ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, August 28, 2008

ಬ್ಲಾಗ್‌ಸ್ಪಾಟಿಗೆ ವಿದಾಯ!

ಆತ್ಮೀಯ ಓದುಗ ಮಿತ್ರರಿಗೆ,
ನಮಸ್ಕಾರ.

ಸುಮಾರು ವರ್ಷಗಳ ವಾಸದ ನಂತರ, ಬ್ಲಾಗ್‌ಸ್ಪಾಟಿಗೆ ವಿದಾಯ ಹೇಳಿ, ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುವ ಸಂದರ್ಭ ಮಜಾವಾಣಿಗೆ ಒದಗಿದೆ. ಮಿತ್ರರಾದ ಎಚ್.ಪಿ.ನಾಡಿಗರು ಒಂದು ಅತ್ಯುತ್ತಮ ನೆಲೆಯನ್ನೂ ಒದಗಿಸಿದ್ದಾರೆ.
ಮಜಾವಾಣಿಯ ಹೊಸ ವಿಳಾಸ: ಮಜಾವಾಣಿ.ನೆಟ್

ವಿಶ್ವಾದ್ಯಂತ ಇರುವ ಮೂರೂವರೆ ಮಂದಿ ಮಜಾವಾಣಿ ಓದುಗರು ನಮ್ಮ ಹೊಸ ವಿಳಾಸಕ್ಕೆ ಮತ್ತೆ ಮತ್ತೆ ಭೇಟಿ ಕೊಟ್ಟು, ಸತ್ಯದೊಂದಿಗಿನ ನಮ್ಮ ಭೀಕರ ಯುದ್ಧದಲ್ಲಿ ವೀರ ಸ್ವರ್ಗಕ್ಕೆ ಮೂರು ಗೇಣಿನವರೆಗೆ ನಮ್ಮನ್ನು ಕೊಂಡೊಯ್ಯ ಬೇಕೆಂದು ಪ್ರಾರ್ಥಿಸುತ್ತೇನೆ.

ವಿಶ್ವಾಸದೊಂದಿಗೆ,
ವಿ.ವಿ.
ಮಹಾ ಪ್ರಧಾನ ಮುಖ್ಯ ವ್ಯವಸ್ಥಾಪಕ ಉಪ ಸಂಪಾದಕ

Saturday, August 09, 2008

ಮಜಾವಾಣಿ: ರಾಜ್ಯ ಸುದ್ದಿ

ನೈಸರ್ಗಿಕ ಕಾರಣಗಳಿಂದ ರೈತನ ಸಾವು!
ಮು.ಮಂ. ನೆಮ್ಮದಿಯ ನಿಟ್ಟುಸಿರು

ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಗುಳೇದ ಗುಡ್ಡ ಗ್ರಾಮದ ಶಿವನಂಜಯ್ಯನವರೇ ಈ ಅದೃಷ್ಟಶಾಲಿ ರೈತರಾಗಿದ್ದು, ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ವೃತ್ತಿಯಿಂದ ರೈತರಾದರೂ, ನೈಸರ್ಗಿಕ ಕಾರಣಗಳಿಂದ ಅವರು ಸಾವಿಗೀಡಾಗಿರುವುದು ಇಡೀ ಜಿಲ್ಲೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ಗುಳೇದ ಗುಡ್ಡದ ಗ್ರಾಮಸ್ತರನ್ನು ಆನಂದತುಂದಿಲರನ್ನಾಗಿಸಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಷಯದ ಕುರಿತು ಮಾತನಾಡಿದ ಮತ್ತೊಬ್ಬ ರೈತ ಚಿಕ್ಕೇಗೌಡ, "ಶಿವನಂಜಯ್ಯ ಹೋಗ್ಬಿಟ್ಟರು ಅಂತ ಗೊತ್ತಾದಾಗ, ಅದೇ ಎಂದಿನಂತೆ ಅಂದುಕೊಂಡೆ. ಆದರೆ, ಅವರು ವಯಸ್ಸಾಗಿ ತೀರಿಕೊಂಡದ್ದು ಅಂತ ಗೊತ್ತಾದಾಗ, ನಿಜವಾಗ್ಲೂ ಆಶ್ಚರ್ಯ ಆಯಿತು. ಈ ಕಾಲದಲ್ಲೂ ಈ ತರ ಸಾವು ಇದೆಯಾ ಅಂತ!" ಎಂದರು.

ಶಿವನಂಜಯ್ಯನವರ ಈ ಸಾವು ಸರ್ಕಾರಿ ವಲಯಗಳಲ್ಲಿ ಕೊಂಚ ಮಟ್ಟಿಗೆ ಆನಂದವನ್ನು ತಂದಿದ್ದು, ಮುಖ್ಯಮಂತ್ರಿಯವರು ಸಹ ರೈತರ ಸಾವಿನ ವಿಚಾರದಲ್ಲಿ ಇದೇ ಮೊದಲ ಬಾರಿಗೆ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರೆನ್ನಲಾಗಿದೆ.

ಖರ್ಗೆ ಆಗ್ರಹ: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿ, ಆತ ಅಥವಾ ಆಕೆ ರೈತ ಇರಬಹುದೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ನಿಧನರಾದವರು ರೈತರಲ್ಲ ಎಂಬುದು ಖಚಿತವಾಗಿ ನಿರೂಪಿತವಾಗದ ತನಕ, ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರೆಂದೇ ಪರಿಗಣಿಸ ಬೇಕೆಂದ ಖರ್ಗೆಯವರು, ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Labels: , ,

Saturday, August 02, 2008

ಮಜಾವಾಣಿ: ವಾಣಿಜ್ಯ-ಕ್ರೀಡೆ-ರಾಜಕೀಯ


ಶಾಸಕರ ಭವನದ ಸಮೀಪ ಡಿಕೆಶಿ'ಸ್ ಕ್ಯಾಸಲ್
(ಮಜಾವಾಣಿ ಎಕ್ಸ್‌ಕ್ಲೂಸಿವ್)
ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು, ಇದಕ್ಕೆ ಡಿಕೆಶಿ'ಸ್ ಕ್ಯಾಸಲ್ ಎಂದು ಹೆಸರಿಡಲಾಗಿದೆ.
ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ವಿವರಗಳನ್ನು ಹಂಚಿಕೊಂಡ ಶಿವಕುಮಾರ್, "ಕೆಸರು ಎರಚುವುದು, ಕಾಲೆಳೆಯುವುದು, ಜಾರಿಸಿ ಬೀಳಿಸುವುದು ಇದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ಆದರೆ ಈ ವಿದ್ಯೆಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಹೇಗೆ, ಅದರಿಂದ ಲಾಭವೇನಾದರೂ ಇದೆಯೇ ಎಂಬ ಆಲೋಚನೆ ಬಂತು. ಅದರ ಫಲವೇ ಡಿಕೇಶಿ'ಸ್ ಕ್ಯಾಸಲ್. ಶಾಸಕರ ಭವನದ ಸಮೀಪ ೪.೨೦ ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಲಾಗಿದೆ. ಪಕ್ಷಭೇದವಿಲ್ಲದೆ ರಾಜಕಾರಣಿಗಳೆಲ್ಲರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ" ಎಂದರು.

Labels: , ,