ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, July 28, 2008

ಮಜಾವಾಣಿ: ಪ್ರಾದೇಶಿಕ ವಾರ್ತೆ

ಇನ್ನು ಮುಂದೆ ಅಣು "ಮುಂಬ್"?!
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.

ಸ್ವಾಭಿಮಾನಿ ಮಹರಾಷ್ಟ್ರ ಸಂಘದ ಕಾರ್ಯಕರ್ತರು ಅಣು ಬಾಂಬಿನ ಮರು ನಾಮಕರಣಕ್ಕೆ ಒತ್ತಾಯಿಸಿ ಗುರುವಾರ ಸಂಜೆ ಮುಂಬೈನಲ್ಲೆ ಭಾರಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅತುಲ್ ರಾವ್ ಪಾಟೆಕರ್, "ಅಣು ಬಾಂಬ್ ಭಾರತದ ವೈಜ್ಞಾನಿಕ ಪ್ರಗತಿಯ ಸಂಕೇತ. ಈಗಾಗಲೇ ಬಾಂಬೇ ಮುಂಬೈ ಆಗಿರುವುದರಿಂದ, ಬಾಂಬ್ ಸಹ ಮುಂಬ್ ಆಗಲೇ ಬೇಕು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ" ಎಂದು ನುಡಿದರು.

(ಪಿ.ಟಿ.ಹೈ.)

Labels:

ಮಜಾವಾಣಿ: ಚಿತ್ರ ವಿಮರ್ಶೆ

ದ ವಿನಿಂಗ್ ಕ್ಯಾಂಡಿಡೇಟ್!

ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!!

ಇದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯ. ಗೋಬಿ ಮಂಚೂರಿ ನಮ್ಮ ತಟ್ಟೆಗಳನ್ನು ಆಕ್ರಮಿಸಿಕೊಂಡಿದ್ದು ಯಾವಾಗ?! ಈ ಆಕ್ರಮಣದ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ ಯಾಕೆ?!! ನಮ್ಮೆಲ್ಲರ ಬ್ರೇನ್‌ವಾಷ್ ಆಗಿದೆಯೇ?!!! ಇದರ ಹಿಂದೆ ಚೈನಾ-ಅಮೆರಿಕಗಳ ಜಾಗತಿಕ ಪೊಲಿಟಿಕಲ್ ಕಾನ್ಸ್ಪಿರಸಿ ಇದೆಯೇ?!!!!

"ದಿ ಗೋಬಿ ಮಂಚೂರಿಯನ್ ಕ್ಯಾಂಡಿಡೇಟ್" ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಲನಚಿತ್ರ ಎಂಬುದರಲ್ಲಿ ಸಂದೇಹವಿಲ್ಲ. ಕನ್ನಡಿಗರ ತಟ್ಟೆಯ ಮೇಲೆ ಪರಕೀಯ ತಿಂಡಿಗಳ ದುರಾಕ್ರಮಣದ ಹಿಂದಿನ ಕರಾಳ ಜಾಗತಿಕ ಕಾನ್ಸ್ಪಿರಸಿಯನ್ನು ಎಳೆ-ಎಳೆಯಾಗಿ ಬಿಡಿಸಿ ಅದನ್ನು ಒಂದು ಥ್ರಿಲರ್‌ನಂತೆ ನಿರೂಪಿಸುವ ನಿರ್ದೇಶಕರ ನಿರೂಪಣಾ ಶೈಲಿ ನಿಜಕ್ಕೂ ಅನನ್ಯ.

ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ -- ಅದರಲ್ಲೂ ಅಕ್ಕಿಯ ಬೆಲೆ -- ಆಕಾಶಕ್ಕೆ ಏರುತ್ತಿರುವ ಸಂದರ್ಭದಲ್ಲಿ, ಭಾರತದ ಪ್ರಧಾನಿ ಮತ್ತು ಅಮೆರಿಕದ ಅಧ್ಯಕ್ಷ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಆ ಒಪ್ಪಂದದ ಪ್ರಕಾರ, ಭಾರತಕ್ಕೆ ಅಮೆರಿಕದ ಅಕ್ಕಿ ದೊರಕುತ್ತದೆ, ಆದರೆ, ಒಂದು ನಿರ್ಬಂಧದೊಂದಿಗೆ: ಅಮೆರಿಕದ ಅಕ್ಕಿಯನ್ನು ಮಂತ್ರಾಕ್ಷತೆಗೆ ಮಾತ್ರ ಬಳಸಬೇಕು. ಈ ಒಪ್ಪಂದ ಚೈನಾದ ಕೆಂಗಣ್ಣಿಗೆ ಕಾರಣವಾಗುತ್ತದೆ: ಭಾರತೀಯರು ಹೆಚ್ಚು-ಹೆಚ್ಚು ಮಂತ್ರಾಕ್ಷತೆ ಬಳಸಲಾರಂಭಿಸಿದರೆ, ಚೈನಾದ ಗತಿ?!

ಇಡ್ಲಿ, ದೋಸೆ, ಅಕ್ಕಿ ರೊಟ್ಟಿ ಇತ್ಯಾದಿ ಅಕ್ಕಿ ತಿಂಡಿಗಳಿಂದ ಕನ್ನಡಿಗರನ್ನು ದೂರವಿಟ್ಟು ಗೋಬಿ ಮಂಚೂರಿಯ ಗುಲಾಮರನ್ನಾಗಿಸುವ ಚೈನಾದ ಹಲವು ವರ್ಷಗಳ ಹುನ್ನಾರಕ್ಕೆ ಈ ಮಂತ್ರಾಕ್ಷತೆ ಒಪ್ಪಂದ ಅನ್ನದಲ್ಲಿನ ಕಲ್ಲಿನಂತೆ ಎದುರಾಗುತ್ತದೆ. ಈ ಒಪ್ಪಂದವನ್ನು ಹೇಗಾದರೂ ಮುರಿಯಲು ಚೈನಾದ ರಾಜಕೀಯ ನಾಯಕರು ನಿರ್ಧರಿಸುತ್ತಾರೆ. ಭಾರತದಲ್ಲಿ ಈ ಒಪ್ಪಂದದ ಕುರಿತು ಕೋಲಾಹಲವನ್ನು ಸೃಷ್ಟಿಸುತ್ತಾರೆ. ಒಪ್ಪಂದ ಮುರಿದು ಬೀಳುತ್ತದೆಯೇ? ಪ್ರಧಾನ ಮಂತ್ರಿ ಕೆಳಗಿಳಿಯುತ್ತಾರೆಯೇ? ಚೈನಾದ ಕುತಂತ್ರ ಯಶಸ್ವಿಯಾಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ, ಚಿತ್ರದ ಕ್ಲೈಮಾಕ್ಸಿನಲ್ಲಿ ಬರುವ ಸಂಸತ್ತಿನ ವಿಶ್ವಾಸ ಮತದ ಸನ್ನಿವೇಶ ಉತ್ತರ ನೀಡುತ್ತದೆ.

ಮಂತ್ರಾಕ್ಷತೆ ಒಪ್ಪಂದವನ್ನು ಶತಾಯ ಗತಾಯ ಮುರಿಯಲು ಪ್ರಯತ್ನಿಸುವ ಗುಂಪಿನ ನಾಯಕಿಯಾಗಿ, ದೆಹಲಿಯ ಚೈನೀಸ್ ರೆಸ್ಟರಂಟ್ ಒಂದರ ಒಡತಿಯ ಪಾತ್ರದಲ್ಲಿ ಬೃಂದಾ ಕ್ಯಾರಟ್ ತಮ್ಮ ಜೀವನದ ಸರ್ವ ಶ್ರೇಷ್ಠ ಅಭಿನಯ ನೀಡಿದ್ದಾರೆ. ಅವರಿಗಾಗಿಯೇ ಬರೆದಂತಿರುವ ಆ ಪಾತ್ರದಲ್ಲಿ, ಬೃಂದಾ ಜೀವಿಸಿದ್ದಾರೆ ಎಂದರೆ ಅದು ಸುಳ್ಳಲ್ಲ. ತಮ್ಮ ರೆಸ್ಟರಂಟಿಗೆ ಬರುವ ಡಿಮ್-ಸಮ್ ಚಟರ್ಜಿಗೆ ಮತ್ತೆ-ಮತ್ತೆ ಗೋಬಿ ಮಂಚೂರಿ ತಿನ್ನಿಸಿ ಅವರನ್ನು ಗೋಬಿ ಮಂಚೂರಿ ವ್ಯಸನಿಯನ್ನಾಗಿಸುವ ದೃಶ್ಯಗಳಲ್ಲಿ, ಬೃಂದಾರವರ ಅಭಿನಯ chillingly realistic!

ಜಾಗತಿಕ ರಾಜಕೀಯ ಚದುರಂಗದಾಟದಲ್ಲಿ, ತನಗೇ ತಿಳಿಯದಂತೆ ಒಂದು pawn ಆಗುವ, ಗೋಬಿ ಮಂಚೂರಿ ವ್ಯಸನಿಯ ಅತ್ಯಂತ ಕ್ಲಿಷ್ಟ ಮತ್ತು pivotal ಪಾತ್ರದಲ್ಲಿ ಡಿಮ್-ಸಮ್ ಚಟರ್ಜಿಯವರ ಅಭಿನಯ ಅತ್ಯಮೋಘ. ಒಂದು ಚಟಕ್ಕೆ ದಾಸನಾಗಿಯೂ, ಅದನ್ನು ಮೀರಿ ಸರಿ ಹೆಜ್ಜೆ ಇಡಬೇಕೆಂದು ಹಂಬಲಿಸುವ ಪಾತ್ರವನ್ನು ಡಿಮ್-ಸಮ್ ಅತ್ಯಂತ ಮನೋಜ್ಞವಾಗಿ, subtle ಆಗಿ ನಿರೂಪಿಸಿದ್ದಾರೆ. ಕ್ಲೈಮಾಕ್ಸಿನ ವಿಶ್ವಾಸಮತ ಯಾಚನೆಯ ದೃಶ್ಯದಲ್ಲಿ, ಅತ್ತ ಮತಯಂತ್ರದ ಬಟನ್ ಇತ್ತ ಗೋಬಿ ಮಂಚೂರಿ ತಟ್ಟೆ ಇವುಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬ ಮಾನಸಿಕ ತೊಳಲಾಟವನ್ನು ಕೇವಲ ಕಣ್ಣಲ್ಲೇ ತೋರುವ ಪರಿ ಚಿತ್ರದ ಹೈ ಲೈಟ್.

ಇನ್ನುಳಿದಂತೆ, "ಒಪ್ಪಂದದ ಪ್ರಕಾರ ಭಾರತಕ್ಕೆ ಸರಬರಾಜಾಗುವುದು, ಅಕ್ಕಿಯಲ್ಲ, ಕಾಂಡೊಲಿಸಾ ರೈಸ್. ಈ ಒಪ್ಪಂದದಿಂದ ಮಂತ್ರಾಕ್ಷತೆ ಮಾಡಲು ಸಾಧ್ಯವಿಲ್ಲ" ಎಂದು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ಸುದ್ದಿ ಮಾಡುವ ಸಂಪಾದಕನ ಪಾತ್ರದಲ್ಲಿ ಎನ್.ರಾಮ್ ಗಮನ ಸೆಳೆಯುತ್ತಾರೆ.

ಛಾಯಗ್ರಹಣ ಮತ್ತು ಹಿನ್ನೆಲೆ ಸಂಗೀತ, ಚಿತ್ರದ ಗಹನತೆ ಮತ್ತು ಗಾಂಭೀರ್ಯಕ್ಕೆ ಪೂರಕವಾಗಿದ್ದು, ನಿರೂಪಣೆಯ ಹದವನ್ನು ಉಳಿಸಿಕೊಂಡು ಬಂದಿವೆ. ಚಿತ್ರದಲ್ಲಿನ ಏಕ ಮಾತ್ರ ಗೀತೆ ಕಾಯ್ಕಿಣಿಯವರ "ಕಾಡುವೆ ಹೀಗೇಕೆ ಗೋಬಿ ಮಂಚೂರಿ" ಕೇಳಲು ಇಂಪಾಗಿದ್ದು, ಡಿಮ್-ಸಮ್ ಚಟರ್ಜಿಯ ಮಾನಸಿಕ ತೊಳಲಾಟದ ಭಾವ ತೀವ್ರತೆಯನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಸುವಲ್ಲಿ ಸಫಲವಾಗಿದೆ.

Labels: , ,

Saturday, July 26, 2008

ಮಜಾವಾಣಿ ಜಾಹಿರಾತು: ರಾಜಕೀಯ ತಂತ್ರಾಂಶ


ಇದನ್ನೂ ಓದಿ! (ಸೋಮಾರಿತನದ ಪರಮಾವಧಿ!)

Labels: ,