ಮಜಾವಾಣಿ: ಕ್ರೈಮ್ ಸುದ್ದಿ
ಷೇವ್ ಮಾಡಿದ ಮಂಗಗಳ ಮಾರಾಟ
ನಕಲಿ-ಶಿಶು ಮಾರಾಟಗಾರರ ಬಂಧನ
ಮುಂಬೈ, ಸೆ. ೪: ಕಾಳಸಂತೆಯಲ್ಲಿ ನಕಲಿ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಮುಂಬೈ ಪೋಲಿಸರು ಭೇಧಿಸಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಷೇವ್ ಮಾಡಿದ ಚಿಂಪಾಂಜಿಗಳು: ಪೋಲಿಸ್ ವರದಿಗಳ ಪ್ರಕಾರ, ಈ ತಂಡಗಳು, ವಿಶ್ವದ ಎಲ್ಲೆಡೆಯಿಂದ ಚಿಂಪಾಂಜಿ ಮರಿಗಳನ್ನು ತಂದು, ಪೂರ್ಣವಾಗಿ ಷೇವ್ ಮಾಡಿ ತೃತೀಯ ಜಗತ್ತಿನ ಶಿಶುಗಳೆಂದು ಪಾಶ್ಚಾತ್ಯರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಮುಂಬೈ ತಂಡದವರ ಬಳಿ ಅತ್ಯಾಧುನಿಕ ಷೇವಿಂಗ್ ಸಲಕರಣೆಗಳು ದೊರಕಿರುವುದು ಈ ವರದಿಗಳನ್ನು ಮತ್ತಷ್ಟು ಪುಷ್ಟಿಗೊಳಿಸಿವೆ.
ನಟಿಯ ಗೋಳಾಟ: ನಕಲಿ-ಶಿಶು ಮಾರಾಟದ ವಿಚಾರ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಹಲವರು ತಮ್ಮ ಮಕ್ಕಳನ್ನು ಪಶುವೈದ್ಯರ ಬಳಿ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ, ಹೆಸರು ಹೇಳಲು
ಬಯಸದ ಖ್ಯಾತ ಗಾಯಕಿ ಮತ್ತು ಹಾಲಿವುಡ್ ಚಿತ್ರತಾರೆಯೊಬ್ಬರು, ತಾವು ವಂಚನೆಗೆ ಈಡಾಗಿರುವುದನ್ನು ಒಪ್ಪಿಕೊಂಡರು. "ನಾನು ಆರು ವರ್ಷಗಳಿಂದ ಬೆಳೆಸುತ್ತಿರುವ ಮಗು, ಮಗು ಅಲ್ಲ, ಚಿಂಪಾಂಜಿ ಮರಿ ಎಂದು ಗೊತ್ತಾದಾಗ ನನಗೆ ದಿಕ್ಕೇ ತೋಚಲಿಲ್ಲ. ಪಶುವೈದ್ಯರ ತಪಾಸಣಾ ವರದಿ ಓದುವವರೆಗೆ, ನನಗೆ ಕಿಂಚಿತ್ತೂ ಅನುಮಾನ ಬಂದಿರಲಿಲ್ಲ. ಶಾಲೆಯಲ್ಲಿ ಮೊದಲನೆ ತರಗತಿಯಲ್ಲಿ ಫೇಲ್ ಆದಾಗ ಕೂಡ ಪ್ರಾಯಶಃ ಲರ್ನಿಂಗ್ ಡಿಸೆಬಿಲಿಟಿ ಇರಬಹುದು ಅಂದು ಕೊಂಡಿದ್ದೆ, ನನ್ನ ಕನಸಿನಲ್ಲೂ ನನ್ನ ಮಗು ಚಿಂಪಾಂಜಿಯಿರಬಹುದೆಂಬ ಆಲೋಚನೆ ಬಂದಿರಲಿಲ್ಲ" ಎಂದು ತಮ್ಮ ವೇದನೆ ವ್ಯಕ್ತ ಪಡಿಸಿದ ಅವರು, "ನಾನು ಆರು ವರ್ಷದಿಂದ ಸಾಕಿ ಸಲುಹಿದ ಮಗುವಿಗೆ ಈಗ ’ಮಗು, ನಿಮ್ಮಪ್ಪ, ಅಮ್ಮ ಮನುಷ್ಯರಲ್ಲ. ಚಿಂಪಾಂಜಿಗಳು’ ಎಂದು ಯಾವ ಬಾಯಲ್ಲಿ ಹೇಳಲಿ. ಇನ್ನು ಮುಂದೆ ತೃತೀಯ ಜಗತ್ತಿನ ಶಿಶು ಮಾರಾಟಗಾರರನ್ನು ನಂಬುವುದಾದರೂ ಹೇಗೆ?!" ಎಂದು ಗೋಳಿಟ್ಟರು.

ಸರ್ಕಾರದ ಪ್ರಯತ್ನ: ಪಾಶ್ಚಾತ್ಯರು ಕಾಳಸಂತೆಯಲ್ಲಿ ವಂಚನೆಗೊಳಗಾಗುವುದನ್ನು ತಡೆಗಟ್ಟಲು ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ. ಆ ಯೋಜನೆಯ ಅಂಗವಾಗಿ, ಮಕ್ಕಳ ಪಾಸ್ಪೋರ್ಟಿನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕದೊಂದಿಗೆ ಚಿಂಪಾಂಜಿ ಮರಿಯೋ ಅಲ್ಲವೋ ಎಂಬುದನ್ನೂ ನಮೂದಿಸಲಾಗುವುದು ಮತ್ತು ಚಿಂಪಾಂಜಿಗಳೆಂದು ನಮೂದಿತವಾಗಿರುವ ಮಕ್ಕಳು ವಿಶೇಷ ಅನುಮತಿ ಪತ್ರವಿಲ್ಲದೆ ವಿದೇಶ ಪ್ರಯಾಣ ಬೆಳೆಸುವಂತಿಲ್ಲ.
(Inspired by something that I read)
Labels: ಕ್ರೈಮ್
3 Comments:
ಗೆ
ಸಂಪಾದ-ಕರು
ಮಜಾವಾಣಿ(ಪವಿತ್ರವಾದ ಪತ್ರಿಕೆ)
ಮಾನ್ಯರೆ,
ನಮ್ಮ ಮನೆಯ ಸದಸ್ಯರೆಲ್ಲ ತಮ್ಮ ಪತ್ರಿಕೆ ಓದಿ ನಕ್ಕುನಕ್ಕು ಮೂರ್ಚೆಹೋಗಿ ಅಪೋಲೊ ಆಸ್ಪತ್ರೆ ಸೇರುವ ಪರಿಸ್ಥಿತಿ ಒದಗಿದೆ.ನಾನು ಬಡವಳು. ಡಾಕ್ಟ್ರನ್ನು ನೋಡಿದ ಕೂಡಲೆ ಚಳಿಜ್ವರ ಬರುತ್ತಿದೆ. ನನ್ನ ಪರಿಸ್ಥಿತಿಗೆ ದಯಮಾಡಿ ಅನುಕಂಪ ತೋರಿ ಒಂದು ’ನಿಧಿ’ಯನ್ನು ಪ್ರಾರಂಭಿಸಿ ಪುಣ್ಯಕಟ್ಟಿಕೊಳ್ಳಬೇಕೆಂದು ಕಳ್ಳ-ಕಳಿಯ ವಿನಂತಿ.
ನನ್ನ ಸ್ವಿಸ್ ಬ್ಯಾಂಕ್ ಖಾತೆ ನಂ.೨೧೦೪೨೦೮೪೦
ಟೀನಾರವರಿಗೆ,
ನಮಸ್ಕಾರ.
ಡಾಸನ್ನನ "ಸಿನಾರ"ಳ ಬಗೆಗೆ ಅಷ್ಟೊಂದು ಆಪ್ತ ವಿಷಾದದಿಂದ ಬರೆಯುವ ನೀವು, ಮತ್ತೆ ಮತ್ತೆ ಸೋಲನ್ನಪ್ಪಿದರೂ ಒಪ್ಪದೆ, ಸತ್ಯದೊಂದಿಗೆ ಸಮರ ಸಾರುವ ನಮ್ಮ ಪತ್ರಿಕೆಯನ್ನು ಓದಿ ನಗುವುದು ನಿಜಕ್ಕೂ... ಆನಂದದ ವಿಚಾರ.
"ಪುಣ್ಯ ಕಟ್ಟಿಕೊಳ್ಳುವ" ಸಲಹೆ ನೀಡಿದ್ದೀರಿ. ಪವಿತ್ರವಾದ ಪತ್ರಿಕೆಗೆ ಇದು ಸೂಕ್ತವಾದದ್ದೇ. ಆದರೆ ಸರ್ಕ್ಯುಲೇಷನ್ ಇಲ್ಲದೆ ಸೊರಗಿ ಬಡಕಲಾಗಿರುವ ನಮ್ಮ ಮಜಾವಾಣಿ ಈಗಾಗಲೇ ಸಂತ್ರಸ್ತರ ಪಟ್ಟಿಗೆ ಸೇರಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ವಂದನೆಗಳೊಂದಿಗೆ,
ವಿ.ವಿ.
ವಾ.ವಿ.ಗಳೆ,
ನಾನು ಕಾಲೇಜಿನಲ್ಲಿದ್ದಾಗ ಹುಡುಗರು "ಕಾಫೀನಾ? ಟೀನಾ?" ಎಂದು ಅಣಗಿಸುತ್ತಿದ್ದುದು ನಿಮಗೆ ಗೊತ್ತಾದದ್ದಾದರೂ ಹೇಗೆ?
ನಿಮ್ಮ ಪತ್ರಿಕೆಯ ಬೇಹುಗಾರಿಕೆ ಇಷ್ಟೆಲ್ಲ ಹಬ್ಬಿರುವುದು ನೋಡಿದ್ರೆ ನಮ್ಮ ದೇಶದ ಅಫಿಶಿಯಲ್ ಬೇಹುಗಾರಿಕೆ ’ಸ್ಕೂಬಿ-ಐ’ಹಾಗೂ ’ಡ್ರಾ’ ಸಂಸ್ಥೆಗಳು ನಿಮ್ಮಿಂದ ಕಲಿಯುವುದು ಬಹಳವಿದೆಯೆಂದು ತೋರುತ್ತದೆ!! ನಿಮ್ಮನ್ನು ನೀವೆ ಸಂತ್ರಸ್ಥರೆಂದು ಕರೆದುಕೊಳ್ಳುವುದರಲ್ಲೂ ಏನಾದರು ಹುನ್ನಾರವಿದೆಯೊ?
Post a Comment
<< Home