ದಾಂಪತ್ಯದಲ್ಲಿ ದಳ್ಳುರಿ: ಮರಾಠಿ ಸ್ನೇಹಿತನ ಪ್ರಶ್ನೆಗಳು
ಇಂದು "ಮರಾಠಿ ಸ್ನೇಹಿತನಿಗೆ" ಕಾಡಿರುವ ಪ್ರಶ್ನೆಗಳು ಆಕಸ್ಮಿಕ ವಿಚ್ಛೇದನದ ಭಯದಿಂದ ಕಂಗೆಟ್ಟಿರುವ ಪ್ರತಿ ದಂಪತಿಗೂ ಎಂದಾದರೂ ಒಮ್ಮೆ ಕಾಡೇ ಇರುತ್ತವೆ ಎಂಬುದು ನಮ್ಮ ನಂಬಿಕೆ. ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವ ಈ ಸಮಸ್ಯೆಗಳನ್ನು ಆದಷ್ಟೂ ಬೇಗ ಬಗೆಹರಿಸಿಕೊಳ್ಳುವುದು ಒಳಿತು. ಇದರಲ್ಲಿ ನಾಚಿಕೆ, ಸಂಕೋಚ ಬೇಡ.
ಒಂದು ಪತ್ರಿಕೆಗೆ ಸಾಮಾಜಿಕ ಕಾಳಜಿ ಅತ್ಯಗತ್ಯ; ಸಮಾಜ ನಮ್ಮದೇ ಇರಲಿ, ಮರಾಠಿಗರದೇ ಇರಲಿ.
ದಾಂಪತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವು 'ದಾಂಪತ್ಯದಲ್ಲಿ ದಳ್ಳುರಿ:ಮರಾಠಿ ಸ್ನೇಹಿತನ ಪ್ರಶ್ನೆಗಳು' ಎಂಬ ಹೊಸ ಅಂಕಣಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.
ಪತಿ, ಪತ್ನಿ ಔರ್ ವೋಹ್ ಡೈವೋರ್ಸಿಲ್
೧. ಈ ಮಾತ್ರೆಯನ್ನು ಮಾರನೆಯ ದಿನ ಮತ್ತೆ ಉಪಯೋಗಿಸಬಹುದೇ? ಅಥವಾ ಮಾರನೆಯ ಬೆಳಗ್ಗೆ ತೆಗೆದು ಬಿಸಾಕಬೇಕೇ?
ಆದೇ ಮಾತ್ರೆಯನ್ನು ಮತ್ತೆ ಮತ್ತೆ ಉಪಯೋಗಿಸುವುದು ಅನಾರೋಗ್ಯಕರ - ಡೈವೋರ್ಸಿಲ್ ಮಾತ್ರೆಯ ತಯಾರಕರಿಗೆ. ಒಮ್ಮೆ ಬಳಸಿದ ನಂತರ ಆ ಮಾತ್ರೆಗಳನ್ನು ಮಕ್ಕಳಿಗೆ ಆಡಲು ಕೊಡುವುದು ಒಳಿತು.
೨. ಪುರುಷರಿಗೆ ಬೇರೆ ಮಾತ್ರೆ ಇದೆಯೇ? ನೊಂದ ಪತಿಗಳ ಸಂಘದ ವತಿಯಿಂದ ಬಂದಿರುವ ಪ್ರಶ್ನೆ.
ಪುರುಷರು ಡೈವೋರ್ಸಿಲ್ ಕಂಪೆನಿಯವರೇ ತಯಾರಿಸಿರುವ "ಲೇಬಿಯಮ್ ಕ್ಲಾಸಸ್" ಪಟ್ಟಿಗಳನ್ನು ಬಳಸಬಹುದು. ಇದೇ ಪರಿಹಾರ ಆಯುರ್ವೇದದಲ್ಲೂ ಲಭ್ಯವಿದ್ದು "ಅಧರ ನಿಬದ್ಧ" ಎಂಬ ಹೆಸರಿನಲ್ಲಿ ದೊರಕುತ್ತದೆ.
ಇದನ್ನು ಬಳಸುವ ಪುರುಷರು ಮಲಗುವ ಮುನ್ನ ಮುಖ ಮಾರ್ಜನ ಮಾಡಿ, ಲೇಬಿಯಮ್ ಕ್ಲಾಸಸ್ ಪಟ್ಟಿಯನ್ನು ಅಳತೆಗೆ ತಕ್ಕಂತೆ ಕತ್ತರಿಸಿ, ಎರಡೂ ತುಟಿಗಳನ್ನು ಒಳಗೆ ಮಾಡಿಕೊಂಡು, ಪಟ್ಟಿಯನ್ನು ಮೂಗಿನ ಕೆಳಗಿನಿಂದ ಗಲ್ಲದ ತುದಿಯವರೆಗೆ ಹಚ್ಚಿಕೊಳ್ಳಬೇಕು.
ಆಕಸ್ಮಿಕ ವಿಚ್ಛೇದನವನ್ನು ತಡೆಗಟ್ಟುವಲ್ಲಿ 'ಲೇಬಿಯಮ್ ಕ್ಲಾಸಸ್' 'ಡೈವೋರ್ಸಿಲ್' ಮಾತ್ರೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾದರೂ, ಇದರಲ್ಲಿ 'ಸೈಡ್ ಎಫ್ಫೆಕ್ಟ್ಸ್' ಕೂಡಾ ಹೆಚ್ಚಿಗೆ ಇವೆ. ಮೀಸೆ ಇರುವ ಪುರುಷರು ಈ ಪರಿಹಾರವನ್ನು ಬಳಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯುವುದು ಒಳಿತು.
೩.ಪತ್ನಿಯರು ಉಪಯೋಗಿಸುವುದರ ಬಗ್ಗೆ ಪತಿಗೆ ತಿಳಿಯಬಾರದೇ?
ಈ ವಿಷಯದ ಬಗ್ಗೆ ವೈದ್ಯಕೀಯ ವಲಯಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದು ದಡ ಮುಟ್ಟುವ ಯಾವುದೇ ಚಿಹ್ನೆಗಳೂ ಕಾಣುತ್ತಿಲ್ಲ. ಪತಿಗೆ ತಿಳಿಸದೆ ಮಾತ್ರೆಗಳನ್ನು ಕಿವಿಗೆ ನುಂಗಿಸುವ ಕ್ರಮವನ್ನು ಪಾತಿವ್ರತ್ಯದ ಭಂಗ ಎಂದು ಒಂದು ಗುಂಪು ವಾದಿಸುತ್ತಿದ್ದರೆ, ಇನ್ನೊಂದು ಗುಂಪಿನ ಪ್ರಕಾರ ಮಾತ್ರೆ-ಕಿವಿಗಳೆರಡೂ ಹೆಂಡತಿಯದೇ ಆಗಿರುವಾಗ, ಪತಿಯಿಂದ ಅಪ್ಪಣೆ ಪಡೆಯಬೇಕೆಂಬುದು ಅಮಾನವೀಯ ಮಹಿಳಾ ವಿರೋಧಿ ಧೋರಣೆಯಾಗಿದ್ದು ನಮ್ಮ ಸಮಾಜದಲ್ಲಿ ನಡೆಯುವ ಶೋಷಣೆಗೆ ನಿಲವುಗನ್ನಡಿ ಹಿಡಿದಂತಾಗಿದೆ.
ನಮ್ಮ ಅಭಿಪ್ರಾಯದಲ್ಲಿ ಪತಿಗೆ ತಿಳಿಸಿಯೇ ಈ ಮಾತ್ರೆಗಳನ್ನು ಬಳಸುವುದು ಒಳಿತು. ಹಾಗೆ ಮಾಡದಿದ್ದಲ್ಲಿ ಅದು ಪುರುಷನ ಭವಿಷ್ಯತ್ತಿನ ಮೇಲೆ ಅಪಾರ ಪ್ರಭಾವ ಬೀರುವ ಅಪಾಯ ಇರುತ್ತದೆ. ಹೀಗಾದಾಗ ಸೂಕ್ಷ್ಮ ಸಂವೇದನಾಶೀಲ ಪುರುಷರು ಗುಹೆಯೊಳಕ್ಕೆ ಹೋಗಲು ಹೆದರಿ ತಮ್ಮ ಆಪ್ಯತಾ ಆವರ್ತನದಲ್ಲಿ ಧನಾತ್ಮಕ ಅನುಭವದಿಂದ ವಂಚಿತರಾಗುತ್ತಾರೆ.
ಒಟ್ಟಿನಲ್ಲಿ ಹೇಳುವುದಾರೆ ಪತಿಗೆ ಹೇಳದೆ ಮಾತ್ರೆಗಳನ್ನು ಬಳಸುವುದರಿಂದ ಗಂಡಸರು ತಮ್ಮಲ್ಲೇ ದೋಷವಿದೆಯೇನೋ ಎಂದು ಭಾವಿಸಿ ತಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಟಿ.ವಿ, ಎಂಬ ಮಾಯಾಂಗನೆಯ ಮೊರೆಹೊಕ್ಕುತ್ತಾರೆ.
ಆದರೆ ಜಾಣ ಮಹಿಳೆ ತಾನು ಮಾತ್ರೆಗಳನ್ನು ಉಪಯೋಗಿಸುತ್ತಿರುವ ಸಂಗತಿಯನ್ನು ಪತಿಗೆ ತಿಳಿಸಿದಾಗ ಆತನಿಗೆ ಇದೊಂದು ಸಹಜ ಕ್ರಿಯೆ ಎಂದು ಅರಿವಾಗಿ ಗಂಡ-ಹೆಂಡತಿ ಇಬ್ಬರೂ ನಿರಮ್ಮಳರಾಗುತ್ತಾರೆ.













