ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 21, 2007

ಮಜಾವಾಣಿ: ಪುಸ್ತಕ ವಿಮರ್ಶೆ

ಆಭರಣ: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ
[ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ನೂತನ ಕಾದಂಬರಿ ವಿವಾದಾಸ್ಪದ ಕೃತಿಯಾಗಿದ್ದು ಕರ್ನಾಟಕದಾದ್ಯಂತ ಅತೀವ ಚರ್ಚೆಗೆ ಕಾರಣವಾಗಿದೆ. ಬಲ ಪಂಥೀಯರು ಈ ಕಾದಂಬರಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರೆ, ಎಡ ಪಂಥೀಯರು ಮೆಚ್ಚದೆ ಕೆಂಡವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವಿವಾದಾಸ್ಪದ ಕೃತಿಯ ಸಾಹಿತ್ಯಕ ಮೌಲ್ಯವನ್ನು ವಸ್ತುನಿಷ್ಠವಾಗಿ ಮತ್ತು ವೈಜ್ಞಾನಿಕವಾಗಿ ತುಲನೆ ಮಾಡುವುದು ಮಜಾವಾಣಿಯಂತಹ ದ್ವಿಪಂಥೀಯ ಪತ್ರಿಕೆಗೆ ಮಾತ್ರ ಸಾಧ್ಯ. ಸಾಧ್ಯತೆಯೊಂದಿಗೇ ಬರುವ ಗುರುತರವಾದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಪತ್ರಿಕೆ, ಭೈರಪ್ಪನವರ ಈ ಪುಸ್ತಕವನ್ನು ವಿಮರ್ಶಿಸುವ ಹೊಣೆಯನ್ನು ಗೋಪಾಲ ಕೃಷ್ಣ ಅವರ ವಿಶಾಲವಾದ ಹಣೆಗೆ ಬರೆಯಿತು.

ಮಜಾವಾಣಿ ಓದುಗರಿಗೆ ಪರಿಚಯವಿರುವಂತೆ, ಗೋಪಾಲ ಕೃಷ್ಣ ನಮ್ಮ ಪತ್ರಿಕೆಯ ವೈಜ್ಞಾನಿಕ ವರದಿಗಾರರು
ಮತ್ತು ಕಳೆದ ಬಾರಿಯ ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಪ್ರಥಮ ಬಹುಮಾನ ಪಡೆದಂತವರು. - ಸಂಪಾದಕ]

ಎಸ್.ಎಲ್.ಭೈರಪ್ಪನವರ ಹೊಸ ಪುಸ್ತಕದ ಹೆಸರಿನಲ್ಲಿಯೇ ತಪ್ಪಿದೆ. ಪುಸ್ತಕದ ಹೆಸರು "ಆಭರಣ" ಎಂದಿರ ಬೇಕಾದದ್ದು "ಆವರಣ" ಎಂದು ಮುದ್ರಿತವಾಗಿದೆ. ಈ ಪುಸ್ತಕ ಹಲವಾರು ಆವೃತ್ತಿಗಳನ್ನು ಈಗಾಗಲೇ ಕಂಡಿದೆ. ಆದರೂ ಈ ಮುದ್ರಣ ದೋಷವನ್ನು ಲೇಖಕರಾಗಲಿ, ಪ್ರಕಾಶಕರಾಗಲಿ, ಮುದ್ರಕರಾಗಲಿ ಕಡೆಗೆ ಓದುಗರಾಗಲಿ ಗಮನಿಸಿಯೇ ಇಲ್ಲ. ಕನ್ನಡ ಸಾಹಿತ್ಯ ಈ ಮಟ್ಟಕ್ಕೆ ಇಳಿದಿರುವುದು ಖಂಡಿತಾ ಖಂಡನೀಯ.

ಈ ಪುಸ್ತಕದ ಕುರಿತು ಮಾತನಾಡುತ್ತಾ ಯು.ಆರ್.ಅನಂತ ಮೂರ್ತಿ "ಭೈರಪ್ಪ ಒಬ್ಬ ಡಿಬೇಟರ್" ಎಂದಿದ್ದಾರೆ. ಅದು ನಿಜ. ಮುದ್ರಣ ದೋಷದಿಂದ "ಆಭರಣ" "ಆವರಣ" ಆಗಿದೆ ಎಂದು ಒಪ್ಪಿಕೊಂಡು ತಿದ್ದುವ ಬದಲು, "ಆವರಣ"ವೇ ಸರಿಯೆಂದು ಭೈರಪ್ಪ ವಾದಿಸುತ್ತಾರೆ. ಅದಕ್ಕೋಸ್ಕ್ರರ ತೆಲುಗು ಚಿತ್ರ ನಾಯಕ ನಾಗಾರ್ಜುನ ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಾರೆ. (ಪುಟ vii ಮತ್ತು viii) ಇದು ತುಂಬಾ ತಪ್ಪು. ಎಲ್ಲರ ಪುಸ್ತಕದಲ್ಲೂ ಮುದ್ರಣ ದೋಷ ಇರುತ್ತದೆ. ಅದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಲೇಖಕರಿಗೆ ಇರಬೇಕು. ತಿದ್ದುಪುಡಿ ಪ್ರಕಟಿಸುವುದನ್ನು ಬಿಟ್ಟು ತಪ್ಪನ್ನು ಸಮರ್ಥಿಸಿಕೊಳ್ಳಲು ತೆಲುಗು ಫಿಲಂ ಸ್ಟಾರ್ ಹೆಸರು ಹೇಳುವುದು ಸರಿಯಲ್ಲ.

ಆಭರಣದ ಕಥೆಯ ಹಂದರ ಬಹಳ ಸರಳ. ಕಥಾನಾಯಕಿ ಆಭರಣ ಪ್ರೇಮಿ. ಅದನ್ನು ಆಕೆಯ ಹೆಸರೇ ತಿಳಿಸುತ್ತದೆ. ಅವಳ ಹೆಸರು ಸರಸ್ವತಿಯಲ್ಲ, ಕಡೆಗೆ ಪಾರ್ವತಿಯೂ ಅಲ್ಲ. ಲಕ್ಷ್ಮಿ! ಅವಳ ಗಂಡನ ಹೆಸರು ಅಮೀರ (ಹಿಂದಿಯಲ್ಲಿ ಶ್ರೀಮಂತ)!! ಸಹಜವಾಗಿಯೇ ಈ ಆಭರಣ ಪ್ರೇಮಿ ಶ್ರೀಮಂತನನ್ನು ಮದುವೆಯಾಗಿರುತ್ತಾಳೆ. ಹೆಸರಿನಿಂದಲೇ ಗುಣವನ್ನು ನಿರೂಪಿಸುವ ಭೈರಪ್ಪನವರ ಕಥನ ತಂತ್ರ ಅನನ್ಯ. (ಆದರೆ, ಇಲ್ಲೂ ಸಹ ಭೈರಪ್ಪನವರ ಫಿಲಂ ಸ್ಟಾರ್ ವ್ಯಸನ ಕಾಣುತ್ತದೆ. ಬೇಕೆಂದೇ ಅಮೀರ್ ಖಾನ್ ಹೆಸರು ಪ್ರಸ್ತಾಪಿಸುತ್ತಾರೆ.)

ಒಮ್ಮೆ ಇಬ್ಬರೂ ಹಂಪಿಗೆ -- ರತ್ನ, ವಜ್ರ, ವೈಢೂರ್ಯ ಖಚಿತ ಆಭರಣಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಂಪಿಗೆ -- ಬರುತ್ತಾರೆ. ಹಂಪಿ ರಸ್ತೆಗಳಲ್ಲಿ ಒಂದೂ ಆಭರಣ ಕಾಣುವುದಿಲ್ಲ. ಅವನ್ನೆಲ್ಲಾ ಯಾರೋ ಒಬ್ಬ ಮುಸ್ಲಿಂ ರಾಜ ದೋಚಿಕೊಂಡು ಹೋಗಿರುವುದು ಅವಳಿಗೆ ತಿಳಿಯುತ್ತದೆ. ಅಮೀರನೂ ಮುಸ್ಲಿಮನೇ ಆದ್ದರಿಂದ ಅವನ ಬಳಿ ಆ ಆಭರಣಗಳು ಇರಬಹುದೆಂದು ಲಕ್ಷ್ಮಿ ಯೋಚಿಸುತ್ತಾಳೆ. ಆದರೆ, ಅವನ ಬಳಿ ಆ ಆಭರಣಗಳು ಇರುತ್ತವೆಯೋ ಇಲ್ಲವೋ, ಅವನಂತೂ ಆಕೆಗೆ ಅವನ್ನು ಕೊಡುವುದಿಲ್ಲ. ಕಾಣೆಯಾಗಿರುವ ಆಭರಣಗಳು ಅವಳನ್ನು ಕಾಡುತ್ತವೆ. ಮನಸ್ಸು ಬೇಸರಿಸುತ್ತದೆ.

ಅಷ್ಟರಲ್ಲಿ, ಲಕ್ಷ್ಮಿಯ ಅಪ್ಪ ಸಾಯುತ್ತಾರೆ. ಲಕ್ಷ್ಮಿ ಅಪ್ಪನ ಮನೆಗೆ ಬರುತ್ತಾಳೆ. ಅಲ್ಲೂ ಯಾವುದೇ ಆಭರಣಗಳಿರುವುದಿಲ್ಲ. ಬದಲಿಗೆ, ರಾಶಿ, ರಾಶಿ ಪುಸ್ತಕಗಳು. ಇಲ್ಲಿ ಭೈರಪ್ಪನವರು ಕತೆಗೆ ಒಂದು ತಿರುವು ನೀಡುತ್ತಾರೆ. ಅಲ್ಲಿರುವ ಪುಸ್ತಕಗಳೆಲ್ಲಾ ಮುಸ್ಲಿಮರ ದಾಳಿಯ ಕುರಿತು ಮತ್ತು ನಾಪತ್ತೆಯಾಗಿರುವ ಆಭರಣಗಳ ಸುಳಿವು ನೀಡ ಬಹುದಾದಂತಹ ಪುಸ್ತಕಗಳು!! ಸಹಜವಾಗಿಯೇ ಲಕ್ಷ್ಮಿ ಈ ಪುಸ್ತಕಗಳನ್ನೆಲ್ಲಾ ಕೂಲಂಕುಶವಾಗಿ ಓದುತ್ತಾಳೆ. ಆ ಪುಸ್ತಕಗಳಲ್ಲಿ ಸಿಕ್ಕ ಸುಳಿವಿನಿಂದ ಆಕೆ ಗಯಾ, ಪ್ರಯಾಗ, ಕಾಶಿ, ಅಲಹಾಬಾದ್ ಹೀಗೆ ಉತ್ತರ ಭಾರತದ ಹಲವಾರು ಸ್ಥಳಗಳಿಗೆ ಆಭರಣದ ಅನ್ವೇಷಣೆಗಾಗಿ ಹೋಗುತ್ತಾಳೆ.

ಅನ್ವೇಷಣೆ ಮುಗಿಸಿ ಆಕೆ ವಾಪಸು ಬರುತ್ತಿದ್ದ ಹಾಗೆ, ಈ ಆಭರಣಗಳ ವಿಷಯ ಪೋಲೀಸರಿಗೆ ತಿಳಿಯುತ್ತದೆ. ಅವರು, ಲಕ್ಷ್ಮಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಅಷ್ಟರಲ್ಲಿಯೇ ಈ ವಿಚಾರ ತಿಳಿದುಕೊಳ್ಳುವ ಅಮೀರ, ಎರಡನೆಯ ಹೀರೋಯಿನ್ ಸಹವಾಸ ಬಿಟ್ಟು ಲಕ್ಷ್ಮಿಯ ಸಹಾಯಕ್ಕೆ ಬರುತ್ತಾನೆ. ಒಟ್ಟಿನಲ್ಲಿ, ಆಭರಣಕ್ಕಾಗಿ ಬೇರಾಗುವ ಲಕ್ಷ್ಮಿ ಮತ್ತು ಅಮೀರರು ಕಡೆಗೆ ಆಭರಣದಿಂದಲೇ ಒಂದಾಗುತ್ತಾರೆ. ಇತಿಹಾಸ ಒಂದು ಚಕ್ರ ಎಂಬುದನ್ನು ಭೈರಪ್ಪನವರು ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಈ ಮೂಲ ಗಂಭೀರ ಕಥೆಗೆ ಕೊಂಚ ಮಟ್ಟಿಗೆ ಕಾಮಿಕ್ ರಿಲೀಫ್ ತರಲು, ಭೈರಪ್ಪನವರು ಪ್ರೊ.ಶಾಸ್ತ್ರಿ ಎಂಬ ಕಾಮಿಕ್ ವಿಲನ್ ಪಾತ್ರ ಸೃಷ್ಟಿಸಿದ್ದಾರೆ. ಈತನಿಗೂ ಆಭರಣಗಳ ಮೇಲೆ ಆಸಕ್ತಿ. ಲಕ್ಷ್ಮಿ ಉತ್ತರ ಭಾರತದಲ್ಲಿ ಅನ್ವೇಷಣಾ ಪ್ರಯಾಣದಲ್ಲಿದ್ದಾಗ ಈತನೂ ಅಲ್ಲಿರುತ್ತಾನೆ. ಮಹಾ ದುಷ್ಟ ವ್ಯಕ್ತಿ. ಘೋ ಮುಖ ವ್ಯಾಘ್ರ. ಕಥೆಯಲ್ಲಿ ಲಕ್ಷ್ಮಿಯ ಅಪ್ಪ ಮತ್ತು ಶಾಸ್ತ್ರಿಯ ಅಪ್ಪ ವಯಸ್ಸಾಗಿ ತೀರಿಕೊಳ್ಳುತ್ತಾರೆ. ಆದರೆ, ಈತ ಎಂತಹ ದುಷ್ಟನೆಂದರೆ, ಭೈರಪ್ಪನವರಿಗೂ ತಿಳಿಯದಂತೆ ಈತನೇ ಅವರಿಬ್ಬರ ಕೊಲೆ ಮಾಡಿರುವ ಸಾಧ್ಯತೆಗಳು ಸಹ ಇವೆ.

ಕಥೆಯ ಒಳಗೆ ಇನ್ನೊಂದು ಕಥೆಯಿದೆ. ಇದರಲ್ಲಿ ಒಬ್ಬ ಯುವ ರಾಜಕುಮಾರ ಮತ್ತು ಆತನ ಪತ್ನಿ ಇರುತ್ತಾರೆ. (ರಾಜಕುಮಾರ ಮತ್ತು ಆತನ ಪತ್ನಿ ಎಂದಮೇಲೆ ಆಭರಣಗಳೂ ಇದ್ದೇ ಇರುತ್ತವೆ. ಹೇಳಬೇಕಾದ್ದೇ ಇಲ್ಲ. ಮುದ್ರಣ ದೋಷ ಒಪ್ಪಿಕೊಳ್ಳಲು ಇಷ್ಟವಿಲ್ಲದ ಭೈರಪ್ಪನವರು ಹೇಳುವುದೂ ಇಲ್ಲ.) ಆತನ ರಾಜ್ಯದ ಮೇಲೆ ಆಭರಣಗಳ ಆಸೆಯಿಂದ ಮುಸ್ಲಿಮ್ ದಂಡುಕೋರನೊಬ್ಬ ದಂಡೆತ್ತಿ ಬರುತ್ತಾನೆ. ಆಭರಣಗಳ ಜೊತೆಗೇ, ರಾಜಕುಮಾರನ ಪುರುಷತ್ವವನ್ನೂ -- ಅಂದರೆ ಪ್ರತಿ ಪುರುಷನ ಅತ್ಯಮೂಲ್ಯ ಆಭರಣವನ್ನೇ -- ದೋಚುತ್ತಾನೆ. ರಾಜಕುಮಾರ ಮತ್ತು ಆತನ ಪತ್ನಿ ಬೇರಾಗುತ್ತಾರೆ. ಇಬ್ಬರೂ ಬೇರೆ ಬೇರೆ ಅಂತಃಪುರಗಳಲ್ಲಿ ಗುಲಾಮರಾಗುತ್ತಾರೆ. ಹಲವು ವರ್ಷಗಳೇ ಕಳೆಯುತ್ತವೆ. ಒಮ್ಮೆ, ರಾಜಕುಮಾರ ಗುಲಾಮನಾಗಿರುವ ಅಂತಃಪುರದ ಒಡತಿ, ಆತನ ಪತ್ನಿ ಗುಲಾಮಳಾಗಿರುವ ಅಂತಃಪುರದ ಒಡತಿಗೆ ಒಂದು ಆಭರಣವನ್ನು, ರಾಜಕುಮಾರನ ಮೂಲಕ ಕಳುಹಿಸುತ್ತಾಳೆ. ರಾಜಕುಮಾರ ಮತ್ತು ಆತನ ಪತ್ನಿ ಮತ್ತೆ ಭೇಟಿಯಾಗುತ್ತಾರೆ. ಕಡೆಗೆ ಒಂದಾಗುತ್ತಾರೆ.

ಹೊರ ಕಥೆಯಂತೆಯೇ, ಒಳ ಕಥೆಯಲ್ಲೂ ಆಭರಣದಿಂದ ಬೇರಾದ ಪತಿ-ಪತ್ನಿಯರು, ಆಭರಣದ ಮೂಲಕವೇ ಒಂದಾಗುತ್ತಾರೆ. ಆದರೆ ಭೈರಪ್ಪನವರು ಮಾತ್ರ ಒಂದು ಸಣ್ಣ ಮುದ್ರಣ ದೋಷವನ್ನು ಒಪ್ಪಿಕೊಳ್ಳಬಾರದೆಂಬ ಛಲದಿಂದ, ಆಭರಣದ ವಿಚಾರವನ್ನು ಮಿನಿಮೈಸ್ ಮಾಡಲು ಇಡೀ ಕಾದಂಬರಿ ಪೂರ್ತಿ ಹೆಣಗುತ್ತಾರೆ. "ಆಭರಣ" ಪದವನ್ನು ಪೂರ್ಣವಾಗಿ ಅವಾಯಿಡ್ ಮಾಡಲು ಹರ ಸಾಹಸ ಪಡುತ್ತಾರೆ. ಏನೇನೋ ಹೇಳುತ್ತಾರೆ. ಹಿಂದು, ಮುಸ್ಲಿಂ, ಕುರಾನ್, ದೇವಸ್ಥಾನ ಇತ್ಯಾದಿ, ಇತ್ಯಾದಿ - ಆಭರಣ ಬಿಟ್ಟು ಉಳಿದೆಲ್ಲವನ್ನೂ! ಆದರೂ ಕೊನೆಗೆ ಪೂರ್ತಿ ಸೋಲುತ್ತಾರೆ. ಕಾದಂಬರಿಯ ನಿಜವಾದ ಹೆಸರು ಆಭರಣ ಎಂದು ಯಾವುದೇ ಅನುಮಾನವಿಲ್ಲದೆ ನಿರೂಪಿತವಾಗುತ್ತದೆ. ಭೈರಪ್ಪ ಒಬ್ಬ "ಡಿಬೇಟರ್" ಇರಬಹುದು ಆದರೆ ಖಂಡಿತಾ "ಒಳ್ಳೇ ಡಿಬೇಟರ್" ಅಲ್ಲ.

ಆಭರಣ ಒಂದು ಪಂಗಡದ ಮನ ನೋಯಿಸುವಂತಹ ಪುಸ್ತಕವೇ? ಸಂಶಯವೇ ಇಲ್ಲ. ಇಡೀ ಪುಸ್ತಕದಲ್ಲಿ ಉತ್ತರ ಭಾರತೀಯರ ಬಗೆಗೆ ಅಸಡ್ಡೆ, ಉಪೇಕ್ಷೆ ಎದ್ದು ಕಾಣುತ್ತದೆ. ಉದಾಹರಣೆ:

ಸೈಕಲ್ ರಿಕ್ಷಾದಲ್ಲಿ ಕುಳಿತು ವಿಶ್ವವಿದ್ಯಾಲಯದ ಅತಿಥಿಗೃಹಕ್ಕೆ ಹೋಗಿ ಕೇಳಿದಾಗ ಮ್ಯಾನೇಜರ್, 'ಹೌದು ಬೆಂಗಳೂರಿನ ಪ್ರೊಫೆಸರ್ ಸಾಸ್ತ್ರೀಜಿ ಸ್ವೀಟ್ ನಂಬರ್ ಎರಡರಲ್ಲಿ ಇದಾರೆ. ಈಗ ವರ್ಕ್‌ಸಾಪಿನಲ್ಲಿದಾರೆ, ಸೋಸಿಯಲ್ ಸೈನ್ಸ್ ಬ್ಲಾಕ್' ಎಂದ. (ಪುಟ ೨೧೪)


ಉತ್ತರ ಭಾರತೀಯರು ಯಾವಾಗಲೂ ಪಾನ್ ಜಗಿಯುತ್ತಾ, ಎಲ್ಲೆಂದರಲ್ಲಿ ಉಗಿಯುವವರು. ಒರಟರು. ಜಗಳಗಂಟರು. ಸುಳ್ಳು ಹೇಳುವವರು. ಮೋಸ ಮಾಡುವವರು. ಲಾಲೂ, ಮುಲಾಯಮ್, ತರಹದವರು. ಇದು ಎಲ್ಲರೂ ಒಪ್ಪುವ ನಿಜ. ಆದರೂ ಅವರನ್ನು ಇನ್ನೂ ಸೈಕಲ್ ರಿಕ್ಷಾ ಬಳಸುವ ಹಿಂದುಳಿದವರು, "ಶ"ಕಾರ ಉಚ್ಚರಿಸಲಾರದವರು ಎಂಬಂತೆ ಭೈರಪ್ಪನವರು ಚಿತ್ರಿಸುವುದು ನಿಜಕ್ಕೂ ಖಂಡನೀಯ. ಉತ್ತರ ಭಾರತದ ವಿಶ್ವವಿದ್ಯಾಲಯದ ಬಗೆಗೆ ಅಷ್ಟೊಂದು ಅಸಡ್ಡೆಯಿಂದ ಬರೆಯುವ ಭೈರಪ್ಪನವರು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೈಕಲ್ ರಿಕ್ಷಾದಲ್ಲಿ ಹೋದಂತೆ ಬರೆಯ ಬಲ್ಲರಾ?
ಕಥನ ತಂತ್ರ: ಕಥೆಯೊಳಗೆ ಮತ್ತೆ ಅದೇ ಕಥೆಯನ್ನು ಹೇಳುವ ಕಥನ ತಂತ್ರದ ಮೂಲಕ ಇತಿಹಾಸದ ಚಕ್ರದೊಳಗೂ ಒಳ ಚಕ್ರ ಇರುತ್ತದೆ ಎಂಬುದನ್ನು ಭೈರಪ್ಪನವರು ಹೇಳುತ್ತಾರೆ. ಇದು ಒಂದು ರೀತಿಯಲ್ಲಿ ರೀ ಇನ್ವೆಂಟಿಂಗ್ ದ ವೀಲ್ ಅಲ್ಲವೇ? ಚಕ್ರದೊಳಗೆ ಇರುವುದು ಒಂದೇ ಚಕ್ರವೇ? ಒಳ ಚಕ್ರದಲ್ಲೂ ಇನ್ನೊಂದು ಚಕ್ರವಿರಲು ಸಾಧ್ಯವಿಲ್ಲವೇ? ಸರಳ ನಿರೂಪಣೆ, ವಾದಗಳಿಗೇ ಮೊರೆ ಹೋಗುವ ಭೈರಪ್ಪ ಇಂತಹ ಅತಿ ಮುಖ್ಯ ಮತ್ತು ಸಂಕೀರ್ಣ ಪ್ರಶ್ನೆಗಳನ್ನು ಕೇಳುವುದೇ ಇಲ್ಲ.

ಇನ್ನು ಕಾದಂಬರಿಯ ಸಾರ್ಥಕತೆಯ ಪ್ರಶ್ನೆ. ಒಂದು ಕಾದಂಬರಿ ಓದಿ ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾದರೆ ಸಾರ್ಥಕವೇ? ಅಸಹ್ಯವಾದವರಿಗೂ ಇಷ್ಟವಾಗುವಂತೆ ಬರೆಯಲು ಸಾಧ್ಯವೇ ಇಲ್ಲವೇ? ಕನಿಷ್ಠ, ಇಷ್ಟವಾದವರಿಗೂ ಅಸಹ್ಯವಾಗುವಂತೆ ಬರೆಯಬಹುದಿತ್ತಲ್ಲವೇ?
[ಮಜಾವಾಣಿಯಿಂದ ಕಲಿಯಬಾರದೇ? - ಸಂಪಾದಕ]

ಆದರೆ, ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಕಾದಂಬರಿ ಓದಿದ ನಂತರವೂ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ: ಲಕ್ಷ್ಮಿ ಪುಸ್ತಕಗಳ ಮಧ್ಯೆ ಅಡಗಿಸಿಟ್ಟಿದ್ದ ಆಭರಣಗಳು ಏನಾದವು?

Labels: , , ,

5 Comments:

Blogger Shrinidhi Hande said...

ವಿಮರ್ಶೆ ಬಹಳ ಚೆನ್ನಾಗಿದೆ. ಕಾದ೦ಬರಿಯ ಶಾಸ್ತ್ರಿಗಳ ಪಾತ್ರ ಅ.ಮೂರ್ತಿಯವರ ನಿಜ ಜೀವನವನ್ನು ಬಹಳಷ್ಟು ಹೋಲುವುದೆ ಅವರ ಅಸಮಾಧಾನಕ್ಕೆ ಕಾರಣ ಎ೦ದು ನ೦ಬಲಾಗದ ಮೂಲಗಳು ತಿಳಿಸಿವೆ...

June 25, 2007 12:28 AM  
Blogger sunaath said...

ಕಾದಂಬರಿಯ ಅಂತರಾರ್ಥವನ್ನು ಪರಿಣತ ವಿಮರ್ಶಕರೇ ತಿಳಿಯಬಲ್ಲರು. ಆಭರಣಗಳ ಶೋಧನೆಯೇ ಈ ಕಾದಂಬರಿಯ ಮೂಲ ಉದ್ದೇಶವಾಗಿರುವದರಿಂದ ಭೈರಪ್ಪನವರ ಈ ಕಾದಂಬರಿಯು ಒಂದು ಪತ್ತೇದಾರಿ ಕಾದಂಬರಿಯಾಗಿರಬಹುದೆ ಎನ್ನುವ ಸಂಶಯ ನನ್ನನ್ನು ಕಾಡತೊಡಗಿದೆ. ಅಂದ ಹಾಗೆ ಮತ್ತೊಬ್ಬ ಪತ್ತೇದಾರಿ ಕಾದಂಬರಿಕಾರರಾದ ಅ.ಮೂರ್ತಿಯವರು ಭೈರಪ್ಪನವರ ಪ್ರಶಂಸೆಯಲ್ಲಿಯೇ ಅವರನ್ನು ಚರ್ಚಾಪಟು ಪತ್ತೇದಾರ ಎಂದಿರುವದು.

June 26, 2007 6:00 AM  
Anonymous sritri said...

"ಆಭರಣ" - ಸಿನಿಮಾ ಪ್ರಿಯೆಯಾದ ನನಗೆ ಇಷ್ಟವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ ಎಂದು ನಿಮ್ಮ ವಿಮರ್ಶೆಯಿಂದ ತಿಳಿಯಿತು. ಕೊಂಡು ಓದುವ ಆಸೆಯಾಗಿದೆ.

ಧನ್ಯವಾದಗಳು.

June 26, 2007 12:35 PM  
Blogger v.v. said...

ಶ್ರೀನಿಧಿಯವರೇ,

ನಿಮ್ಮ ಮೂಲಗಳು ನಾಪತ್ತೆಯಾಗಿರುವ ಆಭರಣದ ವಿಷಯ ಏನಾದರೂ ತಿಳಿಸಿದರೇ?
ದಯವಿಟ್ಟು ತಿಳಿಸಿ.

ಸುನಾತ್ ಅವರೇ,

ಆಭರಣಗಳು ಕೊನೆಗೂ ನಾಪತ್ತೆಯಾಗಿರುವುದರಿಂದ, ಅದನ್ನು ನಾಪತ್ತೇದಾರಿ ಕಾದಂಬರಿ ಎಂದರೆ ನಿಮ್ಮ ಅಕ್ಷೇಪಣೆ ಇಲ್ಲ ತಾನೇ?

ಶ್ರೀತ್ರಿಯವರೇ,

"ಆಭರಣ" ಕಾದಂಬರಿ, ಹಲವು ಪುಸ್ತಕ ಅಂಗಡಿಗಳಲ್ಲಿ ಲಭ್ಯವಿದೆಯಾದರೂ, ನಾವು ನೋಡಿದ ಕಾಪಿಯಲ್ಲೆಲ್ಲಾ ಮುದ್ರಣ ದೋಷ ಎದ್ದು ಕಾಣುತ್ತಿತ್ತು. ಕೊನೆಗೆ ಬೇಜಾರಾಗಿ ಸಪ್ನಾ ಬುಕ್ ಹೌಸಿನಲ್ಲಿ ಕೂತು ಸ್ವತಃ ತಿದ್ದಲು ಪ್ರಯತ್ನಿಸಿದರೆ, ಯಾಕೋ ಆ ಅಂಗಡಿಯವರಿಗೆ ಅದು ಇಷ್ಟ ಆಗಲಿಲ್ಲ.

ವಂದನೆಗಳೊಂದಿಗೆ,

ವಿ.ವಿ.

June 28, 2007 1:48 PM  
Blogger P Kalyan said...

ಛೆ, ಛೆ...ಆವರಣದ ಬಗ್ಗೆ ಯಾವ್ದಾದೋ ವಿಮರ್ಶೆಗಳನ್ನು ಓದಿ ಅರ್ಥವಾಗದೆ ತಲೆಕೆಡಿಸಿಕೊಂಡಿದ್ದೆ. ಈಗ ಆವರಣದ ಕಥೆ ಎಲ್ಲಾ ಸ್ಪಷ್ಟವಾಗಿದೆ. ಬುದ್ಧಿಜೀವಿಗಳಿಗೂ ಅರ್ಥವಾಗದ ಈ ಪ್ರಬುದ್ಧ ವಿಚಾರವನ್ನು ಮಂಡಿಸಿರುವ ಗೋಪಾಲಕೃಷ್ಣರಿಗೆ ಕೃತಜ್ಞತೆಗಳು.

July 16, 2007 12:04 PM  

Post a Comment

<< Home