ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, February 19, 2007

ಮಜಾವಾಣಿ: ರಾಷ್ಟ್ರೀಯ ವಾರ್ತೆ


ಅಮಿತಾಬ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಣೆ!
ನವ ದೆಹಲಿ, ಫೆಬ್. ೨೦: ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ಕ್ರೀಡೆ... ಈಗ ಈ ಪಟ್ಟಿಗೆ ರಾಷ್ಟ್ರೀಯ ಎತ್ತರ ಸಹ ಸೇರಿದೆ!


ಇಂದು ಸಂಜೆ ನವ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅವರು ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಎತ್ತರವನ್ನು ರಾಷ್ಟ್ರೀಯ ಎತ್ತರವಾಗಿ ಘೋಷಿಸಿದರು. "ಬಚನ್‌ಜೀಯವರ ಎತ್ತರ ಇಡೀ ರಾಷ್ಟ್ರಕ್ಕೇ ಒಂದು ಮಾದರಿಯಾಗಿದ್ದು, ಭಾರತದಲ್ಲಿ ಬೆಳೆಯುತ್ತಿರುವ ಮಕ್ಕಳೆಲ್ಲರೂ ಈ ಎತ್ತರಕ್ಕೆ ಬೆಳೆಯುವಂತೆ ತಂದೆ-ತಾಯಿಯರು, ಶಿಕ್ಷಕ-ಶಿಕ್ಷಕಿಯರು ಮಾತ್ರವಲ್ಲ ಇಡೀ ಸಮಾಜವೇ ಪ್ರೋತ್ಸಾಹಿಸಬೇಕು" ಎಂದರು.


ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರೀಯ ಮಾದರಿಯನ್ನು ಗುರುತಿಸಿ ಆ ದಿಕ್ಕಿನೆಡೆಗೆ ಇಡೀ ಭಾರತೀಯ ಸಮಾಜವನ್ನು ಕೊಂಡೊಯ್ಯಲು ರಾಷ್ಟ್ರೀಯ ಮಾದರಿ ಆಯೋಗವನ್ನು ಈಗಾಗಲೇ ಕೇಂದ್ರ ಸರ್ಕಾರ ನಿಯೋಜಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.


ಸ್ಪರ್ಧೆಯಲ್ಲಿ ಅಂಬಿ, ರಜನಿ? - ಸದ್ಯದಲ್ಲಿಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ "ರಾಷ್ಟ್ರೀಯ ನಡಿಗೆ"ಯನ್ನು ಘೋಷಿಸಲಿದ್ದು, ಮಂಡ್ಯದ ಗಂಡು ಅಂಬರೀಶ್ ಅವರ ನಡಿಗೆ ಸಹ ಕೇಂದ್ರ ರಾಷ್ಟ್ರೀಯ ಮಾದರಿ ಆಯೋಗದ ನಡಿಗೆ ಸಬ್ ಕಮಿಟಿ ತಯಾರಿಸಿರುವ ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿದು ಬಂದಿದೆ. ಆದರೆ, ನವ ದೆಹಲಿಯ ಕೇಂದ್ರ ನಡಿಗೆ ವೀಕ್ಷಣಾಲಯದ ತಜ್ಞರ ಮಾತನ್ನು ನಂಬುವುದಾದರೆ, ರಾಷ್ಟ್ರೀಯ ನಡಿಗೆ ಮಾದರಿಗಾಗಿ ಅಂಬಿ ಮತ್ತು ದಕ್ಷಿಣ ಭಾರತದ ಖ್ಯಾತ ತಾರೆ ರಜನಿಕಾಂತ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದೊಂದು ಅಂತರರಾಜ್ಯ ವಿವಾದವಾಗುವ ಸಂಭವ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಒಂದು ರಾಜೀ ಸೂತ್ರದ ತಯಾರಿಯಲ್ಲಿದ್ದು ಅಂಬಿಯವರ ಎಡ ಹೆಜ್ಜೆ ಮತ್ತು ರಜನಿಕಾಂತ್ ಅವರ ಬಲ ಹೆಜ್ಜೆಯನ್ನು ಸೇರಿಸಿ "ರಾಷ್ಟ್ರೀಯ ನಡಿಗೆ" ಘೋಷಿಸುವ ಸಂಭವ ಸಹ ಇದೆ.

Labels: ,

Monday, February 05, 2007

ಮಜಾವಾಣಿ: ತಮಿಳು ಸಂಚಿಕೆ

ಮಜಾವಾಣಿಗೆ ಪುರಸ್ಕಾರ!

ಬೆಂಗಳೂರು ಫೆಬ್ರುವರಿ ೬, ೨೦೦೬: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ವಿವಾದದ ನಡುವೆಯೇ, ಕನ್ನಡದ (ಆಗೊಂದು ಈಗೊಂದು) ದಿನಪತ್ರಿಕೆ ಮಜಾವಾಣಿ ಇಡೀ ಒಂದು ಸಂಚಿಕೆಯನ್ನೇ ತಮಿಳು ಲಿಪಿಯಲ್ಲಿ ಪ್ರಕಟಿಸಿ "ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆ" ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಆತ್ಮ-ಸಂದರ್ಶನ ನೀಡಿದ ಮಜಾವಾಣಿ ಸಂಪಾದಕರು, "ಈ ಗೌರವ ನಮ್ಮ ಪತ್ರಿಕೆಗೆ ಮಾತ್ರ ಸಂದ ಗೌರವ ಅಲ್ಲ, ಇಡೀ ಕನ್ನಡ ಪತ್ರಿಕೋದ್ಯಮಕ್ಕೇ ಸಂದ ಗೌರವ. ಇದು ಅತ್ಯಂತ ಹೆಮ್ಮೆಯ ವಿಷಯ. ತಮಿಳಿನಲ್ಲಿ ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು ಎಂದು ತಮಿಳರಿಗೆ ಶುಭ ಹಾರೈಸಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದೇವೆ" ಎಂದರು. "ಅದಲ್ಲದೆ, ಕನ್ನಡ ಪತ್ರಿಕೋದ್ಯಮದ ಹಿರಿಯಕ್ಕನಾಗಿ, ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾ ಹಾಲು-ಹೆಜ್ಜೆಯನ್ನಿಡುತ್ತಿರುವ ಕನ್ನಡ ಪತ್ರಿಕೋದ್ಯಮ ಹಸುಗೂಸಾದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮುಂದಿನ ಹೆಜ್ಜೆಯನ್ನು ತೋರುವ ಜವಬ್ದಾರಿ ಸಹ ನಮ್ಮ ಪತ್ರಿಕೆಯ ಮೇಲಿದೆ" ಎಂದೂ ಸಹ ನುಡಿದರು.

Labels:

மஜாவாணி: தமிளினல்லி

கன்னடவெனெ குணிதாடுவுதென்னெதெ!
கன்னடவெனெ கிவி னிமிருவுது!!

ಮಜಾವಾಣಿ: ಸರ್ಕಾರಿ ಪ್ರಕಟಣೆ

ಕರನಾಟಕ ಸರ್ಕಾರ
ಅಧಿಸೂಚನೆ
ಕರ್ನಾಟಕದ ಹಲವಾರು ಸ್ಥಳಗಳಲ್ಲಿ -- ಬೆಂಗಳೂರನ್ನು ಹೊರತುಪಡಿಸಿ -- ಊರಿನ ಮೂರ್ಖ/ಮುಠ್ಠಾಳ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಹಲವಾರು ಊಹಾಪೋಹಗಳಿಗೆ ಮತ್ತು ವದಂತಿಗಳಿಗೆ ಕಾರಣವಾಗಿದೆ. ಒಂದೇ ಬಾರಿಗೆ ಕರ್ನಾಟಕದ ಹಲವಾರು ಊರುಗಳಿಂದ ಮೂರ್ಖರೂ, ಮುಠ್ಠಾಳರು ಒಟ್ಟಿಗೆ ನಾಪತ್ತೆಯಾಗಿರುವುದು ಆಶ್ಚರ್ಯದ ಮತ್ತು ಆಸಕ್ತಿಕರ ವಿಷಯವಾದರೂ, ಆನಂದ/ಆತಂಕ ಪಡಬೇಕಾದ ವಿಚಾರವಲ್ಲ.

ಇದೊಂದು ಕೇವಲ ಅಲ್ಪಕಾಲಿಕ ಪರಿಸ್ಥಿತಿ ಮಾತ್ರ. ಸಾರ್ವಜನಿಕರು ಈ ವಿಷಯದ ಕುರಿತು ಹೆಚ್ಚಿನ ಆನಂದ/ಆತಂಕ ವ್ಯಕ್ತಪಡಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ನೆನಪಿಡಿ: ಇದೊಂದು ತಾತ್ಕಾಲಿಕ ಪರಿಸ್ಥಿತಿ ಮಾತ್ರ. ಜನವರಿ ೨೫ರಿಂದ ಪ್ರಾರಂಭವಾದ ವಿಧಾನ ಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಪರಿಸ್ಥಿತಿ ಯಥಾಸ್ಥಿತಿಗೆ ಮರಳಲಿದೆ.
ಕ.ರಾ.ಸ.ಅ.ಸೂ. ೦೫/೦೨/೨೦೦೭-೪೨೦

Labels:

Saturday, February 03, 2007

ಮಜಾವಾಣಿ: ತಾರಾ ತಮ್ಯ

"ವರ್ಣಭೇದದ ವಿರುದ್ಧ ಸಿಡಿದೇಳಿ" - ಶಿಲ್ಪಾ ಶೆಟ್ಟಿ
ಲಂಡನ್, ಫೆಬ್ರುವರಿ ೩, ೨೦೦೬: "ವರ್ಣತಾರತಮ್ಯ ಜಗತ್ತಿನಲ್ಲಿ ಇನ್ನೂ ಇದೆ. ಅದರ ನಿರ್ಮೂಲನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲೇಬೇಕಿದೆ" ಎಂದು ಸಂದರ್ಶನವೊಂದರಲ್ಲಿ ಬಿಗ್ ಬಾದರ್ ತಾರೆ ಶಿಲ್ಪಾ ಶೆಟ್ಟಿ ನುಡಿದಿದ್ದಾರೆ ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಕನ್ನಡ ಪ್ರಭ ವರದಿಮಾಡಿದೆ.

ಈ ವರದಿಯ ಪ್ರಕಾರ, ತನಗೆ ಜನಾಂಗೀಯ ಅವಹೇಳನವಾಗಿದೆಯೆಂದು ಬೊಬ್ಬೆ ಹೊಡೆದು, ನಂತರ ಏನೂ ಆಗಿಲ್ಲ, ನಡೆದಿದ್ದನ್ನು ಮರೆತುಬಿಡಿ ಎಂದು ಹೇಳಿದ್ದ ಶೆಟ್ಟಿ, ಈಗ ಮತ್ತೆ ಈ ವಿವಾದ ಪ್ರಸ್ತಾಪಿಸಿ, ವರ್ಣಭೇದದ ವಿರುದ್ಧ ವಿಶ್ವಾದ್ಯಂತ "ಸಿಡಿದೇಳುವಂತೆ" ತಮ್ಮ ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.

"ವರ್ಣತಾರತಮ್ಯ ನಿರ್ಮೂಲನೆಗೆ, ಗಾಂಧೀಜಿಯವರ ನಾಡಿನವರಾದ ನಾವು ಅಹಿಂಸಾತ್ಮಕ ಹೋರಾಟ ನಡೆಸಬೇಕು. ಇದಕ್ಕೆ ಫೇರ್ N ಲವ್ಲೀಗಿಂತ ಉತ್ತಮ ಆಯುಧವಿಲ್ಲ. ಭಾರತೀಯರು ಮಾತ್ರವಲ್ಲ, ಇಡೀ ಜಗತ್ತಿನ ಕಪ್ಪು ಜನರು ಇದರ ಬಳಕೆಯನ್ನು ಮಾಡಬೇಕು" ಎಂದಿದ್ದಾರೆ.

Labels:

Thursday, February 01, 2007

ಮಜಾವಾಣಿ: ಚಿಂತನ-ಮಂಥನ

ಪುರಾಣ, ತತ್ವಶಾಸ್ತ್ರ, ದಾರ್ಶನಿಕ ಗ್ರಂಥಗಳನ್ನೋದುತ್ತಿರುವಾಗ ದೇವರೇಕೆ ಎಂದೂ ಹಿತ್ತಲಿಗೆ ಹೋಗುವುದಿಲ್ಲ ಎಂಬ ಪ್ರಶ್ನೆ ಒಮ್ಮೊಮ್ಮೆ ನನ್ನನ್ನು ಕಾಡತೊಡಗುತ್ತದೆ. ಹಾಗಾದಾಗೆಲ್ಲಾ, ನಾನೀಗ ಏಳು ವರ್ಷದ ಬಾಲಕನಲ್ಲ ಎಂಬುದು ತಟ್ಟನೆ ನೆನಪಾಗಿ ನೆಮ್ಮದಿಯ ನಿಟ್ಟುಸಿರುಬಿಟ್ಟು ಸುಮ್ಮನಾಗುತ್ತೇನೆ.

Labels: