ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 31, 2006

ದಾಂಪತ್ಯದಲ್ಲಿ ದಳ್ಳುರಿ: ಮರಾಠಿ ಸ್ನೇಹಿತನ ಪ್ರಶ್ನೆಗಳು

ಆಕಸ್ಮಿಕ ವಿಚ್ಛೇದನದ ಭೀತಿ ದೇಶದೆಡೆಯೆಲ್ಲಾ ಹರಡಿ ಕಾಳ್ಗಿಚ್ಚಿನಂತೆ ಧಾರಾಕಾರವಾಗಿ ಹರಿಯುತ್ತಿರುವಾಗ ದಾಂಪತ್ಯ ಜೀವನದ ಸಮಸ್ಯೆಗಳ ಬಗ್ಗೆ ಮರಾಠಿ ಜನರ ಮನದಲ್ಲೂ ಪ್ರಶ್ನೆಗಳು ಎದ್ದಿರುವುದು ಸಹಜವೇ ಆಗಿದೆ. ಡೈವೋರ್ಸಿಲ್ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಇನ್ಫೋಮರ್ಷಿಯಲ್ ಓದಿದ ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಲ್ಲಿ ಒಬ್ಬರಾದ ಮವಿನಯನಸರವರು, ತಮ್ಮ 'ಮರಾಠಿ ಸ್ನೇಹಿತನಿಗೆ" ಈ ಮಾತ್ರೆಗಳ ಬಳಕೆಯ ಕುರಿತು ಎದ್ದಿರುವ ಪ್ರಶ್ನೆಗಳನ್ನು ನಮಗೆ ಕಳುಹಿಸಿದ್ದಾರೆ.

ಇಂದು "ಮರಾಠಿ ಸ್ನೇಹಿತನಿಗೆ" ಕಾಡಿರುವ ಪ್ರಶ್ನೆಗಳು ಆಕಸ್ಮಿಕ ವಿಚ್ಛೇದನದ ಭಯದಿಂದ ಕಂಗೆಟ್ಟಿರುವ ಪ್ರತಿ ದಂಪತಿಗೂ ಎಂದಾದರೂ ಒಮ್ಮೆ ಕಾಡೇ ಇರುತ್ತವೆ ಎಂಬುದು ನಮ್ಮ ನಂಬಿಕೆ. ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವ ಈ ಸಮಸ್ಯೆಗಳನ್ನು ಆದಷ್ಟೂ ಬೇಗ ಬಗೆಹರಿಸಿಕೊಳ್ಳುವುದು ಒಳಿತು. ಇದರಲ್ಲಿ ನಾಚಿಕೆ, ಸಂಕೋಚ ಬೇಡ.

ಒಂದು ಪತ್ರಿಕೆಗೆ ಸಾಮಾಜಿಕ ಕಾಳಜಿ ಅತ್ಯಗತ್ಯ; ಸಮಾಜ ನಮ್ಮದೇ ಇರಲಿ, ಮರಾಠಿಗರದೇ ಇರಲಿ.

ದಾಂಪತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವು 'ದಾಂಪತ್ಯದಲ್ಲಿ ದಳ್ಳುರಿ:ಮರಾಠಿ ಸ್ನೇಹಿತನ ಪ್ರಶ್ನೆಗಳು' ಎಂಬ ಹೊಸ ಅಂಕಣಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.

ಪತಿ, ಪತ್ನಿ ಔರ್ ವೋಹ್ ಡೈವೋರ್ಸಿಲ್

೧. ಈ ಮಾತ್ರೆಯನ್ನು ಮಾರನೆಯ ದಿನ ಮತ್ತೆ ಉಪಯೋಗಿಸಬಹುದೇ? ಅಥವಾ ಮಾರನೆಯ ಬೆಳಗ್ಗೆ ತೆಗೆದು ಬಿಸಾಕಬೇಕೇ?

ಆದೇ ಮಾತ್ರೆಯನ್ನು ಮತ್ತೆ ಮತ್ತೆ ಉಪಯೋಗಿಸುವುದು ಅನಾರೋಗ್ಯಕರ - ಡೈವೋರ್ಸಿಲ್ ಮಾತ್ರೆಯ ತಯಾರಕರಿಗೆ. ಒಮ್ಮೆ ಬಳಸಿದ ನಂತರ ಆ ಮಾತ್ರೆಗಳನ್ನು ಮಕ್ಕಳಿಗೆ ಆಡಲು ಕೊಡುವುದು ಒಳಿತು.

೨. ಪುರುಷರಿಗೆ ಬೇರೆ ಮಾತ್ರೆ ಇದೆಯೇ? ನೊಂದ ಪತಿಗಳ ಸಂಘದ ವತಿಯಿಂದ ಬಂದಿರುವ ಪ್ರಶ್ನೆ.

ಪುರುಷರು ಡೈವೋರ್ಸಿಲ್ ಕಂಪೆನಿಯವರೇ ತಯಾರಿಸಿರುವ "ಲೇಬಿಯಮ್ ಕ್ಲಾಸಸ್" ಪಟ್ಟಿಗಳನ್ನು ಬಳಸಬಹುದು. ಇದೇ ಪರಿಹಾರ ಆಯುರ್ವೇದದಲ್ಲೂ ಲಭ್ಯವಿದ್ದು "ಅಧರ ನಿಬದ್ಧ" ಎಂಬ ಹೆಸರಿನಲ್ಲಿ ದೊರಕುತ್ತದೆ.

ಇದನ್ನು ಬಳಸುವ ಪುರುಷರು ಮಲಗುವ ಮುನ್ನ ಮುಖ ಮಾರ್ಜನ ಮಾಡಿ, ಲೇಬಿಯಮ್ ಕ್ಲಾಸಸ್ ಪಟ್ಟಿಯನ್ನು ಅಳತೆಗೆ ತಕ್ಕಂತೆ ಕತ್ತರಿಸಿ, ಎರಡೂ ತುಟಿಗಳನ್ನು ಒಳಗೆ ಮಾಡಿಕೊಂಡು, ಪಟ್ಟಿಯನ್ನು ಮೂಗಿನ ಕೆಳಗಿನಿಂದ ಗಲ್ಲದ ತುದಿಯವರೆಗೆ ಹಚ್ಚಿಕೊಳ್ಳಬೇಕು.

ಆಕಸ್ಮಿಕ ವಿಚ್ಛೇದನವನ್ನು ತಡೆಗಟ್ಟುವಲ್ಲಿ 'ಲೇಬಿಯಮ್ ಕ್ಲಾಸಸ್' 'ಡೈವೋರ್ಸಿಲ್' ಮಾತ್ರೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾದರೂ, ಇದರಲ್ಲಿ 'ಸೈಡ್ ಎಫ್ಫೆಕ್ಟ್ಸ್' ಕೂಡಾ ಹೆಚ್ಚಿಗೆ ಇವೆ. ಮೀಸೆ ಇರುವ ಪುರುಷರು ಈ ಪರಿಹಾರವನ್ನು ಬಳಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯುವುದು ಒಳಿತು.

೩.ಪತ್ನಿಯರು ಉಪಯೋಗಿಸುವುದರ ಬಗ್ಗೆ ಪತಿಗೆ ತಿಳಿಯಬಾರದೇ?

ಈ ವಿಷಯದ ಬಗ್ಗೆ ವೈದ್ಯಕೀಯ ವಲಯಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದು ದಡ ಮುಟ್ಟುವ ಯಾವುದೇ ಚಿಹ್ನೆಗಳೂ ಕಾಣುತ್ತಿಲ್ಲ. ಪತಿಗೆ ತಿಳಿಸದೆ ಮಾತ್ರೆಗಳನ್ನು ಕಿವಿಗೆ ನುಂಗಿಸುವ ಕ್ರಮವನ್ನು ಪಾತಿವ್ರತ್ಯದ ಭಂಗ ಎಂದು ಒಂದು ಗುಂಪು ವಾದಿಸುತ್ತಿದ್ದರೆ, ಇನ್ನೊಂದು ಗುಂಪಿನ ಪ್ರಕಾರ ಮಾತ್ರೆ-ಕಿವಿಗಳೆರಡೂ ಹೆಂಡತಿಯದೇ ಆಗಿರುವಾಗ, ಪತಿಯಿಂದ ಅಪ್ಪಣೆ ಪಡೆಯಬೇಕೆಂಬುದು ಅಮಾನವೀಯ ಮಹಿಳಾ ವಿರೋಧಿ ಧೋರಣೆಯಾಗಿದ್ದು ನಮ್ಮ ಸಮಾಜದಲ್ಲಿ ನಡೆಯುವ ಶೋಷಣೆಗೆ ನಿಲವುಗನ್ನಡಿ ಹಿಡಿದಂತಾಗಿದೆ.

ನಮ್ಮ ಅಭಿಪ್ರಾಯದಲ್ಲಿ ಪತಿಗೆ ತಿಳಿಸಿಯೇ ಈ ಮಾತ್ರೆಗಳನ್ನು ಬಳಸುವುದು ಒಳಿತು. ಹಾಗೆ ಮಾಡದಿದ್ದಲ್ಲಿ ಅದು ಪುರುಷನ ಭವಿಷ್ಯತ್ತಿನ ಮೇಲೆ ಅಪಾರ ಪ್ರಭಾವ ಬೀರುವ ಅಪಾಯ ಇರುತ್ತದೆ. ಹೀಗಾದಾಗ ಸೂಕ್ಷ್ಮ ಸಂವೇದನಾಶೀಲ ಪುರುಷರು ಗುಹೆಯೊಳಕ್ಕೆ ಹೋಗಲು ಹೆದರಿ ತಮ್ಮ ಆಪ್ಯತಾ ಆವರ್ತನದಲ್ಲಿ ಧನಾತ್ಮಕ ಅನುಭವದಿಂದ ವಂಚಿತರಾಗುತ್ತಾರೆ.

ಒಟ್ಟಿನಲ್ಲಿ ಹೇಳುವುದಾರೆ ಪತಿಗೆ ಹೇಳದೆ ಮಾತ್ರೆಗಳನ್ನು ಬಳಸುವುದರಿಂದ ಗಂಡಸರು ತಮ್ಮಲ್ಲೇ ದೋಷವಿದೆಯೇನೋ ಎಂದು ಭಾವಿಸಿ ತಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಟಿ.ವಿ, ಎಂಬ ಮಾಯಾಂಗನೆಯ ಮೊರೆಹೊಕ್ಕುತ್ತಾರೆ.

ಆದರೆ ಜಾಣ ಮಹಿಳೆ ತಾನು ಮಾತ್ರೆಗಳನ್ನು ಉಪಯೋಗಿಸುತ್ತಿರುವ ಸಂಗತಿಯನ್ನು ಪತಿಗೆ ತಿಳಿಸಿದಾಗ ಆತನಿಗೆ ಇದೊಂದು ಸಹಜ ಕ್ರಿಯೆ ಎಂದು ಅರಿವಾಗಿ ಗಂಡ-ಹೆಂಡತಿ ಇಬ್ಬರೂ ನಿರಮ್ಮಳರಾಗುತ್ತಾರೆ.

2 Comments:

Blogger Sarathy said...

ದಾಂಪತ್ಯದಲ್ಲಿನ ದಳ್ಳುರಿ ನಂದಿಸಲು ನಿಮ್ಮ ಡೈವೋರ್ಸಿಲ್ ಮದ್ದು ಎಷ್ಟು ಗುದ್ದು ನೀಡಬಹುದೋ ಅದರ ಹತ್ತು ಪಟ್ಟು ಗುದ್ದು ನೀಡುವ ಮದ್ದು ನನ್ನ ಸ್ನೇಹಿತನಿಗೆ ವಂಶ ಪಾರಂಪರ್ಯವಾಗಿ ದೊರೆತಿದೆಯಂತೆ. ದಾಂಪತ್ಯದಲ್ಲಿ ಹೆಚ್ಚು 'ದಂ' ಇರುವವರು (ಪುರುಷ ಅಥವಾ ಮಹಿಳೆ ಎಂಬ ಭೇದವಿಲ್ಲ) ಅದನ್ನು ಉಪಯೋಗಿಸಬಹುದು. ಅದು ಯಾವ ಮದ್ದು ಎಂದು ಸದ್ದು ಮಾಡಬೇಡಿ. ನಿಮ್ಮ ಡೈವೋರ್ಸಿಲ್ ನಂತೆಯೇ ಅದನ್ನು ಕಿವಿಯ ಮೇಲೆ ಪ್ರಯೋಗಿಸಬಹುದು. ಪೆದ್ದು ಪೆದ್ದಾಗಿ ಹೆಚ್ಚು ಸದ್ದು ಮಾಡುವ ಗಂಡ/ಹೆಂಡತಿಯ ಕಿವಿಗೆ ಕಾದ ಸೀಸವನ್ನು ಇಟ್ಟರಾಯಿತು. ಅದು ಹೇಗೆ ಕೆಲಸ ಮಾಡುತ್ತದೆ? ಕಿವಿಗೆ ಬಿದ್ದ ಕಾವಿನ ಪ್ರಭಾವದಿಂದಾಗಿ ಮನಸು, ಬಾಯಿಗಳಲ್ಲಿ ಹೊಗೆಯಾಡುತ್ತಿದ್ದ ವಿಚ್ಛೇದನಾ ಮಾತುಗಳು ಕರಗಿ ನೀರಾಗಿ ಹೊಟ್ಟಗೆ ಸೇರಿ ಜೀರ್ಣವಾಗುತ್ತವೆ. ಬಹು ಸುಲಭ ಪರಿಹಾರ. ಹೆಚ್ಚು ಅಕ್ಕ ಪಕ್ಕ ಪ್ರಭಾವಗಳಿಲ್ಲ (ಸೈಡ್ ಎಫೆಕ್ಟ್ಸ್). ತಲೆತಲಾಂತರಗಳಿಂದ ಅಸಂಖ್ಯ ಭಾರತೀಯ ಕುಟುಂಬಗಳು ಶ್ರದ್ಧೆಯಿಂದ ಪಾಲಿಸಿಕೊಂಡುಬಂದಿರುವ ಈ ಔಷಧವನ್ನು ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಮಾಡುವ ಸಲುವಾಗಿ ಪತಿ ಪತ್ನಿ ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ.

April 03, 2006 7:45 AM  
Blogger V.V. said...

ವಿಜಯಸಾರಥಿಯವರಿಗೆ,
ನಮಸ್ಕಾರ. ಡೈವೋರ್ಸಿಲ್‌ಗಿಂತ ಶಕ್ತಿಯುತವಾದ ಮದ್ದು ನಿಮ್ಮ ಸ್ನೇಹಿತರಿಗೆ ವಂಶ ಪಾರಂಪರ್ಯವಾಗಿ ದೊರೆತಿರುವುದು ಸಂತೋಷವಾದ ವಿಷಯ. ಇಂತಹ ಎಷ್ಟೋ ಮನೆಯ-ಮದ್ದುಗಳು (ಹೋಮ್-ಇಯೋಪಥಿ) ನೀವೇ ಬರೆದಿರುವಂತೆ ಅಸಂಖ್ಯ ಭಾರತೀಯ ಕುಟುಂಬಗಳ ಶ್ರದ್ಧೆಯ ಫಲವಾಗಿ ಇಂದೂ ಲಭ್ಯವಿವೆ.


ಸಾಮ್ರಾಜ್ಯಷಾಹಿ ಅಮೆರಿಕದ ಬಂಡವಾಳಷಾಹಿ ಬಹುರಾಷ್ಟ್ರೀಯ ಕಂಪೆನಿಯೊಂದು ಪೇಟೆಂಟ್ ಪಡೆಯುವ ಮುನ್ನ ಈ ಮದ್ದಿಗೆ ನಿಮ್ಮ ಸ್ನೇಹಿತರು ಪೇಟೆಂಟ್ ಪಡೆಯುವ ಯೋಚನೆ ಮಾಡಬೇಕು. ಇದು ನಮ್ಮೆಲ್ಲರ ಇಂದಿನ ಆದ್ಯ ಕರ್ತ್ಯವ್ಯ ಎಂದರೆ ತಪ್ಪಾಗಲಾರದೇನೋ ಎಂಬ ಯೋಚನೆ ಬಂದರೆ ಅದು ಸಹಜವೇ ಸರಿ.

ವಂದನೆಗಳೊಂದಿಗೆ,

ವಿ.ವಿ.

April 03, 2006 11:31 AM  

Post a Comment

Links to this post:

Create a Link

<< Home