ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, November 21, 2007

ಮಜಾವಾಣಿ: ಸಂಪಾದಕೀಯ

"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!
ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ!

ಆರು ಮಂದಿ ಹೈಸ್ಕೂಲು ಹುಡುಗಿಯರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಫಲದ ಬೆಲೆಯನ್ನು ಕಂಡುಕೊಳ್ಳುತ್ತಿದ್ದಾರೆ. ಅವರನ್ನು ಸ್ಕೂಲಿನಿಂದ ಹೊರಗಿಡಲಾಗಿದೆ. ಶಾಲೆಯ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಅವರನ್ನು ದೂರವಿಡಲಾಗಿದೆ. ಇದರಿಂದ ಅವರ ಅಂತಿಮ ಅಂಕಿಪಟ್ಟಿಯ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಸಹ ಇದೆ. ಇಷ್ಟೆಲ್ಲಾ ಶಿಕ್ಷೆಗೆ ಕಾರಣ: ಇಂಡಿಯನ್ಸ್ ಅದ್ವಿತೀಯರೆಂದು ಬಿಡಿ ಬಿಡಿಸಿ ಪ್ರಕಟಿಸಿದ್ದು!

ಇದೆಂತಹ ಹುಚ್ಚುತನ ಎಂದು ನಿಮಗನಿಸಿದರೆ, ಅದು ನಿಮ್ಮೊಬ್ಬರ ಅನಿಸಿಕೆಯಲ್ಲ. ಆ ಆರು ಹುಡುಗಿಯರಲ್ಲಿ ಒಬ್ಬಳು ಕೆಚ್ಚೆದೆಯಿಂದ ಸಾರಿದ್ದನ್ನು, ನೀವು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೀರಿ, ಅಷ್ಟೇ. ಅಷ್ಟೆಲ್ಲಾ ಶಿಕ್ಷೆಗೊಳಗಾದರೂ, ಎದೆಗುಂದದ ಈ ಧೀಮಂತ ಹುಡುಗಿ ಯಾವುದೇ ಮುಲಾಜಿಲ್ಲದೆ ನುಡಿಯುತ್ತಾಳೆ: ಇದು "ridiculous".

"ಇಂಡಿಯನ್ಸ್ ನಂ ೧" ಎಂಬ ಜನಜನಿತವಾದ ಸತ್ಯವನ್ನು ಬಿಡಿಬಿಡಿಸಿ ಪ್ರಕಟಿಸುವುದು ತಪ್ಪೆನ್ನುವ ಅಧಿಕಾರಶಾಹಿಯ ದಬ್ಬಾಳಿಕೆಯನ್ನು ಧೀರ ಬಾಲಕಿಯೊಬ್ಬಳು ದಿಟ್ಟತನದಿಂದ "ರಿಡಿಕ್ಯುಲಸ್" ಎನ್ನುತ್ತಿದ್ದರೆ, ಆ ಬಾಲಕಿಯರ ತಂದೆ ತಾಯಿಯರು ಮಾತ್ರ ತುಟಿ-ಪಿಟಿಕ್ ಎನ್ನುತ್ತಿಲ್ಲ. ಈ ಪ್ರಸಂಗದ ಕುರಿತು ಪ್ರಕಟವಾಗಿರುವ ವರದಿಯೊಂದನ್ನು ಓದಿದರೆ, ಆ ಧೀರ ಬಾಲಕಿಯ ತಂದೆಯನ್ನು ಬಿಟ್ಟರೆ, ಇತರ ಪೋಷಕರಾರೂ ಮಾತನಾಡಿದಂತಿಲ್ಲ. ಆ ಬಾಲಕಿಯ ತಂದೆ ಸಹ, ಅಧಿಕಾರಶಾಹಿಯ ವರ್ತನೆಯನ್ನು "ಹುಚ್ಚುತನ" ಎನ್ನುವುದಿಲ್ಲ, ಬದಲಿಗೆ, ಶಿಕ್ಷೆಯನ್ನು "ಅನ್ಯಾಯ" ಎಂದಷ್ಟೇ ಹೇಳುತ್ತಾರೆ. ಅದಕ್ಕಿಂತ ಮುಖ್ಯವಾಗಿ, ಅವರಿಗೆ ಬೇಕಿರುವುದು ತಮ್ಮ ಪ್ರಶ್ನೆಗೆ ಉತ್ತರವಷ್ಟೇ. ಪ್ರಶ್ನೆಯಾದರೂ ಏನು? "ಶಾಲಾಧಿಕಾರಿಗಳು ಈ ಬಾಲಕಿಯರನ್ನು ಶಾಲಾ ಶಿಕ್ಷಣದಿಂದ ದೂರವಿರಿಸಿರುವುದು ಏಕೆ?"

ಭಾರತೀಯ ಮಾಧ್ಯಮ ಮತ್ತು ಸರ್ಕಾರದ ನಿರ್ಲಕ್ಷ್ಯ

ನಿಮ್ಮ ಪ್ರಕಾರ ಅಧಿಕಾರಶಾಹಿಯ ಈ ದುರ್ವರ್ತನೆ "ಹುಚ್ಚುತನ". ಆ ಧೀರ ಬಾಲಕಿಯ ಪ್ರಕಾರ ಅದು "ರಿಡಿಕ್ಯುಲಸ್". ಆಕೆಯ ತಂದೆಯ ಪ್ರಕಾರ, "ಅನ್ಯಾಯ". ಅದೂ ಅಲ್ಲದೇ, ಸರ್ವರನ್ನೂ ಕಾಡುತ್ತಿರುವ ಪ್ರಶ್ನೆ ಬೇರೇ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ಸುದ್ದಿ ಮಾಧ್ಯಮಗಳಾಗಲೀ, ಸರ್ಕಾರವಾಗಲೀ ಈ ಬಾಲಕಿಯರ ದಾರುಣ ಪರಿಸ್ಥಿತಿಯ ಬಗೆಗೆ ಕೊಂಚವಾದರೂ ಕಾಳಜಿ ತೋರಿಸಿಲ್ಲ. ಭಾರತೀಯರ ಅದ್ವಿತೀಯ ಸಾಧನೆಗಳ ಬಗೆಗೆ, ರಾಷ್ಟ್ರಾಭಿಮಾನದ ಬಗೆಗೆ ರೀಮುಗಟ್ಟಲೆ ಬರೆಯುವ ಪತ್ರಿಕೆಗಳು, "ಇಂಡಿಯನ್ಸ್ ನಂ. ೧" ಎಂದು ಸಂಕೋಚವಿಲ್ಲದೇ ಸಾರಿದ ಈ ಸಾಹಸಿ ಬಾಲಕಿಯರ ಪರವಾಗಿ ಒಂದಾದರೂ ಸಂಪಾದಕೀಯವನ್ನು ಬರೆದಿಲ್ಲ, ಅಧಿಕಾರಶಾಹಿಯ ದೌರ್ಜನ್ಯವನ್ನು ಖಂಡಿಸುವ ಒಂದಾದರೂ ಕಾಲಂ ಪ್ರಕಟಿಸಿಲ್ಲ. ಇಂತಹ ನರರಹಿತ ನಿರಭಿಮಾನಿ ಪತ್ರಿಕೆಗಳಿಗೆ ಧಿಕ್ಕಾರವಿರಲಿ.

ಭಾರತೀಯ ಸುದ್ದಿ ಮಾಧ್ಯಮಗಳು, ಈ ಪ್ರಸಂಗದ ಕುರಿತು ದಿವ್ಯ ನಿರ್ಲಕ್ಷ್ಯ ತೋರಿದರೆ, ನಮ್ಮ ಘನ ಸರ್ಕಾರಕ್ಕೆ ಈ ಪ್ರಸಂಗದ ಕುರಿತು ಅರಿವು ಸಹ ಇದ್ದಂತಿಲ್ಲ. ಈ ದಾರುಣ ಪ್ರಸಂಗದ ಕುರಿತು ಸರ್ಕಾರದ ಅಭಿಪ್ರಾಯವನ್ನು ತಿಳಿಯಲು ನಮ್ಮ ಪತ್ರಿಕೆಯ ಕಾರ್ಯಾಲಯದ ಹತ್ತಿರವಿರುವ ಸರ್ಕಾರಿ ಪ್ರತಿನಿಧಿಗಳೇ ಆದ, ಪಶುವೈದ್ಯ್ಕಕೀಯ ಅಧಿಕಾರಿಗಳನ್ನು ಸಂದರ್ಶಿಸಿದಾಗ ದೊರೆತಿದ್ದು: ತಬ್ಬಿಬ್ಬು ಮತ್ತು "ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ಜೊತೆಗೆ, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯ, ನಮ್ಮದು ರಾಜ್ಯ ಸರ್ಕಾರದ ಇಲಾಖೆ" ಎನ್ನುವ ಹಾರಿಕೆಯ ಉತ್ತರ.

ರಾಷ್ಟ್ರಪ್ರೇಮದ ಕುರಿತು ಉದ್ದುದ್ದದ ಭಾಷಣಗಳನ್ನು ಬಿಗಿಯುವ ನಮ್ಮ ರಾಜಕಾರಣಿಗಳು, ಯಾವುದೇ ನಾಚಿಕೆ-ಸಂಕೋಚಗಳಿಲ್ಲದೆ, "Indians No. 1" ಎಂದು ಪ್ರಚುರ ಪಡಿಸಿ ಶಿಕ್ಷೆಗೊಳಗಾಗಿರುವ ಈ ಬಾಲಕಿಯರ ದಾರುಣ ಕಥಾನಕವನ್ನು ಇನ್ನಾದರೂ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸುವರೇ?

Labels: ,

4 Comments:

Anonymous ಟೀನಾ said...

ಸಂಪಾದಕ ಮಹಾಶಯರೆ,
ಸುದ್ದಿಯನ್ನು ಓದಿ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ನಮ್ಮ ಸುತ್ತಮುತ್ತಲಿನ ಕಾಲೇಜು ತರುಣರಿಗೆ ಹೀಗೇಕಾಯಿತು ಎಂದು ಅರ್ಥವೇ ಆಗುತ್ತಿಲ್ಲವಂತೆ. ’ನಮ್ಮ ಕಾಲೇಜಿನಲ್ಲಾಗಿದ್ದರೆ ಈ ಹೆಣ್ಣುಮಕ್ಕಳನ್ನು ನೋಡಲು ನೂಕುನುಗ್ಗಲು ನಡೆಯುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ತರುಣನೋರ್ವ ಕಾಲೇಜಿನ ಪ್ರಿನ್ಚಿಪಾಲರ ವಿರುದ್ಡ ಕೆಂಡಕಾರಿದ್ದಾನೆ. ದೇಶಪ್ರೇಮದ ಈ ವಿನೂತನ ಅಭಿವ್ಯಕ್ತಿಯ ವಿರುದ್ಡ ಸಂಚು ಹೂಡಿ ಆ ತರುಣಿಯರನ್ನು ಸಸ್ಪೆಂಡ್ ಮಾಡಿರುವವರಿಗೆ ನಮ್ಮ ಧಿಕ್ಕಾರವಿದೆ. ನಾವು ಮಜಾವಾಣಿಯೊಂದಿಗಿದ್ದೇವೆ.
- ಟೀನಾ

November 23, 2007 1:41 AM  
Blogger v.v. said...

ಟೀನಾರವರಿಗೆ,
ನಮಸ್ಕಾರ.

ಇದು ಇಂಡಿಯನ್ಸ್ ಬಗೆಗೆ ಅಭಿಮಾನವಿರುವವರೆಲ್ಲರೂ ಆಘಾತಕ್ಕೆ ಒಳಗಾಗುವ ವಿಷಯವೇ. ನಿಮ್ಮ ಸುತ್ತಮುತ್ತಲಿನ ಕಾಲೇಜು ತರುಣರಿಗಿರುವ ಅಭಿಮಾನ ತಿಳಿದು ಬಹಳ ಸಂತೋಷವಾಯಿತು. ಇಂತಹ ತರುಣರಿರುವವರೆಗೆ, ಆ ಹೆಣ್ಣುಮಕ್ಕಳು ತಮ್ಮ ಅಭಿಪ್ರಾಯವನ್ನು ಯಾವುದೇ ಸಂಕೋಚವಿಲ್ಲದೇ ವ್ಯಕ್ತಪಡಿಸಬಹುದು.

November 23, 2007 3:07 PM  
Blogger chetana said...

nija. idakke pratikriye bEkittu. haaganta sarkaara, patrikegale tOrabEku anta kAyutta kUruva vishayavalla idu. nAvU ee bagge mAtADabEku. neevu idannu prastaapisiddu khushi koTTitu.
Nimma kaaLajige aabhaari.

- Chetana Thirtahalli

November 24, 2007 10:49 PM  
Blogger v.v. said...

ಚೇತನ ತೀರ್ಥಹಳ್ಳಿಯವರಿಗೆ ನಮಸ್ಕಾರ.

ನಿಮ್ಮ ಆಭಾರಿ ನಮಗೆ ಭಾರೀ ಸಂತಸ ತಂದಿದೆ.
ಸರ್ಕಾರ ಮಾಡದ್ದನ್ನು ನಮ್ಮ ಪತ್ರಿಕೆ ಮಾಡಿರುವುದನ್ನು ಗುರುತಿಸಿದ್ದೀರಿ.
ವಿಷಯ ತುರ್ತಾದಷ್ಟೂ ಮಾತನಾಡುತ್ತಾ ತುರ್ತನ್ನು ಪರಿಹರಿಸುವುದು ನಮ್ಮ ಪತ್ರಿಕೆಯ ಸಿದ್ಧಾಂತಗಳಲ್ಲಿ ಒಂದು. ಹೀಗಾಗಿ, ನೀವು "ಮಾತಾಡಬೇಕು" ಎಂದಿರುವುದು ಸರಿಯಾಗಿಯೇ ಇದೆ.

ಆದರೆ, ಈಗ ನಮ್ಮೆಲ್ಲರ ತಕ್ಷಣದ ಕರ್ತವ್ಯ ಮಜಾವಾಣಿಯನ್ನು ರಾಜ್ಯದ ರಾಷ್ಟ್ರಪತ್ರಿಕೆಯಾಗಿ ಘೋಷಿಸುವುದು!

ವಂದನೆಗಳೊಂದಿಗೆ,

ವಿ.ವಿ.

November 26, 2007 6:50 AM  

Post a Comment

<< Home