ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, March 12, 2008

ಮಜಾವಾಣಿ: ರಾಜಕೀಯ ಸುದ್ದಿ

"ಯಡ್ಡಿಯಿಂದ ಅಂತಹ ತೊಂದರೆ ಏನೂ ಇಲ್ಲ" - ವಿ.ಸೌ. ನೌಕರ

ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.

ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ನಂತರವೂ ಯೆಡ್ಯೂರಪ್ಪನವರು ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ನೇತಾರರ ಕೆಂಗಣ್ಣಿಗೆ ಕಾರಣವಾಗಿರುವುದು ನಿಜವಾದರೂ, ಕಛೇರಿಯಲ್ಲಿ ಕೆಲಸ ಮಾಡುವವರಿಗಂತೂ ಯಾವುದೇ ರೀತಿಯ ಅಭ್ಯಂತರವಿದ್ದಂತಿಲ್ಲ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಗುಮಾಸ್ತೆ ಪರಮೇಶಪ್ಪ, ಯೆಡ್ಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಕಛೇರಿಗೆ ಬರುತ್ತಿರುವುದರಿಂದ ಮೊದ ಮೊದಲು ತಮಗೆ ಕಸಿವಿಸಿಯಾಯಿತೆಂದು ಒಪ್ಪಿಕೊಂಡರಾದರೂ, ಅದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಏನೂ ಆಗಿಲ್ಲ ಎಂದರು.

"ರಾಜೀನಾಮೆ ನೀಡಿದ ಮಾರನೆ ದಿನ ಅವರು ಕಛೇರಿಗೆ ಬಂದಾಗ, ಕನ್ನಡಕನೋ, ಕರ್ಚೀಫೋ ಮರೆತಿರಬಹುದು ಅದಕ್ಕೇ ಬಂದಿದ್ದಾರೆ ಅಂದು ಕೊಂಡೆ, ಆದರೆ ಅದರ ನೆಕ್ಸ್ಟ್ ಡೇ ಕೂಡಾ ಬಂದರು. ಅದರ ನೆಕ್ಸ್ಟ್ ಡೇ.. ಅದರ ನೆಕ್ಸ್ಟ್ ಡೇ.. ಹೀಗೆ ಪ್ರತಿ ದಿನ ತಪ್ಪದೇ ಬರ್ತಾ ಇದ್ದಾರೆ. ಮೊದ ಮೊದಲು ಕೊಂಚ ಕಸಿವಿಸಿ ಆಯ್ತು. ಆದರೆ, ಈಗ ಪೂರ್ತಿ ಅಭ್ಯಾಸ ಆಗಿ ಬಿಟ್ಟಿದೆ. ಪಾಪ, ಅವರು ಯಾರಿಗೂ ಏನೂ ತೊಂದರೆ ಕೊಡಲ್ಲ. ಅವರ ಪಾಡಿಗೆ ಅವರು ಬರ್ತಾರೆ, ಪ್ರತಿ ದಿನ ಸಿ.ಎಂ. ಚೇರ್ ಧೂಳು ಹೊಡೆದು, ಒರೆಸಿ, ಅದನ್ನು ಸವರುತ್ತಾ ನಿಲ್ಲುತ್ತಾರೆ" ಎಂದು ಪರಮೇಶಪ್ಪ ನುಡಿದರೆ, ಅದಕ್ಕೆ ದನಿಗೂಡಿಸಿದ ಅಟೆಂಡರ್ ರಾಮಣ್ಣ "'ಸಾರ್, ಚೇರ್‌ನ ನಾನು ಕ್ಲೀನ್ ಮಾಡ್ತೀನಿ ಬಿಡಿ. ನೀವು ಮನೆಗೆ ಹೋಗಿ ಆರಾಮ್ ತೊಗೊಳ್ಳಿ' ಅಂದೆ, ಆದ್ರೆ, ಆ ಸೀಟಿಗಾಗಿ ನೊಂದ ಜೀವ, ಪಾಪ, ಎಲ್ಲಿ ಕೇಳುತ್ತೆ? ಅವ್ರೇ ಒರೆಸಿ, ಕ್ಲೀನ್ ಮಾಡಿದ್ರೇನೇ ತೃಪ್ತಿ. ಒಂದು ಸಲ ಫೈಲುಗಳನ್ನು ಜೋಡಿಸಿಕೊಂಡು ಹೋಗ್ತಾ ಇರುವಾಗ ಅಡ್ಡ ಬಂದರು. ಫೈಲುಗಳೆಲ್ಲಾ ನೆಲಕ್ಕೆ ಬಿದ್ದವು. 'ಸಾರ್, ಸ್ವಲ್ಪ ಸೈಡ್‌ಗೆ ಹೋಗ್ತೀರಾ' ಅಂದೆ, ಅವತ್ತಿಂದ ಸೈಡಲ್ಲೇ ನಿಂತುಕೊಂಡು ಅವರ ಕೆಲಸ ಮಾಡಿಕೊಳ್ಳುತ್ತಾರೆ." ಎನ್ನುತ್ತಾರೆ.

(ಚಿತ್ರ ಕೃಪೆ: ಚುರುಮುರಿ)

Labels:

3 Comments:

Anonymous shaani said...

ಅಬ್ಬಾ, ಮೂರು ತಿಂಗಳು ಸುದ್ದಿಗಾಗಿ ಹುಡುಕಾಡಿ, ಹುಡುಕಾಡಿ... ನಮ್ಮನ್ನು ಕಾಡಿ.. ಕಾಡಿ..

ಈಗ್ಲಾದ್ರೂ ಪತ್ರೆ ಆದ್ರಲ್ಲ. ಸದ್ಯ

March 15, 2008 4:55 AM  
Anonymous ಟೀನಾ said...

ಸೀರಿಯಸ್ಲಿ,
ನೀವು ಸೀನಲ್ಲಿಲ್ಲದೆ ಬೇಜಾರಾಗಿಹೋಗಿತ್ತು. ಇರೋದೆ ಒಂದು ಟ್ಯಾಬ್ಲಾಯ್ಡ್ ಪತ್ರಿಕೆ - ಮಜಾವಾಣಿ. ಅದೂ ಹೀಗಾಗಿಹೋದರೆ? ಎನಿವೇ ಖುಶ್ಯಾಯ್ತು ಸ್ವಾಮಿ. ಇನ್ನು ಸೊಲ್ಪ ನಗ್ಬೋದು.
-ಟೀನಾ.

March 20, 2008 3:14 AM  
Blogger v.v. said...

ಶಾನಿ ಮತ್ತು ಟೀನಾ,

ದಯವಿಟ್ಟು ಕ್ಷಮಿಸಿ. ಅನಿವಾರ್ಯ ಕಾರಣಗಳಿಂದಾಗಿ ನಮ್ಮ ಪತ್ರಿಕೆಯ ಜಾಗತಿಕ ಮುಖ್ಯ ಕಛೇರಿಯಲ್ಲಿ ಸೋಂಬೇರಿತನ ಮನೆ ಮಾಡಿದ್ದು, ಪತ್ರಿಕೆಯ ಪ್ರಕಟಣೆಗೆ ಅಡಚಣೆ ಉಂಟಾಗಿದೆ. ನಿಮ್ಮ ಅಭಿಮಾನ ಈ ಸೋಂಬೇರಿತನವನ್ನು ಹೋಗಲಾಡಿಸಬಹುದೆಂಬ ನಂಬಿಕೆ ನಮ್ಮದು.

ವಂದನೆಗಳೊಂದಿಗೆ,

ವಿ.ವಿ.

March 31, 2008 12:51 PM  

Post a Comment

Links to this post:

Create a Link

<< Home