ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, May 06, 2008

ಚುನಾವಾಣಿ ೨೦೦೮: ಡೀಲಕ್ಸ್ ಮತಗಟ್ಟೆಗಳಲ್ಲಿ ಉಗುರುಗಳಿಗೆ ಬಣ್ಣ

ದೇಶದಲ್ಲಿಯೇ ಪ್ರಥಮ ಬಾರಿಗೆ ಫೈವ್ ಸ್ಟಾರ್ ಮತಗಟ್ಟೆ!

ಬೆಂಗಳೂರು ಮೇ ೧೨: ಸಿರಿವಂತ ಮತದಾರರನ್ನು ಆಕರ್ಷಿಸಲು ಇದೇ ಪ್ರಥಮ ಬಾರಿಗೆ ಡೀಲಕ್ಸ್ ಮತಗಟ್ಟೆಗಳನ್ನು ಚುನಾವಣ ಆಯೋಗ ಲಭ್ಯಗೊಳಿಸಿದೆ.

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಕಮೀಷನರ್ ಎನ್.ಗೋಪಾಲಸ್ವಾಮಿಯವರು, ಇಂತಹ ಮತಗಟ್ಟೆಗಳು ಜಗತ್ತಿನಲ್ಲೇ ಪ್ರಥಮಬಾರಿಗೆ ಬೆಂಗಳೂರಿನ ಗಣ್ಯ ಮತದಾರರಿಗೆ ಲಭ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

"ಚುನಾವಣೆಯಿಂದ ಚುನಾವಣೆಗೆ ಮತದಾರರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ಆಯೋಗ ಸಿರಿವಂತ ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಮುರುಕಲು ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ, ಸಾಲುಗಟ್ಟಿ ನಿಲ್ಲುವ ಸಾಮಾನ್ಯ ಜನ, ಇದೆಲ್ಲಾ ಮಾಸ್ ಮತದಾರರಿಗೆ ಸರಿಹೊಂದಬಹುದಾದರೂ, ಕ್ಲಾಸ್ ಮತದಾರರಿಗೆ ಖಂಡಿತಾ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ, ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಮತ್ತು ಟಾಜ್ ವೆಸ್ಟ್ ಎಂಡ್ ಹೋಟೆಲುಗಳಲ್ಲಿ ಫುಲ್ಲೀ ಏರ್ ಕಂಡೀಷನ್ಡ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಕೇವಲ ಆಹ್ವಾನಿತ ಮತದಾರರಿಗೆ ಮಾತ್ರ ಲಭ್ಯವಿದ್ದು ಮತದಾನದ ಅನುಭವವನ್ನು ಸುಖೀಕರಿಸಲು ಸಂಪೂರ್ಣವಾಗಿ ಸಜ್ಜಾಗಿವೆ" ಎಂದ ಗೋಪಾಲಸ್ವಾಮಿಯವರು, "ಈ ಸೂಪರ್ ಡೀಲಕ್ಸ್ ಮತಗಟ್ಟೆಗಳಲ್ಲಿ ಪ್ಯಾರಿಸ್‌ನಿಂದ ಆಮದು ಮಾಡಿಕೊಂಡಿರುವ ನೇಯ್ಲ್ ಪಾಲಿಶ್‌ ಅನ್ನು ಉಗುರುಗಳಿಗೆ ಹಚ್ಚಲಾಗುವುದು. ಬೆರಳ ಮೇಲೆ ಕಪ್ಪು ಇಂಕಿನ ಅಸಹ್ಯಕರ ಕಲೆಯ ಭಯ ಇಲ್ಲಿಲ್ಲ. ಪ್ರಸಾದ್ ಬಿದ್ದಪ್ಪ ಅಂತಹ ಗಣ್ಯರು ಸಹ ಯಾವುದೇ ಹಿಂಜರಿಕೆ ಇಲ್ಲದೆ ಇನ್ನು ಮುಂದೆ ಇಲ್ಲಿ ಮತ ಚಲಾಯಿಸಬಹುದು" ಎಂದರು.

Labels: ,