ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, April 20, 2006

ಸಿನೆಮಜಾವಾಣಿ

ಸಲ್ಮಾನ್ ಖಾನ್ ಅಮೆರಿಕಕ್ಕೆ?!

ಮುಂಬೈ, ಏಪ್ರಿಲ್ ೨೧, ೨೦೦೬: ಕೃಷ್ಣ ಮೃಗವೊಂದನ್ನು ಕೊಂದ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿ ಜಾಮೀನು ಪಡೆದು ಹೊರ ಬಂದಿರುವ ನಟ ಸಲ್ಮಾನ್ ಖಾನ್ ಅಮೆರಿಕ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದಾರೆಂಬ ಸುದ್ದಿ ಹೊರ ಬಂದಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಅವರು ದೇಶದಿಂದ ಹೊರ ಹೋಗುವುದು ನಿಷಿದ್ದವಾದರೂ, ಸಲ್ಮಾನ್ ಖಾನ್ ವಿಚಾರದಲ್ಲಿ ಅಮೆರಿಕದ ಅತೀವ ಒತ್ತಡದಿಂದ ಕೇಂದ್ರ ಸರ್ಕಾರ ಉದಾರ ನೀತಿ ತೋರಲಿದೆಯೆಂದು ನಂಬಲರ್ಹ ಮೂಲಗಳು ತಿಳಿಸಿವೆ.

ಅಮೆರಿಕದ ಉಪಾಧ್ಯಕ್ಷ ಡಿಕ್ ಚೇನಿಯವರೊಂದಿಗೆ ಬೇಟೆಗೆ ಹೋಗಲು, ಅಮೆರಿಕದ ಒಬ್ಬ ವ್ಯಕ್ತಿಯೂ ಸಿದ್ಧನಿಲ್ಲದಿರುವುದರಿಂದ, ವ್ಯಕ್ತಿತ್ವದ ಕೊರತೆ ಇಲ್ಲದ ಭಾರತದಿಂದ ವ್ಯಕ್ತಿಗಳನ್ನು ಸರಬರಾಜು ಮಾಡುವಂತೆ ಅಮೆರಿಕದ ಅಧ್ಯಕ್ಷ ಬುಶ್, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಒಂದಿಗೆ ಮ್ಯಾನ್ ಪವರ್ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ನೆನೆಯ ಬಹುದು. ಸಲ್ಮಾನ್ ಖಾನ್ ರಫ್ತು ಯಶಸ್ವಿಯಾದಲ್ಲಿ, ಪಟೌಡಿಯವರನ್ನೂ ಡಿಕ್ ಚೇನಿಯ ಬೇಟೆ-ಸಂಗಡಿನಾಗಿ ಕಳುಹಿಸುವ ಯೋಚನೆ ಸರ್ಕಾರಕ್ಕಿದೆ ಎಂದು ತಿಳಿದು ಬಂದಿದೆ.

ಸಲ್ಮಾನ್ ಸಂತಸ: "ಅಮೆರಿಕಾ ಬೆಸ್ಟು." ಎಂದಿರುವ ಸಲ್ಮಾನ್ ಖಾನ್ "ಅಲ್ಲಿಗೆ ಹೋಗಲು ನಾನು ಸದಾ ಸಿದ್ಧ" ಎಂದಿದ್ದಾರೆ. ಮಜಾವಾಣಿ ಸಿನೆಮಾ ವರದಿಗಾರ್ತಿಯೊಂದಿಗೆ ಮಾತನಾಡಿದ ಖಾನ್, "ಅಮೆರಿಕದಲ್ಲಿ, ಡಿಕ್ ಚೇನಿಯಿಂದ ಗುಂಡೇಟು ತಿಂದ ವ್ಯಕ್ತಿ ತಾನೇ ಕ್ಷಮಾಪಣೆ ಕೇಳಿದರೆ, ಇಲ್ಲಿ ಆ ಕಪ್ಪು ಜಿಂಕೆಯನ್ನು ಕ್ಷಮಿಸುವುದು ಬಿಟ್ಟು ನನ್ನನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ನೀವೇ ಹೇಳಿ ಯಾವುದು ಉತ್ತಮ?" ಎಂದು ಕೇಳಿದರು.

ಕೃಷ್ಣ ಮೃಗ ಕೊಲೆ ವಿಚಾರದಲ್ಲಿ ತಮ್ಮ ಯಾವುದೇ ತಪ್ಪಿಲ್ಲವೆಂದು ಪರಿ ಪರಿ ವಿಧದಲ್ಲಿ ಬೇಡಿಕೊಂಡರೂ, ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ವಿರುದ್ಧ ಕೆಂಡ ಕಾರಿದ ಅವರು, "ತಿಮಿಂಗಿಲ, ಡಾಲ್ಫಿನ್‌ಗಳೂ ಸೇರಿದಂತೆ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ವೈಜ್ಞಾನಿಕ ಸತ್ಯ. ಈ ಕುರಿತು ಡಿಸ್ಕವರಿ ಚಾನಲ್ಲಿನ ಟಿ.ವಿ. ಕಾರ್ಯಕ್ರಮ ನೋಡಲು ಒಪ್ಪದ ನ್ಯಾಯಾಧೀಶರು ನನ್ನ ಪರವಿರುವ ಸಾಕ್ಷ್ಯಾಧಾರಗಳೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ" ಎಂದರು.

ಕೃಷ್ಣ ಮೃಗವನ್ನು "Endangered Species" ಪಟ್ಟಿಯಲ್ಲಿ ಸೇರಿಸಿರುವುದನ್ನು ನೆನಪಿಸಿದಾಗ, "ಅದು ನನಗೆ ತಿಳಿದಿರಲಿಲ್ಲ" ಎಂದ ಖಾನ್, "ಆದರೆ, ನೋಡಲು ಅಂತಹ ಡೇಂಜರಸ್ಸಾಗಿ ಕಾಣಲಿಲ್ಲ" ಎಂದರು.

1 Comments:

Anonymous Anonymous said...

Good Humor. Keep writing..

Ken.

September 27, 2006 8:47 AM  

Post a Comment

Links to this post:

Create a Link

<< Home