ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, December 19, 2010

ಮಜಾವಾಣಿ: ವಾಣಿಜ್ಯ ಸುದ್ದಿ


ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!

ಬೆಂಗಳೂರು, ಡಿ.೩೫: ಬಿ.ಜೆ.ಪಿ., ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದು, ಈಗಷ್ಟೇ ಜೆ.ಡಿ.ಎಸ್. ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್. ಬಂಗಾರಪ್ಪನವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಬಿ.ಎನ್.ಎಸ್.ಎಲ್. ಮುಖ್ಯಸ್ತ ತಿರುತ್ತಣಿ ಅಗರ್‌ವಾಲ್, "ಪ್ರಸಕ್ತ ರಾಜಕೀಯ ರಂಗದಲ್ಲಿ ಬಂಗಾರಪ್ಪನವರು ತಿರುಗಾಡುವಷ್ಟು ಇನ್ನಾವ ರಾಜಕಾರಣಿಗಳೂ ತಿರುಗಾಡುತ್ತಿಲ್ಲ. ಅವರು ಇಂದು ಇದ್ದಲ್ಲಿ ನಾಳೆ ಇರುವುದಿಲ್ಲ. ಹೇಳೀಕೇಳಿ ನಮ್ಮದು ಮೊಬೈಲ್ ಸಂಪರ್ಕ ಸಂಸ್ಥೆ. ಹೀಗಾಗಿ ನಮ್ಮ ಹೊಸ ’ಪೀಪಲ್ ಆನ್ ದಿ ಮೂವ್’ ಅಡ್ವರ್ಟೈಸಿಂಗ್ ಕ್ಯಾಂಪೇನ್‌ಗೆ ಬಂಗಾರಪ್ಪನವರಿಗಿಂತ ಸೂಕ್ತ ವ್ಯಕ್ತಿ ಇನ್ನಿಲ್ಲ ಎನ್ನಿಸಿತು" ಎಂದರು.

ಸಮಾರಂಭದಲ್ಲಿ ಹಾಜರಿದ್ದ ಬಂಗಾರಪ್ಪ, "ಇದು ವೈಯುಕ್ತಿಕವಾಗಿ ನನಗೆ ಮಾತ್ರ ಸಂದ ಗೌರವವಲ್ಲ. ನನ್ನಂತೆಯೇ ಇನ್ನೂ ಹಲವಾರು ರಾಜಕಾರಣಿಗಳು ಸಹ ನಿಂತ ನೀರಾಗದೆ ಸದಾ ಸುತ್ತುತ್ತಲೇ ಇರುತ್ತಾರೆ. ನಾನು ಅಂತಹವರೆಲ್ಲರ ಸಂಕೇತ ಮಾತ್ರ" ಎಂದರು.

(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)

ಸೂಚನೆ: ಈ ವರದಿ ಮಾರ್ಚ್ ೨೦೦೯ರಲ್ಲಿ ದಟ್ಸ್ ಕನ್ನಡದಲ್ಲಿ ಪ್ರಕಟಿತವಾಗಿತ್ತು. ಹೊಸದೊಂದು ಡೇಟ್-ಲೈನ್‍ನೊಂದಿಗೆ ಮತ್ತೊಮ್ಮೆ ಮಜಾವಾಣಿಯಲ್ಲಿ ಪ್ರಕಟಿಸುವ ಸಂದರ್ಭ ಕಲ್ಪಿಸಿದ ಬಂಗಾರಪ್ಪನವರಿಗೆ ನಮ್ಮ ಪತ್ರಿಕೆಯ ಪರವಾಗಿ ಧನ್ಯವಾದಗಳು.

..
ವಾ.ವಿ.
(ಗ್ಲೋಬಲ್ ಗ್ರೂಪ್ ಚೀಫ್ ಮ್ಯಾನೇಜಿಂಗ್ ಎಕ್ಸಿಕ್ಯೂಟಿವ್ ಸಬ್ ಎಡಿಟರ್ - ಆಲ್ ಲಾಂಗ್ವೇಜ್ ನ್ಯೂಸ್)
ಟೇಕ್ ದಟ್ ಬರ್ಖಾ ದತ್!

Labels: , ,

ಮಜಾವಾಣಿ ಸಾಧನೆ!

ಬೆಂಗಳೂರು ಡಿ. ೨೦: ಜಗತ್ತಿನ ಅತ್ಯಂತ ಅವಿಶ್ವಾಸಾರ್ಹ ಪತ್ರಿಕೆ "ಮಜಾವಾಣಿ" ಎಂಬುದು ಯಾವುದೇ ಸಂದೇಹವಿಲ್ಲದೆ ನಿರೂಪಿತವಾಗಿದೆ. ಕೇವಲ ಎರಡೇ ವರ್ಷಗಳ ಹಿಂದೆ ಬ್ಲಾಗ್ ಸ್ಪಾಟಿಗೆ ವಿದಾಯ ಹೇಳಿದ್ದ ಈ ಪವಿತ್ರ ಪತ್ರಿಕೆ ಮತ್ತೊಮ್ಮೆ ಬ್ಲಾಗ್ ಸ್ಪಾಟಿನಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಕೆಲವು ಸೂಚನೆಗಳು ಕಂಡುಬಂದಿದೆ ಎನ್ನಲಾಗಿದೆ. ಈ ಎರಡು ವರ್ಷಗಳಲ್ಲಿ, ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಎರಡೂವರೆ ಇಂದ ಒಂದೂವರೆಗೆ ಇಳಿದಿದೆ ಎನ್ನಲಾಗಿದೆ.

(ಪಿ.ಟಿ.ಹೈ.)

ಕ್ಷಮೆಯೊಂದಿಗೆ:

ಪ್ರಿಯ ಓದುಗರೆ (ಇನ್ನೂ ಯಾರಾದರೂ ಇದ್ದಲ್ಲಿ!),

ಸುಮಾರು ಎರಡು ವರ್ಷಗಳ ಹಿಂದೆ, ಬ್ಲಾಗ್ ಸ್ಪಾಟಿಗೆ ವಿದಾಯ ಹೇಳಿ, ಆತ್ಮೀಯ ಮಿತ್ರರಾದ ಸಂಪದದ ನಾಡಿಗರು ನಿರ್ಮಿಸಿಕೊಟ್ಟಿದ್ದ ಮಜಾವಾಣಿ.ನೆಟ್ ತಾಣಕ್ಕೆ "ಮಜಾವಾಣಿ"ಯನ್ನು ಸ್ಥಳಾಂತರಿಸಿದ್ದೆ. ನಾಡಿಗರೇನೋ ತಮ್ಮ ಹತ್ತು ಹಲವಾರು ಕಾರ್ಯ ಚಟುವಟಿಕೆಗಳ ನಡುವೆಯೂ ಸಮಯ ಮಾಡಿಕೊಂಡು ಉತ್ತಮ ವೆಬ್ ಸೈಟೊಂದನ್ನು ಮಾಡಿಕೊಟ್ಟಿದ್ದರು, ಆದರೆ, ಸೋಮಾರಿತನ ಇತ್ಯಾದಿ ಕಾರಣಗಳಿಂದ ನಾನು ಬರೆಯುವುದನ್ನೇ ಬಿಟ್ಟಿದ್ದೆ. ಹೀಗಾಗಿ, ಮಜಾವಾಣಿ.ನೆಟ್ ಅಪ್‌ಡೇಟ್ ಆಗುವುದೇ ನಿಂತಿತು.

ಈ ಮಧ್ಯೆ, ಮಜಾವಾಣಿಯನ್ನು ಅಂಕಣ ರೂಪದಲ್ಲಿ ಬರೆಯುವ ಅವಕಾಶವನ್ನು ದಟ್ಸ್ ಕನ್ನಡದ ಶ್ಯಾಮ್ ಅವರು ಒದಗಿಸಿ ಕೊಟ್ಟರು. ಆದರೆ, ಅದೂ ಸಹ, ನನ್ನ ಸೋಮಾರಿತನ ಮತ್ತು ಇತರ ಕಾರಣಗಳಿಂದ ಹೆಚ್ಚು ಕಾಲ ಮುಂದುವರೆಸಲಾಗಲಿಲ್ಲ.

ನಾಡಿಗ್ ಮತ್ತು ಶ್ಯಾಮ್ ಅವರಲ್ಲಿ ಈ ಮೂಲಕ ಕ್ಷಮೆ ಯಾಚಿಸಿ, ನನ್ನ ಮೈಗಳ್ಳತನಕ್ಕೆ ಒಗ್ಗುವ ಈ ಬ್ಲಾಗ್ ಸ್ಪಾಟಿನಲ್ಲಿ ಮಜಾವಾಣಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದೇನೆ.

ನಾನು ಬರೆಯುವುದನ್ನು ನಿಲ್ಲಿಸಿದ್ದರೂ, ಮಜಾವಾಣಿಯನ್ನು ಓದುತ್ತಿರುವ, ಓದಿ ನನಗೆ ಇ-ಮೇಲ್ ಮಾಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ ಎಂದು ಆಶಿಸುತ್ತಾ,

ವಂದನೆಗಳೊಂದಿಗೆ,

ಶೇಷಾದ್ರಿ
("ವಾರ್ತಾ ವಿದೂಷಕ")

Labels: