ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, October 07, 2007

ಮಜಾವಾಣಿ: ಜಿಲ್ಲಾ ಸುದ್ದಿ - ಬೆಳಗಾವಿ

'ಸಂಕೇಶ್ವರ ಮಾತು ಕೇಳಿ ಕೆಟ್ಟೆ' - ಕಾರ್ಪೊರೇಟರ್
ಬೆಳಗಾವಿ ಅ. 13: ಖ್ಯಾತ ಉದ್ಯಮಿ ಮತ್ತು ಜಾ.ಜ.ದಳದ ಹಿರಿಯ ನಾಯಕ ವಿಜಯ್ ಸಂಕೇಶ್ವರ ಅವರ ಮಾತನ್ನು ಕೃತಿಗಿಳಿಸಿದ ಕಾರ್ಪೊರೇಟರ್ ಒಬ್ಬರು ಈಗ ಪೇಚಾಡುತ್ತಿದ್ದಾರೆ.

"ಸಾರ್ವಜನಿಕ ಜೀವನದಲ್ಲಿ ಇರುವವರು ಕಿಸೆಯಲ್ಲಿ ಯಾವಾಗಲೂ ರಾಜಿನಾಮೆ ಪತ್ರ ಇಟ್ಟುಕೊಂಡಿರಬೇಕು" ಎಂದಿರುವ ಸಂಕೇಶ್ವರ ಅವರ ಮಾತನ್ನು ಕಾರ್ಯರೂಪಕ್ಕೆ ತಂದಿದ್ದ ಈ ಕಾರ್ಪೊರೇಟರ್, ತಮ್ಮ ರಾಜಿನಾಮೆ ಪತ್ರವನ್ನು ಯಾವಗಲೂ ಕಿಸೆಯಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ಇತ್ತಾಗಲೂ ಅವರ ಪ್ಯಾಂಟಿನ ಕಿಸೆಯಲ್ಲಿ ಈ ರಾಜಿನಾಮೆ ಪತ್ರ ಇತ್ತು.

ಬೆಂಗಳೂರಿನ ಕಲಾಸಿ ಪಾಳ್ಯ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು, ಆಟೋ ಹಿಡಿದು ಶಾಸಕರ ಭವನಕ್ಕೆ ಬಂದಿಳಿದಾಗ, ಅವರ ಕಿಸೆಯಲ್ಲಿ ರಾಜಿನಾಮೆ ಪತ್ರವೂ ಇರಲಿಲ್ಲ, ಹಣದ ಪರ್ಸೂ ಇರಲಿಲ್ಲ. ಹೆಸರು ಹೇಳ ಬಯಸದ ಈ ಕಾರ್ಪೊರೇಟರ್ ತೊಂದರೆ ಅಲ್ಲಿಗೇ ಮುಗಿಯಲಿಲ್ಲ. ಕಿಸೆಗಳ್ಳತನ ಮಾಡಿದ ಕಳ್ಳ, ಇವರ ರಾಜಿನಾಮೆ ಪತ್ರವನ್ನು ಕೂರಿಯರ್ ಮೂಲಕ ನಗರ ಸಭೆಗೆ ಕಳುಹಿಸಿದ.

ಇಂದು ಬೆಳಿಗ್ಗೆ, ಈ ಕಾರ್ಪೊರೇಟರ್ ನಗರಕ್ಕೆ ಬಂದಿಳಿದಾಗ ಆಶ್ಚರ್ಯ ಕಾದಿತ್ತು. ರಾಜಿನಾಮೆ ಅಂಗೀಕಾರವಾಗಿತ್ತು. ಈಗಷ್ಟೇ ಚುನಾವಣೆಯಲ್ಲಿ ಗೆದ್ದಿದ್ದ ಈ ಕಾರ್ಪೊರೇಟರ್ ಈಗ ರಾಜಿನಾಮೆಯನ್ನು ಹಿಂತೆಗೆದುಕೊಳ್ಳಲು ಹೆಣಗಾಡುತ್ತಿದ್ದಾರೆ. "ಗೆದ್ ಆರಾಮಿದ್ದೆನ್ರಿ. ಆ ಸಂಕೇಶ್ವರ ಹೇಳಿದ್ದ ಮಾತ್ ಕೇಳಿ ಹೀಗಾತು ನೋಡ್ರಿ" ಎಂದು ಕಂಡಕಂಡವರಲ್ಲೆಲ್ಲಾ ಮೊರೆ ಇಡುತ್ತಿದ್ದಾರೆ.

Labels:

2 Comments:

Anonymous ಟೀನಾ said...

ವಾ.ವಿ.ಅವರಿಗೆ,

ದಿನಕ್ಕೊಮ್ಮೆಯಾದರು ಇದನ್ನು ನೋಡಿ ನಗಾಡುತ್ತೇನೆ.ಈ ಥರ ಯಾರದೊ ಮಾತು ಕೇಳಿ ಗಟರಿಗೆ ಬಿದ್ದ ಪ್ರಸಂಗಗಳು ಹಲವಿದ್ದರು, this one tops the list!!

- ಟೀನಾ.

October 22, 2007 10:23 AM  
Blogger v.v. said...

ಟೀನಾರವರೆ,

ಒಂದು ದುರಂತ ನೀತಿ ಕಥೆಯನ್ನು ಓದಿ ನಗುವ ನಿಮ್ಮ ಹಾಸ್ಯ ಪ್ರವೃತ್ತಿ ಅಭಿನಂದನಾರ್ಹವಾಗಿದೆ; ಅಭಿನಂದನೆಗಳು.

ವಂದನೆಗಳೊಂದಿಗೆ,

ಸಂಪಾದಕ

October 23, 2007 7:29 AM  

Post a Comment

Links to this post:

Create a Link

<< Home