ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, May 02, 2006

ಮಜಾವಾಣಿ ಸಂಪಾದಕೀಯ: ವೆಲ್‍ಡನ್ ಯುಕ್ತಾ ಮೂಖಿ!

ವೆಲ್‍ಡನ್ ಯುಕ್ತಾ ಮೂಖಿ!

ಇಂದಿನ ನಮ್ಮ ಬಹುಪಾಲು ಸುದ್ದಿ ಮಾಧ್ಯಮಗಳು ಅಲ್ಪ ಸಂಖ್ಯಾತರ ವಿರೋಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ, ನಮ್ಮ ಸಮಾಜದಲ್ಲಿ ಅಲ್ಪ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು, ಶ್ರೀಮಂತರು, ಗಣ್ಯವ್ಯಕ್ತಿಗಳು ಮಾಡುವ ಭ್ರಷ್ಟಾಚಾರ, ಕೊಲೆ, ವಂಚನೆಗಳಂತಹ ಸಣ್ಣ ಪುಟ್ಟ ವಿಷಯಗಳನ್ನು ಆಗಾಗ್ಗೆ ಪ್ರಥಮ ಪುಟದಲ್ಲಿ ವರದಿಮಾಡುವ ನಮ್ಮ ಮಾಧ್ಯಮಗಳು, ಇದೇ ಅಲ್ಪ ಸಂಖ್ಯಾತರು ಒಳ್ಳೆಯ ಕೆಲಸ ಮಾಡಿದಾಗ "ವೆಲ್‍ಡನ್" ಎಂದು ಒಮ್ಮೆಯೂ ಬೆನ್ನು ತಟ್ಟುವುದಿಲ್ಲ.

ಆದರೆ, ಮಜಾವಾಣಿ ಹಾಗಲ್ಲ. ಈಗಾಗಲೇ ನಮ್ಮ ಪತ್ರಿಕೆ ಧರಂ ಸಿಂಗ್ ಮತ್ತು ಮಹಾರಾಷ್ಟ್ರ ಶಾಸಕರಿಗೆ ವೆಲ್‍ಡನ್ ಎಂದಿದೆ. ಇಂದು ನಮ್ಮಿಂದ "ವೆಲ್‍ಡನ್" ಎನ್ನಿಸಿಕೊಂಡು ಬೆನ್ನು ಮುಟ್ಟಿಸಿಕೊಳ್ಳುವ ಸರದಿ ಚಲನ ಚಿತ್ರ ತಾರೆ, ಮಾಜಿ ವಿಶ್ವ ಸುಂದರಿ ಯುಕ್ತಾ ಮೂಖಿಯದಾಗಿದೆ.

"ಬಡತನ ಮತ್ತು ಸಿರಿತನ ಎಂಬುದು ನಮ್ಮ ಮನಸ್ಸಿನ ಪರಿಕಲ್ಪನೆ" ಎಂದಿರುವ ಯುಕ್ತಾ ಮೂಖಿಯವರು, ಬಡವರಿಗೆ ಬಡತನವಿರುವುದು ಕಲ್ಪನಾಶಕ್ತಿಯಲ್ಲಿ ಎಂಬ ಗಮನಾರ್ಹ ವಿಷಯವನ್ನು ಹೊರಗೆಡವಿದ್ದಾರೆ. ("ಆತ್ಮಾಭಿವೃದ್ಧಿಗೆ ಮಾನಸಿಕ ಬಡತನ ಪೂರಕ" ಎಂಬ ತತ್ವವನ್ನು ಚೆನ್ನೈನ ಕನ್ನಡ ಜಟಕಾ ಸಾಬಿ ಸಾರುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ದುಡಿಯಲು ಉದ್ಯೋಗವಿಲ್ಲವೇ? ಹೊಟ್ಟೆಗೆ ಹಿಟ್ಟಿಲ್ಲವೇ? ಮೈ ಮುಚ್ಚಲು ಬಟ್ಟೆಯಿಲ್ಲವೇ? ಕೊನೆಗೆ ಕುಡಿಯಲು ತೊಟ್ಟೂ ನೀರಿಲ್ಲವೇ? ಅದೆಲ್ಲಾ ನಿಮ್ಮ ಪರಿಕಲ್ಪನೆಗಳಷ್ಟೇ. ನಿಮಗಿರುವ ನಿಜವಾದ ಬಡತನವೆಂದರೆ "poverty of phantasy".

ಯುಕ್ತಾ ಮೂಖಿ,ಐಶ್ವರ್ಯ ರೈ, ಸುಷ್ಮಿತ ಸೆನ್ ಜೊತೆ, ಸ್ವಿಟ್ಜರ್ ಲ್ಯಾಂಡಿನ ಬೀಚಿನಲ್ಲಿ ಕುಳಿತು, ಬಾದಾಮಿ, ಕೇಸರಿ ತುಂಬಿದ ಕಾಶ್ಮೀರಿ ಷಾಹಿ ಬಿರಿಯಾನಿ ತಿನ್ನುತ್ತಾ, ದ್ರಾಕ್ಷಾರಸ ಸೇವಿಸುತ್ತಿರುವ ಬಿಲ್ ಗೇಟ್ಸ್ ನೀವೇ ಎಂದು ಭಾವಿಸಿಕೊಳ್ಳುವುದರ ಬದಲು ಬಡತನದ ಬಗ್ಗೆ ಬೊಬ್ಬಿಡುವ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಕಲ್ಪನಾ ಶಕ್ತಿ ಕುಂಠಿತವಾಗಿರುವುದನ್ನು ಮನಗಣಾದೆ, ನಿಮಗಿರುವ ಅರೆಕಾಸಿನ ಭಾರವನ್ನೂ ಬಲವಂತವಾಗಿ ಕಡಿಮೆ ಮಾಡುವ ಅಲ್ಪಸಂಖ್ಯಾತ ಶ್ರೀಮಂತರ ಬಗೆಗೆ ಕೆಂಡಕಾರುವ ನಿಮಗೆ ಧಿಕ್ಕಾರವಿರಲಿ.

ಅಮಾರ್ತ್ಯ್ ಸೆನ್ ಅಂತಹ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರು ಹಲವು ಪುಸ್ತಕಗಳನ್ನು ಬರೆದೂ ತಡಪಾಯಿಸುತ್ತಿದ್ದರೆ, ಬಡಜನರ ಬಡತನದ ಮೂಲವನ್ನು ಒಂದೇ ವಾಕ್ಯದಲ್ಲಿ ಪೂರ್ಣವಾಗಿ ವಿವರಿಸಿರುವ ಯುಕ್ತಾ ಮೂಖಿಯವರಿಗೆ ನಾವು ಹೇಳುವುದಿಷ್ಟೇ: "ವೆಲ್‍ ಡನ್!"

2 Comments:

Anonymous ಶ್ರೀವತ್ಸ ಜೋಶಿ said...

ಯುಕ್ತಾ ಮುಖದಿಂದ ಯುಕ್ತವಾದ ಮಾತೇ ಬಂದಿದೆ!

ನಿಮ್ಮ ವೆಲ್ ಡನ್ ಶಭಾಷ್‍ಗಿರಿಯೂ ಯುಕ್ತವಾಗಿಯೇ ಇದೆ. ಏಕೆಂದರೆ ಇದನ್ನು ಯುಕ್ತಾಳ ಬಾಯಿ (= ಬಾವಿ = well) doneಇಸಿದ್ದಲ್ಲವೇ?

May 04, 2006 4:55 PM  
Blogger V.V. said...

ಜೋಷಿಯವರೇ,

ಎಂದಿನಂತೆ, ಯುಕ್ತಿಯ ಮಾತನ್ನೇ ಆಡಿರುವಿರಿ. ಉಪಯುಕ್ತವಾಯಿತು.

ವಂದನೆಗಳೊಂದಿಗೆ,

"ವಿ.ವಿ."

June 15, 2006 5:13 PM  

Post a Comment

Links to this post:

Create a Link

<< Home