ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, April 11, 2006

ಸಿನೆಮಜಾವಾಣಿ

ವಿವಾದಕ್ಕೆ ತೆರೆ; ಮಾಸ್ಟರ್ ಲಂಕೇಶ್ ವಿ.ಆರ್ ಎಸ್.ಗೆ ನಿವೃತ್ತಿ!

"ಮೊನಾಲಿಸಾ ಒಂದು ರೀ-ಮೇಕ್ ಚಿತ್ರ, ಅದಕ್ಕೆ ಕರ್ನಾಟಕ ಸರ್ಕಾರದ ಪ್ರಶಸ್ತಿ ನೀಡುವುದು ತಪ್ಪು" ಎಂದು ಗಿರೀಶ್ ಕಾಸರವಳ್ಳಿಯವರು ನೀಡಿರುವ ಹೇಳಿಕೆಯಿಂದ ಮನ ನೊಂದ ಮಾಸ್ಟರ್ ಲಂಕೇಶ್ ಚಿತ್ರರಂಗದಿಂದ ವಿ.ಆರ್.ಎಸ್. ಪಡೆಯುವ ಆಲೋಚನೆ ಮಾಡುತ್ತಿರುವ ವಿಚಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇತ್ತೀಚೆಗೆ ವರದಿಯಾಗಿತ್ತು.

ಮಕ್ಕಳ ದಿನಾಚರಣೆಗೆ ಕೇವಲ ಕೆಲವೇ ತಿಂಗಳುಗಳಿರುವಾಗ ಹಾಲು ಗಲ್ಲದ ಹಸುಳೆ ಮಾಸ್ಟರ್ ಲಂಕೇಶ್ ಒಂದು ವಾರ ಕಾಲ ನಿದ್ದೆ ಗೆಡುವುದೂ, ನೋವಿನ ಇಂಚಿಂಚನ್ನೂ ಹೊಗೆಯಾಡಿಸುವುದೂ ನಮಗೆ ಇಷ್ಟವಾಗಲಿಲ್ಲ. ನಮ್ಮ ಪತ್ರಿಕೆಯ ವಿಶೇಷ ಸಿನೆಮಾ-ವಿವಾದ-ವಿಚಾರಕ ಪಿ.ಕಲ್ಯಾಣ್ ರವರು ಈ ಕುರಿತು ಸುಳಿವು ನೀಡಿದ ಕೂಡಲೇ, ಬಾಲ ನಿರ್ದೇಶಕ ಲಂಕೇಶ್‍ರವರನ್ನು ಸಂದರ್ಶಿಸಿ, ಸಂತೈಸಲು ನಮ್ಮ ಪತ್ರಿಕೆಯ ಸಿನೆಮಾ ವರದಿಗಾರರನ್ನು ಕಳುಹಿಸಿದಾಗ ಕಂಡಿದ್ದೇನು?! ಮಾಸ್ಟರ್ ಲಂಕೇಶ್ ಮತ್ತು ಮಿಸ್ಟರ್ ವೈಶಾಲಿ ಇಬ್ಬರೂ ಕೈ-ಕೈ ಹಿಡಿದುಕೊಂಡು "ನಾನೂ.. ನೀನೂ.. ಒಂದಾದ ಮೇಲೆ" ಎಂದು ಹಾಡುತ್ತಿದ್ದಾರೆ!!
ಕನ್ನಡ ಚಿತ್ರರಂಗದ ದಿಗ್ಗಜ ಮತ್ತು ಮೃದುಗಜಗಳು ಕೈ-ಕೈ ಮಿಲಾಯಿಸುವ ಬದಲು ಹೀಗೆ ಕೈ-ಕೈ ಹಿಡಿದಿರುವುದನ್ನು ನೋಡಿ ಕಂಗೆಟ್ಟ ನಮ್ಮ ವರದಿಗಾರ ಮತ್ತಷ್ಟು ವಿಚಾರಿಸಿದಾಗ ತಿಳಿದು ಬಂದ ವಿಷಯ ಇದು: ಮಾಸ್ಟರ್ ಲಂಕೇಶ್ ಇನ್ನು ಮುಂದೆ ರೀ-ಮೇಕ್ ಚಿತ್ರಗಳನ್ನು ನಿರ್ಮಿಸುವುದಿಲ್ಲ; ಬದಲಾಗಿ, ರೀ-ಮಿಕ್ಸ್ ಚಿತ್ರಗಳನ್ನು ಮಾತ್ರ ತಯಾರಿಸಲಿದ್ದಾರೆ.

ಅವರ ಪ್ರಥಮ ರೀ-ಮಿಕ್ಸ್ ಚಿತ್ರ: "ಹಸೀನ್ ಮೊನಾಲಿಸಾ". ಇದು ಕಾಸರವಳ್ಳಿಯವರ ರಾಷ್ಟ್ರ ಪ್ರಶಸ್ತಿ ವಿಜೇತ "ಹಸೀನಾ" ದ ರೀ-ಮಿಕ್ಸ್ ಆಗಿದ್ದು, ಆ ಚಿತ್ರಕ್ಕೆ ಮೊನಾಲಿಸಾ ಚಿತ್ರದ ಐಟಂ ಸಾಂಗ್ಸ್‌ಗಳನ್ನು ಡ್ರೀಮ್ ಸೀಕ್ವೆನ್ಸ್ ರೂಪದಲ್ಲಿ ಸೇರಿಸಿ ತಯಾರಿಸುವ ಅಪರೂಪದ ಮತ್ತು ಮಹತ್ವದ ಪ್ರಯೋಗವಾಗಿದೆ. ಈ ಚಿತ್ರ ಯಶಸ್ವಿಯಾದಲ್ಲಿ, ಕಾಸರವಳ್ಳಿಯವರ ಚಿತ್ರಗಳ ಒಂದು ರೀ-ಮಿಕ್ಸ್ ಮೆಡ್ಲಿಯನ್ನು ತೆರೆಗೆ ತರುವ ಯೋಜನೆ ಇದ್ದು, ಆ ಚಿತ್ರಕ್ಕೆ ಈಗಾಗಲೇ "ತಬರನ ದ್ವೀಪದಲ್ಲಿ ತಾಯಿ ಸಾಹೇಬರ ತುಂಟಾಟ" ಎಂದು ನಾಮಕರಣ ಮಾಡಲಾಗಿದೆ.


ಬುಶ್ ಸಂತಸ
ವಾಷಿಂಗ್ಟನ್ ಡಿ.ಸಿ., ಏಪ್ರಿಲ್ ೧೦, ೨೦೦೬: ಮಾಸ್ಟರ್ ಲಂಕೇಶ್ ತಮ್ಮ ನಿವೃತ್ತಿಗೆ ನಿವೃತ್ತಿಯನ್ನು ಘೋಷಿಸಿರುವುದು ತಮಗೆ ಅತೀವ ಸಂತಸ ತಂದಿದೆಯೆಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಶ್ ಹೇಳಿಕೆ ಇತ್ತಿದ್ದಾರೆ. ಲಂಕೇಶ್‍ರವರ ಸ್ವಯಂ ನಿವೃತ್ತಿಯ ಬಗೆಗೆ ಅಮೆರಿಕದ ರಕ್ಷಣಾ ವಲಯಗಳು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು.

6 Comments:

Anonymous Anonymous said...

cool one, tumbaa creative aagide

April 11, 2006 8:54 PM  
Blogger ಅಸತ್ಯ ಅನ್ವೇಷಿ said...

ರೀ ವಾರ್ತಾ ವಿದೂಷಕರೆ, ನಿಮ್ಮ ವಿವಿಯಲ್ಲಿ ಟೈಟಲ್ ಸಾಂಗ್ ಬದಲಿಸಿದ್ದಕ್ಕೆ ಯಾವುದೇ ಸಕಾರಣ ನೀಡದೆಯೇ ಮಾಸ್ಟ್ ಹೆಡ್ ಬದಲಾಯಿಸಿದ್ದು, ಭಾರತೀಯ ದಂಡ ಸಂಹಿತೆಯ ಓದುಗರ ಹಕ್ಕು ಕಲಂನ 420ನೇ ಪರಿಚ್ಛೇದದ ಸ್ಪಷ್ಟ ಉಲ್ಲಂಘನೆಯಾಗಿದೆ. ತಿರುಗಿದ ನಂದಿಯನ್ನು ಕೂರಿಸಿ ನೀವು ನಮ್ಮನ್ನು ಮರುಳು ಮಾಡಿ, ಕೊನೆಗೆ, ವಧು ಪರೀಕ್ಷೆ ವೇಳೆ ಒಬ್ಬಳನ್ನು, ಮದುವೆ ದಿನ ಬೇರೆಯೇ ಒಬ್ಬಳನ್ನು ತೋರಿಸಿದಂತೆ ದ್ರೋಹ ಮಾಡಿದ್ದೀರಿ. ಇದು ಅಕ್ಷಮ್ಯ ಅಪರಾಧ. ಈ ಕಾರಣಕ್ಕೆ ನಿಮ್ಮ ವಿಶ್ವಾದ್ಯಂತ ಇರುವ ಬಿಡಿ-ಓದುಗರ ಸದಸ್ಯತ್ವಕ್ಕೆ ನಾನು ರಾಜಾರೋಷವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನೀವು ರಾಜೀನಾಮೆ ಸ್ವೀಕರಿಸಿದರೂ ಮಜಾವಾಣಿಯನ್ನು ಬಾಗಿಲ ಹಿಂದಿನಿಂದ ವೀಕ್ಷಿಸುವುದನ್ನು ಮುಂದುವರಿಸುತ್ತೇನೆ....!

April 12, 2006 1:45 AM  
Blogger Sarathy said...

ಪ್ರಸ್ತುತ ಕನ್ನಡ ಚಿತ್ರಗಳನ್ನು ಎರಡು ಭಾಗಗಳಾಗಿ ವರ್ಗೀಕರಿಸಬಹುದು. ರೀಮೇಕ್ ಚಿತ್ರಗಳು ಮತ್ತು ರೀಮಿಕ್ಸ್ ಚಿತ್ರಗಳು. ರೀಮೇಕ್ ಚಿತ್ರವೊಂದು ಅದರ ಮೂಲ ಕತೆಯುಳ್ಳ ಚಿತ್ರದಲ್ಲಿನ ಹೂರಣವಷ್ಟನ್ನೇ ನಮಗೆ ತುರುಕುತ್ತದೆ. ಆದರೆ ರೀಮೇಕ್ ಅಲ್ಲದ ಚಿತ್ರಗಳು ಎಲ್ಲಾ ಭಾಷೆಗಳ ಚಿತ್ರಗಳಿಂದ ಆಯ್ದ ಹಳಸಿದ ನವನವೀನ ಹೂರಣಗಳನ್ನು ನಮಗೆ ತುರುಕುತ್ತವೆ.

April 12, 2006 6:48 AM  
Blogger V.V. said...

ಅಸತ್ಯಾನ್ವೇಷಿಗಳೇ,

೪೨೦ ಕೆಲಸ ಮಾಡಿದ್ದಕ್ಕೆ ಕ್ಷಮೆ ಇರಲಿ. ಏನು ಮಾಡುವುದು ಅಭ್ಯಾಸ ಬಲ. ಮಜಾವಾಣಿ ಬಿಡಿ-ಓದುಗರ ಸದಸ್ಯತ್ವಕ್ಕೆ ನೀವು ನೀಡಿರುವ ರಾಜೀನಾಮೆಯನ್ನು ದಯವಿಟ್ಟು ಹಿಂತೆಗೆದುಕೊಳ್ಳಬೇಕು.(ತಾವು ಸೋನಿಯಾ ಗಾಂಧಿ ಅಲ್ಲ ತಾನೇ?! ನೆನಪಿಡಿ, ಮಜವಾಣಿ ಓದುವುದರಿಂದ ಯಾವುದೇ ಲಾಭ ಇಲ್ಲ. ಎಂ.ಎಲ್.ಎ., ಎಂ.ಪಿ.ಗಳಿಂದ ಹಿಡಿದು ಪ್ರಧಾನ ಮಂತ್ರಿಗಳವರೆಗೆ ನಿರ್ಯೋಚನೆಯಿಂದ ನಮ್ಮ ಪತ್ರಿಕೆಯ ಬಿಡಿ-ಓದುಗರ ಸದಸ್ಯರಾಗಬಹುದು)

Breaking Newsಗೆ ನಮ್ಮ ಪತ್ರಿಕೆ (ನಮ್ಮ ಮನದಲ್ಲಿ) ಪ್ರಸಿದ್ಧವಾಗಿರುವುದರಿಂದ, Bray-king ಆದ ಗಾರ್ದಭರಾಯನ ಚಿತ್ರವನ್ನು ನಮ್ಮ ಮಾಸ್ಟ್-ಹೆಡ್‍ಗೆ ಬಳಸುವುದು ಉಚಿತ ಎನ್ನಿಸಿತು. ಇಂಟರ್ನೆಟ್‌ನಿಂದ ಕದ್ದದ್ದಾದ್ದರಿಂದ ಚಿತ್ರವೂ ಉಚಿತವೇ!

ಅಪರಾಂಧಗಳ ಮನ್ನಿಸಿರಿ.

ಸಾರಥಿಯವರೇ,

ಕನ್ನಡ ಚಿತ್ರಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಒಂದೇ ಪದದಲ್ಲಿ ಹೇಳ ಬೇಕೆಂದರೆ: "ಒಬ್ಬಟ್ಟುಗಳು".
ಸರಿಯೇ?

ವಂದನೆಗಳೊಂದಿಗೆ,
ಸಂಪಾದಕ.

April 13, 2006 3:25 PM  
Anonymous sritri said...

ಸಿನಿಮಾ ಪ್ರಿಯರಿಗಾಗಿ ಸಿನಿಮಜಾವಾಣಿ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು.

April 26, 2006 10:54 AM  
Blogger V.V. said...

ಶ್ರೀತ್ರೀಯವರೇ,

ಧನ್ಯವಾದಗಳು. ಸತ್ಯದೊಡನೆ ಸೆಣಸಲು ನಾವು ನಿರ್ಧರಿಸಿರುವಾಗ ಚಿತ್ರರಂಗ ಸಹ ನಮಗೆ ರಣರಂಗವೇ.

ವಂದನೆಗಳೊಂದಿಗೆ,

ಸಂಪಾದಕ

April 28, 2006 4:09 PM  

Post a Comment

Links to this post:

Create a Link

<< Home