ಮಜಾವಾಣಿ: ರಾಷ್ಟ್ರೀಯ ವಾರ್ತೆ

ಅಮಿತಾಬ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಣೆ!
ನವ ದೆಹಲಿ, ಫೆಬ್. ೨೦: ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ಕ್ರೀಡೆ... ಈಗ ಈ ಪಟ್ಟಿಗೆ ರಾಷ್ಟ್ರೀಯ ಎತ್ತರ ಸಹ ಸೇರಿದೆ!
ನವ ದೆಹಲಿ, ಫೆಬ್. ೨೦: ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ಕ್ರೀಡೆ... ಈಗ ಈ ಪಟ್ಟಿಗೆ ರಾಷ್ಟ್ರೀಯ ಎತ್ತರ ಸಹ ಸೇರಿದೆ!
ಇಂದು ಸಂಜೆ ನವ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅವರು ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಿಸಿದರು. "ಬಚನ್ಜೀಯವರ ಎತ್ತರ ಇಡೀ ರಾಷ್ಟ್ರಕ್ಕೇ ಒಂದು ಮಾದರಿಯಾಗಿದ್ದು, ಭಾರತದಲ್ಲಿ ಬೆಳೆಯುತ್ತಿರುವ ಮಕ್ಕಳೆಲ್ಲರೂ ಈ ಎತ್ತರಕ್ಕೆ ಬೆಳೆಯುವಂತೆ ತಂದೆ-ತಾಯಿಯರು, ಶಿಕ್ಷಕ-ಶಿಕ್ಷಕಿಯರು ಮಾತ್ರವಲ್ಲ ಇಡೀ ಸಮಾಜವೇ ಪ್ರೋತ್ಸಾಹಿಸಬೇಕು" ಎಂದರು.
ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರೀಯ ಮಾದರಿಯನ್ನು ಗುರುತಿಸಿ ಆ ದಿಕ್ಕಿನೆಡೆಗೆ ಇಡೀ ಭಾರತೀಯ ಸಮಾಜವನ್ನು ಕೊಂಡೊಯ್ಯಲು ರಾಷ್ಟ್ರೀಯ ಮಾದರಿ ಆಯೋಗವನ್ನು ಈಗಾಗಲೇ ಕೇಂದ್ರ ಸರ್ಕಾರ ನಿಯೋಜಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಸ್ಪರ್ಧೆಯಲ್ಲಿ ಅಂಬಿ, ರಜನಿ? - ಸದ್ಯದಲ್ಲಿಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ "ರಾಷ್ಟ್ರೀಯ ನಡಿಗೆ"ಯನ್ನು ಘೋಷಿಸಲಿದ್ದು, ಮಂಡ್ಯದ ಗಂಡು ಅಂಬರೀಶ್ ಅವರ ನಡಿಗೆ ಸಹ ಕೇಂದ್ರ ರಾಷ್ಟ್ರೀಯ ಮಾದರಿ ಆಯೋಗದ ನಡಿಗೆ ಸಬ್ ಕಮಿಟಿ ತಯಾರಿಸಿರುವ ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಆದರೆ, ನವ ದೆಹಲಿಯ ಕೇಂದ್ರ ನಡಿಗೆ ವೀಕ್ಷಣಾಲಯದ ತಜ್ಞರ ಮಾತನ್ನು ನಂಬುವುದಾದರೆ, ರಾಷ್ಟ್ರೀಯ ನಡಿಗೆ ಮಾದರಿಗಾಗಿ ಅಂಬಿ ಮತ್ತು ದಕ್ಷಿಣ ಭಾರತದ ಖ್ಯಾತ ತಾರೆ ರಜನಿಕಾಂತ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದೊಂದು ಅಂತರರಾಜ್ಯ ವಿವಾದವಾಗುವ ಸಂಭವ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಒಂದು ರಾಜೀ ಸೂತ್ರದ ತಯಾರಿಯಲ್ಲಿದ್ದು ಅಂಬಿಯವರ ಎಡ ಹೆಜ್ಜೆ ಮತ್ತು ರಜನಿಕಾಂತ್ ಅವರ ಬಲ ಹೆಜ್ಜೆಯನ್ನು ಸೇರಿಸಿ "ರಾಷ್ಟ್ರೀಯ ನಡಿಗೆ" ಘೋಷಿಸುವ ಸಂಭವ ಸಹ ಇದೆ.


