ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, March 21, 2006

ಭಾರೀ ಸ್ವಾಗತದಿಂದಾಗಿ ಬಜೆಟ್‌ನಲ್ಲಿ ಖೋತಾ!

ಭಾರೀ ಸ್ವಾಗತದಿಂದಾಗಿ ಬಜೆಟ್‌ನಲ್ಲಿ ಖೋತಾ!

ಬೆಂಗಳೂರು ಮಾರ್ಚ್ ೨೦, ೨೦೦೬: ಹಣಕಾಸು ಸಚಿವ ಯಡಿಯೂರಪ್ಪನವರು ಮಂಡಿಸಿದ ಬಜೆಟ್ ಅನ್ನು ಆಡಳಿತ ಪಕ್ಷಗಳ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರೆಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಪ್ರಜಾವಾಣಿ ವರದಿ ಮಾಡಿದೆ.

ನಮ್ಮ ಪತ್ರಿಕೋದ್ಯಮದಲ್ಲಿನ ಒಂದು ಮುಖ್ಯ ಕೊರತೆ ಎಂದರೆ lack of followup. ಉದಾಹರಣೆಗೆ, ಮೇಜು ಕುಟ್ಟಿ ಸ್ವಾಗತಿಸಿದ ವಿಷಯವನ್ನು ವರದಿಮಾಡಿದ ಪ್ರಜಾವಾಣಿ ಅನಂತರ ಮೇಜುಗಳ ಪರಿಸ್ಥಿತಿಯ ಕುರಿತು ಏನೂ ಬರೆಯಲಿಲ್ಲ. (ನೂರೆಂಟು ಸುಳ್ಳಿನ ಸಂಜಯರ ಗಮನಕ್ಕೆ).

ಬಜೆಟ್ ಮಂಡಿಸಿದ ನಂತರ ನಮ್ಮ ಪತ್ರಿಕೆಯ ವರದಿಗಾರರು ವಿಧಾನ ಸೌಧಕ್ಕೆ ಭೇಟಿ ಇತ್ತಾಗ ಕಂಡಿದ್ದು, ಶಾಸಕರ ದಾಳಿಗೆ ತುತ್ತಾಗಿ ಮುರಿದು ಬಿದ್ದಿದ್ದ ಮೇಜುಗಳು. ಒಂದು ಅಂದಾಜಿನ ಪ್ರಕಾರ ಮುರಿದ ಮೇಜುಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ೫೦ ಕೋಟಿ ರೂಪಾಯಿ ನಷ್ಟವಾಗಿದೆ.

ಈ ವಿಚಾರವನ್ನು ನಮ್ಮ ಪತ್ರಿಕೆ ಯಡಿಯೂರಪ್ಪನವರಲ್ಲಿ ಪ್ರಸ್ತಾಪಿಸಿದಾಗ, ಅವರು ಈ ವಿಷಯವನ್ನು ಒಪ್ಪಿಕೊಂಡರಾದರೂ, ಇದು ತಮ್ಮ ಬಜೆಟ್ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲವೆಂದರು.

ಆದರೆ, ನಂಬಲರ್ಹ ಮೂಲಗಳ ಪ್ರಕಾರ ಈ ಖೋತಾದಿಂದಾಗಿ ಹಳ್ಳಿಯ ಹೆಣ್ಣು ಮಕ್ಕಳಿಗೆ ಸೈಕಲ್ ನೀಡುವ 'ಭಾಗ್ಯದ ಲಕ್ಷ್ಮಿ ಬಾರಮ್ಮಾ' ಸ್ಕೀಮನ್ನು 'ಭಾಗ್ಯದ ಲಕ್ಷ್ಮಿ ಕೊಂಚ ನಿಧಾನಕ್ಕೆ ಬಾರಮ್ಮಾ' ಸ್ಕೀಮಿಗೆ ಬದಲಾಯಿಸಿ ಈ ವರ್ಷ ಸೈಕಲ್ ಸೀಟುಗಳನ್ನು ಮಾತ್ರ ವಿತರಿಸಿ ಉಳಿದ ಭಾಗಗಳನ್ನು ಮುಂದಿನ ವರ್ಷಗಳಲ್ಲಿ ವಿತರಿಸಲಾಗುವುದು.

ಕರ್ನಾಟಕದ ಏಕೆ, ಇಡೀ ಭಾರತದ ಮುಖ್ಯ ಸಮಸ್ಯೆಯಾಗಿರುವ ಜನ ಸಂಖ್ಯಾ ಸ್ಫೋಟದ ಬಗ್ಗೆ ಬಜೆಟ್ಟಿನಲ್ಲಿ ಹೆಚ್ಚು ಒತ್ತು ಕೊಡದಿರುವುದನ್ನು ಪ್ರಶ್ನಿಸಿದಾಗ,ಯಡಿಯೂರಪ್ಪನವರು ತಾವು ಇದಕ್ಕಾಗಿ "ಇಷ್ಟು ದಿನ ವೈಕುಂಠ ಎಷ್ಟು ದೂರ ಎನ್ನುತಲಿದ್ದೆ" ಸ್ಕೀಮ್ ರೂಪಿಸಿದ್ದು, ಅದರ ಮೂಲಕ ಜೀವನದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಐದು ಲಕ್ಷ ರೂ.ಗಳ ಮಾಸಾಶನ ನೀಡುವುದಾಗಿ ಘೋಶಿಸಿದರು. (ಈ ಮಾಸಾಶನ ಈಗಾಗಲೇ ಜೀವನದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಮಾತ್ರ ಲಭ್ಯವಿದ್ದು, ಆಸಕ್ತಿಯುಳ್ಳವರು ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನಗಾರ್‍ಡನ್ ಬಳಿ ಐವತ್ತು ರೂ. ಕೊಟ್ಟು ಫಾರಂ ಪಡೆಯಬಹುದು.)

ಮುಂದಿನ ವರ್ಷದ ಬಜೆಟ್ ವಿಚಾರ ಮಾತಾನಾಡುತ್ತಾ, ತಾವು ಅದಕ್ಕಾಗಿ ಅಧ್ಯಯನ ನಡೆಸುತ್ತಿದ್ದು, "ಪುರಂದರ ದಾಸರ ಕೃತಿಗಳು" ಪುಸ್ತಕವನ್ನು ಈಗಾಗಲೇ ಖರೀದಿಸಿರುವುದಾಗಿ ಹೇಳಿದರು.

Labels:

1 Comments:

Anonymous Anonymous said...

> ಬಜೆಟ್ ಮಂಡಿಸಿದ ನಂತರ ನಮ್ಮ ಪತ್ರಿಕೆಯ ವರದಿಗಾರರು ವಿಧಾನ ಸೌಧಕ್ಕೆ ಭೇಟಿ ಇತ್ತಾಗ

ಈ ವಾಕ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ-
- ನಿಮ್ಮ ವರದಿಗಾರ ಯಾವಾಗ ಬಜೆಟ್ ಮಂಡಿಸಿದ್ದು?
- ಯಡಿಯೂರಪ್ಪನವರು ಬಜೆಟ್ ಮಂಡಿಸಿದರು ಎಂದು ಎಲ್ಲ ಪತ್ರಿಕೆಗಳಲ್ಲಿ ಓದಿದ ನೆನಪು.
- ನಿಮ್ಮ ವರದಿಗಾರನೇ ಯಡಿಯೂರಪ್ಪ ಆಗಿರಲು ಸಾಧ್ಯವೇ?
- ವಿದೂಷಕ ಎಂಬ ನಾಮಾಂಕಿತವಾಗಿರುವಾಗ ಅವನು ಯಡಿಯೂರಪ್ಪ ಆಗಿರಲು ಹೇಗೆ ಸಾಧ್ಯ?
- ಯಡಿಯೂರಪ್ಪನವರು ವಿದೂಷಕ ಎಂದು ಇಂಡೈರೆಕ್ಟ್ ಆಗಿ ಹೇಳುತ್ತಿದ್ದೀರಾ?
- ವಿಧಾನಸೌಧದಲ್ಲೇ ಬಜೆಟ್ ಮಂಡಿಸುವುದು ವಾಡಿಕೆ. ನಿಮ್ಮ ವರದಿಗಾರ ಬಜೆಟ್ ಮಂಡಿಸಿದ್ದು ಎಲ್ಲಿ? "ಬಜೆಟ್ ಮಂಡಿಸಿದ ನಂತರ ನಮ್ಮ ಪತ್ರಿಕೆಯ ವರದಿಗಾರರು ವಿಧಾನ ಸೌಧಕ್ಕೆ ಭೇಟಿ ಇತ್ತಾಗ" ಎಂದು ಬರೆದಿರುವುದನ್ನು ಓದಿದರೆ ಅವರು ಬೇರೆ ಯಾವುದೋ ಜಾಗದಲ್ಲಿ ಬಜೆಟ್ ಮಂಡನೆ ಮಾಡಿದಂತಿದೆ. ಎಲ್ಲಿ?
- ವಿದೂಷಕನಿಗೆ ಪ್ರಾಣಹಾನಿಯ ಎಚ್ಚರಿಕೆಯನ್ನು ಯಾರಾದರು ನೀಡಿದ್ದಾರೋ? ಅದರಿಂದ ಭಯಭೀತನಾಗಿ ಆತ ಇನ್ನೆಲ್ಲೊ ಬಜೆಟ್ ಮಂಡನೆ ಮಾಡಿರಬಹುದೇ?

ಈ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದೂ ಅದನ್ನು ತಿಳಿಸದಿದ್ದಲ್ಲಿ ಭೂಮಿಗೆ ವಾಪಾಸು ಬರುವಾಗ ನುಚ್ಚುನೂರಾದ ಕೊಲಂಬಿಯಾ ಸ್ಪೇಸ್ ಶಟಲ್‌ನಂತೆ ನಿಮ್ಮ ತಲೆಯು ಪುಡಿಪುಡಿಯಾಗುವುದು ಎಂದು ಎಚ್ಚರಿಸಲಾಗುತ್ತಿದೆ.

-ವಾಯುಸುತ.

March 21, 2006 10:24 PM  

Post a Comment

Links to this post:

Create a Link

<< Home