ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 28, 2007

ಮಜಾವಾಣಿ: ಆರೋಗ್ಯ ವಾಣಿ

ರೋಗಿಗಳೇ ಎಚ್ಚರದಿಂದಿರಿ!

ನವ ದೆಹಲಿ, ಜೂನ್ ೨೮: ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಎಚ್ಚರಿದಿಂದಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರೋಗಿಗಳಿಗೂ ಎಚ್ಚರಿಕೆಯ ಸೂಚನೆ ನೀಡಿದೆ.

ಶಸ್ತ್ರ ಚಿಕಿತ್ಸೆಯ ಮುನ್ನ ಅರಿವಳಿಕೆ ನೀಡಿದಾಗ ಜ್ಞಾನ ತಪ್ಪಿದವರಂತೆ ನಟಿಸಿ, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರನ್ನು ಗಮನಿಸುತ್ತಿರಬೇಕೆಂದು ಆರೋಗ್ಯ ಇಲಾಖೆ ರೋಗಿಗಳಿಗೆ ಕರೆ ನೀಡಿದೆ. ಅದರಲ್ಲೂ ತಮಿಳು ನಾಡಿನಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗುವ ರೋಗಿಗಳು ವಿಶೇಷ ಎಚ್ಚರವಹಿಸಬೇಕೆಂದಿರುವ ಇಲಾಖೆ, ಅಲ್ಲಿನ ರೋಗಿಗಳು ಜ್ಞಾನ ತಪ್ಪಿದವರಂತೆ ನಟಿಸುವುದು ಮಾತ್ರವಲ್ಲದೇ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕನಿಷ್ಠ ಒಂದು ಗೊನೆ ಬಾಳೆಯ ಹಣ್ಣನ್ನು ಪಕ್ಕದಲ್ಲಿ ಇಟ್ಟುಕೊಂಡಿರುವಂತೆ ಎಚ್ಚರಿಸಿದೆ.

ಗಿನೆಸ್ ದಾಖಲೆಗಾಗಿ ಕಳೆದ ವರ್ಷ ತಮಿಳು ನಾಡಿನ ವೈದ್ಯರೊಬ್ಬರು ೨೪ಗಂಟೆಯಲ್ಲಿ ೫೦ ಹರ್ನಿಯಾ ಸರ್ಜರಿ ಮಾಡಿದ್ದು ಹಳೆಯ ಸಂಗತಿಯಾದರೆ, ಇತ್ತೀಚೆಗೆ ಅಲ್ಲಿನ ವೈದ್ಯ ದಂಪತಿಗಳು ತಮ್ಮ ಹದಿನೈದು ವರ್ಷದ ಶಿಶುವಿನಿಂದ ಸಿಸೇರಿಯನ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಇನ್ನೊಬ್ಬ ವೈದ್ಯರು ತಾವು ಸಾಕಿರುವ ಮಂಗನಿಂದ ಮಿದುಳು ಸರ್ಜರಿ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಆತಂಕ ವ್ಯಕ್ತ ಪಡಿಸಿದೆ.

Labels: , ,

Monday, June 25, 2007

ಮಜಾವಾಣಿ: ಪಾಶವೀ ಪ್ರೇಮ

ಸಕ್ರಿಯ ಕಪ್ಪೆ ಎಸೆತದಿಂದ ದೇವೇ ಗೌಡ ನಿವೃತ್ತಿ

ಬೆಂಗಳೂರು, ಜೂನ್ ೨೫: ಇನ್ನು ಮುಂದೆ ತಾವು ಕಪ್ಪೆ ಎಸೆಯುವುದನ್ನು ನಿಲ್ಲಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.

ನಮ್ಮ ಪತ್ರಿಕೆಯ ಅತ್ಯಂತ ಸಮೀಪ ಸ್ಪರ್ಧಿಯಾದ ವಿಜಯ ಕರ್ನಾಟಕ ಪತ್ರಿಕೆ ಗೌಡರ ಕಪ್ಪೆ ಎಸೆಯುವ ಹವ್ಯಾಸದ ಕುರಿತು ವರದಿಮಾಡಿದ್ದು, ಅದನ್ನು ಒಂದು ರಾಜಕೀಯ ತಂತ್ರವೆಂಬಂತೆ ವರದಿ ಮಾಡಿತ್ತು. ಆದರೆ, ಇದನ್ನು ಅಲ್ಲಗೆಳೆದ ಗೌಡರು, "ಇದೊಂದು ಹವ್ಯಾಸ ಅಷ್ಟೇ. ಇದಕ್ಕೆ ರಾಜಕೀಯದ ಬಣ್ಣ ಬೇಡ. ಇತ್ತೀಚೆಗೆ ಕಪ್ಪೆಗಳನ್ನು ಹಿಡಿದಿಡಿಯುವುದೂ ಕಷ್ಟವಾಗುತ್ತಿದೆ. ಜೊತೆಗೆ ಹಾವುಗಳ ಕಾಟ ಬೇರೆ. ಹೀಗಾಗಿ, ಇನ್ನು ಮುಂದೆ ಕಪ್ಪೆ ಎಸೆಯುವುದನ್ನು ನಿಲ್ಲಿಸುತ್ತೇನೆ" ಎಂದಿದ್ದಾರೆ.

Labels: ,

Thursday, June 21, 2007

ಮಜಾವಾಣಿ: ಪುಸ್ತಕ ವಿಮರ್ಶೆ

ಆಭರಣ: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ
[ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ನೂತನ ಕಾದಂಬರಿ ವಿವಾದಾಸ್ಪದ ಕೃತಿಯಾಗಿದ್ದು ಕರ್ನಾಟಕದಾದ್ಯಂತ ಅತೀವ ಚರ್ಚೆಗೆ ಕಾರಣವಾಗಿದೆ. ಬಲ ಪಂಥೀಯರು ಈ ಕಾದಂಬರಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರೆ, ಎಡ ಪಂಥೀಯರು ಮೆಚ್ಚದೆ ಕೆಂಡವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವಿವಾದಾಸ್ಪದ ಕೃತಿಯ ಸಾಹಿತ್ಯಕ ಮೌಲ್ಯವನ್ನು ವಸ್ತುನಿಷ್ಠವಾಗಿ ಮತ್ತು ವೈಜ್ಞಾನಿಕವಾಗಿ ತುಲನೆ ಮಾಡುವುದು ಮಜಾವಾಣಿಯಂತಹ ದ್ವಿಪಂಥೀಯ ಪತ್ರಿಕೆಗೆ ಮಾತ್ರ ಸಾಧ್ಯ. ಸಾಧ್ಯತೆಯೊಂದಿಗೇ ಬರುವ ಗುರುತರವಾದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಪತ್ರಿಕೆ, ಭೈರಪ್ಪನವರ ಈ ಪುಸ್ತಕವನ್ನು ವಿಮರ್ಶಿಸುವ ಹೊಣೆಯನ್ನು ಗೋಪಾಲ ಕೃಷ್ಣ ಅವರ ವಿಶಾಲವಾದ ಹಣೆಗೆ ಬರೆಯಿತು.

ಮಜಾವಾಣಿ ಓದುಗರಿಗೆ ಪರಿಚಯವಿರುವಂತೆ, ಗೋಪಾಲ ಕೃಷ್ಣ ನಮ್ಮ ಪತ್ರಿಕೆಯ ವೈಜ್ಞಾನಿಕ ವರದಿಗಾರರು
ಮತ್ತು ಕಳೆದ ಬಾರಿಯ ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಪ್ರಥಮ ಬಹುಮಾನ ಪಡೆದಂತವರು. - ಸಂಪಾದಕ]

ಎಸ್.ಎಲ್.ಭೈರಪ್ಪನವರ ಹೊಸ ಪುಸ್ತಕದ ಹೆಸರಿನಲ್ಲಿಯೇ ತಪ್ಪಿದೆ. ಪುಸ್ತಕದ ಹೆಸರು "ಆಭರಣ" ಎಂದಿರ ಬೇಕಾದದ್ದು "ಆವರಣ" ಎಂದು ಮುದ್ರಿತವಾಗಿದೆ. ಈ ಪುಸ್ತಕ ಹಲವಾರು ಆವೃತ್ತಿಗಳನ್ನು ಈಗಾಗಲೇ ಕಂಡಿದೆ. ಆದರೂ ಈ ಮುದ್ರಣ ದೋಷವನ್ನು ಲೇಖಕರಾಗಲಿ, ಪ್ರಕಾಶಕರಾಗಲಿ, ಮುದ್ರಕರಾಗಲಿ ಕಡೆಗೆ ಓದುಗರಾಗಲಿ ಗಮನಿಸಿಯೇ ಇಲ್ಲ. ಕನ್ನಡ ಸಾಹಿತ್ಯ ಈ ಮಟ್ಟಕ್ಕೆ ಇಳಿದಿರುವುದು ಖಂಡಿತಾ ಖಂಡನೀಯ.

ಈ ಪುಸ್ತಕದ ಕುರಿತು ಮಾತನಾಡುತ್ತಾ ಯು.ಆರ್.ಅನಂತ ಮೂರ್ತಿ "ಭೈರಪ್ಪ ಒಬ್ಬ ಡಿಬೇಟರ್" ಎಂದಿದ್ದಾರೆ. ಅದು ನಿಜ. ಮುದ್ರಣ ದೋಷದಿಂದ "ಆಭರಣ" "ಆವರಣ" ಆಗಿದೆ ಎಂದು ಒಪ್ಪಿಕೊಂಡು ತಿದ್ದುವ ಬದಲು, "ಆವರಣ"ವೇ ಸರಿಯೆಂದು ಭೈರಪ್ಪ ವಾದಿಸುತ್ತಾರೆ. ಅದಕ್ಕೋಸ್ಕ್ರರ ತೆಲುಗು ಚಿತ್ರ ನಾಯಕ ನಾಗಾರ್ಜುನ ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಾರೆ. (ಪುಟ vii ಮತ್ತು viii) ಇದು ತುಂಬಾ ತಪ್ಪು. ಎಲ್ಲರ ಪುಸ್ತಕದಲ್ಲೂ ಮುದ್ರಣ ದೋಷ ಇರುತ್ತದೆ. ಅದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಲೇಖಕರಿಗೆ ಇರಬೇಕು. ತಿದ್ದುಪುಡಿ ಪ್ರಕಟಿಸುವುದನ್ನು ಬಿಟ್ಟು ತಪ್ಪನ್ನು ಸಮರ್ಥಿಸಿಕೊಳ್ಳಲು ತೆಲುಗು ಫಿಲಂ ಸ್ಟಾರ್ ಹೆಸರು ಹೇಳುವುದು ಸರಿಯಲ್ಲ.

ಆಭರಣದ ಕಥೆಯ ಹಂದರ ಬಹಳ ಸರಳ. ಕಥಾನಾಯಕಿ ಆಭರಣ ಪ್ರೇಮಿ. ಅದನ್ನು ಆಕೆಯ ಹೆಸರೇ ತಿಳಿಸುತ್ತದೆ. ಅವಳ ಹೆಸರು ಸರಸ್ವತಿಯಲ್ಲ, ಕಡೆಗೆ ಪಾರ್ವತಿಯೂ ಅಲ್ಲ. ಲಕ್ಷ್ಮಿ! ಅವಳ ಗಂಡನ ಹೆಸರು ಅಮೀರ (ಹಿಂದಿಯಲ್ಲಿ ಶ್ರೀಮಂತ)!! ಸಹಜವಾಗಿಯೇ ಈ ಆಭರಣ ಪ್ರೇಮಿ ಶ್ರೀಮಂತನನ್ನು ಮದುವೆಯಾಗಿರುತ್ತಾಳೆ. ಹೆಸರಿನಿಂದಲೇ ಗುಣವನ್ನು ನಿರೂಪಿಸುವ ಭೈರಪ್ಪನವರ ಕಥನ ತಂತ್ರ ಅನನ್ಯ. (ಆದರೆ, ಇಲ್ಲೂ ಸಹ ಭೈರಪ್ಪನವರ ಫಿಲಂ ಸ್ಟಾರ್ ವ್ಯಸನ ಕಾಣುತ್ತದೆ. ಬೇಕೆಂದೇ ಅಮೀರ್ ಖಾನ್ ಹೆಸರು ಪ್ರಸ್ತಾಪಿಸುತ್ತಾರೆ.)

ಒಮ್ಮೆ ಇಬ್ಬರೂ ಹಂಪಿಗೆ -- ರತ್ನ, ವಜ್ರ, ವೈಢೂರ್ಯ ಖಚಿತ ಆಭರಣಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಂಪಿಗೆ -- ಬರುತ್ತಾರೆ. ಹಂಪಿ ರಸ್ತೆಗಳಲ್ಲಿ ಒಂದೂ ಆಭರಣ ಕಾಣುವುದಿಲ್ಲ. ಅವನ್ನೆಲ್ಲಾ ಯಾರೋ ಒಬ್ಬ ಮುಸ್ಲಿಂ ರಾಜ ದೋಚಿಕೊಂಡು ಹೋಗಿರುವುದು ಅವಳಿಗೆ ತಿಳಿಯುತ್ತದೆ. ಅಮೀರನೂ ಮುಸ್ಲಿಮನೇ ಆದ್ದರಿಂದ ಅವನ ಬಳಿ ಆ ಆಭರಣಗಳು ಇರಬಹುದೆಂದು ಲಕ್ಷ್ಮಿ ಯೋಚಿಸುತ್ತಾಳೆ. ಆದರೆ, ಅವನ ಬಳಿ ಆ ಆಭರಣಗಳು ಇರುತ್ತವೆಯೋ ಇಲ್ಲವೋ, ಅವನಂತೂ ಆಕೆಗೆ ಅವನ್ನು ಕೊಡುವುದಿಲ್ಲ. ಕಾಣೆಯಾಗಿರುವ ಆಭರಣಗಳು ಅವಳನ್ನು ಕಾಡುತ್ತವೆ. ಮನಸ್ಸು ಬೇಸರಿಸುತ್ತದೆ.

ಅಷ್ಟರಲ್ಲಿ, ಲಕ್ಷ್ಮಿಯ ಅಪ್ಪ ಸಾಯುತ್ತಾರೆ. ಲಕ್ಷ್ಮಿ ಅಪ್ಪನ ಮನೆಗೆ ಬರುತ್ತಾಳೆ. ಅಲ್ಲೂ ಯಾವುದೇ ಆಭರಣಗಳಿರುವುದಿಲ್ಲ. ಬದಲಿಗೆ, ರಾಶಿ, ರಾಶಿ ಪುಸ್ತಕಗಳು. ಇಲ್ಲಿ ಭೈರಪ್ಪನವರು ಕತೆಗೆ ಒಂದು ತಿರುವು ನೀಡುತ್ತಾರೆ. ಅಲ್ಲಿರುವ ಪುಸ್ತಕಗಳೆಲ್ಲಾ ಮುಸ್ಲಿಮರ ದಾಳಿಯ ಕುರಿತು ಮತ್ತು ನಾಪತ್ತೆಯಾಗಿರುವ ಆಭರಣಗಳ ಸುಳಿವು ನೀಡ ಬಹುದಾದಂತಹ ಪುಸ್ತಕಗಳು!! ಸಹಜವಾಗಿಯೇ ಲಕ್ಷ್ಮಿ ಈ ಪುಸ್ತಕಗಳನ್ನೆಲ್ಲಾ ಕೂಲಂಕುಶವಾಗಿ ಓದುತ್ತಾಳೆ. ಆ ಪುಸ್ತಕಗಳಲ್ಲಿ ಸಿಕ್ಕ ಸುಳಿವಿನಿಂದ ಆಕೆ ಗಯಾ, ಪ್ರಯಾಗ, ಕಾಶಿ, ಅಲಹಾಬಾದ್ ಹೀಗೆ ಉತ್ತರ ಭಾರತದ ಹಲವಾರು ಸ್ಥಳಗಳಿಗೆ ಆಭರಣದ ಅನ್ವೇಷಣೆಗಾಗಿ ಹೋಗುತ್ತಾಳೆ.

ಅನ್ವೇಷಣೆ ಮುಗಿಸಿ ಆಕೆ ವಾಪಸು ಬರುತ್ತಿದ್ದ ಹಾಗೆ, ಈ ಆಭರಣಗಳ ವಿಷಯ ಪೋಲೀಸರಿಗೆ ತಿಳಿಯುತ್ತದೆ. ಅವರು, ಲಕ್ಷ್ಮಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಅಷ್ಟರಲ್ಲಿಯೇ ಈ ವಿಚಾರ ತಿಳಿದುಕೊಳ್ಳುವ ಅಮೀರ, ಎರಡನೆಯ ಹೀರೋಯಿನ್ ಸಹವಾಸ ಬಿಟ್ಟು ಲಕ್ಷ್ಮಿಯ ಸಹಾಯಕ್ಕೆ ಬರುತ್ತಾನೆ. ಒಟ್ಟಿನಲ್ಲಿ, ಆಭರಣಕ್ಕಾಗಿ ಬೇರಾಗುವ ಲಕ್ಷ್ಮಿ ಮತ್ತು ಅಮೀರರು ಕಡೆಗೆ ಆಭರಣದಿಂದಲೇ ಒಂದಾಗುತ್ತಾರೆ. ಇತಿಹಾಸ ಒಂದು ಚಕ್ರ ಎಂಬುದನ್ನು ಭೈರಪ್ಪನವರು ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಈ ಮೂಲ ಗಂಭೀರ ಕಥೆಗೆ ಕೊಂಚ ಮಟ್ಟಿಗೆ ಕಾಮಿಕ್ ರಿಲೀಫ್ ತರಲು, ಭೈರಪ್ಪನವರು ಪ್ರೊ.ಶಾಸ್ತ್ರಿ ಎಂಬ ಕಾಮಿಕ್ ವಿಲನ್ ಪಾತ್ರ ಸೃಷ್ಟಿಸಿದ್ದಾರೆ. ಈತನಿಗೂ ಆಭರಣಗಳ ಮೇಲೆ ಆಸಕ್ತಿ. ಲಕ್ಷ್ಮಿ ಉತ್ತರ ಭಾರತದಲ್ಲಿ ಅನ್ವೇಷಣಾ ಪ್ರಯಾಣದಲ್ಲಿದ್ದಾಗ ಈತನೂ ಅಲ್ಲಿರುತ್ತಾನೆ. ಮಹಾ ದುಷ್ಟ ವ್ಯಕ್ತಿ. ಘೋ ಮುಖ ವ್ಯಾಘ್ರ. ಕಥೆಯಲ್ಲಿ ಲಕ್ಷ್ಮಿಯ ಅಪ್ಪ ಮತ್ತು ಶಾಸ್ತ್ರಿಯ ಅಪ್ಪ ವಯಸ್ಸಾಗಿ ತೀರಿಕೊಳ್ಳುತ್ತಾರೆ. ಆದರೆ, ಈತ ಎಂತಹ ದುಷ್ಟನೆಂದರೆ, ಭೈರಪ್ಪನವರಿಗೂ ತಿಳಿಯದಂತೆ ಈತನೇ ಅವರಿಬ್ಬರ ಕೊಲೆ ಮಾಡಿರುವ ಸಾಧ್ಯತೆಗಳು ಸಹ ಇವೆ.

ಕಥೆಯ ಒಳಗೆ ಇನ್ನೊಂದು ಕಥೆಯಿದೆ. ಇದರಲ್ಲಿ ಒಬ್ಬ ಯುವ ರಾಜಕುಮಾರ ಮತ್ತು ಆತನ ಪತ್ನಿ ಇರುತ್ತಾರೆ. (ರಾಜಕುಮಾರ ಮತ್ತು ಆತನ ಪತ್ನಿ ಎಂದಮೇಲೆ ಆಭರಣಗಳೂ ಇದ್ದೇ ಇರುತ್ತವೆ. ಹೇಳಬೇಕಾದ್ದೇ ಇಲ್ಲ. ಮುದ್ರಣ ದೋಷ ಒಪ್ಪಿಕೊಳ್ಳಲು ಇಷ್ಟವಿಲ್ಲದ ಭೈರಪ್ಪನವರು ಹೇಳುವುದೂ ಇಲ್ಲ.) ಆತನ ರಾಜ್ಯದ ಮೇಲೆ ಆಭರಣಗಳ ಆಸೆಯಿಂದ ಮುಸ್ಲಿಮ್ ದಂಡುಕೋರನೊಬ್ಬ ದಂಡೆತ್ತಿ ಬರುತ್ತಾನೆ. ಆಭರಣಗಳ ಜೊತೆಗೇ, ರಾಜಕುಮಾರನ ಪುರುಷತ್ವವನ್ನೂ -- ಅಂದರೆ ಪ್ರತಿ ಪುರುಷನ ಅತ್ಯಮೂಲ್ಯ ಆಭರಣವನ್ನೇ -- ದೋಚುತ್ತಾನೆ. ರಾಜಕುಮಾರ ಮತ್ತು ಆತನ ಪತ್ನಿ ಬೇರಾಗುತ್ತಾರೆ. ಇಬ್ಬರೂ ಬೇರೆ ಬೇರೆ ಅಂತಃಪುರಗಳಲ್ಲಿ ಗುಲಾಮರಾಗುತ್ತಾರೆ. ಹಲವು ವರ್ಷಗಳೇ ಕಳೆಯುತ್ತವೆ. ಒಮ್ಮೆ, ರಾಜಕುಮಾರ ಗುಲಾಮನಾಗಿರುವ ಅಂತಃಪುರದ ಒಡತಿ, ಆತನ ಪತ್ನಿ ಗುಲಾಮಳಾಗಿರುವ ಅಂತಃಪುರದ ಒಡತಿಗೆ ಒಂದು ಆಭರಣವನ್ನು, ರಾಜಕುಮಾರನ ಮೂಲಕ ಕಳುಹಿಸುತ್ತಾಳೆ. ರಾಜಕುಮಾರ ಮತ್ತು ಆತನ ಪತ್ನಿ ಮತ್ತೆ ಭೇಟಿಯಾಗುತ್ತಾರೆ. ಕಡೆಗೆ ಒಂದಾಗುತ್ತಾರೆ.

ಹೊರ ಕಥೆಯಂತೆಯೇ, ಒಳ ಕಥೆಯಲ್ಲೂ ಆಭರಣದಿಂದ ಬೇರಾದ ಪತಿ-ಪತ್ನಿಯರು, ಆಭರಣದ ಮೂಲಕವೇ ಒಂದಾಗುತ್ತಾರೆ. ಆದರೆ ಭೈರಪ್ಪನವರು ಮಾತ್ರ ಒಂದು ಸಣ್ಣ ಮುದ್ರಣ ದೋಷವನ್ನು ಒಪ್ಪಿಕೊಳ್ಳಬಾರದೆಂಬ ಛಲದಿಂದ, ಆಭರಣದ ವಿಚಾರವನ್ನು ಮಿನಿಮೈಸ್ ಮಾಡಲು ಇಡೀ ಕಾದಂಬರಿ ಪೂರ್ತಿ ಹೆಣಗುತ್ತಾರೆ. "ಆಭರಣ" ಪದವನ್ನು ಪೂರ್ಣವಾಗಿ ಅವಾಯಿಡ್ ಮಾಡಲು ಹರ ಸಾಹಸ ಪಡುತ್ತಾರೆ. ಏನೇನೋ ಹೇಳುತ್ತಾರೆ. ಹಿಂದು, ಮುಸ್ಲಿಂ, ಕುರಾನ್, ದೇವಸ್ಥಾನ ಇತ್ಯಾದಿ, ಇತ್ಯಾದಿ - ಆಭರಣ ಬಿಟ್ಟು ಉಳಿದೆಲ್ಲವನ್ನೂ! ಆದರೂ ಕೊನೆಗೆ ಪೂರ್ತಿ ಸೋಲುತ್ತಾರೆ. ಕಾದಂಬರಿಯ ನಿಜವಾದ ಹೆಸರು ಆಭರಣ ಎಂದು ಯಾವುದೇ ಅನುಮಾನವಿಲ್ಲದೆ ನಿರೂಪಿತವಾಗುತ್ತದೆ. ಭೈರಪ್ಪ ಒಬ್ಬ "ಡಿಬೇಟರ್" ಇರಬಹುದು ಆದರೆ ಖಂಡಿತಾ "ಒಳ್ಳೇ ಡಿಬೇಟರ್" ಅಲ್ಲ.

ಆಭರಣ ಒಂದು ಪಂಗಡದ ಮನ ನೋಯಿಸುವಂತಹ ಪುಸ್ತಕವೇ? ಸಂಶಯವೇ ಇಲ್ಲ. ಇಡೀ ಪುಸ್ತಕದಲ್ಲಿ ಉತ್ತರ ಭಾರತೀಯರ ಬಗೆಗೆ ಅಸಡ್ಡೆ, ಉಪೇಕ್ಷೆ ಎದ್ದು ಕಾಣುತ್ತದೆ. ಉದಾಹರಣೆ:

ಸೈಕಲ್ ರಿಕ್ಷಾದಲ್ಲಿ ಕುಳಿತು ವಿಶ್ವವಿದ್ಯಾಲಯದ ಅತಿಥಿಗೃಹಕ್ಕೆ ಹೋಗಿ ಕೇಳಿದಾಗ ಮ್ಯಾನೇಜರ್, 'ಹೌದು ಬೆಂಗಳೂರಿನ ಪ್ರೊಫೆಸರ್ ಸಾಸ್ತ್ರೀಜಿ ಸ್ವೀಟ್ ನಂಬರ್ ಎರಡರಲ್ಲಿ ಇದಾರೆ. ಈಗ ವರ್ಕ್‌ಸಾಪಿನಲ್ಲಿದಾರೆ, ಸೋಸಿಯಲ್ ಸೈನ್ಸ್ ಬ್ಲಾಕ್' ಎಂದ. (ಪುಟ ೨೧೪)


ಉತ್ತರ ಭಾರತೀಯರು ಯಾವಾಗಲೂ ಪಾನ್ ಜಗಿಯುತ್ತಾ, ಎಲ್ಲೆಂದರಲ್ಲಿ ಉಗಿಯುವವರು. ಒರಟರು. ಜಗಳಗಂಟರು. ಸುಳ್ಳು ಹೇಳುವವರು. ಮೋಸ ಮಾಡುವವರು. ಲಾಲೂ, ಮುಲಾಯಮ್, ತರಹದವರು. ಇದು ಎಲ್ಲರೂ ಒಪ್ಪುವ ನಿಜ. ಆದರೂ ಅವರನ್ನು ಇನ್ನೂ ಸೈಕಲ್ ರಿಕ್ಷಾ ಬಳಸುವ ಹಿಂದುಳಿದವರು, "ಶ"ಕಾರ ಉಚ್ಚರಿಸಲಾರದವರು ಎಂಬಂತೆ ಭೈರಪ್ಪನವರು ಚಿತ್ರಿಸುವುದು ನಿಜಕ್ಕೂ ಖಂಡನೀಯ. ಉತ್ತರ ಭಾರತದ ವಿಶ್ವವಿದ್ಯಾಲಯದ ಬಗೆಗೆ ಅಷ್ಟೊಂದು ಅಸಡ್ಡೆಯಿಂದ ಬರೆಯುವ ಭೈರಪ್ಪನವರು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೈಕಲ್ ರಿಕ್ಷಾದಲ್ಲಿ ಹೋದಂತೆ ಬರೆಯ ಬಲ್ಲರಾ?
ಕಥನ ತಂತ್ರ: ಕಥೆಯೊಳಗೆ ಮತ್ತೆ ಅದೇ ಕಥೆಯನ್ನು ಹೇಳುವ ಕಥನ ತಂತ್ರದ ಮೂಲಕ ಇತಿಹಾಸದ ಚಕ್ರದೊಳಗೂ ಒಳ ಚಕ್ರ ಇರುತ್ತದೆ ಎಂಬುದನ್ನು ಭೈರಪ್ಪನವರು ಹೇಳುತ್ತಾರೆ. ಇದು ಒಂದು ರೀತಿಯಲ್ಲಿ ರೀ ಇನ್ವೆಂಟಿಂಗ್ ದ ವೀಲ್ ಅಲ್ಲವೇ? ಚಕ್ರದೊಳಗೆ ಇರುವುದು ಒಂದೇ ಚಕ್ರವೇ? ಒಳ ಚಕ್ರದಲ್ಲೂ ಇನ್ನೊಂದು ಚಕ್ರವಿರಲು ಸಾಧ್ಯವಿಲ್ಲವೇ? ಸರಳ ನಿರೂಪಣೆ, ವಾದಗಳಿಗೇ ಮೊರೆ ಹೋಗುವ ಭೈರಪ್ಪ ಇಂತಹ ಅತಿ ಮುಖ್ಯ ಮತ್ತು ಸಂಕೀರ್ಣ ಪ್ರಶ್ನೆಗಳನ್ನು ಕೇಳುವುದೇ ಇಲ್ಲ.

ಇನ್ನು ಕಾದಂಬರಿಯ ಸಾರ್ಥಕತೆಯ ಪ್ರಶ್ನೆ. ಒಂದು ಕಾದಂಬರಿ ಓದಿ ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾದರೆ ಸಾರ್ಥಕವೇ? ಅಸಹ್ಯವಾದವರಿಗೂ ಇಷ್ಟವಾಗುವಂತೆ ಬರೆಯಲು ಸಾಧ್ಯವೇ ಇಲ್ಲವೇ? ಕನಿಷ್ಠ, ಇಷ್ಟವಾದವರಿಗೂ ಅಸಹ್ಯವಾಗುವಂತೆ ಬರೆಯಬಹುದಿತ್ತಲ್ಲವೇ?
[ಮಜಾವಾಣಿಯಿಂದ ಕಲಿಯಬಾರದೇ? - ಸಂಪಾದಕ]

ಆದರೆ, ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಕಾದಂಬರಿ ಓದಿದ ನಂತರವೂ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ: ಲಕ್ಷ್ಮಿ ಪುಸ್ತಕಗಳ ಮಧ್ಯೆ ಅಡಗಿಸಿಟ್ಟಿದ್ದ ಆಭರಣಗಳು ಏನಾದವು?

Labels: , , ,

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ಇಲ್ಲ - ಸಿ.ಎಂ.

ಬೆಂಗಳೂರು, ಜೂನ್ ೨೦: ನಿನ್ನೆಯಷ್ಟೇ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ ಎಂದಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಇಂದು ಸಾಹಿತಿಗಳ ವಿವಾದಕ್ಕೆ ಸರ್ಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

ರೀಮೇಕ್ ಚಲನಚಿತ್ರಗಳಿಗೂ ಸರ್ಕಾರದ ಸಬ್ಸಿಡಿ ಬೇಡಿರುವ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮುಖ್ಯ ಮಂತ್ರಿಗಳು, ಸಾಹಿತಿಗಳ ವಿವಾದ ಸ್ವಮೇಕ್ ಎಂದು ಒಪ್ಪಿಕೊಂಡರಾದರೂ, "ಸಾಹಿತಿಗಳ ಜಗಳಕ್ಕೆ ಯಾರ್ರೀ ಕೊಡ್ತಾರೆ ಸಬ್ಸಿಡಿ? ಏನು ತಮಾಷೆನಾ?" ಎಂದು ಈ ವಿಷಯ ಪ್ರಶ್ನಿಸಿದ ನಮ್ಮ ವರದಿಗಾರರ ಮೇಲೆ ರೇಗಿದರು.
ಯೋಚನೆ ಮಾಡಬೇಕಾದ ವಿಚಾರ: ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ನೀಡುವ ಬಗ್ಗೆ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಖ್ಯಾತ ಸಾಹಿತ್ಯ ವಿವಾದ ತಜ್ಞ ರವಿ ಬೆಳಗೆರೆಯವರು, "ಮೊದಲನೆಯದಾಗಿ ವಿವಾದ ೧೦೦% ಸ್ವಮೇಕ್. entertainment value ಅಂತೂ ಇದ್ದೇ ಇದೆ. ಜೊತೆಗೆ ಮೆಸೇಜ್ ಸಹ ಇದೆ. ಮೊನ್ನೆ ನಮ್ಮ ಸ್ಕೂಲ್ ಮುಂದೆ ಹುಡುಗ್ರು ಜಗಳ ಆಡ್ತಿದ್ರು. ಆಫೀಸ್‌‍ಗೆ ಕರೆಸಿ, ಏನ್ರೋ ಒಳ್ಳೆ ಕನ್ನಡ ಸಾಹಿತಿಗಳ ತರ ಕಚ್ಚಾಡ್ತೀರಲ್ಲ ಅಂದೆ. ಅಷ್ಟೇ ಸಾಕು, ಜಗಳ ಪೂರ್ತಿ ನಿಲ್ಲಿಸಿದರು. ಸಬ್ಸಿಡಿ ಕೊಡಬೇಕು ಅನ್ನೋದು ಯೋಚನೆ ಮಾಡಬೇಕಾದ ವಿಚಾರ" ಎಂದರು.

Labels: , ,

Wednesday, June 20, 2007

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ - ಮು.ಮಂ.

ಬೆಂಗಳೂರು, ಜೂನ್ ೧೯: ಕನ್ನಡ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ವಿಧಿಸುವ ಸಂಭವವನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ.

ಈ ವಿಷಯದ ಕುರಿತು ಪತ್ರಕರ್ತರೊಡನೆ ಮಾತನಾಡಿದ ಕುಮಾರಸ್ವಾಮಿಯವರು, "ಮನರಂಜನೆ ಒದಗಿಸುವವರ ಮೇಲೆಲ್ಲಾ ಮನರಂಜನಾ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಅದರಲ್ಲೂ ನಿರುದ್ದೇಶವಾಗಿ ಬಿಟ್ಟಿ ಮನರಂಜನೆ ಒದಗಿಸುತ್ತಿರುವವರ ಮೇಲೆ ಯಾವುದೇ ತೆರಿಗೆ ವಿಧಿಸುವುದು ಕಾನೂನಿನ ಪ್ರಕಾರ ಸಾಧ್ಯವೇ ಇಲ್ಲ" ಎಂದಿದ್ದಾರೆ.

ಇತ್ತೀಚೆಗೆ ಕನ್ನಡದ ಹೆಸರಾಂತ ಸಾಹಿತಿಗಳು ಪ್ರತಿದಿನ ಉಚಿತ ಮನರಂಜನೆ ನೀಡುತ್ತಿದ್ದು, ಸಾರ್ವಜನಿಕರಲ್ಲಿ ಅವರ ಮೇಲೆ ಸರ್ಕಾರ ಮನರಂಜನಾ ಶುಲ್ಕ ವಿಧಿಸಬಹುದೆಂಬ ಶಂಕೆ ಮೂಡಿತ್ತು.

Labels: , ,

Sunday, June 17, 2007

ಮಜಾವಾಣಿ: ಅತಿಥಿಗಳ ಸಂಪಾದನೆ

ಡ್ರೈವ್ ಇನ್ ಸಿನೆಮಾ: ಕರಾವಳಿಯಲ್ಲಿ ಕಳವಳ
ಶ್ರೀನಿಧಿ ಹ೦ದೆ, ಕರಾವಳಿ ವಾಹನ-ಮನರಂಜನಾ ವರದಿಗಾರ
ಕುಂದಾಪುರ, ಜೂನ್ ೧೭: ವೇಗ ಮತ್ತು ಅನುಕೂಲಗಳಲ್ಲಿ ಐಷಾರಾಮೀ ಬಸ್ಸುಗಳಿಗೆ ಪೈಪೋಟಿ ನೀಡುತ್ತಿರುವ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ಎಕ್ಸ್‌ಪ್ರೆಸ್ ಬಸ್ಸುಗಳು ಇತ್ತೀಚೆಗೆ ಇನ್ನೂ ‍ಒ೦ದು ಹೆಜ್ಜೆ ಮು೦ದೆ ಹೋಗಿದ್ದು ತಮ್ಮ ಬಸ್ಸಿನ್ನಲ್ಲಿ ಟಿ.ವಿ ಇಟ್ಟು ಸಿನೆಮಾ ತೋರಿಸಲು ಪ್ರಾರ೦ಭಿಸಿವೆ.

ಧೀರ್ಘ ಪ್ರಯಾಣದ ಬಸ್ಸುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಸೌಲಭ್ಯವು ಜಿಲ್ಲೆಯೊಳಗೆ ಓಡಾಡುವ ಸ್ಥಳೀಯ ಬಸ್ಸುಗಳಲ್ಲೂ ಪ್ರಾರ೦ಭವಾಗಿರುವುದು ದೇಶ ಅಭವೃಧ್ಧಿ ಹೊ೦ದುತ್ತಿರುವ ಸ೦ಕೇತವೆಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತೀರ್ಮಾನಿಸಿದೆ.

ವಿಶ್ವಬ್ಯಾಂಕ್ ವರದಿ ಏನೇ ಇದ್ದರೂ, ಕರಾವಳಿ ಜನತೆ ಮಾತ್ರ ಈ ಬೆಳವಣಿಗೆಯಿಂದ ಅಪಾರವಾದ ಮಾನಸಿಕ ತಳಮಳಕ್ಕೆ ಒಳಗಾಗಿದ್ದಾರೆ. ಸರ್ಕಾರ ಈ ವಿಷಯದ ಕುರಿತು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.

ಉದಾಹರಣೆಗೆ, ಕು೦ದಾಪುರ ದಿ೦ದ ಉಡುಪಿಗೆ ೩೬ ಕೀ.ಮೀ ದೂರ. ಉಡುಪಿಯಿ೦ದ-ಮ೦ಗಳೂರಿಗೆ ೬೦ ಕೀ.ಮೀ ದೂರ. ಕು೦ದಾಪುರದಿ೦ದ ಮ೦ಗಳೂರಿಗೆ ಹೋಗಲು ಈ ಬಸ್ಸುಗಳು ಬರೋಬ್ಬರಿ ೨ ಗ೦ಟೆ ಸಮಯ ತೆಗೆದುಕೊಳ್ಳುತ್ತವೆ. ಸಮಸ್ಯೆ ಎ೦ದರೆ ೩ ಗ೦ಟೆ ಸಮಯಾವಧಿಯ ಒ೦ದು ಸಿನೆಮಾ ನೋಡಲು ಪ್ರಯಾಣಿಕರು ಕು೦ದಾಪುರದಲ್ಲಿ ಬಸ್ ಹತ್ತಿ ಮ೦ಗಳೂರಿಗೆ ಹೋಗಿ ಅದೇ ಬಸ್ಸಿನ್ನಲ್ಲಿ ವಾಪಸು ಉಡುಪಿಗೆ ಬರಬೇಕಾಗುತ್ತದೆ.

ಬೇಕಾದ ಸಿನೆಮಾ ಪೂರ್ಣವಾಗಿ ನೋಡಲು, ಬೇಕಿಲ್ಲದ ಪ್ರಯಾಣ ಮಾಡುವ ಅಗತ್ಯ ಒಂದೆಡೆಯಾದರೆ, ಬಸ್ಸುಗಳಲ್ಲಿನ ಮಹಿಳಾ ಮೀಸಲಾತಿ ಸಹ ಕರಾವಳಿಯ ಪುರುಷ ಪ್ರಯಾಣಿಕರ ವಾಹನ-ಮನರಂಜನಾ-ಸ್ವಾತಂತ್ರ್ಯದ ಮೇಲೆ ಅನಗತ್ಯ ಕಡಿವಾಣ ಹೇರಿದೆ. ತೆರೆದ ಕಿಟಕಿ ಮತ್ತಿತರ ಕಾರಣಗಳಿ೦ದಾಗಿ ಸಿನೆಮಾದ ಸ೦ಭಾಷಣೆ ಮೊದಲನೇ ಅಥವಾ ಎರಡನೇ ಸಾಲಿನಲ್ಲಿ ಆಸೀನರಾಗಿದ್ದವರಿಗೆ ಮಾತ್ರ ಲಭ್ಯವಿದ್ದು, ಪ್ರಸ್ತುತ ಜಾರಿಯಲ್ಲಿರುವ ಈ ಎರಡು ಸಾಲುಗಳ ಶೇ.೧೦೦ ಮಹಿಳಾ ಮೀಸಲಾತಿಯಿಂದಾಗಿ ಪುರುಷರಿಗೆ ಸಮಾನ ಅವಕಾಶ ದೊರೆಯದಂತಾಗಿದೆ. ಈ ಸಿನೆಮಾ ಸಂಭಾಷಣಾ ಶ್ರಾವ್ಯಹರಣವನ್ನು ತೀವ್ರವಾಗಿ ವಿರೋಧಿಸಿರುವ ಕರಾವಳಿ ಪುರುಷ ಪ್ರಯಾಣಿಕರ ಒಕ್ಕೂಟ, ಈ ಪುರುಷ ವಿರೋಧಿ ಮೀಸಲಾತಿಯನ್ನು ತಕ್ಷಣವೇ ರದ್ದು ಮಾಡಿ, ಈ ಎರಡೂ ಸಾಲುಗಳನ್ನು (ರಾಹುಲ್) ಗಾಂಧಿಕ್ಲಾಸ್ ಎಂದು ಪರಿಗಣಿಸುವಂತೆ ಒತ್ತಾಯಿಸಿದೆ. (ಪುರುಷರ ಮೇಲಿನ ಈ ದಬ್ಬಾಳಿಕೆಯನ್ನು ಎತ್ತಿ ತೋರುವ ವಿಡಿಯೋ ಡಾಕ್ಯುಮೆಂಟರಿ ನೋಡಲು ಇಲ್ಲಿ ಕ್ಲಿಕ್ಕಿಸಿ.)

ಅದಲ್ಲದೆ ಸ್ಟಾ೦ಡಿ೦ಗ್ ಸೀಟುಗಳಿದ್ದಾಗ ಬಸ್ಸಿನ ಎಡ ಭಾಗದ ಅರ್ಧಕ್ಕರ್ಧ ಪ್ರಯಾಣಿಕರು ಸಿನೆಮಾ ನೊಡುವ ಈ ಸೌಭಾಗ್ಯದಿ೦ದ ವ೦ಚಿತರಾಗುತ್ತಿದ್ದು ಪರಿಹಾರಾರ್ಥವಾಗಿ ಎಡಭಾಗದಲ್ಲಿ ಇನ್ನೊ೦ದು (ಬಲಭಾಗದಲ್ಲಿರುವುದಕ್ಕಿ೦ತ ದೊಡ್ದದು)ಟಿ.ವೀ ಯನ್ನು ಬಸ್ಸು ಮಾಲೀಕರು ಆಳವಡಿಸತಕ್ಕದ್ದು ಎ೦ದು ಆಜ್ಞೆ ಹೊರಡಿಸಲು ಆರ್.ಟೀ.ಓ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನಿಮಿಷಕ್ಕೊ೦ದರ೦ತೆ ಕು೦ದಾಪುರ- ಉಡುಪಿ-ಮ೦ಗಳೂರು ಮಾರ್ಗದ ರಾ.ಹೆ. ೧೭ ರಲ್ಲಿ ಯಮವೇಗದಲ್ಲಿ ಚಲಿಸುವ ಈ ಬಸ್ಸುಗಳು ತಮ್ಮ ವೇಳಾಪಟ್ಟಿಯೊ೦ದಿಗೆ ಆಯಾ ದಿನದ ಸಿನೆಮಾದ ಮಾಹಿತಿಯನ್ನೂ ಮು೦ಚಿತವಾಗಿ ತಿಳಿಸಿದರೆ ಯಾವ ಬಸ್ಸಿನಲ್ಲಿ ಯಾವ ಸಿನೆಮಾ ಬರುತ್ತಿದೆ ಎ೦ದು ನೋಡಿಕೊ೦ಡು ಬಸ್ಸು ಹತ್ತಲು ನಮಗೆ ಅನುಕೂಲವಾಗುತ್ತದೆ ಎ೦ದು ವಾಹನ-ಸಿನೆಮಾಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣಿಗರು ಆಗಾಗ ಮಾತನಾಡಿಕೊಳ್ಳುವ ಡ್ರೈವ್ ಇನ್ ಸಿನೆಮಾ ಎ೦ದರೆ ಇದೆ ಇರಬೇಕು, ಬೆ೦ಗಳೂರಿನ ವೊಲ್ವೊ ಸಿಟಿ ಬಸ್ಸಿನಲ್ಲೂ ಇಲ್ಲದ ಈ ಸೌಲಭ್ಯ ನಮ್ಮ ಊರಿನಲ್ಲಿ ಇರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎ೦ದು ನಗರ ನೋಡಿ ಬ೦ದ ಹಳ್ಳಿಗರು ಷರಾ ಬರೆದಿದ್ದಾರೆ.

[ಶ್ರೀನಿಧಿ ಹ೦ದೆಯವರು ಹಲವಾರು ವಿಧದ ಬಸ್‌ಗಳಲ್ಲಿ ಪ್ರಯಾಣಿಸಿರುವ ಅನುಭವ ಹೊಂದಿದ್ದು, ವಾಹನ-ಮನರಂಜನಾ ವಿಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ಪಡೆದಿದ್ದಾರೆ. ಇವರ ಹಲವಾರು ಲೇಖನಗಳು ಮತ್ತು ಛಾಯಾಚಿತ್ರಗಳು "ಇ-ನಿಧಿ ಸ್ಪೀಕ್ಸ್" ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ವಿಡಿಯೋ ಮತ್ತು ಚಿತ್ರಗಳ ಆಧಾರ ಸಹಿತ ವರದಿ ನೀಡಿರುವ ಶ್ರೀ ಹಂದೆಯವರಿಗೆ ನಮ್ಮ ಕೃತಜ್ಞತೆಗಳು.]

Labels: , , ,

Saturday, June 16, 2007

ಮಜಾವಾಣಿ: ತನಿಖಾ ವರದಿ

ಅಮೆರಿಕದ ಸೇನೆಗೆ ಭಾರತದ ಚಡ್ಡಿ?
ವಾಷಿಂಗ್‌ಟನ್ ಡಿ.ಸಿ., ಜೂನ್ 16: ಇರಾಕಿನಲ್ಲಿ ಅಮೆರಿಕದ ಸೇನೆ ಅನುಭವಿಸುತ್ತಿರುವ ಸೋಲಿಗೆ, ಅಲ್ಲಿನ ಸೆಖೆಯಲ್ಲೂ ಅಮೆರಿಕದ ಸೈನಿಕರು ಪೂರ್ಣ ಪ್ಯಾಂಟ್ ಧರಿಸುತ್ತಿರುವುದೇ ಕಾರಣವೆಂದು ಅರಿತಿರುವ ಅಮೆರಿಕದ ಅಧ್ಯಕ್ಷ ಬುಶ್, ತಕ್ಷಣವೇ ಅಮೆರಿಕನ್ ಸೈನಿಕರಿಗೆ ಖಾಕಿ ಚಡ್ಡಿಗಳನ್ನು ನೀಡುವಂತೆ ಆಜ್ಞೆ ಮಾಡಿದ್ದಾರೆ. ಈ ಖಾಕಿ ಚಡ್ಡಿಗಳನ್ನು ಸರಬರಾಜು ಮಾಡಲು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯನ್ನು ಅಮೆರಿಕದ ರಕ್ಷಣಾ ಸಚಿವಾಲಯ ಆಯ್ಕೆ ಮಾಡಿದ್ದು, ಇನ್ಫೋಸಿಸ್ ಸದ್ಯದಲ್ಲಿಯೇ 5೦೦,೦೦೦ ಖಾಕಿ ಚಡ್ಡಿಗಳನ್ನು ಪೆಂಟಗನ್ನಿಗೆ ರವಾನಿಸಲಿದೆ.


ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿಯವರು ಮತ್ತು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಈ ಕುರಿತು ಅತಿ ಗುಪ್ತ ಒಪ್ಪಂದವೊಂದನ್ನು ಮಾಡಿಕೊಂಡಿರುವರೆನ್ನಲಾಗಿದ್ದು, ಇನ್ಫೋಸಿಸ್ ಸಂಸ್ಥೆ ಇದೇ ಮೊದಲ ಬಾರಿಗೆ ಸಾಫ್ಟ್‌ವೇರಿನಿಂದ ಮಿಲಿಟರಿ ಉಡುಪುಗಳ ವಹಿವಾಟಿಗೆ ಕೈಹಾಕಿದೆ.

ಇತ್ತೀಚೆಗೆ ನ್ಯೂಯಾರ್ಕಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ, ನಾರಾಯಣಮೂರ್ತಿಯವರು ಎಸ್.ಎಲ್.ಭೈರಪ್ಪನವರ ಆವರಣ ಕಾದಂಬರಿಯನ್ನು ಓದುತ್ತಿದ್ದುದು ಈ ರಹಸ್ಯ ಒಪ್ಪಂದ ಬೆಳಕಿಗೆ ಬರಲು ಕಾರಣವಾಗಿದೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ. ಈ ಪುಸ್ತಕವನ್ನು ತನ್ನ ಸೀಕ್ರೆಟ್ ಕೋಡ್ ಬುಕ್ಕಾಗಿ ಬಳಸುತ್ತಿರುವ ಎಲ್ಲ ಸಾಧ್ಯತೆಗಳಿದ್ದು, ಭಾರತದ ಉದ್ಯಮಿಗಳು ಅದನ್ನು ಓದುತ್ತಿರುವುದು ಬುಷ್ ಜೊತೆಗಿನ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ.

ಖ್ಯಾತ ಸಾಹಿತಿ, ಚಿಂತಕ ಮತ್ತು ನಮ್ಮ ಪತ್ರಿಕೆಯ ಮಿಲಿಟರಿ-ಬಂಡವಾಳಷಾಹಿ ತಜ್ಞ ಡಾ.ಯು.ಆರ್.ಅನಂತಮೂರ್ತಿಯವರು ಈ ಅತ್ಯಂತ ಗೋಪ್ಯ ರಹಸ್ಯ ಹೊರಬೀಳಲು ಕಾರಣರಾಗಿದ್ದು, ಆವರಣದ ಕುರಿತಾದ ತಮ್ಮ ಭಾಷಣದಲ್ಲಿ ಉದ್ಯಮಿಗಳ ಮತ್ತು ಬುಷ್ ನಡುವಿನ ಈ ಒಳ ಒಪ್ಪಂದವನ್ನು ಸಾಕ್ಷ್ಯಾಧಾರಸಮೇತ ಬಯಲಿಗೆಳೆದಿದ್ದಾರೆ.

Labels: , , , ,

Sunday, June 03, 2007

ಮಜಾವಾಣಿ: ವಾಣಿಜ್ಯ - ಇತಿಹಾಸ


ಇನ್ನು ಮುಂದೆ ಇತಿಹಾಸದ ಪುನರಾವೃತ್ತಿ ಇಲ್ಲ!
ಬೆಂಗಳೂರು, ಜೂನ್ ೧೧: ಇತಿಹಾಸದ ಪುನರಾವೃತ್ತಿಗಾಗಿ ಕಾಯುತ್ತಿರುವವರಿಗೆ ಒಂದು ಎಚ್ಚರಿಕೆ: ಇತಿಹಾಸ ಮತ್ತೆ ಮತ್ತೆ ಮರುಕಳಿಸುವುದನ್ನು ನಿಲ್ಲಿಸಲಾಗಿದ್ದು, ಇನ್ನು ಮುಂದೆ ಅದರ ಪುನರಾವರ್ತನೆಯಾಗುವುದಿಲ್ಲ.

ಭಾರತೀಯ ಕಾಲಮಾನ ಕ್ರಿ.ಶ. ೨೦೦೭ ಭಾನುವಾರ ಜೂನ್ ೩ ಮಧ್ಯಾಹ್ನ ಮೂರು ಗಂಟೆ ನಲವತ್ತು ಮೂರು ನಿಮಿಷ ೪೭ ಸೆಕೆಂಡಿಗೆ ಸರಿಯಾಗಿ ಇತಿಹಾಸದ ಪುನರಾಗಮನವನ್ನು ಯಶಸ್ವಿಯಾಗಿ ತಡೆ ಹಿಡಿಯಲಾಗಿದ್ದು, ಆ ನಂತರದ ಇತಿಹಾಸ ಹಳೆಯ ಇತಿಹಾಸದಂತೆ ಕಾಣುವುದು ಸಾಧ್ಯವೇ ಇಲ್ಲ. ಹಾಗೇನಾದರೂ ಒಂದು ವೇಳೆ, ಇತಿಹಾಸ ಮತ್ತೆ ಮರುಕಳಿಸುತ್ತಿರುವಂತೆ ಕಂಡು ಬಂದರೆ, ಅದು ಹಳೆಯ ಅಥವಾ ನಕಲಿ ಆವೃತ್ತಿಯಾಗಿರುವ ಸಂಭವವಿದ್ದು ಸಾರ್ವಜನಿಕರು ತಕ್ಷಣವೇ ಹತ್ತಿರದ ಸೂಕ್ತ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಘೋಷಿಸಲಾಗಿದೆ.

Labels:

ಮಜಾವಾಣಿ: ಶಿಕ್ಷಣ ವಾಣಿ

ವಿಜ್ಞಾನಿಗಳ ಚಿತ್ರದಿಂದ ಪ್ರಯೋಜನವಿಲ್ಲ!
ಪಾಟಿಯಾಲ, ಫೆಬ್ ೧೨: ವಿಜ್ಞಾನಿಗಳ ಭಾವಚಿತ್ರ ನೋಡುವುದರಿಂದಲೇ ವಿಜ್ಞಾನದ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ವೈಜ್ಞಾನಿಕ ಶಿಕ್ಷಣ ಪರಿಣಿತರು ಮೂರು ವರ್ಷಗಳ ಸುಧೀರ್ಘ ಅಧ್ಯಯನದ ಮೂಲಕ ಈ ವಿಚಾರವನ್ನು ಬೆಳಕಿಗೆ ತಂದಿದ್ದಾರೆ.
ಗ್ಯಾನಿ ಜೈಲ್ ಸಿಂಗ್ ವಿ.ವಿ.ಯ ೨೭೯ ಮಂದಿ ಬಿ.ಎಸ್.ಸಿ. ವಿದ್ಯಾರ್ಥಿಗಳು ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ವಿಶ್ವ ವಿದ್ಯಾಲಯದ ಹಾಸ್ಟೆಲಿನಲ್ಲಿ ವಸತಿ ಪಡೆದಿರುವ ಈ ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಐನ್‍ಸ್ಟೈನ್, ಜಗದೀಶ್ ಚಂದ್ರ ಬೋಸ್, ಸಿ.ವಿ.ರಾಮನ್ ಮುಂತಾದ ಮಹಾನ್ ವಿಜ್ಞಾನಿಗಳ ಭಾವಚಿತ್ರಗಳನ್ನು ಪ್ರತಿ ಗೋಡೆಯ ಮೇಲೆಯೂ ತೂಗುಹಾಕಲಾಗಿತ್ತು ಮತ್ತು ಮೂರು ವರ್ಷಗಳ ಕಾಲ ಈ ವಿದ್ಯಾರ್ಥಿಗಳಿಗೆ ವಿಜ್ಞಾನದ ಯಾವುದೇ ವಿಷಯದ ಕುರಿತೂ ಕಾಲೇಜಿನಲ್ಲಿ ಬೋಧನೆ ಮಾಡಲಿಲ್ಲ. ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ವಿಜ್ಞಾನದ ಬಗೆಗಿನ ಅರಿವನ್ನು ಪರೀಕ್ಷಿಸಲಾಯಿತು. ಆಶ್ಚರ್ಯವೆಂಬಂತೇ, ಪ್ರತಿ ವರ್ಷವೂ ವಿಜ್ಞಾನದ ಅರಿವು ಕಡಿಮೆಯಾಯಿತೇ ಹೊರತು ಹೆಚ್ಚಾಗಲೇ ಇಲ್ಲ.
ಕ್ರಿಯೆಟಿವಿಟಿ ಮೇಲೆ ಪರಿಣಾಮ?: ವಿಜ್ಞಾನಿಗಳ ಭಾವಚಿತ್ರದಿಂದ ವಿಜ್ಞಾನದ ಕಲಿಕೆಯ ಮೇಲೆ ಅಂತಹ ಪ್ರಗತಿ ಕಾಣಲಿಲ್ಲವಾದರೂ, ವಿದ್ಯಾರ್ಥಿಗಳ ಕ್ರಿಯೆಟಿವಿಟಿ ಮೇಲೆ ಕೊಂಚ ಮಟ್ಟಿನ ಪರಿಣಾಮ ಬೀರಿದಂತಿದೆ. ಈ ಮಹತ್ವದ ಅಧ್ಯಯನದ ಕುರಿತು ವಿವರಗಳನ್ನು ನೀಡಿದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ಡೀನ್ ಡಾ.ಬೇಜಾನ್ ಸಿಂಗ್ ದಾರೂವಾಲರವರು, "ಕೊಠಡಿಗಳಲ್ಲಿ ತೂಗುಹಾಕಿದ್ದ ವಿಜ್ಞಾನಿಗಳ ಚಿತ್ರಗಳಲ್ಲಿ ಹಲವಾರು ಬದಲಾವಣೆ ಕಂಡು ಬಂದವು. ಉದಾಹರಣೆಗೆ, ಹಲವು ಕೊಠಡಿಗಳಲ್ಲಿ ಐನ್‍ಸ್ಟೈನ್‌ಗೆ ಗಡ್ಡ, ಬಾಯಲ್ಲಿ ಸಿಗರೇಟ್ ಮತ್ತು ಕಣ್ಣು ಸುತ್ತಲೂ ಕಪ್ಪು ಕನ್ನಡಕ ಕಂಡು ಬಂದವು. ಕೆಲವು ಚಿತ್ರಗಳಲ್ಲಂತೂ ಈ ಬದಲಾವಣೆಗಳು ಬಹಳ ಸಹಜವಾಗಿ ಚಿತ್ರಿತವಾಗಿವೆ. ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೆಚ್ಚು ಕ್ರಿಯೇಟೀವ್ ಆದಂತಿದೆ. ಇದು ವಿಜ್ಞಾನಿಗಳ ಚಿತ್ರದಿಂದ ಉಂಟಾದ ಪರಿಣಾಮವೋ ಅಲ್ಲವೋ ಎಂಬುದರ ಸತ್ಯಾಸತ್ಯತೆಯನ್ನು ತಿಳಿಯಲು ಮತ್ತಷ್ಟು ಅಧ್ಯಯನ ನಡೆಸಬೇಕಾಗಿದೆ" ಎಂದರು.
ವಿದ್ಯಾರ್ಥಿಗಳ ಸಂತಸ: ಈ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಅಂತಿಮ ಬಿ.ಎಸ್.ಸಿ. ವಿದ್ಯಾರ್ಥಿನಿ ಅಮೃತಾ ಸಿಂಗ್, "ಇದೊಂದು ಹೆಮ್ಮೆಯ ವಿಷಯ. ಶುರೂಲಿ ಇಟ್ ವಾಸ್ ಅ ಬಿಟ್ ಡಿಫಿಕಲ್ಟ್. ಐ ಆಮ್ ಲೈಕ್ ದ ಬಿಗ್ಗೆಸ್ಟ್ ಫ್ಯಾನ್ ಆಫ್ ಅಭಿಷೇಕ್. ಅಭಿಷೇಕ್ ಪೋಸ್ಟರ್ ಬದಲು ಐರನ್‍ಸ್ಟೈಲ್ ಪೋಸ್ಟರ್ ಇದ್ದಿದ್ದು ನಂಗಂತೂ ನೋಡಕ್ಕೇ ಆಗ್ತಾ ಇರ್ಲಿಲ್ಲ. ಬಟ್ ಲೇಟರ್ ಆನ್, ಆ ತಾತಾನೂ ಒಂ ತರಾ ಕ್ಯೂಟ್ ಅನ್ಸಕ್ಕೆ ಶುರು ಆಯಿತು. ಅದೂ ಅಲ್ದೇ ಎಲ್ರೂ ರಿಲೇಟಿವ್ಸ್ ಅಂತ ಕಂಡು ಹಿಡಿದು ವರ್ಲ್ಡ್ ಪೀಸ್‌ಗೋಸ್ಕರ ನೊಬೆಲ್ ಪ್ರೈಜ್ ಕೂಡ ತಗೊಂಡವನು ಅವನು. ಒಟ್ನಲ್ಲಿ ಇಟ್ ವಾಸ್ ಅ ಗ್ರೇಟ್ ಎಕ್ಸ್‌ಪೀರಿಯೆನ್ಸ್" ಎಂದರು.

Labels:

ಮಜಾವಾಣಿ: ಅತಿಥಿಗಳ ಸಂಪಾದನೆ

ಹೆಲ್ಮೆಟ್ ಕಡ್ಡಾಯದಿಂದ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ!!
ಮಜಾವಾಣಿ ವಿಶೇಷ ವರದಿ
ಬೆಂಗಳೂರು ಮೇ 12: ಹೆಲ್ಮೆಟ್ ಕಡ್ಡಾಯದಿಂದ ಕಂಗಾಲಾಗಿರುವ ಅ. ಭಾ. ರೋ. ರೋ. ಸಂ. (ಅ.ರಿ.) (ಅಖಿಲ ಭಾರತ ರೋಡ್ ರೋಮಿಯೋಗಳ ಸಂಘ. ಅನ್ ರಿಜಿಸ್ಟರ್ಡ್.) ದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮನ್ಮಥಕುಮಾರ್ ಅವರು ನಿನ್ನೆ ಪತ್ರಿಕಾಗೊಷ್ಠಿಯಲ್ಲಿ ಈ ಕಳವಳಕಾರಿ ವಿಚಾರವನ್ನು ನಮ್ಮ ಬಾತ್ಮೀದಾರರಿಗೆ ತಿಳಿಸಿದರು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಮಜಾವಾಣಿ ವರದಿಗಾರ ಹೊರಟಾಗ ಕೆಲವೊಂದು ಆಘಾತಕಾರಿ ವಿಷಯಗಳು ತಿಳಿಯಲ್ಪಟ್ಟಿವೆ.

ಹೆಲ್ಮೆಟ್ ಕಡ್ಡಾಯದ ದೆಸೆಯಿಂದ ಕಾಲೇಜು ಹುಡುಗಿಯರು ಹೆಲ್ಮೆಟ್ ಅನ್ನು ಯಾವಾಗಲೂ ಧರಿಸಿರುವುದರಿಂದ, ಅ. ಭಾ. ರೋ. ರೋ. ಸಂ. (ಅ.ರಿ.) ಸದಸ್ಯರುಗಳಿಗೆ ಆ ಹುಡುಗಿಯರ ಮುಖ ನೋಡಲು ಕಷ್ಟವಾಗುತ್ತಿದ್ದು, ಇದರಿಂದ ಅವರುಗಳು ತುಂಬಾ ನಿರಾಶರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ ಕೆಲವರು ಕಷ್ಟ ಪಟ್ಟು ಇಣುಕಿ ನೋಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ ಎಂಬ ವಿಚಾರವೂ ತಿಳಿದುಬಂದಿದೆ.

ಮುಂದುವರಿಸಿದ ಮನ್ಮಥಕುಮಾರ್ ಅವರು ಹೇಳಿದ್ದು "ಸರ್ಕಾರ ಹೆಲ್ಮೆಟ್ ಕಡ್ಡಾಯವನ್ನು ತೆಗೆಯದಿದ್ದರೆ ನಮ್ಮ ಸದಸ್ಯರಿಗೆ ಈಗಾಗಲೇ ಹಲವಾರು ಕಷ್ಟಗಳು ಕಾಡುತ್ತಿದ್ದು, ಹೆಲ್ಮೆಟ್ ಕಡ್ಡಾಯ ಈಗ ಪ್ರಾಣಾಂತಿಕ ಹೊಡೆತ ನೀಡಿದೆ. ನಮ್ಮ ಹಲವಾರು ಸದಸ್ಯರುಗಳಿಗೆ ದಿವಸಕ್ಕೆ 4-5 ಹುಡುಗಿಯರ ಮುಖ ನೋಡದಿದ್ದರೆ ಊಟ ಸೇರುವುದುಲ್ಲ. ನಿದ್ದೆ ಬರುವುದಿಲ್ಲ. ಹೀಗಿರುವಾಗ ಹೆಲ್ಮೆಟ್ ಕಡ್ಡಾಯದಿಂದ 1 ಹುಡುಗಿಯ ಮುಖ ನೋಡಲೂ ಕಷ್ಟವಾಗುತ್ತಿದೆ, ಅವರೆಲ್ಲಾ ಈಗ ಆಸ್ಪತ್ರೆ ಸೇರುವ ಪರಿಸ್ಥಿತಿಯಾಗಿದೆ. ಅದರಿಂದ ಸರ್ಕಾರ ಈ ಕಾನೂನನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಬೇಕು.ಇಲ್ಲದ್ದಿದ್ದರೆ ರಾಜ್ಯಾದ್ಯಂತ ಉಗ್ರ ಚಳುವಳಿಯನ್ನು ಪ್ರಾರಂಭಿಸುತ್ತೇವೆ!".

ಮಜಾವಾಣಿಯ ಸಾಮಾಜಿಕ ಕಳಕಳಿಯಿರುವ ಈ ವರದಿಗಾರ ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿ ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾನೆ. ಹೆಣ್ಣುಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೂ ಈ ಚಿತ್ರದಂತಿರುವ ಹೆಲ್ಮೆಟ್ ಅನ್ನು ಮಾತ್ರ ಧರಿಸಬೇಕೆಂದು ಕಾನೂನು ಮಾಡಬೇಕು ಎಂದು ಈ ಮೂಲಕ ಮಜಾವಾಣಿಯು ಸರ್ಕಾರವನ್ನು ಒತ್ತಾಯಿಸುತ್ತದೆ. ಇದಕ್ಕೆ ಅ. ಭಾ. ರೋ. ರೋ. ಸಂ. (ಅ.ರಿ.) ದ ಬೆಂಬಲವೂ ಇದೆ ಎಂದು ತಿಳಿದುಬಂದಿದೆ.

(ಮಜಾವಾಣಿಯ ಈ ಸಂಚಿಕೆ ಅತಿಥಿ ಸಂಪಾದಕ/ವರದಿಗಾರರಿಂದ ಮೂಡಿ ಬಂದಿದೆ. ಹಳ್ಳಿಯ ನಡುವೆ ಹರ್ಷ ಚಿತ್ತರಾಗಿದ್ದರೂ ಅನಾಮಿಕರಾಗಿಯೇ ಇರ ಬಯಸುವ ಶ್ರೀಯುತರಿಗೆ ನಮ್ಮ ಅನಂತ ಧನ್ಯವಾದಗಳು)

Labels: , ,