ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Saturday, April 29, 2006

ಬಾಲ ಗ್ರಹ - ಕಿರಿಯರ ಅಂಕಣ

[ನಮ್ಮ ಪತ್ರಿಕೆಗೆ ಮಕ್ಕಳ ಬಗ್ಗೆ ಕಾಳಜಿ ಮೊದಲಿನಿಂದಲೂ ಇದ್ದೇ ಇದೆ. -- ಆದರೆ ಮಕ್ಕಳ ಮಕ್ಕಳ ಮೇಲಿಲ್ಲ, ಏಕೆಂದರೆ ಮಕ್ಕಳಿಗೆ ಮಕ್ಕಳಾಗುವುದು ಸೂಕ್ತವಲ್ಲ -- ಆದರೂ ಸಹ ಇಂದಿನ ವರೆಗೆ ನಮ್ಮ ಪತ್ರಿಕೆಯಲ್ಲಿ ಮಕ್ಕಳಿಗಾಗಿಯೇ ಒಂದು ಅಂಕಣವಿರಲಿಲ್ಲ. ಆ ಕೊರತೆಯನ್ನು ನಿವಾರಿಸಲು, "ಬಾಲ ಗ್ರಹ" ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಂಕಣದಿಂದ ವಿಶ್ವಾದ್ಯಂತ ಇರುವ ನಮ್ಮ ಓದುಗರ ಸಂಖ್ಯೆ ಮೂರರಿಂದ ಮೂರೂವರೆಗೆ ಏರುವ ನಂಬಿಕೆ ನಮಗಿದೆ. -ಸಂಪಾದಕ]ಡೈನೋಸಾರ್
ಗೋಪಾಲ ಕೃಷ್ಣ, ಹತ್ತನೆಯ ತರಗತಿ, ಸಿ-ಸೆಕ್ಶನ್, ಬಿಷಪ್ ಕಾಟನ್ ಜೂನಿಯರ್ ಕಾಲೇಜ್
[ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಲೇಖನ]

ನನ್ನ ಪ್ರಬಂಧದ ಕಥಾವಸ್ತು "ಡೈನೋಸಾರ್". ಇದೊಂದು ಕ್ರೂರ ಪ್ರಾಣಿಯಾಗಿದ್ದು ಅಸುರರ ಕಾಲದಲ್ಲಿ ಇದ್ದುದರಿಂದ "ಡೈನಾಸುರ" ಎಂಬ ನಾಮಧೇಯ ಪಡೆಯಿತು.

ನನಗೆ ಡೈನೋಸಾರ್ ವಿಷಯ ಹೆಚ್ಚು ತಿಳಿದಿಲ್ಲ. ಆದ್ದರಿಂದ ನಾನು ಬೇರೊಂದು ಪ್ರಾಣಿಯನ್ನು ಆಯ್ಕೆ ಮಾಡಲು ಆಯ್ದು ಕೊಳ್ಳುತ್ತೇನೆ. ಆ ಪ್ರಾಣಿಯ ಹೆಸರು, ಹಸು. ಹೆಣ್ಣು ಹಸು ಒಂದು ಸಸ್ತನಿ. ಹಸುವಿಗೆ ಆರು ಪಕ್ಕೆಗಳಿದ್ದು, ಅವು ಮೇಲೆ, ಕೆಳಗೆ, ಎಡ ಮತ್ತು ಬಲ ಎಂಬುದಾಗಿವೆ. ಅದರ ಹಿಂದೆ ಒಂದು ಬಾಲವಿದ್ದು ಬಾಲದ ತುದಿಯಲ್ಲಿ ಒಂದು ಬ್ರಶ್ ಇರುತ್ತದೆ. ಹಾಲು ಕರೆಯುವಾಗ ನೊಣಗಳು ಬಕೆಟ್ಟಿನಲ್ಲಿ ಬೀಳದಂತೆ ತಡೆಯುವುದೇ ಆ ಬಾಲದ ಕೆಲಸವಾಗಿದೆ.

ಹುಟ್ಟಿನಿಂದಲೇ ಬಾಲವಿರುವ ಹಸುವಿನ ಮಕ್ಕಳಿಗೆ "ಕರು" ಎನ್ನುತ್ತಾರೆ. ಆದರೆ, ಹುಟ್ಟಿದಾಗ ಬಾಲವಿಲ್ಲದ ಮನುಷ್ಯರ ಮಕ್ಕಳಿಗೆ "ಬಾಲಕರು" ಎನ್ನುತ್ತಾರೆ. ಇದೊಂದು ವಿರುದ್ದಾರ್ಥಕ ಪದ.

ಹಸುವಿಗೆ ಒಂದು ತಲೆಯಿದ್ದು, ಅದರ ಕೆಲಸ ಕೊಂಬುಗಳಿಗೆ ಜಾಗ ಏರ್ಪಡಿಸುವುದಾಗಿದೆ. ಹಸುವಿನ ಕೊಂಬುಗಳು comma ಆಕಾರದಲ್ಲಿದ್ದು, ನಮ್ಮ ಪುರಾತನ ವಂಶಸ್ತರು ಅದನ್ನು "ಕಾಮಧೇನು" ಎಂದು ಈಗಲೂ ಪೂಜಿಸುತ್ತಾರೆ ಮತ್ತು "ಕಾಮ ಶಾಸ್ತ್ರ" ಎಂಬ ವ್ಯಾಕರಣ ಗ್ರಂಥದ ರಚನೆಗೆ ಇದು ಕಾರಣವಾಗಿದೆ.

ಹಸುವಿನ ತಲೆಯ ಕೆಳಗೆ ಮುಖವಿದ್ದು, ಮುಖದ ಕೆಲಸ ಬಾಯಿಗೆ ಜಾಗ ಕೊಡುವುದಾಗಿದೆ. ಬಾಯಿಯ ಕೆಲಸ ಹಸಿವೆಯಾದಾಗ "ಅಂಬಾ.." ಎನ್ನುವುದು. ಹಸು ಏನೇ ತಿಂದರೂ ಅದನ್ನು ಎರಡು ಬಾರಿ ತಿನ್ನುತ್ತದೆ ಆದ್ದರಿಂದ ಅದಕ್ಕೆ ಬೇಕಾದಷ್ಟು ಆಹಾರ ದೊರಕುತ್ತದೆ. ಆಹಾರ ಸಾಲದಾದಾಗ ಅದು "ಅಂಬಾ.." ಎನ್ನುತ್ತದೆ. "ಅಂಬಾ.." ಎನ್ನದಿದ್ದರೆ, ಅದರ ಹೊಟ್ಟೆಯ ತುಂಬಾ ಹುಲ್ಲು ತುಂಬಿದೆ ಎಂದೇ ಅರ್ಥ.

ಹಸುವಿನ ವಾಸನಾ ಶಕ್ತಿ ಶಕ್ತಿಯುತವಾಗಿರುತ್ತದೆ ಆದ್ದರಿಂದ ಬಹಳ ದೂರದಿಂದಲೇ ಅದು ವಾಸಿಸುತ್ತಿರುವ ಸ್ಥಳದ ಸುಳಿವು ನಮಗೆ ಸಿಗುತ್ತದೆ.

ಹೆಂಗಸು ಹಸುವಿಗೆ, ಹಸು ಎನ್ನುತ್ತಾರೆ. ಆದರೆ, ಮನುಷ್ಯ ಹಸುವಿಗೆ "ಎತ್ತು" ಎನ್ನುತ್ತಾರೆ. "ಎತ್ತು" ಪದಕ್ಕೆ ಇನ್ನೊಂದು ಅರ್ಥ ಇರುವುದರಿಂದ ಅದೊಂದು ಸಮಾನಾರ್ಥಕ ಪದ. ಗಂಡಸು ಹಸು ಸಸ್ತನಿಯಲ್ಲ.

ಹೆಂಗಸು ಹಸುವಿನ ಕೆಳಗೆ ಹಾಲು ಜೋತಾಡುತ್ತಿರುತ್ತದೆ. ಇದು ಅಲ್ಲಿರಲು ಮುಖ್ಯ ಕಾರಣವೆಂದರೆ, ಬಕೆಟ್ಟಿನಲ್ಲಿ ಹಾಲು ಕರೆಯಲು ಕೆಳಗಡೆಯೇ ಸೂಕ್ತವಾದ ಜಾಗವಾಗಿದೆ. ಹಾಲನ್ನು ಕರೆದಷ್ಟೂ ಅದು ಬರುತ್ತಲೇ ಇರುತ್ತದೆ. ನಮ್ಮ ಮನೆಗೆ ಹಾಲನ್ನು ಹಾಕುವವನ ಕ್ಯಾನಿನಲ್ಲಿ ಕೆಲವೊಮ್ಮೆ ಹಾಲು ಖಾಲಿಯಾಗಿರುತ್ತದೆ. ಆದರೆ, ಹಸುವಿನಲ್ಲಿ ಮಾತ್ರ ಹಾಲು ಯಾವಾಗಲೂ ಇರುತ್ತದೆ. ಇದೊಂದು ವೈಜ್ಞಾನಿಕ ವಿಚಾರವಾಗಿದ್ದು ನನಗಿನ್ನೂ ಅಷ್ಟಾಗಿ ತಿಳಿದಿಲ್ಲ.

ಹಾಲು ಕೊಡದಿದ್ದರೂ ಸಹ ಒಳ್ಳೆಯ ಮನುಷ್ಯರಿಗೆ "ಹಸುವಿನಂತಹ ವ್ಯಕ್ತಿ" ಎನ್ನುತ್ತಾರಾದ್ದರಿಂದ ನಾವೆಲ್ಲರೂ ಒಳ್ಳೆಯವರಾಗಲು ಪ್ರಯತ್ನಿಸಬೇಕು.

[This piece is largely inspired by something I read in Steven Pinker's introduction to The Best American Science and Nature Writing. While I am not a 19 year old girl studying in Harvard with a $500,000 book contract, I still don't want to come back at a later time and admit that "I internalized" things written in that book!]

Thursday, April 20, 2006

ಸಿನೆಮಜಾವಾಣಿ

ಸಲ್ಮಾನ್ ಖಾನ್ ಅಮೆರಿಕಕ್ಕೆ?!

ಮುಂಬೈ, ಏಪ್ರಿಲ್ ೨೧, ೨೦೦೬: ಕೃಷ್ಣ ಮೃಗವೊಂದನ್ನು ಕೊಂದ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿ ಜಾಮೀನು ಪಡೆದು ಹೊರ ಬಂದಿರುವ ನಟ ಸಲ್ಮಾನ್ ಖಾನ್ ಅಮೆರಿಕ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದಾರೆಂಬ ಸುದ್ದಿ ಹೊರ ಬಂದಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಅವರು ದೇಶದಿಂದ ಹೊರ ಹೋಗುವುದು ನಿಷಿದ್ದವಾದರೂ, ಸಲ್ಮಾನ್ ಖಾನ್ ವಿಚಾರದಲ್ಲಿ ಅಮೆರಿಕದ ಅತೀವ ಒತ್ತಡದಿಂದ ಕೇಂದ್ರ ಸರ್ಕಾರ ಉದಾರ ನೀತಿ ತೋರಲಿದೆಯೆಂದು ನಂಬಲರ್ಹ ಮೂಲಗಳು ತಿಳಿಸಿವೆ.

ಅಮೆರಿಕದ ಉಪಾಧ್ಯಕ್ಷ ಡಿಕ್ ಚೇನಿಯವರೊಂದಿಗೆ ಬೇಟೆಗೆ ಹೋಗಲು, ಅಮೆರಿಕದ ಒಬ್ಬ ವ್ಯಕ್ತಿಯೂ ಸಿದ್ಧನಿಲ್ಲದಿರುವುದರಿಂದ, ವ್ಯಕ್ತಿತ್ವದ ಕೊರತೆ ಇಲ್ಲದ ಭಾರತದಿಂದ ವ್ಯಕ್ತಿಗಳನ್ನು ಸರಬರಾಜು ಮಾಡುವಂತೆ ಅಮೆರಿಕದ ಅಧ್ಯಕ್ಷ ಬುಶ್, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಒಂದಿಗೆ ಮ್ಯಾನ್ ಪವರ್ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ನೆನೆಯ ಬಹುದು. ಸಲ್ಮಾನ್ ಖಾನ್ ರಫ್ತು ಯಶಸ್ವಿಯಾದಲ್ಲಿ, ಪಟೌಡಿಯವರನ್ನೂ ಡಿಕ್ ಚೇನಿಯ ಬೇಟೆ-ಸಂಗಡಿನಾಗಿ ಕಳುಹಿಸುವ ಯೋಚನೆ ಸರ್ಕಾರಕ್ಕಿದೆ ಎಂದು ತಿಳಿದು ಬಂದಿದೆ.

ಸಲ್ಮಾನ್ ಸಂತಸ: "ಅಮೆರಿಕಾ ಬೆಸ್ಟು." ಎಂದಿರುವ ಸಲ್ಮಾನ್ ಖಾನ್ "ಅಲ್ಲಿಗೆ ಹೋಗಲು ನಾನು ಸದಾ ಸಿದ್ಧ" ಎಂದಿದ್ದಾರೆ. ಮಜಾವಾಣಿ ಸಿನೆಮಾ ವರದಿಗಾರ್ತಿಯೊಂದಿಗೆ ಮಾತನಾಡಿದ ಖಾನ್, "ಅಮೆರಿಕದಲ್ಲಿ, ಡಿಕ್ ಚೇನಿಯಿಂದ ಗುಂಡೇಟು ತಿಂದ ವ್ಯಕ್ತಿ ತಾನೇ ಕ್ಷಮಾಪಣೆ ಕೇಳಿದರೆ, ಇಲ್ಲಿ ಆ ಕಪ್ಪು ಜಿಂಕೆಯನ್ನು ಕ್ಷಮಿಸುವುದು ಬಿಟ್ಟು ನನ್ನನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ನೀವೇ ಹೇಳಿ ಯಾವುದು ಉತ್ತಮ?" ಎಂದು ಕೇಳಿದರು.

ಕೃಷ್ಣ ಮೃಗ ಕೊಲೆ ವಿಚಾರದಲ್ಲಿ ತಮ್ಮ ಯಾವುದೇ ತಪ್ಪಿಲ್ಲವೆಂದು ಪರಿ ಪರಿ ವಿಧದಲ್ಲಿ ಬೇಡಿಕೊಂಡರೂ, ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ವಿರುದ್ಧ ಕೆಂಡ ಕಾರಿದ ಅವರು, "ತಿಮಿಂಗಿಲ, ಡಾಲ್ಫಿನ್‌ಗಳೂ ಸೇರಿದಂತೆ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ವೈಜ್ಞಾನಿಕ ಸತ್ಯ. ಈ ಕುರಿತು ಡಿಸ್ಕವರಿ ಚಾನಲ್ಲಿನ ಟಿ.ವಿ. ಕಾರ್ಯಕ್ರಮ ನೋಡಲು ಒಪ್ಪದ ನ್ಯಾಯಾಧೀಶರು ನನ್ನ ಪರವಿರುವ ಸಾಕ್ಷ್ಯಾಧಾರಗಳೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ" ಎಂದರು.

ಕೃಷ್ಣ ಮೃಗವನ್ನು "Endangered Species" ಪಟ್ಟಿಯಲ್ಲಿ ಸೇರಿಸಿರುವುದನ್ನು ನೆನಪಿಸಿದಾಗ, "ಅದು ನನಗೆ ತಿಳಿದಿರಲಿಲ್ಲ" ಎಂದ ಖಾನ್, "ಆದರೆ, ನೋಡಲು ಅಂತಹ ಡೇಂಜರಸ್ಸಾಗಿ ಕಾಣಲಿಲ್ಲ" ಎಂದರು.

Wednesday, April 12, 2006

ಆರೋಗ್ಯ ಭಾಗ್ಯ

ಪ್ರಾಣಿಕ್ ಸ್ಟೀಲಿಂಗ್

ಪ್ರಾಣಿಕ್ ಸ್ಟೀಲಿಂಗ್. ಬಹಳಷ್ಟು ಜನ ಈ ಚಿಕಿತ್ಸೆಯ ಹೆಸರು ಕೇಳಿರಲಿಕ್ಕಿಲ್ಲ. ಹಾಗಿದ್ದರೆ ಇದೆಂಥ ಚಿಕಿತ್ಸೆ ಎಂದು ಕುತೂಹಲ ಮೂಡುವುದು ಸಹಜ. ಮನುಷ್ಯ ಕೇವಲ ಮೂಳೆ, ಮಾಂಸ ಮಾಡಲ್ಪಟ್ಟ ಭೌತಿಕ ಶರೀರವಲ್ಲ. ಆತನ ಒಳಗೆ ಮತ್ತು ದೇಹದ ಸುತ್ತ ವ್ಯಾಪಿಸಿರುವ ಪ್ರಾಣ ತುಂಬಿದ ಸೂಕ್ಷ್ಮ ಶರೀರವೊಂದಿದೆ. ಈ ಶರೀರವೇ ಪ್ರಾಣಮಯ ಶರೀರ.

"ನಾನು ಹತಾಶ", "ನಾನು ಮುಗ್ಧ" ಅಥವಾ "ನಾನು ಪೆದ್ದ" ಎಂದು ಸಾರಿ-ಸಾರಿ ಹೇಳುವ ಈ ಪ್ರಾಣ ಶಕ್ತಿಯನ್ನು ಗುರುತಿಸಿ ಚೌರ್ಯ ಮಾಡುವ ವಿಧಾನವೇ "ಪ್ರಾಣಿಕ್ ಸ್ಟೀಲಿಂಗ್". ೪೦ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ಪದ್ಧತಿಯನ್ನು ಕಂಡು ಹಿಡಿದವನು ಫಿಲಿಪ್ಪೀನ್ಸ್‌ನ ಚೋಅ(ರ) ಕ್ರೂಕ್ ಸೂಯಿ.

ಪ್ರಾಣಿಕ್ ಸ್ಟೀಲಿಂಗ್ ಹೇಗೆ ಸಾಧ್ಯ?

ಮಿದುಳು ದೇಹದಲ್ಲಿದ್ದರೂ ಮಾನವನಿಗೆ ಅದನ್ನು ಸರಿಯಾಗಿ ಉಪಯೋಗಿಸುವುದು ತಿಳಿದಿಲ್ಲ. ದಿನ ನಿತ್ಯದ ಏರುಪೇರುಗಳು, ಮಾನಸಿಕ ಅಥವಾ ಭಾವನಾತ್ಮಕ ಒತ್ತಡಗಳು, ಕ್ರಿಮಿ ಕೀಟಗಳು, ಮೂರ್ಖತನ, ಪರಿಸರ ಮಾಲಿನ್ಯದಿಂದ ಮಿದುಳಿನ ಬಳಕೆ ಕುಂದುತ್ತದೆ. ಅಂತಹ ಸಂದರ್ಭದಲ್ಲಿ ಪ್ರಾಣಿಕ್ ಸ್ಟೀಲಿಂಗಿಗೆ ಒಳಪಡಲು ಮನಸ್ಸು ತಹತಹಿಸುತ್ತದೆ. ವಿಶೇಷವೆಂದರೆ, ಇತರ ಕೆಲ ಚಿಕಿತ್ಸಾ ವಿಧಾನಗಳಂತೆ ಇಲ್ಲಿ ರೋಗಿಯ ಮೈಮುಟ್ಟಿ ಚಿಕಿತ್ಸೆ ಮಾಡಲಾಗುವುದಿಲ್ಲ; ರೋಗಿಯ ಕಿಸೆಗೆ ಮಾತ್ರ ಕೈ ಹಾಕಲಾಗುತ್ತದೆ.

ಎಂಥೆಂಥ ಸಮಸ್ಯೆಗಳಿಗೆ ಪ್ರಾಣ ಚಿಕಿತ್ಸೆ?


ತಲೆನೋವು, ಜ್ವರ, ನೆಗಡಿ, ಕೆಮ್ಮಿನಿಂದ ಹಿಡಿದು ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಬಳಲುತ್ತಿರುವವರೂ ಪ್ರಾಣಿಕ್ ಸ್ಟೀಲಿಂಗಿನ ಮೊರೆ ಹೋಗಿದ್ದಾರೆ. ಹತಾಶೆ ಹೆಚ್ಚಿದ್ದಷ್ಟೂ ಪ್ರಾಣಿಕ್ ಸ್ಟೀಲಿಂಗ್ ಕಾರ್ಯ ಸಿದ್ಧಿ ಹೆಚ್ಚು. ಆದರೆ ಒಂದು ಮಾತು, ಪ್ರಾಣಿಕ್ ಸ್ಟೀಲಿಂಗ್ ಯಾವುದೇ ಇತರೆ ಸ್ಟೀಲಿಂಗ್ ಪದ್ಧತಿಗಳಿಗೂ ಪರ್ಯಾಯ ವಿಧಾನವಲ್ಲ. ಹತಾಶರಾದವರು ನ್ಯೂಮರಾಲಜಿ, ಹೋಮ, ಹವನ, ಶಾಂತಿ, ಬಾಬಾ-ಸ್ವಾಮಿಗಳ ಕಾಲ್ಸೇವೆ ಇತ್ಯಾದಿ ಸ್ಟೀಲಿಂಗ್ ಪದ್ದತಿಗಳನ್ನು ಮುಂದುವರೆಸಬಹುದು.

ಉದಾಹರಣೆಗೆ ಬೆನ್ನು ನೋವಿನಿಂದ ಬಳಲುತ್ತಿರುವ ವ್ಯಕ್ತಿ ಪ್ರಾಣಿಕ್ ಸ್ಟೀಲಿಂಗ್ ಮೊರೆ ಹೊಕ್ಕರೆ ಆತನ ಕಿಸೆಯ ಭಾರ ಕಡಿಮೆಯಾಗಿ, ಆತ ಯಾವುದಾದರೂ ಔಷಧ ತೆಗೆದುಕೊಳ್ಳುತ್ತಿದ್ದರೆ ಅದರ ಸೇವನೆಯ ಪ್ರಮಾಣ ದಿನದಿಂದ ದಿನಕ್ಕೆ ತಗ್ಗಿಸ ಬೇಕಾಗುತ್ತದೆ. ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ರೋಗಿಯ ಕಿಸೆ ಪೂರ್ತಿ ಖಾಲಿಯದರಂತೂ, ಔಷಧ ತೆಗೆದುಕೊಳ್ಳ್ಳುವುದೇ ಬೇಡವೆನ್ನಿಸಬಹುದು. ಏಕೆಂದರೆ, ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ರೋಗಿಯ ರೋಗ ಸಹಿಷ್ಣು ಸಾಮರ್ಥ್ಯ ಹೆಚ್ಚುತ್ತದೆ.

ಪ್ರಾಣಿಕ್ ಸ್ಟೀಲಿಂಗ್ ಉಪಯೋಗವೇನು?


"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸೆಯಿಂದ ವಿವಿಧ ಉಪಯೋಗವಾಗುತ್ತದೆ. ಹತಾಶರಿಗೆ ಪೊಳ್ಳು ಭರವಸೆ ನೀಡುವುದರಿಂದ ಕೆಲವೊಮ್ಮೆ ಉಂಟಾಗುವ ಅಂತಃಸ್ಸಾಕ್ಷಿಯ ಅಳುಕನ್ನು ಬಿಟ್ಟರೆ, ಇತರೆ ಸ್ಟೀಲಿಂಗ್ ಪದ್ಧತಿಗಳಂತೆ ಪೋಲಿಸ್, ಕೋರ್ಟ್, ಸೆರೆಮನೆ ಇತ್ಯಾದಿ ಯಾವ ಅಡ್ಡ ಪರಿಣಾಮವನ್ನೂ ಚಿಕಿತ್ಸಕರು ಅನುಭವಿಸಬೇಕಿಲ್ಲ. ಚಿಕಿತ್ಸಕರ ಆರ್ಥಿಕ ಆರೋಗ್ಯದಲ್ಲಿ ಸುಧಾರಣೆಯಾಗುವುದು ನಿಶ್ಚಿತ." ಎನ್ನುತ್ತಾರೆ ಕರ್ನಾಟಕ ಭೋಗವಿದ್ಯಾ ಪ್ರಾಣಿಕ್ ಸ್ಟೀಲಿಂಗ್ ಫೌಂಡೇಷನ್‍ನ ಟ್ರಸ್ಟಿ ಜೈಲ್‍ಲಕ್ಷ್ಮಿ ಮತ್ತು ಮುಖ್ಯ ಟ್ರೇನರ್ ಸರ್ವಸ್ವ ದೋಚತಿ. ಪ್ರಾಣಿಕ್ ಸ್ಟೀಲಿಂಗಿನಿಂದ ಹಣದ ಭಾರ ಕಡಿಮೆಯಾಗುವುದರಿಂದ ಈ ಚಿಕಿತ್ಸೆ ಅಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗುತ್ತದೆ.

"ಪ್ರಾಣಿಕ್ ಸ್ಟೀಲಿಂಗ್ ಚಿಕಿತ್ಸಾ ವಿಧಾನ", "ಗ್ರಾಮ್ಯ ಪ್ರದೇಶಗಳಲ್ಲಿ ಅದರ ಉಪಲಬ್ಧತೆ " ಮತ್ತು "ಬಡವರಿಗೆ/ವಿದ್ಯಾರ್ಥಿಗಳಿಗೆ ರಿಯಾಯ್ತಿ ಪ್ಯಾಕೇಜ್" ವಿಷಯಗಳಿಗೆ ಆಸಕ್ತಿ ಉಳ್ಳವರು ಕನ್ನಡ ಪ್ರಭದ ಈ ಲೇಖನವನ್ನು ಓದಬಹುದು.

ಇತ್ತೀಚಿನ ಅಪ್‍ಡೇಟ್: "ಪ್ರಾಣಿಕ್ ಸ್ಟೀಲಿಂಗ್" ಓದಿದ ಬೇಸರದಿಂದ ತೃಪ್ತರಾಗದವರು ಇನ್ನೂ ಹೆಚ್ಚಿನ ಬೇಸರಕ್ಕಾಗಿ "ನೂರೆಂಟು ಸುಳ್ಳು" ಬ್ಲಾಗಿನ ಈ ಲೇಖನ ಓದಬಹುದು.

ರಾಜಕುಮಾರ್Tuesday, April 11, 2006

ಸಿನೆಮಜಾವಾಣಿ

ವಿವಾದಕ್ಕೆ ತೆರೆ; ಮಾಸ್ಟರ್ ಲಂಕೇಶ್ ವಿ.ಆರ್ ಎಸ್.ಗೆ ನಿವೃತ್ತಿ!

"ಮೊನಾಲಿಸಾ ಒಂದು ರೀ-ಮೇಕ್ ಚಿತ್ರ, ಅದಕ್ಕೆ ಕರ್ನಾಟಕ ಸರ್ಕಾರದ ಪ್ರಶಸ್ತಿ ನೀಡುವುದು ತಪ್ಪು" ಎಂದು ಗಿರೀಶ್ ಕಾಸರವಳ್ಳಿಯವರು ನೀಡಿರುವ ಹೇಳಿಕೆಯಿಂದ ಮನ ನೊಂದ ಮಾಸ್ಟರ್ ಲಂಕೇಶ್ ಚಿತ್ರರಂಗದಿಂದ ವಿ.ಆರ್.ಎಸ್. ಪಡೆಯುವ ಆಲೋಚನೆ ಮಾಡುತ್ತಿರುವ ವಿಚಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇತ್ತೀಚೆಗೆ ವರದಿಯಾಗಿತ್ತು.

ಮಕ್ಕಳ ದಿನಾಚರಣೆಗೆ ಕೇವಲ ಕೆಲವೇ ತಿಂಗಳುಗಳಿರುವಾಗ ಹಾಲು ಗಲ್ಲದ ಹಸುಳೆ ಮಾಸ್ಟರ್ ಲಂಕೇಶ್ ಒಂದು ವಾರ ಕಾಲ ನಿದ್ದೆ ಗೆಡುವುದೂ, ನೋವಿನ ಇಂಚಿಂಚನ್ನೂ ಹೊಗೆಯಾಡಿಸುವುದೂ ನಮಗೆ ಇಷ್ಟವಾಗಲಿಲ್ಲ. ನಮ್ಮ ಪತ್ರಿಕೆಯ ವಿಶೇಷ ಸಿನೆಮಾ-ವಿವಾದ-ವಿಚಾರಕ ಪಿ.ಕಲ್ಯಾಣ್ ರವರು ಈ ಕುರಿತು ಸುಳಿವು ನೀಡಿದ ಕೂಡಲೇ, ಬಾಲ ನಿರ್ದೇಶಕ ಲಂಕೇಶ್‍ರವರನ್ನು ಸಂದರ್ಶಿಸಿ, ಸಂತೈಸಲು ನಮ್ಮ ಪತ್ರಿಕೆಯ ಸಿನೆಮಾ ವರದಿಗಾರರನ್ನು ಕಳುಹಿಸಿದಾಗ ಕಂಡಿದ್ದೇನು?! ಮಾಸ್ಟರ್ ಲಂಕೇಶ್ ಮತ್ತು ಮಿಸ್ಟರ್ ವೈಶಾಲಿ ಇಬ್ಬರೂ ಕೈ-ಕೈ ಹಿಡಿದುಕೊಂಡು "ನಾನೂ.. ನೀನೂ.. ಒಂದಾದ ಮೇಲೆ" ಎಂದು ಹಾಡುತ್ತಿದ್ದಾರೆ!!
ಕನ್ನಡ ಚಿತ್ರರಂಗದ ದಿಗ್ಗಜ ಮತ್ತು ಮೃದುಗಜಗಳು ಕೈ-ಕೈ ಮಿಲಾಯಿಸುವ ಬದಲು ಹೀಗೆ ಕೈ-ಕೈ ಹಿಡಿದಿರುವುದನ್ನು ನೋಡಿ ಕಂಗೆಟ್ಟ ನಮ್ಮ ವರದಿಗಾರ ಮತ್ತಷ್ಟು ವಿಚಾರಿಸಿದಾಗ ತಿಳಿದು ಬಂದ ವಿಷಯ ಇದು: ಮಾಸ್ಟರ್ ಲಂಕೇಶ್ ಇನ್ನು ಮುಂದೆ ರೀ-ಮೇಕ್ ಚಿತ್ರಗಳನ್ನು ನಿರ್ಮಿಸುವುದಿಲ್ಲ; ಬದಲಾಗಿ, ರೀ-ಮಿಕ್ಸ್ ಚಿತ್ರಗಳನ್ನು ಮಾತ್ರ ತಯಾರಿಸಲಿದ್ದಾರೆ.

ಅವರ ಪ್ರಥಮ ರೀ-ಮಿಕ್ಸ್ ಚಿತ್ರ: "ಹಸೀನ್ ಮೊನಾಲಿಸಾ". ಇದು ಕಾಸರವಳ್ಳಿಯವರ ರಾಷ್ಟ್ರ ಪ್ರಶಸ್ತಿ ವಿಜೇತ "ಹಸೀನಾ" ದ ರೀ-ಮಿಕ್ಸ್ ಆಗಿದ್ದು, ಆ ಚಿತ್ರಕ್ಕೆ ಮೊನಾಲಿಸಾ ಚಿತ್ರದ ಐಟಂ ಸಾಂಗ್ಸ್‌ಗಳನ್ನು ಡ್ರೀಮ್ ಸೀಕ್ವೆನ್ಸ್ ರೂಪದಲ್ಲಿ ಸೇರಿಸಿ ತಯಾರಿಸುವ ಅಪರೂಪದ ಮತ್ತು ಮಹತ್ವದ ಪ್ರಯೋಗವಾಗಿದೆ. ಈ ಚಿತ್ರ ಯಶಸ್ವಿಯಾದಲ್ಲಿ, ಕಾಸರವಳ್ಳಿಯವರ ಚಿತ್ರಗಳ ಒಂದು ರೀ-ಮಿಕ್ಸ್ ಮೆಡ್ಲಿಯನ್ನು ತೆರೆಗೆ ತರುವ ಯೋಜನೆ ಇದ್ದು, ಆ ಚಿತ್ರಕ್ಕೆ ಈಗಾಗಲೇ "ತಬರನ ದ್ವೀಪದಲ್ಲಿ ತಾಯಿ ಸಾಹೇಬರ ತುಂಟಾಟ" ಎಂದು ನಾಮಕರಣ ಮಾಡಲಾಗಿದೆ.


ಬುಶ್ ಸಂತಸ
ವಾಷಿಂಗ್ಟನ್ ಡಿ.ಸಿ., ಏಪ್ರಿಲ್ ೧೦, ೨೦೦೬: ಮಾಸ್ಟರ್ ಲಂಕೇಶ್ ತಮ್ಮ ನಿವೃತ್ತಿಗೆ ನಿವೃತ್ತಿಯನ್ನು ಘೋಷಿಸಿರುವುದು ತಮಗೆ ಅತೀವ ಸಂತಸ ತಂದಿದೆಯೆಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಶ್ ಹೇಳಿಕೆ ಇತ್ತಿದ್ದಾರೆ. ಲಂಕೇಶ್‍ರವರ ಸ್ವಯಂ ನಿವೃತ್ತಿಯ ಬಗೆಗೆ ಅಮೆರಿಕದ ರಕ್ಷಣಾ ವಲಯಗಳು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು.

Friday, April 07, 2006

ಮಜಾವಾಣಿ ಸಂಪಾದಕೀಯ

ಈ ದೇಹದಿಂದ ದೂರವಾದೆ ಏಕೆ ಅರಿವೆಯೇ...?
ಈ ಷೋ ನ್ಯಾಯವೇ..?


ವೆಲ್‍ಡನ್ ಮಹಾರಾಷ್ಟ್ರ ಶಾಸಕರೇ!!!

ನಮ್ಮ ಕರ್ನಾಟಕದ ಶಾಸಕರು ನಿಮಿಷಕ್ಕೆ ೩ ರೂ ಕೊಟ್ಟು ಮನೆಯ ಬಾಗಿಲಲ್ಲಿ ಕುಳಿತಿರುವ ಸ್ತ್ರೀಯರ ಚಿತ್ರ ನೋಡುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಆಲೋಚನೆಯಲ್ಲಿದ್ದರೆ, ನಮ್ಮ ಪಕ್ಕದ ಮಹಾರಾಷ್ಟ್ರ ರಾಜ್ಯದ ಶಾಸಕರು ಆಕಸ್ಮಿಕ ವಸ್ತ್ರ-ವಿಸರ್ಜನೆಯಂತಹ ಮಹಾನ್ ಅನಾಹುತದ ಕಡೆಗೆ ಅತೀವ ಗಮನಹರಿಸಿರುವುದು ಅತ್ಯಂತ ಶ್ಲಾಘನೀಯ.

ಮಹರಾಷ್ಟ್ರ ವಿಧಾನಸಭಾ ಸದಸ್ಯರೇ, ವೆಲ್‍ಡನ್.

ಗುರುತ್ವಾಕರ್ಷಣೆಯಂತಹ ಮಹಾನ್ ಶಕ್ತಿ ಪ್ರತಿಕ್ಷಣವೂ ಕೆಳಗೆಳೆಯುತ್ತಿದ್ದರೂ ಇಂದು ನಮ್ಮ ಪಂಚೆ, ಪ್ಯಾಂಟು, ಸೀರೆಗಳು ಕೆಳಗಿಳಿಯದೇ ಇದ್ದರೆ, ಅದಕ್ಕೆ ನಿಮ್ಮಂತಹ ಮಹಾನ್ ವ್ಯಕ್ತಿಗಳು ಈ ಜಗತ್ತಿನಲ್ಲಿ ಇನ್ನೂ ಇರುವುದೇ ಕಾರಣ. ಶ್ರೀಮಂತ ಮಾದರಿ-ಮಹಿಳೆಯರ ದೇಹಗಳು ಆಕಸ್ಮಿಕವಾಗಿ ಅನಾವರಣವಾಗುತ್ತಿರುವುದರ ಬಗ್ಗೆ ನೀವು ತೋರಿರುವ ಕಾಳಜಿ ಅನುಕರಣನೀಯ. ಅಲ್ಪಸಂಖ್ಯಾತರ ಉದ್ಧಾರದ ಬಗೆಗೆ ಇತರ ರಾಜಕಾರಣಿಗಳು ಉದ್ದುದ್ದ ಭಾಷಣ ಬಿಗಿಯುತ್ತಿರುವಾಗ, ಅತ್ಯಲ್ಪಸಂಖ್ಯಾತರಾದ ಮಾದರಿ-ಮಹಿಳೆಯರ ಉಡುಗೆ-ಉಡಿದಾರದ ವಿಷಯದಲ್ಲಿ ನಿಮ್ಮ ಆಸಕ್ತಿಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ.

ವಿಧಾನಸಭೆಯಲ್ಲಿ ಚರ್ಚಿಸಲು, ವಿಚಾರಣೆ ನಡೆಸಲು, ಮಹಾರಾಷ್ಟ್ರದಲ್ಲಿ ಸಮಸ್ಯೆಗಳಿಗೇನೂ ಕೊರತೆ ಇಲ್ಲ. ಶಿಕ್ಷಣ, ನ್ಯಾಯ ವ್ಯವಸ್ಥೆ, ಉದ್ಯೋಗ, ಹದಗೆಡುತ್ತಿರುವ ಪರಿಸರ, ಆರೋಗ್ಯ ಮುಂತಾದ ಎಷ್ಟೋ ಗಹನ ವಿಚಾರಗಳಿದ್ದರೂ ಭಾರತ ದೇಶದ ಜನರ ಒಳಿತಿಗಿಂತ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಮುಖ್ಯವೆಂದು ನೀವು ಪರಿಗಣಿಸಿರುವುದನ್ನು ನಮ್ಮ ಪತ್ರಿಕೆ ಯಾವುದೇ ಮುಚ್ಚು-ಮರೆ ಇಲ್ಲದೆ ಸ್ವಾಗತಿಸುತ್ತದೆ.

ಪೋಲಿಸರು ಈ ವಿಚಾರದಲ್ಲಿ ಈಗಾಗಲೇ ವಿಚಾರಣೆ ನಡೆಸಿ ಇದೊಂದು "ಆಕಸ್ಮಿಕ" ಎಂದು ವರದಿ ಇತ್ತಿದ್ದರೂ, ಈ ಆಕಸ್ಮಿಕ ಅನಾವರಣದ ವಿಡಿಯೋಗಳನ್ನು ಆಸಕ್ತಿಯಿಂದ ಹಲವು ಬಾರಿ ನೋಡಿ ಬೇಸರಪಡದೆ ಮತ್ತಷ್ಟು ವಿಚಾರಣೆ ನಡೆಸಬೇಕೆಂದಿರುವ ನಿಮ್ಮ ನಿಲುವು ನಮ್ಮ ಪತ್ರಿಕೆಗೆ ಬಹಳ ಮೆಚ್ಚಿಗೆಯಾಗಿದೆ.

ನಮ್ಮ ಆತ್ಮಕ್ಕೆ ನಮ್ಮ ದೇಹ ಬಟ್ಟೆಯಂತಿದ್ದರೆ, ನಮ್ಮ ಬಟ್ಟೆಗಳಿಗೆ ನಮ್ಮ ದೇಹ ಆತ್ಮಕ್ಕೆ ಸಮಾನ. ಹೀಗಿರುವಾಗ ಆತ್ಮದ ಆಕಸ್ಮಿಕ ಅನಾವರಣವನ್ನು ನಿರ್ಲಕ್ಷಿಸುವುದು ಸಲ್ಲ. ಈ "ಆಕಸ್ಮಿಕಗಳು" ಹೇಗೆ ಮತ್ತು ಏಕೆ ಆದವು ಎಂಬುದನ್ನು ತಿಳಿದು ಮುಂದೆಂದೂ ಹೀಗಾಗದಂತೆ ನೋಡಿಕೊಳ್ಳಲು ಸಂಪುಟ-ದರ್ಜೆಯ ಸಮಿತಿಯೊಂದನ್ನು ರಚಿಸುವಂತೆ ನಮ್ಮ ಪತ್ರಿಕೆ ಒತ್ತಾಯಿಸುತ್ತದೆ. ಈ ಸಮಿತಿಯ ಸದಸ್ಯರಾಗಿ ಈ ಮಹತ್ಕಾರ್ಯದಲ್ಲಿ ಕೈಲಾದಷ್ಟು ಸೇವೆ ಸಲ್ಲಿಸಲು ನಮ್ಮ ಪತ್ರಿಕೆಯ ಕಾರ್ಯಾಲಯದ ಇಡೀ ಸಿಬ್ಬಂದಿ ಕಟಿ ಬದ್ಧರಾಗಿ ನಿಂತಿದ್ದಾರೆ.

Wednesday, April 05, 2006

ಕ್ರೈಮ್ ಬೇಕ್ರಿಶಿಸ್ತಿಲ್ಲದೇ ಬೆಳೆಸಿದ ತಂದೆಯನ್ನೇ ಕೊಂದ ಮಗಧೀರ!

ಮಕ್ಕಳನ್ನು ಅತಿ ಮುದ್ದಿಸುತ್ತೀದ್ದೀರೆ? ಶಿಸ್ತು ತೋರುತ್ತಿಲ್ಲವೇ? ಎಚ್ಚರಿಕೆ! ಬೆಳೆಸುವಾಗ ಅತಿ ಮುದ್ದು ಮಾಡಿ ಶಿಸ್ತು ತೋರದ ಕಾರಣಕ್ಕಾಗಿ ತನ್ನ ತಂದೆಯನ್ನೆ ಕೊಲೆ ಮಾಡಿದಾತನನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರದ ನ್ಯಾಯಾಲಯ ತಪ್ಪಿತಸ್ಥನೆಂದು ತೀರ್ಪಿತ್ತಿರುವ ವರದಿ ಇಲ್ಲಿದೆ.

ಆತನ ಶಿಕ್ಷೆಯ ಅವಧಿ ಇನ್ನೂ ನಿರ್ಧಾರವಾಗಬೇಕಿದ್ದು, ತಂದೆಯಿಲ್ಲದ ಈತನ ಮೇಲೆ ನ್ಯಾಯಾಲಯ ಕರುಣೆ ತೋರಬೇಕೆಂದು ಆತನ ವಕೀಲರು ವಾದಿಸಲಿದ್ದಾರೆಂದು ತಿಳಿದು ಬಂದಿದೆ.

ವಿ-ದರ್ಪಣ್: ಭಾವನೆ ಹಂಚಿಕೊಳ್ಳುವ ಸೇವೆ

ಶಾಸಕರ ಭವನದಲ್ಲಿ ಕೃಷ್ಣ ಲೀಲೆ; ಸ್ತ್ರೀಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಚಾಲನೆ!

ಬೆಂಗಳೂರು, ಏಪ್ರಿಲ್ 5, 2006: ಶಾಸಕರ ಭವನದಲ್ಲಿ ಸ್ತ್ರೀಯರೊಂದಿಗೆ ವಿಡಿಯೋ ಕಾನ್ಫ್ರರೆನ್ಸ್ ನಡೆಸುವ ವಿನೂತನ ಸೇವೆಯೊಂದಕ್ಕೆ ವಿಧಾನಸಭಾಧ್ಯಕ್ಷ ಕೃಷ್ಣರವರು ಚಾಲನೆ ನೀಡಿರುವ ಸಂಗತಿ ಈ ಸಂಜೆ ಪತ್ರಿಕೆಯಲ್ಲಿ ವರದಿಯಾಗಿದೆ.

ಆ ವರದಿಯಂತೆ ಶಾಸಕರು ನಿಮಿಷಕ್ಕೆ ಕೇವಲ ೩ ರೂ ದರದಲ್ಲಿ ಸ್ತ್ರೀಯರ ಚಿತ್ರವನ್ನು ನೋಡುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ವಿ-ದರ್ಪಣ್ ಎಂಬ ಈ ಸೇವೆ ಮನೆ ಬಾಗಿಲಿಗೇ ಲಭ್ಯವಾಗಲಿದ್ದು, ಮುಖ್ಯಮಂತ್ರಿಗಳು ಕುಳಿತಲ್ಲಿಂದಲೇ ತಮ್ಮವರ ಯೋಗಕ್ಷೇಮವನ್ನು ಕಣ್ಣಾರೆ ಕಂಡುಕೊಳ್ಳಬಹುದಾಗಿದೆ.

ಈ ಸಂಜೆ ಪತ್ರಿಕೆಯ ವರದಿ ಇಲ್ಲಿದೆ:

Labels:

Tuesday, April 04, 2006

ಮದ್ರಣ ದೋಷ

ಕಳ್ಳು ಅಂಗಡಿ ಹೆಣ್ಣುಗಳ ತಪಾಸಣೆ!

ಬೆಂಗಳೂರು, ಏಪ್ರಿಲ್ ೪, ೨೦೦೯: ಪರವಾನಿಗಿ ಇಲ್ಲದೆ ನಡೆಸುತ್ತಿರುವ ಕಳ್ಳು ಅಂಗಡಿಗಳ ತಪಾಸಣೆ ನಡೆಸಿ ಅವುಗಳ ಎತ್ತಂಗಡಿ ಮಾಡಿಸಬೇಕೆಂಬ ಕರ್ನಾಟಕ ಸರ್ಕಾರದ ಅಯೋಗ್ಯ ಇಲಾಖೆ ಹೊರಡಿಸಿದ ಸತ್ತೋಲೆಯಲ್ಲಿ ಮುದ್ರಣ ದೋಷವಿದ್ದಿದ್ದರಿಂದ ಕರ್ನಾಟಕ ರಾಜ್ಯ ಪೋಲಿ ಪಡೆ ರಾಜ್ಯಾದ್ಯಂತ ಕಲ್ಲಂಗಡಿ ಹೆಣ್ಣುಗಳ ತಪಾಸಣೆ ನಡೆಸಿರುವ ಸ್ವಾರಸ್ಯಕರ ಸಂಗತಿ ವರದಿಯಾಗಿದೆ.

ನಮ್ಮ ಪತ್ರಿಕೆಯ ವಿಶೇಷ ಬಾತ್ಮೀದಾರ, ನಳ-ಪಾಕಿಸ್ತಾನದ PUN-Jobಇ Wit(ಅ)ಪುರುಷ ವಿಚಿತ್ರಾನ್ನ ವಿತರಕ ಶ್ರೀವತ್ಸ ಜೋಷಿ ಚಿತ್ರ ಸಹಿತ ಪುರಾವೆ ಒದಗಿಸಿದ್ದಾರೆ.
(ಚಿತ್ರ ಕೃಪೆ: ಈ ಸಂಜೆ)

ಬ್ರೇಕಿಂಗ್ ನ್ಯೂಸ್:
ಕಳ್ಳಂಗಡಿ ಹಣ್ಣುಗಳ ತಪಾಸಣೆಗೆ ಆರೋಗ್ಯ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿನ ಮುದ್ರಣ ದೋಷವೇ ಕಾರಣ ಎಂಬುದನ್ನು ರಾಜ್ಯ ಪೋಲೀಸ್ ಮಹಾನಿರ್ದೇಶಕರು ನಿರಾಕರಿಸಿದ್ದಾರೆ. ಇಂಟರ್ನೆಟ್ ಪತ್ರಿಕೆಯೊಂದು ಇತ್ತೀಚೆಗೆ ಇಂತಹ ಕುಹಕ ವರದಿಯನ್ನು ಪ್ರಕಟಿಸಿತ್ತು.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಡಿ.ಜಿ.ಪಿ.ಯವರು, "ಕಲ್ಲಂಗಡಿ ಹಣ್ಣುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದು, ಅದನ್ನು ಕರಗಿಸಿ ಆಯುಧವನ್ನಾಗಿ ಪರಿವರ್ತಿಸುವ ಅಪಾಯ ಇರುವುದರಿಂದ ಲೋ ಅಯರ್ನ್ ಕಂಟೆಂಟ್ ಇರೋ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ವಿಧಾನಸೌಧದ ಒಳಗೆ ಕೊಂಡೊಯ್ಯುವ ಅವಕಾಶ ಇದೆ. ಆದ್ದರಿಂದಲೇ, ಪ್ರತಿ ಕಲ್ಲಂಗಡಿ ಹಣ್ಣನ್ನು ಮೆಟಲ್ ಡಿಟೆಕ್ಟರ್ ಪರೀಕ್ಷೆಗೆ ಗುರಿಪಡಿಸಲಾಗುತ್ತಿದೆ" ಎಂದರು.