ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, March 01, 2006

ಟಿಕೆಟ್ಟಿಗೂ ಕಾಸಿಲ್ಲದ ದಟ್ಟ ದೈನೇಸಿ ಬದುಕುಜೀವನದಲ್ಲಿ ಎಲ್ಲರೂ ಒಮ್ಮೆಯಾದರೂ ಇಂತಹ ಪ್ರಸಂಗ ಎದುರಿಸಿರುತ್ತಾರೆ. ಎಲ್ಲಾ ಇರುತ್ತೆ. ಆದರೆ ಏನೂ ಇರಲ್ಲ. ವಿದ್ಯೆ, ರೂಪ, ಯೌವ್ವನ, ಜನಬಲ, ಧನಬಲ ಎಲ್ಲಾ ಇದ್ದರೂ ಅವೆಲ್ಲಾ ಒಣ ಪ್ರತಿಷ್ಠೆಗಳಾಗಿ ಬಿಡುತ್ತವೆಯೇ ಹೊರತು, ಒಂದು ಸೆಕೆಂಡ್ ಕ್ಲಾಸ್ ರೈಲು ಟಿಕೆಟ್ ಕೊಡಿಸಲೂ ಅನುಪಯುಕ್ತವಾಗುತ್ತವೆ.

ಯಾಕೋ ಏನೋ ರಿಯೋ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆಯೇ ಅಮಾರ್ತ್ಯ ಸೆನ್ ನೆನಪಾದರು. ಆತನ ಜೀವನದ ದೃಶ್ಯಗಳು ನನ್ನ ಮನಸ್ಸಿನಲ್ಲಿ ನಾನಿನ್ನೂ ನೋಡಬೇಕಿರುವ ಸತ್ಯಜಿತ್ ರೇಯವರ ಚಿತ್ರಗಳಂತೆ ಒಂದೇ ಸಮನೆ ಹಾದು ಹೋದವು.

ಅಂದು ಅಮಾರ್ತ್ಯ ಸೆನ್ ಹೌರಾ ರೈಲು ನಿಲ್ದಾಣಕ್ಕೆ ಕಾಲಿಟ್ಟಾಗ ಆತನ ಬಳಿ ನೊಬೆಲ್ ಪ್ರಶಸ್ತಿ ಇರಲಿಲ್ಲ. ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಮಲಗಲು ಬೆರ್ತ್ ಇರಲಿ ಕೂಡಲೂ ಒಂದು ಸೀಟ್ ಸಹ ಇರಲಿಲ್ಲ. ಕ್ರೆಡಿಟ್ ಕಾರ್ಡ್ ಬಿಟ್ಟರೆ ಜೇಬಿನಲ್ಲಿ ಕಾಸಿರಲಿಲ್ಲ. ಆಗಷ್ಟೇ ತಿರುಪತಿಯಿಂದ ಬಂದಿದ್ದರಿಂದ ತಲೆಯಲ್ಲಿ ಕೂದಲೂ ಇರಲಿಲ್ಲ. ಆದರೆ, ಅವಷ್ಟನ್ನು ಬಿಟ್ಟರೆ, ಆತನಲ್ಲಿ ಎಲ್ಲವೂ ಇತ್ತು. ಆತ ಅರ್ಥ ಶಾಸ್ತ್ರದಲ್ಲಿ ಕೇಂಬ್ರಿಡ್ಜಿನಿಂದ ಪಡೆದ ಡಾಕ್ಟರೇಟ್ ಡಿಗ್ರೀ ಇತ್ತು. ಕಲಕತ್ತಾ, ದೆಹಲಿ, ಲಂಡನ್, ಹಾರ್ವರ್ಡ್‌ಗಳಲ್ಲಿ ಅರ್ಥಶಾಸ್ತ್ರ ಕಲಿಸಿದ್ದ ಅನುಭವವಿತ್ತು. 'ದಾರಿದ್ರ್ಯ ಮತ್ತು ಬರ' ವಿಷಯವಾಗಿ ತಾನೇ ಸ್ವತ: ಖುದ್ದಾಗಿ ಬರೆದಿದ್ದ ಪುಸ್ತಕವಿತ್ತು. ಹೆಂಡತಿ, ಮಕ್ಕಳು ಇದ್ದರು.

ಇಷ್ಟೆಲ್ಲಾ ಇದ್ದರೂ, ಅಂದು ಆತನ ಬಳಿ ಹೌರಾ-ದೆಹಲಿ ಎಕ್ಸ್‍ಪ್ರೆಸ್ ರೈಲು ಹತ್ತಲೂ ಕನಿಷ್ಠ ಒಂದು ಸೆಕೆಂಡ್ ಕ್ಲಾಸ್ ಟಿಕೆಟ್ ಇರಲಿಲ್ಲ. ಜೇಬಿನಲ್ಲಿ ಕ್ರೆಡಿಟ್ ಕಾರ್ಡ್ ಇದ್ದುದರಿಂದ ಹೇಗಾದರೂ ರೈಲು ಟಿಕೆಟ್ ಕೊಳ್ಳ ಬಹುದೆಂದು ಭಾವಿಸಿದ ಅಮಾರ್ತ್ಯ ಸೆನ್ ರೈಲು ನಿಲ್ದಾಣಕ್ಕೆ ಬಂದರೆ ಅಲ್ಲಿ ಯಾರೂ ಆತನನ್ನು ಕಣ್ಣೆತ್ತಿ ನೋಡಲಿಲ್ಲ. ಟಿಕೆಟ್ ಕೊಡುವುದಿರಲಿ, ಯಾರೂ ಹನಿ ಅನುಕಂಪವನ್ನೂ ತೋರಲಿಲ್ಲ. ಟಿ.ಸಿ.ಯನ್ನು ಗೋಗೆರೆದ. ಸ್ಟೇಷನ್ ಮಾಸ್ತರ ಬಳಿ ದೈನ್ಯತೆಯಿಂದ ಬೇಡಿಕೊಂಡ. ಆದರೆ ಯಾರೂ ಆತನನ್ನು ಮೂಸಿ ನೋಡಲಿಲ್ಲ. ಇದ್ಯಾವುದೋ ಮೆಂಟಲ್ ಕೇಸು ಎಂದು ಜನ ಗೇಲಿ ಮಾಡಿಕೊಳ್ಳುತ್ತಿದ್ದರು.

ಇಷ್ಟಾದರೂ ಸೆನ್ ತನ್ನ ಮೊದಲ ಜಾಳಿ ಬಿಡಲಿಲ್ಲ. ಯಾವುದೇ ಟಿ.ಸಿ. ಕಂಡರೂ "ಸಾರ್ ನನ್ನ ಬಳಿ ಕ್ರೆಡಿಟ್ ಕಾರ್‍ಡ್ ಇದೆ, ಡೆಲ್ಲಿ ಎಕ್ಸ್‍ಪ್ರೆಸ್‍ನಲ್ಲಿ ಒಂದು ಸೀಟ್ ಕೊಡಿಸಿ" ಎಂದೇ ಶುರುವಿಡುತ್ತಿದ್ದ. ಆದರೆ ಒಬ್ಬನೇ ಒಬ್ಬನೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಬದಲಿಗೆ, "ಈ..ಷ್, ಕೋರ್‍ಡ್" ಎಂದು ಅಪಹಾಸ್ಯ ಮಾಡುತ್ತಿದ್ದರು.

ತಾನು ಕಲಿತ ವಿದ್ಯೆ, ವಿದೇಶಿ ಡಾಕ್ಟರೇಟ್, ಜೇಬು ತುಂಬ ಇದ್ದ ಪ್ಲಾಟಿನಂ ಕ್ರೆಡಿಟ್ ಕಾರ್ಡುಗಳು ಯ:ಕಶ್ಚಿತ್ ಒಂದು ಸೆಕೆಂಡ್ ಕ್ಲಾಸ್ ರೈಲು ಟಿಕೆಟ್‍ಗೂ ಆಗದಿದ್ದರೆ ಅವನ್ನೆಲ್ಲ ಕಟ್ಟಿಕೊಂಡು ಆಗಬೇಕಾದ್ದೇನು ಎಂದು ಅನಿಸಿದರೂ, ಎಲ್ಲ ನೋವು, ಬೇಸರ, ಸುಸ್ತು, ಸಂಕಟಗಳನ್ನು ಅವುಡುಗಚ್ಚಿ ಸಹಿಸಿಕೊಂಡ. ಆದರೆ ಈ ಹೊತ್ತಿಗೆ ಸೆನ್ ಜರ್ಜರಿತನಾಗಿದ್ದ. ರೈಲು ಹೊರಡಲು ಹೆಚ್ಚಿನ ಸಮಯ ಇರಲಿಲ್ಲ, ಆದರೆ ರೈಲು ಹತ್ತಲು ಆತನ ಬಳಿ ಟಿಕೆಟ್ ಇರಲಿಲ್ಲ.

ಪಾಪ ಅಂದು ಆತ ಎಂತಹ ಅಸಹಾಯಕ ಸ್ಥಿತಿಯಲ್ಲಿದ್ದ ಎಂದರೆ, ಪ್ರಶಸ್ತಿ ಪತ್ರ, ಪುಸ್ತಕಗಳು, ಐ.ಬಿ.ಎಂ. ಲ್ಯಾಪ್‍ಟಾಪ್ ಎಲ್ಲವನ್ನೂ ಪ್ಲಾಟ್‍ಫಾರ್ಮ್ ಮೂರರ ಮುಂದಿನ ಕಸದ ತೊಟ್ಟಿಯಲ್ಲಿ ಎಸೆಯಲು ಹೊರಟ.

ಇದ್ದಕ್ಕಿದ್ದಂತೆ ನೆನಪಾಯಿತು. ಆತನ ಹೆಸರಲ್ಲಿ ಮೊದಲ ದರ್ಜೆ ಏರ್ ಕಂಡೀಷನ್ ಬೋಗಿಯಲ್ಲಿ ಸೀಟನ್ನು ಕಾಯ್ದಿರಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗೆ ತುಂಬಾ ತಡ ಆಗಿತ್ತು. ರೈಲ್ವೇ ಸಿಗ್ನಲ್‍ಮನ್ ಗಂಟೆ ಬಾರಿಸಲು ಶುರು ಮಾಡಿದ.

ಅಮಾರ್ತ್ಯ ಸೆನ್ ರೈಲಿನ ಕಡೆಗೆ ಓಡಿದ. ಆವನ ಬಾಯಲ್ಲಿದ್ದುದು ಒಂದೇ ಮಂತ್ರ "ನೋ ಬೆಲ್. ಪ್ಲೀಸ್, ನೋ ಬೆಲ್".

ಆದರೆ, ಅಷ್ಟರಲ್ಲಿ ಟ್ರೇನ್ ಹೊರಟೇ ಬಿಟ್ಟಿತು. ಸೆನ್‍ಗೆ, ವಿಮಾನವೇ ಗತಿಯಾಯ್ತು.

ಅಂದು "ನೊ ಬೆಲ್, ನೊ ಬೆಲ್" ಎಂದು ಕಿರುಚುತ್ತಾ ಓಡಿದ್ದ ಅಮಾರ್ತ್ಯ ಸೆನ್ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ.

ಈ ಪ್ರಸಂಗ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರತಿಬಾರಿ ಈ ಪ್ರಸಂಗ ನೆನಪಾದಾಗಲೂ "ಅಯ್ಯೋ ಈ ಪ್ರಸಂಗ ನಿಜವಾಗಬಾರದಿತ್ತೇ?!" ಎನ್ನಿಸುತ್ತೆ. ಒಂದೊಂದು ಅಚ್ಚರಿಗೊಳಿಸುವ ಪ್ರಸಂಗ ಸಹ ನಮ್ಮ ವಯಸ್ಸನ್ನು ಹೆಚ್ಚಿಸುತ್ತದೆ, ಆಸಕ್ತಿಯನ್ನು ಹೆಚ್ಚಿಸುತ್ತದೆ, ಜೀವನ ಪ್ರೀತಿಯನ್ನು, ಬೆರಗನ್ನೂ ಹೆಚ್ಚಿಸುತ್ತದೆ ಎಂಬ ನಂಬಿಕೆ ಸುಳ್ಳಲ್ಲ. ಈ ಪ್ರಸಂಗದಲ್ಲಿ ಕೊಂಚ ಮಟ್ಟಿಗಾದರೂ ಸತ್ಯವಿದ್ದಿದ್ದರೆ, ವಿಶ್ವೇಶ್ವರ ಭಟ್ಟ, ಬೆಳಗೆರೆಯಂತಹ ಲೇಖಕರು ತಮ್ಮ ಲೇಖನಗಳಲ್ಲಿ ಇಂತಹ ಪ್ರಸಂಗದ ಕುರಿತು ಬರೆದು ಹಲವು ಲಕ್ಷ ಜನ ಓದುಗರ ಆಯಸ್ಸನ್ನು ಹೆಚ್ಚಿಸ ಬಹುದಿತ್ತೆಂದು ಆಲೋಚನೆ ಬಂದಾಗ ಮನಸ್ಸು ಗದ್ಗದಿತವಾಗುತ್ತದೆ, ನೋವಾಗುತ್ತೆ.

ಕೊನೆಗೆ, ಲಕ್ಷಾಂತರ ಜನರ ಆಯಸ್ಸಿನ ಬಗ್ಗೆ ಯೋಚಿಸದ ಅಮಾರ್ತ್ಯ ಸೆನ್ ಮೇಲೆ ಕೋಪ ಬರುತ್ತದೆ.

4 Comments:

Anonymous Anonymous said...

Mr. Bhat...Please read this article...And for god's and kannadiga's sake, stop cheap journalism...

March 06, 2006 7:30 AM  
Blogger V.V. said...

ಅನಾಮಿಕರೆ,

ಏನೋ ಫ್ರೀ ಆಗಿ ಪೇಪರ್ ಓದ್ತಾ ಇದ್ದೀವಿ. ನೀವು "ಚೀಪ್ ಪತ್ರಿಕೋದ್ಯಮ"ದ ವಿರುದ್ಧ ಕೆಂಡ ಕಾರಿ, ಬಿಟ್ಟಿ ಪೇಪರ್ ಓದೋ ನಮ್ಮಂತಹವರ ತಲೆ ಮೇಲೆ ಚಪ್ಪಡಿ ಎಳೀತಿದ್ದೀರಲ್ಲ. ಇದು ಸರೀನಾ?

ವಂದನೆಗಳೊಂದಿಗೆ,

ವಿ.ವಿ.

March 15, 2006 2:58 PM  
Blogger ಶ್ರೀಕಾಂತ್ said...

non-fiction ಬರೆಯುವಾಗ fiction ಸೇರಿಸುವುದು ಹೊಸ ವಿಚಾರವೇನಲ್ಲ. ಈ ಲಿಂಕ್ ನೋಡಿ
http://kitabkhana.blogspot.com/2006/03/non-in-non-fiction.html

March 23, 2006 8:40 PM  
Blogger V.V. said...

ಶ್ರೀಕಾಂತ್-ರವರೇ,

ನೀವೆಂದಂತೆ nonfiction ಜೊತೆ fiction ಸೇರಿಸುವುದರಲ್ಲಿ ಹೊಸತನವೇನೂ ಇಲ್ಲ. ಅದು ಇನ್ನೂ ಹೆಚ್ಚಾಗಿ, ನಮ್ಮ ಸುದ್ದಿ ಪತ್ರಿಕೆಗಳು ಪೂರ್ತಿಯಾಗಿ 100% ಫ್ಯಾಕ್ಟ್-ಫ್ರೀ ಆಗಲಿ ಎಂಬುದೇ ನಮ್ಮ ಆಶಯ.

ವಂದನೆಗಳೊಂದಿಗೆ,

ವಿ.ವಿ.

March 23, 2006 9:53 PM  

Post a Comment

Links to this post:

Create a Link

<< Home