ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, March 31, 2008

ಮಜಾವಾಣಿ: ರಾಜಕೀಯ ಸುದ್ದಿ

ಎಸ್.ಎಂ.ಕೃಷ್ಣ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹ
ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.

ತಮ್ಮ ಬೇಡಿಕೆಯನ್ನು ಮಂಡಿಸಿದ ನಂತರ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಡಿ.ಕೆ.ಶಿ.ಯವರು, "ಜನರೇ ಇಲ್ಲದ ಎಂತೆಂತಹ ಸಣ್ಣ ಸಣ್ಣ ಹಳ್ಳಿಗಳಿಗೂ ಈಗ ಪ್ರತ್ಯೇಕ ಪೋಸ್ಟಲ್ ಕೋಡ್ ಇದೆ. ಹಾಗಿರುವಾಗ ಇಡೀ ಕರ್ನಾಟಕದ ಜನತೆಯನ್ನೇ ತಮ್ಮೆದೆಯಲ್ಲಿ ತುಂಬಿಸಿಕೊಂಡಿರುವ ಕೃಷ್ಣರವರ ವಿಶಾಲ ಹೃದಯಕ್ಕೆ ತನ್ನದೇ ಆದ ಪೋಸ್ಟಲ್ ಕೋಡ್ ಇಲ್ಲದಿರುವುದು ಖಂಡನೀಯ" ಎಂದರು.

Labels:

ಮಜಾವಾಣಿ: ತನಿಖಾ ವರದಿ

ತಮಿಳರ ಕಾವೇರಿ ಆಸೆಯ ಕಾರಣ ಪತ್ತೆ!

ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.

ಆದರೆ ಇಂದು ನಮ್ಮ ಪತ್ರಿಕೆಯ ಖ್ಯಾತ ತನಿಖಾ ವರದಿಗಾರ ಶ್ರೀನಿಧಿ ಹಂದೆಯವರು, ತಮ್ಮ ಸಚಿತ್ರ ವರದಿಯ ಮೂಲಕ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಈ ರಹಸ್ಯವನ್ನು ಭೇದಿಸಲು, ಮಹಾನ್ ಸಾಹಸದಿಂದ ಅತ್ಯಂತ ದುರ್ಗಮ ರಸ್ತೆಗಳಲ್ಲಿ ಪ್ರಯಾಣಿಸಿದ ನಮ್ಮ ವರದಿಗಾರರು ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯನ್ನು ತಲುಪಿದಾಗ, ಅಲ್ಲಿ, ಕಾವೇರಿಯ ಪವಿತ್ರ ತೀರ್ಥವನ್ನು "ಒರಿಜಿನಲ್ ಚಾಯ್ಸ್" ವಿಸ್ಕಿ ಬಾಟಲಿಗಳಲ್ಲಿ ದೊರಕುತ್ತಿರುವುದು ಪತ್ತೆಯಾಯಿತು. ಇದು ತಮಿಳು ನಾಡಿನ ಕೆಲ ರಾಜಕಾರಣಿಗಳನ್ನು ಕನ್‌ಫ್ಯೂಸ್ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ, ಕಾವೇರಿ ನದಿಯ ನೀರು ವಿಶೇಷವಾದ "ತೀರ್ಥ" ಸಮಾನವೆಂಬ ಭಾವನೆ ಈ ರಾಜಕಾರಣಿಗಳಲ್ಲಿ ಮನೆ ಮಾಡಿದ್ದು, ಅವರು ಕಾವೇರಿ ನೀರಿನ ವ್ಯಸನಕ್ಕೆ ಒಳಗಾಗಿದ್ದಾರೆಂಬ ವಿಚಾರ ಹೊರ ಬಿದ್ದಿದೆ.
[ಶ್ರೀನಿಧಿ ಹ೦ದೆಯವರು ನಮ್ಮ ಪತ್ರಿಕೆಯ ತನಿಖಾ ವರದಿಗಾರರು ಮಾತ್ರವಲ್ಲದೆ, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನೂ ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಚಿತ್ರಗಳ ಆಧಾರ ಸಹಿತ ಹಾರ್ಡ್ ಹಿಟ್ಟಿಂಗ್ ತನಿಖಾ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: ,

Wednesday, March 12, 2008

ಮಜಾವಾಣಿ: ರಾಜಕೀಯ ಸುದ್ದಿ

"ಯಡ್ಡಿಯಿಂದ ಅಂತಹ ತೊಂದರೆ ಏನೂ ಇಲ್ಲ" - ವಿ.ಸೌ. ನೌಕರ

ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.

ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ನಂತರವೂ ಯೆಡ್ಯೂರಪ್ಪನವರು ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ನೇತಾರರ ಕೆಂಗಣ್ಣಿಗೆ ಕಾರಣವಾಗಿರುವುದು ನಿಜವಾದರೂ, ಕಛೇರಿಯಲ್ಲಿ ಕೆಲಸ ಮಾಡುವವರಿಗಂತೂ ಯಾವುದೇ ರೀತಿಯ ಅಭ್ಯಂತರವಿದ್ದಂತಿಲ್ಲ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಗುಮಾಸ್ತೆ ಪರಮೇಶಪ್ಪ, ಯೆಡ್ಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಕಛೇರಿಗೆ ಬರುತ್ತಿರುವುದರಿಂದ ಮೊದ ಮೊದಲು ತಮಗೆ ಕಸಿವಿಸಿಯಾಯಿತೆಂದು ಒಪ್ಪಿಕೊಂಡರಾದರೂ, ಅದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಏನೂ ಆಗಿಲ್ಲ ಎಂದರು.

"ರಾಜೀನಾಮೆ ನೀಡಿದ ಮಾರನೆ ದಿನ ಅವರು ಕಛೇರಿಗೆ ಬಂದಾಗ, ಕನ್ನಡಕನೋ, ಕರ್ಚೀಫೋ ಮರೆತಿರಬಹುದು ಅದಕ್ಕೇ ಬಂದಿದ್ದಾರೆ ಅಂದು ಕೊಂಡೆ, ಆದರೆ ಅದರ ನೆಕ್ಸ್ಟ್ ಡೇ ಕೂಡಾ ಬಂದರು. ಅದರ ನೆಕ್ಸ್ಟ್ ಡೇ.. ಅದರ ನೆಕ್ಸ್ಟ್ ಡೇ.. ಹೀಗೆ ಪ್ರತಿ ದಿನ ತಪ್ಪದೇ ಬರ್ತಾ ಇದ್ದಾರೆ. ಮೊದ ಮೊದಲು ಕೊಂಚ ಕಸಿವಿಸಿ ಆಯ್ತು. ಆದರೆ, ಈಗ ಪೂರ್ತಿ ಅಭ್ಯಾಸ ಆಗಿ ಬಿಟ್ಟಿದೆ. ಪಾಪ, ಅವರು ಯಾರಿಗೂ ಏನೂ ತೊಂದರೆ ಕೊಡಲ್ಲ. ಅವರ ಪಾಡಿಗೆ ಅವರು ಬರ್ತಾರೆ, ಪ್ರತಿ ದಿನ ಸಿ.ಎಂ. ಚೇರ್ ಧೂಳು ಹೊಡೆದು, ಒರೆಸಿ, ಅದನ್ನು ಸವರುತ್ತಾ ನಿಲ್ಲುತ್ತಾರೆ" ಎಂದು ಪರಮೇಶಪ್ಪ ನುಡಿದರೆ, ಅದಕ್ಕೆ ದನಿಗೂಡಿಸಿದ ಅಟೆಂಡರ್ ರಾಮಣ್ಣ "'ಸಾರ್, ಚೇರ್‌ನ ನಾನು ಕ್ಲೀನ್ ಮಾಡ್ತೀನಿ ಬಿಡಿ. ನೀವು ಮನೆಗೆ ಹೋಗಿ ಆರಾಮ್ ತೊಗೊಳ್ಳಿ' ಅಂದೆ, ಆದ್ರೆ, ಆ ಸೀಟಿಗಾಗಿ ನೊಂದ ಜೀವ, ಪಾಪ, ಎಲ್ಲಿ ಕೇಳುತ್ತೆ? ಅವ್ರೇ ಒರೆಸಿ, ಕ್ಲೀನ್ ಮಾಡಿದ್ರೇನೇ ತೃಪ್ತಿ. ಒಂದು ಸಲ ಫೈಲುಗಳನ್ನು ಜೋಡಿಸಿಕೊಂಡು ಹೋಗ್ತಾ ಇರುವಾಗ ಅಡ್ಡ ಬಂದರು. ಫೈಲುಗಳೆಲ್ಲಾ ನೆಲಕ್ಕೆ ಬಿದ್ದವು. 'ಸಾರ್, ಸ್ವಲ್ಪ ಸೈಡ್‌ಗೆ ಹೋಗ್ತೀರಾ' ಅಂದೆ, ಅವತ್ತಿಂದ ಸೈಡಲ್ಲೇ ನಿಂತುಕೊಂಡು ಅವರ ಕೆಲಸ ಮಾಡಿಕೊಳ್ಳುತ್ತಾರೆ." ಎನ್ನುತ್ತಾರೆ.

(ಚಿತ್ರ ಕೃಪೆ: ಚುರುಮುರಿ)

Labels:

Tuesday, March 11, 2008

ಮಜಾವಾಣಿ: ಪಾಶವೀ ಪ್ರೇಮ

"ಎಂಜಲೆಲೆಯಲ್ಲಿ ಆರೋಗ್ಯಕರ ಆಹಾರ ಇರಲಿ" - ಮನೇಕಾ
ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.

ನವದೆಹಲಿಯಲ್ಲಿ ಏರ್ಪಡಿಸಿದ್ದ "ಪ್ರಾಣಿಗಳು ಮತ್ತು ಸಂವಿಧಾನ" ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಕೊಬ್ಬು ಮತ್ತು ಸಿಹಿಯ ಪದಾರ್ಥಗಳನ್ನು ತಿನ್ನ ಬೇಕೆಂದಿದ್ದರೆ, ಅದು ನಿಮ್ಮಿಷ್ಟ. ಆದರೆ, ಅವುಗಳನ್ನು ಎಂಜಲೆಲೆಯ ಜೊತೆಗೆ ಬೀದಿಗೆ ಬಿಸಾಡಿದಾಗ ಬೀದಿ ನಾಯಿಗಳ ಆರೋಗ್ಯ ಹದಗೆಡುವುದರಲ್ಲಿ ಸಂದೇಹವೇ ಇಲ್ಲ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆಯ ಪ್ರಕಾರ, ಬೀದಿ ನಾಯಿಗಳ ತೂಕ ಹೆಚ್ಚಾಗುತ್ತಿದ್ದು, ಅವು ರಕ್ತದೊತ್ತಡ ಮತ್ತು ಡಯಾಬಿಟಿಸ್ ನಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಜಿಲೇಬಿ, ಜಾಮೂನ್, ಬೋಂಡಾ ಬೇಕಿದ್ದರೆ ನೀವು ತಿನ್ನಿ, ಆದರೆ ಎಂಜಲೆಲೆಯಲ್ಲಿ ಮಾತ್ರ ಕೊಬ್ಬಿನ ಅಂಶ ಕಡಿಮೆ ಇರುವ, ಫೈಬರ್ ಹೆಚ್ಚಿರುವ ತಾಜಾ ಆಹಾರ ಪದಾರ್ಥಗಳನ್ನೇ ಬಿಸಾಡಿ" ಎಂದು ಕರೆಯಿತ್ತರು.
(ಪಿ.ಟಿ.ಹೈ.) (ಚಿತ್ರ ಕೃಪೆ: ಟ್ರಿಬ್ಯೂನ್)

Labels: