ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, January 30, 2006

ಮಜಾವಾಣಿ ಹೊಸ ಅಂಕಣ: ಮಜಾವಾಣಿ ಮಹನೀಯರು

ಸತ್ಯದ ವಿರುದ್ಧ ಯಾವುದೇ ಮುಚ್ಚು ಮರೆ ಇಲ್ಲದೇ ಸಮರ ಸಾರಿರುವುದು ನಮ್ಮ ಪತ್ರಿಕೆಯ ಹೆಗ್ಗಳಿಕೆಯಾದರೂ, ಈ ಸಮರದಲ್ಲಿ ನಮಗಿಂತಲೂ ಬಹಳ ಹಿಂದಿನಿಂದಲೇ ಹಲವಾರು ಮಹಾನ್ ಯೋಧರು ಭಾಗವಹಿಸಿದ್ದಾರೆ.

"ಸತ್ಯ" ಎಂಬುದು ಅತಿ ಅಪಾಯಕಾರಿ ದೌರ್ಬಲ್ಯ. ಗಾಂಧಿಯಂತಹ ಮಹಾತ್ಮನಿಗೂ ಕೂಡ ಈ ವ್ಯಸನದಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಗಾಂಧಿಗಿಂತ ಬಹಳ ಹಿಂದೆ, ಹರಿಶ್ಚಂದ್ರನೆಂಬ ದುರ್ಬಲ ವ್ಯಕ್ತಿ ಮಹಾರಾಜನಾಗಿದ್ದರೂ ಈ ಚಟದ ದಾಸನಾಗಿ, ರಾಜ್ಯ, ಪತ್ನಿ ಮತ್ತು ಪುತ್ರನನ್ನು ಕಳೆದುಕೊಂಡು "ಗಾಂಜಾ" ಮಂಜು, "ಹೆರಾಯಿನ್"ಹರಿಯಣ್ಣ. "ಕೊಕೇನ್"ಕಿಟ್ಟರಂತೆ, ಇತಿಹಾಸದಲ್ಲಿ "ಸತ್ಯ"ಹರಿಶ್ಚಂದ್ರ ಎಂದೇ ಗುರುತಿಸುವಂತಹವನಾದ.

ಇಂತಹ ಅಪಾಯಕಾರಿ ವ್ಯಸನಕ್ಕೆ ಗುರಿಯಾಗದೆ, ಈ ಮಾದಕ ಮೌಲ್ಯದ ವಿರುದ್ಧ ಪತ್ರಿಕೋದ್ಯಮದ ಮೂಲಕ ಕದನ ಹೂಡಿದ ವೀರ ಯೋಧರ ಕತೆಗಳು ಅಧ್ಬುತ ಮತ್ತು ರೋಚಕ. ಆದರೆ, ದುರದೃಷ್ಟವಶಾತ್ ಈ ಮಹಾನ್ ಯೋಧರ ಬಲಿದಾನ ಬಹಳ ಮಂದಿಗೆ ತಿಳಿದಂತಿಲ್ಲ.

ಸತ್ಯದ ಕಹಿಯನ್ನು ಕಡಿಮೆ ಮಾಡಲು ಕದನ ಹೂಡಿದ ಈ ಕಲಿಗಳ ರೋಚಕ ಗಾಥೆಯನ್ನು ಓದುಗರಿಗೆ ನೀಡಲು ನಮ್ಮ ಪತ್ರಿಕೆ ನಿರ್ಧರಿಸಿದೆ. ಈ ಸಲುವಾಗಿ ನಾವು "ಮಜಾವಾಣಿ ಮಹನೀಯರು" ಎಂಬ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.

ಈ ಅಂಕಣದ ಮಾಲೆಯ ಮೊದಲಿನ ಕೆಲ ಲೇಖನಗಳಲ್ಲಿ ಕರ್ನಾಟಕದ ಮತ್ತು ಭಾರತದ ಹೊರಗೆ ನಿಸ್ಸ್ವಾರ್ಥಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಕೆಲ ಮಂದಿಯ ಪರಿಚಯಿಸಿ, ಅನಂತರ ಭಾರತದ, ಕರ್ನಾಟಕದ ವೀರಾಗ್ರಣಿಗಳ ಕತೆಗಳನ್ನು ಕೈಗೆತ್ತುಕೊಳ್ಳಲಿದ್ದೇವೆ.

ಓದುಗರಲ್ಲೊಂದು ಮನವಿ: ಸತ್ಯದಂತಹ ಜನಪ್ರಿಯ ಮೌಲ್ಯದ ವಿರುದ್ಧ ಸಮರಸಾರುವುದು ಅತಿ ಅಪಾಯಕಾರಿ ವಿಷಯ. ಇದು ನಮ್ಮ ಪತ್ರಿಕೆಯೊಂದರಿಂದ ಮಾತ್ರ ಸಾಧ್ಯವಾಗುವಂತಹುದಲ್ಲ. ಹೀಗಾಗಿ, ಈ ವಿಷಯದಲ್ಲಿ ನಮ್ಮ ಓದುಗರಿಂದ ಬೇಡುವುದಿಷ್ಟೇ: ಜಾಗೃತಿ ಮತ್ತು ಸಹಕಾರ

ನೀವು ದಿನ ಪತ್ರಿಕೆಯನ್ನೋ ನಿಯತಕಾಲಿಕೆಗಳನ್ನೋ ಓದುವಾಗ ಸತ್ಯದ ವಿರುದ್ಧ ಸಮರ ಹೂಡಿರುವುದು ಕಂಡಲ್ಲಿ ದಯವಿಟ್ಟು ನಮ್ಮ ಪತ್ರಿಕೆಯ ಗಮನಕ್ಕೆ ತನ್ನಿ. ನಮ್ಮ ವಿಳಾಸ:

vaarta.vidooshaka at gmail.com

..
ಸಂಪಾದಕ

1 Comments:

Anonymous Anonymous said...

please provide RSS feeds for your blogs. It is lot easier than checking whole site for updates.

February 12, 2006 11:06 PM  

Post a Comment

Links to this post:

Create a Link

<< Home