ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, June 29, 2006

ಮಜಾವಾಣಿ ವಿಷಾದಾಂಕ: ನಕಲಿ ಗೊಬ್ಬರ ತಿನ್ನಿಸುವ ಪ್ರಯತ್ನ ವಿಫಲ

ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಪ್ರಯತ್ನ ವಿಫಲ!

ಬೆಂಗಳೂರು ಜೂನ್ ೨೮, ೨೦೦೬: ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸುವ ಪ್ರಯತ್ನದ ವಿಚಾರ ದಟ್ಸ್ ಕನ್ನಡ ಇಂಟರ್‌ನೆಟ್ ಪತ್ರಿಕೆಯಲ್ಲಿ ಓದಿ ನಮ್ಮ ಪತ್ರಿಕೆಗೆ ವಿಷಾದವಾಗಿದೆಯೆಂದು ತಿಳಿಸಲು ವಿಷಾದಿಸುತ್ತೇವೆ. ಈ ವಿಷಾದಕರ ಪ್ರಸಂಗದ ಕುರಿತಾದ ವರದಿಯ ಜೊತೆಗೆ ಮಣ್ಣಿನ ಮಗನ ಅಥವಾ ಮಣ್ಣಿನ ಮೊಮ್ಮಗನ ಚಿತ್ರ ಪ್ರಕಟಿಸದಿರುವ ಆ ಪತ್ರಿಕೆಯ ಸಂಪಾದಕರ ನಿರ್ಧಾರ ನಿಜಕ್ಕೂ ವಿಷಾದಕರ.

ಮಣ್ಣಿನ ಮಗನಿಗೆ ಅಸಲೀ ಗೊಬ್ಬರ ತಿನ್ನಿಸುವ ಪ್ರಯತ್ನ ಸಫಲವಾದಲ್ಲಿ ಮಾತ್ರ ಮಣ್ಣಿನ ಮಗನ ಚಿತ್ರ ಪ್ರಕಟಿಸಬೇಕೆಂಬ ಧೋರಣೆ ಆ ಸಂಪಾದಕರಿಗೆ ಇದ್ದಂತಿದೆ. ವರದಿಯ ಜೊತೆಗೆ ಪ್ರಕಟಿಸುವ ಚಿತ್ರಗಳು ವರದಿಗೆ ಸಂಬಂಧ ಪಟ್ಟೇ ಇರಬೇಕೆಂಬ ಸಂಪಾದಕರ ನಿರ್ಣಯ ನಿಜಕ್ಕೂ ವಿಷಾದನೀಯ.

ವರದಿಗಳು ಮಾತ್ರ ಯಾವುದೇ ವಿಷಯದಲ್ಲಿರಬಹುದು ಆದರೆ ಚಿತ್ರಗಳು ಮಾತ್ರ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಸಂಪಾದಕರ ಮಾತಿನ ಹಿಂದೆ ಚಿತ್ರ-ಸ್ವಾತಂತ್ರ್ಯ ವಿರೋಧಿ ಮನೋಭಾವ ಎದ್ದು ಕಾಣುತ್ತಿದೆ. ಪತ್ರಿಕಾಸ್ವಾತಂತ್ರ್ಯದ ಕುರಿತು ಮಾತನಾಡುವ ಪತ್ರಕರ್ತರೇ ಚಿತ್ರ-ಸ್ವಾತಂತ್ರ್ಯವನ್ನು ಹರಣಮಾಡಿರುವುದು ವಿಷಾದಕರ ಸಂಗತಿ.

ವರದಿಗಳ ದಬ್ಬಾಳಿಕೆ ಇದೇ ರೀತಿ ಮುಂದುವರೆದಲ್ಲಿ, ವರದಿಯ ಶೀರ್ಷಿಕೆ ಮತ್ತು ವರದಿಯಲ್ಲಿನ ವಿಚಾರಗಳೂ ಸಹ ವರದಿಗೆ ಸಂಬಂಧಪಟ್ಟಂತೆಯೇ ಇರಬೇಕೆಂಬ ಅಪಾಯಕಾರಿ ಒತ್ತಾಯ ಕೇಳಿ ಬಂದರೆ ಆಶ್ಚರ್ಯವೇನೂ ಇಲ್ಲ.

Thursday, June 22, 2006

ಮಜಾವಾಣಿ: ಪರಿಸರ ಸುದ್ದಿ


ವಿಧಾನ ಸೌಧದ ಬಳಿಯ ದುರ್ಗಂಧದ ಕಾರಣ ಪತ್ತೆ!

ಜೂನ್ ೨೨, ೨೦೦೬, ಬೆಂಗಳೂರು: ಹಲವು ವರ್ಷಗಳಿಂದ ವಿಧಾನ ಸೌಧದಿಂದ ಹೊರ ಬರುತ್ತಿದ್ದ ದುರ್ಗಂಧ ಬೆಂಗಳೂರಿನ ಏಕೆ, ಇಡೀ ಕರ್ನಾಟಕದ ಜನತೆಗೇ ತಿಳಿದಿರುವ ಸಂಗತಿ. ಕೆಲ ವರ್ಷಗಳಿಂದ ಈ ದುರ್ನಾತ ಮಿತಿ ಮೀರಿದ್ದು, ಆ ಪ್ರದೇಶದ ಸುತ್ತ ಓಡಾಡುವರನ್ನು ರಕ್ಷಿಸಲು, ವಿಧಾನ ಸೌಧದ ಸುತ್ತ ಬೇಲಿ ಹಾಕಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇಂದು, ಆ ದುರ್ನಾತದ ಹಿಂದಿನ ರಹಸ್ಯ ಕೊನೆಗೂ ಹೊರ ಬಿದ್ದಿದೆ. " 'ನೈಸ್' ಕಾರಿಡಾರ್ ರಸ್ತೆಯಲ್ಲಿ ಗಲೀಜು ಮಾಡಿದವರು ಯಾರು?" ವಿಷಯದ ಕುರಿತು ವಿಧಾನ ಮಂಡಲದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ ಅವರು, "ಕೊಳಕು ಸಮುದ್ರದಲ್ಲಿ ನಾವೆಲ್ಲರೂ ಈಜಾಡುತ್ತಿದ್ದೇವೆ" ಎಂದು ಹೇಳಿ ಕರ್ನಾಟಕದ ಜನರಿಗೆ ಹಲವು ವರ್ಷಗಳಿಂದ ಕಾಡುತ್ತಿದ್ದ ಈ ರಹಸ್ಯವನ್ನು ಹೊರಗೆಡವಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದ ಜನತೆ ವಿಧಾನ ಸೌಧದ ಬಳಿ ಸುಳಿಯುವಾಗ ಮೂಗು ಮುಚ್ಚಿಕೊಳ್ಳಬೇಕಾದ್ದು ತಪ್ಪಿಲ್ಲವಾದರೂ, ಇನ್ನು ಮುಂದೆ ಈ ವಿಚಾರಕ್ಕೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ.
(ಪಿ.ಟಿ.ಹೈ.)

Tuesday, June 20, 2006

ಮಜಾವಾಣಿ: ಮೀಡಿಯಾ ಸುದ್ದಿ

ಸಂಪಾದಕರ ಪ್ರಜ್ಞೆ ತಪ್ಪಿದ್ದರಿಂದ ಮಹತ್ವದ ಸುದ್ದಿ ಮೂಲೆಗೆ!
ಬೆಂಗಳೂರು, ಜೂನ್ ೨೦, ೨೦೦೬: ಟೈಮ್ಸ್ ಆಫ್ ಇಂಡಿಯಾ ಕನ್ನಡದ ನಂಬರ್ ೧ ದಿನಪತ್ರಿಕೆಯಾದ ವಿಜಯ ಕರ್ನಾಟಕ ಕೊಂಡುಕೊಂಡ ಸುದ್ದಿಯ ಬೆನ್ನಲ್ಲೇ, ಕನ್ನಡ ಪತ್ರಿಕೋದ್ಯಮದ ಅಡಿಪಾಯವನ್ನೇ ಅಲುಗಾಡಿಸುವಂತಹ ಮಹತ್ವದ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಆಘಾತಕರ ವಿಷಯವನ್ನು ಬಹಿರಂಗಗೊಳಿಸುವಲ್ಲಿ, ಪಾತರ ಹಾಕುವವಳ ಪಕ್ಕದಲ್ಲಿಯೇ ಸದಾ ಇರಬಯಸುವ ನಮ್ಮ ಓದುಗ ಮಿತ್ರರಾದ ಶಿವ್ ಅವರ ಪಾತ್ರ ಅತ್ಯಂತ ಹಿರಿದು. ನಮ್ಮ ಪತ್ರಿಕೆಯ ಪುಸ್ತಕ ವಿಮರ್ಶೆಗೆ ಪ್ರತಿಕ್ರಿಯಿಸುತ್ತಿದ್ದ ಅವರು, ಕನ್ನಡದ ಖ್ಯಾತ ಕೋಡರ್‍ ದ್ವಯರಾದ ದೇವೇ ಮತ್ತು ಸಿಡ್‌ ಚಲನಚಿತ್ರಗಳಲ್ಲಿ ನಟಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನಮ್ಮ ಪತ್ರಿಕೆಯ ಸ್ಪೆಷಲ್ ಕರೆಸ್ಪಾಂಡೆಂಟ್ longಊಲಾಚಾರ್ಯರು, ದೇವೇ ನಟಿಸುವ ವಿಚಾರ ಹೊಸದಲ್ಲ, ಉತ್ತಮ ನಟನೆಗಾಗಿರುವ ಆಸ್ಕರ್ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಿರುವ ವಿಚಾರ ಈಗಾಗಲೆ ವಿಶ್ವ ಕರ್ನಾಟಕದಲ್ಲಿ ವರದಿಯಾಗಿದೆ ಎಂದರು. ಮುಂದುವರೆದು, ಇಂತಹ ಮಹತ್ತರ ವಿಚಾರವನ್ನು ಹಾಸ್ಯ ವಿಭಾಗದಲ್ಲಿ ಪ್ರಕಟಿಸಿದ ಸಂಪಾದಕರ ನಿರ್ಧಾರವನ್ನು "ದಾರಿ ತಪ್ಪಿದ ಹಾಸ್ಯಪ್ರಜ್ಞೆ" ಎಂದು ಖಂಡಿಸಿದರು.

ಇಂಟರ್ನೆಟ್ಟಿನಲ್ಲಿ ಯುದ್ಧದ ಕಾರ್ಮೋಡ - ಕನ್ನಡ ಪತ್ರಿಕೆಗಳ ಪ್ರೈಸ್ ವಾರ್!
ಬೆಂಗಳೂರು, ಜೂನ್ ೨೦, ೨೦೦೬: ವಿಜಯ ಕರ್ನಾಟಕ ಪತ್ರಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಕೊಂಡ ನಂತರ ಕನ್ನಡ ಪತ್ರಿಕೆಗಳ ನಡುವಿನ ಸಮರದ ಬಿಸಿ ಇಂಟರ್‌ನೆಟ್ಟಿಗೂ ತಟ್ಟಿದೆ. ಈಗಾಗಲೇ ತಮ್ಮ ಪುಟಗಳಲ್ಲಿ ಒಂದರತ್ತ ಇನ್ನೊಂದು ಕೈ ತೋರಿಸಿ, ನಗಪಾಟಲಿಗೀಡಾಗಿರುವ ಎರಡು ಕನ್ನಡ ಪತ್ರಿಕೆಗಳು, ಈಗ ಇಂಟರ್‍ನೆಟ್ಟಿನಲ್ಲಿ ಪ್ರೈಸ್ ವಾರ್ ನಡೆಸಲು ಸಿದ್ಧವಾಗಿರುವ ಸಂಗತಿ ಹೊರಬಿದ್ದಿದೆ.

ಈ ವಿಚಾರದ ಕುರಿತು ನಮ್ಮ ವರದಿಗಾರರು ಮಜಾವಾಣಿ ಸಂಪಾದಕರನ್ನು ಸಂದರ್ಶಿಸಿದಾಗ, ಮೊದಲಿಗೆ "ಪ್ರೈಸ್ ವಾರ್ ಏನೂ ಇಲ್ಲ" ಎಂದ ಅವರು, ಅನಂತರ ಸರ್ಕ್ಯುಲೇಶನ್ ಜಾಸ್ತಿ ಮಾಡಲು, ಮಜಾವಾಣಿಯನ್ನು ಕಡಿಮೆ ಉಚಿತ ಬೆಲೆಗೆ ಕೊಡುತ್ತಿರುವ ವಿಚಾರವನ್ನು ಒಪ್ಪಿಕೊಂಡರು. ಆದರೆ, ಮೀಡಿಯಾ/ವ್ಯಾಪಾರ ವಿಶ್ಲೇಷಕರ ಪ್ರಕಾರ, ಮಜಾವಾಣಿಯ ಈ ತಂತ್ರ ಯಶಸ್ವಿಯಾಗುವುದು ಸಂದೇಹಾಸ್ಪದ. ಈ ವಿಶ್ಲೇಷಕರ ಪ್ರಕಾರ, ಉಚಿತವಾಗಿ ದೊರಕುವ ಮಜಾವಾಣಿ ಬೆಲೆ ಕಡಿಮೆಯಾದಷ್ಟೂ, ಬೊಗಳೆ ರಗಳೆ ಪತ್ರಿಕೆ ತನ್ನ ಬೆಲೆಯನ್ನು ಇನ್ನಷ್ಟು ಹೆಚ್ಚು ಕಡಿಮೆ-ಉಚಿತ ಮಾಡುವುದು ಖಚಿತ. ನಂಬಲರ್ಹ ಮೂಲಗಳ ಪ್ರಕಾರ ಮರಣಾನಂದ ರೋಡ್‌ವೇಸ್ ಲಿಮಿಟೆಡ್‌ನ ಆಳ ಜೇಬುಗಳು ಬೊ.ರ. ಪತ್ರಿಕೆಯ ಬೆಂಬಲಕ್ಕಿರುವುದರಿಂದ, ಮಜಾವಾಣಿಗೆ ಈಗ ಉಳಿದಿರುವುದು ಒಂದೇ ಮಾರ್ಗ: ಹಿಂದುಳಿದ ಪತ್ರಿಕೆ ಕೋಟಾ.

Friday, June 16, 2006

ಮಜಾವಾಣಿ ಪುಸ್ತಕ ವಿಮರ್ಶೆ

"ಮಧ್ಯರಾತ್ರಿ. ಅಮಾವಾಸ್ಯೆಯ ಘೋರಾಂಧಕಾರ. ಭೋರ್ಗೆರೆಯುತ್ತಿರುವ ಮಳೆ. ವಿಧಾನ ಸೌಧದ ಕಲ್ಲಿನ ಅಡಿಪಾಯವನ್ನೇ ಅಲುಗಾಡಿಸುವಂತಹ ಸಿಡಿಲು, ಮಿಂಚು, ಗುಡುಗು. ಇಂತಹ ಕರಾಳ ರಾತ್ರಿಯಲ್ಲಿ ವಿಧಾನ ಸೌಧದ ನೆಲ ಮಾಳಿಗೆಯಲ್ಲಿ, ಮಹಿಳೆಯೋರ್ವಳ ಸತ್ತ ಹೆಣ ಪತ್ತೆಯಾಯಿತು. ಸತ್ತಿದ್ದವಳು ಕು.ಪ್ರಜಾ ಸತ್ತೆ, ವಿಧಾನ ಸೌಧದ ಅಸಲೀ ವಾರಸುದಾರಳು."

"ದ ಬೋ ಫೋರ್ಸ್ ಗನ್ಸ್"ನಿಂದ ಅಪಾರ ಹೆಸರು ಮತ್ತು ಹಣ ಗಳಿಸಿರುವ ಕ್ವಾರ್ಟರ್ ಚೀಚೀಯವರ ಹೊಸ ಕೃತಿ "ದಿ ದೇವೇ N ಸಿ ಕೋಡ್" ಆರಂಭವಾಗುವುದು ಹೀಗೆ. ಮೊದಲನೆಯ ಪುಟದ ಮೊದಲ ಸಾಲಿನಿಂದ, ಕಡೆಯ ಪುಟದ ಕಡೆಯ ಸಾಲಿನವರೆಗೆ ಕಣ್ಣೆವೆಯಿಕ್ಕದೆ ಒಂದೇ ಸಮನೆ ಓದಿಸಿಕೊಂಡು ಹೋಗುವ ಈ ಪುಸ್ತಕ ಎರಡು ಮಜಲುಗಳಲ್ಲಿ ಕೆಲಸ ಮಾಡುತ್ತದೆ. ಒಂದು, ಇಂಟ್ರೀಗ್- ಕಾನ್ಸ್ಪಿರಸಿ ತುಂಬಿದ ಮೈನವಿರೇಳಿಸುವ ಪತ್ತೇದಾರಿ ಕೃತಿಯಾಗಿ; ಇನ್ನೊಂದು, ಈ ಕೃತಿಯ ಪ್ರೋಟಾಗನಿಸ್ಟ್‌ಗಳಾದ ದೇವೇ ಮತ್ತು ಸಿಡ್‍ಗಳ ನಡುವಿನ ಊರ್ಧ್ವಮುಖಿ ಪೈಪೋಟಿಯ ಅನಿವಾರ್ಯತೆ ಕುಮಾರಿ ಸತ್ತೆಯ ಸಾವಿಗೆ ಕಾರಣವಾಗುವ ಸಂಕೀರ್ಣ ಮತ್ತು ಎಕ್ಸಿಸ್ಟೆಂಷಿಯಲ್ ಪ್ರಶ್ನೆಗಳನ್ನು ಹಾಕುವ ಮಹತ್ವದ ಕೃತಿಯಾಗಿ.

ನೈಜ ಸನ್ನಿವೇಶಗಳಿಗೆ ಕಲ್ಪನೆಯನ್ನು ಸೇರಿಸಿ ಒಂದು ಅದ್ಭುತ ಕತೆಯನ್ನು ನೇಯ್ದು ಓದುಗರನ್ನು ಬೇರೊಂದು ಲೋಕಕ್ಕೇ ಒಯ್ಯುವ ಕತೆಗಾರನ ಪರಿಣಿತಿ, ಜಾಣತನ ಇಲ್ಲಿ ಎದ್ದು ಕಾಣುತ್ತದೆ. ಉದಾಹರಣೆಗೆ, ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಮಾಲೀಕರಾಗುವ ಪೈಪೋಟಿಯಲ್ಲಿರುವ ದೇವೇ ಮತ್ತು ಸಿಡ್ ನಡುವಿನ ಸಂಭಾಷಣೆಯನ್ನು ಗಮನಿಸಿ.

ಸಿಡ್: ದೇವೇ, ಪ್ರಜಾ ಆಸೆ ಬಿಟ್ಟು ಬಿಡು. ಅವಳಿಗಾಗಿ ನಾನು ನನ್ನ ಜೀವ ಕೊಡಲೂ ಸಿದ್ಧ. ಜೊತೆಗೆ, ನಿನಗೀಗಲೇ ವಯಸ್ಸಾಗಿದೆ.
ದೇವೇ: ಸಿಡ್, ನೀನೊಬ್ಬ ಮೂರ್ಖ. ನಾನು ಪ್ರಜಾಗಾಗಿ ಆಸೆ ಪಡುವುದು ನನಗೋಸ್ಕರ ಅಲ್ಲ. ನನ್ನ ಮಗನಿಗೋಸ್ಕರ.
ಸಿಡ್: ನಾನು ಮೂರ್ಖ ಆದರೆ, ನೀನು ಕುಂಭಕರ್ಣ. ನನ್ನನ್ನು ಮದುವೆಯಾದರೆ, ಮಧುಚಂದ್ರಕ್ಕೆ ಚಂದ್ರಗ್ರಹಕ್ಕೆ ಹೋಗೋಣ ಅಂತ ಅವಳಿಗೆ ನಾನಾಗಲೇ ಹೇಳಿಯಾಗಿದೆ.
ದೇವೇ: ಚಂದ್ರಗ್ರಹಾನಾ?! ಮಣ್ಣೆತ್ತೋ ಟ್ರ್ಯಾಕ್ಟರ್ ಓಡ್ಸಕ್ಕೆ ಬರೋದಿಲ್ಲ, ರಾಕೆಟ್ಟೋಡಿಸಿಕೊಂಡು ಹೋಗ್ತೀಯಾ?!
ಸಿಡ್: ಬೇಡಾ, ಬೇಡಾ. ಆ ವಿಷ್ಯಾ ತೆಗೀ ಬೇಡಾ. ನನಗೆ ತುಂಬಾ ಕೋಪ ಬರುತ್ತೆ.
ದೇವೇ: ಬಂದ್ರೇ ಏನ್ಮಾಡ್ತೀಯಾ?
ಸಿಡ್: ಏನ್ಮಾಡ್ತೀನಾ?! ರೋಮ್ ರಮಣೀಗೆ ಹೇಳ್ತೀನಿ.
ದೇವೇ: ಅದಕ್ಕೇ ನಿನ್ನ ಮೂರ್ಖ ಅಂದಿದ್ದು. ರೋಮ್ ರಮಣಿ ನಿನ್ನ ಮಾತು ಕೇಳ್ತಾಳೆ ಅಂದುಕೊಂಡ್ಯಾ? ಮಣ್ಣೆತ್ತೋ ಟ್ರ್ಯಾಕ್ಟರ್ ಲೀವರ್ ಹಾಳ್ಮಾಡಿಸಿದ್ದು ಯಾರು ಅಂದುಕೊಂಡೆ?!

ಸಿಡ್‍ಗೆ ಯೋಚನೆ ಶುರು ಆಯಿತು. 'ರೋಮ್ ರಮಣಿ ನನ್ನ ಬೆನ್ನಿಗೇ ಬರೆ ಹಾಕೋ ಒಳ ಸಂಚು ಮಾಡ್ತಿರಬಹುದಾ' ಅನ್ನೋ ಸಂಶಯದ ದುಂಬಿ ಅವನ ಮನದ ತೋಟದಲ್ಲಿ ಗುನುಗುನಿಸಲು ಆರಂಭಿಸಿತು.
ಚೀಚೀಯವರ ಅದ್ಭುತ ಕಲ್ಪನಾ ಶಕ್ತಿಯಿಂದ, ವಾಸ್ತವದಲ್ಲಿ ಕೇವಲ ಉಪ ಗ್ರಹವಾದ ಚಂದ್ರ, ಸಿಡ್ ಮತ್ತು ದೇವೇ ಸಂಭಾಷಣೆಯಲ್ಲಿ ಒಂದು 'ಗ್ರಹ'ವಾಗಿ ಮಾರ್ಪಾಡಾಗುತ್ತೆ. ಹಾಗೆಯೇ, ಒಂದು ಸಣ್ಣ ಎಕ್ಸ್‌ಕವೇಟರ್ ಆಕಸ್ಮಿಕ, ಚೀಚೀಯವರ ಕಲ್ಪನಾ ಲಹರಿಗೆ ಸಿಕ್ಕಿ ಒಂದು ನಿಗೂಢ ಕಾನ್ಸ್ಪಿರಸಿಯಾಗಿ ತಯಾರಾಗುತ್ತೆ. ದುಂಬಿಯೊಂದು ತೋಟದಲ್ಲಿ ಗುನುಗುನಿಸುವ ಅತ್ಯದ್ಭುತ ಪ್ರತಿಮೆಗೆ ಕಾರಣವಾಗುತ್ತೆ.

ಇದಿಷ್ಟೇ ಆಗಿದ್ದಿದ್ದರೆ, "ದ ದೇವೇ N ಸಿ ಕೋಡ್", ಕೇವಲ ಒಂದು ಮಹಾನ್ ಪತ್ತೇದಾರಿ ಕತೆಯಾಗಿ ಉಳಿದು ಬಿಡುತ್ತಿತ್ತು. ಆದರೆ, ಕ್ವಾರ್ಟರ್ ಚೀಚೀಯಂತಹ ನುರಿತ ಕತೆಗಾರ ಮತ್ತು ಮಹಾನ್ ಚಿಂತಕನ ಕುಂಚಕ್ಕೆ ಸಿಕ್ಕಿ, ಒಂದು ಸಣ್ಣ ಪತ್ತೇದಾರಿ ಕತೆ, ಇಂದಿನ ಜಾಗತೀಕರಣ-ಉದಾರೀಕರಣ ಸಂದರ್ಭದಲ್ಲಿ ಪ್ರಜಾ ಸತ್ತೆಯ ಉಳಿವು-ಅಳಿವು, ಮನುಷ್ಯನ ಲಿವರ್ ಅನ್ನು ಯಂತ್ರಕ್ಕೆ ಅಳವಡಿಸಬಹುದೇ? ಮುಂತಾದ ಸಂಕೀರ್ಣ ಪ್ರಶ್ನೆಗಳನ್ನೆತ್ತುವ ಒಂದು ಮೊರಾಲಿಟಿ ಪ್ಲೇ ಆಗಿ ಮಾರ್ಪಾಡಾಗಿದೆ.

ಹಾಗೆ ನೋಡಿದರೆ, 'ದೇವೇ ಎನ್ ಸಿ ಕೋಡ್' ಕಥಾ ಹಂದರ ಬಹಳ ಸರಳ. ಬೆಂಗಳೂರಿನ ಕಂಪ್ಯೂಟರ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೋಡ್ ಬರೆಯುವ ದೇವೇ ಮತ್ತು ಸಿಡ್ ಇಬ್ಬರಿಗೂ ವಿಧಾನ ಸೌಧದ ಅಸಲೀ ವಾರಸುದಾರಳಾದ ಕು.ಪ್ರಜಾ ಸತ್ತೆಯ ಕೈಹಿಡಿದು, ಆ ಮೂಲಕ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಟ್ಟಿರ ಬಹುದಾದ ಕೋಟ್ಯಾಂತರ ಲಕ್ಷ ರೂಪಾಯಿ ಲಾಟರಿ ಹಣವನ್ನು ಲಪಟಾಯಿಸುವ ಆಸೆ. ದೇವೇ, ಸಿಡ್ ಮತ್ತು ಪ್ರಜಾ ನಡುವಿನ ತ್ರಿಕೋಣದ ಮಧ್ಯದಲ್ಲಿ ರೋಮ್ ರಮಣಿ ಸೆಂಟರ್ ಆಫ್ ಗ್ರಾವಿಟಿಯಾಗಿ ಬರುತ್ತಾಳೆ. ಪ್ರಜಾ ಸತ್ತೆ ಸಾವನ್ನಪ್ಪುತ್ತಾಳೆ. ಲಾಟರಿ ಹಣ ನಾಪತ್ತೆಯಾಗುತ್ತೆ. ಸರ್ಕಾರದ ಚೆಕ್ಕುಗಳು ಬೌನ್ಸ್ ಆಗುತ್ತೆ. ಅದಕ್ಕೆ ಕಾರಣ ಕಂಪ್ಯೂಟರ್ ಸಾಫ್ಟ್‌ವೇರ್ ಎನ್ನಲಾಗುತ್ತೆ. ಆ ಕೋಡ್ ಬರೆದ ದೇವೇ ಮತ್ತು ಸಿಡ್ ಮುಖ್ಯ ಆರೋಪಿಗಳಾಗುತ್ತಾರೆ. ಪ್ರಜಾ ಸತ್ತೆಯ ಹಂತಕರು ಯಾರು? ಲಾಟರಿ ಹಣ ಏನಾಯಿತು? ಈ ಪ್ರಶ್ನೆಗಳಿಗೆ ಉತ್ತರ ದೇವೇ N ಸಿಡ್ ಬರೆದಿರುವ ಸಾಫ್ಟ್‌ವೇರ್ ಕೋಡಿನಲ್ಲಿ ಇರುತ್ತದೆ.

ಈ ಮೂಲ ಕಥಾ ಹಂದರಕ್ಕೆ ಚೀಚೀಯವರು ಅತ್ಯದ್ಭುತ ಸನ್ನಿವೇಶ, ಪಾತ್ರಗಳನ್ನು ಸೃಷ್ಟಿಸಿ ನವಿರಾಗಿ ನೇಯುತ್ತಾರೆ. ಉದಾಹರಣೆಗೆ, ದೇವೇಯ ಮೇಲಿನ ಆರೋಪದ ವಿಚಾರಣೆಗೆ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಯಡ್ಡಿ ನೇಮಕಗೊಳ್ಳುವ ಸನ್ನಿವೇಶದಲ್ಲಿ, ಕುಮಾರ್, ದೇವೇಯ ಮಗನೇ ಆಗಿರುವುದು, ಗ್ರೀಕ್ ಟ್ರ್ಯಾಜೆಡಿಗಳನ್ನು ಅಥವಾ ಬಾಲಿವುಡ್ ಸಿನೆಮಾಗಳನ್ನು ನೆನಪಿಗೆ ತರುತ್ತದೆ. ಕುಮಾರ್, ಯಡ್ಡಿ ಸಂಭಾಷಣೆ ಓದಿ:

ಕುಮಾರ್: ಯಡ್ಡಿ, ನಮ್ಮಪ್ಪ ಅಂತಹವರಲ್ಲ. ತುಂಬಾ ಒಳ್ಳೆ ಕೋಡರ್
ಯಡ್ಡಿ: ಗೊತ್ತು ಸಾ. ಇಲ್ದಿದ್ರೆ, ಕಂಪ್ನಿ ಮೇಲಧಿಕಾರಿ ಆಗಿದ್ದವರು, ವಾಪ್ಸು ಕೋಡ್ ಮಾಡಕ್ಕೆ ಯಾಕೆ ಬರ್ತಿದ್ರು?!
ಕುಮಾರ್: ಇದ್ ಯಾರ್ದೋ ಬೇರೆಯವರ ಕಿತಾಪತಿ ಅನ್ಸುತ್ತೆ. ಕೋಡಲ್ಲ್ಲಿ ಹುಳ ಹಾಕವ್ರೆ.
ಯಡ್ಡಿ: ಕೊಡದಲ್ಲಿ ಹುಳಾನಾ? ಎಲ್ಲಾ ಆ ಅನಂತನ ಅವಾಂತರ ಅಂತೀರಾ?
ಕುಮಾರ್: ಕೊಡದಲ್ಲಿ ಹುಳ ಅಲ್ಲ. ಕೋಡಲ್ಲಿ ಬಗ್ಸು.
ಯಡ್ಡಿ: ಅಂದ್ರೇ.. ಗುಮ್ಮು ಅಂತೀರಾ?
ಕುಮಾರ್: ಯಾರ್ನಾದ್ರೂ ಗುಮ್ಮಕ್ಕೆ ಕಾದಿರ್ತೀಯ. ಹೋಗ್ಲಿ, ಎದುರಗಡೆ ನೋಡು. ಏನ್ ಕಾಣ್ತಿದೆ?
ಯಡ್ಡಿ: ಬಾಂಬೇ ಡೈಯಿಂಗ್ ಷೋ ರೂಮ್ ಸಾ.
ಕುಮಾರ್: ಅದಲ್ಲ. ಅದರ ಮುಂದೆ ನಿಂತಿರೋದು.
ಯಡ್ಡಿ: ನಮ್ಮ ಜೀಪು ಸಾ. ಸಾ..., ಸಾ..., ನಮ್ಮ ಜೀಪ್ನಾ ಯಾವ್ನೋ ನಮ್ಮುಂದೇನೇ ಹೊಡ್ಕೊಂಡೊಯ್ತವ್ನಲ್ಲಾ ಸಾ...!
ಕುಮಾರ್: ಆಟೋ...ಆಟೋ..
ಹೀಗೆ ಪ್ರಾರಂಭವಾಗುವ ಜೀಪ್ ಚೇಸ್, ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್, ಶಿವಾಜಿ ನಗರ ಮುಂತಾದ ಬೆಂಗಳೂರಿನ ರಮಣೀಯ ಸ್ಥಳಗಳಲ್ಲಿ ಮುಂದುವರೆಯುತ್ತದೆ. ಉದ್ಯಾನ ನಗರಿಯ ಈ ಪ್ರದೇಶಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಚೀಚೀಯವರ ವರ್ಣನಾ ಶಕ್ತಿ ಬಣ್ಣಿಸಲಸದಳ. ಉದಾಹ
ರಣೆಗೆ, ಮಳೆ ಬಿದ್ದ ನಂತರ ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್ಟಿನಲ್ಲಿ ಕಾಣಸಿಗುವ ಸೌಂದರ್ಯವನ್ನು ನನಗೆ ತಿಳಿದಂತೆ ಬೇರಾರೂ ಚೀಚೀಯವರಷ್ಟು ಉತ್ಸಾಹದಿಂದ ಬಣ್ಣಿಸಿದಂತಿಲ್ಲ.

ಈ ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ, ರೋಮನ್ ರಮಣಿ ವ್ಯಕ್ತಿತ್ವ. ಈ ಕೃತಿಯ ಪ್ರತಿ ಪಾತ್ರದ ಮೇಲೂ ಪ್ರಭಾವ ಹೊಂದಿರುವ ಈಕೆ, ಇಡೀ ಕೃತಿಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದೆ ನಿಗೂಢವಾಗಿಯೇ ಉಳಿಯುತ್ತಾಳೆ. ಕ್ವಾರ್ಟರ್ ಚೀಚೀಯವರ ಸಮಗ್ರ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಪ್ರೊ.ವರುಣ್ ಡೌರಿಯವರ ಪ್ರಕಾರ, ರೋಮನ್ ರಮಣಿಯ ಪಾತ್ರ ಬೇಕಿರಲಿ, ಬೇಡದಿರಲಿ ನಮ್ಮೆಲ್ಲರ ಜೀವನದ ಮೇಲೆ ಗಾಢ ಪ್ರಭಾವ ಇರುವ 'ವಿಧಿ'ಯನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ವಿಧಿಯನ್ನು ಪ್ರಪ್ರಥಮ ಬಾರಿಗೆ ಹೆಣ್ಣಾಗಿ ಚಿತ್ರಿಸಿ ಚೀಚೀಯವರು ತಮ್ಮ ಫೆಮಿನಿಸ್ಟ್ ತತ್ವವನ್ನು ಅಭೂತಪೂರ್ವಕವಾಗಿ ಪ್ರತಿಪಾದಿಸುತ್ತಾರೆ.

ಒಟ್ಟಿನಲ್ಲಿ, ದ ದೇವೇ'Nಸಿ ಕೋಡ್ ಸಾಹಿತ್ಯಾಸಕ್ತರು ಓದಿ, ಅಭ್ಯಾಸ ಮಾಡಲೇ ಬೇಕಾದ ಮಹತ್ವಾಕಾಂಕ್ಷೆಯುಳ್ಳ ಮಹತ್ವದ ಕೃತಿ.

Labels: ,

Thursday, June 15, 2006

ಮಜಾವಾಣಿ ವಿಷಾದಾಂಕ

"ಮೀಸಲಾತಿ ಬೇಕು" - ಮಜಾವಾಣಿ
ಜೂನ್ ೧೫, ೨೦೦೬: ಒಂದು ಕಾಲದಲ್ಲಿ ವಿಶ್ವಾದ್ಯಂತ ಮೂರೂವರೆ ಓದುಗರನ್ನು ಹೊಂದಿ, "ಸಮಸ್ತ ಕನ್ನಡಿಗರ ಎಮ್ಮೆಯ ಪತ್ರಿಕೆ" ಆಗುವ ಆಕಾಂಕ್ಷೆ ಹೊಂದಿದ್ದ ಮಜಾವಾಣಿ ಪತ್ರಿಕೆ ಇಂದು ತನಗಿಂತ ಉತ್ತಮ ಗುಣಮಟ್ಟ ಮತ್ತು ಜನಪ್ರಿಯತೆ ಹೊಂದಿರುವ "ಬೊಗಳೆ ರಗಳೆ" ಪತ್ರಿಕೆಯ ಹೊಡೆತಕ್ಕೆ ತತ್ತರಿಸುತ್ತಿರುವ ಸಂಗತಿ ವರದಿಯಾಗಿದೆ.

ನಮ್ಮ ಪತ್ರಿಕೆಯ ವರದಿಗಾರರು ಮಜಾವಾಣಿಯ ಸಂಪಾದಕರನ್ನು ಸಂದರ್ಶಿಸಿದಾಗ, ಮಜಾವಾಣಿ ಹಿಂದೆ ಬೀಳುತ್ತಿದೆ ಎಂಬುದನ್ನ್ನು ಅವರು ಮೊದಲಿಗೆ ಒಪ್ಪಲಿಲ್ಲ. "ಮಜಾವಾಣಿಯ ಧ್ಯೇಯೋದ್ದೇಶವೇ ಬೇರೆ, ಬೊಗಳೆ ರಗಳೆಯ ಗುರಿಯೇ ಬೇರೆ. ಗಾಂಧಿಯಂತಹ ಮಹಾ ಪುರುಷನನ್ನೇ ಹಾದಿ ತಪ್ಪಿಸಿದ ಸತ್ಯವೆನ್ನುವ ಅಪಾಯಕಾರಿ ಮೌಲ್ಯದ ವಿರುದ್ಧ ಸೆಣೆಸುವುದು ನಮ್ಮ ಪತ್ರಿಕೆಯ ಗುರಿ. ಆದರೆ, ಬೊ.ರ.ದ ಗುರಿ ಅದಲ್ಲ, ಅಸತ್ಯವನ್ನು ಹುಡುಕುವುದು." ಎಂದೆಲ್ಲಾ ತಡಬಡಾಯಿಸುತ್ತಿದ್ದ ಅವರು, ಸಂದರ್ಶನದ ಕೊನೆಯ ವೇಳೆಗೆ, "ನಮ್ಮ ಪತ್ರಿಕೆ ಹಿಂದುಳಿದಿರುವುದು ನಿಜ. ಮಜಾವಾಣಿಯನ್ನು ಹಿಂದುಳಿದ ಪತ್ರಿಕೆ ಎಂದು ಘೋಷಿಸಿ, ೨೭% ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದರು.

"ಇಂಟರ್ನೆಟ್ ಪತ್ರಿಕೆಗೆ ಮೀಸಲಾತಿಯೇ? ಇದು ವಾಸ್ತವದಲ್ಲಿ ಸಾಧ್ಯವೇ?" ಎಂದು ನಾವು ಪ್ರಶ್ನಿಸಿದಾಗ ಕ್ಷೋಭೆಗೆ ಒಳಗಾದ ಅವರು, "ವಾಸ್ತ್ವವ ನಮ್ಮ ಪತ್ರಿಕೆಯ ವಿರುದ್ಧ ಕೆಲಸ ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಬಹು ಸಂಖ್ಯಾತ ಹಿಟಾಸಕ್ತಿಗಳು ವಾಸ್ತವದೊಂದಿಗೆ ಸೇರಿ ನಮ್ಮ ಪತ್ರಿಕೆಯ ವಿರುದ್ಧ ಬಹಿರಂಗವಾಗಿ ಒಳ ಸಂಚು ನಡೆಸುತ್ತಿರುವುದು ವಿಷಾದಕರ ಸಂಗತಿ" ಎಂದರು.

Monday, June 12, 2006

ಮಜಾವಾಣಿ ಕಾರ್ಟೂನ್

(ನ್ಯೂಯಾರ್ಕರ್ ಪತ್ರಿಕೆಯಲ್ಲಿ ನೋಡಿದ್ದ ವ್ಯಂಗ್ಯ ಚಿತ್ರದಿಂದ ಪ್ರೇರಿತ)