ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, January 31, 2007

ಮಜಾವಾಣಿ: ವಿದೇಶ ಸುದ್ದಿ
ಇರಾಕಿನಲ್ಲಿ ಗಾಂಧಿ ಸ್ಮರಣೆ
ಬಾಗ್ದಾದ್, ಜನವರಿ ೩೦, ೨೦೦೬: ಶಾಂತಿ ದೂತ ಗಾಂಧೀಜಿಯವರ ೫೯ನೆಯ ಪುಣ್ಯ ತಿಥಿಯನ್ನು ಇರಾಕಿನಾದ್ಯಂತ ಇಂದು ಆಚರಿಸಲಾಯಿತು. ಪರಸ್ಪರ ಹೊಡೆದಾಡುತ್ತಿರುವ ಸುನ್ನಿ, ಷಿಯಾ ಮತ್ತು ಅಮೆರಿಕನ್ ಪಡೆಗಳು ಈ ದಿನ ಸಂಜೆ ೫:೧೭ಕ್ಕೆ ೨ ನಿಮಿಷದ ಮೌನ ಆಚರಿಸಿ ಮತ್ತೆ ಕೂಗಾಡುತ್ತಾ ತಮ್ಮ ಹೊಡೆದಾಟ ಮುಂದುವರೆಸಿದವು.

Labels:

Monday, January 29, 2007

ಮಜಾವಾಣಿ: ತನಿಖಾ ವರದಿ

ಅರುಂಧತಿ ರಾಯ್ ಐಶ್ವರ್ಯ ರೈ ಅಕ್ಕ ಅಲ್ಲ!
ಮುಂಬೈ, ಜನವರಿ ೨೯, ೨೦೦೬: ಖ್ಯಾತ ಸಾಹಿತಿ ಮತ್ತು ರೂಪದರ್ಶಿ ಅರುಂಧತಿ ರಾಯ್ ಮತ್ತು ಖ್ಯಾತ ನಟಿ, ಕನ್ನಡ(ಬಾರ)ದ ಕುವರಿ ಐಶ್ವರ್ಯ ರೈ ಒಡಹುಟ್ಟಿದ ಸಹೋದರಿಯರಲ್ಲ.

ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೂ, ಅಭಿಷೇಕ್-ಐಶ್ವರ್ಯ ವಿವಾಹದ ಸಂದರ್ಭದಲ್ಲಿ ಇಂತಹ ಯಾವುದೇ ಅನುಮಾನಗಳಿಗೆ ಆಸ್ಪದ ಇರಬಾರದೆಂದು ನಮ್ಮ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ. ಜೊತೆಗೆ, ಇತರೆ ಪತ್ರಿಕೆಗಳು ಐಶ್ವರ್ಯ ಅವರ ಸೋದರನ ಹೆಂಡತಿಯ ಅಜ್ಜಿಯಿಂದ ಹಿಡಿದು ಆಕೆಯ ಮುದ್ದಿನ ನಾಯಿಯ ಸೋದರಿಯ ಪಶು ವೈದ್ಯನವರೆಗೆ ಎಲ್ಲ ಸಂಬಂಧಿಕರ ವಿವರಗಳನ್ನು ಈಗಾಗಲೇ ನೀಡಿರುವುದರಿಂದ ನಮ್ಮ ಪತ್ರಿಕೆಗೆ ಉಳಿದಿದ್ದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Labels:

ಮಜವಾಣಿ: ಪರಿಸರ ಸುದ್ದಿ

"ನಾವು ಪ್ರಪಂಚವನ್ನು ಬಿಸಿ ಮಾಡಿಲ್ಲ" - ಮೂರ್ತಿ, ಪ್ರೇಮ್‌ಜಿ, ಮಿತ್ತಲ್
ಡಾವೋಸ್, ಜನವರಿ ೩೦, ೨೦೦೬: ಗ್ಲೋಬಲ್ ವಾರ್ಮಿಂಗ್ ವಿಷಯದಲ್ಲಿ ತಾವು ತಪ್ಪಿಸ್ಥರಲ್ಲವೆಂದಿರುವ ನಾರಾಯಣ ಮೂರ್ತಿ, ಪ್ರೇಮ್‌ಜಿ ಮತ್ತು ಲಕ್ಷ್ಮಿ ಮಿತ್ತಲ್ ಅವರು, "ನಾವು ಪ್ರಪಂಚವನ್ನು ಬಿಸಿ ಮಾಡಿಯೇ ಇಲ್ಲ" ಎಂದಿದ್ದಾರೆ.
ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾತನಾಡುತ್ತಿದ್ದ ಇವರು, ಮಿತ್ತಲ್ ಅವರ ಮನೆಯಲ್ಲಿ ಒಂದು ಅತ್ಯಾಧುನಿಕ, ಬೃಹತ್ ಒಲೆ ಇರುವುದನ್ನು ಒಪ್ಪಿಕೊಂಡರಾದರೂ, ಅದರಿಂದ ಇಡೀ ಜಗತ್ತಿನ ತಾಪ ಹೆಚ್ಚಾಗುವ ಸಂಭವ ಅತಿ ಕಡಿಮೆ ಎಂದರು.

ನಂತರ, ನಮ್ಮ ವರದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರೇಮ್‌ಜಿಯವರು, "ನಾನು ಪ್ರಪಂಚ ತಣ್ಣಗೆ ಮಾಡೋಕ್ಕೆ ತುಂಬಾ ಟ್ರೈ ಮಾಡ್ತಾ ಇದ್ದೀನಿ. ಬೆಂಗಳೂರಿಂದ ಕಾರಲ್ಲಿ ದೂರ ಹೋದಾಗೆಲ್ಲಾ ಎ.ಸಿ. ಹಾಕಿದ್ರೂ ಕಿಟಕಿ ತೆಗಿ ಅಂತ ಡ್ರೈವರ್‌ಗೆ ಹೇಳ್ತೀನಿ. ಬೆಂಗಳೂರಲ್ಲಿ ತುಂಬಾ ಡಸ್ಟ್ ಇರತ್ತೆ. ಇಲ್ದೆ ಇದ್ರೆ ಅಲ್ಲೂ ವಿಂಡೋಸ್ ಕೆಳಗಿಳಿಸಿ ಟೆಂಪರೇಚರ್ ಕಡಿಮೆ ಮಾಡಬಹುದಿತ್ತು" ಎಂದರು.

ಅಲ್ಲಿಯೇ ನಿಂತಿದ್ದ ನಾರಾಯಣ ಮೂರ್ತಿಯವರು, "ನಾನು ಕಾಫಿ ಕೂಡ ಬಿಸಿ ಮಾಡಲ್ಲ, ಪ್ರಪಂಚ ಬಿಸಿ ಮಾಡ್ತೀನಾ?!" ಎಂದು ಪ್ರಶ್ನಿಸಿದರು.
ವಾಸ್ತವ ಹೀಗಿದ್ದರೂ, ಅರುಂಧತಿ ರಾಯ್, ಮೇಧಾ ಪಾಟ್ಕರ್ ಅಂತಹವರು ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ಉದ್ಯಮಿಗಳ ಮೇಲೆ ಆರೋಪ ಹೊರಿಸುವುದನ್ನು ನೋಡಿದರೆ, ರಾಯ್, ಪಾಟ್ಕರ್ ಮುಂತಾದ ಪರಿಸರವಾದಿಗಳೇ ತಮ್ಮ ಬಿಡುವಿನ ಸಮಯದಲ್ಲಿ ಯಾರಿಗೂ ತಿಳಿಯದಂತೆ ಪ್ರಪಂಚವನ್ನು ಬಿಸಿ ಮಾಡುತ್ತಿರುವ ಸಾಧ್ಯತೆಗಳಿವೆ.

Labels:

Wednesday, January 24, 2007

ಮಜಾವಾಣಿ: ವಿವಾದ

ಅಡಿಗರ ಇಡ್ಲಿ ಪ್ರೇಮ ವಿವಾದ: "ಇರಲಿಲ್ಲ"-ಭೈರಪ್ಪ, "ಇತ್ತು"-ಕಾರ್ನಾಡ್
ಬೆಂಗಳೂರು ಜನವರಿ ೨೪, ೨೦೦೬: ಟಿಪ್ಪು ಸುಲ್ತಾನನ ಕನ್ನಡ ಪ್ರೇಮದ ಕುರಿತು ಕನ್ನಡ ಸಾಹಿತ್ಯರಂಗದ ದಿಗ್ಗಜರೆನ್ನಿಸಿಕೊಂಡಿರುವ ಎಸ್.ಎಲ್.ಭೈರಪ್ಪ ಮತ್ತು ಗಿರೀಶ್ ಕಾರ್ನಾಡ್ ನಡುವಿನ ಚರ್ಚೆಯ ಬಿಸಿ ಆರುವ ಮುಂಚೆಯೇ ಮತ್ತೊಂದು ವಿವಾದಾಸ್ಪದ ಸಂಗತಿಯ ಕುರಿತಾದ ಚರ್ಚೆಗೆ ಕಾವೇರಿದೆ.
ಟಿಪ್ಪು ಸುಲ್ತಾನನ ಕನ್ನಡ ಪ್ರೇಮವನ್ನು ಪ್ರಶ್ನಿಸಿ ಆ ಚರ್ಚೆಗೆ ಕಾರಣೀಭೂತರಾಗಿದ್ದ ಸಚಿವ ಶಂಕರಮೂರ್ತಿಯವರೇ ಅಡಿಗರ ಇಡ್ಲಿ ಪ್ರೇಮವನ್ನು ಪ್ರಶ್ನಿಸಿ ಈ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಬೆಂಗಳೂರಿನಲ್ಲಿ ಅಡಿಗಡಿಗೂ ಕಾಣಬರುವ ಉಪಹಾರಗೃಹಗಳಿಗೆ "ಅಡಿಗಾಸ್" ಎಂದು ಹೆಸರಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, "ಗೋಪಾಲಕೃಷ್ಣ ಅಡಿಗರಿಗೆ ಇಡ್ಲಿಯ ಮೇಲೆ ಪ್ರೇಮವಿತ್ತೆನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಸಚಿವರ ಮಾತನ್ನು ಬೆಂಬಲಿಸಿರುವ ಖ್ಯಾತ ಸಾಹಿತಿ ಎಸ್.ಎಲ್,ಭೈರಪ್ಪನವರು, ಅಡಿಗರ ಪ್ರತಿಯೊಂದು ಬರಹವನ್ನೂ ತಾವು ಆಳವಾಗಿ ಅಭ್ಯಾಸ ಮಾಡಿದ್ದು, ಅಡಿಗರ ಇಡ್ಲಿ ಪ್ರೇಮ ತಮಗೆಲ್ಲೂ ಕಾಣಬರಲಿಲ್ಲ ಎಂದಿದ್ದಾರೆ. "ಚಿಂತಾಮಣಿಯಲ್ಲಿ ಮುಖ ಕಂಡ ಅಡಿಗರು ತಟ್ಟೆಯಲ್ಲಿನ ಇಡ್ಲಿ ಕಾಣಲಿಲ್ಲ" ಎಂದು ವಿಷಾದಿಸಿರುವ ಅವರು, ಈಗ ರೆಸ್ಟಾರಂಟುಗಳಿಗೆ ಅಡಿಗರ ಹೆಸರು ಇಡುತ್ತಿರುವುದು "ಇತಿಹಾಸವನ್ನು ತಿರುಚುವ ಪ್ರಯತ್ನ" ಎಂದು ಖಂಡಿಸಿದ್ದಾರೆ.
ಭೈರಪ್ಪನವರ ಮಾತನ್ನು ತಿರಸ್ಕರಿಸಿರುವ ಜ್ಞಾನಪೀಠ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್, "ಅಡಿಗರಿಗೆ ಇಡ್ಲಿಯ ವಿಚಾರದಲ್ಲಿ ಅಪಾರ ವಿಶ್ವಾಸ ಇತ್ತು. ಕೊಂಚ್ ಇಮ್ಯಾಜಿನೇಷನ್ ಉಪಯೋಗಿಸಿದರೆ ಅವರ ಯಾವ ಮೋಹನ್ ಮುರಲಿ... ಗೀತೆ ಇಡ್ಲಿಯ ಬಗೆಗೆ ಎಂದು ತಿಳಿದು ಬರುತ್ತದೆ." ಎಂದಿದ್ದಾರೆ. ಮುಂದುವರೆದ ಕಾರ್ನಾಡರು, "ಭೈರಪ್ಪನವರ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ನನಗೇನೂ ಲೈಕ್ ಆಗ್ಲಿಲ್ಲ. ಸುಮ್ನೆ ಅವಾರ್ಡ್ ಬರ್ಲಿ ಅಂತ ಫಿಲಂ ತೆಗ್ದೆ" ಎಂದಿದ್ದಾರೆ.

Labels:

Monday, January 22, 2007

ಮಜಾವಾಣಿ: ತಿದ್ದುಪುಡಿ

ಪ್ರಜಾವಾಣಿ ತಿದ್ದುಪಡಿ

ಕನ್ನಡದ ಖ್ಯಾತ ಸುದ್ದಿಪತ್ರಿಕೆ ಪ್ರಜಾವಾಣಿ ಶಿಲ್ಪಾ ಶೆಟ್ಟಿಯವರ ರಿಯಾಲಿಟಿ ಷೋ ಕುರಿತು ಒಂದು ಸಂಪಾದಕೀಯವನ್ನು ಪ್ರಕಟಿಸಿತ್ತು. ಮುದ್ರಣ ದೋಷದಿಂದಾಗಿ ಆ ಸಂಪಾದಕೀಯದಲ್ಲಿ ಹಲವಾರು ತಪ್ಪುಗಳಿದ್ದು ಪ್ರಜಾವಾಣಿ ಪತ್ರಿಕೆ ಓದುಗರ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ ಮರುದಿನ ತಿದ್ದುಪಡಿಯೊಂದನ್ನು ಪ್ರಕಟಿಸಬೇಕಾಯಿತು. ಆದನ್ನು ಯಥಾವತ್ತಾಗಿಡಲಾಗಿದೆ:

  • ಶಿಲ್ಪಾ ಶೆಟ್ಟಿ ಭಾಗವಹಿಸಿದ ಟಿ.ವಿ. ಕಾರ್ಯಕ್ರಮದ ಹೆಸರು ಬಿಗ್ ಬ್ರದರ್; ಬಿಗ್ ಬಾದರ್ ಅಲ್ಲ.
  • ಶಿಲ್ಪಾ ಶೆಟ್ಟಿಯನ್ನು ನಿಂದಿಸಿದವಳು ಜೇಡ್ ಗೂಡಿ; ಜೇನು ಗೂಡಿಯಲ್ಲ.
  • ಜೇಡ್ ಗೂಡಿಯ ನಿಂದನೆಯಿಂದ ನೋವು ಉಂಟಾಗಿದ್ದು ಭಾರತೀಯ ಜನಾಂಗಕ್ಕೆ; ಭಾರತೀಯ
    ಜನನಾಂಗಕ್ಕಲ್ಲ.
  • ಜೇಡ್ ಗೂಡಿಯನ್ನು ಭಾರತಕ್ಕೆ ಆಹ್ವಾನಿಸಿರುವುದು ಭಾರತೀಯ ಪ್ರವಾಸೋದ್ಯಮ ಇಲಾಖೆ; ಪ್ರಸವೋದ್ಯಮ ಇಲಾಖೆಯಲ್ಲ.
  • ಕಡೆಯದಾಗಿ ಆಕೆಯನ್ನು ಆಹ್ವಾನಿಸಿರುವುದು ಭಾರತೀಯ ಜನಾಂಗದ ಹಿರಿಮೆಯನ್ನು ಸ್ವತಃ
    ಅರಿತುಕೊಳ್ಳಲು; ಭಾರತೀಯ ಜನನಾಂಗದ ಹಿರಿಮೆಯನ್ನು ಅರಿತುಕೊಳ್ಳಲು ಅಲ್ಲ.


ತಿದ್ದಿದ ತಿದ್ದುಪಡಿ: ಮುದ್ರಣ ದೋಷದಿಂದಾಗಿ "ಮಜಾವಾಣಿ" ಎಂದಿರಬೇಕಾದ್ದು "ಪ್ರಜಾವಾಣಿ" ಎಂದು ಮುದ್ರಿತವಾಗಿದೆ. ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯದಲ್ಲಿ ಯಾವುದೇ ಮುದ್ರಣ ದೋಷವಿರಲಿಲ್ಲ ಜೊತೆಗೆ ಅದು ಮೇಲಿನ ತಿದ್ದುಪಡಿಯನ್ನೂ ಪ್ರಕಟಿಸಿಲ್ಲ.ಇನ್ನೊಂದು ಪತ್ರಿಕೆಯಲ್ಲಿ ಇಲ್ಲದ ಮುದ್ರಣ ದೋಷವನ್ನು ಕಲ್ಪಿಸಿ ಅದನ್ನು ತಿದ್ದಲು ಬೇಡದ ತಿದ್ದುಪಡಿಯನ್ನು ಸೃಷ್ಟಿಸುವ ಸ್ವಾತಂತ್ರ್ಯ ಇರುವುದು ನಮ್ಮಂತಹ ಪತ್ರಿಕೆಗಳಿಗೆ ಮಾತ್ರ. ದುರುದ್ದೇಶರಹಿತವಾಗಿ ಪ್ರಜಾವಾಣಿಯಲ್ಲಿಲ್ಲದ ತಿದ್ದುಪುಡಿಯನ್ನು ಪ್ರಕಟಿಸಿದ್ದಕ್ಕಾಗಿ ವಿಷಾದಿಸುತ್ತೇವೆ.

Labels: