ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, April 03, 2008

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!

ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.

"ಕರ್ನಾಟಕದಲ್ಲಿ ತಮಿಳು ಟಿ.ವಿ.ಚಾನಲ್ ಮತ್ತು ಚಲನಚಿತ್ರಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ, ಕನ್ನಡ ಚಾನಲ್ಲುಗಳೂ ಇಲ್ಲ, ಕನ್ನಡ ಸಿನೆಮಾಗಳಂತೂ ರಿಲೀಸ್ ಆಗೋದೇ ಇಲ್ಲ. ಆದ್ದರಿಂದ ಮೈಸೂರು ಪಾಕನ್ನು ಬಹಿಷ್ಕರಿಸುವ ತುರ್ತು ನಮಗೆದುರಾಗಿದೆ" ಎಂದಿರುವ ನಾಡೋಡಿ ತಮಿಳ್ ಮಕ್ಕಳ್ ಸಂಗಂ ಅಧ್ಯಕ್ಷ ಗೌಂಡಮಿಣಿ ತಿಯಾಗರಾಜನ್ ಅವರು, "ವಸಾಹತುಷಾಹಿಯ ಪ್ರತೀಕವಾದ ಮೈಸೂರು ಪಾಕನ್ನು ಬಹಿಷ್ಕರಿಸಬೇಕು. ಮೈಸೂರು ಪಾಕ್ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ತಕ್ಷಣವೇ ನಿಲ್ಲಿಸಬೇಕು. ಇದು ಪ್ರತಿಯೊಬ್ಬ ತಮಿಳನ ಕರ್ತವ್ಯ" ಎಂದು ಕರೆ ನೀಡಿದ್ದಾರೆ.

ಪುರುಚ್ಚಿ ಪಾಕ್??: ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾರವರಂತೆ, ಮೈಸೂರು ಪಾಕ್ ಸಹ ಮದ್ರಾಸಿಗಳ ಮನದಲ್ಲಿ ಮನೆ ಮಾಡಿದ್ದು, ಅದರ ಬಹಿಷ್ಕಾರದ ಬಗೆಗೆ ಅಲ್ಲಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆಡ್ಯಾರ್ ಆನಂತ ಭವನ್ ಒಳಗೊಂಡಂತೆ ಹಲವಾರು ಸಿಹಿ ಅಂಗಡಿಗಳ ಮಾಲೀಕರು, ಮೈಸೂರು ಪಾಕನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಬದಲು ಅದಕ್ಕೆ ಬೇರೊಂದು ಹೆಸರಿಟ್ಟರೆ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರಕವೆಂಬಂತೆ, ತಮಿಳು ನಾಡಿನ ವಿಧಾನ ಸೌಧದ ಕ್ಯಾಂಟೀನಿನಲ್ಲಿ ಮೈಸೂರು ಪಾಕನ್ನು "ಪುರುಚ್ಚಿ ಪಾಕ್" (ಕ್ರಾಂತಿಕಾರಿ ಪಾಕು) ಎಂಬ ಹೆಸರಿನಲ್ಲಿ ಮಾರುತ್ತಿರುವುದು ಕಂಡು ಬಂತು.
(P.T.Hi.)

Labels: