ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, July 06, 2007

ಮಜಾವಾಣಿ: ಆರೋಗ್ಯ ವಾಣಿ

ಅನಾರೋಗ್ಯಕರ ಹಾಡುಗಳ ನಿಷೇಧ?!

ಬೆಂಗಳೂರು, ಜುಲೈ ೮: ಮಕ್ಕಳಿಂದ ಹಾಡನ್ನು ಹಾಡಿಸುವಾಗ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವ ಆರ್.ಅಶೋಕ್ ಪೋಷಕರಿಗೆ ಕರೆ ಇತ್ತಿದ್ದಾರೆ.

ಮಕ್ಕಳ ಆರೋಗ್ಯದ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಸಚಿವರು, "ಮಕ್ಕಳ ಮೂಗು ಇನ್ನೂ ಚಿಕ್ಕದಾಗಿರುವುದರಿಂದ ಅವರ ಉಸಿರಾಟದ ಕಡೆಗೆ ಗಮನ ನೀಡುವುದು ಅತ್ಯವಶ್ಯ. ಮಕ್ಕಳಿಂದ ಹಾಡುಗಳನ್ನು ಹಾಡಿಸುವಾಗ ಇದನ್ನು ಎಲ್ಲಾ ಪೋಷಕರೂ ಗಮನದಲ್ಲಿಟ್ಟುಕೊಂಡಿರಬೇಕು" ಎಂದರು.
ಇತ್ತೀಚೆಗೆ ಖ್ಯಾತ ಹಿಂದಿ ಗಾಯಕ ಹಿಮೇಶ್ ರೇಶಮ್ಮಿಯಾ ಹಾಡಿರುವ ಹಾಡುಗಳನ್ನು ಹಾಡಲು ಪ್ರಯತ್ನಿಸಿದ ಹಲವು ಮಕ್ಕಳು ಉಸಿರು ಕಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗಗಳನ್ನು ಪ್ರಸ್ತಾಪಿಸಿದ ಸಚಿವರು, ರೇಶಮ್ಮಿಯಾ ಹಾಡುಗಳನ್ನು ಮಕ್ಕಳು ಹಾಡುವುದನ್ನು ನಿಷೇಧಿಸಲು ಸರ್ಕಾರ ಆಲೋಚಿಸುತ್ತಿರುವುದಾಗಿ ತಿಳಿಸಿದರು.

ಮಕ್ಕಳ ವೈದ್ಯರ ಬಗೆಗೆ ಆತಂಕ:
ಮಕ್ಕಳು ಬೆಳೆದು ದೊಡ್ಡವರಾದರೂ ಮಕ್ಕಳ ವೈದ್ಯರ ವೈದ್ಯಕೀಯ ಅಭ್ಯಾಸದಲ್ಲಿ ಬೆಳವಣಿಗೆ ಇಲ್ಲದಿರುವುದರ ಬಗೆಗೆ ಸಚಿವ ಅಶೋಕ್ ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ. ಮಜಾವಾಣಿಯಲ್ಲಿ ಪ್ರಕಟವಾಗಿರುವ ತನಿಖೆ/ಸಮೀಕ್ಷೆ ಒಂದರ ಪ್ರಕಾರ, ಮಕ್ಕಳು ಬೆಳೆದು ದೊಡ್ಡವರಾದರೂ, ಬಹುತೇಕ ಮಕ್ಕಳ ವೈದ್ಯರು ಮಾತ್ರ ಮಕ್ಕಳ ಚಿಕಿತ್ಸೆಯ ಅಭ್ಯಾಸದಲ್ಲಿಯೇ ತೊಡಗಿರುತ್ತಾರೆ. "ಇದು ಅತ್ಯಂತ ಕಳವಳಕಾರಿ ವಿಷಯ" ಎಂದ ಸಚಿವರು, ಈ ವಿಚಾರವನ್ನು ಹೊರಗೆಳೆದ ಮಜಾವಾಣಿ ಪತ್ರಿಕೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.

Labels:

2 Comments:

Blogger Sudhindra said...

ಮೂಗಿಗೂ, ಗಾಯನಕ್ಕೂ ಹಾಗು ಆರೋಗ್ಯಕ್ಕೂ ಇರುವ ಸಂಬಂಧವನ್ನು ಚೆನ್ನಾಗಿ ವಿವರಿಸಿದ್ದಿರಿ;ಧನ್ಯವಾದಗಳು. ಕೆಲವು ಗಾಯಕರು ಮೂಗಿನಿಂದಲೇ ಹಾಡುವ್ ಆಭ್ಯಾಸ ಮಾಡಿಕೊಂಡಿದ್ದು,ಆ ಸಮಯದಲ್ಲಿ ಕೇಳುಗರಿಗೂ ಉಸಿರು ಕಟ್ಟಿದ ಅನುಭವವಾಗುತ್ತದೆ.

July 11, 2007 11:10 AM  
Blogger v.v. said...

ಸುಧೀಂದ್ರ,

ಮೂಗು, ಗಾಯನ ಮತ್ತು ಆರೋಗ್ಯದ ಕುರಿತು ಮಾನ್ಯ ಸಚಿವರ ಅಭಿಪ್ರಾಯವನ್ನು ಮೆಚ್ಚಿದ್ದೀರಿ. ಸಂತೋಷ. ಅದಕ್ಕಿಂತ ಮುಖ್ಯವಾಗಿ ಅನಾರೋಗ್ಯಕರ ಹಾಡುಗಳು ಗಾಯಕರ ಆರೋಗ್ಯದ ಜೊತೆಗೇ ಕೇಳುಗರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದೆಂಬ ಸಂಶೋಧನೆಯನ್ನೂ ಮಾಡಿದ್ದೀರಿ. ಮಜಾವಾಣಿ ವಾಚಕರ ವಾಣಿ ಇಂತಹ ಉನ್ನತ ಮಟ್ಟದ ಸಂಶೋಧನಾತ್ಮ ಪತ್ರಗಳ ಪ್ರಕಟಣೆಗೆ ಕಾರಣವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ.

ವಂದನೆಗಳೊಂದಿಗೆ,

ವಿ.ವಿ.

July 11, 2007 12:01 PM  

Post a Comment

Links to this post:

Create a Link

<< Home