ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, May 05, 2006

ಮಜಾವಾಣಿಗೆ ರಜಾ!


ಪ್ರಿಯ ಓದುಗರೇ,

ಮಜಾವಾಣಿ ಪತ್ರಿಕೆಯ ಕಾರ್ಯಾಲಯವನ್ನು ಹದಿನಾರು ವರ್ಷಗಳ ನಂತರ ಅಮೆರಿಕದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕಾರ್ಯ ಚಟುವಟಿಕೆಗಳು ನಾಳೆಯಿಂದ ಪ್ರಾರಂಭವಾಗಲಿವೆ. ಹೀಗಾಗಿ ನಮ್ಮ ಪತ್ರಿಕೆಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಬೇಕಾದಂತ ಅನಿವಾರ್ಯತೆ ಎದುರಾಗಿದೆ.

ವಿಶ್ವಾದ್ಯಂತ ಇರುವ ನಮ್ಮ ಮೂರುವರೆ ಮಂದಿ ಓದುಗರು, ಇಲ್ಲಿಯವರೆಗೆ ನಮಗೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಅವರಿಗೆ ಚಿರ ಋಣಿ. ಈ ಪ್ರೋತ್ಸಾಹ ಮುಂದೆಯೂ ಹೀಗೆಯೆ ಮುಂದುವರೆಸಬೇಕೆಂದು ಪ್ರಾರ್ಥಿಸುತ್ತೇನೆ.

ಈ ಸಂದರ್ಭದಲ್ಲಿ ರಾ.ಶಿ.ಯವರು ಕೊರವಂಜಿ ಪತ್ರಿಕೆಯನ್ನು ಮುಚ್ಚುವಾಗ ಹೇಳಿದ್ದರೆನ್ನಲಾದ ಮಾತುಗಳು ನೆನಪಿಗೆ ಬರುತ್ತಿವೆ: "ಹೋಗ್‍ಬರ್ತೀನಿ ಅಂದ್ಯೇನೆ ಕೊರವಂಜೀ..? ನೀನಿದ್ದಿದ್ದಿದ್ದೇ ಗೊತ್ತಾಗ್ಲಿಲ್ವಲ್ಲೇ!" ಈ ಮಾತುಗಳು ಕೊರವಂಜಿಗಿಂತ ಮಜಾವಾಣಿಗೆ ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ.

ಕಳಚಿಕೊಳ್ಳುವ ಮುನ್ನ ಹೇಳಲೇ ಬೇಕಾದ ಮಾತು: ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ "ಹರಿಣಿ"ಯವರ ಚಿತ್ರಗಳು ಈಗ ಇಂಟರ್‍ನೆಟ್‍ನಲ್ಲಿ ಲಭ್ಯ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ವಂದನೆಗಳೊಂದಿಗೆ,

ಶೇಷಾದ್ರಿ ("ವಿ.ವಿ.")

Labels:

Tuesday, May 02, 2006

ಮಜಾವಾಣಿ ಸಂಪಾದಕೀಯ: ವೆಲ್‍ಡನ್ ಯುಕ್ತಾ ಮೂಖಿ!

ವೆಲ್‍ಡನ್ ಯುಕ್ತಾ ಮೂಖಿ!

ಇಂದಿನ ನಮ್ಮ ಬಹುಪಾಲು ಸುದ್ದಿ ಮಾಧ್ಯಮಗಳು ಅಲ್ಪ ಸಂಖ್ಯಾತರ ವಿರೋಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ, ನಮ್ಮ ಸಮಾಜದಲ್ಲಿ ಅಲ್ಪ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು, ಶ್ರೀಮಂತರು, ಗಣ್ಯವ್ಯಕ್ತಿಗಳು ಮಾಡುವ ಭ್ರಷ್ಟಾಚಾರ, ಕೊಲೆ, ವಂಚನೆಗಳಂತಹ ಸಣ್ಣ ಪುಟ್ಟ ವಿಷಯಗಳನ್ನು ಆಗಾಗ್ಗೆ ಪ್ರಥಮ ಪುಟದಲ್ಲಿ ವರದಿಮಾಡುವ ನಮ್ಮ ಮಾಧ್ಯಮಗಳು, ಇದೇ ಅಲ್ಪ ಸಂಖ್ಯಾತರು ಒಳ್ಳೆಯ ಕೆಲಸ ಮಾಡಿದಾಗ "ವೆಲ್‍ಡನ್" ಎಂದು ಒಮ್ಮೆಯೂ ಬೆನ್ನು ತಟ್ಟುವುದಿಲ್ಲ.

ಆದರೆ, ಮಜಾವಾಣಿ ಹಾಗಲ್ಲ. ಈಗಾಗಲೇ ನಮ್ಮ ಪತ್ರಿಕೆ ಧರಂ ಸಿಂಗ್ ಮತ್ತು ಮಹಾರಾಷ್ಟ್ರ ಶಾಸಕರಿಗೆ ವೆಲ್‍ಡನ್ ಎಂದಿದೆ. ಇಂದು ನಮ್ಮಿಂದ "ವೆಲ್‍ಡನ್" ಎನ್ನಿಸಿಕೊಂಡು ಬೆನ್ನು ಮುಟ್ಟಿಸಿಕೊಳ್ಳುವ ಸರದಿ ಚಲನ ಚಿತ್ರ ತಾರೆ, ಮಾಜಿ ವಿಶ್ವ ಸುಂದರಿ ಯುಕ್ತಾ ಮೂಖಿಯದಾಗಿದೆ.

"ಬಡತನ ಮತ್ತು ಸಿರಿತನ ಎಂಬುದು ನಮ್ಮ ಮನಸ್ಸಿನ ಪರಿಕಲ್ಪನೆ" ಎಂದಿರುವ ಯುಕ್ತಾ ಮೂಖಿಯವರು, ಬಡವರಿಗೆ ಬಡತನವಿರುವುದು ಕಲ್ಪನಾಶಕ್ತಿಯಲ್ಲಿ ಎಂಬ ಗಮನಾರ್ಹ ವಿಷಯವನ್ನು ಹೊರಗೆಡವಿದ್ದಾರೆ. ("ಆತ್ಮಾಭಿವೃದ್ಧಿಗೆ ಮಾನಸಿಕ ಬಡತನ ಪೂರಕ" ಎಂಬ ತತ್ವವನ್ನು ಚೆನ್ನೈನ ಕನ್ನಡ ಜಟಕಾ ಸಾಬಿ ಸಾರುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ದುಡಿಯಲು ಉದ್ಯೋಗವಿಲ್ಲವೇ? ಹೊಟ್ಟೆಗೆ ಹಿಟ್ಟಿಲ್ಲವೇ? ಮೈ ಮುಚ್ಚಲು ಬಟ್ಟೆಯಿಲ್ಲವೇ? ಕೊನೆಗೆ ಕುಡಿಯಲು ತೊಟ್ಟೂ ನೀರಿಲ್ಲವೇ? ಅದೆಲ್ಲಾ ನಿಮ್ಮ ಪರಿಕಲ್ಪನೆಗಳಷ್ಟೇ. ನಿಮಗಿರುವ ನಿಜವಾದ ಬಡತನವೆಂದರೆ "poverty of phantasy".

ಯುಕ್ತಾ ಮೂಖಿ,ಐಶ್ವರ್ಯ ರೈ, ಸುಷ್ಮಿತ ಸೆನ್ ಜೊತೆ, ಸ್ವಿಟ್ಜರ್ ಲ್ಯಾಂಡಿನ ಬೀಚಿನಲ್ಲಿ ಕುಳಿತು, ಬಾದಾಮಿ, ಕೇಸರಿ ತುಂಬಿದ ಕಾಶ್ಮೀರಿ ಷಾಹಿ ಬಿರಿಯಾನಿ ತಿನ್ನುತ್ತಾ, ದ್ರಾಕ್ಷಾರಸ ಸೇವಿಸುತ್ತಿರುವ ಬಿಲ್ ಗೇಟ್ಸ್ ನೀವೇ ಎಂದು ಭಾವಿಸಿಕೊಳ್ಳುವುದರ ಬದಲು ಬಡತನದ ಬಗ್ಗೆ ಬೊಬ್ಬಿಡುವ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಕಲ್ಪನಾ ಶಕ್ತಿ ಕುಂಠಿತವಾಗಿರುವುದನ್ನು ಮನಗಣಾದೆ, ನಿಮಗಿರುವ ಅರೆಕಾಸಿನ ಭಾರವನ್ನೂ ಬಲವಂತವಾಗಿ ಕಡಿಮೆ ಮಾಡುವ ಅಲ್ಪಸಂಖ್ಯಾತ ಶ್ರೀಮಂತರ ಬಗೆಗೆ ಕೆಂಡಕಾರುವ ನಿಮಗೆ ಧಿಕ್ಕಾರವಿರಲಿ.

ಅಮಾರ್ತ್ಯ್ ಸೆನ್ ಅಂತಹ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರು ಹಲವು ಪುಸ್ತಕಗಳನ್ನು ಬರೆದೂ ತಡಪಾಯಿಸುತ್ತಿದ್ದರೆ, ಬಡಜನರ ಬಡತನದ ಮೂಲವನ್ನು ಒಂದೇ ವಾಕ್ಯದಲ್ಲಿ ಪೂರ್ಣವಾಗಿ ವಿವರಿಸಿರುವ ಯುಕ್ತಾ ಮೂಖಿಯವರಿಗೆ ನಾವು ಹೇಳುವುದಿಷ್ಟೇ: "ವೆಲ್‍ ಡನ್!"

ಬ್ರೇ-ಕಿಂಗ್ ನ್ಯೂಸ್!


ಆತ್ಮ ಸೌಂದರ್ಯ ಸ್ಪರ್ಧೆ?

ಬೆಂಗಳೂರು, ಮೇ ೨, ೨೦೦೬: ಭಾರತೀಯರು ಆತ್ಮ ಸೌಂದರ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ರೈಲ್ವೇ-ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ, ಆತ್ಮ ಸೌಂದರ್ಯ ವರ್ಧಕ ಪ್ರಸಾಧನಗಳ ತಯಾರಕರಾದ ದೀಪಕ್ ಚೋಪ್ರಾ, ಶ್ರೀ ಶ್ರೀ ರವಿ ಶಂಕರ್ ಮುಂತಾದವರು ವಿಶ್ವ ಆತ್ಮ-ಸೌಂದರ್ಯ ಸ್ಪರ್ಧೆ ಏರ್ಪಡಿಸಲು ಯೋಜಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

"ಡಾ."ವಿಜಯ್ ಮಲ್ಯರವರ ಯು.ಬಿ. ಗುಂಪಿನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ದೇಶಗಳಿಂದ ಆತ್ಮ ಸುಂದರಿಯರು ಭಾಗವಹಿಸಲಿದ್ದು, ವಿಜಯೀ ಮಹಿಳೆಗೆ "ಪರಮಾತ್ಮ ಸುಂದರಿ" ಪ್ರಶಸ್ತಿ ನೀಡಲಾಗುವುದು. ಇದೇ ಪ್ರಥಮ ಬಾರಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ, ಸೌದಿ ಅರೇಬಿಯ, ಇರಾನ್, ಪಾಕಿಸ್ತಾನಗಳಂತಹ ಇಸ್ಲಾಮಿಕ್ ದೇಶಗಳಿಂದಲೂ ಸ್ಪರ್ಧಿಗಳು ಭಾಗವಹಿಸಲಿರುವುದು ಈ ಸ್ಪ್ರರ್ಧೆಯ ವೈಶಿಷ್ಟ್ಯ.

ಆರ್.ಎಸ್.ಎಸ್., ಶಿವ ಸೇನೆ ಖಂಡನೆ: ಇಂತಹ ಸೌಂದರ್ಯ ಸ್ಪರ್ಧೆಗಳು ಭಾರತೀಯ ಸನಾತನ ಸಂಸ್ಕೃತಿಗೆ ಅಪಮಾನ ಎಂದು ಬಣ್ಣಿಸಿರುವ ಹಿಂದೂ ಪರಿವಾರದ ಸಂಸ್ಥೆಗಳು, ಆತ್ಮಗಳಿಗೆ ಈಜುಡುಗೆ ತೊಡಿಸುವುದನ್ನು ತಾವು ತೀವ್ರವಾಗಿ ಪ್ರತಿಭಟಿಸುತ್ತೇವೆ ಎಂದಿವೆ.

ಮುಸ್ಲಿಂ ಲೀಗ್ ಬೆಂಬಲ: ಹಿಂದೂ ಸಂಘಟನೆಗಳು ಆತ್ಮ-ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಲು ನಿರ್ಧರಿಸಿದ್ದರೆ, ಮುಸ್ಲಿಂ ಲೀಗ್ ಈ ಸ್ಪರ್ಧೆಗೆ ತನ್ನ ಬೆಂಬಲ ಸೂಚಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಆತ್ಮ ಸುಂದರಿಯರು ತಮ್ಮ ಆತ್ಮಕ್ಕೆ ಈಜುಡುಗೆ ತೊಡಿಸಿದ ನಂತರ ಅದರ ಮೇಲೆ ಬುರ್ಖಾ ಧರಿಸಬೇಕೆಂದು ಅದು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಚಿಂತನ - ಮಂಥನ

ಬಡತನ
ಬಡತನ ನಮ್ಮ ಆತ್ಮಕ್ಕೆ ಒಳ್ಳೆಯದೆಂದು ನನ್ನ ಧೃಡ ನಂಬಿಕೆ. ನಾವು ಬಡವರಾಗಿದ್ದಾಗ, ಯಾರಾದರೂ ಬಂದು, "ಸ್ವಾಮಿ ನಾನು ಬಡವ, ಕೊಂಚ ಸಹಾಯ ಮಾಡಿ" ಎಂದರೆ, "ಆಗುವುದಿಲ್ಲ, ನನ್ನ ಬಳಿ ಹಣವಿಲ್ಲ" ಎಂದು ಆತ್ಮ ವಂಚನೆಯಿಲ್ಲದೆ ಹೇಳಬಹುದು.

Labels:

Monday, May 01, 2006

ಬಕ್ ಅಪ್ ನಾನ್-ಬ್ಯಾಂಗ್ಲೋರಿಯನ್ಸ್!

ಸಂಜೆವಾಣಿಯಿಂದ ಹೊರಗಿನವರಿಗೆ ಪ್ರೋತ್ಸಾಹ?!

ಬೆಂಗಳೂರು, ಮೇ ೧, ೨೦೦೬: ಕರ್ನಾಟಕದ ಇತರ ಸ್ಥಳಗಳು ಹಿಂದೆ ಬಿದ್ದಿರುವಾಗ, ಬೆಂಗಳೂರು ಮತ್ತು ಬೆಂಗಳೂರಿಗರು ಮಾತ್ರ ಮುಂದುವರೆಯುತ್ತಿರುವುದು ಶೋಚನೀಯ ಸಂಗತಿ. ಸರ್ಕಾರ ಇದನ್ನು ಅಷ್ಟಾಗಿ ಗಮನಿಸಿದಂತಿಲ್ಲ. ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮುಖ್ಯ.

ಈ ನಿಟ್ಟಿನಲ್ಲಿ ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭಗಳಂತಹ ಹೆಸರಾಂತ ಪತ್ರಿಕೆಗಳು ಯಾವುದೇ ಉತ್ಸಾಹ ತೋರದಿರುವಾಗ, ಸಂಜೆವಾಣಿಯಂತಹ ಸಣ್ಣ ಪತ್ರಿಕೆ ಮುಂದಾಗಿರುವುದು ಗಮನಾರ್ಹ.

ಬೆಂಗಳೂರುವಾಸಿಗಳೇ ಮುನ್ನಡೆ ಸಾಧಿಸಿರುವುದನ್ನು "ವಿಷಾದನೀಯ" ಎಂದಿರುವ ಸಂಜೆವಾಣಿ, ಈ ವಿಷಯದಲ್ಲಿ ಹೊರಗಿನವರನ್ನು ಪ್ರೋತ್ಸಾಹಿಸುವುದೋ ಎಂದು ಕಾದು ನೋಡಬೇಕಾಗಿದೆ.

ಏಪ್ರಿಲ್ ೨೪, ೨೦೦೬ ಸಂಜೆವಾಣಿ ಸಂಚಿಕೆಯಿಂದ: