ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, March 15, 2006

ಪತ್ರಿಕೋದ್ಯಮದಲ್ಲಿ ಮಹಾನ್ ಸಾಧನೆ!


ಪತ್ರಿಕೋದ್ಯಮದಲ್ಲಿ ಮಹಾನ್ ಸಾಧನೆ!
ಕನ್ನಡ ಪ್ರಭ ಬ್ಯೂಟಿ ಪಾರ್ಲರ್ ಯೋಜನೆ!!


ಎಷ್ಟು ಪ್ರಯತ್ನ ಪಟ್ಟರೂ ಕನ್ನಡದಲ್ಲಿ ಮೂರನೆಯ ದಿನಪತ್ರಿಕೆಯಾಗಿಯೇ ಉಳಿದಿರುವ ಕನ್ನಡ ಪ್ರಭ ದಿನಪತ್ರಿಕೆ, ಪತ್ರಿಕೋದ್ಯಮದ ಜೊತೆಗೇ ಬ್ಯೂಟಿ ಪಾರ್ಲರ್ ಸಹ ತೆರೆಯುವ ಸನ್ನಾಹ ನಡೆಸಿರುವುದು ಇತ್ತೀಚೆಗೆ ಹೊರಗೆ ಬಂದಿದೆ.

ಈ ಪ್ರಯತ್ನ ಸದ್ಯಕ್ಕೆ ಅತ್ಯಂತ ಗುಟ್ಟಾಗಿದ್ದು, ಇಂಟರ್‌ನೆಟ್‍ನಲ್ಲಿ ಮಾತ್ರ ಲಭ್ಯವಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಚಾರವಾಗಿ ಮಾತನಾಡಿದ ಮೂಲಗಳ ಪ್ರಕಾರ, "ಕನ್ನಡ ಪ್ರಭ ಬ್ಯೂಟಿ ಪಾರ್ಲರ್" ಸದ್ಯಕ್ಕೆ ಉಪಮುಖ್ಯಮಂತ್ರಿಗಳಂತಹ ಅತಿ ಗಣ್ಯವ್ಯಕ್ತಿಗಳಿಗೆ ಮಾತ್ರ ಉಪಲಬ್ಧವಿದ್ದು, ಈ ಪ್ರಯತ್ನ ಸಫಲವಾದಲ್ಲಿ, ಊರೂರುಗಳಲ್ಲೂ ಹಲವಾರು "ಕನ್ನಡ ಪ್ರಭ ಬ್ಯೂಟಿ ಪಾರ್ಲರ್ ಮತ್ತು ಬಾರ್ಬರ್ ಶಾಪ್" ತೆರೆದು, ಪ್ರತಿ ಶೇವ್ ಜೊತೆಗೆ ಕನ್ನಡ ಪ್ರಭ ದಿನಪತ್ರಿಕೆಯನ್ನು ಉಚಿತವಾಗಿ ನೀಡುವ ಆಲೋಚನೆಯನ್ನು ಆ ಪತ್ರಿಕೆ ಹೊಂದಿದೆ.

ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ವಾಣಿಜ್ಯ-ವ್ಯಾಪಾರ ವಿಭಾಗದ ಪ್ರಾಧ್ಯಾಪಕ ಡಾ. ಬೇಜಾನ್ ಸಿಂಗ್ ಪ್ರಕಾರ, ಪ್ರತಿನಿತ್ಯ ಲಕ್ಷಾಂತರ ಮಂದಿ ಕನ್ನಡಿಗರು ಶೇವ್ ಮಾಡಿಕೊಳ್ಳುತ್ತಾರಾದ್ದರಿಂದ ಅವರಲ್ಲಿ ಕನಿಷ್ಠ ಕಾಲು ಭಾಗವನ್ನು ಆಕರ್ಷಿಸಿದರೂ, ಕನ್ನಡ ಪ್ರಭ ಕನ್ನಡದ ನಂಬರ್ ೧ ದಿನ ಪತ್ರಿಕೆಯಾಗುವುದರಲ್ಲಿ ಸಂದೇಹವೇ ಇಲ್ಲ.

ನಮ್ಮ ಪತ್ರಿಕೆಯ ವಾಣಿಜ್ಯ ವರದಿಗಾರರೊಂದಿಗೆ ಮಾತನಾಡಿದ ಡಾ.ಸಿಂಗ್ "ಇದು ಮುಂದೆ ಇತರ ರಾಜ್ಯಗಳಲ್ಲೂ ವಿಸ್ತರಿಸಿ ಅಮೃತಸರದಲ್ಲಿ 'ಪಂಜಾಬಿ ಪ್ರಭ ಶೇವಿಂಗ್ ಸಲೂನ್' ತೆರೆಯುವ ದಿನಗಳು ದೂರವೇನಿಲ್ಲ" ಎಂದರು.

ಉಪಮುಖ್ಯಮಂತ್ರಿಗಳ ಅರ್ಧ ಮೀಸೆ ತೆಗೆಯುವ ಮೂಲಕ "ಕನ್ನಡ ಪ್ರಭ ಬ್ಯೂಟಿ ಪಾರ್ಲರ್" ಉದ್ಘಾಟನೆ ನಡೆದ ವಿಷಯವನ್ನು ಮೊದಲ ಬಾರಿಗೆ ಹೊರಗೆಳೆದವರು ಸಂಪದದಲ್ಲಿ ಬರೆಯುವ ಶ್ಯಾಮ ಕಶ್ಯಪರವರು. ಮತ್ತು ಅದಕ್ಕೆ ಚಿತ್ರ ಸಹಿತ ಪುರಾವೆ ಒದಗಿಸಿದವರು ಹೆಚ್.ಪಿ.ನಾಡಿಗ್‌ರವರು.

ಕನ್ನಡ ಪತ್ರಿಕೆಯೊಂದು ಇಂತಹ ಒಂದು ಹೊಸ ಪ್ರಯೋಗ ಮಾಡುತ್ತಿರುವಾಗ ಅದರ ಬ್ಯುಸಿನೆಸ್ ಸೀಕ್ರೆಟ್‌ಗಳನ್ನು ಬಟಾ ಬಯಲು ಮಾಡಿರುವ ಈ ಈರ್ವರು ವ್ಯಕ್ತಿಗಳು ಮೂಲತಃ "ವಸ್ತು ನಿಷ್ಠ ವರದಿ", "ವಿಶ್ವಾಸರ್ಹತೆ" ಇತ್ಯಾದಿ ಅಪಾಯಕಾರಿ ಮೌಲ್ಯಗಳ ಉಗ್ರ ಪ್ರತಿಪಾದಕರಿರಬೇಕೆಂಬ ಸಂದೇಹವಿದೆ. ಈ ನಿಟ್ಟಿನಲ್ಲಿ ನಮ್ಮ ಪತ್ರಿಕೆ, ವಿಶ್ವಾದ್ಯಂತ ಇರುವ ನಮ್ಮ ಮೂರೂ ಜನ ಓದುಗರಲ್ಲಿ ವಿನಂತಿಸುವುದಿಷ್ಟೇ: ಈ ಸಂದೇಹಾಸ್ಪದ ವ್ಯಕ್ತಿಗಳ ಕಾರ್ಯ ಚಟುವಟಿಕೆಯ ತಾಣವಾಗಿರುವ ಸಂಪದದ ಮೇಲೆ ಸದಾ ನಿಗಾ ಇಡಿ.

ಅಪಾಯಕಾರಿ ಸ್ವಾಗತಾರ್ಹ ಬೆಳವಣಿಗೆ

ಈ ವಿಷಯವಾಗಿ ನಮ್ಮ ಪತ್ರಿಕೆ ಕನ್ನ್ನಡ ಪತ್ರಿಕೆಗಳ ಓದುಗರನ್ನು ಸಂದರ್ಶಿಸಿದಾಗ, ಕನ್ನಡ ಪ್ರಭದಿಂದ ಕತ್ತರಿಸಲ್ಪಟ್ಟ ಯಡಿಯೂರಪ್ಪನವರ ಮೀಸೆಯಂತೆ, ಓದುಗರೂ ಈ ವಿಚಾರದಲ್ಲಿ ಅರ್ಧಂಬರ್ಧವಾಗಿರುವುದು ತಿಳಿದು ಬಂತು.

ಚಾಮರಾಜನಗರದ ವೀರಪ್ಪನವರ ಪ್ರಕಾರ ಇದೊಂದು ಅಪಾಯಕಾರಿ ಬೆಳವಣಿಗೆ. "ಉಪಮುಖ್ಯ ಮಂತ್ರಿಗಳ ಅರ್ಧ ಮೀಸೆ ತೆಗೆಯುವ ಮೂಲಕ 'ಚೌರ' ಮಾಡಿರುವುದು, ಬೇರೊಂದು ಪತ್ರಿಕೆಯಲ್ಲಿರುವ ವರದಿಯನ್ನು ಸಾರಾಸಗಟು ಅನಾಮತ್ತಾಗಿ ಎತ್ತಿ ಲೇಖನ ಬರೆಯುವ 'ಚೌರ್ಯ'ದಂತೆಯೇ ಕೆಟ್ಟ ಕೆಲಸ.ಯಡಿಯೂರಪ್ಪನವರ ಅರ್ಧ ಮೀಸೆ ತೆಗೆದಿರುವ ಪತ್ರಿಕೆ ಐಶ್ವರ್ಯ ರೈ ಪೂರ್ತಿ ಮೀಸೆ ತೆಗೆದಿಲ್ಲ ಎಂಬುದಕ್ಕೆ ಗ್ಯಾರಂಟೀ ಆದರೂ ಏನು?"

ಆದರೆ, ಹತ್ತಿರದ ಕೇರಳದ ಮೀರಾ ಜಾಸ್ಮಿನ್ ಪ್ರಕಾರ, ಇದೊಂದು ಸ್ವಾಗತಾರ್ಹ ಬೆಳವಣಿಗೆ. "ಎಲ್ಲ ಪತ್ರಿಕೆಗಳೂ ಈ ರೀತಿ ಬ್ಯೂಟಿ ಪಾರ್ಲರ್ ದಂಧೆಗೆ ಇಳಿದರೆ, ಸಿನಿಮಾ ತಾರೆಯರು ಫೋಟೋ ಶೂಟ್ ಮುಂಚೆ ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ."

1 Comments:

Anonymous hpn said...

:))

hilarious ;)

Wish there were more brave journalists like that. :P

March 16, 2006 3:11 PM  

Post a Comment

<< Home