ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, March 12, 2007

ಮಜಾವಾಣಿ: ವಿಶೇಷ ವರದಿ

"ಫ್ರೀ ಫ್ರೀ ಅಂಬಿ!"

ಬೆಂಗಳೂರು, ಮಾರ್ಚ್ ೧೧: ನೆತ್ತಿಯನ್ನು ಸುಟ್ಟು ಕರಿಕಲು ಮಾಡುವಂತಹ ರಣ ಬಿಸಿಲು. ಏಪ್ರಿಲ್ ಇನ್ನೂ ಬಂದಿರದಿದ್ದರೂ, ಸೂರ್ಯನ ಕಬಂಧ ಬಾಹುಗಳು ಮಾತ್ರ ಭಸ್ಮಾಸುರನ ಕರಗಳಂತೆ ಇಡೀ ಬೆಂಗಳೂರು ನಗರದ ಮೇಲೆ ಈಗಾಗಲೇ ವ್ಯಾಪಿಸಿವೆ.

ಇಂತಹ ರಣ ಬಿಸಿಲಿನ ಮಟ ಮಟ ಮಧ್ಯಾಹ್ನದಲ್ಲಿ ಗಾಂಧಿ ಪ್ರತಿಮೆಯ ಮುಂದೆ ನಿಂತಿದ್ದವರು ಒಂಬತ್ತು ಮಂದಿ. ಅವರ ಹಿಡಿದಿದ್ದ ಫಲಕಗಳಲ್ಲಿದ್ದದ್ದು ಒಂದೇ ಘೋಷಣೆ: "ಅಂಬಿಗೆ ಬೇಡ ಕಂಬಿ!"; ಬಾಯಲ್ಲಿದ್ದಿದ್ದು ಒಂದೇ ಮಂತ್ರ: "ಫ್ರೀ, ಫ್ರೀ ಅಂಬಿ!".

ಬೆಂಗಳೂರಿಗಾಗಲೀ, ಗಾಂಧಿ ಪ್ರತಿಮೆಗಾಗಲೀ ಇಂತಹ ಪ್ರತಿಭಟನೆ ಹೊಸದೇನೂ ಅಲ್ಲ. ಆದರೆ, ಇಂದಿನ ಪ್ರತಿಭಟನೆಯಲ್ಲಿ ಒಂದು ಹೊಸತನ ಇತ್ತು; ಲವಲವಿಕೆ ಇತ್ತು; ತಾರುಣ್ಯ ಇತ್ತು; ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಇತ್ತು.

ಮಂಡ್ಯದ ಸಂಸದ ಅಂಬರೀಷ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಖ್ಯಾತ ಫ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಏರ್ಪಡಿಸಿದ್ದ ಪ್ರತಿಭಟನೆ ಅದು. ಭಾಗವಹಿಸುತ್ತಿದ್ದವರು ನಾಡಿನ ಹೆಸರಾಂತ ಚಿತ್ರತಾರೆಯರು, ರೂಪದರ್ಶಿಗಳು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಕೆ.ಎಫ್.ಸಿ. ವಿರುದ್ಧ/ಕೋಳಿಗಳ ಪರ ಪ್ರತಿಭಟನೆ ಮಾಡಿದ ಅನುಭವ ಇತ್ತಾದರೂ, ಭಾರತೀಯ ರಾಜಕೀಯ ಪ್ರಸಂಗದಲ್ಲಿ, ಮನುಷ್ಯನ ಪರವಾಗಿ ಪ್ರತಿಭಟನೆ ಇದೇ ಮೊದಲು.

ಕಳೆದ ವಾರವಷ್ಟೇ ಪ್ಯಾರಿಸಿನಲ್ಲಿ ಖರೀದಿಸಿದ್ದ ಅರ್ಮಾನಿ ತಿಳಿ ಬಾದಾಮಿ ಬಣ್ಣದ ಖಾದಿ ಪ್ಯಾಂಟ್ ಮತ್ತು ಷರ್ಟ್ ಧರಿಸಿ, ಕಪ್ಪು ಕನ್ನಡಕ ತೊಟ್ಟು, ಒಂದು ಕೈಯಲ್ಲಿ ಫಲಕ, ಇನ್ನೊಂದರಲ್ಲಿ ಐಸ್ ಕೋಲ್ಡ್ ಪೆರಿಯೇ ನೀರಿನ ಬಾಟಲ್ ಹಿಡಿದಿದ್ದ ಜಾನ್ ಅಬ್ರಹಾಮ್ "ದಿಸ್ ಈಸ್ ರಿಯಲಿ ನ್ಯೂ ಟು ಮಿ. ಆದರೆ, ಅನ್ಯಾಯದ ವಿರುದ್ಧ ಹೋರಾಡಲೇ ಬೇಕು. ಇಂದು ಅಂಬಿಗೆ ಆಗಿರುವ ಅನ್ಯಾಯ, ನಾಳೆ ನಮಗೂ ಆಗಬಹುದು. ಕಾಮನ್ ಪೀಪಲ್ ಥಿಂಕ್ ದಟ್ ನಮ್ಮಂತಹ ಸುಂದರ ಜನರು ಡೋಂಟ್ ಕೇರ್ ಅಬೌಟ್ ಹ್ಯೂಮನ್ ಬೀಯಿಂಗ್ಸ್. ಆದರೆ, ದಟ್ಸ್ ನಾಟ್ ಟ್ರೂ. ನನಗೆ ಕೋಳಿಗಳಷ್ಟೇ ಮನುಷ್ಯರೂ ಇಷ್ಟ. ಕೋಳಿಗಳ ಬಿಡುಗಡೆ ಎಷ್ಟು ಮುಖ್ಯವೋ, ಅಂಬಿಯ ಬಿಡುಗಡೆ ಸಹ ಅಷ್ಟೇ ಮುಖ್ಯ!" ಎಂದಾಗ ಅವರ ಕಣ್ಣುಗಳಲ್ಲಿ ಅಂಬಿಯವರ ಪರಿಸ್ಥಿತಿಯ ಬಗೆಗೆ ಕಾಳಜಿ, ನೋವು ತುಂಬಿ ಬಂದಿತ್ತು.

ಆದರೆ, ಪ್ರತಿಭಟನೆಯ ಆಯೋಜಕ ಪ್ರಸಾದ್ ಬಿದ್ದಪ್ಪ ಮನುಷ್ಯರ ಬಿಡುಗಡೆಯ ವಿಚಾರದಲ್ಲಿ ಸಂಪೂರ್ಣ ಅನನುಭವಿಯೇನಲ್ಲ. ದುಬೈನಲ್ಲಿ ಸ್ವತಃ ಬಿಡುಗಡೆ ಮಾಡಿಸಿಕೊಂಡವರು, ಬೆಂಗಳೂರಿನಲ್ಲಿ ಸ್ವಂತ ಮಗನ ಬಿಡುಗಡೆ ಮಾಡಿಸಿದವರು. ಅವರ ಅಭಿಮಾನಿಗಳಿಗೆ ಕನ್ನಡ ಬಂದಿದ್ದರೆ, ಅವರನ್ನು "ಬಿಡುಗಡೆ ಬಿಡ್ಡಪ್ಪ" ಎನ್ನುತ್ತಿದ್ದರೋ ಏನೋ.

ಆಗಷ್ಟೇ ನಡು ನೆತ್ತಿಗೇರಿದ್ದ ಸುಡು ಸೂರ್ಯನಿಂದ ರಕ್ಷಿಸಲು ತಮ್ಮ ಸಹಾಯಕ ಹಿಡಿದಿದ್ದ ತಿಳಿಗೆಂಪು ಛತ್ರಿಯ ಕೆಳಗೆ ಅದಕ್ಕೆ ಮ್ಯಾಚಿಂಗ್ ವಸ್ತ್ರ ತೊಟ್ಟು ಮಾವಿ ಬೇಬ್ ಮಾಯಿಷ್ಚರೈಸರ್ ಯುಕ್ತ ಎಸ್.ಪಿ.ಎಫ್. ೪೦ ಸನ್ ಬ್ಲಾಕ್ ಲೋಶನ್ ಹಚ್ಚುತ್ತಿದ್ದ ಬಿಡ್ಡಪ್ಪ, ಕೇಂದ್ರ ಸಚಿವ ಸಂಪುಟದಿಂದ ಅಂಬಿಯನ್ನು ಬಿಡುಗಡೆ ಮಾಡಿಸಲು -- ತಮ್ಮ ಸುಮ ಕೋಮಲ ತ್ವಚೆಯನ್ನೂ ಒಳಗೊಂಡು -- ಯಾವುದೇ ತ್ಯಾಗಕ್ಕೂ ಸಿದ್ಧರಿರುವಂತೆ ಕಂಡು ಬಂದರು.

ನಮ್ಮ ಪತ್ರಿಕೆಯ ವರದಿಗಾರನನ್ನು ಕಂಡಾಗ ಕ್ಷಣ ಮಾತ್ರವಷ್ಟೇ ಮುಗುಳ್ನಕ್ಕ ಅವರ ಕಂಗಳಲ್ಲಿ ಅಂಬಿಯವರ ಗಂಭೀರ ಪರಿಸ್ಥಿತಿಯ ಕುರಿತು ಕಾಳಜಿ, ಖಿನ್ನತೆ, ಹತಾಶೆ ಮನೆ ಮಾಡಿದ್ದವು.

ಆದರೆ, ಮಾನವ ಆಶಾ ಜೀವಿ. ಎಂತಹ ಖಿನ್ನತೆ, ನಿರಾಶೆಯ ಕತ್ತಲಲ್ಲೂ ಆಶಾ ಕಿರಣವನ್ನು ಹುಡುಕುವುದು ಪ್ರತಿ ಮಾನವನೂ ಬೆಳೆಯುವಾಗ ಕಲಿಯುವ ಹುಟ್ಟುಗುಣ. ಹತಾಷೆಯಲ್ಲೂ ಆಶೆ, ಮಾನವೀಯತೆಯ ಪ್ರತೀಕ. ಬಿಡ್ಡಪ್ಪ ಸಹ ಈ ಮಾನವೀಯತೆಯಿಂದ ಹೊರತಲ್ಲ. ಪ್ರತಿ ಸಾರಿ ಅವರು "ಫ್ರೀ ಫ್ರೀ" ಎಂದಾಗಲೆಲ್ಲಾ, ಅವರ ಬಾಯಿಂದ ಹೊರ ಹೊರ ಹೊಮ್ಮಿದ್ದು ಇದೇ ಮಾನವೀಯತೆ!

ಮಂಡ್ಯದ ಗಂಡು ಎಂದೇ ಹೆಸರಾಗಿರುವ ಅಂಬಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ಹೆಚ್ಚೇನೂ ಸಮಯವಾಗಿಲ್ಲ; ಕೆಲವು ತಿಂಗಳುಗಳಾಗಿರಬಹುದು ಅಷ್ಟೇ. ವಾರ್ತಾ ಸಚಿವರಾಗಿ ನೇಮಕವಾದರೂ, ದೂರದರ್ಶನದಲ್ಲಿರಲಿ, ಕನಿಷ್ಠ ಆಲ್ ಇಂಡಿಯಾ ರೇಡಿಯೋದಲ್ಲಿ ಸಹ ಒಮ್ಮೆಯೂ ವಾರ್ತೆಯನ್ನೋದುವ ಸುಖ ಅನುಭವಿಸಿದವರಲ್ಲ. ಸಚಿವ ಪೀಠವನ್ನು ಸರಿಯಾಗಿ ಅಲಂಕರಿಸುವ ಮೊದಲೇ, ಅಂಬಿಯ ರಾಜಕೀಯ ಜೀವನದಲ್ಲಿ ಕಾವೇರಿ ಟ್ರಿಬ್ಯುನಲ್ ತೀರ್ಪು ಬರಸಿಡಿಲಿನಂತೆ ಎರಗಿದ್ದು ಪರಿಸ್ಥಿತಿಯ ವಿಪರ್ಯಾಸ. ಯಾವುದೇ ಗ್ರೀಕ್ ನಾಟಕಕಾರನೂ ಕಲ್ಪಿಸಲಾಗದ ಜೀವನದ ಕ್ರೌರ್ಯ, ದುರಂತ.

ಅಂಬಿ ತಮ್ಮ ಕುರ್ಚಿಯ ಮೇಲೆ ಸರಿಯಾಗಿ ಕೂರುವ ಮುನ್ನವೇ, ರಾಜಿನಾಮೆ ನೀಡಬೇಕಾಗಿ ಬಂದಿದ್ದು ಪರಿಸ್ಥಿತಿಯ ಪ್ರಹಸನವೆಂದೋ ವಿಧಿಯ ವಿಲಾಸವೆಂದೋ ಸುಮ್ಮನಾಗಬಹುದಾದರೂ, ನಂತರದ ಅಮಾನವೀಯ ದೌರ್ಜನ್ಯ ಬಿಡ್ಡಪ್ಪನವರ ಮೃದು ಹೃದಯದಲ್ಲೂ ಕ್ರಾಂತಿಯ ಕಿಡಿ ಮೂಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಕೇಂದ್ರ ಸರ್ಕಾರದಂತಹ ಮಾನವ ನಿರ್ಮಿತ ವ್ಯವಸ್ಥೆ, ತನ್ನ ಮಾನವೀಯತೆಯನ್ನು ಮರೆತು, ಮಂಡ್ಯದ ಮುಗ್ಧನೊಬ್ಬನಿಗೆ ಸಚಿವ ಸಂಪುಟದಿಂದ ಬಿಡುಗಡೆಯನ್ನೂ ನೀಡದಂತಹ ರಕ್ಕಸ ಶಕ್ತಿಯಾಗಿ ಮಾರ್ಪಾಡಾದಾಗ ಏಳುವ ನೈತಿಕ ಪ್ರಶ್ನೆಗಳು, ಗೊಂದಲಗಳು ಹತ್ತು ಹಲವು.

ಉದಾಹರಣೆಗೆ, ಅಂಬಿ ಬಿಡುಗಡೆಗಾಗಿ ಬಿಡ್ಡಪ್ಪ ತಮ್ಮ ಸಹಾಯಕ ಹಿಡಿದ ತಿಳಿಗೆಂಪು ಛತ್ರಿಯ ಕೆಳಗೆ ನಿರಾಯುಧನಾಗಿ, ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವಾಗ, ಅವರು ವಿರೋಧಿಸುತ್ತಿರುವ ವ್ಯವಸ್ಥೆ ಲಕ್ಷಾಂತರ ಮಂದಿ ಸೈನಿಕರೇ ಅಲ್ಲದೇ, ಅಣ್ವಸ್ತ್ರವನ್ನೂ ಹೊಂದಿರುವುದು ನೈತಿಕವಾಗಿ ಎಷ್ಟು ಸರಿ?!

ವ್ಯವಸ್ಥೆಯ ಕುರಿತು ಇಂತಹ ಎಕ್ಸಿಸ್ಟೆಂಷಿಯಲ್ ಸಂಧಿಗ್ದಗಳು ಎದುರಾದಾಗ, ನಮ್ಮ ಪತ್ರಿಕೆ ಮೊರೆ ಹೋಗಲಿಚ್ಛಿಸುವುದು ಇಡೀ ದೇಶದ ಆತ್ಮ ಸಾಕ್ಷಿಯ ಪ್ರತೀಕವಾಗಿರುವ ಲಾಲೂ ಪ್ರಸಾದ್ ಯಾದವ್ ಅವರಲ್ಲಿಗೆ.

ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ಎರಡರ ಮೇಲೆ ನಿಂತಿದ್ದ, ಸುಮಾರು ಮಟ್ಟಿಗೆ ಲಾಲೂ ಹೋಲಿಕೆಯಿದ್ದ ವ್ಯಕ್ತಿಯೊಬ್ಬರನ್ನು ಈ ವರದಿಗಾರ ಪ್ರಶ್ನಿಸಿದ.

"ಲಾಲೂಜೀ.. ಮಂಡ್ಯಾ ಕೆ ಗಂಡು ಕೆ ಇಸ್ತೀಫಾ ಕೆ ಬಾರೆ ಮೇ ಆಪ್ಕಾ ಕ್ಯಾ ರಾಯ್ ಹೈ?"
"ಮಂಡ್ಯಾ ಕೆ.... ಕ್ಯಾ....?"
ನಕಲಿ ಲಾಲೂರವರ ಅಸಲೀ ಉತ್ತರ ಮಾರ್ಮಿಕವಾಗಿತ್ತು; ಪ್ರಶ್ನೆಯ ರೂಪದಲ್ಲಿತ್ತು.

ಜೀವನದ ಹಲವು ಪ್ರಶ್ನೆಗಳಂತೆ ನಮ್ಮ ಈ ಪ್ರಶ್ನೆಯೂ ಪ್ರಶ್ನೆಯಾಗೆಯೇ ಉಳಿದಿತ್ತು.

Labels:

Friday, March 09, 2007

ಮಜಾವಾಣಿ: ಶಿಕ್ಷಣ ವಾಣಿ

"ಈ ಪ್ರಪಂಚದಲ್ಲಿ ಸಾವೊಂದೇ ನಿಶ್ಚಿತ"
(ಮಜಾವಾಣಿ ಬ್ಯೂರೋ ವರದಿ)

ದೊಂಬಲೂರು, ಫೆಬ್ ೧೧: "ಈ ಪ್ರಪಂಚದಲ್ಲಿ ಸಾವು ಎಲ್ಲರಿಗೂ ನಿಶ್ಚಿತ. ನೀವೀಗ ಎಷ್ಟೋ ಕನಸುಗಳನ್ನು ಕಾಣುತ್ತಿರಬಹುದು. ಮಹಾನ್ ವಿಜ್ಞಾನಿಯಾಗುವ ಕನಸು, ಖ್ಯಾತ ಚಿತ್ರ ತಾರೆಯಾಗುವ ಕನಸು, ವಿಶ್ವ ಕಪ್‌ ಫೈನಲ್ಲಿನಲ್ಲಿ ವಿನ್ನಿಂಗ್ ರನ್ ಹೊಡೆಯುವ ಕನಸು. ನಿಮ್ಮಲ್ಲಿ ಬಹುಪಾಲು ಮಂದಿಗೆ ಇಂತಹ ಕನಸುಗಳು ಕನಸುಗಳಾಗೇ ಉಳಿಯುತ್ತವೆ. ಆದರೆ ಒಂದು ಮಾತ್ರ ಖಂಡಿತ. ಒಂದಲ್ಲ ಒಂದು ದಿನ ನೀವು ಸಾಯುವುದು ನಿಶ್ಚಿತ" ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಧರ್ಮರಾಜಯ್ಯನವರು ಹೇಳಿದ್ದಾರೆ.

ದೊಂಬಲೂರಿನ ಹೋಲಿ ಬ್ಲಾಸಂ ಇಂಗ್ಲೀಷ್ ಪ್ರಾಥಮಿಕ ಶಾಲೆಯ ಶಾಲಾ ದಿನದ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, "ಸಾವು ಮಾತ್ರ ಎಲ್ಲರಿಗೂ ಗ್ಯಾರಂಟಿ. ಅದೃಷ್ಟ ಇದ್ದವರು ಹೆಚ್ಚು ನೋವನ್ನು ಅನುಭವಿಸದೆ ಅಂತ್ಯ ಕಾಣುತ್ತಾರೆ" ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ದೊಂಬಲೂರು ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಮಲ್ಲಣ್ಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹೋಲಿ ಬ್ಲಾಸಂ ಶಾಲೆಯ ಶಿಕ್ಷಕಿ ಮರಗತಂ ಸ್ವಾಗತ ಭಾಷಣ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ವೇಲಾಯುಧನ್ ವಂದನಾರ್ಪಣೆ ಮಾಡಿದರು.

Labels: ,

ಮಜವಾಣಿ: ಜಲ ಕ್ರೀಡೆ

ಕಾವೇರಿ ಮರು ನಾಮಕರಣಕ್ಕೆ ಪೂರ್ಣ ಸಿದ್ಧತೆ!

ಬೆಂಗಳೂರು ಫೆಬ್ ೧೦: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಜಲ ವಿವಾದದ ಕೇಂದ್ರ ಬಿಂದುವಾಗಿರುವ ಕಾವೇರಿ ನದಿಗೆ ಕರ್ನಾಟಕ ಸರ್ಕಾರ ಮರು ನಾಮಕರಣಮಾಡಲು ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ವಿಚಾರ ನಮ್ಮ ಪತ್ರಿಕೆಗೆ ತಿಳಿದು ಬಂದಿದೆ. ಈ ವಿಚಾರದ ಕುರಿತು ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ನಮ್ಮ ವರದಿಗಾರರು ಪ್ರಶ್ನಿಸಿದಾಗ ಅವರು ಯಾವುದೇ ಉತ್ತರವನ್ನು ನೀಡಲು ಒಪ್ಪಲಿಲ್ಲ.

ಆದರೆ, ಖ್ಯಾತ ಜಲ ವಿವಾದ ಕಾನೂನು ತಜ್ಞ ಮತ್ತು ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ. ಜಲ್ಜಿತ್ ಸಿಂಗ್ ಬಾರನ್‌ಲಾ ಅವರು ಕೆಲವು ದಿನಗಳ ಹಿಂದೆ ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಾವೇರಿಗೆ ಮರು ನಾಮಕರಣ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ್ದುದು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಡಾ.ಬಾರನ್‌ಲಾ ಅವರ ಪ್ರಕಾರ, ಕರ್ನಾಟಕದಲ್ಲಿ ಕಾವೇರಿ ಎಂಬ ನದಿಯೇ ಇಲ್ಲದಿದ್ದಾಗ ಅದರ ನೀರನ್ನು ತಮಿಳು ನಾಡಿನೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭಸಿವುದಿಲ್ಲ. ತಮಿಳು ನಾಡು ಈ ಮರು ನಾಮಕರಣವನ್ನು ಪ್ರಶ್ನಿಸಿ ನ್ಯಾಯಲಯಕ್ಕೆ ಹೋದರೂ ಸದ್ಯಕ್ಕೆ ಅಂತಹ ತೊಂದರೆಯೇನೂ ಇಲ್ಲ. ಅಂತಿಮ ತೀರ್ಪಿಗೆ ಹಲವಾರು ದಶಕಗಳೇ ಬೇಕು, ಅಷ್ಟೇ ಅಲ್ಲ, ಅಲ್ಲಿಯ ವರೆಗೆ ನೀರು ಹಂಚಿಕೆಯ ವಿವಾದ ನದಿ ಹೆಸರಿನ ವಿವಾದವಾಗಿ ಬದಲಾಗಿರುತ್ತದೆ.

Labels:

Friday, March 02, 2007

ಮಜಾವಾಣಿ: ಕ್ರೈಮ್ ಸ್ಟೋರಿ


ಈಜುಡುಗೆ ತೊಟ್ಟು ನಡುಬೀದಿಯಲ್ಲಿ ನಿಂತಿದ್ದ ಸಂಪಾದಕನ ಬಂಧನ!
ಬೆಂಗಳೂರು ಫೆಬ್. ೨೩: ಈಜುಡುಗೆ ತೊಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ.

ಈಜುಡುಗೆ ತೊಟ್ಟು ನಗರದ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಸಂಪಂಗಿ ರಾಮ ದೇವಸ್ತಾನದ ಬೀದಿ ಮುಂತಾದ ಪ್ರಮುಖ ರಸ್ತೆಗಳಲ್ಲಿ ನಿಂತು, ಕಂಡ ಕಂಡವರಿಗೆಲ್ಲಾ ಮುಗಳ್ನಗೆಯನ್ನು ಬೀರುತ್ತಿದ್ದ ವ್ಯಕ್ತಿಯ ಬಗೆಗೆ ಕಳೆದ ಕೆಲವು ದಿನಗಳಿಂದ ನಗರದೆಲ್ಲೆಡೆ ಭಯ ಮಿಶ್ರಿತ ಕುತೂಹಲ ಮನೆ ಮಾಡಿತ್ತು. ಹಲವರು ಈತನೊಬ್ಬ ವಿದೇಶಿ ಬೇಹುಗಾರನಿರಬೇಕೆಂಬ ಸಂದೇಹ ವ್ಯಕ್ತಪಡಿಸಿದ್ದರೆ, ಇನ್ನೂ ಹಲವರು "ಕರ್ನಾಟಕದಲ್ಲಿ ನೀರಿಗೇನೂ ಕೊರತೆ ಇಲ್ಲ. ಬೀದಿ-ಬೀದಿಗಳಲ್ಲೂ ಸ್ವಿಮ್ಮಿಂಗ್ ಪೂಲ್ ಇದೆ" ಎಂದು ತೋರಿಸಲು ತಮಿಳು ನಾಡಿನವರು ಮಾಡಿರುವ ಸಂಚಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪೋಲೀಸರ ಕ್ಷಿಪ್ರಾಚರಣೆಯಿಂದ ಬೆಂಗಳೂರಿನ ಜನತೆ ಈಗ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗಿದೆ.

ನಿರಾಕರಣೆ: ಪೋಲೀಸರ ಬಂಧನಕ್ಕೆ ಒಳಗಾಗಿದ್ದು ತಾವೇ ಎಂಬುದನ್ನು ಮಜಾವಾಣಿ ಸಂಪಾದಕರು ನಿರಾಕರಿಸಿದ್ದಾರೆ. ತಮ್ಮ ಈಜುಡುಗೆಯ ಕುರಿತು ಮಾತನಾಡಲು ಇಚ್ಛಿಸದ ಅವರು, "ಇಂಡಿಬ್ಲಾಗೀಸ್ ಪ್ರಶಸ್ತಿಯ ಆಯೋಜಕರಾಗಲೀ, ಕಳೆದ ಬಾರಿಯ ಪ್ರಶಸ್ತಿ ವಿಜೇತ ಕನ್ನಡವೇ ನಿತ್ಯ ಬ್ಲಾಗಿನ ಎಂ.ಎಸ್.ಶ್ರೀರಾಂ ಆಗಲಿ, ಕೊನೆಗೆ ಸಂಪದದ ನಾಡಿಗರಾಗಲೀ, ಈ ಸ್ಪರ್ಧೆಯಲ್ಲಿ ಸ್ವಿಮ್ ಸ್ಯೂಟ್ ರೌಂಡ್ ಇಲ್ಲ ಎಂದು ಎಲ್ಲೂ ತಿಳಿಸಿಲ್ಲ. ಇದು ನಮ್ಮ ಪತ್ರಿಕೆಯ ಘನತೆಗೆ ಕುಂದು ತರಲು ನಮ್ಮನ್ನು ನೋಡಿ ನಗುವ ಜನರು ಮಾಡಿರುವ ವ್ಯವಸ್ಥಿತ ಸಂಚು!" ಎಂದು ಆವೇಶಭರಿತರಾಗಿ ನುಡಿದರು.
["ಓದುಗರ ಮೆಚ್ಚಿಕೆಗಿಂತ ಹೆಚ್ಚಿನ ಪ್ರಶಸ್ತಿ ಇಲ್ಲ" ಎಂಬ ಮಾತು ನಿಜವಾದರೂ, ಇಂಡಿಬ್ಲಾಗೀಸ್ ಪುರಸ್ಕಾರ ಸಂತೋಷ ತಂದಿದೆ ಎಂಬುದೂ ನಿಜ. ನನ್ನ ಬ್ಲಾಗನ್ನು ಮೆಚ್ಚಿ ಮತ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು. - ಶೇಷಾದ್ರಿ]

Labels: