ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, March 21, 2006

ಮಹಾ ಪ್ರಧಾನ ವ್ಯವಸ್ಥಾಪಕ ಸಂಪಾದಕನ ಮಾತು


ವಿ-ಚಿತ್ರಾನ್ನವಾದರೂ ಎದೆಗುಂದದ ಮಜಾವಾಣಿ
(ಮಹಾ ಪ್ರಧಾನ ವ್ಯವಸ್ಥಾಪಕ ಸಂಪಾದಕನ ಮಾತು)

ಇಂದು ಬೆಳಿಗ್ಗೆ ಎಂದಿನಂತೆ ಮಜಾವಾಣಿ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ಹಿಟ್ ಕೌಂಟರ್ ಮುಖಕ್ಕೇ ಹೊಡೆದಂತಾಯಿತು. ಒಂದು ನಿಮಿಷ ಸಂಶಯ ಆಯಿತು: ಇದು ಮಜಾವಾಣಿನೋ ಅಥವಾ ನಿಜವಾಗಿಯೂ ಕನ್ನಡವೇ ನಿತ್ಯಾನೋ ಅಂತ.

ನಾನು ನೋಡುತ್ತಿದ್ದಿದ್ದು ಮಜಾವಾಣೀನೇ ಅಂತ ಖಾತ್ರಿಯಾದಮೇಲೆ, ನಮ್ಮಜ್ಜಿಗೆ ಹಲವು ವೀಕೆಂಡುಗಳ ಕಾಲ ಇಂಟರ್‌ನೆಟ್ ಬ್ರೌಸಿಂಗ್ ಹೇಳಿಕೊಟ್ಟು 'ಅಜ್ಜಿ, ಸಮಯ ಸಿಕ್ಕಾಗಲೆಲ್ಲಾ ಮಜಾವಾಣಿಗೆ ಹೋಗಿ ಬ್ರೌಸರ್ ರೆಫ್ರೆಶ್ ಮಾಡಿ' ಅಂತ ಹೇಳಿದ್ದು ನೆನಪಾಗಿ, ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಲ್ಲಿ ಒಬ್ಬರಾದ ನಮ್ಮ ಅಜ್ಜಿಯ ಮೇಲೆ ಅಪಾರ ಅಭಿಮಾನ ಉಂಟಾಗಿ ಅವರಿಗೆ ಫೋನ್ ಮಾಡಿದಾಗ ತಿಳಿದದ್ದು: ೧. ದಟ್ಸ್ ಕನ್ನಡದಲ್ಲಿ ಮಜಾವಾಣಿ ವಿ-ಚಿತ್ರಾನ್ನಾವಗಿದೆ ೨. ಮಜಾವಾಣಿಗೆ ಇರುವವರು ಇಬ್ಬರೇ ಓದುಗರು; ಈಗ ಓದುತ್ತಿರುವ ನೀವು ಮತ್ತು ... ನಾನು.

ದಟ್ಸ್ ಕನ್ನಡದಲ್ಲಿ ಮೂರೂವರೆ ವರ್ಷಗಳಿಂದ ಪ್ರತಿವಾರ ತಪ್ಪದೇ ದೇಶ-ವಿದೇಶಗಳ ಜನರಿಗೆ ವಿಚಿತ್ರಾನ್ನ ಉಣಬಡಿಸಿ ಅವರನ್ನು ವಿಚಿತ್ರಾನ್ನ-ವ್ಯಸನಿಗಳನ್ನಾಗಿ ಮಾಡಿರುವ ನಳಪಾಕಿಸ್ತಾನದ ಶ್ರೀ ಶ್ರೀವತ್ಸ ಜೋಷಿಯವರು, ನಮ್ಮ ಪತ್ರಿಕೆಯ ಬಗೆಗೆ ಲಘುವಾಗಿ ಬರೆದು ನಮ್ಮನ್ನು ಈರುಳ್ಳಿಗೆ ಹೋಲಿಸಿ ನಗೆಪಾಟಲಿಗೀಡು ಮಾಡಿರುವುದು... ನಮಗೆ ಮತ್ತಷ್ಟು ಹುರುಪು ನೀಡಿದೆ.

ಜೋಷಿಯವರೇ, ಮಜಾವಾಣಿ ಹಿಟ್ ಕೌಂಟರ್ ಮೇಲೇರುವಲ್ಲಿ ನಮ್ಮ ಅಜ್ಜಿ ಮಾಡದ್ದನ್ನು ನೀವು ಮಾಡಿದ್ದೀರಿ. ಧನ್ಯವಾದಗಳು.

ಈರುಳ್ಳಿಗೆ ಹೋಲಿಸಿರುವುದು ಇದೇ ಮೊದಲಾದರೂ, ಬಹಳ ಹಿಂದೆಯೇ ದಕ್ಷಿಣ ಆಫ್ರಿಕದ ವಿಜ್ಞಾನಿಗಳು ಮಜಾವಾಣಿಯನ್ನು "The tenacious water hyacinth, known locally as the obnoxious Kafue River weed" ಎಂದು ಕರೆದು, ಅದರ ನಿರ್ಮೂಲನಕ್ಕೆ ಯೋಜನೆಗಳು ಹಾಕಿಕೊಂಡಿರುವುದು ಹಳೆಯ ಸಂಗತಿ.

ಎಲ್ಲೆಲ್ಲೂ ಇದ್ದರೂ, ನಮ್ಮ ಕೈಗೆ ಸಿಗದೆ ನುಣುಚಿಕೊಳ್ಳುವ ಸತ್ಯದ ವಿರುದ್ಧ ನಾವು ಸಾರಿರುವ ಸಮರವನ್ನು ಕಂಡು ನಗುವ ಜನರಿಗೆ ನಾವು ಮತ್ತೊಮ್ಮೆ ಹೇಳುವುದಿಷ್ಟೇ:

"First they ignore you, then they laugh at you, then they fight you, then you win "

1 Comments:

Anonymous Anonymous said...

> ನಮ್ಮನ್ನು ಈರುಳ್ಳಿಗೆ ಹೋಲಿಸಿ ನಗೆಪಾಟಲಿಗೀಡು ಮಾಡಿರುವುದು... ನಮಗೆ ಮತ್ತಷ್ಟು ಹುರುಪು ನೀಡಿದೆ

ರಾಜಕಾರಿಣಿ, ಬುದ್ಧಿಜೀವಿ ಮತ್ತು ಸುದ್ಧಿಜೀವಿಗಳನ್ನು ಗೇಲಿಮಾಡಿ ಅವರಿಗೆ ಕಣ್ಣೀರು ಬರಿಸಲು ಪ್ರಯತ್ನಿಸುವ ಮಜಾವಾಣಿಯನ್ನು ಈರುಳ್ಳಿಗೆ ಹೋಲಿಸಿದ್ದು ಸರಿಯಾಗಿಯೇ ಇದೆ. ಆದರೆ ಒಂದು ಸಮಸ್ಯೆಯೇನೆಂದರೆ ಈರುಳ್ಳಿಯನ್ನು ಸುಲಿದಾಗ ಮಾತ್ರ ಕಣ್ಣೀರು ಬರುವುದು. ಇಲ್ಲಿ ಮಜಾವಾಣಿಯನ್ನು ಓದಿದಾಗ ಕಣ್ಣೀರು ಬರುವುದು. ಈರುಳ್ಳಿಯನ್ನು ಸುಲಿದಾಗ ಯಾಕೆ ಕಣ್ಣೀರು ಬರುವುದು ಎಂಬುದನ್ನು ಪತ್ತೆ ಹಚ್ಚಿದ ಇಮಾನಿಯವರಿಗೆ ಮಜಾವಾಣಿ ಬಗ್ಗೆ someಶೋಧನೆ ಮಾಡಲು ದತ್ತಿ ನೀಡಲಾಗುವುದು ಎಂದು ಬುದ್ಧಿಜೀವಿಗಳು ಹೇಳಿಕೆ ನೀಡಿರುವುದು ನಂಬಲನರ್ಹ ಮೂಲಗಳಿಂದ ತಿಳಿದು ಬಂದಿದೆ. ಈ ಸಂಶೋಧನೆಯ ಫಲಿತಾಂಶವನ್ನು ನೋಡಿಕೊಂಡು ಮಜಾವಾಣಿ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಬುದ್ಧಿಜೀವಿಗಳು ತಮ್ಮ ಎಂದಿನ ಸೋಮಾರಿಕಟ್ಟೆಯಾದ ರವೀಂದ್ರ ಕಲಾಕ್ಷೇತ್ರದ ಹಿಂದೆ ಕಾರಂತರ ಕ್ಯಾಂಟೀನಿನ ಕಾಫಿ ಕುಡಿಯುತ್ತ ತಿಳಿಸಿರುವುದಾಗಿ ವರದಿಯಾಗಿಲ್ಲ.

-ಲಾಂಗೂಲಾಚಾರ್ಯ

March 23, 2006 10:12 AM  

Post a Comment

Links to this post:

Create a Link

<< Home