ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, February 28, 2006

iPod ಸೂಕ್ಷ್ಮೋ
(ಮಜಾವಾಣಿ Exclusive!)
ಕ್ಯಾಲಿಫೋರ್ನಿಯ, ಏಪ್ರಿಲ್ ೩೧, ೨೦೦೬: ಕಳೆದ ಸೆಪ್ಟೆಂಬರಿನಲ್ಲಿ ಐಪಾಡ್ ನ್ಯಾನೋ ಎಂಬ ಎಂ.ಪಿ.೩ ಪ್ಲೇಯರುಗಳನ್ನು ಮಾರುಕಟ್ಟೆಗೆ ಬಿಟ್ಟ Apple ಕಂಪೆನಿ, ಈಗಾಗಲೇ ಮುಂದಿನ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿ ನಿಂತಿದೆ.

ಕೇವಲ ೧.೫ ಇಂಚು ಅಗಲ, ೩.೫ ಇಂಚು ಉದ್ದ ಮತ್ತು ೦.೨೫ ಇಂಚು ದಪ್ಪವಿರುವ ಐಪಾಡ್ ನ್ಯಾನೋ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಬೋಂಡಾದಂತೆ ಬಿಕರಿಯಾಗಿರುವುದರಿಂದ ಉತ್ಸಾಹಿತರಾದ Apple ಕಂಪೆನಿಯವರು, ನ್ಯಾನೋಗಿಂತಲೂ ಪುಟ್ಟದಾದ ಐಪಾಡ್ ಸೂಕ್ಷ್ಮೋ ಪ್ಲೇಯರನ್ನು ಈ ವರ್ಷದ ಕ್ರಿಸ್‍ಮಸ್ ವೇಳೆಗೆ ಮಾರುಕಟ್ಟೆಗೆ ತರಲು ನಿರ್ಧರಿಸಿದ್ದಾರೆ.

ಈ ವಿಷಯದ ಕುರಿತು ಮಜಾವಾಣಿಯೊಂದಿಗೆ ಪ್ರತ್ಯೇಕವಾಗಿ ಮಾತಾನಾಡಿದ Apple ಕಂಪೆನಿಯ ಮುಖ್ಯಸ್ತ ಸ್ಟೀವ್ ಜಾಬ್ಸ್, "ನ್ಯಾನೋನಲ್ಲಿ ಕೇವಲ ೧೦೦೦ ಹಾಡುಗಳ ಸಂಗ್ರಹಿಸಲು ಸಾಧ್ಯವಿದೆ. ಆದರೆ, ಮಾನವನ ಜೀವಕೋಶದ ಎರಡರಷ್ಟು ಉದ್ದ, ಅಗಲ ಮತ್ತು ದಪ್ಪ ಇರುವ ಸೂಕ್ಷ್ಮೋನಲ್ಲಿ ೧೦ ಮಿಲಿಯನ್ ಹಾಡುಗಳನ್ನು ಸಂಗ್ರಹಿಸಲು ಸಾಧ್ಯ" ಎಂದರು.

ಜೀವಕೋಶದ ಸರಿ-ಸಮಾನ ಗಾತ್ರವಿರುವ ಎಂ.ಪಿ.೩ ಪ್ಲೇಯರನ್ನು ಜನ ಕೊಳ್ಳುತ್ತಾರೆಯೇ ಎಂದು ನಾವು ಪ್ರಶ್ನಿಸಿದಾಗ, ಈ ಕುರಿತು ಈಗಾಗಲೇ ಮಾರುಕಟ್ಟೆಯಲ್ಲಿ ಸಮೀಕ್ಷೆ ನಡೆಸಿರುವುದಾಗಿ ಜಾಬ್ಸ್ ತಿಳಿಸಿದರು. ಈ ಸಮೀಕ್ಷೆಯ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡ ಜಾಬ್ಸ್, "ಈ ಸಮೀಕ್ಷೆಯಲ್ಲಿ ಇದ್ದದ್ದು ಒಂದೇ ಪ್ರಶ್ನೆ: ನಿಮ್ಮ ಜೀವನಕ್ಕೆ ಜೀವಕೋಶಗಳು ಎಷ್ಟು ಮುಖ್ಯ? ಈ ಪ್ರಶ್ನೆಗೆ ಉತ್ತರಿಸಿದ ಶೇ ೬೦ ಜನರ ಪ್ರಕಾರ ಜೀವಕೋಶಗಳಿಲ್ಲದೇ ಜೀವನವೇ ಅಸಾಧ್ಯ. ಜೀವಕೋಶಗಳ ಬಗ್ಗೆ ಜನರಿಗೆ ಇಂತಹ ಅಭಿಪ್ರಾಯ ಇರುವಾಗ, ಅದರ ಎರಡರಷ್ಟು ಗಾತ್ರವಿರುವ ಸೂಕ್ಷ್ಮೋ ಮಾರುಕಟ್ಟೆಯಲ್ಲಿ ಸಫಲವಾಗುವುದರಲ್ಲಿ ಸಂದೇಹವೇ ಇಲ್ಲ".

ಸೂಕ್ಷ್ಮೋದ ಬೆಲೆ ಕೇವಲ ೧೦೦೦ ಯು.ಎಸ್. ಡಾಲರ್ ಇದ್ದು, ಅದು ಮೂರು ವರ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರಕಲಿದೆ. ಸೂಕ್ಷ್ಮೋ ಜೊತೆಯಲ್ಲಿಯೇ ಐಪಾಡ್ ಮೈಕ್ರೋಸ್ಕೋಪ್ ಸಹ ಮಾರುಕಟ್ಟೆಗೆ ಬರಲಿದ್ದು, ಅದೂ ಸಹ ಮೂರು ವರ್ಣಗಳಲ್ಲಿ ದೊರೆಯಲಿದೆ.

0 Comments:

Post a Comment

Links to this post:

Create a Link

<< Home