ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Friday, March 31, 2006

ದಾಂಪತ್ಯದಲ್ಲಿ ದಳ್ಳುರಿ: ಮರಾಠಿ ಸ್ನೇಹಿತನ ಪ್ರಶ್ನೆಗಳು

ಆಕಸ್ಮಿಕ ವಿಚ್ಛೇದನದ ಭೀತಿ ದೇಶದೆಡೆಯೆಲ್ಲಾ ಹರಡಿ ಕಾಳ್ಗಿಚ್ಚಿನಂತೆ ಧಾರಾಕಾರವಾಗಿ ಹರಿಯುತ್ತಿರುವಾಗ ದಾಂಪತ್ಯ ಜೀವನದ ಸಮಸ್ಯೆಗಳ ಬಗ್ಗೆ ಮರಾಠಿ ಜನರ ಮನದಲ್ಲೂ ಪ್ರಶ್ನೆಗಳು ಎದ್ದಿರುವುದು ಸಹಜವೇ ಆಗಿದೆ. ಡೈವೋರ್ಸಿಲ್ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಇನ್ಫೋಮರ್ಷಿಯಲ್ ಓದಿದ ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಲ್ಲಿ ಒಬ್ಬರಾದ ಮವಿನಯನಸರವರು, ತಮ್ಮ 'ಮರಾಠಿ ಸ್ನೇಹಿತನಿಗೆ" ಈ ಮಾತ್ರೆಗಳ ಬಳಕೆಯ ಕುರಿತು ಎದ್ದಿರುವ ಪ್ರಶ್ನೆಗಳನ್ನು ನಮಗೆ ಕಳುಹಿಸಿದ್ದಾರೆ.

ಇಂದು "ಮರಾಠಿ ಸ್ನೇಹಿತನಿಗೆ" ಕಾಡಿರುವ ಪ್ರಶ್ನೆಗಳು ಆಕಸ್ಮಿಕ ವಿಚ್ಛೇದನದ ಭಯದಿಂದ ಕಂಗೆಟ್ಟಿರುವ ಪ್ರತಿ ದಂಪತಿಗೂ ಎಂದಾದರೂ ಒಮ್ಮೆ ಕಾಡೇ ಇರುತ್ತವೆ ಎಂಬುದು ನಮ್ಮ ನಂಬಿಕೆ. ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವ ಈ ಸಮಸ್ಯೆಗಳನ್ನು ಆದಷ್ಟೂ ಬೇಗ ಬಗೆಹರಿಸಿಕೊಳ್ಳುವುದು ಒಳಿತು. ಇದರಲ್ಲಿ ನಾಚಿಕೆ, ಸಂಕೋಚ ಬೇಡ.

ಒಂದು ಪತ್ರಿಕೆಗೆ ಸಾಮಾಜಿಕ ಕಾಳಜಿ ಅತ್ಯಗತ್ಯ; ಸಮಾಜ ನಮ್ಮದೇ ಇರಲಿ, ಮರಾಠಿಗರದೇ ಇರಲಿ.

ದಾಂಪತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವು 'ದಾಂಪತ್ಯದಲ್ಲಿ ದಳ್ಳುರಿ:ಮರಾಠಿ ಸ್ನೇಹಿತನ ಪ್ರಶ್ನೆಗಳು' ಎಂಬ ಹೊಸ ಅಂಕಣಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.

ಪತಿ, ಪತ್ನಿ ಔರ್ ವೋಹ್ ಡೈವೋರ್ಸಿಲ್

೧. ಈ ಮಾತ್ರೆಯನ್ನು ಮಾರನೆಯ ದಿನ ಮತ್ತೆ ಉಪಯೋಗಿಸಬಹುದೇ? ಅಥವಾ ಮಾರನೆಯ ಬೆಳಗ್ಗೆ ತೆಗೆದು ಬಿಸಾಕಬೇಕೇ?

ಆದೇ ಮಾತ್ರೆಯನ್ನು ಮತ್ತೆ ಮತ್ತೆ ಉಪಯೋಗಿಸುವುದು ಅನಾರೋಗ್ಯಕರ - ಡೈವೋರ್ಸಿಲ್ ಮಾತ್ರೆಯ ತಯಾರಕರಿಗೆ. ಒಮ್ಮೆ ಬಳಸಿದ ನಂತರ ಆ ಮಾತ್ರೆಗಳನ್ನು ಮಕ್ಕಳಿಗೆ ಆಡಲು ಕೊಡುವುದು ಒಳಿತು.

೨. ಪುರುಷರಿಗೆ ಬೇರೆ ಮಾತ್ರೆ ಇದೆಯೇ? ನೊಂದ ಪತಿಗಳ ಸಂಘದ ವತಿಯಿಂದ ಬಂದಿರುವ ಪ್ರಶ್ನೆ.

ಪುರುಷರು ಡೈವೋರ್ಸಿಲ್ ಕಂಪೆನಿಯವರೇ ತಯಾರಿಸಿರುವ "ಲೇಬಿಯಮ್ ಕ್ಲಾಸಸ್" ಪಟ್ಟಿಗಳನ್ನು ಬಳಸಬಹುದು. ಇದೇ ಪರಿಹಾರ ಆಯುರ್ವೇದದಲ್ಲೂ ಲಭ್ಯವಿದ್ದು "ಅಧರ ನಿಬದ್ಧ" ಎಂಬ ಹೆಸರಿನಲ್ಲಿ ದೊರಕುತ್ತದೆ.

ಇದನ್ನು ಬಳಸುವ ಪುರುಷರು ಮಲಗುವ ಮುನ್ನ ಮುಖ ಮಾರ್ಜನ ಮಾಡಿ, ಲೇಬಿಯಮ್ ಕ್ಲಾಸಸ್ ಪಟ್ಟಿಯನ್ನು ಅಳತೆಗೆ ತಕ್ಕಂತೆ ಕತ್ತರಿಸಿ, ಎರಡೂ ತುಟಿಗಳನ್ನು ಒಳಗೆ ಮಾಡಿಕೊಂಡು, ಪಟ್ಟಿಯನ್ನು ಮೂಗಿನ ಕೆಳಗಿನಿಂದ ಗಲ್ಲದ ತುದಿಯವರೆಗೆ ಹಚ್ಚಿಕೊಳ್ಳಬೇಕು.

ಆಕಸ್ಮಿಕ ವಿಚ್ಛೇದನವನ್ನು ತಡೆಗಟ್ಟುವಲ್ಲಿ 'ಲೇಬಿಯಮ್ ಕ್ಲಾಸಸ್' 'ಡೈವೋರ್ಸಿಲ್' ಮಾತ್ರೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾದರೂ, ಇದರಲ್ಲಿ 'ಸೈಡ್ ಎಫ್ಫೆಕ್ಟ್ಸ್' ಕೂಡಾ ಹೆಚ್ಚಿಗೆ ಇವೆ. ಮೀಸೆ ಇರುವ ಪುರುಷರು ಈ ಪರಿಹಾರವನ್ನು ಬಳಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯುವುದು ಒಳಿತು.

೩.ಪತ್ನಿಯರು ಉಪಯೋಗಿಸುವುದರ ಬಗ್ಗೆ ಪತಿಗೆ ತಿಳಿಯಬಾರದೇ?

ಈ ವಿಷಯದ ಬಗ್ಗೆ ವೈದ್ಯಕೀಯ ವಲಯಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದು ದಡ ಮುಟ್ಟುವ ಯಾವುದೇ ಚಿಹ್ನೆಗಳೂ ಕಾಣುತ್ತಿಲ್ಲ. ಪತಿಗೆ ತಿಳಿಸದೆ ಮಾತ್ರೆಗಳನ್ನು ಕಿವಿಗೆ ನುಂಗಿಸುವ ಕ್ರಮವನ್ನು ಪಾತಿವ್ರತ್ಯದ ಭಂಗ ಎಂದು ಒಂದು ಗುಂಪು ವಾದಿಸುತ್ತಿದ್ದರೆ, ಇನ್ನೊಂದು ಗುಂಪಿನ ಪ್ರಕಾರ ಮಾತ್ರೆ-ಕಿವಿಗಳೆರಡೂ ಹೆಂಡತಿಯದೇ ಆಗಿರುವಾಗ, ಪತಿಯಿಂದ ಅಪ್ಪಣೆ ಪಡೆಯಬೇಕೆಂಬುದು ಅಮಾನವೀಯ ಮಹಿಳಾ ವಿರೋಧಿ ಧೋರಣೆಯಾಗಿದ್ದು ನಮ್ಮ ಸಮಾಜದಲ್ಲಿ ನಡೆಯುವ ಶೋಷಣೆಗೆ ನಿಲವುಗನ್ನಡಿ ಹಿಡಿದಂತಾಗಿದೆ.

ನಮ್ಮ ಅಭಿಪ್ರಾಯದಲ್ಲಿ ಪತಿಗೆ ತಿಳಿಸಿಯೇ ಈ ಮಾತ್ರೆಗಳನ್ನು ಬಳಸುವುದು ಒಳಿತು. ಹಾಗೆ ಮಾಡದಿದ್ದಲ್ಲಿ ಅದು ಪುರುಷನ ಭವಿಷ್ಯತ್ತಿನ ಮೇಲೆ ಅಪಾರ ಪ್ರಭಾವ ಬೀರುವ ಅಪಾಯ ಇರುತ್ತದೆ. ಹೀಗಾದಾಗ ಸೂಕ್ಷ್ಮ ಸಂವೇದನಾಶೀಲ ಪುರುಷರು ಗುಹೆಯೊಳಕ್ಕೆ ಹೋಗಲು ಹೆದರಿ ತಮ್ಮ ಆಪ್ಯತಾ ಆವರ್ತನದಲ್ಲಿ ಧನಾತ್ಮಕ ಅನುಭವದಿಂದ ವಂಚಿತರಾಗುತ್ತಾರೆ.

ಒಟ್ಟಿನಲ್ಲಿ ಹೇಳುವುದಾರೆ ಪತಿಗೆ ಹೇಳದೆ ಮಾತ್ರೆಗಳನ್ನು ಬಳಸುವುದರಿಂದ ಗಂಡಸರು ತಮ್ಮಲ್ಲೇ ದೋಷವಿದೆಯೇನೋ ಎಂದು ಭಾವಿಸಿ ತಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಟಿ.ವಿ, ಎಂಬ ಮಾಯಾಂಗನೆಯ ಮೊರೆಹೊಕ್ಕುತ್ತಾರೆ.

ಆದರೆ ಜಾಣ ಮಹಿಳೆ ತಾನು ಮಾತ್ರೆಗಳನ್ನು ಉಪಯೋಗಿಸುತ್ತಿರುವ ಸಂಗತಿಯನ್ನು ಪತಿಗೆ ತಿಳಿಸಿದಾಗ ಆತನಿಗೆ ಇದೊಂದು ಸಹಜ ಕ್ರಿಯೆ ಎಂದು ಅರಿವಾಗಿ ಗಂಡ-ಹೆಂಡತಿ ಇಬ್ಬರೂ ನಿರಮ್ಮಳರಾಗುತ್ತಾರೆ.

Thursday, March 30, 2006

ಡೈವೋರ್ಸಿಲ್ - ಅನ್ಯೋನ್ಯತೆಯ ಒಳಗುಟ್ಟು

ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಲದ ವ್ಯಕ್ತಿಯೊಬ್ಬ ನಿದ್ದೆಯಲ್ಲಿ ಆಕಸ್ಮಿಕವಾಗಿ ತನ್ನ ಪತ್ನಿಗೆ ಸೋಡಾಚೀಟಿ ನೀಡಿದ್ದು ವರದಿಯಾಗಿತ್ತು.

ಈ ಪಿಡುಗಿನಿಂದ ಭಯಭೀತರಾದ ಎಷ್ಟೋ ಮಂದಿ ದಂಪತಿಗಳು ಒಟ್ಟಿಗೇ ಮಲಗುವುದನ್ನೇ ಬಿಟ್ಟಿರುವ ಸುದ್ದಿಗಳೂ ಬಂದಿವೆ. ನಿದ್ದೆಯಲ್ಲಿ "ತಲಾಖ್" ಹೇಳಿ ಬಿಡಬಹುದೆಂಬ ಭಯದಿಂದ, ಎಷ್ಟೋ ಮಂದಿ ಪತಿಗಳು ನಿದ್ರಿಸುವುದನ್ನೇ ಬಿಟ್ಟಿರುವುದಾಗಿ ಸಹ ವರದಿಯಾಗಿದೆ.

ಆದರೆ ಈಗ ಈ ಭಯಂಕರ ಪಿಡುಗಿಗೆ ಪರಿಹಾರ ಸಿದ್ಧವಾಗಿದೆ.

ಆಕಸ್ಮಿಕ ವಿಚ್ಛೇದನದ ಭಯದಿಂದ ಕಂಗೆಟ್ಟಿದ್ದೀರೇ? ನಿದ್ರೆ ಮಾಡಲಾಗುತ್ತಿಲ್ಲವೇ? ಪತಿ-ಪತ್ನಿ ಒಟ್ಟಿಗೆ ಮಲಗಲಾಗುತ್ತಿಲ್ಲವೇ?

ಚಿಂತಿಸಬೇಡಿ. ಪ್ರತಿದಿನ ಮಲಗುವ ಮುನ್ನ ೨ ಡೈವೋರ್ಸಿಲ್ ಬಳಸಿ.

ಡೈವೋರ್ಸಿಲ್ ಬಳಸಿರಿ. ಮತ್ತೆ ಒಂದಾಗಿರಿ.

ಡೈವೋರ್ಸಿಲ್, ಅನ್ಯೋನ್ಯ ದಂಪತಿಗಳ ಅನ್ಯೋನ್ಯತೆಯ ಒಳಗುಟ್ಟು!
Divorcil prevents accidental divorces during sleep. Must be used as directed.

Directions: Take 2 divorcil capsules before bed. Insert one each into each ear. Please note that at this time Divorcil is approved for usage by married women only. Others may use at their own risk.

Labels:

Tuesday, March 28, 2006

'ನಿದ್ದೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಬದ್ಧ' - ಗೌಡಬೆಂಗಳೂರು, ಏಪ್ರಿಲ್ ೧, ೨೦೦೬: ನಿದ್ದೆಯಲ್ಲಿದ್ದಾಗ ತೆಗೆದುಕೊಳ್ಳುವ ನಿರ್ಧಾರಗಳು ಪ್ರಬುದ್ಧವಾಗಿದ್ದು ಅವುಗಳನ್ನು ತಿರಸ್ಕರಿಸುವುದು ಸಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿಕೆ ಇತ್ತಿದ್ದಾರೆ. "ನಿದ್ದೆಯಲ್ಲಿದ್ದಾಗ ಯಾರಾದರೂ ಕೆಟ್ಟ ನಿರ್ಧಾರ ತೆಗೆದುಕೊಂಡಿರುವ ವಿಚಾರ ನನಗೆ ಇಲ್ಲಿಯವರೆಗೆ ತಿಳಿದೇ ಇಲ್ಲ" ಎಂದಿರುವ ಅವರು, ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ಹಲವು ಮಹತ್ವದ ನಿರ್ಧಾರಗಳು ತಾವು ನಿದ್ರಿಸುತ್ತಿದ್ದಾಗಲೇ ತೆಗೆದುಕೊಂಡವು ಎಂದಿದ್ದಾರೆ.

ಪಶ್ಚಿಮ ಬಂಗಾಲದ ಜಲಪೈಗುರಿಯಲ್ಲಿ ಅಫ್ತಾಬ್ ಅನ್ಸಾರಿ ಎಂಬಾತ ತನ್ನ ನಿದ್ರೆಯಲ್ಲಿ ಮೂರು ಬಾರಿ "ತಲಾಖ್" ಎಂದಿದ್ದು ಆತನ ಪತ್ನಿಯ ಸ್ನೇಹಿತೆಯರ ಮೂಲಕ ಅಲ್ಲಿನ ಧಾರ್ಮಿಕ ಮುಖಂಡರನ್ನು ತಲುಪಿದೆ. ವಿಚಾರಣೆ ನಡೆಸಿದ ಪಂಚಾಯಿತಿ ಮುಖಂಡರು, ಅನ್ಸಾರಿ ಮತ್ತು ಆತನ ಪತ್ನಿಗೆ ವಿಚ್ಛೇದಿಸುವ ಯಾವುದೇ ಆಲೋಚನೆ ಇಲ್ಲದಿದ್ದರೂ, "ಷರಿಯತ್ ಪ್ರಕಾರ ನೀವು ಬೇರೆಬೇರೆ ಆಗಲೇ ಬೇಕು. ಇಲ್ಲದಿದ್ದರೆ ೧೦೦ ದಿನವಾದರೂ ಸೊಹೇಲ ತನ್ನ ತವರಿನಲ್ಲಿದ್ದು ಒಂದು ರಾತ್ರಿ ಮಟ್ಟಿಗೆ ಬೇರೊಬ್ಬನ ಜೊತೆ ಮಲಗಬೇಕು. ಆತ ತಲಾಖ್ ಹೇಳಿದ ನಂತರ ಈಕೆಯನ್ನು ಅನ್ಸಾರಿ ಮತ್ತೆ ಮದುವೆಯಾಗಬಹುದು..." ಎಂದಿದ್ದಾರೆ.

ಈ ವಿಚಾರದ ಕುರಿತು ಪ್ರಜಾವಾಣಿ ವರದಿ ಇಲ್ಲಿದೆ. ಆದರೆ ಈ ಧರ್ಮ ಸಂಕಟದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಆಕೆಯನ್ನು ವರಿಸಿ ಆ ದಂಪತಿಗಳಿಗೆ ಸಹಾಯ ನೀಡಲು ಜಲಪೈಗುರಿಯ ಅದೇ ಮುಸ್ಲಿಮ್ ಮುಖಂಡರು ಉದಾರ ಮನೋಭಾವದಿಂದ ಮುಂದಾಗಿರುವ ವಿಚಾರ ಆ ಪತ್ರಿಕೆ ವರದಿಮಾಡಿಲ್ಲ.

ಹಾಗೆಯೇ, ಪಂಚಾಯಿತಿ ತೀರ್ಪನ್ನು "ಮಹಿಳೆಯರ ಮೇಲೆಸಗಿದ ದೌರ್ಜನ್ಯ" ಎಂದು ಬಣ್ಣಿಸಿರುವ ಅನ್ಸಾರಿ, "ನಿದ್ದೆಯಲ್ಲಿ ತಲಾಖ್ ಹೇಳಿದವನು ನಾನು. ತಪ್ಪು ನನ್ನದು. ಆದ್ದರಿಂದ ಒಂದು ದಿನ ನನ್ನ ಪತ್ನಿಯ ತವರಿಗೆ ಹೋಗಿ ಬಂದು ೧೦೦ ದಿನ ಬೇರೊಬ್ಬರ ಪತ್ನಿಯ ಜೊತೆ ಮಲಗುವುದೇ ಸೂಕ್ತ ಶಿಕ್ಷೆ." ಎಂದಿರುವ ವಿಚಾರವೂ ಆ ಪತ್ರಿಕೆಯ ವರದಿಗಾರರಿಗೆ ತಿಳಿದಂತಿಲ್ಲ. (ಇದು ಆ ಪತ್ರಿಕೆಯ ಹಿಂದೂ ಪಕ್ಷಪಾತದ ಧೋರಣೆಯಿಂದಿರಬಹುದೇ?! ನೂರೆಂಟು ಸುಳ್ಳು ಸಂಜಯರ ಗಮನಕ್ಕೆ)

ಮುರಳಿ ಮನೋಹರ ಜೋಷಿ ಖಂಡನೆ
ಈ ವಿವಾದ ಈಗಾಗಲೇ ದೇಶಾದ್ಯಂತ ಮುಗಿಲುಮುಟ್ಟಿದ್ದು ನಿದ್ದೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬದ್ಧತೆಯ ಚರ್ಚೆಯ ಕಾರ್ಮೋಡಗಳು ಧಾರಾಕಾರವಾಗಿ ತಾರಕಕ್ಕೇರಿವೆ.

ಮಾಜಿ ಪ್ರಧಾನಿ ದೇವೇಗೌಡರು ಈ ನಿರ್ಧಾರಗಳು "ಬದ್ಧ"ವೆಂದಿರುವ ಬೆನ್ನಲ್ಲೇ, ಬಿ.ಜೆ.ಪಿ.ಯ ಮುರಳಿ ಮನೋಹರ ಜೋಷಿಯವರು ಮುಸ್ಲಿಂ ಮುಖಂಡರ ಈ ನಿರ್ಧಾರವನ್ನು ಖಂಡಿಸಿದ್ದಾರೆ. ವಿಚ್ಛೇದನದ ನಂತರ ದಂಪತಿಗಳು ಮತ್ತೆ ಒಂದುಗೂಡುವದನ್ನು "ಭಾರತೀಯ ಸಂಸ್ಕೃತಿಗೆ ಅಪಮಾನ" ಎಂದು ಬಣ್ಣಿಸಿದ ಜೋಷಿಯವರು, "ನಮ್ಮ ಸಂಸ್ಕೃತಿಯ ಪ್ರಕಾರ ಗಂಡ ಹೆಂಡಿರ ನಡುವಿನ ನಂಟು ಏಳೇಳು ಜನ್ಮಗಳದ್ದಾಗಿದ್ದು, ಅದೇನಾದರೂ ಮುರಿದು ಬಿದ್ದಲ್ಲಿ ಮತ್ತೆ ಒಂದಾಗಲು ಮುಂದಿನ ಜನ್ಮದವರೆಗೆ ಕಾಯಬೇಕು. ಆದ್ದರಿಂದ ಪತಿ-ಪತ್ನಿಯರನ್ನು ಶೀಘ್ರದಲ್ಲೇ ಒಂದುಗೂಡಿಸಲು ಸಹಗಮನವೇ ಸೂಕ್ತ ಮಾರ್ಗ" ಎಂದಿದ್ದಾರೆ.

Labels:

Thursday, March 23, 2006

ಕಲಾರಂಗವನ್ನು ಶೋಷಿಸುತ್ತಿರುವ ಕ್ಯಾಪಿಟಲಿಸಂ

ಇನ್ಸೂರೆನ್ಸ್ ಕಂಪೆನಿಗಳ ವಿರುದ್ಧ ರಂಗಕರ್ಮಿಗಳ ಚಳುವಳಿ

ಬೆಂಗಳೂರು, ಮಾರ್ಚ್ ೨೩, ೨೦೦೬: ಕ್ಲೇಮ್ ಹಣ ಕೇಳಲು ಹೋದ ಕೊಳಲು ವಿದ್ವಾಂಸರೊಬ್ಬರಿಗೆ ಇನ್ಸೂರೆನ್ಸ್ ಕಂಪೆನಿಯೊಂದರ ಅಧಿಕಾರಿಗಳು "ನಾಟಕ ಮಾಡ ಬೇಡಿ. ದುಡ್ಡು ಕೊಡಲು ಆಗುವುದಿಲ್ಲ" ಹೇಳಿದರೆಂದು ವರದಿಯಾದ ಹಿನ್ನೆಲೆಯಲ್ಲಿ, ನಾಟಕರಂಗದವರ ಬಗ್ಗೆ ತಾರತಮ್ಯ ತೋರುತ್ತಿರುವ ಇನ್ಸೂರೆನ್ಸ್ ಕಂಪೆನಿಗಳ ವಿರುದ್ಧ ಕನ್ನಡ ರಂಗಕರ್ಮಿಗಳು ಚಳುವಳಿ ಹೂಡಿದ್ದಾರೆ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ "ಕೊಳಲು ವಿದ್ವಾಂಸನಿಗೆ 'ನಾಟಕ ಆಡಬೇಡ' ಎನ್ನುವುದು, ಟಿ.ವಿ. ಧಾರವಾಹಿಯನ್ನು ಅಂತ್ಯವಿಲ್ಲದೆ ಮುಂದುವರೆಸುವ ನಿರ್ದೇಶಕನಿಗೆ 'ತಲೆ ತಿನ್ನಬೇಡ' ಎಂದಂತೆ. ಎರಡೂ ಸೂಕ್ತವಲ್ಲ. ಅದರಲ್ಲೂ ಎರಡನೆಯದು ಕಾನೂನು ಬಾಹಿರ." ಎಂದರು. ಮುಂದುವರೆಯುತ್ತಾ "ಇಂದು ನಾಟಕರಂಗದ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ ನಾಳೆ ಸರ್ವವ್ಯಾಪಿಯಾಗಿ ಸಂಗೀತರಂಗವನ್ನೂ ಮುಟ್ಟಿ ಬೆಂಗಳೂರಿನ ಕೊಳಲು ವಿದ್ವಾಂಸರಿಗೂ ಅದರ ಬಿಸಿ ತಟ್ಟುವುದರಲ್ಲಿ ಸಂದೇಹವೇ ಇಲ್ಲ" ಎಂದರು.

ನಂಬಲರ್ಹ ಮೂಲಗಳ ಪ್ರಕಾರ ಕಲಾರಂಗವನ್ನು ಶೋಷಿಸುತ್ತಿರುವ ಕ್ಯಾಪಿಟಲಿಸಂ ಕುತಂತ್ರವನ್ನು ಬಯಲಿಗೆಳೆಯುವ ಸೀತಾರಾಂರವರ 'ಮರ್ಮ' ಸದ್ಯದಲ್ಲಿಯೇ ಕಿರುತೆರೆಗೆ ಬರಲಿದ್ದು ಅದರ ಪ್ರಾಯೋಜಕತ್ವವನ್ನು ಪಡೆಯಲು ಹಲವಾರು ವಿದೇಶಿ ಬ್ಯಾಂಕುಗಳು ಪೈಪೋಟಿಯಲ್ಲಿ ತೊಡಗಿವೆ.

"ಕೊಳಲು ವಾದನ - ನಾಟಕಗಳ ನಡುವಿನ ವ್ಯತ್ಯಾಸ ತಿಳಿಯದ ಇನ್ಸೂರೆನ್ಸ್ ಕಂಪೆನಿ" - ಕೊಳಲು ವಿದ್ವಾಂಸ

ಟೈಂ ಪಾಸಾಗಲಿ ಅಂತ ಮನೆ ಮುಂದೆ ಕುಳಿತುಕೊಂಡು ಗುರಿ ಪರೀಕ್ಷೆಮಾಡಲು ಎದುರು ಮನೆಯವರ ಕಿಟಕಿಯ ಮೂಲಕ ಪುಟ್ಟ ಕಲ್ಲುಗಳನ್ನು ತೂರುತ್ತಿರುವಾಗ, ಎದುರು ಮನೆಯಾಕೆ ಹೊರ ಬಂದು, "ಏನು, ಕೈ ಕಡೀತಿದ್ಯಾ?" ಎಂದು ಪ್ರಶ್ನಿಸಿದರೆ, "ಕಲ್ಲು ತೂರುವುದಕ್ಕೂ" - "ಕೈ ಕಡಿಯುವುದಕ್ಕೂ" ವ್ಯತ್ಯಾಸ ತಿಳಿಯದ ಗೃಹಿಣಿಯ ಬಗೆಗೆ ನಿಮಗೆ ಆಶ್ಚರ್ಯವಾಗಬಹುದು.

ಬೆಂಗಳೂರಿನ ನಿವಾಸಿ, ಕೊಳಲು ವಿದ್ವಾಂಸ ಶ್ರೀ ರಾವ್ ರವರಿಗೂ ಇಂತಹುದೇ ಅನುಭವವಾಗಿರುವುದು ಸಂಜೆವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ರಾವ್ ರವರು ಪಕ್ಕದ ಮನೆಯ ಕಿಟಕಿಯ ಮೂಲಕ ಕಲ್ಲು ತೂರುತ್ತಿರಲಿಲ್ಲ. (ನಿಜ ಹೇಳಬೇಕೆಂದರೆ, ಇನ್ನೂ ಹಲವಾರು ವ್ಯತ್ಯಾಸಗಳಿವೆ, ಆದರೆ, ಅವೆಲ್ಲಾ ನಮ್ಮ ಅಭಿಪ್ರಾಯದಲ್ಲಿ ನಮ್ಮ ಪತ್ರಿಕೆಯ ಮೂಲೋದ್ದೇಶಕ್ಕೇ ಅಡ್ಡಿ ಬರುವ ಕ್ಷುಲ್ಲಕ ವಿವರಗಳು.)

ಆಗಿದ್ದಿಷ್ಟು. ಕೊಳಲು ವಿದ್ವಾಂಸ ರಾವ್ ಅವರು ತಮ್ಮ ಮನೆಯ ಮುಂದೆ ತಮ್ಮ ಮೋಟಾರ್ ಸೈಕಲ್ಲು ಬಿಟ್ಟು ಕಾಫಿ ಕುಡಿಯಲು ಮನೆಯ ಒಳಗೆ ಹೋಗಿ ಹೊರ ಬಂದಾಗ ಯಾರೋ "ಅಪರಿಚಿತ ದುಷ್ಕರ್ಮಿಗಳು" ಮೋಟಾರ್ ಬೈಕನ್ನು ಕದ್ದೊಯ್ದಿದ್ದರು. ತಮ್ಮ ಪರಿಚಿತ ದುಷ್ಕರ್ಮಿಗಳು ಯಾರೂ ಅದನ್ನು ಕದ್ದಿಲ್ಲವೆಂದು ಅಪಾರ ಭರವಸೆ ಹೊಂದಿರುವ ಅವರು, ಪೋಲಿಸ್ ಠಾಣೆಯಲ್ಲಿ ದೂರಿತ್ತರಾದರೂ ಅದರಿಂದ ಉಪಯೋಗ ಆಗಲಿಲ್ಲ.

ಹೋಗಲಿ ಕ್ಲೇಮ್ ಹಣವನ್ನಾದರೂ ತೆಗೆದುಕೊಳ್ಳೋಣ ಎಂದು ಇನ್ಸೂರೆನ್ಸ್ ಕಂಪೆನಿಯ ಆಫೀಸಿಗೆ ಹೋದರೆ, ಇನ್ಸೂರೆನ್ಸ್ ಕಂಪೆನಿಯೊಂದರ ಅಧಿಕಾರಿಗಳು "ನಾಟಕ ಮಾಡ ಬೇಡಿ. ದುಡ್ಡು ಕೊಡಲು ಆಗುವುದಿಲ್ಲ" ಎಂದು 'ಬೆದರಿಕೆ' ಹಾಕಿದರು.

ರಾವ್ ಅವರು ಹೇಳುವಂತೆ, ಅವರೆಂದೂ ನಾಟಕ ಆಡಿಯೇ ಇಲ್ಲ. ಶಾಲೆಯಲ್ಲಿದ್ದಾಗ ಒಮ್ಮೆ ಅವಕಾಶ ಇತ್ತಾದರೂ, ಸ್ಟೇಜ್ ಫಿಯರ್ರಿನಿಂದ ರಂಗ ಮಂಚ ಏರಲೇ ಇಲ್ಲ. ನಾಟಕ ಆಡುವುದಿರಲಿ, ಅವರು ಒಂದಾದರೂ ನಾಟಕ ಸಹ ನೋಡಿಲ್ಲ.

'ನಿರಾಕರಣೆ - ಬೆದರಿಕೆಗಳ ನಡುವಿನ ವ್ಯತ್ಯಾಸ ತಿಳಿಯದ ಕೊಳಲು ವಿದ್ವಾಂಸ' - ಇನ್ಸೂರೆನ್ಸ್ ಕಂಪೆನಿ

ತಾವು "ನಾಟಕ ಮಾಡ ಬೇಡಿ. ದುಡ್ಡು ಕೊಡಲು ಆಗುವುದಿಲ್ಲ" ಎಂದು ಕ್ಲೇಮ್ ನಿರಾಕರಿಸಿದ್ದನ್ನೇ "ಬೆದರಿಕೆ" ಎಂದೆನ್ನುವ ಕೊಳಲು ವಿದ್ವಾಂಸರು ಅವೆರಡರ ನಡುವಿನ ವ್ಯತ್ಯಾಸ ತಿಳಿಯಲು ಕನ್ನಡ ವಿದ್ವಾಂಸರ ಬಳಿಗೆ ಹೋಗುವುದು ಸೂಕ್ತ ಎಂದ್ದು ಇನ್ಸೂರೆನ್ಸ್ ಕಂಪೆನಿಯವರು ಹೇಳಿಕೆ ನೀಡಿದ್ದಾರೆ.

Wednesday, March 22, 2006

ಚಿಂತನ - ಮಂಥನ

ಆಕಾಂಕ್ಷೆ
ಸರ್ಕಸ್ಸಿನಲ್ಲಿ ಮಂಗಗಳು ಪ್ಯಾಂಟ್ ಹಾಕಿಕೊಂಡು ಸೈಕಲ್ ತುಳಿಯುವುದನ್ನು ನೋಡಿ ಚಪ್ಪಾಳೆ ತಟ್ಟುವವರಿಗೆ ನಾನು ಹೇಳುವುದಿಷ್ಟೇ: ನಿಮಗೂ ಬಾಲ ಇದ್ದು, ನೀವೂ ಸೈಕಲ್ ಕಲಿತಿದ್ದಿದ್ದರೆ, ನಿಮಗೂ ಸರ್ಕಸ್ಸಿನ್ನಲ್ಲಿ ಅವಕಾಶ ಸಿಕ್ಕುತ್ತಿತ್ತು.

ಮೂರ್ಖತನ
ಸೈಕಲ್ಲುಗಳಿಗೆ ಮನುಷ್ಯನಂತೆಯೇ ಜೀವ ಇದ್ದು, "ನನ್ನನ್ನು ಒದೆಯ ಬೇಡ" ಎಂದು ಅದು ದೈನ್ಯತೆಯಿಂದ ಪ್ರತಿ ದಿನ ಕೇಳಿ ಕೊಂಡಿದ್ದರೆ, "ಒದೆಯುವುದಕ್ಕೂ" "ತುಳಿಯುವುದಕ್ಕೂ" ನಡುವಿನ ಅಂತರ ತಿಳಿಯದ ಆ ಮೂರ್ಖ ಸೈಕಲ್ಲುಗಳಿಗೆ ಜೀವವಿಲ್ಲದಿರುವುದೇ ವಾಸಿ ಎನಿಸುತ್ತದೆ.

Labels:

Tuesday, March 21, 2006

ಭಾರೀ ಸ್ವಾಗತದಿಂದಾಗಿ ಬಜೆಟ್‌ನಲ್ಲಿ ಖೋತಾ!

ಭಾರೀ ಸ್ವಾಗತದಿಂದಾಗಿ ಬಜೆಟ್‌ನಲ್ಲಿ ಖೋತಾ!

ಬೆಂಗಳೂರು ಮಾರ್ಚ್ ೨೦, ೨೦೦೬: ಹಣಕಾಸು ಸಚಿವ ಯಡಿಯೂರಪ್ಪನವರು ಮಂಡಿಸಿದ ಬಜೆಟ್ ಅನ್ನು ಆಡಳಿತ ಪಕ್ಷಗಳ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರೆಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಪ್ರಜಾವಾಣಿ ವರದಿ ಮಾಡಿದೆ.

ನಮ್ಮ ಪತ್ರಿಕೋದ್ಯಮದಲ್ಲಿನ ಒಂದು ಮುಖ್ಯ ಕೊರತೆ ಎಂದರೆ lack of followup. ಉದಾಹರಣೆಗೆ, ಮೇಜು ಕುಟ್ಟಿ ಸ್ವಾಗತಿಸಿದ ವಿಷಯವನ್ನು ವರದಿಮಾಡಿದ ಪ್ರಜಾವಾಣಿ ಅನಂತರ ಮೇಜುಗಳ ಪರಿಸ್ಥಿತಿಯ ಕುರಿತು ಏನೂ ಬರೆಯಲಿಲ್ಲ. (ನೂರೆಂಟು ಸುಳ್ಳಿನ ಸಂಜಯರ ಗಮನಕ್ಕೆ).

ಬಜೆಟ್ ಮಂಡಿಸಿದ ನಂತರ ನಮ್ಮ ಪತ್ರಿಕೆಯ ವರದಿಗಾರರು ವಿಧಾನ ಸೌಧಕ್ಕೆ ಭೇಟಿ ಇತ್ತಾಗ ಕಂಡಿದ್ದು, ಶಾಸಕರ ದಾಳಿಗೆ ತುತ್ತಾಗಿ ಮುರಿದು ಬಿದ್ದಿದ್ದ ಮೇಜುಗಳು. ಒಂದು ಅಂದಾಜಿನ ಪ್ರಕಾರ ಮುರಿದ ಮೇಜುಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ೫೦ ಕೋಟಿ ರೂಪಾಯಿ ನಷ್ಟವಾಗಿದೆ.

ಈ ವಿಚಾರವನ್ನು ನಮ್ಮ ಪತ್ರಿಕೆ ಯಡಿಯೂರಪ್ಪನವರಲ್ಲಿ ಪ್ರಸ್ತಾಪಿಸಿದಾಗ, ಅವರು ಈ ವಿಷಯವನ್ನು ಒಪ್ಪಿಕೊಂಡರಾದರೂ, ಇದು ತಮ್ಮ ಬಜೆಟ್ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲವೆಂದರು.

ಆದರೆ, ನಂಬಲರ್ಹ ಮೂಲಗಳ ಪ್ರಕಾರ ಈ ಖೋತಾದಿಂದಾಗಿ ಹಳ್ಳಿಯ ಹೆಣ್ಣು ಮಕ್ಕಳಿಗೆ ಸೈಕಲ್ ನೀಡುವ 'ಭಾಗ್ಯದ ಲಕ್ಷ್ಮಿ ಬಾರಮ್ಮಾ' ಸ್ಕೀಮನ್ನು 'ಭಾಗ್ಯದ ಲಕ್ಷ್ಮಿ ಕೊಂಚ ನಿಧಾನಕ್ಕೆ ಬಾರಮ್ಮಾ' ಸ್ಕೀಮಿಗೆ ಬದಲಾಯಿಸಿ ಈ ವರ್ಷ ಸೈಕಲ್ ಸೀಟುಗಳನ್ನು ಮಾತ್ರ ವಿತರಿಸಿ ಉಳಿದ ಭಾಗಗಳನ್ನು ಮುಂದಿನ ವರ್ಷಗಳಲ್ಲಿ ವಿತರಿಸಲಾಗುವುದು.

ಕರ್ನಾಟಕದ ಏಕೆ, ಇಡೀ ಭಾರತದ ಮುಖ್ಯ ಸಮಸ್ಯೆಯಾಗಿರುವ ಜನ ಸಂಖ್ಯಾ ಸ್ಫೋಟದ ಬಗ್ಗೆ ಬಜೆಟ್ಟಿನಲ್ಲಿ ಹೆಚ್ಚು ಒತ್ತು ಕೊಡದಿರುವುದನ್ನು ಪ್ರಶ್ನಿಸಿದಾಗ,ಯಡಿಯೂರಪ್ಪನವರು ತಾವು ಇದಕ್ಕಾಗಿ "ಇಷ್ಟು ದಿನ ವೈಕುಂಠ ಎಷ್ಟು ದೂರ ಎನ್ನುತಲಿದ್ದೆ" ಸ್ಕೀಮ್ ರೂಪಿಸಿದ್ದು, ಅದರ ಮೂಲಕ ಜೀವನದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಐದು ಲಕ್ಷ ರೂ.ಗಳ ಮಾಸಾಶನ ನೀಡುವುದಾಗಿ ಘೋಶಿಸಿದರು. (ಈ ಮಾಸಾಶನ ಈಗಾಗಲೇ ಜೀವನದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಮಾತ್ರ ಲಭ್ಯವಿದ್ದು, ಆಸಕ್ತಿಯುಳ್ಳವರು ಹರಿಶ್ಚಂದ್ರ ಘಾಟ್ ಅಥವಾ ವಿಲ್ಸನಗಾರ್‍ಡನ್ ಬಳಿ ಐವತ್ತು ರೂ. ಕೊಟ್ಟು ಫಾರಂ ಪಡೆಯಬಹುದು.)

ಮುಂದಿನ ವರ್ಷದ ಬಜೆಟ್ ವಿಚಾರ ಮಾತಾನಾಡುತ್ತಾ, ತಾವು ಅದಕ್ಕಾಗಿ ಅಧ್ಯಯನ ನಡೆಸುತ್ತಿದ್ದು, "ಪುರಂದರ ದಾಸರ ಕೃತಿಗಳು" ಪುಸ್ತಕವನ್ನು ಈಗಾಗಲೇ ಖರೀದಿಸಿರುವುದಾಗಿ ಹೇಳಿದರು.

Labels:

ಮಹಾ ಪ್ರಧಾನ ವ್ಯವಸ್ಥಾಪಕ ಸಂಪಾದಕನ ಮಾತು


ವಿ-ಚಿತ್ರಾನ್ನವಾದರೂ ಎದೆಗುಂದದ ಮಜಾವಾಣಿ
(ಮಹಾ ಪ್ರಧಾನ ವ್ಯವಸ್ಥಾಪಕ ಸಂಪಾದಕನ ಮಾತು)

ಇಂದು ಬೆಳಿಗ್ಗೆ ಎಂದಿನಂತೆ ಮಜಾವಾಣಿ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ಹಿಟ್ ಕೌಂಟರ್ ಮುಖಕ್ಕೇ ಹೊಡೆದಂತಾಯಿತು. ಒಂದು ನಿಮಿಷ ಸಂಶಯ ಆಯಿತು: ಇದು ಮಜಾವಾಣಿನೋ ಅಥವಾ ನಿಜವಾಗಿಯೂ ಕನ್ನಡವೇ ನಿತ್ಯಾನೋ ಅಂತ.

ನಾನು ನೋಡುತ್ತಿದ್ದಿದ್ದು ಮಜಾವಾಣೀನೇ ಅಂತ ಖಾತ್ರಿಯಾದಮೇಲೆ, ನಮ್ಮಜ್ಜಿಗೆ ಹಲವು ವೀಕೆಂಡುಗಳ ಕಾಲ ಇಂಟರ್‌ನೆಟ್ ಬ್ರೌಸಿಂಗ್ ಹೇಳಿಕೊಟ್ಟು 'ಅಜ್ಜಿ, ಸಮಯ ಸಿಕ್ಕಾಗಲೆಲ್ಲಾ ಮಜಾವಾಣಿಗೆ ಹೋಗಿ ಬ್ರೌಸರ್ ರೆಫ್ರೆಶ್ ಮಾಡಿ' ಅಂತ ಹೇಳಿದ್ದು ನೆನಪಾಗಿ, ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಲ್ಲಿ ಒಬ್ಬರಾದ ನಮ್ಮ ಅಜ್ಜಿಯ ಮೇಲೆ ಅಪಾರ ಅಭಿಮಾನ ಉಂಟಾಗಿ ಅವರಿಗೆ ಫೋನ್ ಮಾಡಿದಾಗ ತಿಳಿದದ್ದು: ೧. ದಟ್ಸ್ ಕನ್ನಡದಲ್ಲಿ ಮಜಾವಾಣಿ ವಿ-ಚಿತ್ರಾನ್ನಾವಗಿದೆ ೨. ಮಜಾವಾಣಿಗೆ ಇರುವವರು ಇಬ್ಬರೇ ಓದುಗರು; ಈಗ ಓದುತ್ತಿರುವ ನೀವು ಮತ್ತು ... ನಾನು.

ದಟ್ಸ್ ಕನ್ನಡದಲ್ಲಿ ಮೂರೂವರೆ ವರ್ಷಗಳಿಂದ ಪ್ರತಿವಾರ ತಪ್ಪದೇ ದೇಶ-ವಿದೇಶಗಳ ಜನರಿಗೆ ವಿಚಿತ್ರಾನ್ನ ಉಣಬಡಿಸಿ ಅವರನ್ನು ವಿಚಿತ್ರಾನ್ನ-ವ್ಯಸನಿಗಳನ್ನಾಗಿ ಮಾಡಿರುವ ನಳಪಾಕಿಸ್ತಾನದ ಶ್ರೀ ಶ್ರೀವತ್ಸ ಜೋಷಿಯವರು, ನಮ್ಮ ಪತ್ರಿಕೆಯ ಬಗೆಗೆ ಲಘುವಾಗಿ ಬರೆದು ನಮ್ಮನ್ನು ಈರುಳ್ಳಿಗೆ ಹೋಲಿಸಿ ನಗೆಪಾಟಲಿಗೀಡು ಮಾಡಿರುವುದು... ನಮಗೆ ಮತ್ತಷ್ಟು ಹುರುಪು ನೀಡಿದೆ.

ಜೋಷಿಯವರೇ, ಮಜಾವಾಣಿ ಹಿಟ್ ಕೌಂಟರ್ ಮೇಲೇರುವಲ್ಲಿ ನಮ್ಮ ಅಜ್ಜಿ ಮಾಡದ್ದನ್ನು ನೀವು ಮಾಡಿದ್ದೀರಿ. ಧನ್ಯವಾದಗಳು.

ಈರುಳ್ಳಿಗೆ ಹೋಲಿಸಿರುವುದು ಇದೇ ಮೊದಲಾದರೂ, ಬಹಳ ಹಿಂದೆಯೇ ದಕ್ಷಿಣ ಆಫ್ರಿಕದ ವಿಜ್ಞಾನಿಗಳು ಮಜಾವಾಣಿಯನ್ನು "The tenacious water hyacinth, known locally as the obnoxious Kafue River weed" ಎಂದು ಕರೆದು, ಅದರ ನಿರ್ಮೂಲನಕ್ಕೆ ಯೋಜನೆಗಳು ಹಾಕಿಕೊಂಡಿರುವುದು ಹಳೆಯ ಸಂಗತಿ.

ಎಲ್ಲೆಲ್ಲೂ ಇದ್ದರೂ, ನಮ್ಮ ಕೈಗೆ ಸಿಗದೆ ನುಣುಚಿಕೊಳ್ಳುವ ಸತ್ಯದ ವಿರುದ್ಧ ನಾವು ಸಾರಿರುವ ಸಮರವನ್ನು ಕಂಡು ನಗುವ ಜನರಿಗೆ ನಾವು ಮತ್ತೊಮ್ಮೆ ಹೇಳುವುದಿಷ್ಟೇ:

"First they ignore you, then they laugh at you, then they fight you, then you win "

Monday, March 20, 2006

'ಬೆಂಗಳೂರು ತೀರ್ಥಹಳ್ಳಿಯಾಗಲಿ" - ಯು.ಆರ್.ಎ.

ಬ್ರೇಕಿಂಗ್ ನ್ಯೂಸ್!
'ಬೆಂಗಳೂರು ತೀರ್ಥಹಳ್ಳಿಯಾಗಲಿ" - ಯು.ಆರ್.ಎ.

ಕನ್ನಡಕ್ಕೆ 'TKANNADA' ಎಂಬುದಾಗಿ ನಾಮಕರಣ ಮಾಡಬೇಕೆಂಬ ಒತ್ತಾಯವನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ಖ್ಯಾತ ಸಾಹಿತಿ, ವಿಚಾರವಾದಿ, ಜ್ಞಾನಪೀಠ ಪ್ರಶಸ್ತಿ ವಿಜೇತ ರಾಜಕಾರಣಿ ಯು.ಆರ್.ಅನಂತಮೂರ್ತಿಯವರು, ಬೆಂಗಳೂರಿಗೆ 'T' ಅಕ್ಷರದಿಂದ ಮೊದಲಾಗುವ 'ತೀರ್ಥಹಳ್ಳಿ' ಎಂದು ಹೆಸರಿಡುವಂತೆ ಒತ್ತಾಯ ಮಾಡಿರುವ ವಿಚಾರ ಹೊರ ಬಂದಿದೆ.

ನಮ್ಮ ಪತ್ರಿಕೆಯ ವೈಶಿಷ್ಟ್ಯ ಇರುವುದೇ ನಮ್ಮ ಪತ್ರಿಕೆಯ ವಿಶೇಷ ವರದಿಗಾರರಲ್ಲಿ. ಹಿಂದೊಮ್ಮೆ 'ಶಾಸ್ತ್ರಿಯ ಭಾಷೆ' ವಿಚಾರದಲ್ಲಿ ನಮ್ಮ ಪತ್ರಿಕೆ ತಪ್ಪು ವರದಿಮಾಡಿದ್ದಾಗ ವಿಶ್ವ ಕನ್ನಡ ಕುಲ ಪುಂಗವ ಹನುಮನ ಕೃಪಾ ಕಟಾಕ್ಷ ನಮ್ಮ ಪತ್ರಿಕೆಯ ಮೇಲೆ ಬಿದ್ದು ನಮ್ಮನ್ನು ಸರಿದಾರಿಗೆ ಕೊಂಡೊಯ್ಯಲು 'ವಾಯುಪುತ್ರ'ನೆಂಬ ವಿಶೇಷ ವರದಿಗಾರರನನ್ನು ನಮ್ಮೆಡೆಗೆ ಕಳುಹಿಸಿದ್ದು ನೆನಪಿರಬಹುದು. (ನೆನಪಿಲ್ಲದಿದ್ದವರು ಇಲ್ಲಿ ಓದಬಹುದು)

ಹನುಮನಿರುವೆಡೆ ಶ್ರೀರಾಮನಿಲ್ಲದಿರುವುದು ಸಾಧ್ಯವೇ?

ಕನ್ನಡ ಮರುನಾಮಕರಣ ವಿಚಾರದಲ್ಲಿ ಒಂದು ಅತಿ ಮುಖ್ಯ ವಿಚಾರವನ್ನೇ ನಮ್ಮ ಪತ್ರಿಕೆ ವರದಿಮಾಡದೆ ಬಿಟ್ಟಿರುವುದನ್ನು ಇಂದು ಸಾಕ್ಷಾತ್ ಶ್ರೀರಾಮನೇ ನಮ್ಮ ಪತ್ರಿಕೆಯ ಗಮನಕ್ಕೆ ತಂದಿದ್ದಾನೆ.

ಕನ್ನಡವೇ ನಿತ್ಯ ಎನ್ನುವ ಶ್ರೀರಾಮ ನಮ್ಮ ಪತ್ರಿಕೆಗೆ ವಿಶೇಷ ಮತ್ತು ಪ್ರತ್ಯೇಕವಾಗಿ ವರದಿ (Special and Exclusive!) ಮಾಡಿರುವಂತೆ, ಅನಂತಮೂರ್ತಿಯವರ ಈ ಒತ್ತಾಯ ಅತ್ಯಂತ ಸೂಕ್ತವಾಗಿದೆ.

ಬೀದಿ ಬೀದಿಗಳಲ್ಲೂ ಪಬ್ ಮತ್ತು ಬಾರುಗಳಿರುವ ಬೆಂಗಳೂರಿಗೆ 'ತೀರ್ಥ ನಗರಿ' ಎಂಬ ಹೆಸರು ಸೂಕ್ತವೆನಿಸಬಹುದಾದರೂ, ಅದು ರಾಜಕೀಯವಾಗಿ ಅಷ್ಟು ಸಮಂಜಸವೆನಿಸುವುದಿಲ್ಲ. ಡಾಲರ್ ಕಾಲನಿಯ ಸೈಟಿಗೆ ಎಷ್ಟು ಬೇಕೋ ಅಷ್ಟೇ ರಾಜಕಾರಣಮಾಡುತ್ತಿದ್ದ ಅನಂತಮೂರ್ತಿಗಳು ಇಂದು ರಾಜ್ಯಸಭೆ ಸೀಟಿಗೆ ಬೇಕಾದಷ್ಟು ರಾಜಕಾರಣ ಮಾಡುವ ಅನಿವಾರ್ಯತೆ ಇರುವುದರಿಂದ ಹಳ್ಳಿಯ ಜನರನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ರಾಜಕೀಯ ವಿಶ್ಲೇಷಕರ ಪ್ರಕಾರ 'ತೀರ್ಥ ನಗರಿ'ಯ ಬದಲು 'ತೀರ್ಥಹಳ್ಳಿ' ಎಂಬ ಹೆಸರಿನ ಕಡೆಗೆ ಅವರು ವಾಲಿರುವುದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ.

ನಾರಾಯಣ ಮೂರ್ತಿ ಬೆಂಬಲ: ಹಿಂದೊಮ್ಮೆ ದೇವೇಗೌಡರು 'ತಿಪ್ಪಾರಳ್ಳಿ ನಾಡಗೀತೆಯಾಗಲಿ' ಎಂದಿದ್ದಾಗ ಅದನ್ನು ವಿರೋಧಿಸಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿಗಳು, ಅನಂತ ಮೂರ್ತಿಯವರ 'ತೀರ್ಥಹಳ್ಳಿ' ಒತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ನಮ್ಮ ಪತ್ರಿಕೆಯ ವರದಿಗಾರನೊಂದಿಗೆ ಮಾತನಾಡಿದ ಅವರು "ಬೆಂಗಳೂರಿಗೆ 'ತೀರ್ಥಹಳ್ಳಿ' ಎಂದು ನಾಮಕರಣ ಮಾಡೋದು ಒಳ್ಳೆಯದೇ. ಈಗ ನಮ್ಮ ಕಂಪನಿ ನಾಗರಿಕರ ಪರ ಅನ್ನೋ ಅಭಿಪ್ರಾಯ ಇದೆ. 'ತೀರ್ಥಹಳ್ಳಿ' ಅಂತ ಹೆಸರಿಟ್ಟ ತಕ್ಷಣದಿಂದ ನಾವು ಹಳ್ಳಿ ಗಮಾರರ ಪರ ಕೂಡ ಅಂತ ಎಲ್ಲರಿಗೂ ಗೊತ್ತಗುತ್ತೆ. ಹಳ್ಳಿಯ ಜನರಿಗೆ ಬೆಂಬಲ ತೋರಿಸಕ್ಕೆ, ಇನ್ನೂ ೧೫೦೦ ಎಕರೆ ಜಾಗ ಖರೀದಿಸುತ್ತೇವೆ" ಎಂದರು. ಮುಂದುವರೆಯುತ್ತಾ "ತೀರ್ಥಹಳ್ಳಿ ಅನ್ನೋ ಊರು ಈಗಾಗಲೇ ಇರೋದ್ರಿಂದ ನಮ್ಮ ವಿದೇಶಿ ಗ್ರಾಹಕರಿಗೆ ಕನ್‌ಫ್ಯೂಸ್ ಆಗೋ ಸಾಧ್ಯತೆ ಇದ್ದು ಹೊಸ ತೀರ್ಥಹಳ್ಳಿಗೆ 'ತೀರ್ಥಹಳ್ಳಿ v2.೦' ಅಂತ ಕರೆಯುವುದು ಸೂಕ್ತ" ಎಂದರು.

Labels:

Friday, March 17, 2006

'ಕನ್ನಡಕ್ಕೆ ಮರು ನಾಮಕರಣ' - ಚಿತ್ರರಂಗದ ಆಗ್ರಹ


ಬೆಂಗಳೂರು, ಮಾರ್ಚ್ ೧೨, ೨೦೦೯: ತಮಿಳು ಮತ್ತು ತೆಲಗು ಚಿತ್ರರಂಗಗಳು ಕನ್ನಡ ಚಿತ್ರರಂಗಕ್ಕಿಂತ ಸಫಲವಾಗಿದ್ದರೆ, ಅದಕ್ಕೆ ಅವೆರಡೂ ಭಾಷೆಗಳ ಹೆಸರೇ ಕಾರಣ ಎಂದು ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಹೇಳಿದ್ದಾರೆ.

'ಕನ್ನಡ'ವನ್ನು ಇಂಗ್ಲೀಷಿನಲ್ಲಿ 'TKANNADA' (T ಸೈಲೆಂಟು) ಮರುನಾಮಕರಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಕನ್ನಡ ಚಿತ್ರರಂಗ ಏರ್ಪಡಿಸಿದ್ದ ಭಾರಿ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, "ಸಂಖ್ಯಾಶಾಸ್ತ್ರ ವಿಜ್ಞಾನದ ಪ್ರಕಾರ ಹೆಸರಿನ ಮೊದಲಲ್ಲಿ 'T' ಅಕ್ಷರವಿದ್ದರೆ ಯಶಸ್ಸು ಗ್ಯಾರಂಟಿ. ತಮಿಳು ಮತ್ತು ತೆಲುಗು ಚಿತ್ರರಂಗಗಳು ಮುನ್ನಡೆ ಸಾಧಿಸಿರುವುದೇ ಹೀಗೆ" ಎಂದರು. ಚಿತ್ರರಂಗದಲ್ಲಿ ತಾವೇನಾದರೂ ಯಶಸ್ಸು ಪಡೆದಿದ್ದರೆ ಅದಕ್ಕೆ ತಮ್ಮ ಹೆಸರಿನ ಮೊದಲಲ್ಲೇ 'T' ಅಕ್ಷರ ಬರುವುದೇ ಕಾರಣ ಎಂದೂ ಸಹ ನುಡಿದರು.

ಅನಂತರ ಮಾತನಾಡಿದ ಖ್ಯಾತ ನಟ-ನಿರ್ದೇಶಕ ಉಪೇಂದ್ರ, ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ತಾರಾ ಹೆಸರೂ ಸಹ 'T' ಇಂದಲೇ ಶುರುವಾಗುವುದನ್ನು ನೆನಪಿಸಿದರು. ಇನ್ನುಮುಂದೆ ತಾವೂ ಸಹ ತಮ್ಮ ಹೆಸರನ್ನು UPENDRA ಇಂದ TUPENDRA (T ಸೈಲೆಂಟ್) ಎಂಬುದಾಗಿ ಬದಲಾಯಿಸಿಕೊಳ್ಳುವುದಾಗಿ ನುಡಿದರು.

ಅನಂತಮೂರ್ತಿ ವಿಷಾದ: ಕನ್ನಡ ಭಾಷೆಗೆ ಮರುನಾಮಕರಣ ಮಾಡುವುದನ್ನು ತಾವು ವಿರೋಧಿಸುವುದಾಗಿ ಖ್ಯಾತ ಸಾಹಿತಿ ಯು,ಆರ್.ಅನಂತಮೂರ್ತಿ ಹೇಳಿಕೆ ಇತ್ತಿದ್ದಾರೆ. ಇಂಗ್ಲೀಷನ್ನು ಸುಳ್ಳು ಹೇಳುವ ಭಾಷೆ ಎಂದು ಹೇಳಿಕೆ ನೀಡಿದ್ದನ್ನು ನೆನಪಿಸಿದ ಅವರು, ಸೈಲೆಂಟ್ ಅಕ್ಷರಗಳು ಮಹಾಭಾರತದ ಅಶ್ವತ್ಥಾಮ ಹತ: ಕುಂಜರ: ದಂತೆ ಸುಳ್ಳು ಹೇಳುತ್ತವೆ, ಅದನ್ನು ಕನ್ನಡದ ಹೆಸರಿಗೆ ಅಳವಡಿಸುವ ಒತ್ತಾಯ ಬಂದಿರುವುದಕ್ಕೆ ವಿಷಾದಿಸಿದರು.

ದೇ.ಜ.ಗೌ. ಸಿಟ್ಟು: ಕನ್ನಡ ಮರುನಾಮಕರಣ ವಿಚಾರದಲ್ಲಿ ಅನಂತಮೂರ್ತಿಯವರ ವಿರೋಧವನ್ನು ಖಂಡಿಸಿರುವ ದೇ. ಜವರೇ ಗೌಡರು, ಮರು ನಾಮಕರಣವನ್ನು ತಾವು ಸಂಪೂರ್ಣವಾಗಿ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. "ಆದರೆ, ಕನ್ನಡಕ್ಕೆ 'TKANNADA' ಎನ್ನುವುದರ ಬದಲು 'ಶಾಸ್ತ್ರೀಯ ಭಾಷೆ' ಎಂದು ಮರು ನಾಮಕರಣ ಮಾಡಿದಲ್ಲಿ, ಶಾಸ್ತ್ರೀಯ ಭಾಷೆ ವಿವಾದ ನಿಂತು, ತಮಿಳರು ಮತ್ತು ಅನಂತಮೂರ್ತಿ ಮಾತ್ರ ಅಲ್ಲ ಇಡೀ ಜಗತ್ತೇ ನಮ್ಮ ಭಾಷೆಯನ್ನು 'ಶಾಸ್ತ್ರ್‍ಈಯ ಭಾಷೆ' ಎಂದು ಕರೆಯುತ್ತದೆ" ಎಂದರು.

ಪೇಜಾವರರ ಒತ್ತಾಯ: ಕನ್ನಡಕ್ಕೆ ಮರುನಾಮಕರಣ ಮಾಡುವುದೇ ಆದಲ್ಲಿ, ಅದನ್ನು 'ದೇವ ಭಾಷೆ' ಎಂದೇ ನಾಮಕರಣ ಮಾಡಬೇಕೆಂದು ಪೇಜಾವರ ಮಠಾಧೀಶರು ಒತ್ತಾಯಿಸಿದ್ದಾರೆ. "ಆ ರೀತಿ ನಾಮಕರಣವಾದಲ್ಲಿ, 'ದೇವ ಭಾಷೆ'ಯನ್ನು ಮಾತನಾಡುವ ನಮ್ಮಲ್ಲಿ ದೈವಾಂಶಗಳು ಹೆಚ್ಚಾಗಿ ರಾಕ್ಷಸೀ ಪ್ರವೃತ್ತಿಗಳು ನಾಶವಾಗುವುದು ನಿಶ್ಚಿತ" ಎಂದರು.

ಜಮಾತ್ ಇಸ್ಲಾಮಿ ಸ್ವಾಗತ: ಕನ್ನಡಕ್ಕೆ 'ದೇವ ಭಾಷೆ' ಎಂದು ನಾಮಕರಣ ಮಾಡುವುದನ್ನು ತಾನು ಸ್ವಾಗತಿಸುವುದಾಗಿ ಜಮಾತ್ ಇಸ್ಲಾಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮರು ನಾಮಕರಣದ ನಂತರ ಎಲ್ಲ ಮತ ಬಾಂಧವರೂ ಕನ್ನಡವನ್ನು '786 ಭಾಷೆ' ಎಂದು ಕರೆಯ ಬೇಕೆಂದು ಅದು ಕರೆ ಇತ್ತಿದೆ.

Thursday, March 16, 2006

'ಕ್ಲೀಷೆ ಇಲ್ಲದೆ ಭಾಷೆ ಇಲ್ಲ' - ಚಂಪಾ


'ಕ್ಲೀಷೆ ಇಲ್ಲದೆ ಭಾಷೆ ಇಲ್ಲ' - ಚಂಪಾ

ಬೆಂಗಳೂರು, ಮಾರ್ಚ್, ೧೬ ೨೦೦೭: ಅತಿ ಬಳಕೆಯಿಂದ ಕನ್ನಡದ ಕ್ಲೀಷೆಗಳು ಸವೆಯುತ್ತಿರುವ ಬಗ್ಗೆ ಅತೀವ ಕಳವಳ ವ್ಯಕ್ತ ಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರು, ಹೊಸ ಕ್ಲೀಷೆಗಳ ಸೃಷ್ಟಿ ಇಂದು ಎಂದಿಗಿಂತ ಅನಿವಾರ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ "ಸವೆಯುತ್ತಿರುವ ಕ್ಲೀಷೆಗಳು: ಉಳಿಸುವ, ಬೆಳೆಸುವ ಪರಿ" ವಿಚಾರ ಸಂಕಿರಣದಲ್ಲಿ ಮಾತಾನಾಡುತ್ತಿದ್ದ ಪಾಟೀಲರು, ಸವಕಲಾಗಿರುವ ಕ್ಲೀಷೆಗಳನ್ನು ಸಂರಕ್ಷಿಸಿ, ಹೊಸ ಕ್ಲೀಷೆಗಳನ್ನು ಸೃಷ್ಟಿಸಲು ಕ.ಸಾ.ಪ. ಈಗಾಗಲೇ ಯೋಜನೆಯೊಂದನ್ನು ನಿರೂಪಿಸಿದ್ದು ಅದಕ್ಕಾಗಿ ಕರ್ನಾಟಕ ಸರ್ಕಾರದ ಪುರಾತತ್ವ ಇಲಾಖೆಯಿಂದ ೧೫೦ ಕೋಟಿ ರೂಪಾಯಿಗಳ ಮಂಜೂರಾತಿಗಾಗಿ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಅನಂತರ ನಮ್ಮ ಪತ್ರಿಕೆಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪಾಟೀಲರು, "ಕ್ಲೀಷೆಗಳು ಭಾಷೆಯ ಅಡಿಪಾಯವಿದ್ದಂತೆ, ಅವುಗಳೇನಾದರೂ ಚಳಿ ಜ್ವರದಿಂದ ನಡುಗಿದರೆ, ಕನ್ನಡದ ಜಟಕಾ ಬಂಡಿ ಹಳಿ ತಪ್ಪುವುದರಲ್ಲಿ ಸಂದೇಹವೇ ಇಲ್ಲ" ಎಂದರು. ನಾಣ್ಯಗಳಂತೆ ಸವಕಲಾಗಿರುವ ಕ್ಲೀಷೆಗಳ ಪರಿಸ್ಥಿತಿಯ ಬಗ್ಗೆ ಭಾವುಕತೆಯಿಂದ ಮಾತನಾಡಿದ ಚಂ.ಪಾ. "ಕನ್ನಡಿಗರ ಅಸಡ್ಡೆ, ನಿರಭಿಮಾನ ಮತ್ತು ಅತಿ ಬಳಕೆಯಿಂದ ಇಂದು ಗಡ್ಡಕ್ಕೆ ಬೆಂಕಿ ಹತ್ತಿದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಬೆಕ್ಕಿನ ಕತ್ತಿಗೆ ಯಾರು ತಾಳಿ ಕಟ್ಟ ಬೇಕೆಂಬ ಚರ್ಚೆಯನ್ನು ಬಿಟ್ಟು, ಸಮಸ್ತ ಕನ್ನಡಿಗರೂ ಕಟಿ ಬದ್ಧರಾಗಿ ರಣ ಕಹಳೆಯನ್ನೂದುತ್ತಾ ಹಸೆಮಣೆಯನ್ನೇರಬೇಕು" ಎಂದು ಕರೆಯಿತ್ತರು.

ಮಜಾವಾಣಿ ಮನವಿ: ಕನ್ನಡ ಸಾಹಿತ್ಯ ಪರಿಷತ್ತಿನ "ಕ್ಲೀಷೆ ಉಳಿಸಿ, ಭಾಷೆ ಬೆಳೆಸಿ" ಚಳುವಳಿಗೆ ನಮ್ಮ ಪತ್ರಿಕೆಯ ಸಂಪೂರ್ಣ ಬೆಂಬಲವಿದೆ. ಈ ದಿಕ್ಕಿನಲ್ಲಿ ಅತಿ ಬಳಕೆಯಿಂದ ಸವಕಲಾಗಿರುವ ಕ್ಲೀಷೆಗಳನ್ನು ಗುರುತಿಸಿ, ಪಟ್ಟಿ ಮಾಡಿ ಅವುಗಳನ್ನು ರಕ್ಷಿಸಲು ನಾವು ಅಹರ್ನಿಶಿ ದುಡಿಯಲು ಸಿದ್ಧರಿದ್ದೇವೆ. ನಿಮಗೇನಾದರೂ ಇಂತಹ ಕ್ಲೀಷೆಗಳು ಗೊತ್ತಿದ್ದಲ್ಲಿ ನಮ್ಮ ಪತ್ರಿಕೆಗೆ ದಯವಿಟ್ಟು ತಿಳಿಸಿ.

ನಮ್ಮ ವಿಳಾಸ: vaarta.vidooshaka@gmail.com

Wednesday, March 15, 2006

ಪತ್ರಿಕೋದ್ಯಮದಲ್ಲಿ ಮಹಾನ್ ಸಾಧನೆ!


ಪತ್ರಿಕೋದ್ಯಮದಲ್ಲಿ ಮಹಾನ್ ಸಾಧನೆ!
ಕನ್ನಡ ಪ್ರಭ ಬ್ಯೂಟಿ ಪಾರ್ಲರ್ ಯೋಜನೆ!!


ಎಷ್ಟು ಪ್ರಯತ್ನ ಪಟ್ಟರೂ ಕನ್ನಡದಲ್ಲಿ ಮೂರನೆಯ ದಿನಪತ್ರಿಕೆಯಾಗಿಯೇ ಉಳಿದಿರುವ ಕನ್ನಡ ಪ್ರಭ ದಿನಪತ್ರಿಕೆ, ಪತ್ರಿಕೋದ್ಯಮದ ಜೊತೆಗೇ ಬ್ಯೂಟಿ ಪಾರ್ಲರ್ ಸಹ ತೆರೆಯುವ ಸನ್ನಾಹ ನಡೆಸಿರುವುದು ಇತ್ತೀಚೆಗೆ ಹೊರಗೆ ಬಂದಿದೆ.

ಈ ಪ್ರಯತ್ನ ಸದ್ಯಕ್ಕೆ ಅತ್ಯಂತ ಗುಟ್ಟಾಗಿದ್ದು, ಇಂಟರ್‌ನೆಟ್‍ನಲ್ಲಿ ಮಾತ್ರ ಲಭ್ಯವಿದೆ. ನಮ್ಮ ಪತ್ರಿಕೆಯೊಂದಿಗೆ ಈ ವಿಚಾರವಾಗಿ ಮಾತನಾಡಿದ ಮೂಲಗಳ ಪ್ರಕಾರ, "ಕನ್ನಡ ಪ್ರಭ ಬ್ಯೂಟಿ ಪಾರ್ಲರ್" ಸದ್ಯಕ್ಕೆ ಉಪಮುಖ್ಯಮಂತ್ರಿಗಳಂತಹ ಅತಿ ಗಣ್ಯವ್ಯಕ್ತಿಗಳಿಗೆ ಮಾತ್ರ ಉಪಲಬ್ಧವಿದ್ದು, ಈ ಪ್ರಯತ್ನ ಸಫಲವಾದಲ್ಲಿ, ಊರೂರುಗಳಲ್ಲೂ ಹಲವಾರು "ಕನ್ನಡ ಪ್ರಭ ಬ್ಯೂಟಿ ಪಾರ್ಲರ್ ಮತ್ತು ಬಾರ್ಬರ್ ಶಾಪ್" ತೆರೆದು, ಪ್ರತಿ ಶೇವ್ ಜೊತೆಗೆ ಕನ್ನಡ ಪ್ರಭ ದಿನಪತ್ರಿಕೆಯನ್ನು ಉಚಿತವಾಗಿ ನೀಡುವ ಆಲೋಚನೆಯನ್ನು ಆ ಪತ್ರಿಕೆ ಹೊಂದಿದೆ.

ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವ ವಿದ್ಯಾಲಯದ ವಾಣಿಜ್ಯ-ವ್ಯಾಪಾರ ವಿಭಾಗದ ಪ್ರಾಧ್ಯಾಪಕ ಡಾ. ಬೇಜಾನ್ ಸಿಂಗ್ ಪ್ರಕಾರ, ಪ್ರತಿನಿತ್ಯ ಲಕ್ಷಾಂತರ ಮಂದಿ ಕನ್ನಡಿಗರು ಶೇವ್ ಮಾಡಿಕೊಳ್ಳುತ್ತಾರಾದ್ದರಿಂದ ಅವರಲ್ಲಿ ಕನಿಷ್ಠ ಕಾಲು ಭಾಗವನ್ನು ಆಕರ್ಷಿಸಿದರೂ, ಕನ್ನಡ ಪ್ರಭ ಕನ್ನಡದ ನಂಬರ್ ೧ ದಿನ ಪತ್ರಿಕೆಯಾಗುವುದರಲ್ಲಿ ಸಂದೇಹವೇ ಇಲ್ಲ.

ನಮ್ಮ ಪತ್ರಿಕೆಯ ವಾಣಿಜ್ಯ ವರದಿಗಾರರೊಂದಿಗೆ ಮಾತನಾಡಿದ ಡಾ.ಸಿಂಗ್ "ಇದು ಮುಂದೆ ಇತರ ರಾಜ್ಯಗಳಲ್ಲೂ ವಿಸ್ತರಿಸಿ ಅಮೃತಸರದಲ್ಲಿ 'ಪಂಜಾಬಿ ಪ್ರಭ ಶೇವಿಂಗ್ ಸಲೂನ್' ತೆರೆಯುವ ದಿನಗಳು ದೂರವೇನಿಲ್ಲ" ಎಂದರು.

ಉಪಮುಖ್ಯಮಂತ್ರಿಗಳ ಅರ್ಧ ಮೀಸೆ ತೆಗೆಯುವ ಮೂಲಕ "ಕನ್ನಡ ಪ್ರಭ ಬ್ಯೂಟಿ ಪಾರ್ಲರ್" ಉದ್ಘಾಟನೆ ನಡೆದ ವಿಷಯವನ್ನು ಮೊದಲ ಬಾರಿಗೆ ಹೊರಗೆಳೆದವರು ಸಂಪದದಲ್ಲಿ ಬರೆಯುವ ಶ್ಯಾಮ ಕಶ್ಯಪರವರು. ಮತ್ತು ಅದಕ್ಕೆ ಚಿತ್ರ ಸಹಿತ ಪುರಾವೆ ಒದಗಿಸಿದವರು ಹೆಚ್.ಪಿ.ನಾಡಿಗ್‌ರವರು.

ಕನ್ನಡ ಪತ್ರಿಕೆಯೊಂದು ಇಂತಹ ಒಂದು ಹೊಸ ಪ್ರಯೋಗ ಮಾಡುತ್ತಿರುವಾಗ ಅದರ ಬ್ಯುಸಿನೆಸ್ ಸೀಕ್ರೆಟ್‌ಗಳನ್ನು ಬಟಾ ಬಯಲು ಮಾಡಿರುವ ಈ ಈರ್ವರು ವ್ಯಕ್ತಿಗಳು ಮೂಲತಃ "ವಸ್ತು ನಿಷ್ಠ ವರದಿ", "ವಿಶ್ವಾಸರ್ಹತೆ" ಇತ್ಯಾದಿ ಅಪಾಯಕಾರಿ ಮೌಲ್ಯಗಳ ಉಗ್ರ ಪ್ರತಿಪಾದಕರಿರಬೇಕೆಂಬ ಸಂದೇಹವಿದೆ. ಈ ನಿಟ್ಟಿನಲ್ಲಿ ನಮ್ಮ ಪತ್ರಿಕೆ, ವಿಶ್ವಾದ್ಯಂತ ಇರುವ ನಮ್ಮ ಮೂರೂ ಜನ ಓದುಗರಲ್ಲಿ ವಿನಂತಿಸುವುದಿಷ್ಟೇ: ಈ ಸಂದೇಹಾಸ್ಪದ ವ್ಯಕ್ತಿಗಳ ಕಾರ್ಯ ಚಟುವಟಿಕೆಯ ತಾಣವಾಗಿರುವ ಸಂಪದದ ಮೇಲೆ ಸದಾ ನಿಗಾ ಇಡಿ.

ಅಪಾಯಕಾರಿ ಸ್ವಾಗತಾರ್ಹ ಬೆಳವಣಿಗೆ

ಈ ವಿಷಯವಾಗಿ ನಮ್ಮ ಪತ್ರಿಕೆ ಕನ್ನ್ನಡ ಪತ್ರಿಕೆಗಳ ಓದುಗರನ್ನು ಸಂದರ್ಶಿಸಿದಾಗ, ಕನ್ನಡ ಪ್ರಭದಿಂದ ಕತ್ತರಿಸಲ್ಪಟ್ಟ ಯಡಿಯೂರಪ್ಪನವರ ಮೀಸೆಯಂತೆ, ಓದುಗರೂ ಈ ವಿಚಾರದಲ್ಲಿ ಅರ್ಧಂಬರ್ಧವಾಗಿರುವುದು ತಿಳಿದು ಬಂತು.

ಚಾಮರಾಜನಗರದ ವೀರಪ್ಪನವರ ಪ್ರಕಾರ ಇದೊಂದು ಅಪಾಯಕಾರಿ ಬೆಳವಣಿಗೆ. "ಉಪಮುಖ್ಯ ಮಂತ್ರಿಗಳ ಅರ್ಧ ಮೀಸೆ ತೆಗೆಯುವ ಮೂಲಕ 'ಚೌರ' ಮಾಡಿರುವುದು, ಬೇರೊಂದು ಪತ್ರಿಕೆಯಲ್ಲಿರುವ ವರದಿಯನ್ನು ಸಾರಾಸಗಟು ಅನಾಮತ್ತಾಗಿ ಎತ್ತಿ ಲೇಖನ ಬರೆಯುವ 'ಚೌರ್ಯ'ದಂತೆಯೇ ಕೆಟ್ಟ ಕೆಲಸ.ಯಡಿಯೂರಪ್ಪನವರ ಅರ್ಧ ಮೀಸೆ ತೆಗೆದಿರುವ ಪತ್ರಿಕೆ ಐಶ್ವರ್ಯ ರೈ ಪೂರ್ತಿ ಮೀಸೆ ತೆಗೆದಿಲ್ಲ ಎಂಬುದಕ್ಕೆ ಗ್ಯಾರಂಟೀ ಆದರೂ ಏನು?"

ಆದರೆ, ಹತ್ತಿರದ ಕೇರಳದ ಮೀರಾ ಜಾಸ್ಮಿನ್ ಪ್ರಕಾರ, ಇದೊಂದು ಸ್ವಾಗತಾರ್ಹ ಬೆಳವಣಿಗೆ. "ಎಲ್ಲ ಪತ್ರಿಕೆಗಳೂ ಈ ರೀತಿ ಬ್ಯೂಟಿ ಪಾರ್ಲರ್ ದಂಧೆಗೆ ಇಳಿದರೆ, ಸಿನಿಮಾ ತಾರೆಯರು ಫೋಟೋ ಶೂಟ್ ಮುಂಚೆ ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ."

Friday, March 03, 2006

ಬರಹಗಾರರಿಗೆ ಬೆದರಿದ ಬುಶ್; ವಾಪಸ್ಸಾಗಲು ನಿರ್ಧಾರ
ಬರಹಗಾರರಿಗೆ ಬೆದರಿದ ಬುಶ್; ವಾಪಸ್ಸಾಗಲು ನಿರ್ಧಾರ

ನವ ದೆಹಲಿ, ಮಾರ್ಚ್ ೩, ೨೦೦೬: ಎಂತೆಂತಹ ಬೆದರಿಕೆ, ಆಮಿಷಗಳಿಗೂ ಬಗ್ಗದ ಅಮೆರಿಕದ ಅಧ್ಯಕ್ಷ ಬುಶ್, ಕನ್ನಡದ ಸಾಹಿತಿಗಳು ಬರೆದಿರುವ ಪತ್ರಕ್ಕೆ ಬೆದರಿ ಅಮೆರಿಕಕ್ಕೆ ವಾಪಸ್ಸಾಗಲು ನಿರ್ಧರಿಸುವ ವಿಷಯ ತಿಳಿದು ಬಂದಿದೆ.

ಬುಷ್ ಕೆಲಸದ ಕಾಂಟ್ರಾಕ್ಟ್ ಇನ್ನೆರಡು ವರ್ಷಗಳಲ್ಲಿ ಮುಗಿಯುತ್ತಿದ್ದು ಅನಂತರ ಇನ್ನಾವ ಕೆಲಸವೂ ದೊರೆಯುವ ಸೂಚನೆಗಳಿಲ್ಲ. ಜೊತೆಗೇ, ಔಟ್-ಸೋರ್ಸಿಂಗ್‌ನಿಂದಾಗಿ ಹಲವಾರು ಕೆಲಸಗಳು ಅಮೆರಿಕದಿಂದ ಭಾರತಕ್ಕೇ ಬರುತ್ತಿರುವುದನ್ನು ತಿಳಿದಿರುವ ಬುಶ್, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೆಕ್ಯೂರಿಟಿಯವರ ಕಣ್ತಪ್ಪಿಸಿ ಮೆಲ್ಲಗೆ ಡೆಲ್ಲಿಯಿಂದ ಕಳಚಿಕೊಂಡು ಬೆಂಗಳೂರಿಗೆ ಬಂದು ಕಾಲ್-ಸೆಂಟರ್ ಕೆಲಸ ಹುಡುಕವ ಯೋಚನೆ ಮಾಡುತ್ತಿದ್ದರು.

ಆದರೆ ಆ ಆಲೋಚನೆಗಳೆಲ್ಲಾ "ಬುಷ್ ಹಿಂದಿರುಗಿ ಹೋಗು", "ಬುಷ್ ಹಿಂದಕ್ಕೆ ಹೋಗು" ಎಂದು ಕನ್ನಡದ ಖ್ಯಾತ ಸಾಹಿತಿಗಳು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನೀರು ಪಾಲಾಗಿದೆ.

ನಮ್ಮ ವಿದೇಶಾಂಗ ವರದಿಗಾರರ ಪ್ರಕಾರ ಬುಷ್ ಶನಿವಾರ ಭಾರತದಿಂದ ಕಾಲುಕಿತ್ತುವುದು ಖಂಡಿತ. ಕೊನೆಯ ನಿಮಿಷದಲ್ಲಿ ಕೊಂಚ ಧೈರ್ಯ ಮಾಡಿ ಮೆಲ್ಲಗೆ ವಿಮಾನ ನಿಲ್ದಾಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗುವುದು ಕಷ್ಟ. ಈ ವಿಷಯದ ಸುಳಿವರಿತಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು, ಬುಷ್ ತನ್ನ ವಿಮಾನ ಹತ್ತಿ, ಅದು ಭಾರತದಿಂದ ಹೊರಡುವವರೆಗೆ ಆತನ ಮೇಲೆ ಸಂಪೂರ್ಣ ನಿಗಾ ಇಡಲು ನಿರ್ಧರಿಸಿವೆ.

ಜಿ.ಕೆ.ಗೋವಿಂದ ರಾವ್ ಸಂತಸ: ತಾವು ಬರೆದ ಪತ್ರಕ್ಕೆ ಬೆದರಿ ಬುಷ್ ವಾಪಸು ಹೋಗುತ್ತಿರುವುದು ತಮಗೆ ಅಪೂರ್ವ ಸಂತಸ ತಂದಿದೆಯೆಂದು ಖ್ಯಾತ ವಿಚಾರವಾದಿ ಮತ್ತು ನಟ ಜಿ.ಕೆ.ಗೋವಿಂದ ರಾವ್ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಜಾವಾಣಿ, ಗೋವಿಂದ್ ರಾವ್ ರವರನ್ನು ಸಂದರ್ಶಿಸಿತು.

ಮಜಾವಾಣಿ: ಜಿ.ಕೆ.ಜಿ. ಅಭಿನಂದನೆಗಳು. ಏನು ಫುಲ್ ಪಾರ್ಟೀನಾ?
ಜಿ.ಕೆ.ಜಿ.: ಥಾಂಕ್ ಯೂ.

ಮ.ವಾ.: ನಿಮ್ಮ ಪತ್ರದಲ್ಲಿ "ಭಾರತದ ಜನರ ಮೇಲಿನ ಪ್ರೀತಿಯಿಂದ ಬುಷ್ ಭಾರತಕ್ಕೆ ಭೇಟಿ ನೀಡಿಲ್ಲ" ಅಂತ ಬರೆದಿದ್ದೀರಿ.

ಜಿ.ಕೆ.ಜಿ.: ಹೌದು, ಹೌದು. ಆ ಅರಬ್ಬರನ್ನು ನೋಡಿ ಭಾರತೀಯರನ್ನು ಎಷ್ಟು ಪ್ರೀತಿಸ್ತಾರೆ. ಒಬ್ಬೊಬ್ಬರೂ ಮೂರೂ-ನಾಲ್ಕು ಜನ ಭಾರತದ ಹುಡುಗೀರ್ನ ಮದ್ವೆ ಮಾಡ್ಕೊಂಡು ಕರ್ಕೊಂಡು ಹೋಗ್ತಾರೆ. ಈಗ ಹೇಳಿ ಭಾರತದ ಜನರ ಮೇಲೆ ಯಾರಿಗೆ ಹೆಚ್ಚು ಪ್ರೀತಿ, ಬುಷ್‍ಗೋ ಅಥವಾ ಅರಬ್ಬರಿಗೋ?

ಮ.ವಾ.: ನೀವು...

ಜಿ.ಕೆ.ಜಿ.: ನಾವೂ ಆಷ್ಟೇ. ಅವಕಾಶ ಸಿಕ್ಕದ್ರೆ ಅಮೆರಿಕದ ಜನರಿಗೆ ನಮ್ಮ ಪ್ರೀತಿ ಪೂರ್ತಿ ತೋರಿಸಕ್ಕೆ ಸಿದ್ಧ. ನಮ್ಮ ಲೆಟರ್‌ನಲ್ಲೇ ಬರೆದಿದ್ದೀವಲ್ಲ "ಅಮೆರಿಕದ ಜನರನ್ನು ಪ್ರೀತಿಸುತ್ತೇವೆ" ಅಂತ.

ಮ.ವಾ.: ನಮ್ಮ ಪ್ರಶ್ನೆ ಅದಲ್ಲ. ನಿಮ್ಮ ಪತ್ರದಲ್ಲಿ "ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ" ಅಂತ ಬರೆದಿದ್ದೀರಲ್ಲ, ಇಲ್ಲಿಯವರೆಗೆ ಯಾವ, ಯಾವ ತ್ಯಾಗ ಮಾಡಿದ್ದೀರಿ, ಮುಂದೆ ಯಾವ, ಯಾವ ತ್ಯಾಗ ಮಾಡುವ ಆಲೋಚನೆ ಇದೆ?

(ನಮ್ಮ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಜಿ.ಕೆ.ಜಿ. ಉತ್ತರಿಸದೆ ಹೊರಟು ಬಿಟ್ಟರು. ನಮ್ಮ ಉದ್ದೇಶ ಅವರನ್ನು ಕೋಪ ತರಿಸಬೇಕೆಂದಿರಲಿಲ್ಲ. ಅವರೇನಾದರೂ ಬೆಲೆ ಬಾಳುವಂತಹ ವಸ್ತು ತ್ಯಾಗ ಮಾಡುವ ಯೋಚನೆ ಇದ್ದರೆ ಅದನ್ನು ಉಳಿದವರಿಗಿಂತ ಮುಂಚೆ ತಿಳಿಯ ಬೇಕೆನ್ನುವ ತವಕ ಅಷ್ಟೇ.)

Labels:

Wednesday, March 01, 2006

ಟಿಕೆಟ್ಟಿಗೂ ಕಾಸಿಲ್ಲದ ದಟ್ಟ ದೈನೇಸಿ ಬದುಕುಜೀವನದಲ್ಲಿ ಎಲ್ಲರೂ ಒಮ್ಮೆಯಾದರೂ ಇಂತಹ ಪ್ರಸಂಗ ಎದುರಿಸಿರುತ್ತಾರೆ. ಎಲ್ಲಾ ಇರುತ್ತೆ. ಆದರೆ ಏನೂ ಇರಲ್ಲ. ವಿದ್ಯೆ, ರೂಪ, ಯೌವ್ವನ, ಜನಬಲ, ಧನಬಲ ಎಲ್ಲಾ ಇದ್ದರೂ ಅವೆಲ್ಲಾ ಒಣ ಪ್ರತಿಷ್ಠೆಗಳಾಗಿ ಬಿಡುತ್ತವೆಯೇ ಹೊರತು, ಒಂದು ಸೆಕೆಂಡ್ ಕ್ಲಾಸ್ ರೈಲು ಟಿಕೆಟ್ ಕೊಡಿಸಲೂ ಅನುಪಯುಕ್ತವಾಗುತ್ತವೆ.

ಯಾಕೋ ಏನೋ ರಿಯೋ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆಯೇ ಅಮಾರ್ತ್ಯ ಸೆನ್ ನೆನಪಾದರು. ಆತನ ಜೀವನದ ದೃಶ್ಯಗಳು ನನ್ನ ಮನಸ್ಸಿನಲ್ಲಿ ನಾನಿನ್ನೂ ನೋಡಬೇಕಿರುವ ಸತ್ಯಜಿತ್ ರೇಯವರ ಚಿತ್ರಗಳಂತೆ ಒಂದೇ ಸಮನೆ ಹಾದು ಹೋದವು.

ಅಂದು ಅಮಾರ್ತ್ಯ ಸೆನ್ ಹೌರಾ ರೈಲು ನಿಲ್ದಾಣಕ್ಕೆ ಕಾಲಿಟ್ಟಾಗ ಆತನ ಬಳಿ ನೊಬೆಲ್ ಪ್ರಶಸ್ತಿ ಇರಲಿಲ್ಲ. ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಮಲಗಲು ಬೆರ್ತ್ ಇರಲಿ ಕೂಡಲೂ ಒಂದು ಸೀಟ್ ಸಹ ಇರಲಿಲ್ಲ. ಕ್ರೆಡಿಟ್ ಕಾರ್ಡ್ ಬಿಟ್ಟರೆ ಜೇಬಿನಲ್ಲಿ ಕಾಸಿರಲಿಲ್ಲ. ಆಗಷ್ಟೇ ತಿರುಪತಿಯಿಂದ ಬಂದಿದ್ದರಿಂದ ತಲೆಯಲ್ಲಿ ಕೂದಲೂ ಇರಲಿಲ್ಲ. ಆದರೆ, ಅವಷ್ಟನ್ನು ಬಿಟ್ಟರೆ, ಆತನಲ್ಲಿ ಎಲ್ಲವೂ ಇತ್ತು. ಆತ ಅರ್ಥ ಶಾಸ್ತ್ರದಲ್ಲಿ ಕೇಂಬ್ರಿಡ್ಜಿನಿಂದ ಪಡೆದ ಡಾಕ್ಟರೇಟ್ ಡಿಗ್ರೀ ಇತ್ತು. ಕಲಕತ್ತಾ, ದೆಹಲಿ, ಲಂಡನ್, ಹಾರ್ವರ್ಡ್‌ಗಳಲ್ಲಿ ಅರ್ಥಶಾಸ್ತ್ರ ಕಲಿಸಿದ್ದ ಅನುಭವವಿತ್ತು. 'ದಾರಿದ್ರ್ಯ ಮತ್ತು ಬರ' ವಿಷಯವಾಗಿ ತಾನೇ ಸ್ವತ: ಖುದ್ದಾಗಿ ಬರೆದಿದ್ದ ಪುಸ್ತಕವಿತ್ತು. ಹೆಂಡತಿ, ಮಕ್ಕಳು ಇದ್ದರು.

ಇಷ್ಟೆಲ್ಲಾ ಇದ್ದರೂ, ಅಂದು ಆತನ ಬಳಿ ಹೌರಾ-ದೆಹಲಿ ಎಕ್ಸ್‍ಪ್ರೆಸ್ ರೈಲು ಹತ್ತಲೂ ಕನಿಷ್ಠ ಒಂದು ಸೆಕೆಂಡ್ ಕ್ಲಾಸ್ ಟಿಕೆಟ್ ಇರಲಿಲ್ಲ. ಜೇಬಿನಲ್ಲಿ ಕ್ರೆಡಿಟ್ ಕಾರ್ಡ್ ಇದ್ದುದರಿಂದ ಹೇಗಾದರೂ ರೈಲು ಟಿಕೆಟ್ ಕೊಳ್ಳ ಬಹುದೆಂದು ಭಾವಿಸಿದ ಅಮಾರ್ತ್ಯ ಸೆನ್ ರೈಲು ನಿಲ್ದಾಣಕ್ಕೆ ಬಂದರೆ ಅಲ್ಲಿ ಯಾರೂ ಆತನನ್ನು ಕಣ್ಣೆತ್ತಿ ನೋಡಲಿಲ್ಲ. ಟಿಕೆಟ್ ಕೊಡುವುದಿರಲಿ, ಯಾರೂ ಹನಿ ಅನುಕಂಪವನ್ನೂ ತೋರಲಿಲ್ಲ. ಟಿ.ಸಿ.ಯನ್ನು ಗೋಗೆರೆದ. ಸ್ಟೇಷನ್ ಮಾಸ್ತರ ಬಳಿ ದೈನ್ಯತೆಯಿಂದ ಬೇಡಿಕೊಂಡ. ಆದರೆ ಯಾರೂ ಆತನನ್ನು ಮೂಸಿ ನೋಡಲಿಲ್ಲ. ಇದ್ಯಾವುದೋ ಮೆಂಟಲ್ ಕೇಸು ಎಂದು ಜನ ಗೇಲಿ ಮಾಡಿಕೊಳ್ಳುತ್ತಿದ್ದರು.

ಇಷ್ಟಾದರೂ ಸೆನ್ ತನ್ನ ಮೊದಲ ಜಾಳಿ ಬಿಡಲಿಲ್ಲ. ಯಾವುದೇ ಟಿ.ಸಿ. ಕಂಡರೂ "ಸಾರ್ ನನ್ನ ಬಳಿ ಕ್ರೆಡಿಟ್ ಕಾರ್‍ಡ್ ಇದೆ, ಡೆಲ್ಲಿ ಎಕ್ಸ್‍ಪ್ರೆಸ್‍ನಲ್ಲಿ ಒಂದು ಸೀಟ್ ಕೊಡಿಸಿ" ಎಂದೇ ಶುರುವಿಡುತ್ತಿದ್ದ. ಆದರೆ ಒಬ್ಬನೇ ಒಬ್ಬನೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಬದಲಿಗೆ, "ಈ..ಷ್, ಕೋರ್‍ಡ್" ಎಂದು ಅಪಹಾಸ್ಯ ಮಾಡುತ್ತಿದ್ದರು.

ತಾನು ಕಲಿತ ವಿದ್ಯೆ, ವಿದೇಶಿ ಡಾಕ್ಟರೇಟ್, ಜೇಬು ತುಂಬ ಇದ್ದ ಪ್ಲಾಟಿನಂ ಕ್ರೆಡಿಟ್ ಕಾರ್ಡುಗಳು ಯ:ಕಶ್ಚಿತ್ ಒಂದು ಸೆಕೆಂಡ್ ಕ್ಲಾಸ್ ರೈಲು ಟಿಕೆಟ್‍ಗೂ ಆಗದಿದ್ದರೆ ಅವನ್ನೆಲ್ಲ ಕಟ್ಟಿಕೊಂಡು ಆಗಬೇಕಾದ್ದೇನು ಎಂದು ಅನಿಸಿದರೂ, ಎಲ್ಲ ನೋವು, ಬೇಸರ, ಸುಸ್ತು, ಸಂಕಟಗಳನ್ನು ಅವುಡುಗಚ್ಚಿ ಸಹಿಸಿಕೊಂಡ. ಆದರೆ ಈ ಹೊತ್ತಿಗೆ ಸೆನ್ ಜರ್ಜರಿತನಾಗಿದ್ದ. ರೈಲು ಹೊರಡಲು ಹೆಚ್ಚಿನ ಸಮಯ ಇರಲಿಲ್ಲ, ಆದರೆ ರೈಲು ಹತ್ತಲು ಆತನ ಬಳಿ ಟಿಕೆಟ್ ಇರಲಿಲ್ಲ.

ಪಾಪ ಅಂದು ಆತ ಎಂತಹ ಅಸಹಾಯಕ ಸ್ಥಿತಿಯಲ್ಲಿದ್ದ ಎಂದರೆ, ಪ್ರಶಸ್ತಿ ಪತ್ರ, ಪುಸ್ತಕಗಳು, ಐ.ಬಿ.ಎಂ. ಲ್ಯಾಪ್‍ಟಾಪ್ ಎಲ್ಲವನ್ನೂ ಪ್ಲಾಟ್‍ಫಾರ್ಮ್ ಮೂರರ ಮುಂದಿನ ಕಸದ ತೊಟ್ಟಿಯಲ್ಲಿ ಎಸೆಯಲು ಹೊರಟ.

ಇದ್ದಕ್ಕಿದ್ದಂತೆ ನೆನಪಾಯಿತು. ಆತನ ಹೆಸರಲ್ಲಿ ಮೊದಲ ದರ್ಜೆ ಏರ್ ಕಂಡೀಷನ್ ಬೋಗಿಯಲ್ಲಿ ಸೀಟನ್ನು ಕಾಯ್ದಿರಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗೆ ತುಂಬಾ ತಡ ಆಗಿತ್ತು. ರೈಲ್ವೇ ಸಿಗ್ನಲ್‍ಮನ್ ಗಂಟೆ ಬಾರಿಸಲು ಶುರು ಮಾಡಿದ.

ಅಮಾರ್ತ್ಯ ಸೆನ್ ರೈಲಿನ ಕಡೆಗೆ ಓಡಿದ. ಆವನ ಬಾಯಲ್ಲಿದ್ದುದು ಒಂದೇ ಮಂತ್ರ "ನೋ ಬೆಲ್. ಪ್ಲೀಸ್, ನೋ ಬೆಲ್".

ಆದರೆ, ಅಷ್ಟರಲ್ಲಿ ಟ್ರೇನ್ ಹೊರಟೇ ಬಿಟ್ಟಿತು. ಸೆನ್‍ಗೆ, ವಿಮಾನವೇ ಗತಿಯಾಯ್ತು.

ಅಂದು "ನೊ ಬೆಲ್, ನೊ ಬೆಲ್" ಎಂದು ಕಿರುಚುತ್ತಾ ಓಡಿದ್ದ ಅಮಾರ್ತ್ಯ ಸೆನ್ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ.

ಈ ಪ್ರಸಂಗ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರತಿಬಾರಿ ಈ ಪ್ರಸಂಗ ನೆನಪಾದಾಗಲೂ "ಅಯ್ಯೋ ಈ ಪ್ರಸಂಗ ನಿಜವಾಗಬಾರದಿತ್ತೇ?!" ಎನ್ನಿಸುತ್ತೆ. ಒಂದೊಂದು ಅಚ್ಚರಿಗೊಳಿಸುವ ಪ್ರಸಂಗ ಸಹ ನಮ್ಮ ವಯಸ್ಸನ್ನು ಹೆಚ್ಚಿಸುತ್ತದೆ, ಆಸಕ್ತಿಯನ್ನು ಹೆಚ್ಚಿಸುತ್ತದೆ, ಜೀವನ ಪ್ರೀತಿಯನ್ನು, ಬೆರಗನ್ನೂ ಹೆಚ್ಚಿಸುತ್ತದೆ ಎಂಬ ನಂಬಿಕೆ ಸುಳ್ಳಲ್ಲ. ಈ ಪ್ರಸಂಗದಲ್ಲಿ ಕೊಂಚ ಮಟ್ಟಿಗಾದರೂ ಸತ್ಯವಿದ್ದಿದ್ದರೆ, ವಿಶ್ವೇಶ್ವರ ಭಟ್ಟ, ಬೆಳಗೆರೆಯಂತಹ ಲೇಖಕರು ತಮ್ಮ ಲೇಖನಗಳಲ್ಲಿ ಇಂತಹ ಪ್ರಸಂಗದ ಕುರಿತು ಬರೆದು ಹಲವು ಲಕ್ಷ ಜನ ಓದುಗರ ಆಯಸ್ಸನ್ನು ಹೆಚ್ಚಿಸ ಬಹುದಿತ್ತೆಂದು ಆಲೋಚನೆ ಬಂದಾಗ ಮನಸ್ಸು ಗದ್ಗದಿತವಾಗುತ್ತದೆ, ನೋವಾಗುತ್ತೆ.

ಕೊನೆಗೆ, ಲಕ್ಷಾಂತರ ಜನರ ಆಯಸ್ಸಿನ ಬಗ್ಗೆ ಯೋಚಿಸದ ಅಮಾರ್ತ್ಯ ಸೆನ್ ಮೇಲೆ ಕೋಪ ಬರುತ್ತದೆ.

ಚಿಂತನ - ಮಂಥನ

ಬಿಡುಗಡೆಯ ಸುಖ

ಎತ್ತಿನ ಗಾಡಿಯಲ್ಲಿ ಕುಳಿತು, ಮಣ್ಣಿನ ದಾರಿಯಲ್ಲಿ ದೂರ ದೂರಕ್ಕೆ ಪ್ರಯಾಣ ಮಾಡುತ್ತ ಹಿಂದಿನ ಜಗತ್ತನ್ನೆಲ್ಲಾ ಮರೆತು, ಮುಂದೊಂದು ಜಗತ್ತಿದೆ ಎಂಬ ನಂಬಿಕೆಯೇ ಇಲ್ಲದೇ, ದೂರದ ಬಯಲಲ್ಲಿ ಸುಡು ಬಿಸಿಲಿನಲ್ಲಿ ಬೆವರಿಳಿಸುತ್ತಿರುವ ಬಡ ರೈತನ ಬವಣೆಯನ್ನು ಆಸ್ವಾದಿಸುತ್ತಾ ಆ ಕ್ಷಣವೇ ಸತ್ಯ ಎಂಬಂತೆ ಇರುವಾಗ, ಡಿಸ್ನಿಲ್ಯಾಂಡಿನ ಎತ್ತಿನ ಗಾಡಿ ರೈಡ್ ಆಪರೇಟರ್ "ರೈಡ್ ಮುಗಿಯಿತು, ಇಳಿಯಿರಿ" ಎಂದಾಗ ತಬ್ಬಿಬ್ಬಾಗುವುದು ಸಹಜ. ಆದರೆ, ಅದೊಂದು ಅನಿವಾರ್ಯ ಬಿಡುಗಡೆ.

ಆ ಬಿಡುಗಡೆಯ ಸುಖ ನಮ್ಮದೂ ನಿಮ್ಮದೂ ಆಗಲಿ.

Labels: