ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, July 12, 2007

ಮಜಾವಾಣಿ: ಶಿಕ್ಷಣ ವಾಣಿ

ನಿರಕ್ಷರತೆ ತಗ್ಗಿಸಲು ಅಂಡರ್‌ವೇರ್ ಬಳಕೆ ಹೆಚ್ಚಿಸಲು ಕರೆ

ನವ ದೆಹಲಿ, ಜುಲೈ ೧೨: ದೇಶದಲ್ಲಿನ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಒಳ-ಉಡುಪುಗಳ ಪಾತ್ರ ಅತ್ಯಂತ ಮಹತ್ವದ್ದೆಂದು ಸಾರಿರುವ ಕೇಂದ್ರ ಶಿಕ್ಷಣ ಸಚಿವಾಲಯ, ದೇಶದಲ್ಲಿ ಹೆಚ್ಚು ಹೆಚ್ಚು ಜನರು ಒಳ-ಉಡುಪುಗಳನ್ನು ಧರಿಸುವಂತೆ ಕರೆ ನೀಡಿದೆ.

ಭಾರತದಲ್ಲಿ ಶೇ.೪೦ರಷ್ಟು ಜನರು ನಿರಕ್ಷರಸ್ತರಿದ್ದು, ಒಂದು ಅಂದಾಜಿನ ಪ್ರಕಾರ ಶೇ.೨೫ರಷ್ಟು ಮಂದಿ ಯಾವುದೇ ಒಳ ಉಡುಗೆ ತೊಡುವುದಿಲ್ಲವೆಂದು ತಿಳಿದು ಬಂದಿದೆ. ಅಕ್ಷರಸ್ತರ ಸಂಖ್ಯೆಯನ್ನು ಹೆಚ್ಚು ಮಾಡಲು ಸೂಕ್ತ ಪುಸ್ತಕಗಳ ಅವಶ್ಯಕತೆಯಿದ್ದು ಈ ಪುಸ್ತಕಗಳ ಮುದ್ರಣಕ್ಕೆ ಹೆಚ್ಚು ಹೆಚ್ಚು ಕಾಗದವನ್ನು ತಯಾರಿಸುವ ಅನಿವಾರ್ಯತೆ ಎದುರಾಗಿದೆ.

ಒಳ-ಉಡುಪುಗಳೂ ಸೇರಿದಂತೆ ಹಳೆಯ ವಸ್ತ್ರಗಳು ಕಾಗದದ ತಯಾರಿಕೆಯಲ್ಲಿ ಕಚ್ಚಾವಸ್ತುಗಳಾಗಿದ್ದು, ಈ ಒಳ-ಉಡುಪುಗಳ ಹೆಚ್ಚಿನ ಬಳಕೆಯಿಂದ ಕಾಗದದ ತಯಾರಿಕೆಯಲ್ಲಿ, ಪುಸ್ತಕದ ಮುದ್ರಣದಲ್ಲಿ ಮತ್ತು ಅಂತಿಮವಾಗಿ ನಿರಕ್ಷರತೆಯನ್ನು ತಗ್ಗಿಸುವಲ್ಲಿ ಪ್ರಗತಿಯನ್ನು ಸಾಧಿಸಬಹುದೆಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ನಿರಕ್ಷರತೆ ಮತ್ತು ಒಳ-ಉಡುಪುಗಳ ನಡುವೆ ಅತ್ಯಂತ ಮಹತ್ವದ ಸಂಬಂಧವಿದ್ದು, ಇತ್ತೀಚೆಗೆ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು.

Labels: ,

Wednesday, July 11, 2007

ಮಜಾವಾಣಿ: ವಿವಾದ - ವಿನೋದ

ಮಜಾವಾಣಿ ಜಾತಿಯ ಬಗೆಗೆ ಭುಗಿಲೆದ್ದ ವಿವಾದ

ಬೆಂಗಳೂರು, ಜುಲೈ ೧೧:
ಬಸವಣ್ಣನವರ ಜಾತಿಯ ಕುರಿತು ಡಾ.ಬಂಜಗೆರೆ ಜಯಪ್ರಕಾಶರ ವಿವಾದಾಸ್ಪದ ಪುಸ್ತಕದ ಬೆನ್ನಲ್ಲೇ ಮತ್ತೊಂದು ಜಾತಿ ವಿವಾದ ಭುಗಿಲೆದ್ದಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಒಂದು ಸಂಶೋಧನಾ ಲೇಖನದಲ್ಲಿ, ಇಡೀ ಬ್ರಹ್ಮಾಂಡದ ಅತ್ಯಂತ ಗೌರವಾನ್ವಿತ ಮತ್ತು ಪವಿತ್ರ ಪತ್ರಿಕೆಗೆಳಲ್ಲಿ ಒಂದಾಗಿರುವ ಮಜಾವಾಣಿಯ ಜಾತಿಯ ಬಗೆಗೆ ಅನುಮಾನ, ಅಪಪ್ರಚಾರ ಮತ್ತು ಅವಹೇಳನವನ್ನು ಮಾಡಲಾಗಿದೆ. ಇದರಿಂದ ವಿಶ್ವಾದ್ಯಂತ ಇರುವ ಮಜಾವಾಣಿ ಓದುಗರ ಬಳಗ ಬಹಳವಾಗಿ ನೊಂದಿದ್ದು, ಜಗತ್ತಿನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಈ ವಿಷಯದ ಕುರಿತು ಕೆಂಡ ಕಾರಿರುವ ಮಜಾವಾಣಿ ಸಂಪಾದಕರು, "ಡಾ.ಪ್ರತಿಭಾ ನಂದಕುಮಾರ್ ಮಜಾವಾಣಿ ಜಾತಿಯ ಬಗೆಗೆ ಈ ಸಂಶೋಧನಾ ಲೇಖನ ಬರೆಯುವ ಮುನ್ನ ಕನಿಷ್ಠ ಒಮ್ಮೆಯಾದರೂ ನಮ್ಮನ್ನು ಸಂಪರ್ಕಿಸಿಲ್ಲ. ಪತ್ರಿಕೆಗೆ ಮತ್ತು ಪತ್ರಿಕೆಯ ಓದುಗರಿಗೆ ಅವಹೇಳನ ಮಾಡಲೆಂದೇ ಈ ಲೇಖನ ಬರೆಯಲಾಗಿದೆ. ಸರ್ಕಾರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಸಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪ್ರೊ.ನಂದಕುಮಾರ್ ಅವರನ್ನು ಕೂಡಲೇ ಬಂಧಿಸಬೇಕು." ಎಂದಿದ್ದಾರೆ.

ಪ್ರತಿಭಾ ನಂದಕುಮಾರ್ ತಮ್ಮ ಲೇಖನದಲ್ಲಿ ಲಂಕೇಶ್ ಪತ್ರಿಕೆ ಮತ್ತು ಮಜಾವಾಣಿ ಎರಡನ್ನೂ ಸೇರಿಸಿ ಒಂದೇ ವಾಕ್ಯ ಬರೆದಿರುವುದು ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಮಜಾವಾಣಿ ಪತ್ರಿಕೆ ಮೊದಲಿನಿಂದಲೂ ಜಾಣತನದ ಕಟ್ಟಾ ವಿರೋಧಿಯಾಗಿದ್ದು, "ಕನ್ನಡದ ಅತ್ಯಂತ ನಿರ್ಜಾಣ ಪತ್ರಿಕೆ" ಎಂದೇ ಹೆಸರಾಗಿದೆ. ವಾಸ್ತವ ಹೀಗಿದ್ದೂ, "ಜಾಣ ಜಾಣೆಯರ ಪತ್ರಿಕೆ" ಮತ್ತು "ನಿರ್ಜಾಣ ಪತ್ರಿಕೆ" ಎರಡನ್ನೂ ಬೇಕೆಂದೇ ಒಂದೇ ವಾಕ್ಯದಲ್ಲಿ ಬಳಸಿ ಒಂದು ಪವಿತ್ರ ಪತ್ರಿಕೆಯ ಜಾತಿಯ ಬಗೆಗೆ ನಂದಕುಮಾರ್ ಸಂದೇಹ ಕಲ್ಪಿಸಿರುವುದು ರಾಜ್ಯದ ಹಲವಾರು ನಿರ್ಜಾಣ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಂಪ ಮಠದ ಗುರುಗಳಿಂದ ಹಲ್ಲೆ: ಮಜಾವಾಣಿ ಜಾತಿಯ ಬಗೆಗಿನ ಲೇಖನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಚರ್ಚೆಯ ಬದಲು ಹೊಡೆದಾಟ ನಡೆದಿರುವ ಸುದ್ದಿ ಹೊರ ಬಿದ್ದಿದೆ. ಸಂಕಿರಣಕ್ಕೆ ವಿಶೇಷ ಆಗಮಿತರಾಗಿದ್ದ ಪವಿತ್ರ ಮಜಾವಾಣಿಯ ಪರಮ ಭಕ್ತರಾದ ಗಾಂಪೇಶಾನಂದ ಸ್ವಾಮಿಗಳು ಸಂಕಿರಣದಲ್ಲಿ ಭಾಗವಹಿಸಿದ್ದ ಇತರರ ಮೇಲೆ ಏಕ ವಚನದಲ್ಲಿ ಕೂಗುತ್ತಾ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Labels:

Friday, July 06, 2007

ಮಜಾವಾಣಿ: ಆರೋಗ್ಯ ವಾಣಿ

ಅನಾರೋಗ್ಯಕರ ಹಾಡುಗಳ ನಿಷೇಧ?!

ಬೆಂಗಳೂರು, ಜುಲೈ ೮: ಮಕ್ಕಳಿಂದ ಹಾಡನ್ನು ಹಾಡಿಸುವಾಗ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವ ಆರ್.ಅಶೋಕ್ ಪೋಷಕರಿಗೆ ಕರೆ ಇತ್ತಿದ್ದಾರೆ.

ಮಕ್ಕಳ ಆರೋಗ್ಯದ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಸಚಿವರು, "ಮಕ್ಕಳ ಮೂಗು ಇನ್ನೂ ಚಿಕ್ಕದಾಗಿರುವುದರಿಂದ ಅವರ ಉಸಿರಾಟದ ಕಡೆಗೆ ಗಮನ ನೀಡುವುದು ಅತ್ಯವಶ್ಯ. ಮಕ್ಕಳಿಂದ ಹಾಡುಗಳನ್ನು ಹಾಡಿಸುವಾಗ ಇದನ್ನು ಎಲ್ಲಾ ಪೋಷಕರೂ ಗಮನದಲ್ಲಿಟ್ಟುಕೊಂಡಿರಬೇಕು" ಎಂದರು.
ಇತ್ತೀಚೆಗೆ ಖ್ಯಾತ ಹಿಂದಿ ಗಾಯಕ ಹಿಮೇಶ್ ರೇಶಮ್ಮಿಯಾ ಹಾಡಿರುವ ಹಾಡುಗಳನ್ನು ಹಾಡಲು ಪ್ರಯತ್ನಿಸಿದ ಹಲವು ಮಕ್ಕಳು ಉಸಿರು ಕಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗಗಳನ್ನು ಪ್ರಸ್ತಾಪಿಸಿದ ಸಚಿವರು, ರೇಶಮ್ಮಿಯಾ ಹಾಡುಗಳನ್ನು ಮಕ್ಕಳು ಹಾಡುವುದನ್ನು ನಿಷೇಧಿಸಲು ಸರ್ಕಾರ ಆಲೋಚಿಸುತ್ತಿರುವುದಾಗಿ ತಿಳಿಸಿದರು.

ಮಕ್ಕಳ ವೈದ್ಯರ ಬಗೆಗೆ ಆತಂಕ:
ಮಕ್ಕಳು ಬೆಳೆದು ದೊಡ್ಡವರಾದರೂ ಮಕ್ಕಳ ವೈದ್ಯರ ವೈದ್ಯಕೀಯ ಅಭ್ಯಾಸದಲ್ಲಿ ಬೆಳವಣಿಗೆ ಇಲ್ಲದಿರುವುದರ ಬಗೆಗೆ ಸಚಿವ ಅಶೋಕ್ ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ. ಮಜಾವಾಣಿಯಲ್ಲಿ ಪ್ರಕಟವಾಗಿರುವ ತನಿಖೆ/ಸಮೀಕ್ಷೆ ಒಂದರ ಪ್ರಕಾರ, ಮಕ್ಕಳು ಬೆಳೆದು ದೊಡ್ಡವರಾದರೂ, ಬಹುತೇಕ ಮಕ್ಕಳ ವೈದ್ಯರು ಮಾತ್ರ ಮಕ್ಕಳ ಚಿಕಿತ್ಸೆಯ ಅಭ್ಯಾಸದಲ್ಲಿಯೇ ತೊಡಗಿರುತ್ತಾರೆ. "ಇದು ಅತ್ಯಂತ ಕಳವಳಕಾರಿ ವಿಷಯ" ಎಂದ ಸಚಿವರು, ಈ ವಿಚಾರವನ್ನು ಹೊರಗೆಳೆದ ಮಜಾವಾಣಿ ಪತ್ರಿಕೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.

Labels:

Tuesday, July 03, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ನಮಗೂ ಪಾಲು ಕೊಡಿ: ಅ.ಭಾ.ಮ.ಪ್ರೀ.ಸಂ.(ಅ.ರಿ.)

ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಲಿಕ ಡಾ|| ವಿಜಯ್ ಮಲ್ಯ ಅವರು ಏರ್ ಡೆಕ್ಕನ್ ಕಂಪನಿಯನ್ನು ಕೊಂಡ ವಿಷಯವನ್ನು ಕೇಳಿದ ಅ.ಭಾ.ಮ.ಪ್ರೀ.ಸಂ.(ಅ.ರಿ.) (ಅಖಿಲ ಭಾರತ ಮದ್ಯಪಾನ ಪ್ರೀಯರ ಸಂಘ. ಅನ್ ರಿಜಿಸ್ಟರ್ಡ್) ದ ಅಧ್ಯಕ್ಷರೂ ಹಾಗೂ ಕುಡಿತವನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಶ್ರೀ ಮಧುಸೇವನ್ ಅವರು ನಿನ್ನೆ ರಾತ್ರಿ ಗಿರಿನಗರದಲ್ಲಿರುವ ಬಾರೊಂದರಲ್ಲಿ ನಡೆದ ಪತ್ರಿಕಾ(ಪಾನ)ಗೋಷ್ಠಿಯಲ್ಲಿ ಈ ಬೇಡಿಕೆಯನ್ನು ಮಂಡಿಸಿದರು.

ಅವರು ಹೇಳಿದ್ದು - ನಮ್ಮ ಸಂಘದ ಎಲ್ಲಾ ಸದಸ್ಯರೂ ಕೇವಲ ಮಲ್ಯ ಅವರ ಕಂಪನಿಯ ಮದ್ಯವನ್ನೇ ಕುಡಿಯುವುವವರು. ಮಲ್ಯ ಅವರ ಲಾಭದಲ್ಲಿ ಬಹುಪಾಲು ನಮ್ಮ ಸದಸ್ಯರುಗಳ ಕಾಣಿಕೆ ಇದೆ. ನಾವು ಕುಡಿಯುವುದು ಕೇವಲ ಚಟಕ್ಕಾಗಿ ಅಲ್ಲ. ಅದರ ಹಿಂದೆ ಈ ಒಂದು ವ್ಯಾವಹಾರಿಕ ಉದ್ದೇಶವೂ ಇದೆ. ಲೆಕ್ಕದ ಪ್ರಕಾರ ಸಂಘಕ್ಕೆ 30% ಪಾಲು ಬರಬೇಕು. ಮಲ್ಯ ಅವರು ಇದನ್ನು ಗುರುತಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು.

ಮುಂದುವರಿಸಿದ ಮಧುಸೇವನ್ ಅವರು ಹೇಳಿದ್ದು - ಇದಕ್ಕೆ ಮಲ್ಯ ಅವರು ಒಪ್ಪದಿದ್ದರೆ ನಾವು ಅವರಿಗೆ ಪ್ರತಿಸ್ಪರ್ಧಿಯಾಗಲು ಹಿಂಜರಿಯುವುದಿಲ್ಲ. ಗೋಪಿನಾಥ್ ಅವರ ಹತ್ತಿರ ಒಪ್ಪಂದ ಮಾಡಿಕೊಂಡು "ಓಲ್ಡ್ ಮಾಂಕ್ ಏರ್ ಲೈನ್ಸ್" ಅನ್ನು ಪ್ರಾರಂಭಿಸುತ್ತೇವೆ. ಮಲ್ಯ ಅವರಿಗೆ ಒಂದು ತಿಂಗಳು ಸಮಯವನ್ನು ಕೊಟ್ಟಿದ್ದೇವೆ. ಈ ಸಮಯದಲ್ಲಿ ಉತ್ತರ ಬರದಿದ್ದಲ್ಲಿ ನಾವು ಹೊಸ ಕಂಪನಿಯ ವಿವರಗಳನ್ನು ಇದೇ ಸ್ಥಳದಲ್ಲಿ ಪ್ರಕಟಿಸುತ್ತೇವೆ.

(ಮಜಾವಾಣಿಯ ಈ ಸಂಚಿಕೆ ಅತಿಥಿ ಸಂಪಾದಕ/ವರದಿಗಾರರಿಂದ ಮೂಡಿ ಬಂದಿದೆ. ಹಳ್ಳಿಯ ನಡುವೆ ಹರ್ಷ ಚಿತ್ತರಾಗಿದ್ದರೂ ಅನಾಮಿಕರಾಗಿಯೇ ಇರ ಬಯಸುವ ಶ್ರೀಯುತರಿಗೆ ನಮ್ಮ ಅನಂತ ಧನ್ಯವಾದಗಳು)

Labels: , ,