ಮಜಾವಾಣಿ: ವಾಣಿಜ್ಯ - ಉದ್ದಿಮೆ

ಬೆಂಗಳೂರು, ಜೂನ್ ೧೧, ೨೦೦೭: ಬೆಂಗಳೂರಿನ ಜನಶಕ್ತಿ ಪ್ರೊಟೆಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ (JPM) ಸಂಸ್ಥೆ ಇತ್ತೀಚೆಗೆ ಪ್ರತಿಷ್ಠಿತ ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿದೆ. JPM ಸಂಸ್ಥೆಯ ಸಿ.ಇ.ಓ. ನಾಗರಾಜ್ ವಾಟಾಳ್ ಅವರು ಈ ವಿಷಯವನ್ನು ನಮ್ಮ ಪತ್ರಿಕೆಗೆ ತಿಳಿಸಿದರು.
ಪ್ರತಿಭಟನಾ ನಿರ್ವಹಣಾ ಸಂಸ್ಥೆಗಳಲ್ಲಿ ಜೆ.ಎಸ್.ಎಸ್. ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದ ಮೊದಲ ಸಂಸ್ಥೆಯಾಗಿದ್ದು ಹಲವು ದಶಕಗಳ ಬಂದ್, ಪ್ರತಿಭಟನೆ, ಪ್ರದರ್ಶನ, ಉಪವಾಸಗಳ ನಿರ್ವಹಣೆಯ ಅನುಭವ ಪಡೆದಿದೆ.
ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿರುವ ಹಿನ್ನೆಲೆಯಲ್ಲಿ, ತಮ್ಮ ಸಂಸ್ಥೆಯ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದ ವಾಟಾಳ್ ಅವರು, "ಜಾಗತೀಕರಣದ ಇಂದಿನ ಸಂದರ್ಭದಲ್ಲಿ, ಜನರಿಗೆ ಪ್ರತಿಭಟನೆ ನಡೆಸಲೂ ಸಮಯ ಇಲ್ಲ. ಆದ್ದರಿಂದ ಜೆ.ಪಿ.ಎಂ.ನಂತಹ Protest Management ಸಂಸ್ಥೆಗಳು ಅನಿವಾರ್ಯವಾಗಿವೆ. 'Your Cause - Our Mass' ನಮ್ಮ ಸಂಸ್ಥೆಯ ಮೋಟೊ ಆಗಿದ್ದು, ಯಾವುದೇ ಕಾರಣಕ್ಕೆ ಯಾವುದೇ ಗಾತ್ರದ ಪ್ರತಿಭಟನೆಯನ್ನು ಅತ್ಯಂತ ಸುಲಭದರದಲ್ಲಿ ಅಚ್ಚುಕಟ್ಟಾಗಿ ನಡೆಸಲು ನಮ್ಮ ಸಂಸ್ಥೆ ಸಿದ್ಧವಿದೆ. ಗಾಂಧಿ ಪ್ರತಿಮೆಯ ಮುಂದೆ ಒಬ್ಬ ವ್ಯಕ್ತಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕುಳಿತುಕೊಳ್ಳುವ ಸ್ಟಾಂಡರ್ಡ್ ಗಾಂಧಿ ಪ್ಯಾಕೇಜಿನಿಂದ, ಕಲ್ಲು-ತೂರಾಟ, ಎಫಿಜಿ ಬರ್ನಿಂಗ್, ಕತ್ತೆ ಮೆರವಣಿಗೆ, ಚಪ್ಪಲಿ ಹಾರ, ಸಂಪೂರ್ಣ ಬಂದ್ ಒಳಗೊಂಡ ಕ್ಯಾಲ್ಕಟಾ ಕಮೋಷನ್ ವರೆಗೆ ಹಲವಾರು ಪ್ಯಾಕೇಜುಗಳು ನಮ್ಮಲ್ಲಿ ಲಭ್ಯವಿದ್ದು, ಪ್ರತಿಭಟನೆಗೆ ಬೇಕಾದ ಸಕಲ ಸಲಕರಣೆಗಳನ್ನೂ ನಾವೇ ಒದಗಿಸುತ್ತೇವೆ" ಎಂದರು.

ಎನ್ವಿರಾನ್ಮೆಂಟಲಿ ಸೇಫ್ ಎಫಿಜಿಗಳು ನಮ್ಮ ಸಂಸ್ಥೆಯ ವೈಶಿಷ್ಟ್ಯವಾಗಿದ್ದು, ನಮ್ಮ ಎಫಿಜಿಗಳ ಬಗೆಗೆ ಅರುಂಧತಿ ರಾಯ್ ಸಹ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಎಫಿಜಿಗಳು ಇತರೆ ಎಫಿಜಿಗಳಿಗಿಂತ ೭೭% ನಿಧಾನವಾಗಿ ಉರಿಯುವುದಲ್ಲದೆ, ಅದರ ಹೊಗೆ ವಾತಾವರಣವನ್ನು ಕಲುಷಿತಗೊಳಿಸುವ ಯಾವುದೇ ಕೆಮಿಕಲ್ಸ್ ಹೊಂದಿಲ್ಲ. ತಾಲೂಕ್ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಎಲ್ಲಾ ನಾಯಕರ ಎಫಿಜಿಗಳು ನಮ್ಮಲ್ಲಿ ಲಭ್ಯವಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಬೇಡಿಕೆ ಇರುವ ಬುಷ್ ಮತ್ತು ಇದ್ದಕ್ಕಿದ್ದಂತೆ ಬೇಡಿಕೆ ಏರಿಸಿಕೊಂಡಿರುವ ಪೋಪ್ ಎಫಿಜಿಗಳೂ ಸಹ ನಮ್ಮಲ್ಲಿ ದೊರೆಯುತ್ತಿವೆ." ಎಂದ ವಾಟಾಳರು, "ಸದ್ಯಕ್ಕೆ ಎಫಿಜಿ ಸೇಲ್ ನಡೆಯುತ್ತಿದ್ದು, ಎರಡು ಬುಶ್ ಎಫಿಜಿ ಕೊಂಡವರಿಗೆ ಒಂದು ದಲೈ ಲಾಮ ಅಥವಾ ನೆಲ್ಸನ್ ಮಂಡೇಲಾ ಎಫಿಜಿ ಉಚಿತವಾಗಿ ನೀಡುತ್ತಿದ್ದೇವೆ. ಸ್ಟಾಕ್ ಇರುವವರೆಗೆ ಮಾತ್ರ ಈ ಸೇಲ್ ನಡೆಯಲಿದೆ" ಎಂದರು.
JPM ಸಂಸ್ಥೆಯ ಸೇವಾ ಸೌಲಭ್ಯಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದ್ದು, ವೈಯುಕ್ತಿಕ ಬಳಕೆದಾರನಿಂದ ಹಿಡಿದು ಬಹುರಾಷ್ಟ್ರೀಯ ಸಂಸ್ಥೆಗಳವರೆಗೆ ಎಲ್ಲರೂ ಉಪಯೋಗಿಸಿಕೊಳ್ಳಬಹುದಾಗಿದೆ. ಬಳಕೆದಾರರು ಕ್ಯಾಶ್ ಅಥವಾ ಕ್ರೆಡಿಟ್ ಕಾರ್ಡಿನ ಮೂಲಕ ಹಣ ಪಾವತಿ ಮಾಡುವ ಸೌಲಭ್ಯ ಇದ್ದು, ಕೆಲವು ಪ್ಯಾಕೇಜುಗಳಿಗೆ ಇ.ಎಮ್.ಐ. ಸೌಲಭ್ಯ ಸಹ ಇದೆ.
ಮಜಾವಾಣಿ ಕ್ಲಾಸಿಫೈಡ್ಸ್
ಬೇಕಾಗಿದ್ದಾರೆ
ಪ್ರತಿಷ್ಠಿತ ಪ್ರೊಟೆಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದಕ್ಕೆ ಆಮರಣಾಂತ ಉಪವಾಸ ಪ್ರವೀಣರು, ಮತ್ತು ಅನುಭವಿ ಆತ್ಮಾಹುತಿ ನಿಪುಣರು ಬೇಕಾಗಿದ್ದಾರೆ. ಅತ್ಯುತ್ತಮ ಸಂಬಳ ಮತ್ತು ಬೋನಸ್. ಆಸಕ್ತಿಯುಳ್ಳ ಅಭ್ಯರ್ಥಿಗಳು ೧೩ ಪಾಸಪೋರ್ಟ್ ಫೋಟೋಗಳು ಮತ್ತು ಪೋಲೀಸ್ ಸರ್ಟಿಫಿಕೇಟ್ ಒಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳಿಸಬೇಕು.
ಅ.ಉ./ಆ.ನಿ. ವಿಭಾಗ,
ಜೆ.ಪಿ.ಎಂ. ಪ್ರೈವೇಟ್ ಲಿಮಿಟೆಡ್
ನಂ. ೧೩, ಹರಿಶ್ಚಂದ್ರ ಘಾಟ್ ರಸ್ತೆ,
ಬೆಂಗಳೂರು-೧೩