನೆ. ಬೆಳಗಿನಿಂದ ಸಂಜೆಯವರೆಗೆ ತನ್ನ ಹೊಲ ಗದ್ದೆಗಳಲ್ಲಿ ದುಡಿಯುವ ಈ ಉತ್ತಮ ತಳಿಯ ರೈತ, ಸಂಜೆಯ ನಂತರ, ನಗರ ಪ್ರದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ಮನರಂಜನೆ ನೀಡಲು ಸಂಗೀತ ಮತ್ತು ನೃತ್ಯಗಳಲ್ಲಿ ಅತ್ಯುತ್ತಮ ಪರಿಣತಿ ಸಹ ಹೊಂದಿರುತ್ತಾನೆ. ಇಂತಹ ರೈತನನ್ನು ರೂಪಿಸಲು ನಮ್ಮ ವಿಜ್ಞಾನಿಗಳು ವಿವಿಧ ಭಾಷೆಯ ಹತ್ತು ಹಲವಾರು ಚಲನಚಿತ್ರಗಳನ್ನು ಮತ್ತೆ ಮತ್ತೆ ಸತತವಾಗಿ ನೋಡುತ್ತಿದ್ದಾರೆ" ಎಂದರು.

(ಮಜಾವಾಣಿ ಕೃಷಿ ವಾರ್ತೆ - Previously published in Thats Kannada)

Labels: ,