ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, July 11, 2007

ಮಜಾವಾಣಿ: ವಿವಾದ - ವಿನೋದ

ಮಜಾವಾಣಿ ಜಾತಿಯ ಬಗೆಗೆ ಭುಗಿಲೆದ್ದ ವಿವಾದ

ಬೆಂಗಳೂರು, ಜುಲೈ ೧೧:
ಬಸವಣ್ಣನವರ ಜಾತಿಯ ಕುರಿತು ಡಾ.ಬಂಜಗೆರೆ ಜಯಪ್ರಕಾಶರ ವಿವಾದಾಸ್ಪದ ಪುಸ್ತಕದ ಬೆನ್ನಲ್ಲೇ ಮತ್ತೊಂದು ಜಾತಿ ವಿವಾದ ಭುಗಿಲೆದ್ದಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಸಂಶೋಧನಾ ಲೇಖನದಲ್ಲಿ, ಇಡೀ ಬ್ರಹ್ಮಾಂಡದ ಅತ್ಯಂತ ಗೌರವಾನ್ವಿತ ಮತ್ತು ಪವಿತ್ರ ಪತ್ರಿಕೆಗೆಳಲ್ಲಿ ಒಂದಾಗಿರುವ ಮಜಾವಾಣಿಯ ಜಾತಿಯ ಬಗೆಗೆ ಅನುಮಾನ, ಅಪಪ್ರಚಾರ ಮತ್ತು ಅವಹೇಳನವನ್ನು ಮಾಡಲಾಗಿದೆ. ಇದರಿಂದ ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಬಳಗ ಬಹಳವಾಗಿ ನೊಂದಿದ್ದು, ಜಗತ್ತಿನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಈ ವಿಷಯದ ಕುರಿತು ಕೆಂಡ ಕಾರಿರುವ ಮಜಾವಾಣಿ ಸಂಪಾದಕರು, "ಡಾ.ಪ್ರತಿಭಾ ನಂದಕುಮಾರ್ ಮಜಾವಾಣಿ ಜಾತಿಯ ಬಗೆಗೆ ಈ ಸಂಶೋಧನಾ ಲೇಖನ ಬರೆಯುವ ಮುನ್ನ ಕನಿಷ್ಠ ಒಮ್ಮೆಯಾದರೂ ನಮ್ಮನ್ನು ಸಂಪರ್ಕಿಸಿಲ್ಲ. ಪತ್ರಿಕೆಗೆ ಮತ್ತು ಪತ್ರಿಕೆಯ ಓದುಗರಿಗೆ ಅವಹೇಳನ ಮಾಡಲೆಂದೇ ಈ ಲೇಖನ ಬರೆಯಲಾಗಿದೆ. ಸರ್ಕಾರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಸಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪ್ರೊ.ನಂದಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು." ಎಂದಿದ್ದಾರೆ.

ಪ್ರತಿಭಾ ನಂದಕುಮಾರ್ ತಮ್ಮ ಲೇಖನದಲ್ಲಿ ಲಂಕೇಶ್ ಪತ್ರಿಕೆ ಮತ್ತು ಮಜಾವಾಣಿ ಎರಡನ್ನೂ ಸೇರಿಸಿ ಒಂದೇ ವಾಕ್ಯ ಬರೆದಿರುವುದು ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಮಜಾವಾಣಿ ಪತ್ರಿಕೆ ಮೊದಲಿನಿಂದಲೂ ಜಾಣತನದ ಕಟ್ಟಾ ವಿರೋಧಿಯಾಗಿದ್ದು, "ಕನ್ನಡದ ಅತ್ಯಂತ ನಿರ್ಜಾಣ ಪತ್ರಿಕೆ" ಎಂದೇ ಹೆಸರಾಗಿದೆ. ವಾಸ್ತವ ಹೀಗಿದ್ದೂ, "ಜಾಣ ಜಾಣೆಯರ ಪತ್ರಿಕೆ" ಮತ್ತು "ನಿರ್ಜಾಣ ಪತ್ರಿಕೆ" ಎರಡನ್ನೂ ಬೇಕೆಂದೇ ಒಂದೇ ವಾಕ್ಯದಲ್ಲಿ ಬಳಸಿ ಒಂದು ಪವಿತ್ರ ಪತ್ರಿಕೆಯ ಜಾತಿಯ ಬಗೆಗೆ ನಂದಕುಮಾರ್ ಸಂದೇಹ ಕಲ್ಪಿಸಿರುವುದು ರಾಜ್ಯದ ಹಲವಾರು ನಿರ್ಜಾಣ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಂಪ ಮಠದ ಗುರುಗಳಿಂದ ಹಲ್ಲೆ: ಮಜಾವಾಣಿ ಜಾತಿಯ ಬಗೆಗಿನ ಲೇಖನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಚರ್ಚೆಯ ಬದಲು ಹೊಡೆದಾಟ ನಡೆದಿರುವ ಸುದ್ದಿ ಹೊರ ಬಿದ್ದಿದೆ. ಸಂಕಿರಣಕ್ಕೆ ವಿಶೇಷ ಆಗಮಿತರಾಗಿದ್ದ ಪವಿತ್ರ ಮಜಾವಾಣಿಯ ಪರಮ ಭಕ್ತರಾದ ಗಾಂಪೇಶಾನಂದ ಸ್ವಾಮಿಗಳು ಸಂಕಿರಣದಲ್ಲಿ ಭಾಗವಹಿಸಿದ್ದ ಇತರರ ಮೇಲೆ ಏಕ ವಚನದಲ್ಲಿ ಕೂಗುತ್ತಾ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Labels:

4 Comments:

Anonymous sritri said...

ಸಂಪಾದಕರ ವಯಸ್ಸನ್ನು ಬಹಿರಂಗ ಪಡಿಸಿದ್ದನ್ನೂ ನಿಮ್ಮ ಪ್ರತಿಭಟನೆಯಲ್ಲಿ ಸೇರಿಸಿಕೊಳ್ಳಿ .:)

July 11, 2007 12:32 PM  
Blogger ಪಬ್ said...

ನನ್ನ ಬ್ಲಾಗನ್ನು ಸೇರಿಸದೆ ಇರುವುದನ್ನೂ ನಿಮ್ಮ ಪ್ರತಿಭಟನೆಯಲ್ಲಿ ಸೇರಿಸಿಕೊಳ್ಳಿ.

July 14, 2007 10:38 AM  
Anonymous ಶೂನ್ಯಸಂಪಾದಕ said...

"ಮಜಾ ದೇವಾ ನಾನು ವಾಣಿಯವನು" ಎಂಬ ಪುಸ್ತಕವೊಂದನ್ನು ನಾನು ಬರೆಯುತ್ತಿರುವೆ. ಇದಕ್ಕೆ ಸಂಬಂಧ ಪಟ್ಟ ಆಕ್ಷೇಪಗಳೇನಾದರೂ ಇದ್ದರೆ ಈಗಲೇ ತಿಳಿಸಿ. ಪುಸ್ತಕ ಪ್ರಕಟವಾದ ನಂತರ ನೀವು ವಿವಾದ ಹುಟ್ಟು ಹಾಕಿದರೆ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಕಷ್ಟವಾಗುತ್ತದೆ.

July 15, 2007 8:08 AM  
Blogger v.v. said...

ಶ್ರೀತ್ರಿಯವರೇ,

ಛೇ! ನಮ್ಮ ಪ್ರತಿಭಟನೆಯ ಒಳ ಗುಟ್ಟನ್ನೇ ರಟ್ಟು ಮಾಡಿಬಿಟ್ಟಿರಲ್ಲಾ?!!
ಮಜಾವಾಣಿ ಸಂಪಾದಕ ವಿವಾಹಿತ ಎಂಬುದನ್ನು ತಿಳಿಸಿಲ್ಲವಲ್ಲಾ...ಸದ್ಯ!!!

ಪಬ್‌ರವರೇ,

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ನಿಮ್ಮನ್ನು ಸಂಪರ್ಕಿಸಿದರೆ ಸಾಕು, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಿಮ್ಮ ಬ್ಲಾಗಿಗೆ 'ಪಬ್'ಲಿಸಿಟಿ ಸಿಗುತ್ತೆ. ಅದೇ ಮಾಹಿತಿ ಮತ್ತು ಅದೇ ಹೆಸರಿನ ಅದೇ ತಪ್ಪು ಸ್ಪೆಲಿಂಗ್ ಒಂದಿಗೆ!

ಶೂನ್ಯ ಸಂಪಾದಕರೇ,

"ನಾನು ವಾಣಿಯವನು" ಎಂಬುದಾಗಿ ಬರೆದಿದ್ದೀರಿ. ನನಗೆ "ವಾಣಿ" ಎಂಬ ಯಾವುದೇ ವ್ಯಕ್ತಿ ತಿಳಿದಿಲ್ಲ. ವಿವಾಹಿತ ಸಂಪಾದಕನೊಬ್ಬನ ಸ್ವ-ಆತ್ಮ ಚಾರಿತ್ರ್ಯವಧೆಮಾಡುವ ಮುನ್ನ ಪೂರಕವಾದ "ಋಜುವಾತು" ಏನಾದರೂ ಸಂಗ್ರಹಿಸಿದ್ದೀರೋ?!

ವಂದನೆಗಳೊಂದಿಗೆ,

ವಿ.ವಿ.

August 04, 2007 11:43 AM  

Post a Comment

Links to this post:

Create a Link

<< Home