ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, April 07, 2006

ಮಜಾವಾಣಿ ಸಂಪಾದಕೀಯ

ಈ ದೇಹದಿಂದ ದೂರವಾದೆ ಏಕೆ ಅರಿವೆಯೇ...?
ಈ ಷೋ ನ್ಯಾಯವೇ..?


ವೆಲ್‍ಡನ್ ಮಹಾರಾಷ್ಟ್ರ ಶಾಸಕರೇ!!!

ನಮ್ಮ ಕರ್ನಾಟಕದ ಶಾಸಕರು ನಿಮಿಷಕ್ಕೆ ೩ ರೂ ಕೊಟ್ಟು ಮನೆಯ ಬಾಗಿಲಲ್ಲಿ ಕುಳಿತಿರುವ ಸ್ತ್ರೀಯರ ಚಿತ್ರ ನೋಡುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಆಲೋಚನೆಯಲ್ಲಿದ್ದರೆ, ನಮ್ಮ ಪಕ್ಕದ ಮಹಾರಾಷ್ಟ್ರ ರಾಜ್ಯದ ಶಾಸಕರು ಆಕಸ್ಮಿಕ ವಸ್ತ್ರ-ವಿಸರ್ಜನೆಯಂತಹ ಮಹಾನ್ ಅನಾಹುತದ ಕಡೆಗೆ ಅತೀವ ಗಮನಹರಿಸಿರುವುದು ಅತ್ಯಂತ ಶ್ಲಾಘನೀಯ.

ಮಹರಾಷ್ಟ್ರ ವಿಧಾನಸಭಾ ಸದಸ್ಯರೇ, ವೆಲ್‍ಡನ್.

ಗುರುತ್ವಾಕರ್ಷಣೆಯಂತಹ ಮಹಾನ್ ಶಕ್ತಿ ಪ್ರತಿಕ್ಷಣವೂ ಕೆಳಗೆಳೆಯುತ್ತಿದ್ದರೂ ಇಂದು ನಮ್ಮ ಪಂಚೆ, ಪ್ಯಾಂಟು, ಸೀರೆಗಳು ಕೆಳಗಿಳಿಯದೇ ಇದ್ದರೆ, ಅದಕ್ಕೆ ನಿಮ್ಮಂತಹ ಮಹಾನ್ ವ್ಯಕ್ತಿಗಳು ಈ ಜಗತ್ತಿನಲ್ಲಿ ಇನ್ನೂ ಇರುವುದೇ ಕಾರಣ. ಶ್ರೀಮಂತ ಮಾದರಿ-ಮಹಿಳೆಯರ ದೇಹಗಳು ಆಕಸ್ಮಿಕವಾಗಿ ಅನಾವರಣವಾಗುತ್ತಿರುವುದರ ಬಗ್ಗೆ ನೀವು ತೋರಿರುವ ಕಾಳಜಿ ಅನುಕರಣನೀಯ. ಅಲ್ಪಸಂಖ್ಯಾತರ ಉದ್ಧಾರದ ಬಗೆಗೆ ಇತರ ರಾಜಕಾರಣಿಗಳು ಉದ್ದುದ್ದ ಭಾಷಣ ಬಿಗಿಯುತ್ತಿರುವಾಗ, ಅತ್ಯಲ್ಪಸಂಖ್ಯಾತರಾದ ಮಾದರಿ-ಮಹಿಳೆಯರ ಉಡುಗೆ-ಉಡಿದಾರದ ವಿಷಯದಲ್ಲಿ ನಿಮ್ಮ ಆಸಕ್ತಿಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ.

ವಿಧಾನಸಭೆಯಲ್ಲಿ ಚರ್ಚಿಸಲು, ವಿಚಾರಣೆ ನಡೆಸಲು, ಮಹಾರಾಷ್ಟ್ರದಲ್ಲಿ ಸಮಸ್ಯೆಗಳಿಗೇನೂ ಕೊರತೆ ಇಲ್ಲ. ಶಿಕ್ಷಣ, ನ್ಯಾಯ ವ್ಯವಸ್ಥೆ, ಉದ್ಯೋಗ, ಹದಗೆಡುತ್ತಿರುವ ಪರಿಸರ, ಆರೋಗ್ಯ ಮುಂತಾದ ಎಷ್ಟೋ ಗಹನ ವಿಚಾರಗಳಿದ್ದರೂ ಭಾರತ ದೇಶದ ಜನರ ಒಳಿತಿಗಿಂತ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಮುಖ್ಯವೆಂದು ನೀವು ಪರಿಗಣಿಸಿರುವುದನ್ನು ನಮ್ಮ ಪತ್ರಿಕೆ ಯಾವುದೇ ಮುಚ್ಚು-ಮರೆ ಇಲ್ಲದೆ ಸ್ವಾಗತಿಸುತ್ತದೆ.

ಪೋಲಿಸರು ಈ ವಿಚಾರದಲ್ಲಿ ಈಗಾಗಲೇ ವಿಚಾರಣೆ ನಡೆಸಿ ಇದೊಂದು "ಆಕಸ್ಮಿಕ" ಎಂದು ವರದಿ ಇತ್ತಿದ್ದರೂ, ಈ ಆಕಸ್ಮಿಕ ಅನಾವರಣದ ವಿಡಿಯೋಗಳನ್ನು ಆಸಕ್ತಿಯಿಂದ ಹಲವು ಬಾರಿ ನೋಡಿ ಬೇಸರಪಡದೆ ಮತ್ತಷ್ಟು ವಿಚಾರಣೆ ನಡೆಸಬೇಕೆಂದಿರುವ ನಿಮ್ಮ ನಿಲುವು ನಮ್ಮ ಪತ್ರಿಕೆಗೆ ಬಹಳ ಮೆಚ್ಚಿಗೆಯಾಗಿದೆ.

ನಮ್ಮ ಆತ್ಮಕ್ಕೆ ನಮ್ಮ ದೇಹ ಬಟ್ಟೆಯಂತಿದ್ದರೆ, ನಮ್ಮ ಬಟ್ಟೆಗಳಿಗೆ ನಮ್ಮ ದೇಹ ಆತ್ಮಕ್ಕೆ ಸಮಾನ. ಹೀಗಿರುವಾಗ ಆತ್ಮದ ಆಕಸ್ಮಿಕ ಅನಾವರಣವನ್ನು ನಿರ್ಲಕ್ಷಿಸುವುದು ಸಲ್ಲ. ಈ "ಆಕಸ್ಮಿಕಗಳು" ಹೇಗೆ ಮತ್ತು ಏಕೆ ಆದವು ಎಂಬುದನ್ನು ತಿಳಿದು ಮುಂದೆಂದೂ ಹೀಗಾಗದಂತೆ ನೋಡಿಕೊಳ್ಳಲು ಸಂಪುಟ-ದರ್ಜೆಯ ಸಮಿತಿಯೊಂದನ್ನು ರಚಿಸುವಂತೆ ನಮ್ಮ ಪತ್ರಿಕೆ ಒತ್ತಾಯಿಸುತ್ತದೆ. ಈ ಸಮಿತಿಯ ಸದಸ್ಯರಾಗಿ ಈ ಮಹತ್ಕಾರ್ಯದಲ್ಲಿ ಕೈಲಾದಷ್ಟು ಸೇವೆ ಸಲ್ಲಿಸಲು ನಮ್ಮ ಪತ್ರಿಕೆಯ ಕಾರ್ಯಾಲಯದ ಇಡೀ ಸಿಬ್ಬಂದಿ ಕಟಿ ಬದ್ಧರಾಗಿ ನಿಂತಿದ್ದಾರೆ.

6 Comments:

Blogger ಅಸತ್ಯ ಅನ್ವೇಷಿ said...

ಬಹುಶಃ ರಾಂಪ್ ನ ಕೆಳಗೆ ಕುಳಿತಿದ್ದವರ ಕಣ್ಣುಗಳಿಂದ ಬರುತ್ತಿದ್ದ ಗುರುತ್ವಾಕರ್ಷಣ ಶಕ್ತಿಗೆ ಶಕ್ತಿ ಕಳೆದುಕೊಂಡ ಉಡುಗೆಯು, ಇವರೆಲ್ಲಾ ತನ್ನನ್ನೇ ನೋಡುತ್ತಿದ್ದಾರೆಂದು, ತೊಟ್ಟಿದ್ದವಳಿಗೇ ಕೈಕೊಟ್ಟು ಓಡಿ ಹೋಗಿರುವ ಸಾಧ್ಯಾಸಾಧ್ಯತೆ ಬಗ್ಗೆ ನಿಮ್ಮ 'ಒದರಿಗಾರರು' ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

April 11, 2006 4:04 AM  
Blogger V.V. said...

"ಅಸತ್ಯಾನ್ವೇಷಿ"ಗಳೇ,

ಪ್ರಕೃತಿಯ (ಕೆಲವೊಮ್ಮೆ ಪ್ಲಾಸ್ಟಿಕ್ ಸರ್ಜನ್ನರ) ಸತ್ಯಗಳನ್ನು ಬಯಲು ಮಾಡುವಂತಹ ಇಂತಹ ಅನಾಹುತಗಳಿಗೆ ಉಡುಗೆಗಳೇ ಕಾರಣವಿರಬಹುದೆಂಬ ನಿಮ್ಮ ವೈಜ್ಞಾನಿಕ ಸಿದ್ಧಾಂತವನ್ನು ಮಹಾರಾಷ್ಟ್ರ ವಿಧಾನಸಭಾ ಸದಸ್ಯ್ರರು ರಚಿಸಲಿರುವ ವಸನ ವಿಸರ್ಜನ ವಿಚಾರಣಾ ಸಮಿತಿಯ ಗಮನಕ್ಕೆ ತರಲು ಸಕಲ ಪ್ರಯತ್ನಗಳನ್ನೂ ನಮ್ಮ ಕಾರ್ಯಾಲಯ ಮಾಡಲಿದೆ.

ವಂದನೆಗಳೊಂದಿಗೆ,

ಸಂಪಾದಕ

April 11, 2006 12:08 PM  
Anonymous Anonymous said...

ಸಂಪಾದಕರೇ,

ಇನ್ನೊಮ್ಮೆ ಫ್ಯಾಶನ್ ಶೋದಲ್ಲಿ ಬಟ್ಟೆ ಜಾರುವಾಗ ನೀವು ಅಲ್ಲಿರುವಂತೆ ನೋಡಿಕೊಳ್ಳಲಾಗುವುದು. ಮುಂಬಯಿಯ ಫ್ಯಾಶನ್ ಶೋದಲ್ಲಿ ಬಟ್ಟೆ ಜಾರಿದಾಗ ನೀವು ಅಲ್ಲಿರಲಾರದ್ದಕ್ಕೆ ನಮಗೆ ನಿಜವಾಗಿಯೂ ದುಃಖವಾಗಿದೆ.

-ಪಬ್

April 12, 2006 1:20 PM  
Blogger V.V. said...

ಮಾನ್ಯ "ಪಬ್"ರವರೇ,

ನಿಮ್ಮ ಅಧಿಕಾರಯುತವಾದ ಆಶ್ವಾಸನೆ ಗಮನಿಸಿದರೆ, ನೀವು ಮಹರಾಷ್ಟ್ರ ವಿಧಾನ ಸಭೆಯ ಶಾಸಕರೆನ್ನುವುದರಲ್ಲಿ ಸಂದೇಹವಿಲ್ಲ. ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಿಗಾಗಿ, ನಮ್ಮ ಪತ್ರಿಕೆ ಇಂತಹ ಥ್ಯಾಂಕ್‍ಲೆಸ್ ಕೆಲಸಗಳನ್ನು ನಿರ್ವಹಿಸಲು ಸದಾ ಸಿದ್ಧ.

ವಂದನೆಗಳೊಂದಿಗೆ,

ಸಂಪಾದಕ

April 13, 2006 5:21 PM  
Blogger Raghu said...

sampadakare,

May 02, 2006 7:12 AM  
Blogger Raghu said...

Noodi swami
EE show ge 5000.00 entrance fees matte astuu toriside eddare?!!!!!!!!!!

May 02, 2006 7:14 AM  

Post a Comment

Links to this post:

Create a Link

<< Home