ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, April 03, 2008

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!

ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.

"ಕರ್ನಾಟಕದಲ್ಲಿ ತಮಿಳು ಟಿ.ವಿ.ಚಾನಲ್ ಮತ್ತು ಚಲನಚಿತ್ರಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ, ಕನ್ನಡ ಚಾನಲ್ಲುಗಳೂ ಇಲ್ಲ, ಕನ್ನಡ ಸಿನೆಮಾಗಳಂತೂ ರಿಲೀಸ್ ಆಗೋದೇ ಇಲ್ಲ. ಆದ್ದರಿಂದ ಮೈಸೂರು ಪಾಕನ್ನು ಬಹಿಷ್ಕರಿಸುವ ತುರ್ತು ನಮಗೆದುರಾಗಿದೆ" ಎಂದಿರುವ ನಾಡೋಡಿ ತಮಿಳ್ ಮಕ್ಕಳ್ ಸಂಗಂ ಅಧ್ಯಕ್ಷ ಗೌಂಡಮಿಣಿ ತಿಯಾಗರಾಜನ್ ಅವರು, "ವಸಾಹತುಷಾಹಿಯ ಪ್ರತೀಕವಾದ ಮೈಸೂರು ಪಾಕನ್ನು ಬಹಿಷ್ಕರಿಸಬೇಕು. ಮೈಸೂರು ಪಾಕ್ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ತಕ್ಷಣವೇ ನಿಲ್ಲಿಸಬೇಕು. ಇದು ಪ್ರತಿಯೊಬ್ಬ ತಮಿಳನ ಕರ್ತವ್ಯ" ಎಂದು ಕರೆ ನೀಡಿದ್ದಾರೆ.

ಪುರುಚ್ಚಿ ಪಾಕ್??: ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾರವರಂತೆ, ಮೈಸೂರು ಪಾಕ್ ಸಹ ಮದ್ರಾಸಿಗಳ ಮನದಲ್ಲಿ ಮನೆ ಮಾಡಿದ್ದು, ಅದರ ಬಹಿಷ್ಕಾರದ ಬಗೆಗೆ ಅಲ್ಲಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆಡ್ಯಾರ್ ಆನಂತ ಭವನ್ ಒಳಗೊಂಡಂತೆ ಹಲವಾರು ಸಿಹಿ ಅಂಗಡಿಗಳ ಮಾಲೀಕರು, ಮೈಸೂರು ಪಾಕನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಬದಲು ಅದಕ್ಕೆ ಬೇರೊಂದು ಹೆಸರಿಟ್ಟರೆ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರಕವೆಂಬಂತೆ, ತಮಿಳು ನಾಡಿನ ವಿಧಾನ ಸೌಧದ ಕ್ಯಾಂಟೀನಿನಲ್ಲಿ ಮೈಸೂರು ಪಾಕನ್ನು "ಪುರುಚ್ಚಿ ಪಾಕ್" (ಕ್ರಾಂತಿಕಾರಿ ಪಾಕು) ಎಂಬ ಹೆಸರಿನಲ್ಲಿ ಮಾರುತ್ತಿರುವುದು ಕಂಡು ಬಂತು.
(P.T.Hi.)

Labels:

5 Comments:

Blogger Dr U B Pavanaja said...

ಹಾಗೆಯೇ ಕರ್ನಾಟಕ ಸಂಗೀತವನ್ನೂ ಬಹಿಷ್ಕರಿಸಬೇಕೆಂದು ಕರೆನೀಡಿದ್ದನ್ನು ಯಾಕೆ ಮರೆತಿರಿ?

ಕರ್ನಾಟಕ ಸಂಗೀತವನ್ನು ಬಹಿಷ್ಕರಿಸಬೇಕಾಗಿಲ್ಲ, ಬದಲಿಗೆ ಅದನ್ನು ತಮಿಳು ಸಂಗೀತ ಎಂದು ಕರೆಯಬೇಕು ಎಂದು ತೀರ್ಮಾನಿಸಿರುವುದಾಗಿ ನಂಬಲನರ್ಹ ಮೂಲಗಳಿಂದ ತಿಳಿದುಬಂದಿಲ್ಲ. ಹೇಗಿದ್ದರೂ ಕರ್ನಾಟಕ ಸಂಗೀತವು ಕರ್ನಾಟಕಕ್ಕಿಂತಲೂ ತಮಿಳುನಾಡಿಲ್ಲೇ ಹೆಚ್ಚು ಜನಪ್ರಿಯವಾಗಿದೆ, ಕರ್ನಾಟಕ ಸಂಗೀತದ ಬಹುತೇಕ ಘಟಾನುಘಟಿಗಳೂ ತಮಿಳುನಾಡಿನವರೇ ಆಗಿದ್ದಾರೆ -ಆದುದರಿಂದ ಅದನ್ನು ತಮಿಳು ಸಂಗೀತ ಎಂದೇ ಕರೆಯಬಹುದು ಎಂಬುದು ಅವರ ವಾದ. ಈ ಬಗ್ಗೆ ಮಜಾವಾಣಿ ಪತ್ರಿಕೆ ಇನ್ನೊಂದು ತನಿಖಾ ವರದಿ ಪ್ರಕಟಿಸಬಹುದು.

-ಪವನಜ

April 06, 2008 3:20 AM  
Anonymous Anonymous said...

"ಫ್ರೆಂಚ್ ಫ್ರಯ್ಸ್ " ಫ್ರೀಡಂ ಫ್ರಯ್ಸ್ ಆಗುವ ಕಾಲದಲ್ಲಿ ಮೈಸೂರ್ ಪಾಕ್ ಪುರುಚ್ಚಿ ಪಾಕ್ ಯಾಕೆ ಆಗಬಾರದು. ಬಹುಶಃ ಈ ಸುದ್ದಿ ಕೇಳಿದರೆ ಬುಶ್ ಗೆ ಸಂತೋಷ ಆಗಬಹುದು

April 08, 2008 1:27 AM  
Blogger Edgar Dantas said...

hey nice blog nice post really enjoyed goin through it. really nice one keep it up
with regards
edgar dantas
www.gadgetworld.co.in

April 09, 2008 1:27 AM  
Blogger Raghunath said...

karnaTaka emba padavannE dwEshisuva gumpomdu karnaaTakadalli tamma bamDavaaLavannu toDagisi karnaaTakada janarige kelasa odagisuttiruva tamiLaramoorKatanakke dhikkaara kooguttiruvudu nimma gamanakke bamdahaagilla.Heege tamiLaru tamma bamDavaaLavannu bemgaLooru,maisoorina suttamutta saiTu, jameenugaLannu koLLalu Karchu maaDuttiddare, tamiLnaaDu pradEshada baDa raitaru kammibeleyallE tamma jamInugaLannu maarabEkaada paristhithi bamdiruvudu shOchanIya samgatiyaagide

April 11, 2008 6:41 AM  
Blogger v.v. said...

ಪವನಜರಿಗೆ ನಮಸ್ಕಾರ.

ಹಿಂದೊಮ್ಮೆ, ಶಾಸ್ತ್ರಿಯ ಭಾಷೆಯ ವಿಚಾರದಲ್ಲಿ ನಮ್ಮ ಪತ್ರಿಕೆ ಹಾದಿ ತಪ್ಪಿದ್ದಾಗ ಎಚ್ಚರಿಸಿದ್ದಿರಿ.
ಈಗ, ಮೈಸೂರು ಪಾಕ್ ಒಂದೇ ಅಲ್ಲ, ಕರ್ನಾಟಕ ಸಂಗೀತವೂ ಬಹಿಷ್ಕಾರ ಯೋಗ್ಯ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದೀರಿ.
ಇಡೀ ಒಂದು ಸಂಚಿಕೆಯನ್ನು ತಮಿಳಿನಲ್ಲಿ ಪ್ರಕಟಿಸಿರುವ ಏಕೈಕ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಯಿರುವ ಮಜಾವಾಣಿಯನ್ನು ಯಾವುದಾದರೂ ಒಂದು ಕಳಗಂನವರು ಓದಬಹುದೇನೋ ಎಂಬ ಆಸೆ ನಮ್ಮದು.

ಅನಾನಿಮೌಸರಿಗೆ ನಮಸ್ಕಾರ.

ಬುಶ್‌ಗೆ ಸಂತೋಷ ತರುವುದು, ಜಗತ್ತಿನ ಅತ್ಯಂತ ನಿರ್ಜಾಣ ಪತ್ರಿಕೆಯಾದ ನಮ್ಮ ಪತ್ರಿಕೆಯ ಮೂಲ ಧ್ಯೇಯಗಳಲ್ಲಿ ಒಂದು.

ಎಡ್ಗರ್‌ಗೆ ನಮಸ್ಕಾರ.
ನಿಮ್ಮ ಮೆಚ್ಚುಗೆಗೆ ನಮ್ಮ ಧನ್ಯವಾದ.

ರಘುನಾಥ್‌ರವರಿಗೆ ನಮಸ್ಕಾರ.
ನೀವು ಬರೆದಿರುವ ವಿಚಾರದ ಕುರಿತು ನಮ್ಮ ಪತ್ರಿಕೆಯ ಜಾಗತಿಕ ಮುಖ್ಯ ಕಾರ್ಯಲಯದಲ್ಲಿ ವಿಷದವಾದ ಚರ್ಚೆಯಾಯಿತು. ನಾವೀಗಾಗಲೇ ಫುಲ್ಲೀ ಕನ್‌ಫ್ಯೂಸ್ಡ್ ಆಗಿರುವುದರಿಂದ, ನಿಮ್ಮ ಕಾಮೆಂಟ್ ನಮ್ಮನ್ನು ಮತ್ತಷ್ಟು ಕನ್‌ಫ್ಯೂಸ್ ಮಾಡಲು ವಿಫಲವಾಯಿತೆಂದು ಈ ಮೂಲಕ ತಿಳಿಸುತ್ತೇವೆ.

ಧನ್ಯವಾದಗಳೊಂದಿಗೆ,

ವಿ.ವಿ.

ಪ್ರಧಾನ ಉಪ ಕಾರ್ಯದರ್ಶಿ,
ತಟಸ್ತ ಸಮಾನ ಮನಸ್ಕರ ಸೆಲ್,
ಮಜಾವಾದಿ ಪಕ್ಷ (ಗ್ರೌಚೋ ಮಾರ್ಕ್ಸ್ ಬಣ)

May 07, 2008 2:09 PM  

Post a Comment

<< Home