ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, September 20, 2007

ಮಜಾವಾಣಿ: ಪುಸ್ತಕ ಪರಿಚಯ

ಇತ್ತೀಚೆಗೆ ಬಿಡುಗಡೆಯಾದ ಎರಡು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ಎರಡೂ ಪುಸ್ತಕಗಳು ಕಿರಿಯರಿಗಾಗಿಯೇ ಬರೆದಂತಹವು.

ಕಿರಿಯರಿಗಾಗಿ ಕಾಮಾ ಸೂತ್ರ: ಈ ಪುಸ್ತಕದ ಲೇಖಕ ಗೋಪಾಲ ಕೃಷ್ಣ ಮಜಾವಾಣಿ ಪತ್ರಿಕೆಯ ವೈಜ್ಞಾನಿಕ ವರದಿಗಾರರು ಮತ್ತು ಪ್ರತಿಷ್ಠಿತ ಮಜಾವಾಣಿ ವೈಜ್ಞಾನಿಕ ಪ್ರಬಂಧ ಪ್ರಶಸ್ತಿ ವಿಜೇತರು.


ಕಿರಿಯರಿಗಾಗಿಯೇ ಬರೆದಂತಹ ತಮ್ಮ ಈ ಚೊಚ್ಚಲ ಕೃತಿಯಲ್ಲಿ, ಲೇಖಕ ಗೋಪಾಲ ಕೃಷ್ಣ ಕನ್ನಡ ವ್ಯಾಕರಣ ಶಾಸ್ತ್ರವನ್ನು ಚಿಕ್ಕ ಮಕ್ಕಳಿಗೂ ಬಹಳ ಚೆನ್ನಾಗಿ ಅರ್ಥವಾಗುವಂತೆ ಬರೆದಿದ್ದಾರೆ. ಲಿಂಗ ಪ್ರಭೇಧಗಳು ಮತ್ತು ಅವುಗಳ ಬಳಕೆ, ಕನ್ನಡದ ವಿವಿಧ ಸಂಧಿಗಳು ಮತ್ತು ಅವು ಒಡ್ಡುವ ಸಮಸ್ಯೆಗಳು, ಸಮೋಸಗಳು, ವ್ಯಾಕರಣದಿಂದ ಹರಡಬಹುದಾದಂತಹ ರೋಗಗಳು ಮತ್ತು ಅವನ್ನು ಬಗೆಹರಿಸುವ ವಿಧಾನ, ಹೀಗೆ ವ್ಯಾಕರಣದ ಪ್ರತಿ ಅಂಶವನ್ನೂ ಲೇಖಕರು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.


ಒಟ್ಟಿನಲ್ಲಿ, ಮಕ್ಕಳಿರಲಿ, ಇಲ್ಲದಿರಲಿ ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದಂತಹ ಅಪರೂಪದ ಪುಸ್ತಕ ಇದು.
ಪ್ರಕಾಶಕರು: ಮಜಾವಾಣಿ ಪ್ರಕಾಶನ. ಬೆಲೆ: ಕೇವಲ ೮೮ ರೂಪಾಯಿಗಳು.

ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಕಿಡ್ಸ್: ನೀವು ಈಗಾಗಲೇ ಸ್ಟೀಫನ್ ಹಾಕಿಂಗ್ ಅವರ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಕೈಲಿ ಹಿಡಿದುಕೊಂಡು ಓಡಾಡುತ್ತಲೋ, ಎಲ್ಲರಿಗೂ ಕಾಣುವಂತೆ ಮೇಜಿನ ಮೇಲಿಟ್ಟೋ ಪಾಂಡಿತ್ಯ ಪ್ರದರ್ಶಿಸಿದ್ದೀರಿ. ಈಗ ನಿಮ್ಮ ಮಕ್ಕಳ ಸರದಿ.

ತಮ್ಮ ಮೂಲ ಕೃತಿಯಲ್ಲಿ ಹಾಕಿಂಗ್ ಅಷ್ಟಾಗಿ ಗಣಿತವನ್ನು ಬಳಸಿರಲಿಲ್ಲ. ಆದರೆ, ಕಿರಿಯರ ಆತ್ಮ ಗೌರವವನ್ನು ಹೆಚ್ಚಿಸಲೆಂದೇ ಬರೆದಿರುವ ಈ ಪುಸ್ತಕದಲ್ಲಿ ಹಲವಾರು ಸಂಕೀರ್ಣ ಸಮೀಕರಣಗಳನ್ನು ಬಳಸಿದ್ದು ಓದುಗರಿಗೆ ಅರ್ಥವಾಗದಂತೆ ಬರೆಯುವಲ್ಲಿ ಮತ್ತಷ್ಟು ಯಶ ಕಂಡಿದ್ದಾರೆ. ನಿಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಸಾವಿರದ ಐನೂರು ರೂಪಾಯಿಗಳಿಗೆ subtle and sophisticated ಆಗಿ ಪ್ರದರ್ಶಿಸುವಲ್ಲಿ ಈ ಪುಸ್ತಕಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ.

ಒಟ್ಟಿನಲ್ಲಿ, ಒಮ್ಮೆಲೆ ನಿಮ್ಮ ಮಕ್ಕಳ ಆತ್ಮ ಗೌರವ ಮತ್ತು ಪುಸ್ತಕ ಕಪಾಟಿನ ಪಾಂಡಿತ್ಯ ಎರಡನ್ನೂ ಹೆಚ್ಚಿಸುವ ಅಪೂರ್ವ ಗ್ರಂಥವಿದು.
ಎಳೆಯ ಮಕ್ಕಳಿಗಾಗಿ ಒದ್ದೆಯಾಗದಂತಹ ಪ್ಲಾಸ್ಟಿಕ್ ಹಾಳೆಗಳಲ್ಲಿ ಮುದ್ರಿಸಿರುವ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಇನ್‍ಫಾಂಟ್ಸ್" ಸಹ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ಪ್ರಕಾಶಕರು: ಪೆಂಗ್ವಿನ್. ಬೆಲೆ: ೧೫೦೦.೦೦ ರೂಪಾಯಿಗಳು.

Labels: ,

4 Comments:

Anonymous Tina said...

ಆಹ, ಎಂಥಾ ಅಮೂಲ್ಯವಾದ ಪುಸ್ತಕಮಾಹಿತಿ ಒದಗಿಸಿದ್ದೀರಿ!
ನಿಮ್ಮ ಕಾಳಜಿ ನಮಗೆ ಮಾದರಿ.
ನಮ್ಮ ಮನೆಯ ಪಿಳ್ಳೆಗಳು ಇವನ್ನು ಓದದಿದ್ದರೂ ಸರಿಯೆ, ನಾನು ಕೊಂಡುತೀರುವುದೇ ಸೈ! ಪಕ್ಕದಮನೆಯವರಿಗೆ ವಿಷಯ ತಿಳಿಯುವ ಮುನ್ನ..ನಮ್ಮ ಪ್ರೆಸ್ಟೀಜಿನ ಸವಾಲಿದು!

September 21, 2007 7:51 AM  
Blogger ಶ್ರೀನಿವಾಸ ವೀ. ಬಂಗೋಡಿ said...

"ಕಾಮ ಸೂತ್ರ"ವನ್ನು ತಪ್ಪಾಗಿ ಬರೆದಿದ್ದಾರೆಂದು ಕೊಂಡು ತಂದರೆ, ಬರೀ ಕಾಮಾ, ಬಿಂದುಗಳೇ ತುಂಬಿವೆ. ಇದರಲ್ಲಿ ಸ-ಮೋಸ ಇದೆಯೆಂದಾಗಲೇ ನನಗೆ ಅನುಮಾನ ಬಂದಿತು. ಆದರೆ ನೀವು, ಗೋಪಾಲ ಕೃಷ್ಣರವರು ವೈಜ್ಞಾನಿಕ ವರದಿಗಾರರೆಂದು ನಮ್ಮನ್ನು ದಾರಿ ತಪ್ಪಿಸಿದ್ದಿರಿ. ವೈಜ್ಞಾನಿಕ ವರದಿ ಎಂದರೆ ಹೇಗೆ ಇರಬೇಕು ಎಂದು, ನಮ್ಮ ಕನ್ನಡದ ವೈಜ್ಞಾನಿಕ ಚಲಚಿತ್ರಗಳನ್ನು ನೋಡಿ ಕಲಿಯಿರಿ. ಅಲ್ಲದೆಯೆ
ಬೆಲೆ ಕೇವಲ ೮೮ ರೂಪಾಯಿಗಳು ಇರುತ್ತದೆಯೆ? ಇದು ನಿಜವಾಗಿಯೂ ಕಿರಿಯರಿಗಾಗಿ ಬರೆದ ಕೃತಿ. ಸುಳ್ಳಿನ ಹರಿಕಾರರಾದ ನಿಮ್ಮಿಂದ ಇಂಥ ಸತ್ಯವನ್ನು ನಿರೀಕ್ಶಿಸಿರಲಿಲ್ಲ.

September 25, 2007 6:32 AM  
Blogger v.v. said...

ಟೀನಾರವರೆ,

ನಮಸ್ಕಾರ.

"ಪಕ್ಕದ ಮನೆಯವರಿಗೆ ವಿಷಯ ತಿಳಿಯುವ ಮುನ್ನ..." ಎಂದು ಬರೆದಿದ್ದೀರಿ. ಯೋಚಿಸಬೇಕಿಲ್ಲ, ಪಕ್ಕದ ಮನೆಯವರಿಗೆ ವಿಷಯ ತಿಳಿಯುವ ಸಾಧ್ಯತೆ ಬಹಳ ಕಡಿಮೆ. ಮಜಾವಾಣಿ ಜಗತ್ತಿನ ಅತ್ಯಂತ ಪವಿತ್ರವಾದ ಪತ್ರಿಕೆ ಮಾತ್ರವಲ್ಲ, ಅದು ಯಾರಿಗೂ ಗೊತ್ತಿಲ್ಲದ ಪತ್ರಿಕೆ ಸಹ. ಅದರ ಇರುವಿಕೆಯೇ ಒಂದು ಟಾಪ್ ಸೀಕ್ರೆಟ್!

ಬಂಗೋಡಿಯವರಿಗೆ,

ನಮಸ್ಕಾರ.

ಸದಭಿರುಚಿ ಮತ್ತು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಓದುಗರಿಗೆ ನೀಡುವುದು ಮಜಾವಾಣಿ ಪ್ರಕಾಶನದ ಧ್ಯೇಯ. ಗೋಪಾಲ ಕೃಷ್ಣರವರು ಬರೆಯಲು ಹೊರಟಿದ್ದು ಬೇರೆಯದೇ ಪುಸ್ತಕ. ಹೊರ ಹೊದಿಕೆಯಲ್ಲಿ ಮುದ್ರಣ ದೋಷವಿದ್ದುದರಿಂದ, ಪುಸ್ತಕ ವ್ಯಾಕರಣ ಗ್ರಂಥವಾಗಿ ಮಾರ್ಪಾಡಾಯಿತು. ಹಿರಿಯ ಲೇಖಕ ಎಸ್.ಎಲ್.ಭೈರಪ್ಪನವರ ಮೇಲ್ಪಂಕ್ತಿಯನ್ನು ಅನುಸರಿಸಿದ್ದಾರೆ ಅಷ್ಟೇ.

ಇನ್ನು "ಸತ್ಯ"ದ ವಿಷಯ. ಸತ್ಯ ಎಂಬುದು ಹರಿಶ್ಚಂದ್ರ, ಮಹಾತ್ಮ ಗಾಂಧಿಯಂತಹವರಿಂದಲೇ ಗೆಲ್ಲಲಾಗದಂತಹ ವ್ಯಸನ. ನಾವೆಷ್ಟೇ ವೀರಾವೇಶದಿಂದ ಹೋರಾಡಿದರೂ, "ಸತ್ಯ" ತನ್ನ ವಿಷದ ಹೆಡೆಯನ್ನು ಅಲ್ಲಲ್ಲಿ ಎತ್ತಿ ಮಾಯವಾಗುತ್ತದೆ. ಮುಂದೆ ಹೀಗಾಗದಂತೆ ಪ್ರಯತ್ನಿಸುತ್ತೇವೆ.

ವಂದನೆಗಳು,

ವಿ.ವಿ.

ಮಹಾ ಪ್ರಧಾನ ವ್ಯವಸ್ಥಾಪಕ ಉಪ ಸಂಪಾದಕ

September 26, 2007 1:19 AM  
Anonymous Anonymous said...

kiriyarige kirikiri maaduva intha suddhigalannu prakatisuva neeventha hiriyaru?

October 20, 2007 9:19 PM  

Post a Comment

Links to this post:

Create a Link

<< Home