ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 03, 2006

ಬರಹಗಾರರಿಗೆ ಬೆದರಿದ ಬುಶ್; ವಾಪಸ್ಸಾಗಲು ನಿರ್ಧಾರ
ಬರಹಗಾರರಿಗೆ ಬೆದರಿದ ಬುಶ್; ವಾಪಸ್ಸಾಗಲು ನಿರ್ಧಾರ

ನವ ದೆಹಲಿ, ಮಾರ್ಚ್ ೩, ೨೦೦೬: ಎಂತೆಂತಹ ಬೆದರಿಕೆ, ಆಮಿಷಗಳಿಗೂ ಬಗ್ಗದ ಅಮೆರಿಕದ ಅಧ್ಯಕ್ಷ ಬುಶ್, ಕನ್ನಡದ ಸಾಹಿತಿಗಳು ಬರೆದಿರುವ ಪತ್ರಕ್ಕೆ ಬೆದರಿ ಅಮೆರಿಕಕ್ಕೆ ವಾಪಸ್ಸಾಗಲು ನಿರ್ಧರಿಸುವ ವಿಷಯ ತಿಳಿದು ಬಂದಿದೆ.

ಬುಷ್ ಕೆಲಸದ ಕಾಂಟ್ರಾಕ್ಟ್ ಇನ್ನೆರಡು ವರ್ಷಗಳಲ್ಲಿ ಮುಗಿಯುತ್ತಿದ್ದು ಅನಂತರ ಇನ್ನಾವ ಕೆಲಸವೂ ದೊರೆಯುವ ಸೂಚನೆಗಳಿಲ್ಲ. ಜೊತೆಗೇ, ಔಟ್-ಸೋರ್ಸಿಂಗ್‌ನಿಂದಾಗಿ ಹಲವಾರು ಕೆಲಸಗಳು ಅಮೆರಿಕದಿಂದ ಭಾರತಕ್ಕೇ ಬರುತ್ತಿರುವುದನ್ನು ತಿಳಿದಿರುವ ಬುಶ್, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೆಕ್ಯೂರಿಟಿಯವರ ಕಣ್ತಪ್ಪಿಸಿ ಮೆಲ್ಲಗೆ ಡೆಲ್ಲಿಯಿಂದ ಕಳಚಿಕೊಂಡು ಬೆಂಗಳೂರಿಗೆ ಬಂದು ಕಾಲ್-ಸೆಂಟರ್ ಕೆಲಸ ಹುಡುಕವ ಯೋಚನೆ ಮಾಡುತ್ತಿದ್ದರು.

ಆದರೆ ಆ ಆಲೋಚನೆಗಳೆಲ್ಲಾ "ಬುಷ್ ಹಿಂದಿರುಗಿ ಹೋಗು", "ಬುಷ್ ಹಿಂದಕ್ಕೆ ಹೋಗು" ಎಂದು ಕನ್ನಡದ ಖ್ಯಾತ ಸಾಹಿತಿಗಳು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನೀರು ಪಾಲಾಗಿದೆ.

ನಮ್ಮ ವಿದೇಶಾಂಗ ವರದಿಗಾರರ ಪ್ರಕಾರ ಬುಷ್ ಶನಿವಾರ ಭಾರತದಿಂದ ಕಾಲುಕಿತ್ತುವುದು ಖಂಡಿತ. ಕೊನೆಯ ನಿಮಿಷದಲ್ಲಿ ಕೊಂಚ ಧೈರ್ಯ ಮಾಡಿ ಮೆಲ್ಲಗೆ ವಿಮಾನ ನಿಲ್ದಾಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗುವುದು ಕಷ್ಟ. ಈ ವಿಷಯದ ಸುಳಿವರಿತಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು, ಬುಷ್ ತನ್ನ ವಿಮಾನ ಹತ್ತಿ, ಅದು ಭಾರತದಿಂದ ಹೊರಡುವವರೆಗೆ ಆತನ ಮೇಲೆ ಸಂಪೂರ್ಣ ನಿಗಾ ಇಡಲು ನಿರ್ಧರಿಸಿವೆ.

ಜಿ.ಕೆ.ಗೋವಿಂದ ರಾವ್ ಸಂತಸ: ತಾವು ಬರೆದ ಪತ್ರಕ್ಕೆ ಬೆದರಿ ಬುಷ್ ವಾಪಸು ಹೋಗುತ್ತಿರುವುದು ತಮಗೆ ಅಪೂರ್ವ ಸಂತಸ ತಂದಿದೆಯೆಂದು ಖ್ಯಾತ ವಿಚಾರವಾದಿ ಮತ್ತು ನಟ ಜಿ.ಕೆ.ಗೋವಿಂದ ರಾವ್ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಜಾವಾಣಿ, ಗೋವಿಂದ್ ರಾವ್ ರವರನ್ನು ಸಂದರ್ಶಿಸಿತು.

ಮಜಾವಾಣಿ: ಜಿ.ಕೆ.ಜಿ. ಅಭಿನಂದನೆಗಳು. ಏನು ಫುಲ್ ಪಾರ್ಟೀನಾ?
ಜಿ.ಕೆ.ಜಿ.: ಥಾಂಕ್ ಯೂ.

ಮ.ವಾ.: ನಿಮ್ಮ ಪತ್ರದಲ್ಲಿ "ಭಾರತದ ಜನರ ಮೇಲಿನ ಪ್ರೀತಿಯಿಂದ ಬುಷ್ ಭಾರತಕ್ಕೆ ಭೇಟಿ ನೀಡಿಲ್ಲ" ಅಂತ ಬರೆದಿದ್ದೀರಿ.

ಜಿ.ಕೆ.ಜಿ.: ಹೌದು, ಹೌದು. ಆ ಅರಬ್ಬರನ್ನು ನೋಡಿ ಭಾರತೀಯರನ್ನು ಎಷ್ಟು ಪ್ರೀತಿಸ್ತಾರೆ. ಒಬ್ಬೊಬ್ಬರೂ ಮೂರೂ-ನಾಲ್ಕು ಜನ ಭಾರತದ ಹುಡುಗೀರ್ನ ಮದ್ವೆ ಮಾಡ್ಕೊಂಡು ಕರ್ಕೊಂಡು ಹೋಗ್ತಾರೆ. ಈಗ ಹೇಳಿ ಭಾರತದ ಜನರ ಮೇಲೆ ಯಾರಿಗೆ ಹೆಚ್ಚು ಪ್ರೀತಿ, ಬುಷ್‍ಗೋ ಅಥವಾ ಅರಬ್ಬರಿಗೋ?

ಮ.ವಾ.: ನೀವು...

ಜಿ.ಕೆ.ಜಿ.: ನಾವೂ ಆಷ್ಟೇ. ಅವಕಾಶ ಸಿಕ್ಕದ್ರೆ ಅಮೆರಿಕದ ಜನರಿಗೆ ನಮ್ಮ ಪ್ರೀತಿ ಪೂರ್ತಿ ತೋರಿಸಕ್ಕೆ ಸಿದ್ಧ. ನಮ್ಮ ಲೆಟರ್‌ನಲ್ಲೇ ಬರೆದಿದ್ದೀವಲ್ಲ "ಅಮೆರಿಕದ ಜನರನ್ನು ಪ್ರೀತಿಸುತ್ತೇವೆ" ಅಂತ.

ಮ.ವಾ.: ನಮ್ಮ ಪ್ರಶ್ನೆ ಅದಲ್ಲ. ನಿಮ್ಮ ಪತ್ರದಲ್ಲಿ "ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ" ಅಂತ ಬರೆದಿದ್ದೀರಲ್ಲ, ಇಲ್ಲಿಯವರೆಗೆ ಯಾವ, ಯಾವ ತ್ಯಾಗ ಮಾಡಿದ್ದೀರಿ, ಮುಂದೆ ಯಾವ, ಯಾವ ತ್ಯಾಗ ಮಾಡುವ ಆಲೋಚನೆ ಇದೆ?

(ನಮ್ಮ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಜಿ.ಕೆ.ಜಿ. ಉತ್ತರಿಸದೆ ಹೊರಟು ಬಿಟ್ಟರು. ನಮ್ಮ ಉದ್ದೇಶ ಅವರನ್ನು ಕೋಪ ತರಿಸಬೇಕೆಂದಿರಲಿಲ್ಲ. ಅವರೇನಾದರೂ ಬೆಲೆ ಬಾಳುವಂತಹ ವಸ್ತು ತ್ಯಾಗ ಮಾಡುವ ಯೋಚನೆ ಇದ್ದರೆ ಅದನ್ನು ಉಳಿದವರಿಗಿಂತ ಮುಂಚೆ ತಿಳಿಯ ಬೇಕೆನ್ನುವ ತವಕ ಅಷ್ಟೇ.)

Labels:

2 Comments:

Blogger mavinayanasa said...

ಪತ್ರಿಕೆ ಓದೋಕ್ಕೆ ಮಜ ಬರತ್ತೆ. ತಮಾಷೆಯಾಗಿದೆ. ಮನಮುದಗೊಳಿಸ್ತಿದ್ದೀರ. ಧನ್ಯವಾದಗಳು.
ಸೀರಿಯಸ್ಸಾಗಿ ಕೇಳ್ತಿದ್ದೀನಿ ಸಾರ್. ಇದು ನಿಜವಾಗಲೂ ನಡೆದ ಸಂದರ್ಶನವೇ? ಯಾಕೆ ಅಂದ್ರೆ ಜಿಕೆಜಿ ನೀವು ಹೇಳಿದಂತೆ ನಿಜವಾಗಿಯೂ ದೂರ್ವಾಸರು.

March 03, 2006 7:23 PM  
Blogger V.V. said...

ಸತ್ಯದ ವಿರುದ್ಧ ನಾವು ಸಮರ ಸಾರಿರುವಾಗ "ನಿಜವಾದ ಸಂದರ್ಶನವೇ?"
ನಾವು ಎಷ್ಟೇ ಎಚ್ಚರಿಕೆಯಿಂದಿದ್ದರೂ ನಮ್ಮ ಕಣ್ತಪ್ಪಿಸಿ ಹೊರಬರುವ ಸತ್ಯದ ಕುಟಿಲತನ ಕಂಡಾಗ ರಕ್ತ ಕುದಿಯುತ್ತದೆ.

ಮುಂದೆ ಹೀಗಾಗದಂತೆ ಮತ್ತಷ್ಟು ಎಚ್ಚರಿಕೆಯಿಂದಿರುತ್ತೇವೆ.

ವಂದನೆಗಳೊಂದಿಗೆ,

ಸಂಪಾದಕ

March 04, 2006 6:14 PM  

Post a Comment

Links to this post:

Create a Link

<< Home