ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, April 29, 2006

ಬಾಲ ಗ್ರಹ - ಕಿರಿಯರ ಅಂಕಣ

[ನಮ್ಮ ಪತ್ರಿಕೆಗೆ ಮಕ್ಕಳ ಬಗ್ಗೆ ಕಾಳಜಿ ಮೊದಲಿನಿಂದಲೂ ಇದ್ದೇ ಇದೆ. -- ಆದರೆ ಮಕ್ಕಳ ಮಕ್ಕಳ ಮೇಲಿಲ್ಲ, ಏಕೆಂದರೆ ಮಕ್ಕಳಿಗೆ ಮಕ್ಕಳಾಗುವುದು ಸೂಕ್ತವಲ್ಲ -- ಆದರೂ ಸಹ ಇಂದಿನ ವರೆಗೆ ನಮ್ಮ ಪತ್ರಿಕೆಯಲ್ಲಿ ಮಕ್ಕಳಿಗಾಗಿಯೇ ಒಂದು ಅಂಕಣವಿರಲಿಲ್ಲ. ಆ ಕೊರತೆಯನ್ನು ನಿವಾರಿಸಲು, "ಬಾಲ ಗ್ರಹ" ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಂಕಣದಿಂದ ವಿಶ್ವಾದ್ಯಂತ ಇರುವ ನಮ್ಮ ಓದುಗರ ಸಂಖ್ಯೆ ಮೂರರಿಂದ ಮೂರೂವರೆಗೆ ಏರುವ ನಂಬಿಕೆ ನಮಗಿದೆ. -ಸಂಪಾದಕ]ಡೈನೋಸಾರ್
ಗೋಪಾಲ ಕೃಷ್ಣ, ಹತ್ತನೆಯ ತರಗತಿ, ಸಿ-ಸೆಕ್ಶನ್, ಬಿಷಪ್ ಕಾಟನ್ ಜೂನಿಯರ್ ಕಾಲೇಜ್
[ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಲೇಖನ]

ನನ್ನ ಪ್ರಬಂಧದ ಕಥಾವಸ್ತು "ಡೈನೋಸಾರ್". ಇದೊಂದು ಕ್ರೂರ ಪ್ರಾಣಿಯಾಗಿದ್ದು ಅಸುರರ ಕಾಲದಲ್ಲಿ ಇದ್ದುದರಿಂದ "ಡೈನಾಸುರ" ಎಂಬ ನಾಮಧೇಯ ಪಡೆಯಿತು.

ನನಗೆ ಡೈನೋಸಾರ್ ವಿಷಯ ಹೆಚ್ಚು ತಿಳಿದಿಲ್ಲ. ಆದ್ದರಿಂದ ನಾನು ಬೇರೊಂದು ಪ್ರಾಣಿಯನ್ನು ಆಯ್ಕೆ ಮಾಡಲು ಆಯ್ದು ಕೊಳ್ಳುತ್ತೇನೆ. ಆ ಪ್ರಾಣಿಯ ಹೆಸರು, ಹಸು. ಹೆಣ್ಣು ಹಸು ಒಂದು ಸಸ್ತನಿ. ಹಸುವಿಗೆ ಆರು ಪಕ್ಕೆಗಳಿದ್ದು, ಅವು ಮೇಲೆ, ಕೆಳಗೆ, ಎಡ ಮತ್ತು ಬಲ ಎಂಬುದಾಗಿವೆ. ಅದರ ಹಿಂದೆ ಒಂದು ಬಾಲವಿದ್ದು ಬಾಲದ ತುದಿಯಲ್ಲಿ ಒಂದು ಬ್ರಶ್ ಇರುತ್ತದೆ. ಹಾಲು ಕರೆಯುವಾಗ ನೊಣಗಳು ಬಕೆಟ್ಟಿನಲ್ಲಿ ಬೀಳದಂತೆ ತಡೆಯುವುದೇ ಆ ಬಾಲದ ಕೆಲಸವಾಗಿದೆ.

ಹುಟ್ಟಿನಿಂದಲೇ ಬಾಲವಿರುವ ಹಸುವಿನ ಮಕ್ಕಳಿಗೆ "ಕರು" ಎನ್ನುತ್ತಾರೆ. ಆದರೆ, ಹುಟ್ಟಿದಾಗ ಬಾಲವಿಲ್ಲದ ಮನುಷ್ಯರ ಮಕ್ಕಳಿಗೆ "ಬಾಲಕರು" ಎನ್ನುತ್ತಾರೆ. ಇದೊಂದು ವಿರುದ್ದಾರ್ಥಕ ಪದ.

ಹಸುವಿಗೆ ಒಂದು ತಲೆಯಿದ್ದು, ಅದರ ಕೆಲಸ ಕೊಂಬುಗಳಿಗೆ ಜಾಗ ಏರ್ಪಡಿಸುವುದಾಗಿದೆ. ಹಸುವಿನ ಕೊಂಬುಗಳು comma ಆಕಾರದಲ್ಲಿದ್ದು, ನಮ್ಮ ಪುರಾತನ ವಂಶಸ್ತರು ಅದನ್ನು "ಕಾಮಧೇನು" ಎಂದು ಈಗಲೂ ಪೂಜಿಸುತ್ತಾರೆ ಮತ್ತು "ಕಾಮ ಶಾಸ್ತ್ರ" ಎಂಬ ವ್ಯಾಕರಣ ಗ್ರಂಥದ ರಚನೆಗೆ ಇದು ಕಾರಣವಾಗಿದೆ.

ಹಸುವಿನ ತಲೆಯ ಕೆಳಗೆ ಮುಖವಿದ್ದು, ಮುಖದ ಕೆಲಸ ಬಾಯಿಗೆ ಜಾಗ ಕೊಡುವುದಾಗಿದೆ. ಬಾಯಿಯ ಕೆಲಸ ಹಸಿವೆಯಾದಾಗ "ಅಂಬಾ.." ಎನ್ನುವುದು. ಹಸು ಏನೇ ತಿಂದರೂ ಅದನ್ನು ಎರಡು ಬಾರಿ ತಿನ್ನುತ್ತದೆ ಆದ್ದರಿಂದ ಅದಕ್ಕೆ ಬೇಕಾದಷ್ಟು ಆಹಾರ ದೊರಕುತ್ತದೆ. ಆಹಾರ ಸಾಲದಾದಾಗ ಅದು "ಅಂಬಾ.." ಎನ್ನುತ್ತದೆ. "ಅಂಬಾ.." ಎನ್ನದಿದ್ದರೆ, ಅದರ ಹೊಟ್ಟೆಯ ತುಂಬಾ ಹುಲ್ಲು ತುಂಬಿದೆ ಎಂದೇ ಅರ್ಥ.

ಹಸುವಿನ ವಾಸನಾ ಶಕ್ತಿ ಶಕ್ತಿಯುತವಾಗಿರುತ್ತದೆ ಆದ್ದರಿಂದ ಬಹಳ ದೂರದಿಂದಲೇ ಅದು ವಾಸಿಸುತ್ತಿರುವ ಸ್ಥಳದ ಸುಳಿವು ನಮಗೆ ಸಿಗುತ್ತದೆ.

ಹೆಂಗಸು ಹಸುವಿಗೆ, ಹಸು ಎನ್ನುತ್ತಾರೆ. ಆದರೆ, ಮನುಷ್ಯ ಹಸುವಿಗೆ "ಎತ್ತು" ಎನ್ನುತ್ತಾರೆ. "ಎತ್ತು" ಪದಕ್ಕೆ ಇನ್ನೊಂದು ಅರ್ಥ ಇರುವುದರಿಂದ ಅದೊಂದು ಸಮಾನಾರ್ಥಕ ಪದ. ಗಂಡಸು ಹಸು ಸಸ್ತನಿಯಲ್ಲ.

ಹೆಂಗಸು ಹಸುವಿನ ಕೆಳಗೆ ಹಾಲು ಜೋತಾಡುತ್ತಿರುತ್ತದೆ. ಇದು ಅಲ್ಲಿರಲು ಮುಖ್ಯ ಕಾರಣವೆಂದರೆ, ಬಕೆಟ್ಟಿನಲ್ಲಿ ಹಾಲು ಕರೆಯಲು ಕೆಳಗಡೆಯೇ ಸೂಕ್ತವಾದ ಜಾಗವಾಗಿದೆ. ಹಾಲನ್ನು ಕರೆದಷ್ಟೂ ಅದು ಬರುತ್ತಲೇ ಇರುತ್ತದೆ. ನಮ್ಮ ಮನೆಗೆ ಹಾಲನ್ನು ಹಾಕುವವನ ಕ್ಯಾನಿನಲ್ಲಿ ಕೆಲವೊಮ್ಮೆ ಹಾಲು ಖಾಲಿಯಾಗಿರುತ್ತದೆ. ಆದರೆ, ಹಸುವಿನಲ್ಲಿ ಮಾತ್ರ ಹಾಲು ಯಾವಾಗಲೂ ಇರುತ್ತದೆ. ಇದೊಂದು ವೈಜ್ಞಾನಿಕ ವಿಚಾರವಾಗಿದ್ದು ನನಗಿನ್ನೂ ಅಷ್ಟಾಗಿ ತಿಳಿದಿಲ್ಲ.

ಹಾಲು ಕೊಡದಿದ್ದರೂ ಸಹ ಒಳ್ಳೆಯ ಮನುಷ್ಯರಿಗೆ "ಹಸುವಿನಂತಹ ವ್ಯಕ್ತಿ" ಎನ್ನುತ್ತಾರಾದ್ದರಿಂದ ನಾವೆಲ್ಲರೂ ಒಳ್ಳೆಯವರಾಗಲು ಪ್ರಯತ್ನಿಸಬೇಕು.

[This piece is largely inspired by something I read in Steven Pinker's introduction to The Best American Science and Nature Writing. While I am not a 19 year old girl studying in Harvard with a $500,000 book contract, I still don't want to come back at a later time and admit that "I internalized" things written in that book!]

8 Comments:

Blogger Sarathy said...

ಒಳ್ಳೆಯ ಮನುಷ್ಯರು "ಹಸುವಿನಂತಹ ವ್ಯಕ್ತಿ"ಗಳಾಗಿರುವುದರಿಂದ ಅವರನ್ನು "ಹಸುಳೆ" ಎಂದೇ ಕರೆಯುವುದು ಸೂಕ್ತ.

April 29, 2006 3:21 AM  
Anonymous Anonymous said...

ettu ennuvudu gandasu hasuvige,manushya hasuvigalla

April 30, 2006 4:56 AM  
Blogger V.V. said...

ಸಾರಥಿಯವರೇ,

ಇನ್ನೂ ಹಲ್ಲು ಬಾರದ, ಯಾವಗಲೂ ಕಣ್ಣೀರು ಸುರಿಸುವ ಮೊಸಳೆಗೆ, "ಹಸುಳೆ" ಎನ್ನುವರೆಂದು ತಪ್ಪಾಗಿ ಭಾವಿಸಿದ್ದೆವು. ನಮ್ಮ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ್ದಕ್ಕೆ ಧನ್ಯವಾದಗಳು.

ಅನಾನಸ್‌ರವರೇ,
ಮಜಾವಾಣಿಯಂತಹ ಗಂಭೀರ, ಪಾಂಡಿತ್ಯಪೂರ್ಣ ಪತ್ರಿಕೆಯಲ್ಲಿ ನೀವು ತೋರಿಸಿರುವಂತಹ ತಪ್ಪುಗಳಾಗುತ್ತಿರುವುದು ಅಕ್ಷಮ್ಯ. ಇಂತಹ ತಪ್ಪುಗಳಿಂದ ನಮ್ಮ ಪತ್ರಿಕೆಯ ವಿಶ್ವಾಸರ್ಹತೆ ಕಡಿಮೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆದರೆ, ಆ ಲೇಖನದ ಕರ್ತೃವಾದ ಗೋಪಾಲ ಕೃಷ್ಣ, (ಎಸ್.ಎಸ್.ಎಲ್.ಸಿ.) ಅವರನ್ನು ಸಂಪರ್ಕಿಸಿದಾಗ, ಅವರು, ಈ ತಪ್ಪನ್ನು ಒಪ್ಪಲಿಲ್ಲ. ವೈಜ್ಞಾನಿಕ ಪ್ರಯೋಗದ ನಂತರವೇ ತಾವು ಈ ನಿರ್ಣಯಕ್ಕೆ ಬಂದಿರುವುದಾಗಿ ಅವರು ತಿಳಿಸಿದರು.

ಗಂಡಸು-ಹಸುವಿಗೆ "ಎತ್ತು" ಎಂದಾಗ, ಅದು ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಆದರೆ, ಹಸುವಿನಂತಹ-ಮನುಷ್ಯರಿಗೆ, "ಎತ್ತು" ಎಂದಾಗ, "there definitely was a reaction" ಎಂದರು. ಆದುದರಿಂದ ಮನುಷ್ಯ-ಹಸುಗಳಿಗೇ "ಎತ್ತು" ಎನ್ನುವುದು ಸೂಕ್ತ ಎಂಬುದು ಅವರ ಅಭಿಪ್ರಾಯ.

ಆದರೂ ಸಹ, ಈ ವಿಷಯ ನಮ್ಮ ಪತ್ರಿಕೆ ವಿರೋಧಿಸುವ ವಿಶ್ವಾಸರ್ಹತೆ ಎಂಬ ಗುಣಕ್ಕೆ ಸಂಬಧಿಸಿದ್ದರಿಂದ ನಿಮ್ಮ ಅನಿಸಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.

ಅಂದಹಾಗೆ, ನಿಮ್ಮ ಹೆಸರನ್ನು ಇತರರು ಉಪಯೋಗಿಸುತ್ತಿರುವಂತಿದೆ. ಎಚ್ಚರದಿಂದಿರಿ.

ವಂದನೆಗಳೊಂದಿಗೆ,

ಸಂಪಾದಕ

April 30, 2006 9:50 PM  
Blogger ವಿಶ್ವನಾಥ ಬಸವನಾಳಮಠ said...

ಮಾನ್ಯ ಸಂಪಾದಕರೇ,
ನಮ್ಮಂಥ ಬಾಲ"ಕರು"ಗಳನ್ನು ಗಮನದಲ್ಲಿಟ್ಟುಕೊಂಡು "ಬಾಲಗ್ರಹ" ಅಂಕಣ ಆರಂಭಿಸಿರುವ ನಿಮಗೆ ಧನ್ಯವಾದ. ಆದರೆ ಸಿನೆಮಜಾವಾಣಿ ಪ್ರಕಟವಾಗದೇ ನನ್ನಂಥ ಅನೇಕ ಸಿನಿ(ಕ)ರಿಗೆ ನಿರಾಸೆಯಾಗಿದೆ. ದಯವಿಟ್ಟು ತಪ್ಪದೇ ಪ್ರಕಟಿಸಿ. ಹಾಗೆಯೇ ಅತ್ಯುತ್ತಮ ಪ್ರಬಂಧ ಮಂಡಿಸಿದ ಹಸುವಿನ ವಂಶಸ್ಥರೇ ಆದ ಗೋ-ಪಾಲ ಕೃಷ್ಣ ಅವರ ಪಾಂಡಿತ್ಯಕ್ಕೆ ಹ್ಯಾಟ್ಸಾಫ್! ಇನ್ನೂ ಇಂಥ ಸ್ಪರ್ಧಾತ್ಮಕ ಪ್ರಬಂಧಗಳನ್ನು ಪ್ರಕಟಿಸುತ್ತಿರಿ, ಇದರಿಂದ ನಮ್ಮ ಜ್ಞಾನವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.

ವಂದನೆಗಳೊಡನೆ,
ವಿಶ್ವನಾಥ

May 02, 2006 7:57 AM  
Blogger P Kalyan said...

ಬೆಳೆಯುವ ಪೈರು ಮೊಳಕೆಯಲ್ಲಿಯೆ ಎಂಬಂತೆ ಗೋಪಾಲಕೃಷ್ಣನ ಭಾಷೆ, ವ್ಯಾಕರಣ ಮತ್ತು ಶಬ್ದವ್ಯುತ್ಪತ್ತಿಯ ಜ್ಞಾನವನ್ನು ನೋಡಿದರೆ ಮುಂದೆ ಒಳ್ಳೆಯ ಬರಹಗಾರನಾಗುತ್ತಾನೆಂಬುದರ ಸುಳಿವು ನಮಗೆ (ದೂರದಿಂದಲೇ) ಸಿಗುತ್ತದೆ. ಇಂತಹ ಬಾಲ(ಕ)ನಿಗೆ ಬಹುಮಾನ ಕೊಟ್ಟು ಪ್ರೋತ್ಸಾಹಿಸಿ, ಆತನ ಲೇಖನವನ್ನು ಎತ್ತಿ ಹಿಡಿದಿರುವ ನಿಮ್ಮ ಕಾರ್ಯ ಶ್ಲಾಘನೀಯ.
ಎಮ್ಮೆಯ ಪತ್ರಿಕೆಯಲ್ಲಿ ಲೇಖನಗಳನ್ನು ಎತ್ತುವ ವಿಚಾರ, ಎತ್ತಿನ ವಿಚಾರಗಳನ್ನು ಎತ್ತಿ, ಅನಾನಸ್ ತಿನ್ನಿಸಿ ಹೊಟ್ಟೆ ಹುಣ್ಣಾಗಿಸಿದ್ದೀರಾ....

May 02, 2006 1:34 PM  
Blogger V.V. said...

ಬಸವನಾಳಮಠರವರೇ, ಪಿ.ಕಲ್ಯಾಣ್‍ರವರೇ,

'ಬಾಲ' ಪ್ರತಿಭೆ ಗೋಪಾಲ ಕೃಷ್ಣನ ಪ್ರೌಢ ಪ್ರಬಂಧ ನಿಮಗೆ ಮೆಚ್ಚಿಗೆಯಾಗಿರುವುದು ಸಂತೋಷದ ವಿಷಯ. ಗೋಪಾಲ ಕೃಷ್ಣನಂತಹ ಬೆಳೆಯುವ ಪೈರಿನ ಮೇಲೆ ಗೊಬ್ಬರಹಾಕಿ ನೀರು ಸುರಿಯುವುದು ನಮ್ಮೆಲ್ಲರ ಇಂದಿನ ಆದ್ಯ ಕರ್ತವ್ಯ.

ಮಜಾವಾಣಿ ಮೆಗಾ ಪೋರ್ಟಲ್‌ನಲ್ಲಿ ನಮಗೆ ತಿಳಿಯದ ಅನಿವಾರ್ಯ ಕಾರಣಗಳಿಂದಾಗಿ ಇತ್ತೀಚೆಗೆ ಸಿನೆಮಜಾವಾಣಿ ನಿಮ್ಮ ಕಂಪ್ಯೂಟರ್ ತೆರೆಗೆ ಬಿಡುಗಡೆಯಾಗಿಲ್ಲ. ದಯವಿಟ್ಟು ಕ್ಷಮಿಸಿ.

ವಂದನೆಗಳೊಂದಿಗೆ,

ಸಂಪಾದಕ

May 03, 2006 10:45 AM  
Anonymous ಶ್ರೀವತ್ಸ ಜೋಶಿ said...

ಹೊಸಹೊಸ ಅಂಕಣಗಳನ್ನು ಆರಂಭಿಸುತ್ತಿರುವ ನಿಮ್ಮ ಪತ್ರಿಕೆಯಲ್ಲಿ 'ನೀವು ಕೇಳಿದಿರಿ?' ('ಸುಧಾ'ದಲ್ಲಿದ್ದಂತೆ) ಅಥವಾ 'ಹೇಳಿಕೇಳಿ' ('ಪ್ರಜಾಮತ'ದಲ್ಲಿದ್ದಂತೆ) ರೂಪದ ಅಂಕಣವನ್ನೂ ಆರಂಭಿಸಬಹುದಲ್ಲ? ನಿಮ್ಮ ನಾಲ್ಕು ಮೈನಸ್ ಒಂದು ಓದುಗರ ಪ್ರಶ್ನೆಗಳಿಗೆ ಮಜಾ ಉತ್ತರಗಳು ಸಿಗುವಾಂತಾಗಲಿ!

May 03, 2006 3:06 PM  
Blogger V.V. said...

ಜೋಷಿಯವರೇ,

ಮಜಾವಾಣಿ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಜ ಹೇಳ ಬೇಕೆಂದರೆ (ಸತ್ಯದ ಮೇಲೆ ಸಮರ ಸಾರಿರುವ ನಮಗೆ 'ನಿಜ' ಹೇಳುವುದು ಕಷ್ಟ, ಆದರೂ...), ಬಹಳಷ್ಟು ಬಾರಿ , ನಮ್ಮ ಪತ್ರಿಕೆಯ ಲೇಖನಗಳಿಗಿಂತ ನಮ್ಮ ವಾಚಕರ ಉವಾಚಗಳೇ ಉತ್ತಮವಾಗಿರುವುದರಿಂದ, ಮಜಾವಾಣಿಯಲ್ಲಿ "ನೀವು ಕೇಳಿದಿರಿ?"ಗಿಂತ, "ನೀವು ಹೇಳಿದಿರಿ!" ಅಂಕಣವೇ ಸೂಕ್ತವೆನಿಸುತ್ತದೆ.

ವಂದನೆಗಳೊಂದಿಗೆ,

"ವಿ.ವಿ."

May 03, 2006 3:37 PM  

Post a Comment

Links to this post:

Create a Link

<< Home