ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, April 12, 2006

ಆರೋಗ್ಯ ಭಾಗ್ಯ

ಪ್ರಾಣಿಕ್ ಸ್ಟೀಲಿಂಗ್

ಪ್ರಾಣಿಕ್ ಸ್ಟೀಲಿಂಗ್. ಬಹಳಷ್ಟು ಜನ ಈ ಚಿಕಿತ್ಸೆಯ ಹೆಸರು ಕೇಳಿರಲಿಕ್ಕಿಲ್ಲ. ಹಾಗಿದ್ದರೆ ಇದೆಂಥ ಚಿಕಿತ್ಸೆ ಎಂದು ಕುತೂಹಲ ಮೂಡುವುದು ಸಹಜ. ಮನುಷ್ಯ ಕೇವಲ ಮೂಳೆ, ಮಾಂಸ ಮಾಡಲ್ಪಟ್ಟ ಭೌತಿಕ ಶರೀರವಲ್ಲ. ಆತನ ಒಳಗೆ ಮತ್ತು ದೇಹದ ಸುತ್ತ ವ್ಯಾಪಿಸಿರುವ ಪ್ರಾಣ ತುಂಬಿದ ಸೂಕ್ಷ್ಮ ಶರೀರವೊಂದಿದೆ. ಈ ಶರೀರವೇ ಪ್ರಾಣಮಯ ಶರೀರ.

"ನಾನು ಹತಾಶ", "ನಾನು ಮುಗ್ಧ" ಅಥವಾ "ನಾನು ಪೆದ್ದ" ಎಂದು ಸಾರಿ-ಸಾರಿ ಹೇಳುವ ಈ ಪ್ರಾಣ ಶಕ್ತಿಯನ್ನು ಗುರುತಿಸಿ ಚೌರ್ಯ ಮಾಡುವ ವಿಧಾನವೇ "ಪ್ರಾಣಿಕ್ ಸ್ಟೀಲಿಂಗ್". ೪೦ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ಪದ್ಧತಿಯನ್ನು ಕಂಡು ಹಿಡಿದವನು ಫಿಲಿಪ್ಪೀನ್ಸ್‌ನ ಚೋಅ(ರ) ಕ್ರೂಕ್ ಸೂಯಿ.

ಪ್ರಾಣಿಕ್ ಸ್ಟೀಲಿಂಗ್ ಹೇಗೆ ಸಾಧ್ಯ?

ಮಿದುಳು ದೇಹದಲ್ಲಿದ್ದರೂ ಮಾನವನಿಗೆ ಅದನ್ನು ಸರಿಯಾಗಿ ಉಪಯೋಗಿಸುವುದು ತಿಳಿದಿಲ್ಲ. ದಿನ ನಿತ್ಯದ ಏರುಪೇರುಗಳು, ಮಾನಸಿಕ ಅಥವಾ ಭಾವನಾತ್ಮಕ ಒತ್ತಡಗಳು, ಕ್ರಿಮಿ ಕೀಟಗಳು, ಮೂರ್ಖತನ, ಪರಿಸರ ಮಾಲಿನ್ಯದಿಂದ ಮಿದುಳಿನ ಬಳಕೆ ಕುಂದುತ್ತದೆ. ಅಂತಹ ಸಂದರ್ಭದಲ್ಲಿ ಪ್ರಾಣಿಕ್ ಸ್ಟೀಲಿಂಗಿಗೆ ಒಳಪಡಲು ಮನಸ್ಸು ತಹತಹಿಸುತ್ತದೆ. ವಿಶೇಷವೆಂದರೆ, ಇತರ ಕೆಲ ಚಿಕಿತ್ಸಾ ವಿಧಾನಗಳಂತೆ ಇಲ್ಲಿ ರೋಗಿಯ ಮೈಮುಟ್ಟಿ ಚಿಕಿತ್ಸೆ ಮಾಡಲಾಗುವುದಿಲ್ಲ; ರೋಗಿಯ ಕಿಸೆಗೆ ಮಾತ್ರ ಕೈ ಹಾಕಲಾಗುತ್ತದೆ.

ಎಂಥೆಂಥ ಸಮಸ್ಯೆಗಳಿಗೆ ಪ್ರಾಣ ಚಿಕಿತ್ಸೆ?


ತಲೆನೋವು, ಜ್ವರ, ನೆಗಡಿ, ಕೆಮ್ಮಿನಿಂದ ಹಿಡಿದು ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಬಳಲುತ್ತಿರುವವರೂ ಪ್ರಾಣಿಕ್ ಸ್ಟೀಲಿಂಗಿನ ಮೊರೆ ಹೋಗಿದ್ದಾರೆ. ಹತಾಶೆ ಹೆಚ್ಚಿದ್ದಷ್ಟೂ ಪ್ರಾಣಿಕ್ ಸ್ಟೀಲಿಂಗ್ ಕಾರ್ಯ ಸಿದ್ಧಿ ಹೆಚ್ಚು. ಆದರೆ ಒಂದು ಮಾತು, ಪ್ರಾಣಿಕ್ ಸ್ಟೀಲಿಂಗ್ ಯಾವುದೇ ಇತರೆ ಸ್ಟೀಲಿಂಗ್ ಪದ್ಧತಿಗಳಿಗೂ ಪರ್ಯಾಯ ವಿಧಾನವಲ್ಲ. ಹತಾಶರಾದವರು ನ್ಯೂಮರಾಲಜಿ, ಹೋಮ, ಹವನ, ಶಾಂತಿ, ಬಾಬಾ-ಸ್ವಾಮಿಗಳ ಕಾಲ್ಸೇವೆ ಇತ್ಯಾದಿ ಸ್ಟೀಲಿಂಗ್ ಪದ್ದತಿಗಳನ್ನು ಮುಂದುವರೆಸಬಹುದು.

ಉದಾಹರಣೆಗೆ ಬೆನ್ನು ನೋವಿನಿಂದ ಬಳಲುತ್ತಿರುವ ವ್ಯಕ್ತಿ ಪ್ರಾಣಿಕ್ ಸ್ಟೀಲಿಂಗ್ ಮೊರೆ ಹೊಕ್ಕರೆ ಆತನ ಕಿಸೆಯ ಭಾರ ಕಡಿಮೆಯಾಗಿ, ಆತ ಯಾವುದಾದರೂ ಔಷಧ ತೆಗೆದುಕೊಳ್ಳುತ್ತಿದ್ದರೆ ಅದರ ಸೇವನೆಯ ಪ್ರಮಾಣ ದಿನದಿಂದ ದಿನಕ್ಕೆ ತಗ್ಗಿಸ ಬೇಕಾಗುತ್ತದೆ. ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ರೋಗಿಯ ಕಿಸೆ ಪೂರ್ತಿ ಖಾಲಿಯದರಂತೂ, ಔಷಧ ತೆಗೆದುಕೊಳ್ಳ್ಳುವುದೇ ಬೇಡವೆನ್ನಿಸಬಹುದು. ಏಕೆಂದರೆ, ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ರೋಗಿಯ ರೋಗ ಸಹಿಷ್ಣು ಸಾಮರ್ಥ್ಯ ಹೆಚ್ಚುತ್ತದೆ.

ಪ್ರಾಣಿಕ್ ಸ್ಟೀಲಿಂಗ್ ಉಪಯೋಗವೇನು?


"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ವಿವಿಧ ಉಪಯೋಗವಾಗುತ್ತದೆ. ಹತಾಶರಿಗೆ ಪೊಳ್ಳು ಭರವಸೆ ನೀಡುವುದರಿಂದ ಕೆಲವೊಮ್ಮೆ ಉಂಟಾಗುವ ಅಂತಃಸ್ಸಾಕ್ಷಿಯ ಅಳುಕನ್ನು ಬಿಟ್ಟರೆ, ಇತರೆ ಸ್ಟೀಲಿಂಗ್ ಪದ್ಧತಿಗಳಂತೆ ಪೋಲಿಸ್, ಕೋರ್ಟ್, ಸೆರೆಮನೆ ಇತ್ಯಾದಿ ಯಾವ ಅಡ್ಡ ಪರಿಣಾಮವನ್ನೂ ಚಿಕಿತ್ಸಕರು ಅನುಭವಿಸಬೇಕಿಲ್ಲ. ಚಿಕಿತ್ಸಕರ ಆರ್ಥಿಕ ಆರೋಗ್ಯದಲ್ಲಿ ಸುಧಾರಣೆಯಾಗುವುದು ನಿಶ್ಚಿತ." ಎನ್ನುತ್ತಾರೆ ಕರ್ನಾಟಕ ಭೋಗವಿದ್ಯಾ ಪ್ರಾಣಿಕ್ ಸ್ಟೀಲಿಂಗ್ ಫೌಂಡೇಷನ್‍ನ ಟ್ರಸ್ಟಿ ಜೈಲ್‍ಲಕ್ಷ್ಮಿ ಮತ್ತು ಮುಖ್ಯ ಟ್ರೇನರ್ ಸರ್ವಸ್ವ ದೋಚತಿ. ಪ್ರಾಣಿಕ್ ಸ್ಟೀಲಿಂಗಿನಿಂದ ಹಣದ ಭಾರ ಕಡಿಮೆಯಾಗುವುದರಿಂದ ಈ ಚಿಕಿತ್ಸೆ ಅಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗುತ್ತದೆ.

"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸಾ ವಿಧಾನ", "ಗ್ರಾಮ್ಯ ಪ್ರದೇಶಗಳಲ್ಲಿ ಅದರ ಉಪಲಬ್ಧತೆ " ಮತ್ತು "ಬಡವರಿಗೆ/ವಿದ್ಯಾರ್ಥಿಗಳಿಗೆ ರಿಯಾಯ್ತಿ ಪ್ಯಾಕೇಜ್" ವಿಷಯಗಳಿಗೆ ಆಸಕ್ತಿ ಉಳ್ಳವರು ಕನ್ನಡ ಪ್ರಭದ ಈ ಲೇಖನವನ್ನು ಓದಬಹುದು.

ಇತ್ತೀಚಿನ ಅಪ್‍ಡೇಟ್: "ಪ್ರಾಣಿಕ್ ಸ್ಟೀಲಿಂಗ್" ಓದಿದ ಬೇಸರದಿಂದ ತೃಪ್ತರಾಗದವರು ಇನ್ನೂ ಹೆಚ್ಚಿನ ಬೇಸರಕ್ಕಾಗಿ "ನೂರೆಂಟು ಸುಳ್ಳು" ಬ್ಲಾಗಿನ ಈ ಲೇಖನ ಓದಬಹುದು.

4 Comments:

Blogger ವಿಶ್ವನಾಥ ಬಸವನಾಳಮಠ said...

ನಿಮ್ಮ ನೂತನ ಸಂಶೋಧನೆ ಪ್ರಾಣಿಕ್ ಸ್ಟೀಲಿಂಗ್ ಸೂಪರ್ಬ್! ಬೇರೆ ಯಾರಾದರೂ ಪೇಟೆಂಟ್ ಪಡೆಯುವ ಮೊದಲೇ ನೀವು ಪಡೆಯುವುದು ಒಳ್ಳೆಯದು. ಗುಡ್ ಲಕ್!

April 18, 2006 9:44 AM  
Blogger V.V. said...

ಬಸವನಾಳಮಠರವರೇ,
ಮಜಾವಾಣಿಯನ್ನು ಓದಿದ್ದಕ್ಕೆ ಧನ್ಯವಾದಗಳು. "ಪ್ರಾಣಿಕ್ ಸ್ಟೀಲಿಂಗ್" ನಮ್ಮ ಸಂಶೋಧನೆಯಲ್ಲ. ವರದಿ ಮಾತ್ರ ನಮ್ಮದು. ಆದರೂ, ಅಮೆರಿಕದ ಕಂಪೆನಿಯೊಂದು ಬಾಸ್‍ಮತಿ ಪೇಟೆಂಟ್ ಪಡೆದಂತೆ (?), ನಾವೂ ಸಹ ಪೇಟೆಂಟ್ ಸ್ಟೀಲಿಂಗ್ ಮಾಡಲು ಸಿದ್ಧರಿದ್ದೇವೆ.

ವಂದನೆಗಳೊಂದಿಗೆ,

ವಿ.ವಿ.

April 20, 2006 11:46 AM  
Blogger ಅಸತ್ಯ ಅನ್ವೇಷಿ said...

V V ಅವರೆ,
ಸ್ಟೀಲಿಂಗ್ ಪೇಟೆಂಟನ್ನೇ ಸ್ಟೀಲ್ ಮಾಡಿ ಈಗ ಅದು ಸ್ಟೋಲನ್ ಪೇಟೆಂಟ್ ಆಗಿಬಿಟ್ಟಿದೆ. ನಿಮ್ಮ ಒದರಿಗಾರರು ಇನ್ನಾದರೂ ಎಚ್ಚೆತ್ತುಕೊಳ್ಳುವುದೊಳಿತು.
ಹ್ಯಾಟ್ಸ್ ಆಫ್ ಲಕ್ ಮತ್ತು ಬೆಸ್ಟ್ ಆಫ್ !

April 21, 2006 4:03 AM  
Blogger V.V. said...

ಅಸತ್ಯಾನ್ವೇಷಿಗಳೇ,

ನೀವೊಬ್ಬ ವ್ಯಾನ್ ಆಫ್ ಮಿಟ್ ಎಂದು ತಿಳಿದಿದ್ದರೂ "ಚಮಚಾಗಿರಿ" ಪ್ರದರ್ಶಿಸುತ್ತೀರೆಂದು ತಿಳಿದಿರಲಿಲ್ಲ!

ವಂದನೆಗಳೊಂದಿಗೆ,

"ವಿ.ವಿ."

April 21, 2006 2:17 PM  

Post a Comment

Links to this post:

Create a Link

<< Home