ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, August 21, 2007

ಮಜಾವಾಣಿ: ವಿಜ್ಞಾನ - ರಾಜಕಾರಣ

'ಜನಸಂಖ್ಯಾ ಸ್ಫೋಟಕ್ಕೆ ಪುನರ್ಜನ್ಮವೇ ಕಾರಣ'

ಕೊಲ್ಕತಾ, ಆಗಸ್ಟ್ ೨೧: ಭಾರತದಲ್ಲಿನ ಜನಸಂಖ್ಯಾ ಸಮಸ್ಯೆಗೆ ಪುನರ್ಜನ್ಮವೇ ಕಾರಣ ಎಂದು ಸಿ.ಪಿ.ಎಂ. ನಾಯಕಿ ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ.

ಕೋಲ್ಕೊತಾದಲ್ಲಿ ನಡೆಯುತ್ತಿರುವ ಪುನರ್ಜನ್ಮ: ಒಂದು ಸಾಮಾಜಿಕ ಸಮಸ್ಯೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, "ಪುನರ್ಜನ್ಮ ಪೀಡಿತ ರಾಷ್ಟ್ರಗಳಾದ ಭಾರತ, ಚೈನಾಗಳಲ್ಲೇ ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಕೇವಲ ಕಾಕತಾಳೀಯವಲ್ಲ. ಪುನರ್ಜನ್ಮರಹಿತ ರಾಷ್ಟ್ರಗಳಲ್ಲಿ ಒಮ್ಮೆ ಸತ್ತವರು ಮರು ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಪ್ರಥಮ ಜನ್ಮಿಗಳೊಡನೆ, ಪುನರ್ಜನ್ಮಿಗಳೂ ಪದೇ ಪದೇ ಹುಟ್ಟುತ್ತಿರುವುದರಿಂದ ಭಾರತದಲ್ಲಿ ಈ ಸಮಸ್ಯೆ ಎದುರಾಗಿದೆ. ಪುನರ್ಜನ್ಮವನ್ನು ಸರ್ಕಾರ ತಕ್ಷಣವೇ ನಿಷೇಧಿಸಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸಹ ಸೋವಿಯತ್ ರಷ್ಯಾದಂತೆ ಪ್ರಗತಿ ಪರ ದೇಶವಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.

ಸರ್ಕಾರದ ಕ್ರಮ?: ಪುನರ್ಜನ್ಮವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪುನರ್ಜನ್ಮದ ಮೇಲೆ ಸಂಪೂರ್ಣ ನಿಷೇಧ ಚೈನಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ಸೂಕ್ತವೆನ್ನಿಸಬಹುದಾದರೂ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಸತ್ತ ಆತ್ಮಗಳ ಸ್ವಾತಂತ್ರ್ಯ ಹರಣ ನಿಷಿದ್ಧ. ಜೊತೆಗೆ, ಆತುರದಲ್ಲಿ ಇಂತಹ ನಿಷೇಧ ತಂದಲ್ಲಿ, ಪ್ರೇತಾತ್ಮಗಳ ಸಂಖ್ಯೆಯಲ್ಲಿ ಒಮ್ಮೆಲೆ ವಿಪರೀತ ಹೆಚ್ಚಳವಾಗುವ ಅಪಾಯ ಸಹ ಇದ್ದು, ಅದರ ಬದಲು, ಆಧ್ಯಾತ್ಮಿಕ ಗುರುಗಳು, ಮಠಾಧೀಶರನ್ನೊಳಗೊಂಡ ತಜ್ಞರ ಸಮಿತಿಯನ್ನೊಂದು ರಚಿಸಿ, ಪುನರ್ಜನ್ಮವಿಲ್ಲದ ಮೋಕ್ಷ ಮಾರ್ಗ ತೋರುವ "ನಾನೊಬ್ಬ-ನನಗೊಂದು" ಆಂದೋಲನವನ್ನು ಜಾರಿಗೆ ತರುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

Labels:

Thursday, August 16, 2007

ಮಜಾವಾಣಿ: ರಾಜಕೀಯ - ಕೃಷಿ

ಸೆಪ್ಟೆಂಬರ್ ನಂತರ ಮತ್ತೆ ಜೂನ್ - ಮು.ಮಂ.

ಬೆಂಗಳೂರು, ಆಗಸ್ಟ್ ೧೬: ಈ ವರ್ಷದ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಸಾಕಷ್ಟು ಮಳೆ ಆಗದ್ದರಿಂದ ಜೂನ್ ತಿಂಗಳನ್ನು ಸೆಪ್ಟೆಂಬರ್ ನಂತರ ಮತ್ತೆ ಮರುಕಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸುತ್ತಿದೆ ಎಂದು ತಿಳಿದು ಬಂದಿದೆ.

ಹವಾಮಾನ ವೀಕ್ಷಾಣಾಲಯದ ತಜ್ಞರ ಪ್ರಕಾರ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆಯ ಪ್ರಮಾಣ ಎಂದಿಗಿಂತ ೧೫ ಮಿ.ಮಿ. ಕಡಿಮೆ ಬಿದ್ದಿದ್ದು ಮಳೆಯನ್ನೇ ಅವಲಂಬಿಸಿರುವ ಕೃಷಿಕರಿಗೆ ಅಪಾರ ನಷ್ಟ ಉಂಟಾಗುವ ಸಂದರ್ಭ ಎದುರಾಗಿದೆ. ರೈತರ ಆತ್ಮಹತ್ಯೆಯ ವಿರುದ್ಧ ಸಮರ ಸಾರಿರುವ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಈ ಎರಡನೆಯ ಜೂನಿನಲ್ಲಿ ಎಲ್ಲೆಡೆ ತಾವೇ ಸ್ವತಃ ಖುದ್ದಾಗಿ ನಿಂತು ಸಾಕಷ್ಟು ಮಳೆ ಹುಯ್ಯಿಸುವ ಭರವಸೆ ಇತ್ತಿದ್ದಾರೆ. ಇದಕ್ಕಾಗಿ, ಈ ವರ್ಷದ ದ್ವಿತೀಯ ಜೂನಿನಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ವಾಸ್ತವ್ಯಮಾಡಲಿದ್ದು, ವಾಸ್ತವ್ಯ ಮಾಡುವ ಪ್ರತಿ ಗ್ರಾಮದಲ್ಲೂ ಕನಿಷ್ಠ ೨೫ ಮಿ.ಮಿ. ಮಳೆ ಹುಯ್ಯಿಸುವ ಪಣ ತೊಟ್ಟಿದ್ದಾರೆ.

ಯಡ್ಡಿಗೆ ಆತಂಕ: ಸೆಪ್ಟೆಂಬರ್ ನಂತರ ಜೂನ್ ತಿಂಗಳನ್ನು ಮತ್ತೆ ಮರುಕಳಿಸುತ್ತಿರುವುದು ಉಪ ಮುಖ್ಯಮಂತ್ರಿ ಯಡೆಯೂರಪ್ಪನವರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ. ಈ ಕುರಿತು ತಮ್ಮ ಖೇದವನ್ನು ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, "ನಾನೇನೂ ರೈತ ವಿರೋಧಿ ಅಲ್ಲ. ಮುಂಗಾರು ಮಳೆ ವಿರೋಧಿಯೂ ಅಲ್ಲ. ಜೂನ್ ತಿಂಗಳನ್ನು ಮರುಕಳಿಸುವುದಕ್ಕೆ ನನ್ನ ವಿರೋಧ ಏನೂ ಇಲ್ಲ. ಆದರೆ, ಇದರಲ್ಲಿ ಆತುರ ಯಾಕೆ? ಸೆಪ್ಟೆಂಬರ್ ಆದ ತಕ್ಷಣ ಜೂನ್ ವಾಪಸ್ ತರುತ್ತಿರುವುದು ಯಾಕೋ ಸಂಶಯಾಸ್ಪದವಾಗಿದೆ" ಎಂದಿದ್ದಾರೆ ಎನ್ನಲಾಗಿದೆ.

Labels: ,

Saturday, August 04, 2007

ಮಜಾವಾಣಿ: ವಾಣಿಜ್ಯ - ಸಂಸ್ಕೃತಿ

"ಪಿಕ್ಚರ್ ಪೈರಸಿಗೆ ಪ್ರೋತ್ಸಾಹ ಧನ ನೀಡಿ"

ಬೆಂಗಳೂರು, ಆಗಸ್ಟ್ ೪: ಎಂ.ಜಿ.ರಸ್ತೆಯಿಂದ ಹಿಡಿದು ಮಲ್ಲೇಶ್ವರದ ಹದಿನೆಂಟನೆಯ ಕ್ರಾಸಿನವರೆಗೆ ನಗರದ ಹಲವಾರು ಮುಖ್ಯ ರಸ್ತೆಗಳಲ್ಲಿ ಪೈರೇಟೆಡ್ ಡಿ.ವಿ.ಡಿ.ಗಳು ಅತಿ ಕಡಿಮೆ ಧರದಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲೀಷ್, ಹಿಂದಿ, ತೆಲುಗು ಕೊನೆಗೆ ತಮಿಳಿನ ಹೊಚ್ಚ ಹೊಸ ಚಲನ ಚಿತ್ರಗಳ ಪೈರೇಟೆಡ್ ಡಿ.ವಿ.ಡಿ.ಗಳು ಇಲ್ಲಿ ಲಭ್ಯ. ಆದರೆ ಕನ್ನಡ ಡಿ.ವಿ.ಡಿ. ಬಗ್ಗೆ ವಿಚಾರಿಸಿ ನೋಡಿ, ನಿಮಗೆ ಸಿಗುವುದು ಹೆಚ್ಚೆಂದರೆ ತಾತ್ಸಾರದ ನಗೆ ಮಾತ್ರ!

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಕನ್ನಡ ಪರ ಚಳುವಳಿಗಾರರು, "ಒಂದು ಭಾಷೆಯ ಸಂಸ್ಕೃತಿಯನ್ನುಳಿಸುವಲ್ಲಿ ಚಲನ ಚಿತ್ರಗಳ ಪಾತ್ರವೂ ಮಹತ್ವದ್ದಾಗಿದ್ದು, ಅತಿ ಕಡಿಮೆ ದರದಲ್ಲಿ ಹೊಚ್ಚ ಹೊಸ ಚಲನ ಚಿತ್ರಗಳ ಉತ್ತಮ ನಕಲುಗಳನ್ನು ನೋಡುಗರಿಗೆ ದಕ್ಕಿಸುವ ಡಿ.ವಿ.ಡಿ. ಪೈರೇಟಿಂಗ್ ನಮ್ಮಲ್ಲಿನ್ನೂ ಅಷ್ಟಾಗಿ ಕಾಣದಿರುವುದು ನಿಜಕ್ಕೂ ಆತಂಕದ ವಿಷಯ. ಇಂಗ್ಲೀಷಿನ ಹ್ಯಾರಿ ಪಾಟರ್, ತಮಿಳಿನ ಶಿವಾಜಿ ಚಲನ ಚಿತ್ರಗಳ ಪೈರೇಟೆಡ್ ಡಿ.ವಿ.ಡಿ.ಗಳು ಎಲ್ಲೆಲ್ಲೂ ಲಭ್ಯವಿರುವಾಗ, ಕನ್ನಡದ ಸೂಪರ್ ಹಿಟ್ ಮುಂಗಾರು ಮಳೆಯ ಪೈರೇಟೆಡ್ ಡಿ.ವಿ.ಡಿ. ಎಲ್ಲೂ ಕಾಣದಿದ್ದರೆ, ಕನ್ನಡ ಸಂಸ್ಕೃತಿಯನ್ನು ಉಳಿಸುವುದಾದರೂ ಹೇಗೆ?!" ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಡಿ.ವಿ.ಡಿ. ಪೈರೇಟಿಂಗ್ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಮೂರು ಅಂಶಗಳ ಯೋಜನೆಯನ್ನು ಕಾರ್ಯಗತ ಮಾಡುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ:
  • ಕನ್ನಡ ಚಲನ ಚಿತ್ರಗಳ ಥಿಯೇಟರ್ ಬಿಡುಗಡೆ ದಿನದಂದೆ ಅವುಗಳ ಡಿ.ವಿ.ಡಿ. ನಕಲುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಸರ್ಕಾರ ಆಜ್ಞಾಪಿಸಬೇಕು
  • ಇತರೆ ಭಾಷೆಗಳ ನಕಲಿ ಡಿ.ವಿ.ಡಿ.ಗಳು ಆ ಚಲನ ಚಿತ್ರಗಳನ್ನು ಥಿಯೇಟರಿನಲ್ಲಿ ಬಿಡುಗಡೆಯಾದ ಎರಡು ವಾರಗಳ ನಂತರವೇ ಮಾರುಕಟ್ಟೆಗೆ ಬಿಡಬೇಕು.
  • ಕನ್ನಡದ ಪೈರೇಟೆಡ್ ಡಿ.ವಿ.ಡಿ. ಮಾರಾಟ ಮಾಡುವ ವರ್ತಕರಿಗೆ, ಪ್ರತಿ ಡಿ.ವಿ.ಡಿ.ಗೆ ೧೦ ರೂ. ಪ್ರೋತ್ಸಾಹ ಧನ ನೀಡ ಬೇಕು.

ಹಿಂದುಳಿದಿರುವ ಪೈರೇಟಿಂಗ್ ಉದ್ಯಮ: ಪಾಟಿಯಾಲದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ, ಬೂಟಾ ಸಿಂಗ್ ಸ್ಕೂಲ್ ಆಫ್ ಬ್ಯ್ಸುಸಿನೆಸ್ಸಿನ ವಾಣಿಜ್ಯ ಪ್ರಾಧ್ಯಾಪಕ ಡಾ.ಬೇಜಾನ್ ಸಿಂಗ್ ದಾರೂವಾಲ ಅವರ ಪ್ರಕಾರ, ಪೈರೇಟಿಂಗ್ ಉದ್ಯಮದಲ್ಲಿ ಕನ್ನಡ ಅತ್ಯಂತ ಹಿಂದುಳಿದಿದ್ದು, ಡಿ.ವಿ.ಡಿ. ಪೈರೇಟಿಂಗ್ ಕೇವಲ ಒಂದು ಉದಾಹರಣೆ ಅಷ್ಟೆ. "ಕರ್ನಾಟಕ ಸರ್ಕಾರ ಡಿ.ವಿ.ಡಿ. ಪೈರೇಟಿಂಗ್ ಮಾತ್ರ ಪ್ರೋತ್ಸಾಹಿಸಿದರೆ ಸಾಲದು. ಇಡೀ ಪೈರೇಟಿಂಗ್ ಉದ್ಯಮವನ್ನೇ ಪ್ರೋತ್ಸಾಹಿಸಬೇಕು. ಇದು ಚಲನ ಚಿತ್ರಕ್ಕೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಇಡೀ ವ್ಯವಸ್ಥೆಯ ವಿಚಾರ. ಉದಾಹರಣೆಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜೆ.ಕೆ.ರೌಲಿಂಗ್‌ಳ ಹ್ಯಾರಿ ಪಾಟರ್ ಪುಸ್ತಕದ ನಕಲಿ ಕಾಪಿಗಳು ಮಾರಾಟವಾಗುತ್ತಿವೆ. ಆದರೆ, ಎಸ್.ಎಲ್.ಭೈರಪ್ಪನವರ ಆವರಣದ ನಕಲಿ ಕಾಪಿಗಳು ಎಲ್ಲೂ ಕಾಣಸಿಗುವುದೇ ಇಲ್ಲ." ಎಂದ ಡಾ.ದಾರೂವಾಲಾ "ಕರ್ನಾಟಕ ಸರ್ಕಾರ ಡಿ.ವಿ.ಡಿ.ಗೆ ಪ್ರೋತ್ಸಾಹಧನ ನೀಡುವ ವಿಚಾರ ಬಿಟ್ಟು, ಇಡೀ ಪೈರೇಟಿಂಗ್ ಉದ್ಯಮವನ್ನೇ ಅಭಿವೃದ್ದಿ ಪಡಿಸುವ ಬಗೆಗೆ ಗಮನ ಹರಿಸಬೇಕು. ಈ ಉದ್ಯಮದಲ್ಲಿ ಅಪಾರ ಅನುಭವ ಮತ್ತು ಯಶಸ್ಸು ಪಡೆದಿರುವ ಚೈನಾ ದೇಶದ ನಿಪುಣರನ್ನು ಸಂಪರ್ಕಿಸಿ ಪೈರೇಟಿಂಗ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವುದು ಒಳಿತು" ಎಂದರು.

Labels: , ,