ಬಸ್ ಸಂಚಾರ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿ!
ಮಜಾವಾಣಿ ವರದಿಯ ಅಭೂತಪೂರ್ವ ಫಲಶೃತಿ!!ಶ್ರೀನಿಧಿ ಹಂದೆಕರಾವಳಿ, ನವೆಂಬರ್ ೧: ಮಜವಾಣಿ ಪತ್ರಿಕೆಯಲ್ಲಿ
ಪ್ರಕಟವಾದ ಪ್ರಚಂಡ ವರದಿಯ ಪರಿಣಾಮವಾಗಿ ಕರಾವಾಳಿ ಪ್ರದೇಶದಲ್ಲಿನ ಬಸ್ ಸಂಚಾರ ವ್ಯವಸ್ಥೆಯಲ್ಲಿ ಮಹಾನ್ ಕ್ರಾಂತಿ ಉಂಟಾಗಿರುವ ಅಭೂತಪೂರ್ವ ವರದಿ ಇಂದು ವರದಿಯಾಗಿದೆ.

ನಮ್ಮ ಪತ್ರಿಕೆಯ ಕರಾವಳಿ ವರದಿಗಾರ ಮತ್ತು ಬಸ್ ಪ್ರಯಾಣ ತಜ್ಞ ಶ್ರೀನಿಧಿ ಹಂದೆಯವರು ವಾಮ ಪಂಥೀಯ ಪ್ರಯಾಣಿಕರ ಬಗೆಗೆ ಬಲ ಪಂಥೀಯ ಬಸ್ ಮಾಲೀಕರು ತೋರುತ್ತಿದ್ದ ಅನಾದರ ಮತ್ತು ಮಲತಾಯಿ ಧೋರಣೆಯನ್ನು ತಮ್ಮ ತನಿಖಾ ವರದಿಯಲ್ಲಿ ಚಿತ್ರ ಸಹಿತವಾಗಿ ಬಯಲಿಗೆಳೆದಿದ್ದರು. ಆ ವರದಿಯ ಫಲಶೃತಿಯ ಪರಿಣಾಮವಾಗಿ, ಕೆಲವೇ ತಿಂಗಳ ಹಿಂದೆ ಕೇವಲ ಕೋಮುವಾದಿ, ಬಂಡವಾಳಶಾಹಿ, ವಸಾಹತುಶಾಹಿ ಬಲಪಂಥೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದ್ದ ಸೌಲಭ್ಯ ಇಂದು ಬಸ್ಸಿನಲ್ಲಿ ಎಡ ಪಕ್ಕದಲ್ಲಿ ಕೂರುವ ಅಹಿಂಸಾವಾದಿ, ಬಡ ಬುದ್ಧಿಜೀವಿ ವರ್ಗಗಳಿಗೂ ಲಭ್ಯವಾಗಿದೆ. ಬಸ್ ಪ್ರಯಾಣದಂತಹ ದ್ವಿಪಂಥೀಯ ವ್ಯವಸ್ಥೆಯಲ್ಲಿಯೂ ಒಂದು ವರ್ಗದ ಪ್ರಯಾಣಿಕರ ಆಸೆ, ಆಕಾಂಕ್ಷೆಗಳಿಗೆ ತಣ್ಣೀರೆರೆಯುತ್ತಿದ್ದ ಬಂಡವಾಳಶಾಹಿ ಬಸ್ ಮಾಲೀಕರ ಬಲಪಂಥೀಯ ಹುನ್ನಾರವನ್ನು ಬಯಲಿಗೆಳೆದ ಹಂದೆಯವರ ಲೇಖನವನ್ನು ಪ್ರಕಟಿಸುವ ಮೂಲಕ ಮಜಾವಾಣಿ ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ನಿರ್ಭೀತವಾಗಿ ಎತ್ತಿಹಿಡಿದಿದೆ; ಬಸ್ ಮಾಲಿಕರ ಒಡೆತನದಲ್ಲಿ ನಡೆಯುತ್ತಿದ್ದ ಯಾವುದೇ ಪತ್ರಿಕೆಯೂ ಮಾಡದ ಸಾಧನೆಯನ್ನು ಮಾಡಿದೆ.
ಕೇವಲ ಕೆಲವೇ ತಿಂಗಳ ಹಿಂದೆ, ಕರಾವಳಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳಲ್ಲಿ, ಒಂದು ಮಾತ್ರ ಟಿ.ವಿ. ಇರುತ್ತಿದ್ದು ಬಸ್ಸಿನ ಎಡಭಾಗದಲ್ಲಿ ಕೂರುವ ಪ್ರಯಾಣಿಕರು ನೋಡಲಾಗದ ಯಾತನೆಯನ್ನು ಅನುಭವಿಸುತ್ತಿದ್ದರು. ಈ ಬಲಪಂಥೀಯ ವ್ಯವಸ್ಥೆಯ ಕೊರತೆಯನ್ನು ಸಚಿತ್ರವಾಗಿ ಹೊರಗೆಡವಿದ್ದ ಮಜಾವಾಣಿ ಲೇಖನದಲ್ಲಿ, ಸ್ಟ್ಯಾಂಡಿಂಗ್ ಸೀಟುಗಳಿದ್ದಾಗ ಎಡಭಾಗದ ಪ್ರಯಾಣಿಕರು ಅನುಭಸುತ್ತಿದ್ದ ದಯನೀಯ ಸ್ಥಿತಿಯನ್ನು ವಿಷದವಾಗಿ ವಿವರಿಸಲಾಗಿದ್ದು, ಬಸ್ಸಿನ "ಎಡಭಾಗದಲ್ಲೂ ಟಿ.ವಿ.ಯನ್ನು ಅಳವಡಿಸಬೇಕು" ಎಂದು ಆಗ್ರಹಿಸಲಾಗಿತ್ತು.
ಆ ವರದಿಯ ಪರಿಣಾಮವಾಗಿ, ಇಂದು ಕರಾವಳಿಯಲ್ಲಿ ಸಂಚರಿಸುವ ಹಲವಾರು ಬಸ್ಸುಗಳಲ್ಲಿ ಎರಡೆರಡು ಟಿ.ವಿ.ಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.
ಕೆಲಸ ಮಾಡದ ಮೂರ್ಖರ ಪೆಟ್ಟಿಗೆಗಳು: ಎರಡೆರಡು ಟಿ.ವಿ.ಗಳನ್ನು ಅಳವಡಿಸಿದ್ದರೂ, ಅವು ಕೆಲವೊಮ್ಮೆ ಕೆಲಸ ಮಾಡದಿರುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದ್ದು, "ಮಜಾವಾಣಿ ವರದಿಯಲ್ಲಿ ಎರಡೆರಡು ಟಿ.ವಿ. ಅಳವಡಿಸಬೇಕೆಂದಿತ್ತೇ ಹೊರತು, ಅವು ಕೆಲಸ ಮಾಡಬೇಕು ಎಂದೇನೂ ಇರಲಿಲ್ಲ" ಎಂದು ಬಸ್ ಮಾಲೀಕರು ಆರ್.ಟಿ.ಓ. ಅಧಿಕಾರಿಗಳಿಗೆ ಬರೆದಿರುವ ಗುಪ್ತ ಪತ್ರದಲ್ಲಿ ತಮ್ಮ ಧೋರಣೆಯನ್ನು ಬಹಿರಂಗ ಪಡಿಸಿರುವ ವಿಷಯವೂ ಸಹ ಬೆಳಕಿಗೆ ಬಂದಿದೆ.
ಚಾಲಕರ ಅಸಮಾಧಾನ: ಈ ಮಧ್ಯೆ, ಬಸ್ ಚಾಲಕರು ಟಿ.ವಿ. ಇಟ್ಟಿರುವ ಜಾಗಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಟಿ.ವಿ.ಗಳನ್ನು ಚಾಲಕರ ಬೆನ್ನ ಹಿಂದೆ ಪ್ರತಿಷ್ಠಾಪಿಸಿರುವ ಬಸ್ ಮಾಲೀಕರ ವ್ಯವಸ್ಥೆಯನ್ನು "ಚಾಲಕರ ಬೆನ್ನ ಹಿಂದೆ ಚೂರಿ ಹಾಕುವ...ಅಲ್ಲಲ್ಲ.. ಟಿ.ವಿ. ತೋರಿಸುವ ಬಂಡವಾಳಶಾಹಿ ಹುನ್ನಾರ" ಎಂದು ಈ ಚಾಲಕರು ದೂರುತ್ತಿದ್ದಾರೆ.
ಬೆನ್ನ ಹಿಂದಿನ ಬದಲು, ಚಾಲಕನ ಮುಂದೆ ಟಿ.ವಿ. ಸ್ಥಾಪಿಸಿದ್ದರೆ, ಬಸ್ ಚಾಲಕರು ನಿದ್ರಿಸುತ್ತಾ ಬಸ್ ಚಲಾಯಿಸುವ ಬದಲು ಗಮ್ಮತ್ತಿನಿಂದ ಟಿ.ವಿ. ನೋಡುತ್ತಾ ಚಲಾಯಿಸಬಹುದಿತ್ತು. ಈ ಚಾಲಕ ವಿರೋಧಿ ಧೋರಣೆಯನ್ನು ಬಸ್ ಮಾಲೀಕರು ತಕ್ಷಣವೇ ಸರಿಪಡಿಸದಿದ್ದರೆ, ಬಸ್ ಚಾಲಕರು ಇಂಟರ್ವಲ್ನಲ್ಲಿ ಮಾತ್ರ ಬಸ್ ಚಾಲಿಸುವ ಪರಿಸ್ಥಿತಿ ಉಂಟಾಗಬಹುದೆಂದು ಸಂಚಾರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಸ್ಸುಗಳಲ್ಲಿ ಎರಡೆರಡು ಟಿ.ವಿ.ಗಳನ್ನು ಅಳವಡಿಸಿರುವುದು ಉತ್ತಮ ಬೆಳವಣಿಗೆಯಾದರೂ, ಪ್ರಯಾಣಿಕರ ನೇತ್ರ ಶಿಕ್ಷಣಕ್ಕೆ ಪೂರಕವಾಗಿರುವ ಚಲನ ಚಿತ್ರಗಳನ್ನು ತೋರಿಸದಿರುವುದು ಕಳವಳಕ್ಕೆ ಕಾರಣವಾಗಿದೆ. ಉದಾಹರಣೆಗೆ, ಉಡುಪಿಯ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸುಮತಿ ನಾಡಿಗ್ ಪ್ರಕಾರ, ಇಂತಹ ಚಲನಚಿತ್ರಗಳಿಂದಾಗಿ ಅವರು ಕಾಲೇಜನ್ನು ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ. "ಕಳೆದ ಐದು ನಿಮಿಷಗಳಲ್ಲಿ ಹತ್ತು ಬಸ್ಸುಗಳು ಮಂಗಳೂರಿಗೆ ಹೋದವು. ಆದರೆ ಒಂದರಲ್ಲೂ ನನಗೆ ಬೇಕಿದ್ದ ಸಲ್ಮಾನ್ ಖಾನ್ ಫಿಲಂ ಹಾಕಿರಲಿಲ್ಲ. ಹೀಗಾದರೆ, ನಾನು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪುವುದಾದರೂ ಹೇಗೆ?!" ಎನ್ನುತ್ತಾರೆ ಅವರು.
ಹಿಂದುಳಿದವರನ್ನು ಕೇಳುವವರು ಯಾರು? ಇತ್ತ ಸುಮತಿ ನಾಡಿಗರಂತಹ ಮುಂದಿರುವ ವರ್ಗದ ಜನರು ಇದೇ ನಟನ ಚಲನಚಿತ್ರ ಬೇಕೆಂದು ಕೇಳುತ್ತಿದ್ದರೆ, ಅತ್ತ ಹಿಂದುಳಿದವರ ಆಕ್ರಂದನ ಯಾರಿಗೂ ಕೇಳಿಸಿದಂತಿಲ್ಲ. ಬಲಪಂಥೀಯ ಬಸ್ ಮಾಲೀಕರು, ಎಂದಿನಂತೆ ಹಿಂದುಳಿದವರ ಅವಶ್ಯಕತೆಗಳ ಬಗೆಗೆ ತೋರುತ್ತಿರುವುದು ಕೇವಲ ದಿವ್ಯ ನಿರ್ಲಕ್ಷ್ಯ ಮಾತ್ರ. ಇಲ್ಲದಿದ್ದಲ್ಲಿ, ಎರಡೂ ಟಿ.ವಿ.ಗಳನ್ನು ಬಸ್ಸಿನ ಮುಂಭಾಗದಲ್ಲಿಯೇ ಅಳವಡಿಸುವ ಅವಶ್ಯಕತೆಯಾದರೂ ಏನಿತ್ತು? ನಮ್ಮ ವರದಿಗಾರರ ಪ್ರಕಾರ, ಬಸ್ ಸಂಚಾರ ರಂಗದಲ್ಲಿ ಮತ್ತೊಂದು ಕ್ರಾಂತಿಯಾಗಬೇಕಿದ್ದು ಮತ್ತಿನ್ನೆರಡು ಟಿ.ವಿಗಳನ್ನು ಹಿಂದಿನ ಸೀಟಿನವರಿಗಾಗಿ ಅಳವಡಿಸಬೇಕಾಗಿದೆ.
ಈ ಮಧ್ಯೆ ಕುಂದಾಪುರ ಮಂಗಳೂರು ಮಾರ್ಗದ ರಾ. ಹೇ. ೧೭ ಸರ್ವಕಾಲಿಕ ಕಳಪೆ ಸ್ಥಿತಿ ತಲುಪಿದ್ದು ವಾಹನ ಪ್ರಯಾಣಕ್ಕೆ ಅಯೋಗ್ಯವಾಗಿದೆ. ಹೀಗಾಗಿ ಸಿನೆಮಾ ನಾಯಕಿಯ ಥಳುಕು ಬಳುಕು ನೋಡಿಕೊಂಡು ಪ್ರಯಾಣಿಸಬೇಕಾಗಿದ್ದ ನಾವು ಬಸ್ಸಿನ ಬಿಡಿಭಾಗಗಳ ಕಲುಕಾಟ ಸಹಿಸಿಕೊಂಡು ಸಾಗುವಂತಾಗಿದೆ ಎಂದು ಪ್ರಯಾಣಿಕರು ಅಲವತ್ತುಕೊಂದಿದ್ದಾರೆ.
[ಶ್ರೀನಿಧಿ ಹ೦ದೆಯವರು ಹಲವಾರು ವಿಧದ ಬಸ್ಗಳಲ್ಲಿ ಪ್ರಯಾಣಿಸಿರುವ ಅನುಭವ ಹೊಂದಿದ್ದು, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ವಿಡಿಯೋ ಮತ್ತು ಚಿತ್ರಗಳ ಆಧಾರ ಸಹಿತ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]Labels: ಅತಿಥಿ, ಸಿನೆಮಾ