ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, June 16, 2006

ಮಜಾವಾಣಿ ಪುಸ್ತಕ ವಿಮರ್ಶೆ

"ಮಧ್ಯರಾತ್ರಿ. ಅಮಾವಾಸ್ಯೆಯ ಘೋರಾಂಧಕಾರ. ಭೋರ್ಗೆರೆಯುತ್ತಿರುವ ಮಳೆ. ವಿಧಾನ ಸೌಧದ ಕಲ್ಲಿನ ಅಡಿಪಾಯವನ್ನೇ ಅಲುಗಾಡಿಸುವಂತಹ ಸಿಡಿಲು, ಮಿಂಚು, ಗುಡುಗು. ಇಂತಹ ಕರಾಳ ರಾತ್ರಿಯಲ್ಲಿ ವಿಧಾನ ಸೌಧದ ನೆಲ ಮಾಳಿಗೆಯಲ್ಲಿ, ಮಹಿಳೆಯೋರ್ವಳ ಸತ್ತ ಹೆಣ ಪತ್ತೆಯಾಯಿತು. ಸತ್ತಿದ್ದವಳು ಕು.ಪ್ರಜಾ ಸತ್ತೆ, ವಿಧಾನ ಸೌಧದ ಅಸಲೀ ವಾರಸುದಾರಳು."

"ದ ಬೋ ಫೋರ್ಸ್ ಗನ್ಸ್"ನಿಂದ ಅಪಾರ ಹೆಸರು ಮತ್ತು ಹಣ ಗಳಿಸಿರುವ ಕ್ವಾರ್ಟರ್ ಚೀಚೀಯವರ ಹೊಸ ಕೃತಿ "ದಿ ದೇವೇ N ಸಿ ಕೋಡ್" ಆರಂಭವಾಗುವುದು ಹೀಗೆ. ಮೊದಲನೆಯ ಪುಟದ ಮೊದಲ ಸಾಲಿನಿಂದ, ಕಡೆಯ ಪುಟದ ಕಡೆಯ ಸಾಲಿನವರೆಗೆ ಕಣ್ಣೆವೆಯಿಕ್ಕದೆ ಒಂದೇ ಸಮನೆ ಓದಿಸಿಕೊಂಡು ಹೋಗುವ ಈ ಪುಸ್ತಕ ಎರಡು ಮಜಲುಗಳಲ್ಲಿ ಕೆಲಸ ಮಾಡುತ್ತದೆ. ಒಂದು, ಇಂಟ್ರೀಗ್- ಕಾನ್ಸ್ಪಿರಸಿ ತುಂಬಿದ ಮೈನವಿರೇಳಿಸುವ ಪತ್ತೇದಾರಿ ಕೃತಿಯಾಗಿ; ಇನ್ನೊಂದು, ಈ ಕೃತಿಯ ಪ್ರೋಟಾಗನಿಸ್ಟ್‌ಗಳಾದ ದೇವೇ ಮತ್ತು ಸಿಡ್‍ಗಳ ನಡುವಿನ ಊರ್ಧ್ವಮುಖಿ ಪೈಪೋಟಿಯ ಅನಿವಾರ್ಯತೆ ಕುಮಾರಿ ಸತ್ತೆಯ ಸಾವಿಗೆ ಕಾರಣವಾಗುವ ಸಂಕೀರ್ಣ ಮತ್ತು ಎಕ್ಸಿಸ್ಟೆಂಷಿಯಲ್ ಪ್ರಶ್ನೆಗಳನ್ನು ಹಾಕುವ ಮಹತ್ವದ ಕೃತಿಯಾಗಿ.

ನೈಜ ಸನ್ನಿವೇಶಗಳಿಗೆ ಕಲ್ಪನೆಯನ್ನು ಸೇರಿಸಿ ಒಂದು ಅದ್ಭುತ ಕತೆಯನ್ನು ನೇಯ್ದು ಓದುಗರನ್ನು ಬೇರೊಂದು ಲೋಕಕ್ಕೇ ಒಯ್ಯುವ ಕತೆಗಾರನ ಪರಿಣಿತಿ, ಜಾಣತನ ಇಲ್ಲಿ ಎದ್ದು ಕಾಣುತ್ತದೆ. ಉದಾಹರಣೆಗೆ, ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಮಾಲೀಕರಾಗುವ ಪೈಪೋಟಿಯಲ್ಲಿರುವ ದೇವೇ ಮತ್ತು ಸಿಡ್ ನಡುವಿನ ಸಂಭಾಷಣೆಯನ್ನು ಗಮನಿಸಿ.

ಸಿಡ್: ದೇವೇ, ಪ್ರಜಾ ಆಸೆ ಬಿಟ್ಟು ಬಿಡು. ಅವಳಿಗಾಗಿ ನಾನು ನನ್ನ ಜೀವ ಕೊಡಲೂ ಸಿದ್ಧ. ಜೊತೆಗೆ, ನಿನಗೀಗಲೇ ವಯಸ್ಸಾಗಿದೆ.
ದೇವೇ: ಸಿಡ್, ನೀನೊಬ್ಬ ಮೂರ್ಖ. ನಾನು ಪ್ರಜಾಗಾಗಿ ಆಸೆ ಪಡುವುದು ನನಗೋಸ್ಕರ ಅಲ್ಲ. ನನ್ನ ಮಗನಿಗೋಸ್ಕರ.
ಸಿಡ್: ನಾನು ಮೂರ್ಖ ಆದರೆ, ನೀನು ಕುಂಭಕರ್ಣ. ನನ್ನನ್ನು ಮದುವೆಯಾದರೆ, ಮಧುಚಂದ್ರಕ್ಕೆ ಚಂದ್ರಗ್ರಹಕ್ಕೆ ಹೋಗೋಣ ಅಂತ ಅವಳಿಗೆ ನಾನಾಗಲೇ ಹೇಳಿಯಾಗಿದೆ.
ದೇವೇ: ಚಂದ್ರಗ್ರಹಾನಾ?! ಮಣ್ಣೆತ್ತೋ ಟ್ರ್ಯಾಕ್ಟರ್ ಓಡ್ಸಕ್ಕೆ ಬರೋದಿಲ್ಲ, ರಾಕೆಟ್ಟೋಡಿಸಿಕೊಂಡು ಹೋಗ್ತೀಯಾ?!
ಸಿಡ್: ಬೇಡಾ, ಬೇಡಾ. ಆ ವಿಷ್ಯಾ ತೆಗೀ ಬೇಡಾ. ನನಗೆ ತುಂಬಾ ಕೋಪ ಬರುತ್ತೆ.
ದೇವೇ: ಬಂದ್ರೇ ಏನ್ಮಾಡ್ತೀಯಾ?
ಸಿಡ್: ಏನ್ಮಾಡ್ತೀನಾ?! ರೋಮ್ ರಮಣೀಗೆ ಹೇಳ್ತೀನಿ.
ದೇವೇ: ಅದಕ್ಕೇ ನಿನ್ನ ಮೂರ್ಖ ಅಂದಿದ್ದು. ರೋಮ್ ರಮಣಿ ನಿನ್ನ ಮಾತು ಕೇಳ್ತಾಳೆ ಅಂದುಕೊಂಡ್ಯಾ? ಮಣ್ಣೆತ್ತೋ ಟ್ರ್ಯಾಕ್ಟರ್ ಲೀವರ್ ಹಾಳ್ಮಾಡಿಸಿದ್ದು ಯಾರು ಅಂದುಕೊಂಡೆ?!

ಸಿಡ್‍ಗೆ ಯೋಚನೆ ಶುರು ಆಯಿತು. 'ರೋಮ್ ರಮಣಿ ನನ್ನ ಬೆನ್ನಿಗೇ ಬರೆ ಹಾಕೋ ಒಳ ಸಂಚು ಮಾಡ್ತಿರಬಹುದಾ' ಅನ್ನೋ ಸಂಶಯದ ದುಂಬಿ ಅವನ ಮನದ ತೋಟದಲ್ಲಿ ಗುನುಗುನಿಸಲು ಆರಂಭಿಸಿತು.
ಚೀಚೀಯವರ ಅದ್ಭುತ ಕಲ್ಪನಾ ಶಕ್ತಿಯಿಂದ, ವಾಸ್ತವದಲ್ಲಿ ಕೇವಲ ಉಪ ಗ್ರಹವಾದ ಚಂದ್ರ, ಸಿಡ್ ಮತ್ತು ದೇವೇ ಸಂಭಾಷಣೆಯಲ್ಲಿ ಒಂದು 'ಗ್ರಹ'ವಾಗಿ ಮಾರ್ಪಾಡಾಗುತ್ತೆ. ಹಾಗೆಯೇ, ಒಂದು ಸಣ್ಣ ಎಕ್ಸ್‌ಕವೇಟರ್ ಆಕಸ್ಮಿಕ, ಚೀಚೀಯವರ ಕಲ್ಪನಾ ಲಹರಿಗೆ ಸಿಕ್ಕಿ ಒಂದು ನಿಗೂಢ ಕಾನ್ಸ್ಪಿರಸಿಯಾಗಿ ತಯಾರಾಗುತ್ತೆ. ದುಂಬಿಯೊಂದು ತೋಟದಲ್ಲಿ ಗುನುಗುನಿಸುವ ಅತ್ಯದ್ಭುತ ಪ್ರತಿಮೆಗೆ ಕಾರಣವಾಗುತ್ತೆ.

ಇದಿಷ್ಟೇ ಆಗಿದ್ದಿದ್ದರೆ, "ದ ದೇವೇ N ಸಿ ಕೋಡ್", ಕೇವಲ ಒಂದು ಮಹಾನ್ ಪತ್ತೇದಾರಿ ಕತೆಯಾಗಿ ಉಳಿದು ಬಿಡುತ್ತಿತ್ತು. ಆದರೆ, ಕ್ವಾರ್ಟರ್ ಚೀಚೀಯಂತಹ ನುರಿತ ಕತೆಗಾರ ಮತ್ತು ಮಹಾನ್ ಚಿಂತಕನ ಕುಂಚಕ್ಕೆ ಸಿಕ್ಕಿ, ಒಂದು ಸಣ್ಣ ಪತ್ತೇದಾರಿ ಕತೆ, ಇಂದಿನ ಜಾಗತೀಕರಣ-ಉದಾರೀಕರಣ ಸಂದರ್ಭದಲ್ಲಿ ಪ್ರಜಾ ಸತ್ತೆಯ ಉಳಿವು-ಅಳಿವು, ಮನುಷ್ಯನ ಲಿವರ್ ಅನ್ನು ಯಂತ್ರಕ್ಕೆ ಅಳವಡಿಸಬಹುದೇ? ಮುಂತಾದ ಸಂಕೀರ್ಣ ಪ್ರಶ್ನೆಗಳನ್ನೆತ್ತುವ ಒಂದು ಮೊರಾಲಿಟಿ ಪ್ಲೇ ಆಗಿ ಮಾರ್ಪಾಡಾಗಿದೆ.

ಹಾಗೆ ನೋಡಿದರೆ, 'ದೇವೇ ಎನ್ ಸಿ ಕೋಡ್' ಕಥಾ ಹಂದರ ಬಹಳ ಸರಳ. ಬೆಂಗಳೂರಿನ ಕಂಪ್ಯೂಟರ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೋಡ್ ಬರೆಯುವ ದೇವೇ ಮತ್ತು ಸಿಡ್ ಇಬ್ಬರಿಗೂ ವಿಧಾನ ಸೌಧದ ಅಸಲೀ ವಾರಸುದಾರಳಾದ ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಟ್ಟಿರ ಬಹುದಾದ ಕೋಟ್ಯಾಂತರ ಲಕ್ಷ ರೂಪಾಯಿ ಲಾಟರಿ ಹಣವನ್ನು ಲಪಟಾಯಿಸುವ ಆಸೆ. ದೇವೇ, ಸಿಡ್ ಮತ್ತು ಪ್ರಜಾ ನಡುವಿನ ತ್ರಿಕೋಣದ ಮಧ್ಯದಲ್ಲಿ ರೋಮ್ ರಮಣಿ ಸೆಂಟರ್ ಆಫ್ ಗ್ರಾವಿಟಿಯಾಗಿ ಬರುತ್ತಾಳೆ. ಪ್ರಜಾ ಸತ್ತೆ ಸಾವನ್ನಪ್ಪುತ್ತಾಳೆ. ಲಾಟರಿ ಹಣ ನಾಪತ್ತೆಯಾಗುತ್ತೆ. ಸರ್ಕಾರದ ಚೆಕ್ಕುಗಳು ಬೌನ್ಸ್ ಆಗುತ್ತೆ. ಅದಕ್ಕೆ ಕಾರಣ ಕಂಪ್ಯೂಟರ್ ಸಾಫ್ಟ್‌ವೇರ್ ಎನ್ನಲಾಗುತ್ತೆ. ಆ ಕೋಡ್ ಬರೆದ ದೇವೇ ಮತ್ತು ಸಿಡ್ ಮುಖ್ಯ ಆರೋಪಿಗಳಾಗುತ್ತಾರೆ. ಪ್ರಜಾ ಸತ್ತೆಯ ಹಂತಕರು ಯಾರು? ಲಾಟರಿ ಹಣ ಏನಾಯಿತು? ಈ ಪ್ರಶ್ನೆಗಳಿಗೆ ಉತ್ತರ ದೇವೇ N ಸಿಡ್ ಬರೆದಿರುವ ಸಾಫ್ಟ್‌ವೇರ್ ಕೋಡಿನಲ್ಲಿ ಇರುತ್ತದೆ.

ಈ ಮೂಲ ಕಥಾ ಹಂದರಕ್ಕೆ ಚೀಚೀಯವರು ಅತ್ಯದ್ಭುತ ಸನ್ನಿವೇಶ, ಪಾತ್ರಗಳನ್ನು ಸೃಷ್ಟಿಸಿ ನವಿರಾಗಿ ನೇಯುತ್ತಾರೆ. ಉದಾಹರಣೆಗೆ, ದೇವೇಯ ಮೇಲಿನ ಆರೋಪದ ವಿಚಾರಣೆಗೆ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಯಡ್ಡಿ ನೇಮಕಗೊಳ್ಳುವ ಸನ್ನಿವೇಶದಲ್ಲಿ, ಕುಮಾರ್, ದೇವೇಯ ಮಗನೇ ಆಗಿರುವುದು, ಗ್ರೀಕ್ ಟ್ರ್ಯಾಜೆಡಿಗಳನ್ನು ಅಥವಾ ಬಾಲಿವುಡ್ ಸಿನೆಮಾಗಳನ್ನು ನೆನಪಿಗೆ ತರುತ್ತದೆ. ಕುಮಾರ್, ಯಡ್ಡಿ ಸಂಭಾಷಣೆ ಓದಿ:

ಕುಮಾರ್: ಯಡ್ಡಿ, ನಮ್ಮಪ್ಪ ಅಂತಹವರಲ್ಲ. ತುಂಬಾ ಒಳ್ಳೆ ಕೋಡರ್
ಯಡ್ಡಿ: ಗೊತ್ತು ಸಾ. ಇಲ್ದಿದ್ರೆ, ಕಂಪ್ನಿ ಮೇಲಧಿಕಾರಿ ಆಗಿದ್ದವರು, ವಾಪ್ಸು ಕೋಡ್ ಮಾಡಕ್ಕೆ ಯಾಕೆ ಬರ್ತಿದ್ರು?!
ಕುಮಾರ್: ಇದ್ ಯಾರ್ದೋ ಬೇರೆಯವರ ಕಿತಾಪತಿ ಅನ್ಸುತ್ತೆ. ಕೋಡಲ್ಲ್ಲಿ ಹುಳ ಹಾಕವ್ರೆ.
ಯಡ್ಡಿ: ಕೊಡದಲ್ಲಿ ಹುಳಾನಾ? ಎಲ್ಲಾ ಆ ಅನಂತನ ಅವಾಂತರ ಅಂತೀರಾ?
ಕುಮಾರ್: ಕೊಡದಲ್ಲಿ ಹುಳ ಅಲ್ಲ. ಕೋಡಲ್ಲಿ ಬಗ್ಸು.
ಯಡ್ಡಿ: ಅಂದ್ರೇ.. ಗುಮ್ಮು ಅಂತೀರಾ?
ಕುಮಾರ್: ಯಾರ್ನಾದ್ರೂ ಗುಮ್ಮಕ್ಕೆ ಕಾದಿರ್ತೀಯ. ಹೋಗ್ಲಿ, ಎದುರಗಡೆ ನೋಡು. ಏನ್ ಕಾಣ್ತಿದೆ?
ಯಡ್ಡಿ: ಬಾಂಬೇ ಡೈಯಿಂಗ್ ಷೋ ರೂಮ್ ಸಾ.
ಕುಮಾರ್: ಅದಲ್ಲ. ಅದರ ಮುಂದೆ ನಿಂತಿರೋದು.
ಯಡ್ಡಿ: ನಮ್ಮ ಜೀಪು ಸಾ. ಸಾ..., ಸಾ..., ನಮ್ಮ ಜೀಪ್ನಾ ಯಾವ್ನೋ ನಮ್ಮುಂದೇನೇ ಹೊಡ್ಕೊಂಡೊಯ್ತವ್ನಲ್ಲಾ ಸಾ...!
ಕುಮಾರ್: ಆಟೋ...ಆಟೋ..
ಹೀಗೆ ಪ್ರಾರಂಭವಾಗುವ ಜೀಪ್ ಚೇಸ್, ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್, ಶಿವಾಜಿ ನಗರ ಮುಂತಾದ ಬೆಂಗಳೂರಿನ ರಮಣೀಯ ಸ್ಥಳಗಳಲ್ಲಿ ಮುಂದುವರೆಯುತ್ತದೆ. ಉದ್ಯಾನ ನಗರಿಯ ಈ ಪ್ರದೇಶಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಚೀಚೀಯವರ ವರ್ಣನಾ ಶಕ್ತಿ ಬಣ್ಣಿಸಲಸದಳ. ಉದಾಹ
ರಣೆಗೆ, ಮಳೆ ಬಿದ್ದ ನಂತರ ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್ಟಿನಲ್ಲಿ ಕಾಣಸಿಗುವ ಸೌಂದರ್ಯವನ್ನು ನನಗೆ ತಿಳಿದಂತೆ ಬೇರಾರೂ ಚೀಚೀಯವರಷ್ಟು ಉತ್ಸಾಹದಿಂದ ಬಣ್ಣಿಸಿದಂತಿಲ್ಲ.

ಈ ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ, ರೋಮನ್ ರಮಣಿ ವ್ಯಕ್ತಿತ್ವ. ಈ ಕೃತಿಯ ಪ್ರತಿ ಪಾತ್ರದ ಮೇಲೂ ಪ್ರಭಾವ ಹೊಂದಿರುವ ಈಕೆ, ಇಡೀ ಕೃತಿಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದೆ ನಿಗೂಢವಾಗಿಯೇ ಉಳಿಯುತ್ತಾಳೆ. ಕ್ವಾರ್ಟರ್ ಚೀಚೀಯವರ ಸಮಗ್ರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಪ್ರೊ.ವರುಣ್ ಡೌರಿಯವರ ಪ್ರಕಾರ, ರೋಮನ್ ರಮಣಿಯ ಪಾತ್ರ ಬೇಕಿರಲಿ, ಬೇಡದಿರಲಿ ನಮ್ಮೆಲ್ಲರ ಜೀವನದ ಮೇಲೆ ಗಾಢ ಪ್ರಭಾವ ಇರುವ 'ವಿಧಿ'ಯನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ವಿಧಿಯನ್ನು ಪ್ರಪ್ರಥಮ ಬಾರಿಗೆ ಹೆಣ್ಣಾಗಿ ಚಿತ್ರಿಸಿ ಚೀಚೀಯವರು ತಮ್ಮ ಫೆಮಿನಿಸ್ಟ್ ತತ್ವವನ್ನು ಅಭೂತಪೂರ್ವಕವಾಗಿ ಪ್ರತಿಪಾದಿಸುತ್ತಾರೆ.

ಒಟ್ಟಿನಲ್ಲಿ, ದ ದೇವೇ'Nಸಿ ಕೋಡ್ ಸಾಹಿತ್ಯಾಸಕ್ತರು ಓದಿ, ಅಭ್ಯಾಸ ಮಾಡಲೇ ಬೇಕಾದ ಮಹತ್ವಾಕಾಂಕ್ಷೆಯುಳ್ಳ ಮಹತ್ವದ ಕೃತಿ.

Labels: ,

14 Comments:

Anonymous Anonymous said...

the best story. now u considerd as good writer.
by
viju

June 17, 2006 2:06 AM  
Blogger Shiv said...

ನಮಸ್ಕಾರ !!

ನಾನು ಈ ಲೇಖನ ಓದಿದ ಮೇಲೆ ಚೀಚೀ ಅವರ ಫ್ಯಾನ್ ಆಗಿಬಿಟ್ಟಿದ್ಡಿನಿ.ದಯ ಮಾಡಿ ನನಗೆ ಈ ಅದ್ಬುತ ಕೃತಿಯನ್ನು ಪೋಶ್ಟಿಸಿಬೇಕೆಂದು ಕೇಳಿಕೊಳ್ಳುತ್ತೇನೆ !

ಯಡ್ಡಿ & ಕುಮಾರ್ ಡೈಲಾಗ್‍ಗಳು ಸಕತ್‍ ಆಗಿವೆ..ಚೇಸ್ ಸೀನ್ ಕಲಾಸಿಪಾಳ್ಯದಲ್ಲಿ..ಅದ್ಬುತ ಕಲ್ಪನೆ !!

June 17, 2006 9:54 PM  
Blogger V.V. said...

ಅನಾನಿಮೌಸರೇ,

ವಂದನೆಗಳು. ನಿಮ್ಮ ಪ್ರಶಂಸೆಯನ್ನು ಕ್ವಾರ್ಟರ್ ಚೀಚೀಯವರಿಗೆ ತಲುಪಿಸುವೆವು.

ಶಿವ್,
ನಮಸ್ಕಾರ. ಅಖಿಲ ಭಾರತ ಪ್ರಜಾ ಪೀಡಕರ ಸಂಘ ಈ ಪುಸ್ತಕದ ಬಗೆಗೆ ಆಕ್ಷೇಪಣೆ ವ್ಯಕ್ತಪಡಿಸಿರುವುದರಿಂದ, ಇದು ಇನ್ನೂ ಬಿಡುಗಡೆಯಾಗಿಲ್ಲ. ಈ ಸಂಘದ ಸದಸ್ಯರು ಓದಿ ಒಪ್ಪಿಗೆ ಕೊಟ್ಟರೆ ಮಾತ್ರ, ಘನ ಭಾರತ ಸರ್ಕಾರ ಈ ಪುಸ್ತಕದ ಮೇಲಿನ ನಿಷೇಧಾಜ್ಞೆಯನ್ನು ತೆರವು ಮಾಡುವ ಸಾಧ್ಯತೆ ಇದೆ.

ಕ್ವಾರ್ಟರ್ ಚೀಚೀಯವರು ಒಪ್ಪಿಗೆ ಇತ್ತಲ್ಲಿ, ಈ ಮಹಾನ್ ಸಾಹಿತ್ಯವನ್ನು ಸಮಸ್ತ ಕನ್ನಡಿಗರ ಉದ್ಧಾರಕ್ಕಾಗಿ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ನಾವು ಸಿದ್ಧವಿದ್ದೇವೆ.

ಅಂದಹಾಗೆ, ಪಾತರಗಿತ್ತಿಯ ಪಕ್ಕದಲ್ಲಿ ಪಾನೀ ಪೂರಿ ಉಣಿಸುವ ನಿಮ್ಮ ಪರಿ ಬಹಳ ಚೆನ್ನಾಗಿದೆ.

ವಂದನೆಗಳೊಂದಿಗೆ,

ಸಂಪಾದಕ

June 18, 2006 12:52 AM  
Anonymous Anonymous said...

ದೇವೇ ಮತ್ತು ಸಿಡ್ ಈಗ ಸಿನಿಮಾ ನಟರಾಗಿದ್ದಾರಂತೆ ಹೌದೇ?

June 18, 2006 1:55 AM  
Blogger mavinayanasa said...

ನಿಮ್ಮ ಪುಸ್ತಕ ವಿಮರ್ಶೆ ಬಹಳ ಚೆನ್ನಾಗಿ ಮೂಡಿಬಂದಿದೆ. ವಿಮರ್ಶೆಯೇ ಇಷ್ಟು ಚಂದ ಇರುವಾಗ, ಪುಸ್ತಕ ಇನ್ನೂ ಚೆನ್ನಾಗಿರಲೇಬೇಕು. ಇದನ್ನು ಓದಲೇ ಬೇಕೆಂಬ ಹಂಬಲವಾಗಿದೆ. ಇದು ಎಲ್ಲಿ ಸಿಗುವುದು, ಇದರ ಬೆಲೆ ಎಷ್ಟು ಎಂದು ತಿಳಿಸಿ (ನಾನು ಕೊಂಡುಕೊಳ್ಳುವುದಿಲ್ಲ - ಇತರರಿಗೆ ಮಾರುವೆ). ನಿಮ್ಮ ಹತ್ತಿರ ಇರುವ ಪುಸ್ತಕವನ್ನು ಎರವಲು ಕೊಡಲಾಗುವುದೇ (ಕನ್ನಡಿಗರು ಬಸ್ಸಿನಲ್ಲಿ ಪತ್ರಿಕೆಯ ಪುಟಗಳನ್ನು ಹಂಚಿಕೊಂಡು ಓದುವಂತೆ).

ಕಲಾಸಿಪಾಳ್ಯ ಚೇಸ್ ಬಹಳ ದು:ಖ ತರುವಂತಿದೆ. ಈ ಚೀಚೀಯನ್ನು ನನ್ನ ಹತ್ತಿರ ಕಳುಹಿಸಬೇಡಿ, ಸೂಸೂ ಮಾಡಿಯಾರು.

ಈ ಪುಟ ಓದಿದ ನನಗೆ ಮಜಾ ಬಂತು.

June 19, 2006 4:12 AM  
Blogger ವಿಶ್ವನಾಥ ಬಸವನಾಳಮಠ said...

ಭೇಷ್ ವಿಮರ್ಶೆ (ಓದುಗರ ಓಲೆ)

ಈ ವರೆಗಿನ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದುರಂತ ನಾಯಕರಾದ ದೇವೇ ಮತ್ತು ಸಿಡ್ ಗಳ ಕೋಡ್ ಒಳಗೊಂಡ "ದ ದೇವೇ'Nಸಿ ಕೋಡ್" ರಹಸ್ಯ ಪುಸ್ತಕ (ಕೆ.ಆರ್.) ಮಾರುಕಟ್ಟೆಯಲ್ಲಿ ಲಭ್ಯವಾಗುವ ಮೊದಲೇ ಅತ್ಯಂತ ರಹಸ್ಯವಾಗಿ ವಿಮರ್ಶಿಸಿದ ವಿಮರ್ಶಕರನ್ನು ಅಭಿನಂದಿಸಲೇಬೇಕು.

ಈ ವಿಮರ್ಶೆಯಿಂದ ಪುಸ್ತಕದ ಪ್ರಕಟಣೆಗೆ ಪ್ರಜಾಪೀಡಕರ ಸಂಘ ವಿರೋಧ ವ್ಯಕ್ತಪಡಿಸಿದ್ದರಿಂದ ಇದರ ಪ್ರತಿಗಳಿಗೆ ಭಾರಿ ಬೇಡಿಕೆ ಬಂದಿದ್ದು ರಹಸ್ಯವಾಗಿ ಮಾರಾಟಗುತ್ತಿರುವ ಬಗ್ಗೆ ಪ್ರಕಾಶಕರು ಅಷ್ಟೇ ರಹಸ್ಯವಾಗಿ ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಂಥ ಅನೇಕ ವಿಮರ್ಶೆಗಳು ಬರಲಿ, ಪ್ರಕಾಶಕರು-ಲೇಖಕರು ಬದುಕಿಕೊಳ್ಳಲಿ!

June 19, 2006 4:16 AM  
Blogger ಅಸತ್ಯ ಅನ್ವೇಷಿ said...

ನಾನು ದೇವರಾಣೆಗೂ ಈ ಪುಸ್ತಕ ಓದುವುದಿಲ್ಲ.


ಯಾಕೆ ಗೊತ್ತೇ....?


ನಿಷೇಧವಿದ್ದಾಗ್ಯೂ ಮಜಾವಾಣಿ ಬಲು ಮಜಾವಾಗಿ ಈ ಪುಸ್ತಕವನ್ನು ಸಮಗ್ರವಾಗಿ ವಿಮರ್ಶಿಸಿ ಬಿಟ್ಟಿದೆಯಲ್ಲ...

ಇನ್ನು ಪುಸ್ತಕ ಓದೋದು ವೇಸ್ಟು.

ಅಂದಹಾಗೆ ಈ ರೀತಿ ವಿಮರ್ಶೆ ಮಾಡಿ, "ಪುಸ್ತಕ ಬೇಡ, ವಿಮರ್ಶೆಯೇ ಸಾಕು" (ದುಡ್ಡು ಕೊಡಬೇಕಾಗಿಲ್ವಲ್ಲ) ಅನ್ನೋ ಮನೋಭಾವ ಹುಟ್ಟಿಸೋ ನಿಮ್ಮ ಬ್ಯುರೋಗೆ ಪುಸ್ತಕ ಪ್ರಕಾಶಕರಿಂದ ಎಷ್ಟು ಬಂದಿದೆ......

ಅಂದ್ರೆ ಬೆದರಿಕೆ ಕರೆ?

June 19, 2006 4:30 AM  
Blogger Shiv said...

ವಿವಿಯವರೇ,

ಇದೀಗ ಬಂದ ಸುದ್ದಿ..
ಚೀಚೀ ಅವರ ಈ ಮಹಾನ್ನೋತ ಕೃತಿಯನ್ನು ತೆರೆಗೆ ತರಲಿದ್ದಾರಂತೆ...ಮೂಲ ಕಥೆಯ ಪಾತ್ರಗಳು ತೆರೆಯ ಮೇಲೆಯೂ ಅವೇ ಪಾತ್ರದಲ್ಲಿ ಕಾಣಿಸಕೊಳ್ಳಲ್ಲಿದ್ದಾವಂತೆ !

ಇದರ ಬಗ್ಗೆ ದೇವೇ ಬಗ್ಗೆ ತೆರೆಯ ಮೇಲೆ ಅಭಿನಯಸುವುದು ಕಷ್ಟದ ಕೆಲ್ಸವಾ ಅಂತಾ ಯಾರೋ ಕೇಳಿದಾಗ, ದೇವೇ ಅವರು 'ನಾನೇನು ಇದೇ ಮೊದಲ ಸಲನಾ ಅಭಿನಯಿಸುತ್ತಿರುವುದಾ' ಅಂತ ಕೇಳಿದ್ದರಂತೆ !ಛೇ ಛೇ

June 19, 2006 11:04 PM  
Anonymous Anonymous said...

ಆತ್ಮೀಯ shiv,

> ಇದರ ಬಗ್ಗೆ ದೇವೇ ಬಗ್ಗೆ ತೆರೆಯ ಮೇಲೆ ಅಭಿನಯಸುವುದು
> ಕಷ್ಟದ ಕೆಲ್ಸವಾ ಅಂತಾ ಯಾರೋ ಕೇಳಿದಾಗ, ದೇವೇ
> ಅವರು 'ನಾನೇನು ಇದೇ ಮೊದಲ ಸಲನಾ
> ಅಭಿನಯಿಸುತ್ತಿರುವುದಾ' ಅಂತ ಕೇಳಿದ್ದರಂತೆ !ಛೇ ಛೇ

ದೇವೇ ಅವರ ಹೆಸರನ್ನು ಈಗಾಗಲೆ ಉತ್ತಮ ನಟನೆಗಾಗಿರುವ ಆಸ್ಕರ್ ಪ್ರಶಸ್ತಿಗೆ ಸೂಚಿಸಲಾಗಿದೆ. ಈ ಬಗ್ಗೆ ವಿಶ್ವಕನ್ನಡದಲ್ಲಿ ಈಗಾಗಲೆ [http://vishvakannada.com/node/169|ವರದಿಯಾಗಿದೆ]. ಆದರೆ ಈ ಸುದ್ದಿಯನ್ನು ಅವರು ಹಾಸ್ಯ ವಿಭಾಗದಲ್ಲಿ ಪ್ರಕಟಿಸಿದ್ದು ಯಾಕೆ ಎಂದು ಮಾತ್ರ ತಿಳಿದುಬಂದಿಲ್ಲ. ಬಹುಶಃ ಸಂಪಾದಕರ ಹಾಸ್ಯಪ್ರಜ್ಞೆ ಎಲ್ಲೋ ದಾರಿ ತಪ್ಪಿದಂತಿದೆ.

- ಲಾಂಗೂಲಾಯಾರ್ಯ, ಸ್ವರ್ಗ

June 19, 2006 11:27 PM  
Anonymous Anonymous said...

ÊÜޮܠÊÜáhÝÊÝ~ ¿ágÊÜÞ®ÜÄWæ,
ñÜÊÜá¾ PÜƳ®Ý ÆÖÜÄ¿áÈÉ ÖÜáqr ®ÜÊæá¾ÆÉÃÜ G¨æ¿á PܨÜñÜoár£¤¤ÃÜáÊÜ D ÖÝÓÜ ÐæãàyÜÔ¿á ŸWæWæ GÐÜár ÖæàÚ¨ÜÃÜã PÜËá¾Ááà...
×àWæà ..×àWæà ŸÃÜᣤÃÜÈ... BPæ.
Öæñܤ ¯ÊÜáWÜã A¨æà ñÝ®æà ÓÝ¥ÜìPÜ嬆 ZÚWæ!?
ÊÜáhÝ A®Üá»ÜËst SáοáÈÉ
²Åà£Àáí¨Ü.

October 09, 2006 10:51 AM  
Anonymous Anonymous said...

ಮೇಲಿನ ಅನಾಮಧೇಯರು ಹೇಳಿರುವುದು:

ಮಾನ್ಯ ಮಜಾವಾಣಿ ಯಜಮಾನರಿಗೆ,
ತಮ್ಮ ಕಲ್ಪನಾ ಲಹರಿಯಲ್ಲಿ ಹುಟ್ಟಿ ನಮ್ಮೆಲ್ಲರ ಎದೆಯ ಕದತಟ್ಟುತ್ತ್ತಿರುವ ಈ ಹಾಸ್ಯ ಷೋಢಸಿಯ ಬಗೆಗೆ ಎಷ್ಟು ಹೇಳಿದರೂ ಕಮ್ಮಿಯೇ...
ಹೀಗೇ ..ಹೀಗೇ ಬರುತ್ತಿರಲಿ... ಆಕೆ.
ಹೆತ್ತ ನಿಮಗೂ ಅದೇ ತಾನೇ ಸಾರ್ಥಕ್ಯದ ಘಳಿಗೆ!?
ಮಜಾ ಅನುಭವಿಸಿದ ಖುಶಿಯಲ್ಲಿ
ಪ್ರೀತಿಯಿಂದ.

October 09, 2006 1:12 PM  
Blogger Shrinidhi Hande said...

wonderful.... may be Kavi KeLagere may wish to make a movie out of it...

July 26, 2008 8:14 AM  
Anonymous Anonymous said...

kannadada "pun"daridaasa neevu ennuvudanna ahamadaabaadina "pun"ditha SMSriram avara gamanakke tharabeku.

Nimmmannu neeve thamashe maadkolluva sathva nimagiruvadarinda majavaniya suthradhaara namage aagaa challemuri thinnisuva Shrinidhi Hande neeve irabahudu anno gumaani nanna kaadthaa ide

Sid sahebara tractor adbhutha tractor chaalaneyinda kaalu kaledukonda ilavaalada vyakthi parihaara kelilladiddare adannu nanage kodisi antha Hedeyurappanavarige nanna korike.

Verificantion HDK HDG? You must be kidding.

July 30, 2008 8:38 PM  
Blogger v.v. said...

ಅನಾಮಧೇಯರಿಗೆ,
ನಮಸ್ಕಾರ.

ಮಜಾವಾಣಿಯ ಪ್ರಧಾನ ಉಪ ಮುಖ್ಯ ಅತಿಥೇಯ ವ್ಯವಸ್ಥಾಪಕ ಸಂಪಾದಕನಾದ ನಾನು ಕನ್ನಡದ punಢರೀ ದಾಸನೇ?!
ಅದು ಅಹ್ಮದಾಬಾದಿನ ಪಂಡಿತರ ಗಮನಕ್ಕೆ ತರಬೇಕೇ?! ಇದೆಂತಹ 'ಪಂ'ಚಾಯಿತಿ?
ನಾನು ಹಲವು ವ್ಯಸನಗಳ ದಾಸನೆಂಬುವುದು ನಿಜ. ಆದರೆ, punಢರೀ ಭಜನೆಯ ತಾಖತ್ತು ಇಲ್ಲ. ಸಬ್ ಜೂನಿಯರ್ ಲೆವೆಲ್ 'ಪಂ'ದ್ಯಕ್ಕೂ qualify ಕೂಡ ಆಗದ ಸ್ಥಿತಿ ನಮ್ಮದು.
ಕನ್ನಡದ ಪ್ರಸಂಗದಲ್ಲಿ, ಇಂದು ಇರುವವರೊಬ್ಬರೇ ಪಂಟರ್: ನಳಪಾಕಿಸ್ತಾನದ ವಿಚಿತ್ರಾನ್ನದಾನಿ

ನಮ್ಮನ್ನು ನಾವೇ ತಮಾಷೆಮಾಡಿಕೊಳ್ಳುಲು ಬೇಕಿರುವುದು ಸತ್ವವಲ್ಲ; ಉಳಿದವರನ್ನು ತಮಾಷೆಮಾಡಲು ಧೈರ್ಯವಿರದ ಪುಕ್ಕಲುತನ.
ನನ್ನ ತಪ್ಪಿಗೆ ಶ್ರೀನಿಧಿ ಹಂದೆಯವರ ಮೇಲೇಕೆ ಶಂಕಿತರಾಗುತ್ತೀರಿ? ಆದರೆ, ನನಗೂ ಆಗಾಗ್ಗೆ ನಾನು ಶ್ರೀನಿಧಿ ಹಂದೆ ಇರಬಹುದೇ ಎಂದೆನ್ನಿಸುವುದು ಸುಳ್ಳಲ್ಲ.

ಹೆಡೆಯೂರಪ್ಪನವರು ನಿಮ್ಮ ಕೋರಿಕೆಯನ್ನು ಮನ್ನಿಸಿದರೆ ನಮಗೆ ಖಂಡಿತಾ ತಿಳಿಸಿ.

HDK HDG ವಿಚಾರ ಅರ್ಥ ಆಗಲಿಲ್ಲ. ನಮ್ಮನ್ನು ಮತ್ತಷ್ಟು ಕನ್‌ಫ್ಯೂಸ್ ಮಾಡಲು ಪ್ರಯತ್ನಿಸಿದರೆ ಸೋಲು ಗ್ಯಾರಂಟಿ. ನಾವೀಗಲೇ fully confused!

ವಂದನೆಗಳೊಂದಿಗೆ,

ವಿ.ವಿ.

August 02, 2008 4:38 PM  

Post a Comment

<< Home