ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, September 25, 2007

ಮಜಾವಾಣಿ: ಅಗ್ರ ರಾಷ್ಟ್ರೀಯ ಸುದ್ದಿ

ಹೇಮಮಾಲಿನಿ ಕೆನ್ನೆಯಿಂದ ಸರ್ಕಾರಕ್ಕೆ ಪೇಚು!
ನವದೆಹಲಿ, ಸೆ. ೧೩: ಖ್ಯಾತ ಚಿತ್ರತಾರೆ ಮತ್ತು ಸಂಸದೀಯ ನೃತ್ಯ ಪಟು ಹೇಮ ಮಾಲಿನಿಯವರ ಕೆನ್ನೆಗಳು ಕೇಂದ್ರ ಸರ್ಕಾರಕ್ಕೆ ಪೇಚುಂಟು ಮಾಡಿರುವ ಸಂಗತಿ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿರುವ ಎಲ್. ಅಂಡ್ ಟಿ. ಸಂಸ್ಥೆ ಹೇಮ ಮಾಲಿನಿಯವರ ಕೆನ್ನೆಗಳನ್ನು ಸವರಿ ಪರೀಕ್ಷಿಸಲು ಬೇಡಿದ್ದ ಅನುಮತಿಯನ್ನು ಆಕೆ ನಿರಾಕರಿಸಿರುವುದು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿದೆ. ಕೇಂದ್ರ ಕಾಮಗಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಎಲ್. ಅಂಡ್ ಟಿ.ಗೆ ನೀಡಿದ್ದ ಕರಾರು ಪತ್ರದಲ್ಲಿ, ರಸ್ತೆಯ ಗುಣ ಮಟ್ಟದ ಮಾಪನಕ್ಕಾಗಿ ಹೇಮ ಮಾಲಿನಿಯವರ ಕೆನ್ನೆಗಳನ್ನು ಪ್ರಸ್ತಾಪಿಸಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಕೇಂದ್ರ ಕಾಮಗಾರಿ ಇಲಾಖೆಯ ಪ್ರಕಾರ ರಸ್ತೆಯ ಗುಣ ಮಟ್ಟ -- ನುಣುಪು, ಧೃಡತೆ ಮತ್ತು ಬಿಗಿತ -- ಹೇಮ ಮಾಲಿನಿಯವರ ಕೆನ್ನೆಗಳ ಗುಣ ಮಟ್ಟಕ್ಕೆ ಸಮನಾಗಿ ಇರಬೇಕು. ಇಲ್ಲದಿದ್ದಲ್ಲಿ, ಕಾಮಗಾರಿ ಕಂಟ್ರಾಕ್ಟುದಾರರು ಶೇ.೨೫ರಷ್ಟು ಹಣವನ್ನು ವಾಪಸು ನೀಡಬೇಕು.

ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಬಿಹಾರದ ರಸ್ತೆಗಳನ್ನು ಹೇಮಮಾಲಿನಿಯವರ ಕೆನ್ನೆಗಳಿಗೆ ಹೋಲಿಸಿರುವ ಸಂಗತಿ ವರದಿಯಾದಂದಿನಿಂದ, ಕೇಂದ್ರ ಕಾಮಗಾರಿ ಇಲಾಖೆಯಲ್ಲದೆ, ಹಲವಾರು ರಾಜ್ಯಗಳ ಕಾಮಗಾರಿ ಇಲಾಖೆಗಳೂ ಸಹ ರಸ್ತೆ ಕಂಟ್ರಾಕ್ಟುದಾರರಿಂದ ತಮ್ಮ ರಸ್ತೆಗಳಲ್ಲಿ ಹೇಮಾರವರ ಕೆನ್ನೆಗಳ ಗುಣಮಟ್ಟವನ್ನೇ ನಿರೀಕ್ಷಿಸುತ್ತಿದ್ದು, ಹೇಮ ಮಾಲಿನಿಯವರ ಕೆನ್ನೆ ಸವರಿ ಪರೀಕ್ಷಿಸಲು ವಿಪರೀತ ಬೇಡಿಕೆ ಉಂಟಾಗಿದೆ.

Labels: , , ,

Thursday, September 20, 2007

ಮಜಾವಾಣಿ: ಪುಸ್ತಕ ಪರಿಚಯ

ಇತ್ತೀಚೆಗೆ ಬಿಡುಗಡೆಯಾದ ಎರಡು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ಎರಡೂ ಪುಸ್ತಕಗಳು ಕಿರಿಯರಿಗಾಗಿಯೇ ಬರೆದಂತಹವು.

ಕಿರಿಯರಿಗಾಗಿ ಕಾಮಾ ಸೂತ್ರ: ಈ ಪುಸ್ತಕದ ಲೇಖಕ ಗೋಪಾಲ ಕೃಷ್ಣ ಮಜಾವಾಣಿ ಪತ್ರಿಕೆಯ ವೈಜ್ಞಾನಿಕ ವರದಿಗಾರರು ಮತ್ತು ಪ್ರತಿಷ್ಠಿತ ಮಜಾವಾಣಿ ವೈಜ್ಞಾನಿಕ ಪ್ರಬಂಧ ಪ್ರಶಸ್ತಿ ವಿಜೇತರು.


ಕಿರಿಯರಿಗಾಗಿಯೇ ಬರೆದಂತಹ ತಮ್ಮ ಈ ಚೊಚ್ಚಲ ಕೃತಿಯಲ್ಲಿ, ಲೇಖಕ ಗೋಪಾಲ ಕೃಷ್ಣ ಕನ್ನಡ ವ್ಯಾಕರಣ ಶಾಸ್ತ್ರವನ್ನು ಚಿಕ್ಕ ಮಕ್ಕಳಿಗೂ ಬಹಳ ಚೆನ್ನಾಗಿ ಅರ್ಥವಾಗುವಂತೆ ಬರೆದಿದ್ದಾರೆ. ಲಿಂಗ ಪ್ರಭೇಧಗಳು ಮತ್ತು ಅವುಗಳ ಬಳಕೆ, ಕನ್ನಡದ ವಿವಿಧ ಸಂಧಿಗಳು ಮತ್ತು ಅವು ಒಡ್ಡುವ ಸಮಸ್ಯೆಗಳು, ಸಮೋಸಗಳು, ವ್ಯಾಕರಣದಿಂದ ಹರಡಬಹುದಾದಂತಹ ರೋಗಗಳು ಮತ್ತು ಅವನ್ನು ಬಗೆಹರಿಸುವ ವಿಧಾನ, ಹೀಗೆ ವ್ಯಾಕರಣದ ಪ್ರತಿ ಅಂಶವನ್ನೂ ಲೇಖಕರು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.


ಒಟ್ಟಿನಲ್ಲಿ, ಮಕ್ಕಳಿರಲಿ, ಇಲ್ಲದಿರಲಿ ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದಂತಹ ಅಪರೂಪದ ಪುಸ್ತಕ ಇದು.
ಪ್ರಕಾಶಕರು: ಮಜಾವಾಣಿ ಪ್ರಕಾಶನ. ಬೆಲೆ: ಕೇವಲ ೮೮ ರೂಪಾಯಿಗಳು.

ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಕಿಡ್ಸ್: ನೀವು ಈಗಾಗಲೇ ಸ್ಟೀಫನ್ ಹಾಕಿಂಗ್ ಅವರ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್" ಕೈಲಿ ಹಿಡಿದುಕೊಂಡು ಓಡಾಡುತ್ತಲೋ, ಎಲ್ಲರಿಗೂ ಕಾಣುವಂತೆ ಮೇಜಿನ ಮೇಲಿಟ್ಟೋ ಪಾಂಡಿತ್ಯ ಪ್ರದರ್ಶಿಸಿದ್ದೀರಿ. ಈಗ ನಿಮ್ಮ ಮಕ್ಕಳ ಸರದಿ.

ತಮ್ಮ ಮೂಲ ಕೃತಿಯಲ್ಲಿ ಹಾಕಿಂಗ್ ಅಷ್ಟಾಗಿ ಗಣಿತವನ್ನು ಬಳಸಿರಲಿಲ್ಲ. ಆದರೆ, ಕಿರಿಯರ ಆತ್ಮ ಗೌರವವನ್ನು ಹೆಚ್ಚಿಸಲೆಂದೇ ಬರೆದಿರುವ ಈ ಪುಸ್ತಕದಲ್ಲಿ ಹಲವಾರು ಸಂಕೀರ್ಣ ಸಮೀಕರಣಗಳನ್ನು ಬಳಸಿದ್ದು ಓದುಗರಿಗೆ ಅರ್ಥವಾಗದಂತೆ ಬರೆಯುವಲ್ಲಿ ಮತ್ತಷ್ಟು ಯಶ ಕಂಡಿದ್ದಾರೆ. ನಿಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಸಾವಿರದ ಐನೂರು ರೂಪಾಯಿಗಳಿಗೆ subtle and sophisticated ಆಗಿ ಪ್ರದರ್ಶಿಸುವಲ್ಲಿ ಈ ಪುಸ್ತಕಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ.

ಒಟ್ಟಿನಲ್ಲಿ, ಒಮ್ಮೆಲೆ ನಿಮ್ಮ ಮಕ್ಕಳ ಆತ್ಮ ಗೌರವ ಮತ್ತು ಪುಸ್ತಕ ಕಪಾಟಿನ ಪಾಂಡಿತ್ಯ ಎರಡನ್ನೂ ಹೆಚ್ಚಿಸುವ ಅಪೂರ್ವ ಗ್ರಂಥವಿದು.
ಎಳೆಯ ಮಕ್ಕಳಿಗಾಗಿ ಒದ್ದೆಯಾಗದಂತಹ ಪ್ಲಾಸ್ಟಿಕ್ ಹಾಳೆಗಳಲ್ಲಿ ಮುದ್ರಿಸಿರುವ "ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಇನ್‍ಫಾಂಟ್ಸ್" ಸಹ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ಪ್ರಕಾಶಕರು: ಪೆಂಗ್ವಿನ್. ಬೆಲೆ: ೧೫೦೦.೦೦ ರೂಪಾಯಿಗಳು.

Labels: ,

Wednesday, September 19, 2007

ಮಂಗಗಳೂ ಮನುಷ್ಯರೇ ಅಲ್ಲವೇ?

ನೈಸರ್ಗಿಕ ವಿಕಸನದಲ್ಲಿ ಹಿಂದುಳಿದ ಮಾತ್ರಕ್ಕೆ ಮನುಷ್ಯತ್ವವೇ ಇಲ್ಲವೇ?
ಬಾಲ-ಭಾರತೀಯರ ವಿರುದ್ಧದ ಭೇಧ-ಭಾವ ನಿಲ್ಲಲಿ!
Click here to take a look at some amazing pictures of evolutionally-challenged humans.
[BTW, this happens to be MV's 100th post!]

Labels:

Tuesday, September 04, 2007

ಮಜಾವಾಣಿ: ಕ್ರೈಮ್ ಸುದ್ದಿ

ಷೇವ್ ಮಾಡಿದ ಮಂಗಗಳ ಮಾರಾಟ
ನಕಲಿ-ಶಿಶು ಮಾರಾಟಗಾರರ ಬಂಧನ
ಮುಂಬೈ, ಸೆ. ೪: ಕಾಳಸಂತೆಯಲ್ಲಿ ನಕಲಿ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಮುಂಬೈ ಪೋಲಿಸರು ಭೇಧಿಸಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೃತೀಯ ರಾಷ್ಟ್ರಗಳ ಮಕ್ಕಳಿಗೆ ಅಪಾರ ಬೇಡಿಕೆ ಇದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಪಾಶ್ಚಾತ್ಯ ದೇಶಗಳ ಹಲವಾರು ಸಿರಿವಂತರು ಬಡ ದೇಶಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಈ ಬೇಡಿಕೆಯಿಂದಾಗಿ ಮಕ್ಕಳ ಕಾಳಸಂತೆಯಲ್ಲಿ, ನಕಲಿ-ಶಿಶುಗಳನ್ನು ಮಾರಾಟಮಾಡುವ ತಂಡಗಳು ಸಹ ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.

ಷೇವ್ ಮಾಡಿದ ಚಿಂಪಾಂಜಿಗಳು: ಪೋಲಿಸ್ ವರದಿಗಳ ಪ್ರಕಾರ, ಈ ತಂಡಗಳು, ವಿಶ್ವದ ಎಲ್ಲೆಡೆಯಿಂದ ಚಿಂಪಾಂಜಿ ಮರಿಗಳನ್ನು ತಂದು, ಪೂರ್ಣವಾಗಿ ಷೇವ್ ಮಾಡಿ ತೃತೀಯ ಜಗತ್ತಿನ ಶಿಶುಗಳೆಂದು ಪಾಶ್ಚಾತ್ಯರಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಮುಂಬೈ ತಂಡದವರ ಬಳಿ ಅತ್ಯಾಧುನಿಕ ಷೇವಿಂಗ್ ಸಲಕರಣೆಗಳು ದೊರಕಿರುವುದು ಈ ವರದಿಗಳನ್ನು ಮತ್ತಷ್ಟು ಪುಷ್ಟಿಗೊಳಿಸಿವೆ.

ನಟಿಯ ಗೋಳಾಟ: ನಕಲಿ-ಶಿಶು ಮಾರಾಟದ ವಿಚಾರ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಹಲವರು ತಮ್ಮ ಮಕ್ಕಳನ್ನು ಪಶುವೈದ್ಯರ ಬಳಿ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ, ಹೆಸರು ಹೇಳಲು ಬಯಸದ ಖ್ಯಾತ ಗಾಯಕಿ ಮತ್ತು ಹಾಲಿವುಡ್ ಚಿತ್ರತಾರೆಯೊಬ್ಬರು, ತಾವು ವಂಚನೆಗೆ ಈಡಾಗಿರುವುದನ್ನು ಒಪ್ಪಿಕೊಂಡರು. "ನಾನು ಆರು ವರ್ಷಗಳಿಂದ ಬೆಳೆಸುತ್ತಿರುವ ಮಗು, ಮಗು ಅಲ್ಲ, ಚಿಂಪಾಂಜಿ ಮರಿ ಎಂದು ಗೊತ್ತಾದಾಗ ನನಗೆ ದಿಕ್ಕೇ ತೋಚಲಿಲ್ಲ. ಪಶುವೈದ್ಯರ ತಪಾಸಣಾ ವರದಿ ಓದುವವರೆಗೆ, ನನಗೆ ಕಿಂಚಿತ್ತೂ ಅನುಮಾನ ಬಂದಿರಲಿಲ್ಲ. ಶಾಲೆಯಲ್ಲಿ ಮೊದಲನೆ ತರಗತಿಯಲ್ಲಿ ಫೇಲ್ ಆದಾಗ ಕೂಡ ಪ್ರಾಯಶಃ ಲರ್ನಿಂಗ್ ಡಿಸೆಬಿಲಿಟಿ ಇರಬಹುದು ಅಂದು ಕೊಂಡಿದ್ದೆ, ನನ್ನ ಕನಸಿನಲ್ಲೂ ನನ್ನ ಮಗು ಚಿಂಪಾಂಜಿಯಿರಬಹುದೆಂಬ ಆಲೋಚನೆ ಬಂದಿರಲಿಲ್ಲ" ಎಂದು ತಮ್ಮ ವೇದನೆ ವ್ಯಕ್ತ ಪಡಿಸಿದ ಅವರು, "ನಾನು ಆರು ವರ್ಷದಿಂದ ಸಾಕಿ ಸಲುಹಿದ ಮಗುವಿಗೆ ಈಗ ’ಮಗು, ನಿಮ್ಮಪ್ಪ, ಅಮ್ಮ ಮನುಷ್ಯರಲ್ಲ. ಚಿಂಪಾಂಜಿಗಳು’ ಎಂದು ಯಾವ ಬಾಯಲ್ಲಿ ಹೇಳಲಿ. ಇನ್ನು ಮುಂದೆ ತೃತೀಯ ಜಗತ್ತಿನ ಶಿಶು ಮಾರಾಟಗಾರರನ್ನು ನಂಬುವುದಾದರೂ ಹೇಗೆ?!" ಎಂದು ಗೋಳಿಟ್ಟರು.

ಸರ್ಕಾರದ ಪ್ರಯತ್ನ: ಪಾಶ್ಚಾತ್ಯರು ಕಾಳಸಂತೆಯಲ್ಲಿ ವಂಚನೆಗೊಳಗಾಗುವುದನ್ನು ತಡೆಗಟ್ಟಲು ಸರ್ಕಾರ ಯೋಜನೆಯೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ. ಆ ಯೋಜನೆಯ ಅಂಗವಾಗಿ, ಮಕ್ಕಳ ಪಾಸ್‍ಪೋರ್‍ಟಿನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕದೊಂದಿಗೆ ಚಿಂಪಾಂಜಿ ಮರಿಯೋ ಅಲ್ಲವೋ ಎಂಬುದನ್ನೂ ನಮೂದಿಸಲಾಗುವುದು ಮತ್ತು ಚಿಂಪಾಂಜಿಗಳೆಂದು ನಮೂದಿತವಾಗಿರುವ ಮಕ್ಕಳು ವಿಶೇಷ ಅನುಮತಿ ಪತ್ರವಿಲ್ಲದೆ ವಿದೇಶ ಪ್ರಯಾಣ ಬೆಳೆಸುವಂತಿಲ್ಲ.
(Inspired by something that I read)

Labels:

Monday, September 03, 2007

ಮಜಾವಾಣಿ: ಜಾಹಿರಾತುLabels:

ಮಜಾವಾಣಿ: ವಾಣಿಜ್ಯ - ರಾಜಕಾರಣ

ಬೂ - ಹೊಸ ಸುಗಂಧ ಮಾರುಕಟ್ಟೆಗೆ
ಬೆಂಗಳೂರು, ಏಪ್ರಿಲ್ ೧: ಸುಪ್ರಸಿದ್ಧ ಫ್ರೆಂಚ್ ಸಂಸ್ಥೆ ಷನೆಲ್ ಸಹಕಾರದೊಂದಿಗೆ ತಯಾರಿಸಿರುವ "ಬೂ" ಎಂಬ ಸುಗಂಧವನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ಸುಗಂಧ ಕನಕಪುರ ಕ್ಷೇತ್ರದ ಅಸಲೀ ಮಣ್ಣಿನಿಂದ ತಯಾರಿಸಲ್ಪಟ್ಟಿದ್ದು ೧೦೦% ನೈಸರ್ಗಿಕವಾಗಿದೆ. ರಾಜಕಾರಣ, ಸಾಹಿತ್ಯ, ರಿಯಲ್ ಎಸ್ಟೇಟ್ ವ್ಯಾಪಾರ, ಚಿತ್ರರಂಗವೂ ಸೇರಿದಂತೆ ಹಲವಾರು ರಂಗಗಳಲ್ಲಿ ಇತ್ತೀಚೆಗೆ ಮಣ್ಣಿನ ವಾಸನೆಗೆ ಅಪಾರ ಬೇಡಿಕೆಯಿದ್ದು, ಈ ಹೊಸ ಸುಗಂಧ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಇವೆ ಎನ್ನಲಾಗಿದೆ. "ಬೂ" ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಯವರು, "ಚುನಾವಣೆ ಸಮಯ ಹತ್ತಿರವಿರುವುದರಿಂದ ಮಣ್ಣಿನ ವಾಸನೆಯ ಅನಿವಾರ್ಯತೆ ಸಹ ಹೆಚ್ಚಾಗಿದೆ. ಸದ್ಯಕ್ಕೆ ಕನಕಪುರದ ಮಣ್ಣಿನ ವಾಸನೆ ಮಾತ್ರ ಬಿಡುಗಡೆ ಮಾಡಿದ್ದು, ಮುಂದೆ ಸಾತನೂರು, ಹಾಸನ, ರಾಮನಗರಗಳ ಮಣ್ಣಿನ ವಾಸನೆಯನ್ನು ಸಹ ಮಾರುಕಟ್ಟೆಗೆ ತರುವ ಆಲೋಚನೆ ಇದೆ" ಎಂದರು.

ಅಮಿತಾಬ್, ಕಾಯ್ಕಿಣಿ ಸ್ವಾಗತ: "ಬೂ" ಪರಿಮಳವನ್ನು ಖ್ಯಾತ ನಟ ಅಮಿತಾಬ್ ಬಚನ್ ಮತ್ತು ಕನ್ನಡದ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸ್ವಾಗತಿಸಿದ್ದಾರೆ ಎನ್ನಲಾಗಿದೆ.

ಮಣ್ಣಿನ ಯಾವುದೇ ವಾಸನೆಯಿಲ್ಲದ ಅಮಿತಾಬ್ ಇತ್ತೀಚೆಗೆ ರೈತರ ಜಮೀನನ್ನು ಖರೀದಿಸಿ ನ್ಯಾಯಲಯದ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಗಮನಿಸಬಹುದು. ಆದರೆ, ಈಗ "ಬೂ" ಪರಿಮಳ ಮಾರುಕಟ್ಟೆಗೆ ಬಂದಿರುವುದರಿಂದ, ಅಮಿತಾಬ್ ಈ ಸುಗಂಧವನ್ನು ಬಳಸಿ ಮತ್ತೊಮ್ಮೆ ಜಮೀನನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಹಾಗೆಯೇ, ತಮ್ಮ ಸಾಹಿತ್ಯ ಕೃಷಿಯನ್ನು ನಗರೀಕರಣ ಪ್ರಜ್ಞೆಗೆ ಸೀಮಿತಗೊಳಿಸಿರುವ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಸಹ ಈ ಸುಗಂಧವನ್ನು ಬಳಸಿ ಮಣ್ಣಿನ ವಾಸನೆಯ ಅನುಭವ ಪಡೆದು, ತಮ್ಮ ಸಾಹಿತ್ಯದ ಫರಿದಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Labels: