ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 17, 2006

'ಕನ್ನಡಕ್ಕೆ ಮರು ನಾಮಕರಣ' - ಚಿತ್ರರಂಗದ ಆಗ್ರಹ


ಬೆಂಗಳೂರು, ಮಾರ್ಚ್ ೧೨, ೨೦೦೯: ತಮಿಳು ಮತ್ತು ತೆಲಗು ಚಿತ್ರರಂಗಗಳು ಕನ್ನಡ ಚಿತ್ರರಂಗಕ್ಕಿಂತ ಸಫಲವಾಗಿದ್ದರೆ, ಅದಕ್ಕೆ ಅವೆರಡೂ ಭಾಷೆಗಳ ಹೆಸರೇ ಕಾರಣ ಎಂದು ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಹೇಳಿದ್ದಾರೆ.

'ಕನ್ನಡ'ವನ್ನು ಇಂಗ್ಲೀಷಿನಲ್ಲಿ 'TKANNADA' (T ಸೈಲೆಂಟು) ಮರುನಾಮಕರಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಕನ್ನಡ ಚಿತ್ರರಂಗ ಏರ್ಪಡಿಸಿದ್ದ ಭಾರಿ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, "ಸಂಖ್ಯಾಶಾಸ್ತ್ರ ವಿಜ್ಞಾನದ ಪ್ರಕಾರ ಹೆಸರಿನ ಮೊದಲಲ್ಲಿ 'T' ಅಕ್ಷರವಿದ್ದರೆ ಯಶಸ್ಸು ಗ್ಯಾರಂಟಿ. ತಮಿಳು ಮತ್ತು ತೆಲುಗು ಚಿತ್ರರಂಗಗಳು ಮುನ್ನಡೆ ಸಾಧಿಸಿರುವುದೇ ಹೀಗೆ" ಎಂದರು. ಚಿತ್ರರಂಗದಲ್ಲಿ ತಾವೇನಾದರೂ ಯಶಸ್ಸು ಪಡೆದಿದ್ದರೆ ಅದಕ್ಕೆ ತಮ್ಮ ಹೆಸರಿನ ಮೊದಲಲ್ಲೇ 'T' ಅಕ್ಷರ ಬರುವುದೇ ಕಾರಣ ಎಂದೂ ಸಹ ನುಡಿದರು.

ಅನಂತರ ಮಾತನಾಡಿದ ಖ್ಯಾತ ನಟ-ನಿರ್ದೇಶಕ ಉಪೇಂದ್ರ, ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ತಾರಾ ಹೆಸರೂ ಸಹ 'T' ಇಂದಲೇ ಶುರುವಾಗುವುದನ್ನು ನೆನಪಿಸಿದರು. ಇನ್ನುಮುಂದೆ ತಾವೂ ಸಹ ತಮ್ಮ ಹೆಸರನ್ನು UPENDRA ಇಂದ TUPENDRA (T ಸೈಲೆಂಟ್) ಎಂಬುದಾಗಿ ಬದಲಾಯಿಸಿಕೊಳ್ಳುವುದಾಗಿ ನುಡಿದರು.

ಅನಂತಮೂರ್ತಿ ವಿಷಾದ: ಕನ್ನಡ ಭಾಷೆಗೆ ಮರುನಾಮಕರಣ ಮಾಡುವುದನ್ನು ತಾವು ವಿರೋಧಿಸುವುದಾಗಿ ಖ್ಯಾತ ಸಾಹಿತಿ ಯು,ಆರ್.ಅನಂತಮೂರ್ತಿ ಹೇಳಿಕೆ ಇತ್ತಿದ್ದಾರೆ. ಇಂಗ್ಲೀಷನ್ನು ಸುಳ್ಳು ಹೇಳುವ ಭಾಷೆ ಎಂದು ಹೇಳಿಕೆ ನೀಡಿದ್ದನ್ನು ನೆನಪಿಸಿದ ಅವರು, ಸೈಲೆಂಟ್ ಅಕ್ಷರಗಳು ಮಹಾಭಾರತದ ಅಶ್ವತ್ಥಾಮ ಹತ: ಕುಂಜರ: ದಂತೆ ಸುಳ್ಳು ಹೇಳುತ್ತವೆ, ಅದನ್ನು ಕನ್ನಡದ ಹೆಸರಿಗೆ ಅಳವಡಿಸುವ ಒತ್ತಾಯ ಬಂದಿರುವುದಕ್ಕೆ ವಿಷಾದಿಸಿದರು.

ದೇ.ಜ.ಗೌ. ಸಿಟ್ಟು: ಕನ್ನಡ ಮರುನಾಮಕರಣ ವಿಚಾರದಲ್ಲಿ ಅನಂತಮೂರ್ತಿಯವರ ವಿರೋಧವನ್ನು ಖಂಡಿಸಿರುವ ದೇ. ಜವರೇ ಗೌಡರು, ಮರು ನಾಮಕರಣವನ್ನು ತಾವು ಸಂಪೂರ್ಣವಾಗಿ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. "ಆದರೆ, ಕನ್ನಡಕ್ಕೆ 'TKANNADA' ಎನ್ನುವುದರ ಬದಲು 'ಶಾಸ್ತ್ರೀಯ ಭಾಷೆ' ಎಂದು ಮರು ನಾಮಕರಣ ಮಾಡಿದಲ್ಲಿ, ಶಾಸ್ತ್ರೀಯ ಭಾಷೆ ವಿವಾದ ನಿಂತು, ತಮಿಳರು ಮತ್ತು ಅನಂತಮೂರ್ತಿ ಮಾತ್ರ ಅಲ್ಲ ಇಡೀ ಜಗತ್ತೇ ನಮ್ಮ ಭಾಷೆಯನ್ನು 'ಶಾಸ್ತ್ರ್‍ಈಯ ಭಾಷೆ' ಎಂದು ಕರೆಯುತ್ತದೆ" ಎಂದರು.

ಪೇಜಾವರರ ಒತ್ತಾಯ: ಕನ್ನಡಕ್ಕೆ ಮರುನಾಮಕರಣ ಮಾಡುವುದೇ ಆದಲ್ಲಿ, ಅದನ್ನು 'ದೇವ ಭಾಷೆ' ಎಂದೇ ನಾಮಕರಣ ಮಾಡಬೇಕೆಂದು ಪೇಜಾವರ ಮಠಾಧೀಶರು ಒತ್ತಾಯಿಸಿದ್ದಾರೆ. "ಆ ರೀತಿ ನಾಮಕರಣವಾದಲ್ಲಿ, 'ದೇವ ಭಾಷೆ'ಯನ್ನು ಮಾತನಾಡುವ ನಮ್ಮಲ್ಲಿ ದೈವಾಂಶಗಳು ಹೆಚ್ಚಾಗಿ ರಾಕ್ಷಸೀ ಪ್ರವೃತ್ತಿಗಳು ನಾಶವಾಗುವುದು ನಿಶ್ಚಿತ" ಎಂದರು.

ಜಮಾತ್ ಇಸ್ಲಾಮಿ ಸ್ವಾಗತ: ಕನ್ನಡಕ್ಕೆ 'ದೇವ ಭಾಷೆ' ಎಂದು ನಾಮಕರಣ ಮಾಡುವುದನ್ನು ತಾನು ಸ್ವಾಗತಿಸುವುದಾಗಿ ಜಮಾತ್ ಇಸ್ಲಾಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮರು ನಾಮಕರಣದ ನಂತರ ಎಲ್ಲ ಮತ ಬಾಂಧವರೂ ಕನ್ನಡವನ್ನು '786 ಭಾಷೆ' ಎಂದು ಕರೆಯ ಬೇಕೆಂದು ಅದು ಕರೆ ಇತ್ತಿದೆ.

3 Comments:

Anonymous Anonymous said...

ಅರೆ ಏನಿದು '786' ಭಾಷೆಯೆಂದರೇನು ಅರ್ಥವಾಗಲ್ಲಿಲ್ಲ,
ಅಂದಹಾಗೆ ಇಲ್ಲೊಂದು ಕಲಾ ಸಂಘ ಹೇಳುತ್ತಿದೆ ಕನ್ನಡ ಚಿತ್ರರಂಗ ಮಾತ್ರವೇ ಕನ್ನಡದ ಪ್ರತಿನಿಧಿಯಲ್ಲ. ಕನ್ನಡ ಸಿನಿಮಾ 'T' ಹಿಂದೆ ಹೋಗಿರಬಹುದು ಆದರೆ ಇಲ್ಲಿನ ನಾಟಕ ಸಂಘಗಳು ಎಲ್ಲಕ್ಕಿಂತ ಮುಂದಿವೆ. ಆದ್ದರಿಂದ ನಾವಿದನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದು ಪ್ರಕಟಿಸಿದ್ದಾರೆ.

March 18, 2006 11:59 AM  
Blogger V.V. said...

ಚಿತ್ರರಂಗ ಹಿಂದುಳಿದಿರುವಾಗ ನಾಟಕ ರಂಗ ಮಾತ್ರ ಮುಂದುವರೆದಿರುವುದು ಅತ್ಯಂತ ಕಳವಾಳಕಾರಿ ವಿಷಯ. 'ಜಗದೀಶನಾಡುವ ಜಗವೇ ನಾಟಕರಂಗ' ಎಂಬ ಚಿತ್ರಗೀತೆ ಕೇಳಿದ್ದೆವಾದರೂ, ಇದು ಇಷ್ಟೊಂದು ವಿಪರೀತಕ್ಕೆ ಹೋಗಬಹುದೆಂದೆಣಿಸಿರಲಿಲ್ಲ. ಸಿನೆಮೆ-ನಾಟಕಗಳ ನಡುವೆ ಹಿಂದುಳಿದ-ಮುಂದುವರೆದ ವರ್ಗ ಸಂಘರ್ಷ ಉಂಟಾಗುವ ಮುನ್ನವೇ ಸರ್ಕಾರ ಎಚ್ಚೆತ್ತು ಪ್ರತಿ ನಾಟಕಕ್ಕೆ ಹತ್ತು ಲಕ್ಷ ಸಬ್ಸಿಡಿ ಘೋಷಿಸಿ, ಒಮ್ಮೆಲೆ ಅವುಗಳ ಗುಣಮಟ್ಟ ಕಡಿಮೆಮಾಡುವ ಸಾಧ್ಯತೆ ಬಗ್ಗೆ ಯೋಚಿಸಬೇಕು.

ಇನ್ನು ೭೮೬ ವಿಷಯ. ಇದರ ಮಾಹಿತಿ ಇಲ್ಲಿದೆ. ಇಂಟರನೆಟ್ ಲಭ್ಯವಿಲ್ಲದಲ್ಲಿ ಬೆಂಗಳೂರಿನ ಆಟೋ ಹಿಂದೆ ನೋಡಿ ಅದರ ಚಾಲಕನನ್ನು ವಿಚಾರಿಸಬಹುದು.

ವಂದನೆಗಳೊಂದಿಗೆ.

ವಿ.ವಿ.

March 18, 2006 1:56 PM  
Blogger Sriram said...

ಅನಂತಮೂರ್ತಿಯವರ ಹೆಸರಿನಲ್ಲಿ ಸೈಲೆಂಟ್ ಅಲ್ಲದ T ಇರುವುದರಿಂದ ಅವರಿಗೆ ಯಾವ ವಿಪತ್ತೂ ಇಲ್ಲ. ಅವರೀಗ ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರನ್ನು ಪ್ರತಿನಿಧಿಸಲು ರಾಜ್ಯ ಸಭೆಯ ಚುನಾವಣೆಗೆ ತಮ್ಮ ನಾಮಾಂಕನವನ್ನ ಸಲ್ಲಿಸಿದ್ದಾರೆ.. will Ananthamurthy [voluntarily] get Bangalored? ಪಬ್ಬುಗಳನಗರಿ ಬೆಂಗಳೂರಿಗೆ ತೀರ್ಥಹಳ್ಳಿ ಅಂತ ಹೆಸರಿಟ್ಟರೆ - ಅನಂತಮೂರ್ತಿಗಳಿಗೂ ಖುಶಿ. ವೈಎನ್ಕ್ ನೆನಪಿಗೂ ಗೌರವ. ಮತ್ತು ಎಲ್ಲ ನಗರಗಳೂ ಒಂದೊಮ್ಮೆ ಹಳ್ಳಿಗಳಾಗಿದ್ದವು ಎಂಬ ಕ್ಲಾಸಿಕಲ್ ವಿಚಾರವೂ ನೆನಪಾಗುತ್ತಾ ಇರುತ್ತದೆ. ಮತ್ತು ನಿಮ್ಮ ಟಿ ಪ್ರಾಬ್ಲಮ್ಮೂ ಮುಗಿಯುತ್ತದೆ!!

March 19, 2006 10:09 AM  

Post a Comment

Links to this post:

Create a Link

<< Home