ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, September 23, 2006

ಮಜಾವಾಣಿ: ವಾಣಿಜ್ಯ - ಉದ್ದಿಮೆ

JPM Pvt Ltdಗೆ ISO 9001 ಮಾನ್ಯತೆ

ಬೆಂಗಳೂರು, ಜೂನ್ ೧೧, ೨೦೦೭: ಬೆಂಗಳೂರಿನ ಜನಶಕ್ತಿ ಪ್ರೊಟೆಸ್ಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (JPM) ಸಂಸ್ಥೆ ಇತ್ತೀಚೆಗೆ ಪ್ರತಿಷ್ಠಿತ ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿದೆ. JPM ಸಂಸ್ಥೆಯ ಸಿ.ಇ.ಓ. ನಾಗರಾಜ್ ವಾಟಾಳ್ ಅವರು ಈ ವಿಷಯವನ್ನು ನಮ್ಮ ಪತ್ರಿಕೆಗೆ ತಿಳಿಸಿದರು.

ಪ್ರತಿಭಟನಾ ನಿರ್ವಹಣಾ ಸಂಸ್ಥೆಗಳಲ್ಲಿ ಜೆ.ಎಸ್.ಎಸ್. ಐ.ಎಸ್.ಓ. ೯೦೦೧ ಸರ್‍ಟಿಫಿಕೇಟ್ ಪಡೆದ ಮೊದಲ ಸಂಸ್ಥೆಯಾಗಿದ್ದು ಹಲವು ದಶಕಗಳ ಬಂದ್, ಪ್ರತಿಭಟನೆ, ಪ್ರದರ್ಶನ, ಉಪವಾಸಗಳ ನಿರ್ವಹಣೆಯ ಅನುಭವ ಪಡೆದಿದೆ.

ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿರುವ ಹಿನ್ನೆಲೆಯಲ್ಲಿ, ತಮ್ಮ ಸಂಸ್ಥೆಯ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದ ವಾಟಾಳ್ ಅವರು, "ಜಾಗತೀಕರಣದ ಇಂದಿನ ಸಂದರ್ಭದಲ್ಲಿ, ಜನರಿಗೆ ಪ್ರತಿಭಟನೆ ನಡೆಸಲೂ ಸಮಯ ಇಲ್ಲ. ಆದ್ದರಿಂದ ಜೆ.ಪಿ.ಎಂ.ನಂತಹ Protest Management ಸಂಸ್ಥೆಗಳು ಅನಿವಾರ್ಯವಾಗಿವೆ. 'Your Cause - Our Mass' ನಮ್ಮ ಸಂಸ್ಥೆಯ ಮೋಟೊ ಆಗಿದ್ದು, ಯಾವುದೇ ಕಾರಣಕ್ಕೆ ಯಾವುದೇ ಗಾತ್ರದ ಪ್ರತಿಭಟನೆಯನ್ನು ಅತ್ಯಂತ ಸುಲಭದರದಲ್ಲಿ ಅಚ್ಚುಕಟ್ಟಾಗಿ ನಡೆಸಲು ನಮ್ಮ ಸಂಸ್ಥೆ ಸಿದ್ಧವಿದೆ. ಗಾಂಧಿ ಪ್ರತಿಮೆಯ ಮುಂದೆ ಒಬ್ಬ ವ್ಯಕ್ತಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕುಳಿತುಕೊಳ್ಳುವ ಸ್ಟಾಂಡರ್ಡ್ ಗಾಂಧಿ ಪ್ಯಾಕೇಜಿನಿಂದ, ಕಲ್ಲು-ತೂರಾಟ, ಎಫಿಜಿ ಬರ್ನಿಂಗ್, ಕತ್ತೆ ಮೆರವಣಿಗೆ, ಚಪ್ಪಲಿ ಹಾರ, ಸಂಪೂರ್ಣ ಬಂದ್ ಒಳಗೊಂಡ ಕ್ಯಾಲ್ಕಟಾ ಕಮೋಷನ್ ವರೆಗೆ ಹಲವಾರು ಪ್ಯಾಕೇಜುಗಳು ನಮ್ಮಲ್ಲಿ ಲಭ್ಯವಿದ್ದು, ಪ್ರತಿಭಟನೆಗೆ ಬೇಕಾದ ಸಕಲ ಸಲಕರಣೆಗಳನ್ನೂ ನಾವೇ ಒದಗಿಸುತ್ತೇವೆ" ಎಂದರು.

ಎನ್ವಿರಾನ್‌ಮೆಂಟಲಿ ಸೇಫ್ ಎಫಿಜಿಗಳು ನಮ್ಮ ಸಂಸ್ಥೆಯ ವೈಶಿಷ್ಟ್ಯವಾಗಿದ್ದು, ನಮ್ಮ ಎಫಿಜಿಗಳ ಬಗೆಗೆ ಅರುಂಧತಿ ರಾಯ್ ಸಹ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಎಫಿಜಿಗಳು ಇತರೆ ಎಫಿಜಿಗಳಿಗಿಂತ ೭೭% ನಿಧಾನವಾಗಿ ಉರಿಯುವುದಲ್ಲದೆ, ಅದರ ಹೊಗೆ ವಾತಾವರಣವನ್ನು ಕಲುಷಿತಗೊಳಿಸುವ ಯಾವುದೇ ಕೆಮಿಕಲ್ಸ್ ಹೊಂದಿಲ್ಲ. ತಾಲೂಕ್ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಎಲ್ಲಾ ನಾಯಕರ ಎಫಿಜಿಗಳು ನಮ್ಮಲ್ಲಿ ಲಭ್ಯವಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಬೇಡಿಕೆ ಇರುವ ಬುಷ್ ಮತ್ತು ಇದ್ದಕ್ಕಿದ್ದಂತೆ ಬೇಡಿಕೆ ಏರಿಸಿಕೊಂಡಿರುವ ಪೋಪ್ ಎಫಿಜಿಗಳೂ ಸಹ ನಮ್ಮಲ್ಲಿ ದೊರೆಯುತ್ತಿವೆ." ಎಂದ ವಾಟಾಳರು, "ಸದ್ಯಕ್ಕೆ ಎಫಿಜಿ ಸೇಲ್ ನಡೆಯುತ್ತಿದ್ದು, ಎರಡು ಬುಶ್ ಎಫಿಜಿ ಕೊಂಡವರಿಗೆ ಒಂದು ದಲೈ ಲಾಮ ಅಥವಾ ನೆಲ್ಸನ್ ಮಂಡೇಲಾ ಎಫಿಜಿ ಉಚಿತವಾಗಿ ನೀಡುತ್ತಿದ್ದೇವೆ. ಸ್ಟಾಕ್ ಇರುವವರೆಗೆ ಮಾತ್ರ ಈ ಸೇಲ್ ನಡೆಯಲಿದೆ" ಎಂದರು.

JPM ಸಂಸ್ಥೆಯ ಸೇವಾ ಸೌಲಭ್ಯಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದ್ದು, ವೈಯುಕ್ತಿಕ ಬಳಕೆದಾರನಿಂದ ಹಿಡಿದು ಬಹುರಾಷ್ಟ್ರೀಯ ಸಂಸ್ಥೆಗಳವರೆಗೆ ಎಲ್ಲರೂ ಉಪಯೋಗಿಸಿಕೊಳ್ಳಬಹುದಾಗಿದೆ. ಬಳಕೆದಾರರು ಕ್ಯಾಶ್ ಅಥವಾ ಕ್ರೆಡಿಟ್ ಕಾರ್ಡಿನ ಮೂಲಕ ಹಣ ಪಾವತಿ ಮಾಡುವ ಸೌಲಭ್ಯ ಇದ್ದು, ಕೆಲವು ಪ್ಯಾಕೇಜುಗಳಿಗೆ ಇ.ಎಮ್.ಐ. ಸೌಲಭ್ಯ ಸಹ ಇದೆ.


ಮಜಾವಾಣಿ ಕ್ಲಾಸಿಫೈಡ್ಸ್

ಬೇಕಾಗಿದ್ದಾರೆ

ಪ್ರತಿಷ್ಠಿತ ಪ್ರೊಟೆಸ್ಟ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದಕ್ಕೆ ಆಮರಣಾಂತ ಉಪವಾಸ ಪ್ರವೀಣರು, ಮತ್ತು ಅನುಭವಿ ಆತ್ಮಾಹುತಿ ನಿಪುಣರು ಬೇಕಾಗಿದ್ದಾರೆ. ಅತ್ಯುತ್ತಮ ಸಂಬಳ ಮತ್ತು ಬೋನಸ್. ಆಸಕ್ತಿಯುಳ್ಳ ಅಭ್ಯರ್ಥಿಗಳು ೧೩ ಪಾಸಪೋರ್ಟ್ ಫೋಟೋಗಳು ಮತ್ತು ಪೋಲೀಸ್ ಸರ್ಟಿಫಿಕೇಟ್ ಒಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು.

ಅ.ಉ./ಆ.ನಿ. ವಿಭಾಗ,
ಜೆ.ಪಿ.ಎಂ. ಪ್ರೈವೇಟ್ ಲಿಮಿಟೆಡ್
ನಂ. ೧೩, ಹರಿಶ್ಚಂದ್ರ ಘಾಟ್ ರಸ್ತೆ,
ಬೆಂಗಳೂರು-೧೩

Labels: ,

9 Comments:

Blogger ಪಬ್ said...

ಇದು ನಿಜಕ್ಕೂ ಒಳ್ಳೆಯ ಸುದ್ದಿ. ಹೆಂಡದ ಮೇಲಿನ ತೆರಿಗೆಗಳು ಅತಿಯಾಗಿ ಹೆಚ್ಚುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಲು ನನಗೂ ಇಂತಹ ಒಂದು ಇವೆಂಟ್ ಮ್ಯಾನೇಜ್‌ಮೆಂಟ್ ಗ್ರೂಪಿನ ಸಹಾಯ ಬೇಕಾಗಿತ್ತು. ಅವರನ್ನು ನನ್ನ ಕಡೆ ಕಳುಹಿಸಿ.

-ಪಬ್ಬಿಗ

September 24, 2006 12:23 AM  
Blogger P Kalyan said...

ಟೈಮ್ಸ್ ಆಫ್ ಇಂಡಿಯಾದವರು ತಮ್ಮ ಪತ್ರಿಕಾಲಯದಿಂದ ಮಜಾವಾಣಿಯು ಕಾಲಯಂತ್ರವನ್ನು ಕದ್ದು ಮುಂಬರುವ ಸುದ್ದಿಗಳನ್ನು ಈಗಲೇ ಪ್ರಕಟಿಸುತ್ತಿದೆಯೆಂದೂ, ಇದರಿಂದ ನಮಗೆ ಅನ್ಯಾಯವಾಗಿದೆಯೆಂದೂ, ಅದಕ್ಕಾಗಿ ಒಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರಂತಲ್ಲ!

ಇದರ ಗುತ್ತಿಗೆಯನ್ನು JPM ಸಂಸ್ಥೆಗೆ ನೀಡಿದ್ದಾರೆಂದು ಸುದ್ದಿ! ಇದಕ್ಕಾಗಿ JPM ಸಂಸ್ಥೆಯು ನಮ್ಮ ಪಕ್ಕದ ರಾಜ್ಯದಿಂದ ಭಾರಿ ಸಂಖ್ಯೆಯಲ್ಲಿ ಅನುಭವಿ ಆತ್ಮಾಹುತಿ ನಿಪುಣರನ್ನು ಕೆಲಸಕ್ಕೆ ಸೇರಿಸಿಕೊಂಡಿದೆಯಂತೆ!!

September 24, 2006 6:58 AM  
Blogger ಅಸತ್ಯ ಅನ್ವೇಷಿ said...

ಸ್ವಾಮೀ,
ಆತ್ಮಾಹುತಿ ನಿಪುಣರು ಬೇಕಾಗಿದ್ದಾರೆ ಅಂತ ಹಾಕಿದ್ದೀರಲ್ಲಾ...
ಅಲ್ಲಿಗೆ ಅರ್ಜಿ ಸಲ್ಲಿಸಿದರೆ,
ಮಜಾವಾಣಿ ಬ್ಯುರೋದ seal ಸಹಿತ "Recieved" ಅಂತ ಹಾಕಿದ ಪ್ರತಿ-ಕವರ್ ಬಂದಿದೆಯಲ್ಲಾ...!!! :(

September 27, 2006 3:59 AM  
Blogger V.V. said...

ಪಬೃತಿಗಳೇ,

ಜೆ.ಪಿ.ಎಂ. ಸಂಸ್ಥೆಯ ಸೇವೆಯನ್ನು ಬಳಸಲು ನೀವು ನಿರ್ಧರಿಸಿರುವುದು ಅತ್ಯಂತ ಸಂತಸದ ವಿಷಯ. ಆ ಸಂಸ್ಥೆಯನ್ನು ಸಂಪರ್ಕಿಸಿದಾಗ "ಮಜಾವಾಣಿಯಲ್ಲಿ ನೋಡಿದೆ" ಎಂದೆನ್ನಲು ಮರೆಯಬೇಡಿ. ಅಂತಹ ಸಂಸ್ಥೆಗಳ ಜಾಹೀರಾತುಗಳೇ ನಮ್ಮ ಪತ್ರಿಕೆಯ ಜೀವಾಳ.

ಕಲ್ಯಾಣ್,
ಟೈಮ್ಸ್ ಆಫ್ ಇಂಡಿಯಾ ನಮ್ಮ ಪತ್ರಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದು ಸಂದೇಹಾಸ್ಪದ. ಟೈಮ್ಸ್ ನಮಗೆ ಅತ್ಯಂತ ಪ್ರಿಯವಾದ ಪತ್ರಿಕೆ. ಆ ಪತ್ರಿಕೆಯಲ್ಲಿ ಪ್ರಕಟವಾಗುವ ಚಿತ್ರಗಳಂತೂ ನಮ್ಮ ಪತ್ರಿಕೆಯ ಇಡೀ ಸಂಪಾದಕವರ್ಗಕ್ಕೆ ಅಚ್ಚುಮೆಚ್ಚು. ಭವಿಷ್ಯತ್ತಿನ ವರ್ತಮಾನ ಪ್ರಕಟಿಸಲು ಟೈಮ್ಸ್ ನಮಗೆ ಕಾಲಯಂತ್ರವನ್ನು ಕೊಡುಗೆಯಾಗಿ ನೀಡಿದೆ. ನಾವು ಖಂಡಿತಾ ಅದನ್ನು ಕದ್ದಿಲ್ಲ. ಬೇಕಾದರೆ ನಮ್ಮನ್ನು ಮಂಪರು ಚಿಕಿತ್ಸೆಗೆ ಒಳಪಡಿಸಿ.

"ನಮ್ಮ ಪಕ್ಕದ ರಾಜ್ಯದವರು ಪಡೆದಂತಹ ನೈಪುಣ್ಯತೆ ನಮ್ಮ ರಾಜ್ಯದವರಲ್ಲಿ ಇಲ್ಲ್ಸ ಆದ್ದರಿಂದಲೇ ಈ ಹುದ್ದೆಗಳಿಗೆ ಅವರನ್ನೇ ನೇಮಕ ಮಾಡಿಕೊಳ್ಳಲಾಗಿದೆ" ಎಂದು ಜೆ.ಪಿ.ಎಂ. ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅನ್ವೇಷಿಗಳೇ,
ನಮ್ಮ ಪತ್ರಿಕೆಯ "ವಾಚಕರ ಕಿರುಚು" ವಿಭಾಗಕ್ಕೆ ತಾವು ಅಕಸ್ಮಾತ್ತಾಗಿ ಕಳುಹಿಸಿದ ಅರ್ಜಿಯನ್ನು ನಾವು ಜೆ.ಪಿ.ಎಂ.ಗೆ ಕಳುಹಿಸಲಿದ್ದೇವೆ. ಯೋಚಿಸದಿರಿ.

ವಂದನೆಗಳೊಂದಿಗೆ,

ವಿ.ವಿ.
ಮಹಾ ಪ್ರಧಾನ ವ್ಯವಸ್ಥಾಪಕ ಮುಖ್ಯ ಉಪ ಸಂಪಾದಕ

September 27, 2006 12:48 PM  
Anonymous Anonymous said...

ದಿಲ್ಲಿಯ ವೈದ್ಯಕೀಯ ವಿದ್ಯಾರ್ಥಿಗಳ ಮೀಸಲಾತಿ ವಿರೋಧಿ ಹೋರಾಟವನ್ನು ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯೊಂದು ನಿರ್ವಹಿಸಿದ್ದು ಎಂದು ತಿಳಿದ ಮೇಲೆ ನಿಮ್ಮ ಬರೆಹ ಓದು ನಗು ಬರುತ್ತಿಲ್ಲ. ಇತ್ತೀಚೆಗೆ ಜೋಕ್, ವ್ಯಂಗ್ಯಚಿತ್ರ, ವಿಡಂಬನೆಗಳಿಗೆಲ್ಲಾ ಅವಕಾಶವೇ ಇಲ್ಲದಂತೆ ನಾವು ಬದಲಾಗಿದ್ದೇವೆ.
-ಕೃಷ್ಣಮೂರ್ತಿ

October 02, 2006 7:00 AM  
Blogger Shiv said...

ವಿವಿ ಅವರೇ,

ಮಜವಾಣಿಯ ಕಡೆ ಸಂಚಿಕೆ ಸೆಪ್ಟಂಬರ್‍ನಲ್ಲಿ ಬಂದಿದೆ..ಅದರ ನಂತರ ಸುದ್ದಿಯೇ ಇಲ್ಲಾ..ನಾವು ಇದರ ವಿರುದ್ದ ಪ್ರತಿಭಟಿಸಲು ಜೆಪಿಮ್ ಅವರಿಗೆ ಕೇಳಿಕೊಳ್ಳಬೇಕೆಂದಿದ್ದೇವೆ.

November 02, 2006 4:06 AM  
Blogger ಪಬ್ said...

ಪ್ರತಿಭಟನೆಯ ಕಾರ್ಯಕ್ರಮಕ್ಕೆ ನಾನೂ ಬರುವೆ. ಎಲ್ಲಿ ಯಾವಾಗ ತಿಳಿಸಿ.

-ಪಬ್

November 08, 2006 11:38 PM  
Anonymous Anonymous said...

ಮಜ ಮಜಾ ವರದಿಗಳನ್ನು ಒಪ್ಪಿಸುತ್ತಿರುವ 'ವಾಣಿ'ಗೆ ಶರಣು. 'ಮಹಾ ಪ್ರಧಾನ ವ್ಯವಸ್ಥಾಪಕ ಮುಖ್ಯ ಉಪ ಸಂಪಾದಕ' ಅಂತ ನಿಮ್ಮನ್ನು ನೀವು ಕರೆದುಕೊಂಡಿರುವುದೂ ಚೆನ್ನಾಗಿದೆ :)

ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.

November 15, 2006 5:44 AM  
Anonymous Anonymous said...

naw arrivel

July 14, 2011 3:14 AM  

Post a Comment

Links to this post:

Create a Link

<< Home