ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, December 10, 2007

ಮಜಾವಾಣಿ: ರಾಜಕೀಯ ಸುದ್ದಿ

"ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸಹೋಗಲು ಸಿದ್ಧ" - ಯಡ್ಡಿ

ಶಿರಾಳ ಕೊಪ್ಪ, ಡಿಸೆಂಬರ್ ೧: ರಾಜ್ಯದ ಜನರ ಹಿತಾಸಕ್ತಿಗಾಗಿ ತಾವು ಮತ್ತೆ ಮತ್ತೆ ಮೋಸಹೋಗಲು ಸಿದ್ಧವಿರುವುದಾಗಿ ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ಘೋಷಿಸಿದ್ದಾರೆ.

ನಗರದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಮೋಸ ಹೋಗುವುದು ನನಗೆ ಹೊಸದೇನೂ ಅಲ್ಲ. ಚಿಕ್ಕಂದಿನಿಂದ ಅದರ ಅನುಭವವಿದೆ. ಶಾಲೆಯಲ್ಲಿದ್ದಾಗ, ಪೆಪ್ಪರ್ ಮಿಂಟ್ ಆಸೆ ತೋರಿಸಿ ನನ್ನಿಂದ ಎಷ್ಟೋ ಜನ ಬಳಪ, ಪೆನ್ಸಿಲ್ ತೆಗೆದುಕೊಳ್ಳುತ್ತಿದ್ದರು. ಅದೂ ಒಂದಲ್ಲ, ಹತ್ತಾರು ಸಾರಿ. ಈಗ ರಾಜ್ಯದ ಜನರ ಹಿತ ರಕ್ಷಣೆಗಾಗಿ ಮುಖ್ಯಮಂತ್ರಿಯ ಪದವಿಯ ಆಸೆ ತೋರಿಸಿದಲ್ಲಿ ಎಂತಹ ಮೋಸ, ವಿಶ್ವಾಸ ದ್ರೋಹಕ್ಕೆ ಒಳಗಾಗಲೂ ನಾನು ಸಿದ್ಧ" ಎಂದರು.

ವಿಧಾನ ಸಭಾ ಚುನಾವಣೆಯ ನಂತರ ಅಗತ್ಯವಾದಲ್ಲಿ ಮತ್ತೊಮ್ಮೆ ವಿಶ್ವಾಸ ದ್ರೋಹಕ್ಕೆ ಒಳಗಾಗಲು ಬಿ.ಜೆ.ಪಿ. ಪೂರ್ಣ ಸಿದ್ಧತೆಯನ್ನು ನಡೆಸಿದೆ ಎನ್ನಲಾಗಿದ್ದು, ಅದರಿಂದ ದೊರಕಬಹುದಾದ ಅನುಕಂಪದ ಅಲೆಯ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.
(ಮಜಾವಾಣಿ ಬ್ಯೂರೋ ವರದಿ)

Labels: