ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, February 28, 2006

ಮಜಾವಾಣಿ ಸಂದರ್ಶನ: ಶ್ರೀ ಶ್ರೀ ರವಿಶಂಕರ್ಶ್ರೀ ಶ್ರೀ ರವಿಶಂಕರ್ ವಿಷಯ ತಿಳಿಯದೇ ಇದ್ದವರು ಇಂದು ಇಡೀ ಪ್ರಪಂಚದಲ್ಲಿಯೇ ಇರಲಿಕ್ಕಿಲ್ಲ. ಅವರ ಮಂದಸ್ಮಿತ ಇಂದು ಬೆಂಗಳೂರಿನ ಗೋಡೆ-ಗೋಡೆಗಳ ಮೇಲೂ ರಾರಾಜಿಸುತ್ತಿದೆ.

ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯ ಪ್ರಕಾರ, ಯಾವುದೇ ದೇಶದ ಯಾವುದೇ ಚುನಾಯಿತ ಪ್ರತಿನಿಧಿಯಿಂದ ಹಿಡಿದು ಕಾಲೇಜು ಪ್ರೊಫೆಸರುಗಳ ವರೆಗೆ ಯಾರು ಬೇಕಾದರೂ ಯಾರ ಹೆಸರನ್ನಾದರೂ ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಬಹುದು. ಗುರೂಜಿಯವರ ಗ್ಲಾಮರ್ ವರ್ಚಸ್ಸು ಎಷ್ಟಿದೆಯೆಂದರೆ, ಅಮೆರಿಕದ ೪೩೫ ಪ್ರತಿನಿಧಿಗಳು ಮತ್ತು ೧೦೦ ಸೆನೆಟರ್‌ಗಳಲ್ಲಿ ಒಬ್ಬನೇ ಒಬ್ಬ ಪ್ರತಿನಿಧಿ ಗುರೂಜಿಯವರ ಹೆಸರನ್ನು ಸೂಚಿಸಿದ್ದೇ, ಗುರೂಜಿಯವರಿಗೆ ನೊಬೆಲ್ ಪ್ರಶಸ್ತಿ ಬಂದೇ ಬಿಟ್ಟಿತೇನೋ ಎಂಬಂತೆ ಭಾರತದಾದ್ಯಂತ ವರದಿಯಾಯಿತು.

ವಿಕಿಪೀಡಿಯಾ ಜ್ಞಾನಕೋಶದ ಪ್ರಕಾರ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದಿದರೂ, ಪದವಿ ಪಡೆಯದೆ, ತಮ್ಮ ಆರ್ಟ್ ಆಫ್ ಲಿವಿಂಗ್ ಜೀವನ ಚರಿತ್ರೆಯ ಪ್ರಕಾರ ಕೇವಲ ಹದಿನೇಳನೆಯ ವಯಸ್ಸಿನಲ್ಲಿಯೇ ಆಧುನಿಕ ವಿಜ್ಞಾನದಲ್ಲಿ ಉನ್ನತ (ಆದರೆ, ಹೆಸರಿಲ್ಲದ) ಪದವಿ ಪಡೆದ ಪವಾಡ ಪುರುಷರಿವರು.

ಹಣ ಎಂಬುದು ಅಧ್ಯಾತ್ಮ ಮಾರ್ಗದಲ್ಲಿ ಮುನ್ನಡೆಯಲು ತೊಂದರೆ ನೀಡುವ ಹೆಣ ಭಾರದ ಪಾಪದ ಗಂಟು. ಈ ಭಾರದ ಗಂಟನ್ನು ಜನರ ಹೆಗಲಿನಿಂದ ತೆಗೆದು ತಾವು ಹೊರುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಪರೋಪಕಾರವನ್ನು ನಮ್ಮ ಗುರುಗಳೂ, ಮಠಾಧಿಪತಿಗಳೂ ಅನಾದಿಕಾಲದಿಂದ ಮಾಡುತ್ತಲೇ ಬಂದಿದ್ದಾರೆ. ಆದರೆ, ಬಹಳಷ್ಟು ಮಂದಿ ಗುರುಗಳು, ಬಡ ಜನರ ಅಷ್ಟೇನೂ ಭಾರವಿಲ್ಲದ ಗಂಟನ್ನು ಹೊರಲು ಸಿದ್ಧರಿದ್ದಾರೆಯೇ ಹೊರತು, ಇನ್ನೂ ಹೆಚ್ಚಿನ ಭಾರವನ್ನು ಹೊತ್ತು ನರಳುತ್ತಿರುವ ಮೇಲ್-ಮಧ್ಯಮ ವರ್ಗಗಳ ಕಡೆಗೆ ಗಮನ ಹರಿಸಿಲ್ಲ.

ಶ್ರೀ ಶ್ರೀಯವರು ಹಾಗಲ್ಲ. ವಿದ್ಯಾವಂತ ವರ್ಗ, ಇಂಗ್ಲೀಷ್ ಬಲ್ಲ ಮೇಲ್-ಮಧ್ಯಮವರ್ಗದವರ ಬಳಿ ಹಣದ ಗಂಟಿನ ಭಾರ ಹೆಚ್ಚಿರುವುದರಿಂದ, ಸನ್ಮಾರ್ಗ-ಸತ್ಸ್ಂಗ-ಸುದರ್ಶನ ಕ್ರಿಯೆಗಳ ಜರೂರತ್ತು ಈ ವರ್ಗಗಳಿಗೇ ಹೆಚ್ಚು ಇದೆಯೆಂದು ಮನಗಂಡು, ಈ ವರ್ಗಗಳಿಂದ ಹಣದ ಪಾಪದ ಭಾರವನ್ನು ಕಡಿಮೆ ಮಾಡಲು ಸೊಂಟಕ್ಕೆ ರೇಷ್ಮೆ ಉತ್ತರೀಯವನ್ನು ಕಟ್ಟಿ ನಿಂತಿದ್ದಾರೆ.

ಮಜಾವಾಣಿ ಮತ್ತು ಗುರೂಜಿಗಳ ಪ್ರೇಮ ಸಮ್ಮಿಲನಕ್ಕೆ ನಮ್ಮ ಬಹು ಜನ್ಮದ ಪೂಜಾ ಫಲವೇ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ.

ಮಜಾವಾಣಿ: ಗುರೂಜಿಯವರಿಗೆ ನಮಸ್ಕಾರ.
ಗುರೂಜಿ: ನಮಸ್ಕಾರ.

ಮ.ವಾ.: ನೀವು "ಆರ್ಟ್ ಆಫ್ ಲಿವಿಂಗ್" ಎನ್ನುವ ಮಾತು ನಮಗೆ ತುಂಬಾ ಹಿಡಿಸಿತು. ಸತ್ತಿರುವವರ ಕಲೆಗಿಂತ ಬದುಕಿರುವವರ ಕಲೆಗೆ ಹೆಚ್ಚಿನ ಗೌರವ-ಪ್ರಾಧಾನ್ಯ ನೀಡಬೇಕೆಂಬ ನಿಮ್ಮ ಸಂಘಟನೆಯ ನಿಲುವನ್ನು ನಮ್ಮ ಪತ್ರಿಕೆ ಪೂರ್ಣವಾಗಿ ಬೆಂಬಲಿಸುತ್ತದೆ. ಕಲಾವಿದರಿಗೆ ಮರಣಾನಂತರ ಪ್ರಶಸ್ತಿ ನೀಡುವುದು ಒಳ್ಳೆಯ ಅಭ್ಯಾಸ ಅಲ್ಲ. ಇಂತಹ ಪ್ರಶಸ್ತಿಗಾಗಿಯೇ ಕಲಾವಿದರು ಮರಣದ ಮೊರೆ ಹೊಕ್ಕುವ ಅಪಾಯ ಇದೆ.

ಗುರೂಜಿ: ನಮ್ಮ ಸಂಘಟನೆಯ ಹೆಸರು "ಆರ್ಟ್ ಆಫ್ ಲಿವಿಂಗ್" ಅಂದರೆ "ಜೀವನ ಕಲೆ"; "ಆರ್ಟ್ ಆಫ್ ದಿ ಲಿವಿಂಗ್" ಅಲ್ಲ.


ಮ.ವಾ.: ಮೊದ-ಮೊದಲು "ಕಲೆಯೇ ಜೀವನ" ಎನ್ನುತ್ತಿದ್ದ ನೀವು, ಈಗ "ಜೀವನ ಕಲೆ"ಯ ಕಡೆಗೆ ತಿರುಗಿದ್ದು ಹೇಗೆ?

ಗುರೂಜಿ: ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ.


ಮ.ವಾ.: ಅರವತ್ತರ ದಶಕದಲ್ಲಿ ಬೀಟಲ್‌ಗಳ ಒಡನಾಟ ಮಾಡುತ್ತಿದ್ದವರು ಈಗ ಬಾಟಲ್‌ಗಳ ಜೊತೆ ಸೇರಿರುವುದರ ಹಿನ್ನೆಲೆ ಏನು?

ಗುರೂಜಿ: (ಕೊಂಚ ಅಸಹನೆಯಿಂದ) ನಿಮ್ಮ ಪ್ರಶ್ನೆಯಲ್ಲಿ ಏನಾದರೂ ಅರ್ಥ ಇದೆಯೇ?


ಮ.ವಾ.: ಶುಭ್ರವಾಗಿ ಶೇವ್ ಮಾಡಿ, ನೀಟಾಗಿ ಹೇರ್‌‍ಕಟ್ ಮಾಡಿಸಿ ಸಿತಾರ್ ನುಡಿಸುತ್ತಾ ಆರಾಮಾಗಿ ಇದ್ದವರು, ಈಗ ಗಡ್ಡ-ಮೀಸೆ ಬಿಟ್ಟು ಇನ್ನೂ ಆರಾಮವಾಗಿ ಇರುವುದರ ಹಿಂದಿನ ರಹಸ್ಯ ಏನು?

ಗುರೂಜಿ: (ಸಂಪೂರ್ಣ ಅಸಹನೆಯಿಂದ) ಆ ರವಿಶಂಕರ್ ಬೇರೆ, ನಾನು ಬೇರೆ.


ಮ.ವಾ.: ಖಂಡಿತ. ಆ ರವಿಶಂಕರ್ ಬೇರೆ, ನೀವು ಬೇರೆ. ಆದರೆ, ಬೇರೆ ಆಗಿದ್ದು ಹೇಗೆ, ಯಾಕೆ ಮತ್ತು ಯಾವಾಗ ಎಂಬುದೇ ನಮ್ಮ ಪ್ರಶ್ನೆ.

ಗುರೂಜಿ: ಆ ವ್ಯಕ್ತಿ ಬೇರೆ. ನಾನೇ ಬೇರೆ.


ಮ.ವಾ.: (ತಬ್ಬಿಬ್ಬಾಗಿ) ನಮಗೆ ತಿಳಿದಿರಲಿಲ್ಲ. ದಯವಿಟ್ಟು ಕ್ಷಮಿಸಿ. ಆದರೂ, ಇಡಿ ಜಗತ್ತೇ ಒಂದು ಎಂದೆನ್ನುವ ನೀವು, ಆ ವ್ಯಕ್ತಿ ಬೇರೆ, ನಾನು ಬೇರೆ ಎನ್ನುತ್ತಿರುವುದು ನಿಮ್ಮ ತತ್ವಗಳಿಗೆ ವಿರುದ್ಧವಲ್ಲವೇ?

ಗುರೂಜಿ: ಇಲ್ಲ. ನಿಮ್ಮ ಪತ್ರಿಕೆ ಬುದ್ದಿವಂತಿಕೆಯ ವಿರೋಧಿ ಅನ್ನಿಸುತ್ತೆ.

ಮ.ವಾ.: ಖಂಡಿತ ನಿಜ. ನಮ್ಮ ಪತ್ರಿಕೆಯ ವಿಚಾರ ನೀವೂ ತಿಳಿದಿರುವುದು ಸಂತೋಷದ ವಿಷಯ. ಆದರೆ, ಬುದ್ಧಿವಂತಿಕೆಗಿಂತ ನಾವು ಹೆಚ್ಚಾಗಿ ವಿರೋಧಿಸುವುದು ಸತ್ಯವನ್ನು.

ಗುರೂಜಿ: ನೀವು ನಿಜವಾಗಿಯೂ ಪ್ರಜಾವಾಣಿ ದಿನಪತ್ರಿಕೆಯವರೇ ತಾನೇ?


(ಗುರೂಜಿಯವರ ಪ್ರಶ್ನೆಯನ್ನು ನಾವು ಉತ್ತರಿಸುವ ಮುನ್ನವೇ, ಅವರ ಸಹಾಯಕರು ಸಂದರ್ಶನ ಮುಗಿಯಿತೆಂದು ನಮ್ಮನ್ನು ಹೊರಗಡೆ ಕರೆದೊಯ್ದರು.)

3 Comments:

Anonymous hp said...

looks like he graduated from Kuvempu University and not Engineering in Bangalore.

February 28, 2006 2:26 PM  
Anonymous hp said...

check this:

http://www.srisriravishankar.org/biography.html

February 28, 2006 2:29 PM  
Anonymous Anonymous said...

hp, the link you have provided says "By the age of seventeen, he obtained an Advanced Degree in Modern Physics, and later received an Honorary Doctorate from Kuvempu University, Karnataka, India."

It appears he got is honorary doctorate from Kuvempu University. As far as that "Advanced Degree in Modern Physics", it is still a mystery.

February 28, 2006 4:07 PM  

Post a Comment

Links to this post:

Create a Link

<< Home